Cricket: ಗೆಲ್ಲಲು 3 ರನ್ ಬೇಕಿದ್ದಾಗ ಪಂದ್ಯ ರದ್ದುಗೊಳಿಸಿದ ಅಂಪೈರ್; ಕಾರಣ ಗೊತ್ತಾ?
ಗೆಲುವಿನ ಸನಿಹದಲ್ಲಿದ್ದ ಸಿಡ್ನಿ ಥಂಡರ್ ತಂಡ ಅಂಪೈರ್ ನಿರ್ಧಾರದಿಂದಾಗಿ ನಿರಾಶೆಗೊಂಡಿದಲ್ಲದೆ, ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದೆ.

ಸಿಡ್ನಿ: ಮಹಿಳಾ ಬಿಗ್ ಬ್ಯಾಷ್ ಲೀಗ್ ನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದ್ದು ತಂಡಕ್ಕೆ ಗೆಲ್ಲಲು 13 ಎಸೆತಗಳಲ್ಲಿ 3 ರನ್ ಬೇಕಿದ್ದಾಗ ಫೀಲ್ಡ್ ನಲ್ಲಿದ್ದ ಅಂಪೈರ್ ಗಳು ಪಂದ್ಯ ಸ್ಥಗಿತಗೊಳಿಸಿದ್ದಾರೆ.
2025-26ರ ಮಹಿಳಾ ಬಿಗ್ ಬ್ಯಾಷ್ ಲೀಗ್‌ನ 27ನೇ ಪಂದ್ಯ ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಸಿಡ್ನಿ ಥಂಡರ್ ತಂಡಗಳ ನಡುವೆ ನಡೆಯಿತು. ಮಳೆ ಪೀಡಿತ ಈ ಪಂದ್ಯದಲ್ಲಿ ಅಂಪೈರ್ ಗಳು ತೆಗೆದುಕೊಂಡ ನಿರ್ಧಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ಈ ವೇಳೆ ಗೆಲುವಿನ ಸನಿಹದಲ್ಲಿದ್ದ ಸಿಡ್ನಿ ಥಂಡರ್ ತಂಡ ಅಂಪೈರ್ ನಿರ್ಧಾರದಿಂದಾಗಿ ನಿರಾಶೆಗೊಂಡಿದಲ್ಲದೆ, ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದೆ.
ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯಕ್ಕೆ ಮಳೆ ಆಡ್ಡಿಯಾಗಿತ್ತು. ಹೀಗಾಗಿ ಅಂಪೈರ್ ಗಳು ಪಂದ್ಯವನ್ನು ತಲಾ 5 ಓವರ್ಗಳಿಗೆ ನಿಗದಿಪಡಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಅಡಿಲೇಡ್ ಸ್ಟ್ರೈಕರ್ಸ್ ತಂಡವು ಐದು ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 45 ರನ್ ಕಲೆಹಾಕಿತು.
ತಂಡದ ಪರ ಆರಂಭಿಕ ಆಟಗಾರ್ತಿ ಲಾರಾ ವೋಲ್ವಾರ್ಡ್ಟ್ 13 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 22 ರನ್ ಬಾರಿಸಿದರು. ನಾಯಕಿ ತಹ್ಲಿಯಾ ಮೆಕ್‌ಗ್ರಾತ್ 6 ಎಸೆತಗಳಲ್ಲಿ 12 ರನ್ ಗಳಿಸಿ ಅಜೇಯರಾಗುಳಿದರು.
ಈ ಸವಾಲಿನ ಗುರಿಯನ್ನು ಬೆನ್ನಟ್ಟಿದ ಸಿಡ್ನಿ ಥಂಡರ್ ಗೆ ಆರಂಭದಲ್ಲೇ ಆಘಾತ ಎದುರಾಯಿತು. ಚೇಸಿಂಗ್ ವೇಳೆ ಆರಂಭದಲ್ಲೇ ಮಳೆ ಸುರಿಯಲಾರಂಭಿಸಿತು. ಆದರೂ ದೃತಿಗೆಡದ ಸಿಡ್ನಿ ತಂಡ ಮೊದಲ ಓವರ್‌ನಲ್ಲಿ 13 ರನ್ ಸೇರಿಸುವ ಮೂಲಕ ಉತ್ತಮ ಆರಂಭ ಪಡೆದುಕೊಂಡಿತು.
ಆರಂಭಿಕ ಆಟಗಾರ್ತಿ ಫೋಬೆ ಲಿಚ್‌ಫೀಲ್ಡ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ 15 ಎಸೆತಗಳಲ್ಲಿ ಐದು ಬೌಂಡರಿಗಳನ್ನು ಒಳಗೊಂಡಂತೆ ಅಜೇಯ 38 ರನ್ ಗಳಿಸಿದರು. ಡಾರ್ಸಿ ಬ್ರೌನ್ ಎಸೆದ ಓವರ್‌ನಲ್ಲಿ ಅವರು ಸತತ ನಾಲ್ಕು ಬೌಂಡರಿಗಳನ್ನು ಬಾರಿಸಿದರು. ಹೀಗಾಗಿ ಎರಡನೇ ಓವರ್ ಅಂತ್ಯಕ್ಕೆ ಥಂಡರ್ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ 35 ರನ್ ಕಲೆಹಾಕಿತ್ತು.
ಗೆಲ್ಲಲು 3 ರನ್ ಬೇಕಿದ್ದಾಗ ಪಂದ್ಯ ಸ್ಥಗಿತ
ಈ ವೇಳೆ ಥಂಡರ್ ತಂಡ 2.5 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 43 ರನ್ ಗಳಿಸಿತ್ತು. ಆದರೆ ಈ ಹಂತದಲ್ಲಿ ಮಳೆ ಹೆಚ್ಚಾಗಿ ಸುರಿಯಲಾರಂಭಿಸಿದರಿಂದ ಫೀಲ್ಡ್ ಅಂಪೈರ್ ಗಳು ಪಂದ್ಯ ಸ್ಥಗಿತಗೊಳಿಸಿದರು. ಮಳೆಯಿಂದ ಪಂದ್ಯ ನಿಂತಾಗ ಸಿಡ್ನಿ ಥಂಡರ್ ಗೆಲುವಿಗೆ 13 ಎಸೆತಗಳಲ್ಲಿ ಕೇವಲ ಮೂರು ರನ್ ಬೇಕಾಗಿದ್ದವು.
ಆದರೆ ಮಳೆಯಿಂದಾಗಿ ಮೈದಾನ ಒದ್ದೆಯಾಗಿದ್ದರ ಪರಿಣಾಮವಾಗಿ ಚೆಂಡಿನ ಮೇಲ್ಮೈ ಜಾರುತ್ತಿತ್ತು. ಬೌಲರ್ಗಳಿಗೆ ಚೆಂಡನ್ನು ಹಿಡಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಗಮನಿಸಿದ ಅಂಪೈರ್‌ಗಳು ಪಂದ್ಯ ರದ್ದುಗೊಳಿಸಿದರು.
ವ್ಯಾಪಕ ಚರ್ಚೆ
ಇನ್ನು ಅಂಪೈರ್ಗಳ ಈ ನಿರ್ಧಾರ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತು. ಥಂಡರ್ ತಂಡದ ಆರಂಭಿಕ ಆಟಗಾರ್ತಿ ಫೋಬೆ ಲಿಚ್‌ಫೀಲ್ಡ್ ಪಂದ್ಯ ರದ್ದತಿಯ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸುತ್ತಾ, ‘ತುಂಬಾ ನಿರಾಶೆಗೊಂಡಿದೆ. ಇದು ನಾಚಿಕೆಗೇಡಿನ ಸಂಗತಿ ಎಂದರೆ, ಇತ್ತ ಸ್ಟ್ರೈಕರ್ಸ್ ತಂಡದ ನಾಯಕಿ ತಹ್ಲಿಯಾ ಮೆಕ್‌ಗ್ರಾತ್, ‘ಇದು ಕಠಿಣ ನಿರ್ಧಾರ. ಮಳೆ ನಿಂತಿತ್ತು, ಆದರೆ ಚೆಂಡು ಜಾರುತ್ತಿದ್ದರಿಂದ ಅಂಪೈರ್‌ಗಳು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



