ಯಾವಾಗ ನಿವೃತ್ತಿ ಹೊಂದಬೇಕೆಂದು ರೋಹಿತ್ ಶರ್ಮಾ ನಿರ್ಧರಿಸುತ್ತಾರೆ; ವಿರಾಟ್ ಕೊಹ್ಲಿ ಬಗ್ಗೆ ದಿನೇಶ್ ಕಾರ್ತಿಕ್ ಹೇಳಿದ್ದೇನು?
ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ ತಮ್ಮ ಭವಿಷ್ಯದ ಬಗ್ಗೆ ಎದ್ದಿದ್ದ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿ ಮತ್ತು ನ್ಯೂಜಿಲೆಂಡ್ ವಿರುದ್ಧದ ಸೋಲಿನ ಬಳಿಕ ಟೀಂ ಇಂಡಿಯಾ ಸಾಕಷ್ಟು ಟೀಕೆಗಳನ್ನು ಎದುರಿಸುವಂತಾಗಿತ್ತು. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಟೀಂ ಇಂಡಿಯಾದ ಪ್ರದರ್ಶನ ಉತ್ತಮವಾಗಿಲ್ಲದ ಕಾರಣ ಹಾಗೂ ಕೇವಲ 31 ರನ್ ಗಳಿಸಲಷ್ಟೇ ಶಕ್ತವಾದ ರೋಹಿತ್ ಶರ್ಮಾ ಅವರ ಟೆಸ್ಟ್ ಭವಿಷ್ಯದ ಬಗ್ಗೆ ಪ್ರಶ್ನೆಗಳು ಉದ್ಭವವಾಗಿದ್ದವು. ಬಳಿಕ ಸಿಡ್ನಿಯಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ರೋಹಿತ್ ಶರ್ಮಾ ಹೊರಗುಳಿದಿದ್ದರು.
ಈ ಕುರಿತು ಬಿಸಿಸಿಐ ಉನ್ನತ ಅಧಿಕಾರಿಗಳು ಪ್ರತಿಕ್ರಿಯೆಯನ್ನು ಕೋರಿದ್ದರಿಂದ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿದ್ದ ಸಭೆಯಲ್ಲಿ ರೋಹಿತ್ ಶರ್ಮಾ ಅವರು ಇನ್ನೂ ಕೆಲವು ತಿಂಗಳು ತಂಡದ ನಾಯಕನಾಗಿ ಉಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿತ್ತು. ಬಳಿಕ ಅವರನ್ನೇ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ನಾಯಕರನ್ನಾಗಿ ನೇಮಿಸಲಾಗಿತ್ತು.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ನಾಲ್ಕು ವಿಕೆಟ್ಗಳ ಜಯ ಸಾಧಿಸಿದೆ. ಇದೀಗ ನಾಯಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ ತಮ್ಮ ಭವಿಷ್ಯದ ಬಗ್ಗೆ ಎದ್ದಿದ್ದ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. 'ನಾನು ಈ ಸ್ವರೂಪದಿಂದ ನಿವೃತ್ತಿ ಹೊಂದುವುದಿಲ್ಲ. ಮುಂದೆ ಯಾವುದೇ ವದಂತಿಗಳನ್ನು ದಯವಿಟ್ಟು ಹರಡಬೇಡಿ. ಭವಿಷ್ಯದ ಬಗ್ಗೆ ಯಾವುದೇ ಯೋಜನೆ ಇಲ್ಲ, ಏನು ನಡೆಯುತ್ತಿದೆಯೋ ಅದು ಹಾಗೆಯೇ ಮುಂದುವರಿಯುತ್ತದೆ' ಎಂದು ರೋಹಿತ್ ಹೇಳಿದ್ದರು. ರೋಹಿತ್ ಶರ್ಮಾ ಅವರ ಪ್ರತಿಕ್ರಿಯೆಯನ್ನು ದಿನೇಶ್ ಕಾರ್ತಿಕ್ ಮೆಚ್ಚಿಕೊಂಡಿದ್ದಾರೆ.
'ರೋಹಿತ್ ಶರ್ಮಾ ಅವರು ತಮ್ಮ ಸುತ್ತ ಎದ್ದಿದ್ದ ನಿವೃತ್ತಿ ವದಂತಿಗಳಿಗೆ ಹಾಸ್ಯ ಮನೋಭಾವದಿಂದ ಪ್ರತಿಕ್ರಿಯಿಸಿದ್ದಾರೆ. ಇದು ಅವರು ಏನೆಂಬುದನ್ನು ತೋರಿಸುತ್ತದೆ. ಆದರೆ, ಅದೇ ವೇಳೆ ಅವರು ಗಂಭೀರವಾದ ಸಂದೇಶವನ್ನು ಕೂಡ ರವಾನಿಸಿದ್ದಾರೆ. 'ನನ್ನ ನಿವೃತ್ತಿಯನ್ನು ಕೇಳಲು ಆತುರಪಡಬೇಡಿ. ನನಗೆ ಇಷ್ಟವಾದಾಗ ನಾನು ಅದನ್ನು ಮಾಡುತ್ತೇನೆ' ಎಂದಿದ್ದಾರೆ ಎಂದು ದಿನೇಶ್ ಕಾರ್ತಿಕ್ ಕ್ರಿಕ್ಬಜ್ನಲ್ಲಿ ಹೇಳಿದ್ದಾರೆ.
'ದೊಡ್ಡ ಪಂದ್ಯಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡಲು ಏನು ಮಾಡಬೇಕೆಂದು ಅವರಿಗೆ ತಿಳಿದಿದೆ. ಪಂದ್ಯಕ್ಕು ಮುನ್ನ ಹಲವಾರು ಆಲೋಚನೆಗಳು ನಡೆಯುತ್ತಿರುತ್ತವೆ. ಆದರೆ, ಅವರು ಆ ಆಲೋಚನೆಗಳನ್ನು ಹೇಗೆ ನಿರ್ದೇಶಿಸುತ್ತಾರೆ ಮತ್ತು ಅದನ್ನು ಮೈದಾನದಲ್ಲಿ ಹೇಗೆ ಬಳಸುತ್ತಾರೆ ಎಂಬುದು ಅವರನ್ನು ವಿಶೇಷವಾಗಿಸುತ್ತದೆ' ಎಂದು ಅವರು ವಿರಾಟ್ ಕೊಹ್ಲಿಯನ್ನು ಸಹ ಹೊಗಳಿದರು.
'ಜೈಸ್ವಾಲ್ ಒಬ್ಬ ಉತ್ತಮ ಆರಂಭಿಕ ಆಟಗಾರ. ಅವರು ತಮ್ಮ ಸರದಿ ಬಂದಾಗ ಅವರು ಉತ್ತಮ ಪ್ರದರ್ಶನ ನೀಡುತ್ತಾರೆ' ಎಂದರು.
ವರದಿ ಪ್ರಕಾರ, ರೋಹಿತ್ ಶರ್ಮಾ 2027ರ ವಿಶ್ವಕಪ್ವರೆಗೆ ನಿವೃತ್ತಿ ಘೋಷಿಸದಿರಲು ಮತ್ತು ವೃತ್ತಿಜೀವನದಲ್ಲಿ ಮುಂದುವರಿಯಲು ಈಗಾಗಲೇ ಯೋಜಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ಐಸಿಸಿ ಚತುರ್ವಾರ್ಷಿಕ ಟೂರ್ನಿಯ ನಂತರ ಅವರು ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಬಹುದು' ಎಂದು ಕ್ರಿಕ್ಬಜ್ ತಿಳಿಸಿದೆ.
ರೋಹಿತ್ ಶರ್ಮಾ ಅವರಿಗೆ ಮುಂದಿನ ಎರಡು ತಿಂಗಳಲ್ಲಿ 38 ವರ್ಷ ವಯಸ್ಸಾಗಲಿದೆ ಮತ್ತು 2027ರ ಏಕದಿನ ವಿಶ್ವಕಪ್ ಆರಂಭವಾಗುವ ಹೊತ್ತಿಗೆ ಅವರಿಗೆ 40 ವರ್ಷ ವಯಸ್ಸಾಗಿರುತ್ತದೆ. 2025 ರಿಂದ 2027 ರ ವಿಶ್ವಕಪ್ ವರೆಗೆ ಭಾರತ 27 ಏಕದಿನ ಪಂದ್ಯಗಳನ್ನು ಆಡುವ ನಿರೀಕ್ಷೆಯಿದೆ.
ರೋಹಿತ್ ಅವರು ಭಾರತೀಯ ಕ್ರಿಕೆಟ್ ತಂಡದ ಸದ್ಯದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರೊಂದಿಗೆ 'ಫಿಟ್ನೆಸ್, ಬ್ಯಾಟಿಂಗ್ ಮತ್ತು ಅಪ್ರೋಚ್' ಕುರಿತು ತರಬೇತಿ ಪಡೆಯಲಿದ್ದಾರೆ ಎಂದು ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




