ಕ್ರಿಕೆಟ್

Huge Rule Change In Cricket: ಐಸಿಸಿ ಹೊಸ ನಿಯಮ, 'Bunny Hops' ಕ್ಯಾಚ್‌ ಗೆ ನಿಷೇಧ! ಏನಿದು ವಿವಾದಿತ Catch Rule?

ಬದಲಾದ ಫೀಲ್ಡಿಂಗ್ ಡೈನಾಮಿಕ್ಸ್ ಅನ್ನು ಮರುರೂಪಿಸಲು ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (MCC) ಮಹತ್ವದ ನಿರ್ಧಾರ ಮಾಡಿದ್ದು, ಬೌಂಡರಿ ಕ್ಯಾಚ್‌ಗಳನ್ನು ನಿಯಂತ್ರಿಸುವ ಕಾನೂನಿಗೆ ನಿರ್ಣಾಯಕ ತಿದ್ದುಪಡಿ ಘೋಷಿಸಿದೆ.

Huge Rule Change In Cricket: ಐಸಿಸಿ ಹೊಸ ನಿಯಮ, 'Bunny Hops' ಕ್ಯಾಚ್‌ ಗೆ ನಿಷೇಧ! ಏನಿದು ವಿವಾದಿತ Catch Rule?
ಬನ್ನಿಹಾಪ್ಸ್ ಕ್ಯಾಚ್ ನಿಯಮ ಬದಲಾವಣೆ
Published On :

ಮೆಲ್ಬೋರ್ನ್: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಕ್ರಿಕೆಟ್ ಕ್ಯಾಚ್ ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದ್ದು, ಇನ್ನು ಮುಂದೆ 'Bunny Hops' ಕ್ಯಾಚ್​ಗಳನ್ನು ಔಟ್ ಎಂದು ಪರಿಗಣಿಸುವುದಿಲ್ಲ ಎಂದು ತಿಳಿಸಿದೆ.

ಹೌದು.. ಆಧುನಿಕ ಕ್ರಿಕೆಟ್‌ನಲ್ಲಿ ಮಹತ್ವದ ಬದಲಾವಣೆಗೆ ಐಸಿಸಿ ಮುಂದಾಗಿದ್ದು, ಫೀಲ್ಡಿಂಗ್ ವಿಭಾಗದಲ್ಲಿ ಹೊಸ ನಿಯಮ ಜಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮುಂದಾಗಿದೆ. ಬದಲಾದ ಫೀಲ್ಡಿಂಗ್ ಡೈನಾಮಿಕ್ಸ್ ಅನ್ನು ಮರುರೂಪಿಸಲು ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (MCC) ಮಹತ್ವದ ನಿರ್ಧಾರ ಮಾಡಿದ್ದು, ಬೌಂಡರಿ ಕ್ಯಾಚ್‌ಗಳನ್ನು ನಿಯಂತ್ರಿಸುವ ಕಾನೂನಿಗೆ ನಿರ್ಣಾಯಕ ತಿದ್ದುಪಡಿ ಘೋಷಿಸಿದೆ.

ಫೀಲ್ಡರ್‌ಗಳು ಬೌಂಡರಿಯ ಹೊರಗೆ ನೆಲಕ್ಕಿಂತ ಮೇಲೆ ಹಾರಿ ಚೆಂಡಿನೊಂದಿಗೆ ಬಹು ಸಂಪರ್ಕಗಳನ್ನು ಮಾಡುವುದನ್ನು ನಿರ್ಬಂಧಿಸುವ MCCಯ ಹೊಸ ನಿಯಮಗಳು ಅಕ್ಟೋಬರ್ 2026 ರಲ್ಲಿಅಧಿಕೃತವಾಗಿ ಕಾನೂನುಗಳಲ್ಲಿ ಸ್ಥಾನ ಪಡೆಯುತ್ತದೆ ಎಂದು ಹೇಳಲಾಗಿದೆ. ಆ ಮೂಲಕ ವಿವಾದಿತ 'Bunny Hops' ಕ್ಯಾಚ್‌ ಗೆ ನಿಷೇಧ ಹೇರಲಾಗುತ್ತಿದೆ.

ಹೊಸ ನಿಮಯ

ಅದಾಗ್ಯೂ ಬೌಂಡರಿ ಕ್ಯಾಚ್‌ಗಳು ಹೇಗೆ ಮಾನ್ಯ ಆಗುತ್ತದೆ ಎಂಬುದರ ಬಗ್ಗೆ ಹೊಸ ನಿಯಮಗಳು ಸ್ಪಷ್ಟ ಮಾರ್ಗದರ್ಶನ ನೀಡುತ್ತವೆ. ಬೌಂಡರಿಯಿಂದ ಸಂಪೂರ್ಣವಾಗಿ ಹೊರಗೆ ಜಿಗಿದು ಹಿಡಿಯುವ ಕ್ಯಾಚ್‌ಗಳನ್ನು ಅಮಾನ್ಯಗೊಳಿಸಲಾಗಿದೆ. ಆದರೆ, ಬೌಂಡರಿಯ ಒಳಗಿನಿಂದ ಚೆಂಡನ್ನು ತಳ್ಳಿ, ಹೊರಗೆ ಹೋಗಿ ಮತ್ತೆ ಒಳಗೆ ಬಂದು ಹಿಡಿಯುವ ಕ್ಯಾಚ್‌ಗಳಿಗೆ ಅನುಮತಿ ಇದೆʼ ಎಂದು MCC ಹೇಳಿದೆ. ನಿಯಮದ ಪ್ರಕಾರ, ಬೌಂಡರಿ ಗೆರೆಯಲ್ಲಿ ಕ್ಯಾಚ್ ತೆಗೆದುಕೊಳ್ಳುವಾಗ ಆಟಗಾರರು ಒಂದು ಅವಕಾಶವನ್ನು ಮಾತ್ರ ಪಡೆಯುತ್ತಾರೆ. ಅವರು ಬೌಂಡರಿಯಿಂದ ಹೊರಗೆ ಜಿಗಿದು ಚೆಂಡನ್ನು ಒಮ್ಮೆ ಮಾತ್ರ ಮುಟ್ಟಬಹುದು. ನಂತರ ಅವರು ಬೌಂಡರಿಯೊಳಗೆ ನೆಲಕ್ಕೆ ತಾಗಬೇಕು. ಒಂದು ವೇಳೆ ಅವರು ಹಾಗೆ ಮಾಡದಿದ್ದರೆ, ಬೌಂಡರಿ ಎಂದು ಪರಿಗಣಿಸಲಾಗುತ್ತದೆ.

ಹೊಸ ನಿಯಮದ ಪ್ರಕಾರ, ಆಟಗಾರ ಬೌಂಡರಿಯಿಂದ ಹೊರಗೆ ಜಿಗಿದು ಚೆಂಡನ್ನು ಒಮ್ಮೆ ಮಾತ್ರ ಮುಟ್ಟಬಹುದು. ನಂತರ ಅವರು ಬೌಂಡರಿಯೊಳಗೆ ನೆಲಕ್ಕೆ ತಾಗಬೇಕು. ಒಂದು ವೇಳೆ ಅವರು ಹಾಗೆ ಮಾಡದಿದ್ದರೆ, ಬೌಂಡರಿ ಎಂದು ಪರಿಗಣಿಸಲಾಗುತ್ತದೆ MCC ಹೇಳಿದೆ. ಅಸ್ತಿತ್ವದಲ್ಲಿರುವ ಕಾನೂನು 19.5.2 ರ ಅಡಿಯಲ್ಲಿ ತಾಂತ್ರಿಕವಾಗಿ ಕಾನೂನುಬದ್ಧವಾಗಿದ್ದರೂ, ಈ ಕ್ಯಾಚ್ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕ್ರಿಕೆಟ್ ಪಂಡಿತರಲ್ಲಿ ಚರ್ಚೆ ಉಂಟುಮಾಡಿತು. ಇದು ಕಾನೂನಿನ ಪ್ರಕಾರ ಸರಿಯಿದ್ದರೂ ಸಹ, ಅನೇಕರು ಇದನ್ನು ಆಟದ ಉತ್ಸಾಹಕ್ಕೆ ವಿರುದ್ಧವೆಂದು ಭಾವಿಸಿದರು. ಆ ಗ್ರಹಿಕೆಯನ್ನು ಸರಿಪಡಿಸಲು ಎಂಸಿಸಿ ಈಗ ಮಧ್ಯಪ್ರವೇಶಿಸಿದೆ.

ಹಗ್ಗದ ಹೊರಗೆ ಗಾಳಿಯಲ್ಲಿ ಇರುವಾಗ ಮಾಡಿದ ಯಾವುದೇ ಎರಡನೇ ಸಂಪರ್ಕ, ಅಥವಾ ಆ ಸ್ಪರ್ಶದ ನಂತರ ಫೀಲ್ಡರ್ ಹೊರಗೆ ಇಳಿದರೆ, ಅದು ಬೌಂಡರಿ ಎಂದು ಘೋಷಿಸಲಾಗುತ್ತದೆ. ರಿಲೇ ಕ್ಯಾಚ್‌ಗಳು ಸಹ ಇದರಡಿಯಲ್ಲಿ ಬರುತ್ತವೆ. ಒಬ್ಬ ಫೀಲ್ಡರ್ ಬೌಂಡರಿ ಗೆರೆಯ ಹೊರಗಿನಿಂದ ಚೆಂಡನ್ನು ಮುಟ್ಟಿದರೆ ಅದನ್ನು ತಂಡದ ಸಹ ಆಟಗಾರನಿಗೆ ರವಾನಿಸಲು ಸಹ ನಿಯಮ ಜಾರಿಗೆ ಮಾಡಲಾಗಿದೆ. ಇದರ ಪ್ರಕಾರ ಸಹ ಆಟಗಾರ ಚೆಂಡನ್ನು ಹಿಡಿಯುವ ಮೊದಲು ಮೊದಲು ಸಂಪರ್ಕಕ್ಕೆ ಬಂದ ಆಟಗಾರನೂ ಆಟದ ಮೈದಾನದೊಳಗೆ ಹಿಂತಿರುಗಬೇಕು.

ಏನಿದು 'Bunny Hops' ಕ್ಯಾಚ್‌?

ಬ್ಯಾಟರ್ ಆಕಾಶದಲ್ಲಿ ಭಾರಿಸಿದ ಚೆಂಡನ್ನು ಬೌಂಡರಿ ಲೈನ್ ಬಳಿಯ ಫೀಲ್ಡರ್ ಗಾಳಿಯಲ್ಲಿ ಹಾರಿ ಹಿಡಿದು ಬಳಿಕ ತಾನು ಬೌಂಡರಿ ಲೈನ್ ದಾಟಿ ಹೋಗುವ ಅಪಾಯವಿದ್ದರೆ ಕೂಡಲೇ ಚೆಂಡನ್ನುಗಾಳಿಯಲ್ಲಿ ಎಸೆದು ತಾನು ಬೌಂಡರಿ ಲೈನ್ ಗೆರೆ ದಾಟಿ ಬಳಿಕ ಮತ್ತೆ ಗಾಳಿಯಲ್ಲಿ ಹಾರಿ ಚೆಂಡನ್ನು ಹಿಡತಕ್ಕೆ ಪಡೆದು ಗಾಳಿಯಲ್ಲಿರುವಂತೆಯೇ ಮತ್ತೆ ಚೆಂಡನ್ನು ಬೌಂಡರಿ ಗೆರೆಯೊಳಗೆ ಮೇಲಕ್ಕೆ ಎಸೆದು ಬಳಿಕ ತಾನು ಬೌಂಡರಿ ಗೆರೆಯೊಳಗೆ ಬಂದು ಕ್ಯಾಚ್ ಪಡೆಯುತ್ತಾನೆ. ಇಷ್ಚು ದಿನ ಈ ಕ್ಯಾಚ್ ಮಾನ್ಯವಾಗಿತ್ತು. ಆದರೆ ಇದೀಗ ಐಸಿಸಿ ಈ ಕ್ಯಾಚ್ ನಿಷೇಧಕ್ಕೆ ಮುಂದಾಗಿದೆ.

ನಿಷೇಧಕ್ಕೆ ಕಾರಣ ಏನು?

2023ರ ಬಿಗ್ ಬ್ಯಾಷ್ ಲೀಗ್ನಲ್ಲಿ ಟೂರ್ನಿಯಲ್ಲಿ ಸಿಡ್ನಿ ಸಿಕ್ಸರ್ಸ್ ವಿರುದ್ಧದ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ತಂಡದ ಮೈಕೆಲ್ ನೆಸರ್ ಬೌಂಡರಿ ಲೈನ್ ಹೊರಗೆ ಹೋಗಿ ಗಾಳಿಯಲ್ಲಿ ಹಾರಿ ಚೆಂಡನ್ನು ಹಿಡಿದು, ಮತ್ತೆ ಮೈದಾನಕ್ಕೆ ಎಸೆದು ಕ್ಯಾಚ್ ಹಿಡಿದಿದ್ದರು. ಅದನ್ನು ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಹೀಗೆ ಕ್ಯಾಚ್ ಹಿಡಿಯಲು ಅವಕಾಶವಿದ್ದ ಕಾರಣ, ಹಲವು ಲೀಗ್ಗಳಲ್ಲಿ ಬನ್ನಿ ಹಾಪ್ ಕ್ಯಾಚ್ಗಳ ಪ್ರಯತ್ನಗಳು ಸಹ ನಡೆದಿದ್ದವು. ಇದು ಸಾಕಷ್ಟು ಟೀಕೆಗೂ ಕಾರಣವಾಗಿತ್ತು. ಹೀಗಾಗಿ ಬನ್ನಿ ಹಾಪ್ ಕ್ಯಾಚ್ಗಳನ್ನು ನಿಷೇಧಿಸಲು ಐಸಿಸಿ ನಿರ್ಧರಿಸಿದೆ.

ಇದಲ್ಲದೆ ಬೌಂಡರಿ ಲೈನ್ ದಾಟಿ ಹಿಡಿದ ಕ್ಯಾಚ್ ಮಾನ್ಯವಾಗಬೇಕಿದ್ದರೆ, ಚೆಂಡಿನ ಮೇಲಿನ ಫೀಲ್ಡರ್​ನ ಮೊದಲ ಸ್ಪರ್ಶವು ಬೌಂಡರಿ ಲೈನ್​ ಆಚೆಯಿದ್ದರೆ, ಚೆಂಡನ್ನು ಎರಡನೇ ಬಾರಿ ಸ್ಪರ್ಶಿಸಬೇಕಿದ್ದರೆ ಫೀಲ್ಡರ್ ಮೈದಾನದ ಒಳಗಿರಬೇಕು ಎಂದು ತಿದ್ದುಪಡಿ ಮಾಡಲಾಗಿದೆ. ಪ್ರಸ್ತುತ ನಿಯಮದ ಪ್ರಕಾರ, ಆಟಗಾರ ಚೆಂಡು ಮತ್ತು ನೆಲ ಎರಡನ್ನೂ ಬೌಂಡರಿ ಹೊರಗೆ ಸ್ಪರ್ಶಿಸಿದರೆ ಮಾತ್ರ ಅದು ಅನ್ವಯವಾಗುತ್ತದೆ.

ಯಾವಾಗಿಂದ ಜಾರಿ?

ಹೊಸ ಕ್ಯಾಚ್ ನಿಯಮವನ್ನು ಜೂ.17 ರಂದು ಗಾಲೆಯಲ್ಲಿ ನಡೆಯಲಿರುವ ಶ್ರೀಲಂಕಾ vs ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಪರಿಚಯಿಸಲು ಐಸಿಸಿ ನಿರ್ಧರಿಸಿದೆ. ಅಕ್ಟೋಬರ್ 2026ರಿಂದ ಹೊಸ ಕ್ಯಾಚಿಂಗ್ ನಿಯಮ ಅಧಿಕೃತವಾಗಿ ಜಾರಿಗೆ ಬರಲಿದೆ. ಆದರೆ, ಎಂಸಿಸಿ ಕಾನೂನುಗಳಲ್ಲಿ ಔಪಚಾರಿಕ ಸಂಯೋಜನೆಯು ಅಕ್ಟೋಬರ್ 2026 ರಲ್ಲಿ ಮುಂದಿನ ಸುತ್ತಿನ ಜಾಗತಿಕ ಕಾನೂನು ಪರಿಷ್ಕರಣೆಗಳ ಸಮಯದಲ್ಲಿ ನಡೆಯಲಿದೆ.

ಬಿಗ್ ಬ್ಯಾಷ್ ಅಷ್ಟೇ ಅಲ್ಲ.. ಐಪಿಎಲ್ ನಲ್ಲೂ ಸುದ್ದಿ ಮಾಡಿದ್ದ 'Bunny Hops' ಕ್ಯಾಚ್‌

ಅಂದಹಾಗೆ 2023ರ ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೈಕೆಲ್ ನೆಸರ್ ಹಿಡಿದ ಕ್ಯಾಚ್ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಅಂತೆಯೇ ಇತ್ತೀಚೆಗೆ ಮುಕ್ತಾಯವಾದ 2025ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಡೆವಾಲ್ಡ್ ಬ್ರೆವಿಸ್ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಹಿಡಿದ ಕ್ಯಾಚ್ ಕೂಡ ಇದೇ ರೀತಿಯದ್ದಾಗಿತ್ತು. ಹೊಸ ನಿಯಮದ ಪ್ರಕಾರ ಇನ್ನು ಮುಂದೆ ಇಂತಹ ಕ್ಯಾಚ್ ಗಳು ಮಾನ್ಯವಾಗುವುದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.