IPL 2025: RR ವಿರುದ್ಧ RCB ಸೆಣಸಾಟ; ತವರಿನಲ್ಲಿ ಪಂದ್ಯ ಗೆಲ್ಲುತ್ತಾ ರಾಯಲ್ ಚಾಲೆಂಜರ್ಸ್ ಬೆಂಗಳೂರು!
ದೇಶದ ಎಲ್ಲ ಭಾಗಗಳಲ್ಲಿ ಎದುರಾಳಿಗಳನ್ನು ಅವರ ತವರಿನಲ್ಲಿಯೇ ಹಿಮ್ಮೆಟ್ಟಿಸುತ್ತಿರುವ ಆರ್‌ಸಿಬಿ ತವರಿನಲ್ಲಿ ಮಾತ್ರ ತಾನೇ ಹಿಂದುಳಿದಿದೆ.

ಬೆಂಗಳೂರು: ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತವರು ನೆಲದಲ್ಲಿ ಮಾತ್ರ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದೆ. ಗುರುವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ ಸೆಣಸಲಿದ್ದು, ತವರಿನಲ್ಲಿ ಗೆಲುವಿನ ಲಯಕ್ಕೆ ಮರಳಲು ಸಿದ್ಧತೆಯಲ್ಲಿ ತೊಡಗಿದೆ.
ಐಪಿಎಲ್ 2025ರ ಆವೃತ್ತಿಯಲ್ಲಿ ತವರಿನ ಹೊರಗೆ ಸತತ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಆರ್‌ಸಿಬಿ, ತವರಿನಲ್ಲಿ ಮಾತ್ರ ಇನ್ನೂ ಮೊದಲ ಗೆಲುವಿನ ಹುಟುಕಾಟದಲ್ಲಿದೆ. ಬೆಂಗಳೂರಿನಲ್ಲಿ ಆಡಿರುವ ಮೂರು ಪಂದ್ಯಗಳನ್ನು ಸೋತಿದ್ದು, ಇನ್ನೂ ನಾಲ್ಕು ಪಂದ್ಯಗಳನ್ನು ಆಡಬೇಕಿದೆ. ಈ ಆವೃತ್ತಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದರೂ, ತವರಿನಲ್ಲಿ ಮಾತ್ರ ಗೆಲುವಿಗೆ ಪ್ರಯಾಸ ಪಡುತ್ತಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ದೇಶದ ಎಲ್ಲ ಭಾಗಗಳಲ್ಲಿ ಎದುರಾಳಿಗಳನ್ನು ಅವರ ತವರಿನಲ್ಲಿಯೇ ಹಿಮ್ಮೆಟ್ಟಿಸುತ್ತಿರುವ ಆರ್‌ಸಿಬಿ ತವರಿನಲ್ಲಿ ಮಾತ್ರ ತಾನೇ ಹಿಂದುಳಿದಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಹೇಗೆಂದು ತಿಳಿದುಕೊಳ್ಳುವಲ್ಲಿ ಆಟಗಾರರು ವಿಫಲವಾಗಿರುವುದೇ ಸೋಲಿಗೆ ಕಾರಣ ಎನ್ನಲಾಗಿದೆ.
ಬ್ಯಾಟ್ಸ್‌ಮನ್‌ಗಳು ಈ ಪಿಚ್‌ನಲ್ಲಿನ ನಿಧಾನಗತಿಯನ್ನು ನಿಭಾಯಿಸಲು ಸರಿಯಾದ ವೇಗವನ್ನು ಇನ್ನೂ ಕಂಡುಕೊಂಡಿಲ್ಲ. ತಂಡ ಇಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ 169/8, 163/7 ಮತ್ತು 95/9 (14 ಓವರ್‌ಗಳು) ಗಳಿಸಿದೆ. ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ್ದರೂ, ಬ್ಯಾಟ್ಸ್‌ಮನ್‌ಗಳು ಲಯಕ್ಕೆ ಮರಳಿಲ್ಲದಿರುವುದೇ ಸೋಲಿಗೆ ಕಾರಣ ಎನ್ನಲಾಗಿದೆ.
ತವರಿನಿಂದ ಹೊರಗೆ ಪ್ರತಿ ಓವರ್‌ಗೆ 9-10 ರನ್ ಗಳಿಸುವ ಬ್ಯಾಟ್ಸ್‌ಮನ್‌ಗಳು ಚಿನ್ನಸ್ವಾಮಿಯಲ್ಲಿ ಪ್ರತಿ ಓವರ್‌ಗೆ 7-8 ರನ್‌ಗಳಿಗೆ ಇಳಿದಿದ್ದಾರೆ. ವಿರಾಟ್ ಕೊಹ್ಲಿ ಈ ಆವೃತ್ತಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದು, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್ ಮತ್ತು ನಾಯಕ ರಜತ್ ಪಾಟಿದಾರ್ ಅವರಿಂದ ಹೆಚ್ಚಿನ ನಿರೀಕ್ಷೆಗಳಿವೆ. ಆರ್‌ಆರ್ ವಿರುದ್ಧ ಲಯ ಕಂಡುಕೊಳ್ಳುವ ನಿರೀಕ್ಷೆಯಲ್ಲಿ ಆರ್‌ಸಿಬಿ ಇದೆ.
ಆರ್‌ಸಿಬಿ ಆಡಿರುವ 8 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸುವ ಮೂಲಕ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಕೂಡ 10 ಅಂಕಗಳನ್ನು ಹೊಂದಿವೆ. ಮುಂಬೈ ಇಂಡಿಯನ್ಸ್ ಎಂಟು ಅಂಕಗಳನ್ನು ಪಡೆದಿದ್ದು, ಇಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದರೆ, 10 ಅಂಕಗಳೊಂದಿಗೆ ಉತ್ತಮ ನೆಟ್ ರನ್ ರೇಟ್ ಮೂಲಕ ಆರ್‌ಸಿಬಿಯನ್ನು ಮೂರನೇ ಸ್ಥಾನದಿಂದ ಕೆಳಕ್ಕಿಳಿಸಬಹುದು. ಪಟ್ಟಿಯಲ್ಲಿ ಮೇಲಿನ ಸ್ಥಾನವನ್ನು ಕಾಯ್ದುಕೊಳ್ಳಲು ಆರ್‌ಸಿಬಿಗೆ ಈ ಗೆಲುವು ಮುಖ್ಯವಾಗಿದೆ.
ಗಾಯದಿಂದಾಗಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಹೊರಗುಳಿದಿದ್ದು, ರಿಯಾನ್ ಪರಾಗ್ ತಂಡವನ್ನು ಮುನ್ನಡೆಸಲಿದ್ದಾರೆ. ತಂಡವು ಸದ್ಯ ನಾಲ್ಕು ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.
ಉಭಯ ತಂಡಗಳ ಆಟಗಾರರು
ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ (ನಾಯಕ), ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಸುಯಶ್ ಶರ್ಮಾ, ಯಶ್ ದಯಾಳ್, ದೇವದತ್ ಪಡಿಕ್ಕಲ್, ರಸಿಕ್ ದಾರ್ ಸಲಾಂ, ಮನೋಜ್ ಭಾಂಡಗೆ, ಜೇಕಬ್ ಬೆಥೆಲ್, ಸ್ವಪ್ನಿಲ್ ಸಿಂಗ್, ಲುಂಗಿ ಎಂಗಿಡಿ, ರೊಮಾರಿಯೋ ಶೆಫರ್ಡ್, ನುವಾನ್ ತುಷಾರಾ, ಮೋಹಿತ್ ರಾಠಿ, ಸ್ವಸ್ತಿಕ್ ಚಿಕಾರಾ, ಅಭಿನಂದನ್ ಸಿಂಗ್.
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್ (ನಾಯಕ), ನಿತೀಶ್ ರಾಣಾ, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆೇಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ, ಶುಭಂ ದುಬೆ, ಕುಮಾರ್ ಕಾರ್ತಿಕೇಯ, ಯದುವೀರ್ ಸಿಂಗ್ ಚರಕ್, ಕುನಾರ್ ಸಿಂಗ್ ರಾಥೋಡ್, ಆಕಾಶ್ ಮಧ್ವಾಲ್, ಫಜ್ಲುಲ್ ಹಕ್ ಫಾರೂಕಿ, ಕ್ವೀನಾ ಮಾಫಕ್, ಅಶೋಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್ (ಗಾಯ).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




