ಕ್ರಿಕೆಟ್

IPL 2025: 14ನೇ ವಯಸ್ಸಿನಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ; 3 ದಾಖಲೆ ಪುಡಿಪುಡಿ!

ರಾಜಸ್ಥಾನ್ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ವೈಭವ್, ಶಾರ್ದೂಲ್ ಠಾಕೂರ್ ಅವರ ಮೊದಲನೇ ಎಸೆತದಲ್ಲೇ ಸಿಕ್ಸ್ ಬಾರಿಸುವ ಮೂಲಕ ತಮ್ಮ ಐಪಿಎಲ್ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ.

IPL 2025: 14ನೇ ವಯಸ್ಸಿನಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ; 3 ದಾಖಲೆ ಪುಡಿಪುಡಿ!
ವೈಭವ್ ಸೂರ್ಯವಂಶಿ
Published On :

14 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ಪದಾರ್ಪಣೆ ಮಾಡಿದ್ದು, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ (RR) ಪರ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ, ಈ ಮೂಲಕ ಈ ಸಾಧನೆ ಮಾಡಿದ 10ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ RR ಮತ್ತು LSG ನಡುವಿನ ಪಂದ್ಯದ ಸಂದರ್ಭದಲ್ಲಿ ಸೂರ್ಯವಂಶಿ ಗಣ್ಯರ ಪಟ್ಟಿ ಸೇರಿದ್ದಾರೆ.

ಆರ್‌ಆರ್ ಪರ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ವೈಭವ್, ಶಾರ್ದೂಲ್ ಠಾಕೂರ್ ಅವರ ಮೊದಲನೇ ಎಸೆತದಲ್ಲೇ ಸಿಕ್ಸ್ ಬಾರಿಸುವ ಮೂಲಕ ತಮ್ಮ ಐಪಿಎಲ್ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. 20 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್ ನೆರವಿನೊಂದಿಗೆ 34 ರನ್ ಗಳಿಸಿದ ಅವರು ಏಡೆನ್ ಮಾರ್ಕ್ರಮ್ ಅವರ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. 170 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ವೈಭವ್, ಯಶಸ್ವಿ ಜೈಸ್ವಾಲ್ ಅವರೊಂದಿಗೆ 85 ರನ್‌ಗಳ ಜೊತೆಯಾಟ ಆಡಿದರು.

ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಮಾಡಿದ ಮೂರು ದಾಖಲೆಗಳು

14 ವರ್ಷ 23 ದಿನಗಳ ವಯಸ್ಸಿನಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿರುವ ಸೂರ್ಯವಂಶಿ, 2008ರಲ್ಲಿ ಪ್ರಾರಂಭವಾದ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ. 2019ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ 16 ವರ್ಷ 157 ದಿನಗಳ ವಯಸ್ಸಿನ ಪ್ರಯಾಸ್ ರೇ ಬರ್ಮನ್ ಅವರ ದಾಖಲೆಯನ್ನು ಮುರಿದಿದ್ದಾರೆ. ಪ್ರಯಾಸ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು.

ಸೂರ್ಯವಂಶಿ ಐಪಿಎಲ್‌ನಲ್ಲಿ ಮೊದಲನೇ ಎಸೆತದಲ್ಲೇ ಸಿಕ್ಸರ್ ಬಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಆರ್‌ಆರ್ ಪರ ಆಡುತ್ತಿರುವ ರಿಯಾನ್ ಪರಾಗ್ ಅವರು ಈವರೆಗೆ ಈ ದಾಖಲೆಯನ್ನು ಹೊಂದಿದ್ದರು. 17 ವರ್ಷ 161 ದಿನಗಳ ವಯಸ್ಸಿನಲ್ಲಿರುವಾಗ ಪರಾಗ್ ಸಿಕ್ಸರ್ ಬಾರಿಸಿದ್ದರು. ಇದರೊಂದಿಗೆ ಐಪಿಎಲ್‌ನಲ್ಲಿ ಬೌಂಡರಿ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಮಾಡಿದ್ದಾರೆ. ಈವರೆಗೂ ಪ್ರಯಾಸ್ ರೇ ಬರ್ಮನ್ ಅವರೇ ಆರು ವರ್ಷಗಳ ಕಾಲ ಈ ದಾಖಲೆಯನ್ನು ಹೊಂದಿದ್ದರು.

ಆಸ್ಟ್ರೇಲಿಯಾದ ರಾಬ್ ಕ್ವಿನಿ, ಕೆರಿಬಿಯನ್‌ನ ಕೆವೊನ್ ಕೂಪರ್, ವೆಸ್ಟ್ ಇಂಡೀಸ್‌ನ ಆಂಡ್ರೆ ರಸೆಲ್, ವೆಸ್ಟ್ ಇಂಡೀಸ್ ಆಲ್‌ರೌಂಡರ್ ಕಾರ್ಲೋಸ್ ಬ್ರೈತ್‌ವೈಟ್, ಭಾರತದ ಅನಿಕೇತ್ ಚೌಧರಿ, ವೆಸ್ಟ್ ಇಂಡೀಸ್‌ನ ಜಾವೊನ್ ಸಿಯರ್ಲ್ಸ್, ಭಾರತದ ಸಿದ್ಧೇಶ್ ಲಾಡ್, ಶ್ರೀಲಂಕಾದ ಮಹೇಶ್ ತೀಕ್ಷಣಾ ಮತ್ತು ಭಾರತದ ಸಮೀರ್ ರಿಜ್ವಿ ಅವರು ಐಪಿಎಲ್ ವೃತ್ತಿಜೀವನ ಆರಂಭಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ್ದರು. ಈ ಸಾಲಿಗೆ ಸೂರ್ಯವಂಶಿ ಸೇರಿದ್ದಾರೆ.

ಟಾಸ್ ಗೆದ್ದ ಎಲ್ಎಸ್‌ಜಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಏಡೆನ್ ಮಾರ್ಕ್ರಮ್ (45 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 66), ಆಯುಷ್ ಬದೋನಿ (34 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 50) ಮತ್ತು ಅಬ್ದುಲ್ ಸಮದ್ (10 ಎಸೆತಗಳಲ್ಲಿ 30*) ಅವರ ಅರ್ಧಶತಕಗಳ ನೆರವಿನಿಂದ LSG ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 180 ರನ್ ಕಲೆಹಾಕಿತು. RR ಎರಡು ರನ್‌ಗಳ ರೋಚಕ ಸೋಲು ಕಂಡಿದ್ದು, ಸತತ ನಾಲ್ಕನೇ ಸೋಲು ಕಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.