IPL 2025: ಒಂದೇ ಎಸೆತದಲ್ಲಿ ನಾಲ್ಕು ರನ್, ಹೊಡೆದಿದ್ದು Devdutt Padikkal, ಓಡಿದ್ದು Virat Kohli; 'ರನ್ ಮೆಷಿನ್' Fitness ಗೆ ಪ್ರೇಕ್ಷಕರು ಫುಲ್ ಫಿದಾ! Video
ದೇವದತ್ ಪಡಿಕ್ಕಲ್ ವಿರಾಟ್ ಕೊಹ್ಲಿ ಜೊತೆಗೂಡಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 2ನೇ ವಿಕೆಟ್ ಗೆ ಈ ಜೋಡಿ 103 ರನ್ ಗಳ ಶತಕದ ಜೊತೆಯಾಟವಾಡಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿತು.

ಚಂಡೀಗಢ: ಐಪಿಎಲ್ ಟೂರ್ನಿಯ ಇಂದಿನ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 7 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿದ್ದು, ಈ ಪಂದ್ಯದಲ್ಲಿ ಬ್ಯಾಟರ್ ಗಳು ಒಂದೇ ಎಸೆತದಲ್ಲಿ ನಾಲ್ಕು ರನ್ ಓಡುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.
ಹೌದು... ಚಂಡೀಗಢದ ಮುಲ್ಲನ್ಪುರ್ ನಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆದ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವಿನ ಪಂದ್ಯದಲ್ಲಿ ಈ ಅಪರೂಪದ ದೃಶ್ಯ ಪ್ರೇಕ್ಷಕರಿಗೆ ಸಿಕ್ಕಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡ ಆರ್ ಸಿಬಿಗೆ ಗೆಲ್ಲಲು 158 ರನ್ ಗುರಿ ನೀಡಿತ್ತು.
ಈ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಆರ್ ಸಿಬಿ ಆರಂಭಿಕ ಆಘಾತ ಎದುರಾಯಿತು. ತಂಡದ ಸ್ಫೋಟಕ ಆಟಗಾರ ಫಿಲಿಪ್ ಸಾಲ್ಟ್ ಕೇವಲ 1 ರನ್ ಗಳಿಸಿ ಅರ್ಶ್ ದೀಪ್ ಸಿಂಗ್ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಕ್ರೀಸ್ ಗೆ ಬಂದ ದೇವದತ್ ಪಡಿಕ್ಕಲ್ ವಿರಾಟ್ ಕೊಹ್ಲಿ ಜೊತೆಗೂಡಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
2ನೇ ವಿಕೆಟ್ ಗೆ ಈ ಜೋಡಿ 103 ರನ್ ಗಳ ಶತಕದ ಜೊತೆಯಾಟವಾಡಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿತು. ವಿರಾಟ್ ಕೊಹ್ಲಿ 54 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ ಅಜೇಯ 73 ರನ್ ಗಳಿಸಿದರು. ಕೊಹ್ಲಿ ಉತ್ತಮ ಸಾಥ್ ನೀಡಿದ ದೇವದತ್ ಪಡಿಕ್ಕಲ್ 35 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ 61 ರನ್ ಕಲೆಹಾಕಿದರು.

Video: 'ಕೊಟ್ಟ್ ಮೇಲೆ ತಗೊಳ್ಳೋಕು ರೆಡಿಯಾಗಿರು'; ಮೈದಾನದಲ್ಲೇ Shreyas Iyer ಗೆ ಸಿನಿಮಾ ತೋರಿಸಿದ Virat Kohli
ಒಂದೇ ಎಸೆತದಲ್ಲಿ ನಾಲ್ಕು ರನ್
ಇನ್ನು ಈ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ ಒಂದೇ ಎಸೆತದಲ್ಲಿ ನಾಲ್ಕು ರನ್ ಓಡಿ ಅಚ್ಚರಿಗೆ ಕಾರಣರಾದರು. ಆರ್ ಸಿಬಿ ಇನ್ನಿಂಗ್ಸ್ ನ 3ನೇ ಓವರ್ ನ ಅಂತಿಮ ಎಸೆತದಲ್ಲಿ ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ 4 ರನ್ ಓಡಿ ತಮ್ಮ ಓಟದ ಸಾಮರ್ಥ್ಯ ಪ್ರದರ್ಶಿಸಿದರು. 3ನೇ ಓವರ್ ನ ಅಂತಿಮ ಎಸೆತದಲ್ಲಿ 4ರನ್ ಓಟದ ಮೂಲಕ ಬಂದಿದ್ದು, ಇಲ್ಲಿ ಯಾವುದೇ ಮಿಸ್ ಫೀಲ್ಡ್ ಕೂಡ ಆಗಿರಲ್ಲಿಲ್ಲ. ಆರ್ಶ್ ದೀಪ್ ಸಿಂಗ್ ಎಸೆದ ಲೆಂಗ್ತ್ ಡೆಲಿವರಿಯನ್ನು ದೇವದತ್ ಪಡಿಕ್ಕಲ್ ಡೀಪ್ ಮಿಡ್ ವಿಕೆಟ್ ನತ್ತ ಭಾರಿಸಿದರು.
ಈ ವೇಳೆ ಫೈನ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಪಂಜಾಬ್ ತಂಡದ ನೇಹಲ್ ವದೇರಾ ಅದ್ಭುತವಾಗಿ ಓಡಿ ಆ ಚೆಂಡನ್ನು ಹಿಡಿತಕ್ಕೆ ಪಡೆದರು. ಇದೇ ಹೊತ್ತಿನಲ್ಲಿ ಅತ್ತ ಕ್ರೀಸ್ ನಲ್ಲಿದ್ದ ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ ನೋಡ ನೋಡುತ್ತಲೇ 3 ರನ್ ಓಡಿದ್ದರು. ವದೇರಾ ಚೆಂಡು ಎಸೆಯುತ್ತಲೇ ತಡ ಮಾಡದ ಕೊಹ್ಲಿ 4ನೇ ರನ್ ಗೆ ಕರೆ ಕೊಟ್ಟರು.
ಈ ವೇಳೆ ದೇವದತ್ ಪಡಿಕ್ಕಲ್ ಕೂಡ ಕೊಂಚ ಕೂಡ ತಡ ಮಾಡದೇ ನಾಲ್ಕನೇ ರನ್ ಓಡಿದರು. ಆ ಮೂಲಕ ಬೌಂಡರಿ ಇಲ್ಲದೆಯೂ ಕೊಹ್ಲಿ ಮತ್ತು ಪಡಿಕ್ಕಲ್ ಜೋಡಿ 4 ರನ್ ಪಡೆಯಿತು. ಆದರೆ ವದೇರಾ ಮಾತ್ರ ತಮ್ಮ ಅದ್ಭುತ ಫೀಲ್ಡಿಂಗ್ ಹೊರತಾಗಿಯೂ ಆರ್ ಸಿಬಿಗೆ 4 ರನ್ ಬಂದಿತು ಎಂದು ಕೊಂಚ ಅಸಮಾಧಾನಗೊಂಡರು. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ರಾಜಸ್ತಾನ ವಿರುದ್ಧ ಎದೆ ಹಿಡಿದುಕೊಂಡಿದ್ದ ಕೊಹ್ಲಿ
ಇನ್ನು ಈ ಹಿಂದಿನ ಪಂದ್ಯ ಅಂದರೆ, ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿಯೂ ಕೊಹ್ಲಿ ಇದೇ ರೀತಿ ಓಡಿದ್ದರು. ಆದರೆ ಅಂದು ಕೊಹ್ಲಿ ಎದೆ ಹಿಡಿದುಕೊಂಡಿದ್ದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು. ಅಂದು ಕೊಹ್ಲಿ ರನ್ ಓಡಿದ ಬಳಿಕ ರಾಜಸ್ತಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಬಳಿ ಹೋಗಿ ಎದೆಯ ಬಡಿತ ಚೆಕ್ ಮಾಡಿಸಿದ್ದ ವಿಡಿಯೋ ಕೂಡ ವ್ಯಾಪಕ ವೈರಲ್ ಆಗಿತ್ತು. ಇದೀಗ ಆದೇ ಕೊಹ್ಲಿ ಒಂದೇ ಎಸೆತದಲ್ಲಿ ನಾಲ್ಕು ರನ್ ಓಡಿ ಅಚ್ಚರಿ ಮೂಡಿಸಿದ್ದಾರೆ. ಒಟ್ಟಾರೆ ಕೊಹ್ಲಿ ಫಿಟ್ನೆಸ್ ಗೆ ಅಭಿಮಾನಿಗಳು ಹ್ಯಾಟ್ಸಾಫ್ ಹೇಳುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



