ದ್ರಾವಿಡ್ ಗಿಂತ ಮೊದಲೇ ವಿಶ್ವಕಪ್ ಬಹುಮಾನದ 5 ಕೋಟಿ ರೂ ಮೊತ್ತ ಕೋಚಿಂಗ್ ಸಿಬ್ಬಂದಿಗೆ ಹಂಚಿದ Rohit Sharma!
ಕ್ರಿಕೆಟಿಗರಿಗೆ ತಲಾ 5 ಕೋಟಿ ರೂಪಾಯಿ, ಕೋಚ್ ದ್ರಾವಿಡ್‌ಗೆ 5 ಕೋಟಿ ಹಾಗೂ ಸಹಾಯ ಸಿಬ್ಬಂದಿಗೆ ತಲಾ 2.5 ಕೋಟಿ ರೂಪಾಯಿ ಬಹುಮಾನ ಮೊತ್ತವನ್ನು ಬಿಸಿಸಿಐ ಘೋಷಿಸಿತ್ತು.

ಮುಂಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಗೆದ್ದ ಬಳಿಕ ತಮಗೆ ಸಿಕ್ಕ ಬಹುಮಾನದ ಮೊತ್ತ ಕಡಿತಗೊಳಿಸಿಕೊಂಡಿದ್ದ ಕೋಚ್ ರಾಹುಲ್ ದ್ರಾವಿಡ್ ನಡೆ ಎಲ್ಲಡೆ ಶ್ಲಾಘನೆಗೆ ಪಾತ್ರವಾಗಿರುವಂತೆಯೇ ಇತ್ತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ತಮಗೆ ಸಿಕ್ಕ 5 ಕೋಟಿ ರೂ ಬಹುಮಾನದ ಮೊತ್ತವನ್ನು ತಂಡದ ಕೋಚಿಂಗ್ ಸಿಬ್ಬಂದಿಗಳೊಂದಿಗೆ ಹಂಚಿಕೊಂಡ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಹೌದು.. ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ(BCCI prize money) ನೀಡಿದ 125 ಕೋಟಿ ರೂಪಾಯಿ ಬಹುಮಾನ ಮೊತ್ತದಲ್ಲಿ ರಾಹುಲ್ ದ್ರಾವಿಡ್(Rahul Dravid) ಅವರು ಹೆಚ್ಚುವರಿ 2.5 ಕೋಟಿ ರೂ. ಸ್ವೀಕರಿಸಲು ನಿರಾಕರಿಸಿದ ಬೆನ್ನಲ್ಲೇ ಇದೀಗ ನಾಯಕ ರೋಹಿತ್ ಶರ್ಮ(Rohit Sharma) ಕೂಡ ಇದೇ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ ರೋಹಿತ್ ಶರ್ಮ ತಮಗೆ ಬಂದಿರುವ ಬಹುಮಾನದಲ್ಲಿ 5 ಕೋಟಿ ರೂ. ಮೊತ್ತವನ್ನು ಇಡೀ ತಂಡದ ಸಿಬ್ಬಂದಿಗೆ ಹಂಚಲು ನಿರ್ಧರಿಸಿದ್ದಾರೆ. ತಂಡದ ಯಶಸ್ಸಿನಲ್ಲಿ ಕೋಚಿಂಗ್ ಸಿಬ್ಬಂದಿಗಳ ಪಾತ್ರ ಅಪಾರವಾಗಿದ್ದು, ಹೀಗಾಗಿ ಈ ಹಣದಲ್ಲಿ ಅವರಿಗೂ ಸಮಾನತೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ ತಮ್ಮ ಬಹುಮಾನ ಮೊತ್ತವನ್ನು ಈ ಸಿಬ್ಬಂದಿಗೆ ನೀಡಲು ಬಯಸಿದ್ದೇನೆ, ತನಗೆ ನೀಡಲಾದ ಹಣದಲ್ಲಿ ಅವರಿಗಾಗಿ ಕಡಿತಗೊಂಡರೆ ಖಂಡಿತ ನನಗೆ ಯಾವುದೇ ಬೇಸರವಿಲ್ಲ” ಎಂದು ತಿಳಿಸಿರುವುದಾಗಿ ರೋಹಿತ್ ಶರ್ಮಾ ಆಪ್ತ ಮೂಲಗಳು ತಿಳಿಸಿವೆ.
ಬಹುಮಾನದ ಮೊತ್ತ ಕಡಿತಗೊಳಿಸಿಕೊಂಡಿದ್ದ ದ್ರಾವಿಡ್
ಕ್ರಿಕೆಟಿಗರಿಗೆ ತಲಾ 5 ಕೋಟಿ ರೂಪಾಯಿ, ಕೋಚ್ ದ್ರಾವಿಡ್‌ಗೆ 5 ಕೋಟಿ ಹಾಗೂ ಸಹಾಯ ಸಿಬ್ಬಂದಿಗೆ ತಲಾ 2.5 ಕೋಟಿ ರೂಪಾಯಿ ಬಹುಮಾನ ಮೊತ್ತವನ್ನು ಬಿಸಿಸಿಐ ಘೋಷಿಸಿತ್ತು. ಆದರೆ ದ್ರಾವಿಡ್ ತನ್ನ ಇತರ ಸಿಬ್ಬಂದಿ ವರ್ಗಕ್ಕೆ ನೀಡಿದಂತೆ ತನಗೂ 2.5 ಕೋಟಿ ರೂಪಾಯಿ ಮಾತ್ರ ಸಾಕು ಎಂದು ಹೆಚ್ಚುವರಿ 2.5 ಕೋಟಿ ರೂಪಾಯಿ ಸ್ವೀಕರಿಸಲು ನಿರಾಕರಿಸಿದ್ದರು.
ಯಾರಿಗೆ ಎಷ್ಟೆಷ್ಟು ಮೊತ್ತ?
ಜೂನ್ 29ರಂದು ಬಾರ್ಡಡೋಸ್ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿ 17 ವರ್ಷಗಳ ಬಳಿಕ 2ನೇ ಬಾರಿಗೆ ಟಿ20 ವಿಶ್ವಕಪ್(T20 World cup 2024) ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ ಟೀಮ್ ಇಂಡಿಯಾಕ್ಕೆ ಬಿಸಿಸಿಐ 125 ಕೋಟಿ ಬಹುಮಾನ ನೀಡಿತ್ತು. ಮುಂಬೈಯಲ್ಲಿ ನಡೆದಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಈ ಬಹುಮಾನ ಮೊತ್ತದ ಚಕ್ ವಿತರಿಸಲಾಗಿತ್ತು. ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದ 15 ಮಂದಿ ಆಟಗಾರರಿಗೆ ತಲಾ 5 ಕೋಟಿ ರೂ ಹಂಚಲಾಗುತ್ತದೆ. ಇಡೀ ಕೂಟದಲ್ಲಿ ಒಂದೇ ಒಂದು ಪಂದ್ಯವಾಡದ ಆಟಗಾರರಿಗೂ ಇಷ್ಟೇ ಮೊತ್ತದ ಹಣ ಸಿಗಲಿದೆ. ಅಲ್ಲದೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೂ 5 ಕೋಟಿ ರೂ. ನೀಡಲಾಗುತ್ತದೆ ಎಂದು ವರದಿ ಹೇಳಿದೆ.
ಅದರಂತೆ ಸಹಾಯಕ ಕೋಚ್ ಗಳಾದ ವಿಕ್ರಮ್ ರಾಥೋರ್, ಟಿ ದಿಲೀಪ್, ಪರಾಸ್ ಮಾಂಬ್ರೆ ಅವರಿಗೆ ತಲಾ 2.5 ಕೋಟಿ ರೂ ನೀಡಲಾಗುತ್ತದೆ. ತಲಾ 1 ಕೋಟಿ ರೂ ಅಜಿತ್ ಅಗರ್ಕರ್ ಸೇರಿ ಆಯ್ಕೆ ಸಮಿತಿ ಸದಸ್ಯರಿಗೆ ನೀಡಲಾಗುತ್ತದೆ. ತಂಡದೊಂದಿಗೆ ಪ್ರಯಾಣ ಬೆಳೆಸಿದ್ದ ನಾಲ್ವರು ಮೀಸಲು ಆಟಗಾರರಿಗೂ ತಲಾ 1 ಕೋಟಿ ಬಹುಮಾನ ಮೊತ್ತ ಸಿಗಲಿದೆ.
ಶುಬ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹಮದ್, ಆವೇಶ್ ಖಾನ್ ಮೀಸಲು ಆಟಗಾರರಾಗಿದ್ದರು. ಸಹಾಯಕ ಸಿಬ್ಬಂದಿಗಳಲ್ಲಿ ಮೂವರು ಫಿಸಿಯೋಥೆರಪಿಸ್ಟ್ ಗಳು, ಮೂವರು ಥ್ರೋಡೌನ್ ಸ್ಪೆಷಲಿಸ್ಟ್ ಗಳು, ಇಬ್ಬರು ಮಸಾಜರ್ ಗಳು ಮತ್ತು ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ಕೋಚ್ ಗೆ ತಲಾ 2 ಕೋಟಿ ರೂ. ನಿಗದಿ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



