ಕ್ರಿಕೆಟ್

'ಒಂದೇ ಓವರ್‌ನಲ್ಲಿ 6 ಸಿಕ್ಸರ್‌': T20ಯಲ್ಲಿ ಈ ಸಾಧನೆ ಮಾಡಿದ 3ನೇ ಆಟಗಾರ ನೇಪಾಳದ ಐರಿ!

ನೇಪಾಳದ ದಿಪೇಂದ್ರ ಸಿಂಗ್ ಐರಿ ಇಲ್ಲಿ ನಡೆಯುತ್ತಿರುವ ಎಸಿಸಿ ಪುರುಷರ ಪ್ರೀಮಿಯರ್ ಕಪ್ T20 ಅಂತಾರಾಷ್ಟ್ರೀಯ ಪಂದ್ಯದ ವೇಳೆ ಶನಿವಾರ ಆತಿಥೇಯ ಕತಾರ್ ವಿರುದ್ಧ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಸಿಡಿಸಿದರು. ಈ ಮೂಲಕ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೂರನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.

'ಒಂದೇ ಓವರ್‌ನಲ್ಲಿ 6 ಸಿಕ್ಸರ್‌': T20ಯಲ್ಲಿ ಈ ಸಾಧನೆ ಮಾಡಿದ 3ನೇ ಆಟಗಾರ ನೇಪಾಳದ ಐರಿ!
ನೇಪಾಳದ ದಿಪೇಂದ್ರ ಸಿಂಗ್ ಐರಿ
Published On :

ಅಲ್ ಅಮರತ್: ನೇಪಾಳದ ದಿಪೇಂದ್ರ ಸಿಂಗ್ ಐರಿ ಇಲ್ಲಿ ನಡೆಯುತ್ತಿರುವ ಎಸಿಸಿ ಪುರುಷರ ಪ್ರೀಮಿಯರ್ ಕಪ್ T20 ಅಂತಾರಾಷ್ಟ್ರೀಯ ಪಂದ್ಯದ ವೇಳೆ ಶನಿವಾರ ಆತಿಥೇಯ ಕತಾರ್ ವಿರುದ್ಧ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಸಿಡಿಸಿದರು. ಈ ಮೂಲಕ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೂರನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.

ಭಾರತದ ಯುವರಾಜ್ ಸಿಂಗ್ ಅವರು 2007ರ ಟಿ-20 ವಿಶ್ವಕಪ್ ಸಮಯದಲ್ಲಿ ಸ್ಟುವರ್ಟ್ ಬ್ರಾಡ್ ವಿರುದ್ಧ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಸಿಡಿಸಿದ್ದರು. ನಂತರ ಕೀರಾನ್ ಪೊಲಾರ್ಡ್ 2021 ರಲ್ಲಿ ಶ್ರೀಲಂಕಾದ ಅಕಿಲಾ ದನಂಜಯ ವಿರುದ್ಧ ಈ ಸಾಧನೆ ಮಾಡಿದ್ದರು. ಇದೀಗ ನೇಪಾಳದ ದಿಪೇಂದ್ರ ಸಿಂಗ್ ಐರಿ ಅವರು ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಸಿಡಿಸಿ ಆ ಗುಂಪನ್ನು ಸೇರಿದ್ದಾರೆ.

24 ವರ್ಷದ ಐರಿ 21 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಏಳು ಸಿಕ್ಸರ್‌ ಸೇರಿದಂತೆ 64 ರನ್ ಗಳಿಸಿ 304.76 ಸ್ಟ್ರೈಕ್ ರೇಟ್‌ನಲ್ಲಿ ಅಜೇಯರಾಗಿ ಉಳಿದರು. ಆಸಿಫ್ ಶೇಖ್ 52 ರನ್ ಕಲೆಹಾಕುವುದರೊಂದಿಗೆ ನೇಪಾಳ 7 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು. ಶುಕ್ರವಾರ ನಡೆದ ಆರಂಭಿಕ ಪಂದ್ಯದಲ್ಲಿ ಮಲೇಷ್ಯಾವನ್ನು ಐದು ವಿಕೆಟ್‌ಗಳಿಂದ ನೇಪಾಳ ಸೋಲಿಸಿತ್ತು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಅಪರೂಪದ ಸಾಧನೆ ಮಾಡಿದ ಐದನೇ ಬ್ಯಾಟ್ಸ್‌ಮನ್ ಐರಿ ಆಗಿದ್ದಾರೆ. ಇದಕ್ಕೂ ಮುನ್ನಾ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಮತ್ತು ಯುಎಸ್‌ಎಯ ಜಸ್ಕರನ್ ಮಲ್ಹೋತ್ರಾ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಆದಾಗ್ಯೂ, ಐರಿ ಆರು ಸಿಕ್ಸರ್‌ ಬಾರಿಸಿರುವುದು ಹೊಸದೇನಲ್ಲ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನೇಪಾಳದ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ ಟಿ-20 ಸಂದರ್ಭದಲ್ಲಿ, ಮಂಗೋಲಿಯಾ ವಿರುದ್ಧಅವರು ಎರಡು ಓವರ್‌ಗಳಲ್ಲಿ ಸತತ ಆರು ಸಿಕ್ಸರ್‌ಗಳನ್ನು ಸಿಡಿಸಿದ್ದರು. ಆ ಪಂದ್ಯದಲ್ಲಿ ನೇಪಾಳ ಮೂರು ವಿಕೆಟ್‌ಗೆ 314 ರನ್ ಗಳಿಸಿ ವಿಶ್ವ ದಾಖಲೆ ಮಾಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.