ಒಂದೇ ಟೆಸ್ಟ್ ನಲ್ಲಿ 12 ವಿಕೆಟ್; ಐತಿಹಾಸಿಕ ಸರಣಿ ದಾಖಲೆ ನಿರ್ಮಿಸಿದ ಆರ್ ಆಶ್ವಿನ್
ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 12 ವಿಕೆಟ್ ಕಬಳಿಸುವ ಮೂಲಕ ಭಾರತದ ಆರ್ ಅಶ್ವಿನ್ ಐಕಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.

ಡೊಮೆನಿಕಾ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 12 ವಿಕೆಟ್ ಕಬಳಿಸುವ ಮೂಲಕ ಭಾರತದ ಆರ್ ಅಶ್ವಿನ್ ಐಕಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡೂ ಇನ್ನಿಂಗ್ಸ್ ಗಳಲ್ಲಿ ಭರ್ಜರಿ ಬೌಲಿಂಗ್ ಮಾಡಿದ ಆರ್ ಅಶ್ವಿನ್ ಈ ಪಂದ್ಯದ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಕೆರಿಬಿಯನ್ ತಂಡಕ್ಕೆ ಕಂಟಕವಾಗಿದ್ದ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಎರಡನೇ ಇನ್ನಿಂಗ್ಸ್ನಲ್ಲೂ ವಿಂಡೀಸ್ ತಂಡವನ್ನು ಕೇವಲ 130 ಕ್ಕೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.
ಮೊದಲ ಇನಿಂಗ್ಸ್ನಲ್ಲಿ 24.3 ಓವರ್ಗಳಲ್ಲಿ ಕೇವಲ 60 ರನ್ಗಳಿಗೆ 5 ವಿಕೆಟ್ ಪಡೆದಿದ್ದ ಅಶ್ವಿನ್, ಎರಡನೇ ಇನ್ನಿಂಗ್ಸ್ನಲ್ಲಿ 71 ರನ್ಗಳಿಗೆ 7 ವಿಕೆಟ್ ಪಡೆದರು. ಒಟ್ಟಾರೆ ಈ ಪಂದ್ಯದಲ್ಲಿ ಅಶ್ವಿನ್ 12 ವಿಕೆಟ್ ಕಬಳಿಸಿದ್ದು, ಇದರೊಂದಿಗೆ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದು, ಆರ್ ಅಶ್ವಿನ್ ವೆಸ್ಟ್ ಇಂಡೀಸ್ನಲ್ಲಿ ಒಂದೇ ಟೆಸ್ಟ್ನ ಎರಡೂ ಇನ್ನಿಂಗ್ಸ್ಗಳಲ್ಲಿ 5 ಅಥವಾ ಹೆಚ್ಚಿನ ವಿಕೆಟ್ಗಳನ್ನು ಪಡೆದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಶನಿವಾರ ಹರ್ಭಜನ್ ಸಿಂಗ್ ಅವರನ್ನು ಹಿಂದಿಕ್ಕಿ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡರು.
ಅಂತೆಯೇ ಆರ್ ಅಶ್ವಿನ್ 23ನೇ ಬಾರಿ ಟೆಸ್ಟ್ ಪಂದ್ಯವೊಂದರಲ್ಲಿ ಕೊನೆಯ ವಿಕೆಟ್ ಉರುಳಿಸಿದ್ದು ವಿಶ್ವದಾಖಲೆಯಾಗಿದ್ದು, ಈ ವಿಚಾರದಲ್ಲಿ ಶೇನ್ ವಾರ್ನ್ ದಾಖಲೆಯನ್ನು ಅಶ್ವಿನ್ ಪುಡಿಗಟ್ಟಿದರು. ವೆಸ್ಟ್ ಇಂಡೀಸ್ ವಿರುದ್ಧ ಗರಿಷ್ಠ 6 ಬಾರಿ ಐದು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿರುವ ಅಶ್ವಿನ್, ಈ ವಿಚಾರದಲ್ಲಿ ಹರ್ಭಜನ್ ಸಿಂಗ್ ಅವರನ್ನು ಹಿಂದಿಕ್ಕಿದ್ದಾರೆ. ಈ ಹತ್ತು ವಿಕೆಟ್ಗಳ ಸಾಧನೆಯೊಂದಿಗೆ, ಅಶ್ವಿನ್ ಒಟ್ಟು ಎಂಟು ವಿಕೆಟ್ಗಳೊಂದಿಗೆ ಭಾರತೀಯ ಬೌಲರ್ನಿಂದ ಅತಿ ಹೆಚ್ಚು ಹತ್ತು ವಿಕೆಟ್ಗಳ ಸಾಧನೆಯ ವಿಷಯದಲ್ಲಿ ಕುಂಬ್ಳೆ ಅವರನ್ನು ಸರಿಗಟ್ಟಿದ್ದು, ಹರ್ಭಜನ್ ಒಟ್ಟು 5 ಹತ್ತು ವಿಕೆಟ್ ಗಳಿಕೆಯೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.
12 ವಿಕೆಟ್ ಉರುಳಿಸುವುದರೊಂದಿಗೆ ಅಶ್ವಿನ್ 8ನೇ ಬಾರಿ ಟೆಸ್ಟ್ ಪಂದ್ಯವೊಂದರಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದು, ಈ ವಿಚಾರದಲ್ಲಿ ಅನಿಲ್ ಕುಂಬ್ಳೆ ದಾಖಲೆಯನ್ನು ಸರಿಗಟ್ಟಿದ್ದಾರೆ. ಕೊನೆಯ ಟೆಸ್ಟ್ನಲ್ಲೂ ಅಶ್ವಿನ್ 10 ವಿಕೆಟ್ ಪಡೆದರೆ, ಈ ವಿಷಯದಲ್ಲಿ ಈ ಸಾಧನೆ ಮಾಡಿದ ಭಾರತದ ನಂಬರ್ 1 ಬೌಲರ್ ಆಗಲಿದ್ದಾರೆ. 131 ರನ್ ನೀಡಿ 12 ವಿಕೆಟ್ ಕಬಳಿಸಿರುವುದು ವಿದೇಶಿ ನೆಲದಲ್ಲಿ ಅಶ್ವಿನ್ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಅಲ್ಲದೆ ಇನ್ನಿಂಗ್ಸ್ವೊಂದರಲ್ಲಿ 71 ರನ್ ನೀಡಿ 7 ವಿಕೆಟ್ಗಳನ್ನು ಕಬಳಿಸಿದ್ದು ವಿದೇಶಿ ನೆಲದಲ್ಲಿ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ಅತ್ಯುತ್ತಮ ಬೌಲರ್ ಅನಿಲ್ ಕುಂಬ್ಳೆ, ಅವರು 401 ಪಂದ್ಯಗಳಲ್ಲಿ 30.06 ಸರಾಸರಿಯಲ್ಲಿ 10/74 ರ ಅತ್ಯುತ್ತಮ ಅಂಕಿಅಂಶಗಳೊಂದಿಗೆ 953 ವಿಕೆಟ್ ಗಳಿಸಿದ್ದಾರೆ. ಅವರು 39 ಬಾರಿ ನಾಲ್ಕು ವಿಕೆಟ್, 37 ಬಾರಿ ಐದು ವಿಕೆಟ್ ಮತ್ತು ಎಂಟು ಬಾರಿ ಹತ್ತು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಇದೀಗ ಅವರ ನಂತರದ ಸ್ಥಾನಕ್ಕೆ ಅಶ್ವಿನ್ ಜಿಗಿದಿದ್ದು, ಹರ್ಭಜನ್ ಈಗ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ, 365 ಪಂದ್ಯಗಳಲ್ಲಿ ಭಜ್ಜಿ 32.59 ಸರಾಸರಿಯಲ್ಲಿ 707 ವಿಕೆಟ್ಗಳನ್ನು ಪಡೆದಿದ್ದು, ಈ ಪೈಕಿ 8/84 ರ ಅತ್ಯುತ್ತಮ ಪ್ರದರ್ಶನವಾಗಿದೆ. ಅವರು ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 19 ಬಾರಿ ನಾಲ್ಕು ವಿಕೆಟ್ಗಳು, 28 ಬಾರಿ ಐದು ವಿಕೆಟ್ ಗಳು ಮತ್ತು 5 ಹತ್ತು ವಿಕೆಟ್ಗಳ ಸಾಧನೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


