T20 ವಿಶ್ವಕಪ್: ಸಿಂಗಲ್ ರನ್ ನಂತರ ಏದುಸಿರು ಬಿಟ್ಟು, ಎದೆ ಹಿಡಿದುಕೊಂಡ ಕೊಹ್ಲಿ; ಮುಂದಿನ ಪಂದ್ಯಗಳಿಗೆ ಸಂಕಷ್ಟ!
ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ನಡೆಯುತ್ತಿರುವ T20 ವಿಶ್ವಕಪ್ 2022 ಪಂದ್ಯಾವಳಿಯಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿದ್ದಾರೆ.

ನವದೆಹಲಿ: ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ನಡೆಯುತ್ತಿರುವ T20 ವಿಶ್ವಕಪ್ 2022 ಪಂದ್ಯಾವಳಿಯಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿದ್ದಾರೆ. ನಿನ್ನೆ ಭಾನುವಾರ ನಡೆದ ಸೂಪರ್-12 ಸುತ್ತಿನ ಕೊನೆಯ ಪಂದ್ಯದಲ್ಲಿ ಭಾರತ ತಂಡ ದುರ್ಬಲ ಜಿಂಬಾಬ್ವೆ ತಂಡವನ್ನು 71 ರನ್‌ಗಳಿಂದ ಸೋಲಿಸಿ ಸೆಮಿಫೈನಲ್ ಗೆ ಪ್ರವೇಶಿಸಿದೆ.
ಇನ್ನು ಮೊದಲ 5 ಪಂದ್ಯಗಳಲ್ಲಿ ಅಜೇಯ 3 ಅರ್ಧಶತಕ ಸಿಡಿಸಿರುವ ಕೊಹ್ಲಿ ಈ ಬಾರಿಯ ವಿಶ್ವಕಪ್ ನಲ್ಲಿ ರನ್ ಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಇಂತಹದೊಂದು ಘಟನೆ ನಡೆದಿದ್ದು ಎಲ್ಲಾ ಕ್ರಿಕೆಟ್ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದೆ.
ಕೊಹ್ಲಿ ಎದೆಯನ್ನು ಹಿಡಿದಿದ್ದು ಏಕೆ?
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ 34ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು ಮೈದಾನದಲ್ಲಿ ಅತೀ ಹೆಚ್ಚು ಫಿಟ್ ಆಗಿರುತ್ತಾರೆ. ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಅನ್ನು ಯಾರೂ ಪ್ರಶ್ನಿಸುವಂತಿಲ್ಲ, ಆದರೆ ಭಾನುವಾರ ನಡೆದ ಪಂದ್ಯಕ್ಕೆ ಬಂದಾಗ, ಅವರು ಸ್ವಲ್ಪ ಅಸ್ವಸ್ಥರಾದಂತೆ ಕಾಣುತ್ತಿದ್ದರು. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ, ಕೊಹ್ಲಿ ತ್ವರಿತ ಸಿಂಗಲ್ ತೆಗೆದುಕೊಂಡ ನಂತರ ಎದೆಯನ್ನು ಹಿಡಿದುಕೊಂಡು ಆಳವಾದ ಉಸಿರನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಇದು ಕ್ರಿಕೆಟ್ ಅಭಿಮಾನಿಗಳನ್ನು ಸ್ವಲ್ಪ ಚಿಂತೆಗೀಡು ಮಾಡಿತು. ಆದರೆ ಸ್ವಲ್ಪ ಸಮಯದ ನಂತರ ವಿರಾಟ್ ಸ್ವಲ್ಪ ಮುಗುಳ್ನಕ್ಕು ತಮ್ಮ ಬ್ಯಾಟಿಂಗ್ ಸ್ಟ್ರೈಕ್‌ಗೆ ಮರಳಿದರು.
2022ರ ವಿಶ್ವಕಪ್‌ನಲ್ಲಿ ಕೊಹ್ಲಿಯ ಸಾಧನೆ
ಭಾರತದ ರನ್-ಮಷಿನ್ ಎಂದು ಕರೆಯಲ್ಪಡುವ ವಿರಾಟ್ ಕೊಹ್ಲಿ ಈ ಬಾರಿಯ ವಿಶ್ವಕಪ್‌ನಲ್ಲಿ ಐದು ಇನ್ನಿಂಗ್ಸ್‌ಗಳಲ್ಲಿ 246 ರನ್ ಗಳಿಸುವ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ. ವಿರಾಟ್ ಕೊಹ್ಲಿ ವಿಶ್ವಕಪ್ 2022 ರಲ್ಲಿ ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 3 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಅವರು ಭಾನುವಾರ ಜಿಂಬಾಬ್ವೆ ವಿರುದ್ಧ 26 ರನ್ ಗಳಿಸಿದ್ದರು. ಅದಕ್ಕೂ ಮೊದಲು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 44 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿದ್ದರು. ಈ ವಿಶ್ವಕಪ್‌ನಲ್ಲಿ ಇದು ಅವರ ಮೂರನೇ ಅರ್ಧಶತಕ.
2022ರ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ 82 ರನ್‌ಗಳೊಂದಿಗೆ ಕೊಹ್ಲಿ ಪಂದ್ಯಾವಳಿಯನ್ನು ಪ್ರಾರಂಭಿಸಿದರು. ಪಾಕಿಸ್ತಾನದ ವಿರುದ್ಧ ಅಮೋಘ ಇನ್ನಿಂಗ್ಸ್‌ನೊಂದಿಗೆ ಟೀಕಾಕಾರರಿಗೆ ಕೊಹ್ಲಿ ತಕ್ಕ ಉತ್ತರ ನೀಡಿದರು. ಈ ಟೂರ್ನಿಯಲ್ಲಿ ಕೊಹ್ಲಿ ಇದುವರೆಗೆ ಮೂರು ಬಾರಿ 50 ರನ್‌ಗಳ ಗಡಿ ದಾಟಿದ್ದಾರೆ. ಅದೇ ಸಮಯದಲ್ಲಿ, ಅವರು ನೆದರ್ಲ್ಯಾಂಡ್ಸ್ ವಿರುದ್ಧ 44 ಎಸೆತಗಳಲ್ಲಿ 62 ರನ್ಗಳ ಅದ್ಭುತ ಇನ್ನಿಂಗ್ಸ್ ಕೂಡ ಆಡಿದರು.
ಭಾರತ ತನ್ನ ಮುಂದಿನ ಪಂದ್ಯವನ್ನು ಗುರುವಾರ ಅಡಿಲೇಡ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದೆ. ಎರಡೂ ತಂಡಗಳು ಈ ಪಂದ್ಯವನ್ನು ಗೆದ್ದು ಫೈನಲ್‌ಗೆ ಟಿಕೆಟ್ ಕಾಯ್ದಿರಿಸಲು ಪ್ರಯತ್ನಿಸುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


