ಡ್ರೆಸಿಂಗ್ ರೂಂನಲ್ಲಿ ಕೊಹ್ಲಿ ತಪ್ಪು ನಿರ್ಣಯಗಳ ತೋರಿಸಿಕೊಡುವವರ ಅವಶ್ಯಕತೆ ಇದೆ: ವೀರೇಂದ್ರ ಸೆಹ್ವಾಗ್
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ತಪ್ಪು ನಿರ್ಣಯಗಳ ಕುರಿತು ಡ್ರೆಸಿಂಗ್ ರೂಂ ನಲ್ಲಿ ಪ್ರಶ್ನಿಸುವವರ ಅವಶ್ಯಕತೆ ತಂಡಕ್ಕಿದೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

Published On :
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ತಪ್ಪು ನಿರ್ಣಯಗಳ ಕುರಿತು ಡ್ರೆಸಿಂಗ್ ರೂಂ ನಲ್ಲಿ ಪ್ರಶ್ನಿಸುವವರ ಅವಶ್ಯಕತೆ ತಂಡಕ್ಕಿದೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಭಾರತ ತಂಡದ ಮಾಜಿ ಕ್ರಿಕೆಟಿಗ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರಸ್ತುತ ತಂಡಕ್ಕೆ ನಾಯಕನ ತಪ್ಪುಗಳನ್ನು ಬೊಟ್ಟು ಮಾಡುವ ಆಟಗಾರರ ಅವಶ್ಯಕತೆ ಇದೆ ಎಂದು ಕಿಡಿಕಾರಿದ್ದಾರೆ.
"ಪ್ರಸ್ತುತ ಟೀಂ ಇಂಡಿಯಾ ತಂಡದಲ್ಲಿ ಯಾವೊಬ್ಬ ಆಟಗಾರನೂ ಕೊಹ್ಲಿಗೆ ಎದುರು ನಿಂತು ನೀನು ಮಾಡುತ್ತಿರುವುದು ತಪ್ಪು ಎಂದು ಹೇಳುವ ಧೈರ್ಯ ಮಾಡುತ್ತಿಲ್ಲ. ಸಾಮಾನ್ಯವಾಗಿ ಎಲ್ಲಾ ತಂಡಗಳಲ್ಲೂ ನಾಯಕನಿಗೆ ಸರಿ ತಪ್ಪು ಕುರಿತು ಸಲಹೆ ನೀಡುವ ನಾಲ್ಕೈದು ಆಟಗಾರರಿರುತ್ತಾರೆ. ಆದರೆ ಹಾಲಿ ಭಾರತ ಟೆಸ್ಟ್ ತಂಡದಲ್ಲಿ ಅಂತಹ ಯಾವೊಬ್ಬ ಆಟಗಾರನೂ ಇಲ್ಲ. ಕೊಹ್ಲಿ ಸಮಕ್ಕೆ ನಿಂತು ನಿರ್ಧಾರಗಳನ್ನು ಪ್ರಶ್ನಿಸುವ ಒಬ್ಬ ಆಟಗಾರನ ಅಗತ್ಯ ತುರ್ತಾಗಿ ತಂಡಕ್ಕಿದೆ ಇದೆ ಎಂದು ಸೆಹ್ವಾಗ್ ಖಾರವಾಗಿ ಹೇಳಿದ್ದಾರೆ.
ಇದೇ ವೇಳೆ ಭುವನೇಶ್ವರ್ ಕುಮಾರ್ ಮತ್ತು ಅಜಿಂಕ್ಯ ರಹಾನೆ ಅವರನ್ನು ತಂಡದಿಂದ ಕೈಬಿಟ್ಟಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ವೀರೂ, ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ ಸ್ವತ: ಕೊಹ್ಲಿ ವೈಫಲ್ಯ ಅನುಭವಿಸಿದರೆ ತಮ್ಮನ್ನು ತಾವೇ ತಂಡದಿಂದ ಹೊರದಬ್ಬಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಕೊಹ್ಲಿ ಇತರೆ ಆಟಗಾರರಿಂದ ಹೆಚ್ಚು ನಿರೀಕ್ಷೆ ಮಾಡುತ್ತಾರೆ. ಇದೇ ಅವರ ನಾಯಕತ್ವಕ್ಕೆ ಧಕ್ಕೆಯಾಗುತ್ತಿದೆ. ಕೊಹ್ಲಿ ತಮ್ಮಂತೆಯೇ ಇತರೆ ಆಟಗಾರರು ಭಯಭೀತರಾಗಿ ರನ್ ಗಳಿಸಲು ಬಯಸುತ್ತಾರೆ. ಇದು ಕೊನೆಗೆ ನಾಯಕತ್ವದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಸೆಹ್ವಾಗ್ ಕಿಡಿಕಾರಿದ್ದಾರೆ. ಅಂತೆಯೇ ಡ್ರೆಸ್ಸಿಂಗ್ ರೂಂನಲ್ಲಿ ಕೊಹ್ಲಿ ನಿರ್ಣಯವನ್ನು ಚಾಲೆಂಜ್ ಮಾಡುವವರು ಯಾರೂ ಇಲ್ಲ. ಅವರ ಮಟ್ಟಕ್ಕೆ ಯಾರೂ ಬೆಳೆದಿಲ್ಲ ಎಂದೂ ಸೆಹ್ವಾಗ್ ಹೇಳಿದ್ದಾರೆ.
ಇನ್ನ ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ತಂಡ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ 2 ಪಂದ್ಯಗಳನ್ನು ಸೋಲುವ ಮೂಲಕ ಸರಣಿ ಕೈ ಚೆಲ್ಲಿದ್ದು, ಇಂದಿನಿಂದ ಆರಂಭವಾಗುತ್ತಿರುವ ಅಂತಿಮ ಟೆಸ್ಟ್ ಪಂದ್ಯವನ್ನು ಗೆದ್ದು ಮಾನ ಉಳಿಸಿಕೊಳ್ಳಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ನವದೆಹಲಿNew Delhiಟೀಂ ಇಂಡಿಯಾTeam IndiaVirat Kohliವಿರಾಟ್ ಕೊಹ್ಲಿBCCIಬಿಸಿಸಿಐVirender Sehwagವೀರೇಂದ್ರ ಸೆಹ್ವಾಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


