ಕ್ರಿಕೆಟ್

ಶತಕ ಸಿಡಿಸಿ ಪೂಜಾರ ಔಟ್, ಶತಕ ವಂಚಿತ ಕೊಹ್ಲಿ, ಬೃಹತ್ ಮೊತ್ತದತ್ತ ಭಾರತ

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿರಿಸಿದೆ.

ಶತಕ ಸಿಡಿಸಿ ಪೂಜಾರ ಔಟ್, ಶತಕ ವಂಚಿತ ಕೊಹ್ಲಿ, ಬೃಹತ್ ಮೊತ್ತದತ್ತ ಭಾರತ
ಸಂಗ್ರಹ ಚಿತ್ರ
Published On :
ಮೆಲ್ಬೋರ್ನ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿರಿಸಿದೆ.
ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿದ್ದ ಭಾರತ ತಂಡಕ್ಕೆ ಇಂದು ಆಪತ್ಬಾಂಧವ ಚೇತೇಶ್ವರ ಪೂಜಾರ ಭರ್ಜರಿ ಶತಕ (106 ರನ್) ಹಾಗೂ ನಾಯಕ ವಿರಾಟ್ ಕೊಹ್ಲಿ (82) ಆಕರ್ಷಕ ಅರ್ಧಶತಕಗಳ ನೆರವಿನಿಂದ ಬೃಹತ್ ಮೊತ್ತದತ್ತ ಮುನ್ನಡೆದಿದೆ. 
ದಿನದ ಮೊದಲ ಅವಧಿಯಲ್ಲಿ ಕೊಹ್ಲಿ ಹಾಗೂ ಪೂಜಾರ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ರಕ್ಷಣಾತ್ಮಕವಾಗಿ ಆಟವಾಡುತ್ತಾ ಮೊದಲ ಇನ್ನಿಂಗ್ಸ್ ನಲ್ಲಿ ಸಾಧ್ಯವಾದಷ್ಟು ರನ್ ಪೇರಿಸುವುದು ಟೀಮ್ ಇಂಡಿಯಾ ಗುರಿಯಾಗಿದೆ. ಆರಂಭದಲ್ಲಿ ಕೊಹ್ಲಿ ಸ್ವಲ್ಪ ಆತಂಕವನ್ನು ಎದುರಿಸಿದರೂ ಪೂಜಾರ ತಮ್ಮ ಕಲಾತ್ಮಕ ಆಟದ ಮೂಲಕ ಮನರಂಜಿಸಿದರು. ಅಲ್ಲದೆ ಆಸ್ಟ್ರೇಲಿಯಾ ಮಣ್ಣಿನಲ್ಲಿ ಎರಡನೇ ಶತಕ ಸಾಧನೆ ಮಾಡಿದರು. ಈ ಎರಡು ಶತಕಗಳು ಇದೇ ಸರಣಿಯಲ್ಲಿ ದಾಖಲಾಗಿರುವುದು ಅಷ್ಟೇ ಮಹತ್ವವನ್ನು ಗಿಟ್ಟಿಸಿಕೊಳ್ಳುತ್ತದೆ.  ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಪೂಜಾರ ಬ್ಯಾಟ್ ನಿಂದ ಸಿಡಿದ 17ನೇ ಶತಕವಾಗಿದೆ. 
ಭೋಜನ ವಿರಾಮದ ವೇಳೆಗೆ ಭಾರತ ತಂಡ 277/2 ಗಳಿಸಿತ್ತು. ಆದರೆ ಭೋಜನ ವಿರಾಮದ ಬೆನ್ನಲ್ಲೇ ಶತಕದತ್ತ ಮುನ್ನುಗ್ಗುತ್ತಿದ್ದ ನಾಯಕ ವಿರಾಟ್ ಕೊಹ್ಲಿ ಬಿರುಸಿನ ಆಟಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು. ಮೆಚೆಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ ಅಪ್ಪರ್ ಕಟ್ ಗೆ ಕೈ ಹಾಕಿದ ಕೊಹ್ಲಿ ನಿಜಕ್ಕೂ ಕೈ ಸುಟ್ಟುಕೊಂಡರು. ಸುಮ್ಮನೇ ವಿಕೆಟ್ ಕೀಪರ್ ನತ್ತ ಹೋಗುತ್ತಿದ್ದ ಚೆಂಡನ್ನು ಕೆಣಕಿ ಕೊಹ್ಲಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ರನ್ ಮಶಿನ್ ಗೆ ಮಗದೊಂದು ಶತಕ ಮಿಸ್ ಆಯಿತು. 204 ಎಸೆತಗಳನ್ನು ಎದುರಿಸಿದ ಕೊಹ್ಲಿ ಒಂಬತ್ತು ಬೌಂಡರಿಗಳ ನೆರವಿನಿಂದ 82 ರನ್ ಗಳಿಸಿದರು. ಅಲ್ಲದೆ ಪೂಜಾರ ಜತೆಗೆ ಮೂರನೇ ವಿಕೆಟ್‌ಗೆ 170 ರನ್‌ಗಳ ಜತೆಯಾಟದಲ್ಲಿ ಭಾಗಿಯಾಗಿದ್ದರು. 
ಇನ್ನು ಇತ್ತೀಚಿನ ವರದಿಗಳು ಬಂದಾಗ ಭಾರತ 4 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿದೆ. 19 ರನ್ ಗಳಿಸಿರುವ ಅಂಜಿಕ್ಯಾ ರಹಾನೆ ಮತ್ತು 9 ರನ್ ಗಳಿಸಿರುವ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.