ಕ್ರಿಕೆಟ್

'ಆ ಮೂರು ಡಕೌಟ್'; ನಿವೃತ್ತಿ ಘೋಷಣೆ ಬಳಿಕ ಅಭಿಮಾನಿಗಳಿಗೆ ಗೌತಿ ಭಾವನಾತ್ಮಕ ಸಂದೇಶ

ವೃತ್ತಿಪರ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ ಬೆನ್ನಲ್ಲೇ ತಮ್ಮ ಅಭಿಮಾನಿಗಳಿಗೆ ಗೌತಮ್ ಗಂಭೀರ್ ಭಾವನಾತ್ಮಕ ಸಂದೇಶ ನೀಡಿದ್ದಾರೆ.

'ಆ ಮೂರು ಡಕೌಟ್'; ನಿವೃತ್ತಿ ಘೋಷಣೆ ಬಳಿಕ ಅಭಿಮಾನಿಗಳಿಗೆ ಗೌತಿ ಭಾವನಾತ್ಮಕ ಸಂದೇಶ
ಸಂಗ್ರಹ ಚಿತ್ರ
Published On :
ನವದೆಹಲಿ: ವೃತ್ತಿಪರ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ ಬೆನ್ನಲ್ಲೇ ತಮ್ಮ ಅಭಿಮಾನಿಗಳಿಗೆ ಗೌತಮ್ ಗಂಭೀರ್ ಭಾವನಾತ್ಮಕ ಸಂದೇಶ ನೀಡಿದ್ದಾರೆ.
ಫೇಸ್ ಬುಕ್ ನಲ್ಲಿ ಈ ಬಗ್ಗೆ ವಿಡಿಯೋ ಅಪ್ಲೋಡ್ ಮಾಡಿರುವ ಗಂಭೀರ್, ತುಂಬ ಭಾರವಾದ ಮನಸ್ಸಿನಿಂದ ನನ್ನಿಷ್ಟದ ಕ್ರೀಡೆಯಿಂದ ದೂರ ಸರಿಯುತ್ತಿದ್ದೇನೆ. ಸುಮಾರು 15 ವರ್ಷಗಳ ಕಾಲ ನಾನು ಈ ಸುಂದರ ಕ್ರೀಡೆಯಲ್ಲಿ ನನ್ನ ದೇಶವನ್ನು ಪ್ರತಿನಿಧಿಸಿದ್ದೇನೆ. ಇದು ನನಗೆ ತುಂಬಾ ಗೌರವದ ವಿಚಾರವಾಗಿದ್ದು, ಪ್ರತೀ ಬಾರಿ ನಾನು ಟೀಂ ಇಂಡಿಯಾ ಪರ ಮತ್ತು ಕೆಕೆಆರ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ಪರ ಕ್ರೀಸ್ ಗೆ ಇಳಿದಾಗ ಅಲ್ಲಿ ಕೇಳುತ್ತಿದ್ದ ಗೌತಿ.. ಗೌತಿ.. ಎಂಬ ನನ್ನನ್ನು ಮತ್ತಷ್ಟು ಉತ್ತೇಜಿಸುತ್ತಿತ್ತು. ಅಭಿಮಾನಿಗಳ ಚಪ್ಪಾಳೆ, ಕೂಗಾಟ ಉತ್ತಮ ಪ್ರದರ್ಶನ ನೀಡಬೇಕು ಎಂದು ನನಗೆ ಸ್ಪೂರ್ತಿ ನೀಡುತ್ತಿತ್ತು.
ಆದರೆ 2014ರ ಐಪಿಎಲ್ ನಲ್ಲಿ ಸತತ ಮೂರು ಬಾರಿ ನಾನು ಶೂನ್ಯಕ್ಕೆ ಔಟ್ ಆದಾಗ ಮತ್ತು ಅದೇ ವರ್ಷ ಟೀಂ ಇಂಡಿಯಾ ಕೈಗೊಂಡಿದ್ದ ಇಂಗ್ಲೆಂಡ್ ಪ್ರವಾಸದ ನನ್ನ ವೈಫಲ್ಯ ನನ್ನನ್ನು ಸತತವಾಗಿ ಕಾಡುತ್ತಿತ್ತು. ಮತ್ತೆ 2016 ಇಂಗ್ಲೆಂಡ್ ವಿರುದ್ಧದ ಟೂರ್ನಿಯಲ್ಲಿ ರಾಜ್ ಕೋಟ್ ಪಂದ್ಯದ ಬಳಿಕ ನನ್ನನ್ನು ತಂಡದಿಂದ ಕೈ ಬಿಡಲಾಗಿತ್ತು. ಇದು ನಿಜಕ್ಕೂ ನಾನು ನನ್ನ ಮೇಲಿಟ್ಟಿದ್ದ ಭರವಸೆಯನ್ನೇ ಬುಡಮೇಲು ಮಾಡುವಂತೆ ಮಾಡಿತ್ತು. ಆಗ ನಾನು ನಿಜಕ್ಕೂ ಕಂಗಾಲಾಗಿದ್ದೆ. ಆಗ ನನಗೆ ಉತ್ತೇಜಿಸಿದ್ದು, ಆಟಕ್ಕೆ ಮರಳು ಸ್ಪೂರ್ತಿ ನೀಡುತ್ತಿದ್ದುದು ಮತ್ತದೇ ಅಭಿಮಾನಿಗಳ ಕೂಗು ಮತ್ತು ಚಪ್ಪಾಳೆ. 
ಎರಡು ವಿಶ್ವಕಪ್ ಹಾಗೂ ಎರಡೂ ವಿಶ್ವಕಪ್ ಫೈನಲ್ ನಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರ ಎಂಬ ಕೀರ್ತಿಯನ್ನು ನನ್ನ ಜೀವನದಲ್ಲೇ ಮರೆಯಲು ಸಾಧ್ಯವಿಲ್ಲ. ಅಂತೆಯೇ 2009ರಲ್ಲಿ ಐಸಿಸಿ ವರ್ಷದ ಟೆಸ್ಟ್ ಬ್ಯಾಟ್ಸಮನ್ ಎಂಬ ಪ್ರಶಸ್ತಿ ಪಡೆದ ಕ್ಷಣ ಕೂಡ ನನ್ನ ಜೀವನದ ಅತ್ಯಮೂಲ್ಯ ಕ್ಷಣಗಳಲ್ಲಿ ಒಂದು. ನನ್ನ ಇಡೀ 15 ವರ್ಷಗಳ ವೃತ್ತಿ ಜೀವನದಲ್ಲಿ ನನಗೆ ಸಹಕರಿಸಿದ ಬಿಸಿಸಿಐ ಮತ್ತು ದೆಹಲಿ ಕ್ರಿಕೆಟ್ ಸಂಸ್ಥೆಗೆ ನಾನು ಚಿರಋಣಿಯಾಗಿದ್ದು, ನನ್ನ ಬೆಂಬಲಕ್ಕೆ ನಿಂತಿದ್ದ ನನ್ನ ಸಹ ಆಟಗಾರರಿಗೆ ನನ್ನ ಧನ್ಯವಾದ ಹೇಳುತ್ತೇನೆ. 
ನಾನು ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ದೆಹಲಿ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲೇ ನಾನು ನಿವೃತ್ತಿಯಾಗುತ್ತಿರುವುದು ನನ್ನ ಬಯಕೆಯಾಗಿದ್ದು, ಆಂಧ್ರ ಪ್ರದೇಶ ವಿರುದ್ಧ ರಣಜಿ ಟ್ರೋಫಿ ಪಂದ್ಯವೇ ನನ್ನ ಅಂತಿಮ ಪಂದ್ಯವಾಗಿರುತ್ತದೆ. ನಾನು ಎಲ್ಲಿ ಆರಂಭ ಮಾಡಿದೆನೋ ಅಲ್ಲಿಯೇ ಕೊನೆಯ ಪಂದ್ಯವನ್ನಾಡುತ್ತಿದ್ದೇನೆ ಎಂದು ಗೌತಮ್ ಗಂಭೀರ್ ಭಾವನಾತ್ಮಕವಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.