ರವಿ ಶಾಸ್ತ್ರಿ ಅಲ್ಲ, ಧೋನಿಯೇ ಪ್ಲೇಯರ್-ಕೋಚ್ ಆಗಿ ಕಾರ್ಯನಿರ್ವಹಿಸಲಿ: ವೈರಲ್ ಆಯ್ತು ಚರ್ಚೆ!
ಕುಂಬ್ಳೆ ರಾಜಿನಾಮೆ ಬಳಿಕ ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆ ವಿಚಾರ ವ್ಯಾಪಕ ಚರ್ಚೆಗೀಡಾಗುತ್ತಿದ್ದು, ತಂಡದ ಹಿರಿಯ ಆಟಗಾರರಾಗಿರುವ ಎಂಎಸ್ ಧೋನಿ ಅವರೇ ತಂಡದ ಕೋಚ್ ಆಗಿಯೂ ಕಾರ್ಯ ನಿರ್ವಹಿಸಲಿ ಎಂಬ ಹೊಸದೊಂದು ವಾದ ಹುಟ್ಟಿಕೊಂಡಿದೆ.

ನವದೆಹಲಿ: ಕುಂಬ್ಳೆ ರಾಜಿನಾಮೆ ಬಳಿಕ ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆ ವಿಚಾರ ವ್ಯಾಪಕ ಚರ್ಚೆಗೀಡಾಗುತ್ತಿದ್ದು, ತಂಡದ ಹಿರಿಯ ಆಟಗಾರರಾಗಿರುವ ಎಂಎಸ್ ಧೋನಿ ಅವರೇ ತಂಡದ ಕೋಚ್ ಆಗಿಯೂ ಕಾರ್ಯ ನಿರ್ವಹಿಸಲಿ ಎಂಬ ಹೊಸದೊಂದು ವಾದ ಹುಟ್ಟಿಕೊಂಡಿದೆ.
ರಾಷ್ಟ್ರೀಯ ಮಾಧ್ಯಮ, ಕ್ರೀಡಾ ಪತ್ರಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇಂತಹುದೊಂದು ಹೊಸ ವಾದ ಹುಟ್ಟಿಕೊಂಡಿದ್ದು, ಟೀಮ್ ಇಂಡಿಯಾಗೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರೇ ಪ್ಲೇಯರ್ ಕಮ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿ ಎಂದು ಸಲಹೆ ನೀಡಲಾಗುತ್ತಿದೆ. ಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ ರಾಜಿನಾಮೆ ನೀಡಿದ ಬಳಿಕ ಬಿಸಿಸಿಐ ಎರಡೆರಡು ಬಾರಿ ಕೋಚ್ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ್ದರೂ ಸೂಕ್ತ ಅಭ್ಯರ್ಥಿಗಳು ಮಾತ್ರ ಸಿಕ್ಕಿಲ್ಲ. ಇನ್ನು ಈ ಹಿಂದೆ ತಂಡದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ರವಿಶಾಸ್ತ್ರಿ ಅವರನ್ನೇ ಕೋಚ್ ಆಗಿ ಆಯ್ಕೆ ಮಾಡುವ ಸಾಧ್ಯತೆ ಇದ್ದು, ಇದಕ್ಕೆ ನಾಯಕ ವಿರಾಟ್ ಕೊಹ್ಲಿ ಸಹಮತ ಕೂಡ ಇದೆ. ಹೀಗಿದ್ದೂ ರವಿಶಾಸ್ತ್ರಿ ಅವರನ್ನು ಟೀಂ ಇಂಡಿಯಾ ಕೋಚ್ ಆಗಿ ನೇಮಕ ಮಾಡಬಾರದು ಎಂದು ಕ್ರಿಕೆಟ್ ಪ್ರೇಮಿಗಳ ಒಂದು ದಂಡು ಆಗ್ರಹಿಸುತ್ತಿವೆ.
ಈಗಾಗಲೇ ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೇ ಏಕೆ ರಾಷ್ಟ್ರೀಯ ಮಾಧ್ಯಮಗಳಲ್ಲೂ ವ್ಯಾಪಕ ಚರ್ಚೆ ನಡೆಯುತ್ತಿದ್ದು, "ಸ್ವಹಿತಾಸಕ್ತಿ ಹೊಂದಿರುವ ರವಿಶಾಸ್ತ್ರಿ ತಂಡದ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಬಾರಿ ತಂಡವನ್ನು ಬಿಟ್ಟು ತಮ್ಮ ವೈಯುಕ್ತಿಕ ಕೆಲಸಗಳಲ್ಲಿ ತೊಡಗಿದ್ದರು. ತಂಡದ ಕುರಿತು ಸಮರ್ಪಣಾ ಮನೋಭಾವ ಹೊಂದಿಲ್ಲದ ರವಿಶಾಸ್ತ್ರಿ ಕೋಚ್ ಆಗಿ ಕಾರ್ಯ ನಿರ್ವಹಿಸುವುದು ಬೇಡ. ಅದರ ಬದಲಿಗೆ ತಂಡದ ಹಿರಿಯ ಆಟಗಾರ ಎಂಎಸ್ ಧೋನಿ ಅವರೇ ಆಟಗಾರನಾಗಿದ್ದುಕೊಂಡು ಕೋಚ್ ಜವಾಬ್ದಾರಿ ಕೂಡ ಹೊರಲಿ ಎಂಬ ಚರ್ಚೆಗಳು ನಡೆಯುತ್ತಿವೆ.
ಆದರೆ ಮತ್ತೊಂದು ವರ್ಗ ಧೋನಿ ಅವರಿಗೆ ಕೋಚ್-ಆಟಗಾರ ಸ್ಥಾನ ನೀಡಲು ವಿರೋಧಿಸಿದ್ದು, ಕ್ರಿಕೆಟ್ ತಂಡದ ಕೋಚ್ ಎನ್ನುವುದು ಒತ್ತಡದ ಕೆಲಸ. ಆಟಗಾರನಾಗಿ ತಂಡವನ್ನು ನಿಭಾಯಿಸುವ ಕಲೆ ಒಂದು ರೀತಿಯಾಗಿದ್ದರೆ, ಬಿಸಿಸಿಐ ಸಭೆಗಳು, ಟೀಮ್ ಮ್ಯಾನೇಜ್ ವೆುಂಟ್ ನಂಥ ಕೆಲಸಗಳನ್ನು ಕೋಚ್ ನಿಭಾಯಿಸುತ್ತಾರೆ. ಹಾಗಾಗಿ ಪ್ಲೇಯರ್-ಕೋಚ್ ಆಗಿ ಕ್ರಿಕೆಟ್ ತಂಡದಲ್ಲಿ ಅದರಲ್ಲೂ ರಾಷ್ಟ್ರೀಯ ತಂಡದಲ್ಲಿ ಆಡುವುದು ಕಷ್ಟವಾಗಲಿದೆ. ಧೋನಿ ಓರ್ವ ಆಟಗಾರನಾಗಿ ಮಾತ್ರ ಮುಂದುವರೆಯಲಿ ಎಂದು ವಾದಿಸಿದ್ದಾರೆ.
ಧೋನಿಯೇ ಏಕೆ?
ಭಾರತ ತಂಡದ ನಾಯಕನಾಗಿ ದಶಕದ ಅನುಭವವಿರುವ ಧೋನಿ, ತಮ್ಮ ಯೋಚನೆ ಹಾಗೂ ಯೋಜನೆಗಳ ಮೂಲಕ ಖ್ಯಾತಿ ಪಡೆದಿದ್ದಾರೆ. ಅವರ ಶಾಂತಚಿತ್ತದ ವರ್ತನೆ ಮೈದಾನದಲ್ಲಿ ಭಾರತ ತಂಡಕ್ಕೆ ಹೆಚ್ಚಿನ ಯಶಸ್ಸು ತಂದುಕೊಟ್ಟಿದೆ. ಅದರೊಂದಿಗೆ ಹಾಲಿ ನಾಯಕ ವಿರಾಟ್ ಕೊಹ್ಲಿಗೆ ಧೋನಿ ತುಂಬಾ ಆಪ್ತರಾಗಿದ್ದು, ಮೈದಾನದಲ್ಲಿಯೂ ಅಗತ್ಯ ಸಮಯದಲ್ಲಿ ಧೋನಿ ಬಳಿ ಹೋಗಿ ಸಲಹೆ ಕೇಳುವುದಕ್ಕೂ ಕೊಹ್ಲಿ ಹಿಂಜರಿಯುವುದಿಲ್ಲ. ಇಬ್ಬರ ನಡುವೆ ಯಾವುದೇ ಅಹಂಗಳ ಸಂಘರ್ಷ ಇರದೇ ಇರುವುದು ಪ್ಲಸ್ ಪಾಯಿಂಟ್ ಆಗಿರಲಿದೆ.
ಈ ಹಿಂದೆ ಬಾಲಾಜಿ ಕೂಡ ಕೋಚ್-ಆಟಗಾರನ ಸ್ಥಾನ ನಿಭಾಯಿಸಿದ್ದರು!
ಟೀಮ್ ಇಂಡಿಯಾ ಮಾಜಿ ವೇಗಿ ಲಕ್ಷ್ಮೀಪತಿ ಬಾಲಾಜಿ 2015-16ರಲ್ಲಿ ತಮಿಳುನಾಡು ತಂಡದ ಆಟಗಾರರಾಗಿರುವುದರೊಂದಿಗೆ ಬೌಲಿಂಗ್ ಕೋಚ್ ಆಗಿಯೂ ಸೇವೆಸಲ್ಲಿದ್ದರು. ಇದಲ್ಲದೆ ಫುಟ್ ಬಾಲ್ ನಲ್ಲಿಯೂ ಇಂತಹ ಉದಾಹರಣೆ ಇದ್ದು, 2014ರಲ್ಲಿ ರ್ಯಾನ್ ಗಿಗ್ಸ್, ಮ್ಯಾಂಚೆಸ್ಟರ್ ಫುಟ್ ಬಾಲ್ ಕ್ಲಬ್ನಲ್ಲಿ ಪ್ಲೇಯರ್-ಮ್ಯಾನೇಜರ್ ಆಗಿ ಆಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


