ಬೂಮ್ ಬೂಮ್ ಅಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ!
ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸಮನ್ ಹಾಗೂ ಮಾಜಿ ನಾಯಕ ಶಾಹಿದ್ ಅಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಭಾನುವಾರ ವಿದಾಯ ಹೇಳಿದ್ದಾರೆ.

ಇಸ್ಲಾಮಾಬಾದ್: ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸಮನ್ ಹಾಗೂ ಮಾಜಿ ನಾಯಕ ಶಾಹಿದ್ ಅಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಭಾನುವಾರ ವಿದಾಯ ಹೇಳಿದ್ದಾರೆ.
ಈ ಹಿಂದೆ ಸಾಕಷ್ಟು ಬಾರಿ ವಿದಾಯ ಹೇಳಿ ಮತ್ತೆ ತಂಡಕ್ಕೆ ವಾಪಸ್ ಆಗಿದ್ದ ಬೂಮ್ ಬೂಮ್ ಖ್ಯಾತಿ ಅಫ್ರಿದಿ ಮತ್ತೆ ಕ್ರಿಕೆಟ್ ಗೆ ವಿದಾಯ ಹೇಳಿದ್ದು, ಈ ಬಾರಿ ಅಫ್ರಿದಿ ಮತ್ತೆ ಕ್ರಿಕೆಟ್ ಗೆ ಮರಳುವುದಿಲ್ಲ ಎಂದು ಹೇಳಲಾಗುತ್ತಿದೆ. 36 ವರ್ಷದ ಕ್ರಿಕೆಟಿಗ ಈಗಾಗಲೇ 2010ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. 2015ರ ವಿಶ್ವಕಪ್ ಸೋಲಿನ ಬಳಿಕ ಏಕದಿನ ನಾಯಕತ್ವಕ್ಕೆ ಅಫ್ರಿದಿ ವಿದಾಯ ಹೇಳಿದ್ದರು. ಆದರೆ ಟಿ20ಯಲ್ಲಿ ಮುಂದುವರೆದಿದ್ದರು. 2016ರಲ್ಲಿ ಭಾರತದಲ್ಲಿ ನಡೆದ ಟಿ20 ಚಾಂಪಿಯನ್ ಷಿಪ್ ನ ಹೀನಾಯ ಸೋಲಿನ ಬಳಿಕ ಟಿ20 ನಾಯಕತ್ವಕ್ಕೂ ವಿದಾಯ ಹೇಳಿದ್ದರು. ಇದೀಗ ಎಲ್ಲ ಬಗೆಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವಿದಾಯ ಹೇಳುತ್ತಿರುವುದಾಗಿ ಅಫ್ರಿದಿ ಘೋಷಿಸಿದ್ದಾರೆ.
ಆದರೆ ದೇಶೀಯ ಹಾಗೂ ವಿದೇಶಿ ಲೀಗ್ ಪಂದ್ಯಗಳಲ್ಲಿ ಮತ್ತೆರಡು ವರ್ಷಗಳ ಕಾಲ ತಾವು ಕ್ರಿಕೆಟ್ ಆಡುವುದಾಗಿಯೂ ಅಫ್ರಿದಿ ಹೇಳಿದ್ದಾರೆ. "ದೇಶಕ್ಕಾಗಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಗಂಭೀರವಾಗಿ ಮತ್ತು ಅತ್ಯಂತ ವೃತ್ತಿಪರ ಕ್ರಿಕೆಟ್ ಆಡಿದ್ದೇನೆ. ಇದೀಗ ಇದಕ್ಕೆ ವಿದಾಯ ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಸತತ 21 ವರ್ಷಗಳ ಕಾಲ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಶಾಹಿದ್ ಅಫ್ರಿದಿ, 1998ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಫ್ರಿದಿ ಟೆಸ್ಟ್ ಗೆ ಪದಾರ್ಪಣೆ ಮಾಡಿದ್ದರು. 27 ಟೆಸ್ಟ್ ಪಂದ್ಯಗಳನ್ನಾಡಿದ್ದು, ಒಟ್ಟು 1716 ರನ್ ಗಳನ್ನು ಗಳಿಸಿದ್ದಾರೆ. ಅಂತೆಯೇ 48 ವಿಕೆಟ್ ಕಬಳಿಸಿರುವ ಆಫ್ರಿದಿ ಅವರ ಗರಿಷ್ಠ ವೈಯುಕ್ತಿಕ ಸಾಧನೆ 156 ರನ್. ಅಂತೆಯೇ 1996ರಲ್ಲಿ ನೈರೋಬಿಯಲ್ಲಿ ನಡೆದ ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಏಕದಿನ ಕ್ರಿಕೆಟ್ ಗೆ ಅಫ್ರಿದಿ ಪದಾರ್ಪಣೆ ಮಾಡಿದ್ದರು. 398 ಏಕದಿನ ಪಂದ್ಯಗಳನ್ನಾಡಿರುವ ಅಫ್ರಿದಿ 8064 ರನ್ ಗಳನ್ನು ಗಳಿಸಿದ್ದು, 124 ರನ್ ಅವರ ಗರಿಷ್ಟ ರನ್ ಗಳಿಕೆಯಾಗಿದೆ. ಅಂತೆಯೇ ಬೌಲಿಂಗ್ ನಲ್ಲಿ 395 ವಿಕೆಟ್ ಕಬಳಿಸಿದ್ದಾರೆ. 2015ರಲ್ಲಿ ಅಡಿಲೇಡ್ ನಲ್ಲಿ ಇದೇ ಆಸ್ಟ್ರೇಲಿಯಾ ತಂಡದ ವಿರುದ್ಧವೇ ತಮ್ಮ ಕೊನೆ ಏಕದಿನ ಪಂದ್ಯವನ್ನು ಅಫ್ರಿದಿ ಆಡಿದ್ದರು.
2006ರಲ್ಲಿ ತಮ್ಮ ಇಂಗ್ಲೆಂಡ್ ಅಫ್ರಿದಿ ತಮ್ಮ ಮೊದಲ ಟಿ20 ಪಂದ್ಯವನ್ನಾಡಿದ್ದರು. ಟಿ20ಯಲ್ಲಿ ಅಫ್ರಿದಿ 98 ಪಂದ್ಯಗಳನ್ನಾಡಿದ್ದು, 1405 ರನ್ ಗಳಿಸಿ, 97 ವಿಕೆಟ್ ಕಬಳಿಸಿದ್ದಾರೆ. 54 ರನ್ ಅವರ ಗರಿಷ್ಟ ವೈಯುಕ್ತಿಕ ರನ್ ಗಳಿಕೆಯಾಗಿದೆ. 2016ರಲ್ಲಿ ಭಾರತದಲ್ಲಿ ನಡೆದ ಟಿ20 ಚಾಂಪಿಯನ್ ಷಿಪ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟಿ20 ಪಂದ್ಯವನ್ನಾಡಿದ್ದರು. ಇದಲ್ಲದೆ 10 ಐಪಿಎಲ್ ಪಂದ್ಯಗಳನ್ನೂ ಕೂಡ ಅಫ್ರಿದಿ ಆಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಬಳಿಕ ತಮ್ಮ 2ನೇ ಪಂದ್ಯ.ದಲ್ಲೇ ಶ್ರೀಲಂಕಾ ವಿರುದ್ಧ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದ್ದ ಅಫ್ರಿದಿ ದಾಖಲೆ ನಿರ್ಮಿಸಿದ್ದರು. ಆ ಮೂಲಕ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಬೂಮ್ ಬೂಮ್ ಅಫ್ರಿದಿ ಎಂದು ಖ್ಯಾತಿ ಗಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


