ಐಸಿಸಿ ಟಿ20 ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 6 ವಿಕೆಟ್ ಭರ್ಜರಿ ಜಯ
ವಿರಾಟ್ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಆಸ್ಚ್ರೇಲಿಯಾ ವಿರುದ್ಧ ಭಾರತ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಮೊಹಾಲಿ: ವಿರಾಟ್ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಆಸ್ಚ್ರೇಲಿಯಾ ವಿರುದ್ಧ ಭಾರತ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಆಸ್ಟ್ರೇಲಿಯಾ ನೀಡಿದ 161 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ 4 ವಿಕೆಟ್ ಕಳೆದುಕೊಂಡು ಇನ್ನೂ ಐದು ಎಸೆತ ಬಾಕಿ ಇರುವಂತೆಯೇ 161 ರನ್ ಸಿಡಿಸಿ ಜಯ ಭೇರಿ ಭಾರಿಸಿತು. ಆ ಮೂಲಕ ಸೆಮೀ ಫೈನಲ್ ರೋಚಕವಾಗಿ ಪ್ರವೇಶ ಪಡೆಯಿತು. ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಮೈದಾನದ ಮೂಲೆ ಮೂಲೆಗೂ ಚೆಂಡನ್ನಟ್ಟಿದ ವಿರಾಟ್ ಕೊಹ್ಲಿ ಭರ್ಜರಿ 82 ರನ್ ಗಳನ್ನು ಗಳಿಸುವುದರೊಂದಿಗೆ ಮತ್ತೊಮ್ಮೆ ತಾವೊಬ್ಬ ಅದ್ಭುತ ಫಿನಿಶರ್ ಎಂಬುದನ್ನು ಸಾಬೀತು ಪಡಿಸಿದರು. ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ನೆರವಾದ ಕೊಹ್ಲಿಗೆ ನಾಯಕ ಧೋನಿ ಕೂಡ ಉತ್ತಮ ಸಾಥ್ ನೀಡಿದ್ದೇ ಅಲ್ಲದೇ ವಿನ್ನಿಂಗ್ ರನ್ ಗಳನ್ನು ಕೂಡ ತಾವೇ ಸಿಡಿಸಿದರು.
ಇದಕ್ಕೂ ಮೊದಲು ಆರಂಭಿಕರಾಗಿ ಕಣಕ್ಕಿಳಿದಿದ್ದ ಶಿಖರ್ ಧವನ್ (13 ರನ್) ಮತ್ತು ರೋಹಿತ್ ಶರ್ಮಾ (12ರನ್) ಭಾರತಕ್ಕೆ ಉತ್ತಮ ಆರಂಭ ಒದಗಿಸಿಕೊಡುವ ಮುನ್ಸೂಚನೆ ನೀಡಿದ್ದರಾದರೂ, ಅನಗತ್ಯ ಹೊಡೆತಗಳಿಗೆ ಮುಂದಾಗಿ ತಮ್ಮ ವಿಕೆಟ್ ಕೈ ಚೆಲ್ಲಿದ್ದರು. ಇನ್ನು ಸುರೇಶ್ ರೈನಾ ಕೂಡ ಆರಂಭದಲ್ಲಿ ಬೌಂಡರಿ ಸಿಡಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಭರವಸೆ ನೀಡಿ ವಾಟ್ಸನ್ ಗೆ ವಿಕೆಟ್ ಒಪ್ಪಿಸಿದ್ದರು. ಇನ್ನು ಬ್ಯಾಟಿಂಗ್ ವೇಳೆ ಸ್ನಾಯು ಸೆಳೆತಕ್ಕೆ ಗುರಿಯಾದ ಯುವರಾಜ್ ಸಿಂಗ್ ಆ ನೋವಿನಲ್ಲೇ ಬ್ಯಾಟಿಂಗ್ ಮುಂದುವರೆಸಿ ಭಾರತ ತಂಡಕ್ಕೆ ಚೇತರಿಕೆ ನೀಡಿದರು. ಆದರೆ 21 ರನ್ ಗಳಿಸಿದ್ದ ವೇಳೆ ಯುವಿ ಫಾಲ್ಕನರ್ ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಕೊಹ್ಲಿ ಮತ್ತು ನಾಯಕ ಧೋನಿ ಗೆಲುವಿನ ರನ್ ಗಳನ್ನು ಪೋಣಿಸಿ ಭಾರತಕ್ಕೆ ಅಮೋಘ 6 ವಿಕೆಟ್ ಗಳ ಜಯವನ್ನು ತಂದಿತ್ತರು.
ಆಸ್ಟ್ರೇಲಿಯಾ ಪರ ಶೇನ್ ವಾಟ್ಸನ್ 2 ವಿಕೆಟ್ ಪಡೆದರೆ, ಫಾಲ್ಕನರ್ ಮತ್ತು ಕಾಲ್ಟರ್ ನೈಲ್ ತಲಾ 1 ವಿಕೆಟ್ ಪಡೆದರು. ಈ ಪಂದ್ಯದ ಗೆಲುವಿನ ಮೂಲಕ ಭಾರತ ಸೆಮಿಫೈನಲ್ ಪ್ರವೇಶಿಸಿದೆ.
ಇನ್ನು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡ ಆ್ಯರಾನ್ ಫಿಂಚ್ (43 ರನ್) ಮತ್ತು ಮ್ಯಾಕ್ಸ್ ವೆಲ್ (31) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಗಳನ್ನು ಸಿಡಿಸಿತು. ಭಾರತದ ಪರ ಹಾರ್ದಿಕ್ ಪಾಂಡ್ಯಾ 2 ವಿಕೆಟ್ ಪಡೆದರೆ, ಯುವರಾಜ್ ಸಿಂಗ್, ಆರ್ ಅಶ್ವಿನ್, ಬುಮ್ರಾಹ್ ಮತ್ತು ನೆಹ್ರಾ ತಲಾ 1 ವಿಕೆಟ್ ಪಡೆದರು.
ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿ 82 ರನ್ ಸಿಡಿಸುವ ಮೂಲಕ ಭಾರತದ ಗೆಲುವಿಗೆ ಕಾರಣರಾದ ವಿರಾಟ್ ಕೊಹ್ಲಿ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


