ಬ್ಯಾಟ್ಸಮನ್ ಗಳ ವೈಫಲ್ಯ: ಭಾರತಕ್ಕೆ ಹೀನಾಯ ಸೋಲು
ನ್ಯೂಜಿಲೆಂಡ್ ತಂಡದ ಪ್ರಭಾವಿ ಸ್ಪಿನ್ನರ್ ಗಳ ದಾಳಿಯನ್ನು ಎದುರಿಸುವಲ್ಲಿ ಬ್ಯಾಟ್ಸಮನ್ ಗಳು ವಿಫಲರಾದ ಹಿನ್ನಲೆಯಲ್ಲಿ ಐಸಿಸಿ ಟಿ20 ವಿಶ್ವಕಪ್...

ನಾಗ್ಪುರ: ನ್ಯೂಜಿಲೆಂಡ್ ತಂಡದ ಪ್ರಭಾವಿ ಸ್ಪಿನ್ನರ್ ಗಳ ದಾಳಿಯನ್ನು ಎದುರಿಸುವಲ್ಲಿ ಬ್ಯಾಟ್ಸಮನ್ ಗಳು ವಿಫಲರಾದ ಹಿನ್ನಲೆಯಲ್ಲಿ ಐಸಿಸಿ ಟಿ20 ವಿಶ್ವಕಪ್ ನ ತನ್ನ ಮೊದಲ ಪಂದ್ಯದಲ್ಲಿ ಭಾರತ ಹೀನಾಯ ಸೋಲುಕಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 126 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿತು. ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಭಾರತ ತಂಡ ಆರಂಭದಿಂದಲೇ ಕಿವೀಸ್ ಬ್ಯಾಟ್ಸಮನ್ ಗಳ ಮೇಲೆ ಒತ್ತಡ ಹೇರಿತು. ಆ ಮೂಲಕ ಕಿವೀಸ್ ಪಡೆಯನ್ನು 126 ರನ್ ಗಳಿಗೆ ಕಟ್ಟಿಹಾಕಿದರು. ನ್ಯೂಜಿಲೆಂಡ್ ಪರ ಕೋರಿ ಆಂಡರ್ಸನ್ ಗಳಿಸಿದ 34 ರನ್ ಗಳೇ ವೈಯುಕ್ತಿಕ ಗರಿಷ್ಠ ಮೊತ್ತವಾಗಿತ್ತು. ಅಷ್ಟರ ಮಟ್ಟಿಗೆ ಭಾರತೀಯ ಬೌಲರ್ ಗಳು ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.
ಭಾರತದ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಖಂಡಿತ ಈ ಪಂದ್ಯವನ್ನು ನಿರಾಯಾಸವಾಗಿ ಗೆಲ್ಲುತ್ತದೆ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಈ ವರೆಗೂ ಭಾರತ ನ್ಯೂಜಿಲೆಂಡ್ ತಂಡವನ್ನು ಮಣಿಸಿಲ್ಲ ಎಂಬ ದಾಖಲೆ ಕೂಡ ಈ ಪಂದ್ಯದ ಮೂಲಕ ಅಳಿಸಿ ಹೋಗಲಿದೆ ಎಂದು ಭಾವಿಸಲಾಗಿತ್ತು. ಆದರೆ ನ್ಯೂಜಿಲೆಂಡ್ ನ ಪ್ರಭಾವಿ ಸ್ಪಿನ್ನರ್ ಗಳ ಎದುರು ರನ್ ಗಳಿಸಲು ಪರದಾಡಿದ ಭಾರತೀಯ ಬ್ಯಾಟ್ಸಮನ್ ಗಳು ತರಗೆಲೆಗಳಂತೆ ಉದುರಿ ಹೋದರು. ಅಂತಿಮವಾಗಿ ಭಾರತ ಕೇವಲ 79 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆ ಮೂಲಕ ನ್ಯೂಜಿಲೆಂಡ್ ಗೆ 47 ರನ್ ಗಳ ಅಂತರದಿಂದ ಶರಣಾಯಿತು.
ಸೋಲಿಗೆ ಕಾರಣವಾಯ್ತು ಬ್ಯಾಟಿಂಗ್ ವೈಫಲ್ಯ
ಪ್ರಮುಖವಾಗಿ ಭಾರತದ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಕಾರಣ ಎಂದು ತಜ್ಞರು ವಿಮರ್ಶಿಸಿದ್ದಾರೆ. ತಂಡದ ಮೂವರು ಬ್ಯಾಟ್ಸಮನ್ ಗಳು ಶೂನ್ಯಕ್ಕೆ ಔಟಾದರೆ, ಮೂವರು ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮತ್ತೆ ಇಬ್ಬರು ಆಟಗಾರರು ಕೇವಲ ಎರಡಂಕಿ ಕೂಡ ಗಳಿಸಿದೇ ನಿರ್ಗಮಿಸಿದರು. ಇದು ಭಾರತದ ಬ್ಯಾಟಿಂಗ್ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಅಂತಿಮ ಸಮಯದವರೆಗೂ ಹೋರಾಡಿದ ನಾಯಕ ಧೋನಿ ಶ್ರಮ ಕೂಡ ಫಲ ನೀಡಲಿಲ್ಲ. ಹೀಗಾಗಿ ಭಾರತ ಕಿವೀಸ್ ವಿರುದ್ಧ ಸೋಲುಕಂಡಿತು,
ಇನ್ನು ಕಿವೀಸ್ ಪಡೆ ನೀಡಿದ್ದ 126 ರನ್ ಗಳ ಸಾಧಾರಣ ಮೊತ್ತವನ್ನು ನಿರಾಯಾಸವಾಗಿ ಮುಟ್ಟಬಹುದು ಎಂಬ ಅತಿಯಾದ ವಿಶ್ವಾಸ ಬಹುಶಃ ಭಾರತಕ್ಕೆ ಮುಳುವಾಯಿತು ಎನ್ನುಬಹುದು. ಹೀಗಾಗಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲುಕಂಡಿದೆ. ನ್ಯೂಜಿಲೆಂಡ್ ಪರ ಸ್ಯಾಂಥರ್ 4 ವಿಕೆಟ್ ಗಳಿಸಿದರೆ ಸೋಧಿ 3 ವಿಕೆಟ್ ಕಬಳಿಸಿ ಪ್ರಮುಖವಾಗಿ ಭಾರತದ ಸೋಲಿಗೆ ಕಾರಣರಾದರು. ಉಳಿದಂತೆ ಮೆಕ್ಕಲಮ್ 2 ವಿಕೆಟ್ ಪಡೆದರೆ, ಮಿಲ್ನೆ 1 ವಿಕೆಟ್ ಕಬಳಿಸಿದರು.
ಈ ಪಂದ್ಯದ ಗೆಲುವಿನ ಮೂಲಕ ನ್ಯೂಜಿಲೆಂಡ್ ತಂಡ 2 ಅಂಕಗಳಿಸಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


