ಸರಣಿ ಯಶಸ್ಸಿಗಾಗಿ ಒಂದೇ ಗುಂಪಿನಲ್ಲಿ ಭಾರತ-ಪಾಕ್: ಐಸಿಸಿ
ಕಣ್ಮರೆಯಾಗುತ್ತದೆ ಎಂದು ಭಾವಿಸಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿ ಇದೀಗ ಮತ್ತೆ ಜೀವ ಪಡೆದುಕೊಂಡಿದ್ದು, ಸರಣಿ ಜೀವಂತಿಕೆಗೆ ಭಾರತ-ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಗಳೇ ಕಾರಣ ಎಂದು ಐಸಿಸಿ ಒಪ್ಪಿಕೊಂಡಿದೆ.

ಲಂಡನ್: ಕಣ್ಮರೆಯಾಗುತ್ತದೆ ಎಂದು ಭಾವಿಸಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿ ಇದೀಗ ಮತ್ತೆ ಜೀವ ಪಡೆದುಕೊಂಡಿದ್ದು, ಸರಣಿ ಜೀವಂತಿಕೆಗೆ ಭಾರತ-ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಗಳೇ ಕಾರಣ ಎಂದು ಐಸಿಸಿ ಪರೊಕ್ಷವಾಗಿ ಒಪ್ಪಿಕೊಂಡಿದೆ.
ನಿನ್ನೆಯಷ್ಟೇ ಲಂಡನ್ ನಲ್ಲಿ 2017ನೇ ಸಾಲಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ ಮಾಡಿದ ಐಸಿಸಿ ಬಳಿಕ ಈ ಗುಟ್ಟನ್ನು ರಟ್ಟು ಮಾಡಿದ್ದು, ಟಿವಿ ಪ್ರೇಕ್ಷಕರನ್ನು ಸೆಳೆಯುವ ಸಲುವಾಗಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳನ್ನು ಒಂದೇ ಗುಂಪಿನಲ್ಲಿ ಸೇರಿಸಿರುವುದಾಗಿ ಹೇಳಿದೆ. ನಿನ್ನೆ ಓವಲ್ ಮೈದಾನದಲ್ಲಿ ಈ ಬಗ್ಗೆ ಮಾತನಾಡಿದ ಐಸಿಸಿಯ ಮುಖ್ಯ ಕಾರ್ಯನಿರ್ವಾಹಕ ಡೇವ್ ರಿಚರ್ಡ್ಸನ್ ಅವರು, ಇದರಲ್ಲಿ ಯಾವುದೇ ಅನುಮಾನ ಬೇಡ. ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದಲೇ ನಾವು ಭಾರತ ಮತ್ತು ಪಾಕಿಸ್ತಾನ ತಂಡಗಳನ್ನು ಒಂದೇ ಗುಂಪಿಗೆ ಸೇರಿಸಿದ್ದೇವೆ ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಯಾವಾಗಲೂ ರೋಚಕವಾಗಿರುತ್ತದೆ. ಸಾಮಾನ್ಯ ಪಂದ್ಯಗಳಿಗಿಂತ ಈ ತಂಡಗಳ ನಡುವಿನ ಪಂದ್ಯಗಳ ವೀಕ್ಷಕರ ಸಂಖ್ಯೆ ಹೆಚ್ಚಿರುತ್ತದೆ. ಇದೇ ಕಾರಣಕ್ಕಾಗಿ ಈ ಬಾರಿ ಎರಡೂ ಸಾಂಪ್ರದಾಯಿಕ ವೈರಿಗಳನ್ನು ಒಂದೇ ಗುಂಪಿಗೆ ಸೇರಿಸಿದ್ದೇವೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರಾಗಿರುವ ಐದೂ ಟೂರ್ನಿಗಳು ಅಭೂತ ಪೂರ್ವ ಯಶಸ್ಸು ಸಾಧಿಸಿದ್ದು, ಈ ಎರಡೂ ತಂಡಗಳ ನಡುವಿನ ಪಂದ್ಯ ವೀಕ್ಷಕರ ಸಂಖ್ಯೆ ಒಂದು ಬಿಲಿಯನ್ ದಾಟಿರುತ್ತದೆ ಎಂದು ರಿಚರ್ಡ್ಸನ್ ಹೇಳಿದ್ದಾರೆ.
ಸರಣಿ ಯಶಸ್ಸಿನ ದೃಷ್ಟಿಯಿಂದ ನಮಗಿದು ಮುಖ್ಯವಾಗಿದ್ದು, ವಿಶ್ವಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳು ಈ ತಂಡಗಳ ಕಾದಾಟಕ್ಕಾಗಿ ಕಾತುರದಿಂದ ಕಾಯುತ್ತಿರುತ್ತಾರೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸುತ್ತಿರುವುದು ನಿಜಕ್ಕೂ ಟೂರ್ನಿಗೆ ಉತ್ತಮ ಆರಂಭ ಒದಗಿಸಲಿದೆ ಎಂದು ರಿಚರ್ಡ್ಸನ್ ಹೇಳಿದ್ದಾರೆ. ಇದೇ ವೇಳೆ ಐಸಿಸಿ ಕೆಲ ಕ್ರಮಗಳು ಪಂದ್ಯಾವಳಿಯ ಸೋಗಸು ಮತ್ತು ಸಮಗ್ರತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಟೀಕೆಗಳನ್ನು ಅಲ್ಲಗಳೆದ ರಿಚರ್ಡ್ಸನ್ ಐಸಿಸಿ ರ‍್ಯಾಂಕಿಂಗ್ ಅಧಾರದ ಮೇಲೆಯೇ ತಂಡಗಳನ್ನು ವಿವಿಧ ಗುಂಪುಗಳಾಗಿ ವಿಭಜಿಸಲಾಗಿದ್ದು, ಇಂತಹ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ರಿಚರ್ಡ್ಸನ್ ಹೇಳಿದ್ದಾರೆ.
ಒಟ್ಟಾರೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಸ್ವತಃ ಐಸಿಸಿಯೇ ಫಿಧಾ ಆಗಿದ್ದು, ಸರಣಿ ಯಶಸ್ಸಿಗಾಗಿ ನಿಯಮವಾಳಿಗಳನ್ನು ಪಕ್ಕಕ್ಕೆ ಸರಿಸಿ ಈ ಎರಡೂ ತಂಡಗಳನ್ನು ಒಂದೇ ಗುಂಪಿಗೆ ಸೇರಿಸಿರುವುದು ಪಂದ್ಯದ ರೋಚಕತೆಯನ್ನು ಬಿಂಬಿಸುತ್ತಿದೆ. ಇದೇ ಜೂನ್ 4ರಂದು ಎಡ್ಜ್ ಬ್ಯಾಸ್ಟನ್ ನಲ್ಲಿ ಭಾರತ ಪಾಕಿಸ್ತಾನ ತಂಡವನ್ನು ತನ್ನ ಮೊದಲ ಪಂದ್ಯದಲ್ಲಿ ಎದುರಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


