ಶಿಗೆಲ್ಲ ಸೋಂಕು: ಎಚ್ಚರಿಕೆ ಬೇಕು (ಕುಶಲವೇ ಕ್ಷೇಮವೇ)
ಕಣ್ಣಿಗೆ ಕಾಣದಷ್ಟು ಸಣ್ಣದಾದ ಈ ಬ್ಯಾಕ್ಟೀರಿಯಾಗಳು ಮಾನವನ ಕರುಳಿನ ಆರೋಗ್ಯವನ್ನು ಗಂಭೀರವಾಗಿ ಹಾನಿಗೊಳಿಸಬಲ್ಲವು. ಅಷ್ಟೇ ಅಲ್ಲ, ಒಬ್ಬರಿಂದ ಮತ್ತೊಬ್ಬರಿಗೆ ಬಹಳ ಸುಲಭವಾಗಿ ಹರಡುತ್ತದೆ.

ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಶಿಗೆಲ್ಲ ಸೋಂಕಿನ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿರುವುದು ಸುದ್ದಿಯಲ್ಲಿದೆ. ಇದು ಹೊಸದಾಗಿ ಕಾಣಿಸಿಕೊಂಡಿರುವ ಕಾಯಿಲೆಯಲ್ಲ. ಆದರೆ ಇದರ ಹರಡುವಿಕೆ ಮತ್ತು ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ನೋಡಿದರೆ ಆತಂಕವಾಗುವುದು ಸಹಜ. ಕಣ್ಣಿಗೆ ಕಾಣದಷ್ಟು ಸಣ್ಣದಾದ ಈ ಬ್ಯಾಕ್ಟೀರಿಯಾಗಳು ಮಾನವನ ಕರುಳಿನ ಆರೋಗ್ಯವನ್ನು ಗಂಭೀರವಾಗಿ ಹಾನಿಗೊಳಿಸಬಲ್ಲವು. ಅಷ್ಟೇ ಅಲ್ಲ, ಒಬ್ಬರಿಂದ ಮತ್ತೊಬ್ಬರಿಗೆ ಬಹಳ ಸುಲಭವಾಗಿ ಹರಡುತ್ತದೆ. ಕಲುಷಿತ ಆಹಾರ, ಅಶುದ್ಧ ನೀರು ಹಾಗೂ ಕೈಗಳ ಸ್ವಚ್ಛತೆಯ ಕೊರತೆಯ ಮೂಲಕ ಇದು ಮುಖ್ಯವಾಗಿ ಹಬ್ಬುತ್ತದೆ.
ಶಿಗೆಲ್ಲ ಬ್ಯಾಕ್ಟೀರಿಯಾ
ಶಿಗೆಲ್ಲವು ಎಂಟ್ರೊಬ್ಯಾಕ್ಟೀರಿಯೇಸಿ ಕುಟುಂಬಕ್ಕೆ ಸೇರಿದ ಬ್ಯಾಕ್ಟೀರಿಯಾ. ಈ ಕುಟುಂಬದ ಅನೇಕ ಬ್ಯಾಕ್ಟೀರಿಯಾಗಳು ಮಾನವನ ಕರುಳಿನಲ್ಲಿ ಸಹಜವಾಗಿ ಕಂಡುಬರುತ್ತವೆ. ಆದರೆ ಶಿಗೆಲ್ಲ ಮಾತ್ರ ರೋಗಕಾರಕವಾಗಿದ್ದು ಕರುಳಿನ ಒಳಪದರವನ್ನು ಹಾನಿಗೊಳಿಸಿ ಅತಿಸಾರ, ಹೊಟ್ಟೆನೋವು ಮತ್ತು ಜ್ವರದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಶಿಗೆಲ್ಲ ಸೋಂಕು ಮುಖ್ಯವಾಗಿ ಕರುಳಿನ ಮೇಲೆ ಪರಿಣಾಮ ಬೀರುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಬಹಳ ಕುಗ್ಗಿಸುತ್ತದೆ. ಸೋಂಕು ತಗುಲಿದ ನಂತರ ಸಾಮಾನ್ಯವಾಗಿ ಒಂದರಿಂದ ಎರಡು ದಿನಗಳೊಳಗೆ ಜ್ವರ, ಹೊಟ್ಟೆನೋವು, ಹೊಟ್ಟೆಯಲ್ಲಿ ಸೆಳೆತ ಹಾಗೂ ಕೆಲವೊಮ್ಮೆ ರಕ್ತಮಿಶ್ರಿತ ಭೇದಿಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಸೋಂಕಿನಿಂದ ಉಂಟಾಗುವ ಶಿಗೆಲ್ಲೋಸಿಸ್ ಕಾಯಿಲೆ ತೀವ್ರ ಅತಿಸಾರಕ್ಕೆ ಕಾರಣವಾಗಿ ದೇಹವನ್ನು ಬೇಗನೆ ನಿಶ್ಯಕ್ತಗೊಳಿಸುತ್ತದೆ.
ಈ ಬ್ಯಾಕ್ಟೀರಿಯಾವನ್ನು ಮೊದಲ ಬಾರಿಗೆ 1897ರಲ್ಲಿ ಜಪಾನಿನ ವಿಜ್ಞಾನಿ ಕಿಯೊಶಿ ಶಿಗಾ ಗುರುತಿಸಿದರು. ಅವರ ಹೆಸರನ್ನೇ ಈ ಬ್ಯಾಕ್ಟೀರಿಯಾಗೆ ಇಡಲಾಯಿತು. ಅಂದಿನಿಂದ ಇಂದಿನವರೆಗೂ ಶಿಗೆಲ್ಲ ಸೋಂಕು ವಿಶ್ವದ ಅನೇಕ ದೇಶಗಳಲ್ಲಿ ಸಾರ್ವಜನಿಕ ಆರೋಗ್ಯದ ಸವಾಲಾಗಿದೆ. ಪ್ರತಿವರ್ಷ ಲಕ್ಷಾಂತರ ಮಂದಿ ಈ ಸೋಂಕಿಗೆ ಒಳಗಾಗುತ್ತಿದ್ದು ವಿಶೇಷವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಇದರ ಅಪಾಯ ಹೆಚ್ಚು ಕಂಡುಬರುತ್ತದೆ.
ಭಾರತದರಲ್ಲಿ ಶಿಗೆಲ್ಲ ಸೋಂಕು
ಕೇರಳದಲ್ಲಿಯೂ ಈ ಸೋಂಕು ಹೊಸದಲ್ಲ. 2009ರಲ್ಲಿ ನೂರಾರು ಮಂದಿ ಸೋಂಕಿಗೆ ಒಳಗಾಗಿದ್ದರು. ನಂತರದ ವರ್ಷಗಳಲ್ಲಿಯೂ ಕೆಲವು ಜಿಲ್ಲೆಗಳಲ್ಲಿ ಶಿಗೆಲ್ಲ ಸೋಂಕು ಮರುಕಳಿಸಿ ಜೀವಹಾನಿಗೆ ಕಾರಣವಾಗಿತ್ತು. ಇತ್ತೀಚಿನ ತಿಂಗಳುಗಳಲ್ಲಿಯೂ ಸೋಂಕಿನ ಪ್ರಕರಣಗಳು ವರದಿಯಾಗುತ್ತಿದ್ದು ಕೆಲವು ಸಾವುಗಳೂ ಸಂಭವಿಸಿವೆ. ಮಕ್ಕಳಲ್ಲಿ ಸೋಂಕು ಕಂಡುಬರುತ್ತಿರುವುದು ಪೋಷಕರ ಆತಂಕವನ್ನು ಹೆಚ್ಚಿಸಿದೆ.
ಶಿಗೆಲ್ಲ ಸೋಂಕು ಹೆಚ್ಚಾಗಿ ಮಕ್ಕಳಲ್ಲಿ, ವೃದ್ಧರಲ್ಲಿ ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಶಾಲೆಗಳು, ವಸತಿ ನಿಲಯಗಳು, ಶಿಶುಪಾಲನಾ ಕೇಂದ್ರಗಳು ಮತ್ತು ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಸೋಂಕು ವೇಗವಾಗಿ ಹರಡಬಹುದು. ಆದ್ದರಿಂದ ಇಂತಹ ಸ್ಥಳಗಳಲ್ಲಿ ಸ್ವಚ್ಛತೆ ಮತ್ತು ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯವಾಗಿದೆ.
ಶಿಗೆಲ್ಲ ಸೋಂಕು ಹೇಗೆ ಹರಡುತ್ತದೆ?
ಶಿಗೆಲ್ಲ ಸೋಂಕು ಹರಡುವ ಪ್ರಮುಖ ಮಾರ್ಗವೆಂದರೆ ಕಲುಷಿತ ಆಹಾರ ಮತ್ತು ನೀರು. ಸ್ವಚ್ಛವಾಗಿಲ್ಲದ ಕೈಗಳ ಮೂಲಕ ಸೋಂಕು ಹರಡಬಹುದು. ಕೆಲವೇ ಬ್ಯಾಕ್ಟೀರಿಯಾಗಳು ದೇಹಕ್ಕೆ ಪ್ರವೇಶಿಸಿದರೂ ಈ ಕಾಯಿಲೆ ಕಾಣಿಸಿಕೊಳ್ಳಬಹುದು.
ಈ ಸೋಂಕಿನಿಂದ ರಕ್ಷಿಸಿಕೊಳ್ಳಲು ನೈರ್ಮಲ್ಯ ಪಾಲನೆಯೇ ಅತ್ಯಂತ ಪರಿಣಾಮಕಾರಿ ಮಾರ್ಗ. ಹೊರಗಿನ ಅಶುದ್ಧ ಆಹಾರ ಸೇವಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ನಾವು ದಿನವೂ ಕುಡಿಯುವ ನೀರು ಶುದ್ಧವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನೀರನ್ನು ಕುದಿಸಿ ಆರಿಸಿ ಕುಡಿಯುವುದು ಉತ್ತಮ ಅಭ್ಯಾಸ. ಊಟದ ಮೊದಲು ಮತ್ತು ಶೌಚಾಲಯ ಬಳಸಿದ ನಂತರ ಸಾಬೂನು ಬಳಸಿ ಕನಿಷ್ಠ ಇಪ್ಪತ್ತು ಸೆಕೆಂಡುಗಳ ಕಾಲ ಕೈಗಳನ್ನು ಚೆನ್ನಾಗಿ ತೊಳೆಯಬೇಕು. ಸರಳವಾಗಿ ಕಾಣುವ ಈ ಸರಳ ಆದರೆ ಪರಿಣಾಮಕಾರಿ ಕ್ರಮಗಳೇ ಸೋಂಕು ತಡೆಯುವಲ್ಲಿ ದೊಡ್ಡ ಪಾತ್ರ ವಹಿಸುತ್ತವೆ.
ಶಿಗೆಲ್ಲ ಸೋಂಕಿಗೆ ಚಿಕಿತ್ಸೆ
ಒಂದು ವೇಳೆ ಜ್ವರ, ಅತಿಸಾರ ಅಥವಾ ರಕ್ತಮಿಶ್ರಿತ ಭೇದಿಯಂತಹ ಲಕ್ಷಣಗಳು ಕಂಡುಬಂದರೆ ಮನೆಯಲ್ಲಿಯೇ ಸ್ವಯಂ ಚಿಕಿತ್ಸೆ ಮಾಡದೇ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಶಿಗೆಲ್ಲ ಸೋಂಕಿನಲ್ಲಿ ದೇಹದಲ್ಲಿ ನೀರಿನ ಕೊರತೆ ಉಂಟಾಗುವುದು ಸಾಮಾನ್ಯ. ಆದ್ದರಿಂದ ಸಾಕಷ್ಟು ದ್ರವಾಹಾರ, ಒಆರ್‌ಎಸ್ ದ್ರಾವಣ ಹಾಗೂ ವೈದ್ಯರು ಸೂಚಿಸುವ ಚಿಕಿತ್ಸೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವ ಆಂಟಿಬಯಾಟಿಕ್ ಕೊಡಬೇಕು ಎಂಬುದನ್ನು ವೈದ್ಯರೇ ನಿರ್ಧರಿಸಬೇಕು. ಏಕೆಂದರೆ ಎಲ್ಲಾ ವಿಧದ ಶಿಗೆಲ್ಲ ಬ್ಯಾಕ್ಟೀರಿಯಾಗಳು ಒಂದೇ ಔಷಧಿಗೆ ಸ್ಪಂದಿಸುವುದಿಲ್ಲ.
ಕೊನೆಮಾತು: ಒಟ್ಟಿನಲ್ಲಿ ಹೇಳುವುದಾದರೆ ಶಿಗೆಲ್ಲ ಸೋಂಕು ನಮಗೆ ಸ್ವಚ್ಛತೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸುವ ಕಾಯಿಲೆಯಾಗಿದೆ. ಶುದ್ಧ ನೀರು, ಸುರಕ್ಷಿತ ಆಹಾರ ಮತ್ತು ವೈಯಕ್ತಿಕ ನೈರ್ಮಲ್ಯಕ್ಕೆ ಆದ್ಯತೆ ನೀಡಿದರೆ ಈ ಸೋಂಕನ್ನು ಬಹುತೇಕ ತಡೆಯಬಹುದು. ಇಂದು ವೈದ್ಯಕೀಯ ಸೌಲಭ್ಯಗಳು ಎಷ್ಟೇ ಮುಂದುವರಿದಿದ್ದರೂ ಅನೇಕ ಸಾಂಕ್ರಾಮಿಕ ರೋಗಗಳ ವಿರುದ್ಧ ಮೊದಲ ರಕ್ಷಣೆ ನೈರ್ಮಲ್ಯ. ಆದ್ದರಿಂದ ಯಾವುದೇ ರೋಗ ಬರದಂತೆ ಇರಲು ವೈಯಕ್ತಿಕ ಮತ್ತು ಸಾಮಾಜಿಕ ನೈರ್ಮಲ್ಯ ಬಹಳ ಮುಖ್ಯ ಎಂಬುದನ್ನು ನಾವು ಮರೆಯಬಾರದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




