ಏನಿದು ಬ್ಯುಸಿನೆಸ್ ವ್ಯಾಲ್ಯುವೇಶನ್? ಫ್ಲಿಪ್ ಕಾರ್ಟ್ ಅಷ್ಟೊಂದು ಬೆಲೆ ಬಾಳುತ್ತದೆಯೇ?
e -ಕಾಮರ್ಸ್ ಸಂಸ್ಥೆಗಳ ಮೌಲ್ಯವನ್ನ ಅಳೆಯಲು ಗ್ರಾಸ್ ಮರ್ಚಂಡೈಸ್ ವಾಲ್ಯೂಮ್ ವಿಧಾನ ಬಳಸಲಾಗುತ್ತದೆ ಇಲ್ಲಿ ಗ್ರಾಹಕನಿಗೆ ಮಾರಿದ ವಸ್ತುವಿನ ಬೆಲೆಯನ್ನ ಒಟ್ಟು ಎಷ್ಟು ಮಾರಲಾಯಿತು....

Published On :
ಬಿಸಿನೆಸ್ ವ್ಯಾಲ್ಯುವೇಶನ್ ಅಥವಾ ವ್ಯವಹಾರ ಮೌಲ್ಯಮಾಪನ ಎನ್ನುವುದು ಕಾರ್ಪೊರೇಟ್ ಜಗತ್ತಿನಲ್ಲಿ ಅತಿ ಸಾಮಾನ್ಯವಾಗಿ ಕೇಳಿಬರುವ ಪದ. ಕಾರ್ಪೊರೇಟ್ ಸಂಸ್ಥೆಗಳು ವರ್ಷಕ್ಕೆ ಒಮ್ಮೆಯಾದರೂ ತಮ್ಮ ಸಂಸ್ಥೆಯ ಮೌಲ್ಯ ಎಷ್ಟಿರಬಹದು ಎಂದು ತಿಳಿಯಲು ವ್ಯಾಲ್ಯುವೇಶನ್ ಮಾಡಿಸುತ್ತಾರೆ. ಇವತ್ತಿನ ದಿನದಲ್ಲಿ ಈ ಪದವಂತೂ ಜನ ಸಾಮಾನ್ಯನನ್ನು ತಲುಪಿದೆ ಅದಕ್ಕೆ ಕಾರಣ ಅಮೆರಿಕಾದ ಸುಪ್ರಸಿದ್ಧ ವಾಲ್ ಮಾರ್ಟ್ ಸಂಸ್ಥೆ ಬೆಂಗಳೂರು ಮೂಲದ ಫ್ಲಿಪ್ ಕಾರ್ಟ್ ಸಂಸ್ಥೆಯ 77 ಪ್ರತಿಶತ ಪಾಲುದಾರಿಕೆಯನ್ನ 16 ಬಿಲಿಯನ್ ಅಮೆರಿಕನ್ ಡಾಲರ್ ಕೊಟ್ಟು ಖರೀದಿಸಿದ್ದು, ಫ್ಲಿಪ್ ಕಾರ್ಟ್ ಸಂಸ್ಥೆಯ ಒಟ್ಟು ಮೌಲ್ಯ 20 ಬಿಲಿಯನ್ ಡಾಲರಿಗೂ ಹೆಚ್ಚು ಎನ್ನುವುದಾಗಿದೆ.
ಈಗ ಸಹಜವಾಗೇ ಇದೇನಿದು ವ್ಯಾಲ್ಯುವೇಶನ್? ಈ ವ್ಯಾಲ್ಯುವೇಶನ್ ಅಂದರೆ ಮೌಲ್ಯವನ್ನ ಇಷ್ಟೇ ಎಂದು ಹೇಗೆ ನಿರ್ಧರಿಸುತ್ತಾರೆ? ಫ್ಲಿಪ್ ಕಾರ್ಟ್ ಸಂಸ್ಥೆ ಸಾವಿರಾರು ಕೋಟಿ ನಷ್ಟದಲ್ಲಿ ಇದ್ದರೂ ಅದರ ಮೌಲ್ಯವನ್ನ ಹೇಗೆ 20 ಬಿಲಿಯನ್ ಗೂ ಹೆಚ್ಚು ಎಂದು ನಿರ್ಧರಿಸಿದರು ಎನ್ನುವ ಕುತೊಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಇಂದಿನ ಹಣಕಾಸು ಅಂಕಣದಲ್ಲಿ ಆರಂಭದಿಂದ ಅಂದರೆ ಮೌಲ್ಯಮಾಪನ ಅಂದರೇನು ಎನ್ನುವುದರಿಂದ ಹಿಡಿದು ಫ್ಲಿಪ್ ಕಾರ್ಟ್ ಮೌಲ್ಯಮಾಪನದವರೆಗಿನ ವಿಷಯಗಳನ್ನ ತಿಳಿದುಕೊಳ್ಳೋಣ.
ವ್ಯವಹಾರ ಮೌಲ್ಯಮಾಪನ ಅಥವಾ ಬಿಸಿನೆಸ್ ವ್ಯಾಲ್ಯುವೇಶನ್ ಎಂದರೇನು?
ಒಂದು ಸಂಸ್ಥೆಯ ಒಟ್ಟು ಆರ್ಥಿಕ ಮೌಲ್ಯ ಅಥವಾ ಬೆಲೆ ಎಷ್ಟು ಎಂದು ಅಳೆಯುವ ಪ್ರಕ್ರಿಯೆಗೆ ವ್ಯವಹಾರ ಮೌಲ್ಯಮಾಪನ ಎನ್ನುತ್ತಾರೆ. ಸಾಮನ್ಯವಾಗಿ ಈ ರೀತಿಯ ಮೌಲ್ಯಮಾಪನವನ್ನ ಎಲ್ಲಾ ದೊಡ್ಡ ಸಂಸ್ಥೆಗಳು ವರ್ಷಕೊಮ್ಮೆ ಮಾಡಿಸಿಕೊಳ್ಳುತ್ತವೆ. ಈ ರೀತಿಯ ಮೌಲಿಮಾಪನ ಮಾಡಿಸಿಕೊಳ್ಳಲು ಪ್ರಮುಖ ಕಾರಣಗಳು:
- ನಾಳೆ ಈ ಸಂಸ್ಥೆಯನ್ನ ಮಾರಬೇಕಂದರೆ ಎಷ್ಟಕ್ಕೆ ಮಾರಬಹದು ಅಥವಾ ಕೊಳ್ಳುವರಿಗೆ ಎಷ್ಟು ಬೆಲೆಯನ್ನ ಹೇಳಬೇಕು ಎನ್ನುವ ನಿಖರತೆಗಾಗಿ.
- ಹೊಸ ಪಾಲುದಾರ ಸಂಸ್ಥೆಗೆ ಬರುವುದಿದ್ದರೆ ಆತನಿಂದ ಎಷ್ಟು ಹಣವನ್ನ ಸಂಸ್ಥೆಗೆ ಪಡೆಯಬೇಕು ಎನ್ನುವುದನ್ನ ತಿಳಿಯಲು.
- ಪಾಲುದಾರನೊಬ್ಬ ಸಂಸ್ಥೆಯಿಂದ ಬೇರ್ಪಡಲು ಬಯಸಿದರೆ ಆತನಿಗೆ ಎಷ್ಟು ಹಣ ನೀಡಿ ಹೊರಗೆ ಕಳಿಸಬೇಕು ಎಂದು ನಿರ್ಧರಿಸಲು.
- ಹಾಗೂ ಸಂಸ್ಥೆಯ ಷೇರುದಾರರಿಗೆ ಸಂಸ್ಥೆಯ ಬೆಲೆ ಇಷ್ಟಿದೆ ಎಂದು ಹೇಳಲು, ಅಂದರೆ ಮೇಲಿನ ಮೂರು ಸನ್ನಿವೇಶವಿರದಿದ್ದರೂ ಸಾಮಾನ್ಯವಾಗಿ ವರ್ಷಕೊಮ್ಮೆ ಮಾಡಿಸಲಾಗುತ್ತದೆ.
ವ್ಯಾಲ್ಯುವೇಶನ್ ಹೇಗೆ ಮಾಡಲಾಗುತ್ತದೆ? ಇದರಲ್ಲಿ ಎಷ್ಟು ವಿಧಗಳಿವೆ?
ಮೌಲ್ಯಮಾಪನವನ್ನ ಹಲವು ರೀತಿಯಲ್ಲಿ ಮಾಡಬಹದು, ಇಲ್ಲಿ ಈಗ ಹೇಳಹೊರಟಿರುವ ವಿಧಗಳಷ್ಟೇ ಎಂದು ಹೇಳಲು ಬರುವುದಿಲ್ಲ. ಇವುಗಳು ಪ್ರಮುಖವಾಗಿ ಮತ್ತು ಅತ್ಯಂತ ಸಾಮನ್ಯವಾಗಿ ಮೌಲ್ಯಮಾಪನ ಪ್ರಕ್ರಿಯೆಗಳಲ್ಲಿ ಬಳಸಲಾಗುತ್ತದೆ ಅಷ್ಟೇ.
ಮಾರ್ಕೆಟ್ ಕ್ಯಾಪಿಟಲೈಸೇಶನ್ ವಿಧಾನ: ಒಂದು ಸಂಸ್ಥೆಯ ಎಲ್ಲಾ ಷೇರುದಾರರ ಬಳಿ ಇರುವ ಷೇರಿನ ಸಂಖ್ಯೆಯನ್ನ ಕೂಡಿಸಿ, ಷೇರು ಮಾರುಕಟ್ಟೆಯಲ್ಲಿ ಕೊನೆಯ ದಿನ ಇದ್ದ ಷೇರಿನ ಬೆಲೆಯಿಂದ ಗುಣಿಸಿದಾಗ ಬರುವ ಸಂಖ್ಯೆಯನ್ನ ಆ ಸಂಸ್ಥೆಯ ಮೌಲ್ಯ ಎಂದು ಕರೆಯಲಾಗುತ್ತದೆ. ಇದೊಂದು ಅತ್ಯಂತ ಸರಳ ವಿಧಾನವಾಗಿದೆ. ಉದಾಹರಣೆ ನೋಡಿ. ರಾಮ ಸಂಸ್ಥೆಯ ಷೇರುದಾರರ ಬಳಿ ಇರುವ ಒಟ್ಟು ಷೇರಿನ ಸಂಖ್ಯೆ 1೦೦೦ ಎಂದುಕೊಳ್ಳಿ. ಷೇರು ಮಾರುಕಟ್ಟೆಯಲ್ಲಿ ರಾಮ ಸಂಸ್ಥೆಯ ಷೇರಿನ ಬೆಲೆ 25 ರೂಪಾಯಿ ಎಂದುಕೊಳ್ಳಿ. 1೦೦೦ವನ್ನ 25 ರಿಂದ ಗುಣಿಸಿದಾಗ ಬರುವುದು 25 ಸಾವಿರ. ಅಂದರೆ ರಾಮ ಸಂಸ್ಥೆಯ ಮೌಲ್ಯ 25 ಸಾವಿರ.
ಆದಾಯ ಗುಣಿಸುವ ವಿಧಾನ: ಈ ವಿಧಾನದಲ್ಲಿ ಸಂಸ್ಥೆಯ ಆದಾಯವನ್ನ 1 ರಿಂದ 5 ರವರೆಗೆ ಸಂಸ್ಥೆ ಯಾವ ವ್ಯವಹಾರ ನೆಡೆಸುತ್ತಿದೆ ಎನ್ನುವ ಆಧಾರದ ಮೇಲೆ ಗುಣಿಸಲಾಗುತ್ತದೆ. ಹೀಗೆ ಬರುವ ಸಂಖ್ಯೆಯನ್ನ ಆ ಸಂಸ್ಥೆಯ ಮೌಲ್ಯ ಎನ್ನಲಾಗುತ್ತದೆ. ಉದಾಹರಣೆ ನೋಡೋಣ. ಒಂದು ಟೆಕ್ನಾಲಜಿ ಕಂಪನಿಯ ಒಟ್ಟು ಆದಾಯ (ರೆವೆನ್ಯೂ ) ಸಾವಿರ ರೂಪಾಯಿ ಎಂದುಕೊಳ್ಳಿ. ಟೆಕ್ ಕಂಪನಿಗಳ ವಿಶ್ವಾಸಾರ್ಹತೆ ಹೆಚ್ಚಾಗಿದೆ ಹೀಗಾಗಿ ಇದನ್ನ 3/4 ರಿಂದ ಗುಣಿಸಬಹದು. ಅಂದರೆ ಸಂಸ್ಥೆಯ ಮೌಲ್ಯ 3/4 ಸಾವಿರ ಎನ್ನಬಹದು. ಇಷ್ಟೇ ಆದಾಯ ಅಂದರೆ ಸಾವಿರ ರೂಪಾಯಿ ಆದಾಯ ಇರುವ ಸೇವೆ ನೀಡುವ ಸಂಸ್ಥೆಯ ಮೌಲ್ಯವನ್ನ ಗುಣಿಸಲು 0.5 ಅಥವಾ 1 ನ್ನು ಬಳಸಲಾಗುತ್ತದೆ. ಸರ್ವಿಸ್ ಇಂಡಸ್ಟ್ರಿಯಲ್ಲಿರುವ ತಲ್ಲಣಗಳು ಇದಕ್ಕೆ ಕಾರಣ. ಹೀಗಾಗಿ ಇವುಗಳ ಮೌಲ್ಯ ಆದಾಯಕ್ಕಿಂತ ಕಡಿಮೆ ಅಥವಾ ಆದಾಯದಷ್ಟೇ ಇರುತ್ತದೆ.
ಲಾಭವನ್ನ ಗುಣಿಸುವ ವಿಧಾನ: ಎರಡನೇ ವಿಧಾನದಲ್ಲಿ ಆದಾಯವನ್ನ ಮೂಲವನ್ನಾಗಿ ಇರಿಸಿಕೊಳ್ಳಲಾಗಿತ್ತು. ಆದರೆ ಆದಾಯ ನಿಖರ ಲೆಕ್ಕ ನೀಡುವುದಿಲ್ಲ. ಕೆಲವೊಮ್ಮೆ ಆದಾಯಕ್ಕಿಂತ ಖರ್ಚು ಹೆಚ್ಚಿರುತ್ತದೆ. ಹೀಗಾಗಿ ಲಾಭವನ್ನ ಮೂಲವನ್ನಾಗಿ ಇರಿಸಿಕೊಳ್ಳಲಾಗುತ್ತದೆ. ಅಂದರೆ ಒಂದು ಟೆಕ್ ಸಂಸ್ಥೆಯ ಲಾಭ (ಆದಾಯದಿಂದ ಖರ್ಚನ್ನ ಕಳೆದು ಮಿಕ್ಕದ್ದು) ನೂರು ರೂಪಾಯಿ ಎಂದು ಕೊಂಡರೆ ಅದನ್ನ 3 ರಿಂದ ಗುಣಿಸಿದರೆ ಆ ಸಂಸ್ಥೆಯ ಮೌಲ್ಯ 3೦೦ ರೂಪಾಯಿ.
ಡಿಸ್ಕೌಂಟೆಡ್ ಕ್ಯಾಶ್ ಫ್ಲೋ ಮೆಥಡ್: ಇದರಲ್ಲಿ ಮೂರನೇ ವಿಧಾನವಾದ ಲಾಭವನ್ನ ಗುಣಿಸುವ ವಿಧಾನವನ್ನ ಬಳಸಲಾಗುತ್ತದೆ, ಆದರೆ ಇಲ್ಲಿ ಮುಂಬರುವ ವರ್ಷಗಳ ಲಾಭವನ್ನ ಕೂಡ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮುಂಬರುವ ವರ್ಷಗಳ ಲಾಭವನ್ನ ಲೆಕ್ಕ ಹಾಕುವಾಗ ಹಣದುಬ್ಬರವನ್ನ ಕೂಡ ಗಣನೆಗೆ ತೆಗೆದುಕೊಳ್ಳುವುದರಿಂದ ಸಹಜವಾಗೇ ಈ ವಿಧಾನದಲ್ಲಿ ಸಂಸ್ಥೆಯ ಮೌಲ್ಯ ಹೆಚ್ಚಾಗಿರುತ್ತದೆ.
ಇವಲ್ಲದೆ, ಬುಕ್ ವ್ಯಾಲ್ಯೂ ವಿಧಾನ, ಲಿಕ್ವಿಡೇಷನ್ ವಿಧಾನ, ಬ್ರೇಕ್ ಅಪ್ ವ್ಯಾಲ್ಯೂ, ಅಸೆಟ್ ವ್ಯಾಲ್ಯುವೇಶನ್ ಹೀಗೆ ಇನ್ನೂ ಹಲವು ವಿಧಾನಗಳಿವೆ.
ಸರಿ ಮೇಲಿನ ಯಾವುದೇ ವಿಧಾನದಲ್ಲಿ ಮೌಲ್ಯಮಾಪನ ಮಾಡಿದರೂ ಫ್ಲಿಪ್ ಕಾರ್ಟ್ ಗೆ ಅಷ್ಟು ಮೌಲ್ಯ ಸಿಗುವುದಾ? ಇದಕ್ಕೆ ಉತ್ತರ ಇಲ್ಲ. ಹಾಗಾದರೆ ಇಷ್ಟೊಂದು ಮೊತ್ತಕ್ಕೆ ವಾಲ್ ಮಾರ್ಟ್ ಏಕೆ ಖರೀದಿಸಿತು? ಎನ್ನುವುದನ್ನ ವಿವರವಾಗಿ ವಿವರಿಸಲು ಇನ್ನೊಂದು ಪ್ರತ್ಯೇಕ ಲೇಖನ ಬರೆಯಬೇಕಾದೀತು. ಮಾರುಕಟ್ಟೆಯನ್ನ ಆಕ್ರಮಿಸಲು ವಾಲ್ ಮಾರ್ಟ್ ಗೆ ಬೇಕಾಗಿದ್ದ ಲಾಂಚ್ ಪ್ಯಾಡ್ ಫ್ಲಿಪ್ ಕಾರ್ಟ್ ಒದಗಿಸಿಕೊಟ್ಟಿದೆ. ಹೀಗಾಗಿ ವಾಲ್ ಮಾರ್ಟ್ ಫ್ಲಿಪ್ ಕಾರ್ಟ್ ನ ವ್ಯಾಲ್ಯೂವೇಶನ್ ವಿಧಾನವಾದ ಗ್ರಾಸ್ ಮರ್ಚಂಡೈಸ್ ವಾಲ್ಯೂಮ್ (GMV) ವಿಧಾನದ ಮೌಲ್ಯವನ್ನ ಒಪ್ಪಿ ಕೊಟ್ಟಿದೆ.
ಏನಿದು ಗ್ರಾಸ್ ಮರ್ಚಂಡೈಸ್ ವಾಲ್ಯೂಮ್ ವಿಧಾನ?
ಈ ವಿಧಾನವನ್ನ e -ಕಾಮರ್ಸ್ ಸಂಸ್ಥೆಗಳ ಮೌಲ್ಯವನ್ನ ಅಳೆಯಲು ಬಳಸಲಾಗುತ್ತದೆ. ಇಲ್ಲಿ ಗ್ರಾಹಕನಿಗೆ ಮಾರಿದ ವಸ್ತುವಿನ ಬೆಲೆಯನ್ನ ಒಟ್ಟು ಎಷ್ಟು ವಸ್ತು ಮಾರಲಾಯಿತು ಅದರೊಂದಿಗೆ ಗುಣಿಸಿ ಬರುವ ಮೊತ್ತವನ್ನ ಮೌಲ್ಯ ಎನ್ನಲಾಗುತ್ತದೆ.
ಉದಾಹರಣೆ ನೋಡಿ ಫ್ಲಿಪ್ ಕಾರ್ಟ್ ಹತ್ತು ಪುಸ್ತಕವನ್ನ ಒಂದಕ್ಕೆ ನೂರರಂತೆ ಮಾರಿದರೆ ಒಟ್ಟು ಮೊತ್ತ ಸಾವಿರವಾಯಿತು, ಹೀಗೆ ಮಾರಿದ ಎಲ್ಲಾ ವಸ್ತುಗಳ ಬೆಲೆಯನ್ನ ಒಟ್ಟುಗೂಡಿಸಿ ಅದನ್ನ ಆ ಸಂಸ್ಥೆಯ ಮೌಲ್ಯ ಎನ್ನಲಾಗಿದೆ. ಜೊತೆಗೆ ಇಲ್ಲಿ ರನ್ ರೇಟ್ ಅಂದರೆ ಮುಂಬರುವ ವರ್ಷಗಳಲ್ಲಿ ಈ ಸಂಸ್ಥೆ ಇನ್ನೆಷ್ಟು ಉತ್ಪನ್ನಗಳನ್ನ ಮಾರಬಹದು? ಎನ್ನುವುದನ್ನ ಕೂಡ ಅಂದಾಜಿಸಿ ಹಣದುಬ್ಬರವನ್ನ ಕೂಡ ಪರಿಗಣಿಸಿ ಮೌಲ್ಯವನ್ನ ನಿರ್ಧರಿಸಲಾಗುತ್ತದೆ. ವಿಧಾನ ಯಾವುದೇ ಇರಲಿ ಕೊಳ್ಳುವ ಸಂಸ್ಥೆಗೆ ಮುಂಬರುವ ದಿನಗಳಲ್ಲಿ ತಾವು ಕೊಳ್ಳುತ್ತಿರುವ ಸಂಸ್ಥೆ ಲಾಭ ನೀಡುತ್ತದೆ ಎನ್ನುವ ಅಗಾಧ ನಂಬಿಕೆ, ಅಥವಾ ಕೊಂಡ ಮೇಲೆ ಆ ಸಂಸ್ಥೆಯನ್ನ ನೆಡೆಸಲು ಅವರ ಬಳಿ ಇರುವ ಅತ್ಯಂತ ನಿಖರ ಬಿಸಿನೆಸ್ ಪ್ಲಾನ್ ಮಾತ್ರವೇ ಕೇಳಿದಷ್ಟು ಹಣ ಕೊಟ್ಟು ಕೊಳ್ಳಲು ಪ್ರೇರೇಪಿಸುವ ಅಂಶ. ವಾಲ್ ಮಾರ್ಟ್ ಭಾರತದ ನೆಲದಲ್ಲಿ ಭದ್ರವಾಗಿ ನೆಲೆಯೂರಲು ಫ್ಲಿಪ್ ಕಾರ್ಟ್ ಒಂದು ದಾರಿ, ಆ ದಾರಿಯಲ್ಲಿ ಮುಂದಿನ ಪ್ರಯಾಣ ಹೇಗಿರುತ್ತದೆ? ಫ್ಲಿಪ್ ಕಾರ್ಟ್ ಗೆ ತೆತ್ತ ಹಣ ಸರಿಯೇ? ಇದಕ್ಕೆ ಕಾಲವೇ ಉತ್ತರ ಹೇಳಲಿದೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Hanaclassuಹಣಕ್ಲಾಸುFlipkart-Walmart dealBusiness valuationಫ್ಲಿಪ್ ಕಾರ್ಟ್-ವಾಲ್ಮಾರ್ಟ್ಬ್ಯುಸಿನೆಸ್ ವ್ಯಾಲ್ಯುವೇಶನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


