ಅಂಕಣಗಳು

ಮಂಗಳದ ಅಂಚಿನಲ್ಲೇ ಮೃತ್ಯು ಪ್ರತ್ಯಕ್ಷ!

ಸುಂಟರಗಾಳಿಯ ಹಿಂದೆ ಕೆಂಪು ಕಣ್ಣುಗಳು. ಪೊದೆಯಂತೆ ಬೆಳೆದ ಕರ್ಕಶ ಕೂದಲ ಮಧ್ಯದ ಕಪ್ಪು ಮುಖ. ಉಸಿರಾಡಿದರೆ ಬೆಂಕಿಯ ಕಿಡಿಗಳು ಉದುರಿದಂತೆ. ನಡೆದು ಬರುತ್ತಿದ್ದರೆ ಭೂಮಿ ನಡುಗುತ್ತಿದೆ. ಆ ಕ್ರೂರ ಕೃಷ್ಣ...

ಮಂಗಳದ ಅಂಚಿನಲ್ಲೇ ಮೃತ್ಯು ಪ್ರತ್ಯಕ್ಷ!
ರಾಮಾಯಣ ಅವಲೋಕನ
Published On :
(ಆತ್ಮೀಯರೇ, ನಡೆಯುತ್ತಿರುವ ವಿವಾಹಗಳನ್ನೂ, ಅವುಗಳ ವಿಧಿಗಳನ್ನೂ, ಆ ಆರ್ಭಟವನ್ನೂ, ಆ ದುಂದುವೆಚ್ಚವನ್ನೂ, ಬಂಧು-ಬಾಂಧವರ ಹಾರಾಟವನ್ನೂ ಹಾಳಾಗುವ ಊಟದ ರಾಶಿಯನ್ನೂ, ಮದುವೆ ಮಾಡಿ ಸೋತು ಬಗ್ಗಿದ ಕನ್ಯಾ ಪಿತೃವನ್ನೂ, ಮಾವ ಕೊಟ್ಟ ಚಪ್ಪಳಿ, ಸೂಟು, ಗಡಿಯಾರ, ವಾಹನಗಳಿಗೆ ತನ್ನನ್ನು ಮಾರಿಕೊಂಡ ಭಂಡ ಗಂಡುಗಳನ್ನೂ ಕಂಡು, "ಏನಿದು, ನಮ್ಮ ವೈದಿಕ ವಿವಾಹ ಇಷ್ಟು ಸಂಕೀರ್ಣವೇ? ವಧುವಿನ ತಂದೆಯನ್ನು ಸುಲಿಗೆ ಮಾಡುತ್ತಿದ್ದಾರಲ್ಲ?.... ಇತ್ಯಾದಿ ನೋವಿನ ಚಿತ್ಕಾರ ಮಾಡುತ್ತೇವೆ. ಆದರೆ ನೋಡಿದಿರಲ್ಲ; ಶ್ರೀರಾಮರ ವಿವಾಹವನ್ನು? ಶ್ರೀಮದ್ ರಾಮಾಯಣದಲ್ಲಿ ಇದಕ್ಕಿನ್ನ ಹೆಚ್ಚಿಲ್ಲ. ಮೂರೇ ಘಟ್ಟಗಳನ್ನು ಅದರಲ್ಲಿ ಹೆಸರಿಸಿದೆ.
ಒಂದು:- (ಶ್ರಾದ್ಧಂ ಕೃತ್ವಾ ವಿಧಾನತಃ ಚಕ್ರೇ ಗೋದಾನಮುತ್ತಮಂ)
ಎರಡು:- (ಪ್ರತೀಚ್ಛ ಚೈನಾಂ ಭದ್ರಂತೇ ಪಾಣಿಂ ಗೃಹ್ಣೀಷ್ವ ಪಾಣಿನಾ)
ಮೂರನೆಯದು:- (ಅಗ್ನಿಂ ಪ್ರದಕ್ಷಿಣಂ ಕೃತ್ವಾ) ಇಷ್ಟೇ. ಈ ಪ್ರದಕ್ಷಿಣೆಯನ್ನೇ ಸಪ್ತಪದಿಯನ್ನಾಗಿ ಸೇರಿಸಿದ್ದಾರೆ ಈಗ. ಅದು ಇಂದಿನ ಕಾನೂನಿನ ವ್ಯವಸ್ಥೆಯಲ್ಲಿ ಅತ್ಯಂತ ಪ್ರಧಾನವಾದ ವಿವಾಹಾಂಗ.
ಎಂದೋ, ಎಷ್ಟೋ ಶತಮಾನಗಳ ಹಿಂದೆ ಬಂಧು-ಬಾಂಧವರು ಸೇರುತ್ತಿದ್ದುದೇ ಅಪೂರ್ವವಾಗಿದ್ದಾಗ, ಜೊತೆಗೆ ಸುಭಿಕ್ಷವಿದ್ದಾಗ, ಇಡೀ ಹಳ್ಳಿಗೆ ಹಳ್ಳಿಯೇ ಮದುವೆಯಲ್ಲಿ ಭಾಗವಹಿಸುತ್ತಿದ್ದಾಗ ಇಂತಹ ಮೂರ್ನಾಲ್ಕು ದಿನಗಳ ಮದುವೆ ಚೆನ್ನಾಗಿತ್ತು. ಇಂದು ಅದರ ಅಗತ್ಯವಿಲ್ಲ. ಶ್ರೀರಾಮರಂತಹ ರಾಜಪುತ್ರರೇ ಅತ್ಯಂತ ಸರಳವಾಗಿ ವಿವಾಹವಾದರು. ಅವರನ್ನು ಮಾನ್ಯ ಮಾಡುವ ನಾವಾದರೂ ಅದ್ದೂರಿಗೆ ಶರಣಾದರೆ, ಇನ್ನು ಶ್ರೀಮದ್ ರಾಮಾಯಣವನ್ನು ಓದಿ ಏನು ಪ್ರಯೋಜನ? ಶ್ರೀರಾಮರನ್ನು ದೇವರೆಂದೊಪ್ಪಿ, ಗುಡಿ ಕಟ್ಟಿ ಪೂಜೆ ಮಾಡಿ, ಮಂಗಳಾರತಿಗೆ ಕೈ ಬಿಸಿ ಮಾಡಿ, ಪ್ರಸಾದ ಸ್ವೀಕರಿಸುವ ನಾವು ಈ ವಿಷಯದಲ್ಲಿ ಏಕೆ ಶ್ರೀರಾಮರನ್ನು ಅನುಸರಿಸಬಾರದು? ನಾಲ್ಕು ಮಂದಿ ಸಹೋದರರಿಗೆ ವಿವಾಹ ಮಾಡಿಸುವಾಗ ಜನಕ ಹೇಳುವುದು ಪಾಣಿಗ್ರಹಣ ಮಾತ್ರ. ನೋಡಿ; ಲಕ್ಷ್ಮಣನಿಗೆ (ಪ್ರತೀಕ್ಷ ಪಾಣಿಂ ಗೃಹ್ಣೀಷ್ವ), ಭರತನಿಗೆ (ಪಾಣಿಂ ಗೃಹಾಣ ಮಾಂಡವ್ಯಾಃ),
ಶತ್ರುಘ್ನನಿಗೆ (ಶೃತಕೀರ್ತ್ಯಾ ಮಹಾಬಾಹೋ ಪಾಣಿಂ ಗೃಹ್ಣೀಷ್ವ ಪಾಣಿನಾಂ)
ಎಂದಮೇಲೆ ಕೇವಲ ಪಾಣಿಗ್ರಹಣ ಮಾತ್ರವೇ ವಿವಾಹದ ಅನಿವಾರ್ಯ ಅಂಗ. ಇಷ್ಟೇ ಆಗಿಬಿಟ್ಟರೆ ಎಷ್ಟು ಹಣ, ಎಷ್ಟು ಸಮಯ ಉಳಿಯುತ್ತದೆ! ಹಣ ಇದ್ದವರು ಕೂಡ ಸರಳವಾಗಿ ವಿವಾಹ ಮಾಡಿ ಅನ್ಯರಿಗೆ, ವಿಶೇಷವಾಗಿ ಬಡವರಿಗೆ ಮಾರ್ಗದರ್ಶಕರಾಗಬಾರದೇ? ಯಾಗಕುಂಡ, ಮಾವು, ಬಾಳೆ, ಮಂಗಳವಾದ್ಯಗಳು, ಇವುಗಳ ಬಗ್ಗೆ ಶ್ರೀರಾಮರ ವಿರೋಧ ಇಲ್ಲ ಎನ್ನುವುದನ್ನು ನಾವು ನೆನಪಲ್ಲಿಡಬೇಕು. ವೈದಿಕ ಕ್ರಿಯೆಗಳು ಮಂತ್ರಾಲಿಂಗಿತ. ಅದು ವಿವಾಹದಲ್ಲಿರಲೇ ಬೇಕು. ಅಂತು ದಾನಕಾರ್ಯಗಳಿಗೆ ಶ್ರೀರಾಮರ ಒಪ್ಪಿತವಿದ್ದೇ ಇದೆ. ಅನಗತ್ಯ ಆಚರಣೆಗಳನ್ನು ಬಿಟ್ಟು, ಅಸಂಖ್ಯ ಭೂರಿ ಭೋಜನಕ್ಕೆ ವಿದಾಯ ಹೇಳಿ, ಹಣವಿದ್ದರೆ ಅರ್ಹರಿಗೆ ದಾನ ಮಾಡಿ. ಅಷ್ಟೇ. ದಯವಿಟ್ಟು ನೆನಪಿನಲ್ಲಿಡಲೇಬೇಕಾದ ಅಂಶವೆಂದರೆ ವಿವಾಹದ ಮರುದಿನವೇ ಅವರು ಸ್ವರಾಜ್ಯಾಭಿಮುಖವಾದದ್ದು. ಇದು ಶ್ರೀರಾಮ ವಿವಾಹ ಸೂತ್ರ. ಒಂದು ಪುಟ್ಟ ಪದ್ಯದಿಂದ ರಾಮ-ಸೀತಾ ವಿವಾಹ ಪ್ರಕರಣವನ್ನು ಮುಗಿಸೋಣವೇ? 
(ಗುಣಗಣಿರಾಮರ ಶುಭ ಕಲ್ಯಾಣ
ನಡೆಯಿತು ಸರಳ ವಿಧಾನದಲಿ
ವರದಕ್ಷಿಣೆ ಮಾತೆಂಬುದೆ ಇಲ್ಲ 
ವರನ ಮುಗಿಯದಾ ಬೇಡಿಕೆ ಇಲ್ಲ
ಜಾತಕ-ಕೂಟದ ಕೊರಲುರುಲಿಲ್ಲ
ವಧುವಿನ ಪರೀಕ್ಷೆ ನಡೆಸಲೆ ಇಲ್ಲ
ಲಗ್ನ ಪತ್ರಿಕೆಯ ಬಾವುಟವಿಲ್ಲ
ಮನೆ - ಮನೆ ನುಗ್ಗಿ ಕರೆಯಲೆ ಇಲ್ಲ
ಸೀತಾ ಕುವರಿಯ ಮಂಗಳ ಮದುವೆ
ನಡೆಯಿತು ಬೆಳೆದಾ ಮನೆಯೊಳಗೆ
ಗುಣಗಣಿ ರಾಮರ ಶುಭ ಕಲ್ಯಾಣ 
ನಡೆಯಿತು ಸರಳ ವಿಧಾನದಲಿ
ಗಂಡಿನ ಗೆಳೆಯರ ಗರ್ಜನೆ ಇಲ್ಲ
ಸಾವಿರ ಸಾವಿರ ಅತಿಥಿಗಳಿಲ್ಲ
ವರಪೂಜೆಯ ಆ ನಾಟಕವಿಲ್ಲ
ಕಾಶಿ ಯಾತ್ರೆಯನು ಅಣಕಿಸಲಿಲ್ಲ
ಹಲವು ದಿನಗಳಾ ಮದುವೆ ಅದಲ್ಲ 
ಕನ್ಯಾ ಪಿತೃವು ಕುಗ್ಗಲೆ ಇಲ್ಲ 
ಸೀತಾ ರಾಮರ ಸುಲಭ ವಿವಾಹ 
ಮುಗಿಯಿತು ಒಂದೇ ಘಂಟೆಯಲಿ)
**************
ವಿಶ್ವಮಿತ್ರರು ವಸಿಷ್ಠರಿಗೆ ವಂದಿಸಿ, ಉಳಿದವರಿಗೆ ಆಶೀರ್ವಾದ ಮಾಡಿ ಹಿಮಾಲಯಕ್ಕೆ ಹೊರಟಿದ್ದಾರೆ. ಬಹುಶಃ ಇನ್ನವರು ಸದ್ಯದಲ್ಲಿ ಬರುವ ಮಾತಿಲ್ಲ. ತಮ್ಮ ಪಾತ್ರ ಮುಗಿಯುತ್ತಿದ್ದಂತೆಯೇ ನಿರ್ಗಮಿಸಿದ ವಿರಕ್ತ ಪಾತ್ರದಂತೆ ಹೊರಟುಬಿಟ್ಟರು. ಅವರಿಗೊಂದು ವಿದಾಯ ಹೇಳಿಬಿಡೋಣವೇ? ಶ್ರೀರಾಮರಿಗೆ ಗುರುಗಳಾಗಿ, ಋಗ್ವೇದದ ಮೂರನೆಯ ಮಂಡಲದ ದಾರ್ಶನಿಕರಾಗಿ, ಸವಿತೃ ಮಂತ್ರವನ್ನು ಭಾರತೀಯರಿಗಿತ್ತ ಆ ಮಹರ್ಷಿ, ಹರಿಶ್ಚಂದ್ರನಿಗೆ ಸತ್ಯ ಹರಿಶ್ಚಂದ್ರನೆಂದು ಕರೆವಂತೆ ಮಾಡಿ, ತ್ರಿಶಂಕುವನ್ನು ಸ್ವರ್ಗಕ್ಕೆ ಕಳುಹಿಸಿ, ಶಕುಂತಲೆಗೆ ತಂದೆಯಾಗಿ,  ಭರತನ ಪಿತಾಮಹರಾಗಿ, ನಮ್ಮೀ ದೇಶಕ್ಕೆ "ಭಾರತ" ಎಂಬ ಹೆಸರು ಬರಲು ಕಾರಣರಾಗಿ ನಮ್ಮೆಲ್ಲರಿಗೂ, ಭಾರತೀಯರಿಗೆಲ್ಲ ಗುರು ವೃದ್ಧರಾದ ವಿಶ್ವಮಿತ್ರರೇ, ನಿಮಗೆ ನಮಸ್ಕಾರ.
*********
ಮಕ್ಕಳೊಡನೆ ನಲಿಯುತ್ತ, ಆಗಾಗ ಗುರುಗಳೊಡನೆ ಮಾತನಾಡುತ್ತಾ ಸಂತುಷ್ಟ ಚಿತ್ತನಾಗಿದ್ದ ದಶರಥ ಇದ್ದಕ್ಕಿದ್ದಂತೆಯೇ ನಡುಗಿಬಿಟ್ಟ. ಎದುರು ದಿಕ್ಕಿನಿಂದ ಸುಂಟರ ಗಾಳಿ. ತನ್ನನ್ನು  ಸುತ್ತುಗಟ್ಟುವಂತೆ ಸುತ್ತಿ-ಸುತ್ತಿ ಬರುತ್ತಿದೆ ಗಾಳಿ. ಎಲೆ, ಮಣ್ಣು, ಎಲ್ಲವನ್ನೂ ತಿರುಗಿಸುತ್ತಾ ಬೀಸುತ್ತಿದೆ ಗಾಳಿ. ಕುದರೆಗಳು ಬೆಚ್ಚಿ ಬಿದ್ದು, ಮುಂದೆ ನಡೆಯಲು ಮುಷ್ಕರ ಹೂಡುತ್ತಿವೆ. ಅನಾಹುತ ಪ್ರಾಣಿಗಳಿಗೆ ಬೇಗ ಗೊತ್ತಾಗುತ್ತದಂತೆ! ಮುಂದೆ ಹೋಗುತ್ತಲಿದ್ದ ಆನೆಗಳು ಘೀಳಿಡತೊಡಗಿದವು. ಮೋಡಗಳು ಮುಗಿಬಿದ್ದು ಮರಗಳು ಮುರಿದು ಬಿದ್ದವು. ಸೂರ್ಯ ಕಾಣದಾದ.  
ಸುಂಟರಗಾಳಿಯ ಹಿಂದೆ ಕೆಂಪು ಕಣ್ಣುಗಳು. ಪೊದೆಯಂತೆ ಬೆಳೆದ ಕರ್ಕಶ ಕೂದಲ ಮಧ್ಯದ ಕಪ್ಪು ಮುಖ. ಉಸಿರಾಡಿದರೆ ಬೆಂಕಿಯ ಕಿಡಿಗಳು ಉದುರಿದಂತೆ. ನಡೆದು ಬರುತ್ತಿದ್ದರೆ ಭೂಮಿ ನಡುಗುತ್ತಿದೆ. ಆ ಕ್ರೂರ ಕೃಷ್ಣ ಮುಖ ಹತ್ತಿರವಾಗುತ್ತಿದ್ದಂತೆಯೇ ದಶರಥನಿಗೆ ಪರಿಚಯದ ನೆನಪಾಯಿತು. ಬಿಳಿಚಿ ಹೋದ ಮುಖ, ತಲೆ ಸುತ್ತಿದಂತೆ. ವಸಿಷ್ಟೇತ್ಯಾದಿಗಳು ಆತನನ್ನು ಕಂಡು ಕೊಂಚ ಅಧೀರರಾಗಿ ಜಪ ಮಾಡಿಸಲು ಆರಂಭಿಸಿದರು. 
(ವಸಿಷ್ಠ ಪ್ರಮುಖಾಃ ಸರ್ವೇ ಜಪ ಹೋಮ ಪರಾಯಣಾಃ)
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.