ಕಪ್ಪುಹಣ: ನಾವೇ ಹಾಕಬೇಕಿದೆ ಕಡಿವಾಣ!
ಸೂರ್ಯ ಚಂದ್ರ ಇದ್ದಲ್ಲೆಲ್ಲಾ ಕಪ್ಪು ಹಣ ಇದೆ ಅನ್ನುವಷ್ಟು ಸಹಜವಾಗಿ ಹೋಗಿದೆ ಈ ಕಪ್ಪು ಹಣ. ಹೀಗೆ ಮಾಡಿ ಸಾಕು! ಕಪ್ಪು ಹಣ ದಾರುಣ ಸಾವು ಕಾಣದಿದ್ದರೆ ಕೇಳಿ.

Published On :
ಸೂರ್ಯ ಚಂದ್ರ ಇದ್ದಲ್ಲೆಲ್ಲಾ ಕಪ್ಪು ಹಣ ಇದೆ ಅನ್ನುವಷ್ಟು ಸಹಜವಾಗಿ ಹೋಗಿದೆ ಈ ಕಪ್ಪು ಹಣ. ನಮಗೆಲ್ಲ ಇದು ತಪ್ಪು ಅಂತ ಗೊತ್ತು ಆದರೂ ನಮ್ಮ ಕೈಲಾದ ಯೋಗದಾನ ಇದರಲ್ಲಿ ಇದೆ. ಅದನ್ನ ಮೊದಲಿಗೆ ಒಪ್ಪಿಕೊಳ್ಳೋಣ ಈ ಕಪ್ಪು ಹಣ ಏಕೆ ಶೇಖರಣೆಯಾಗುತ್ತದೆ ಎನ್ನುವುದ ತಿಳಿಯೋಣ, ಪರ್ಯಾಯದ ಬಗ್ಗೆ ಒಂದಷ್ಟು ಯೋಚಿಸೋಣ, ಬದಲಾವಣೆ ಕಡೆಗೆ ಒಂದು ಪುಟ್ಟ ಹೆಜ್ಜೆ ಹಾಕೋಣ ಬನ್ನಿ.
ಕಪ್ಪು ಹಣ ಏಕೆ ಶೇಖರಣೆಗೊಳ್ಳುತ್ತದೆ?
ಹಣ ಹುಟ್ಟುವ ಮುಂಚೆ, ಸಾಲವನ್ನ ಸಾಲ ಎನ್ನುವುದಕ್ಕೆ ಮುಂಚೆ ಕೂಡ ಶೇಖರಣೆ ನೆಡೆಯುತಿತ್ತು. ಇದೊಂದು ಮನುಷ್ಯನ ಹುಟ್ಟು ಗುಣ. ಬಹು ದೊಡ್ಡ ಸಂಸ್ಥೆಯ ಮುಖ್ಯಸ್ಥನಿರಬಹುದು ಅದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಕಸ ಗುಡಿಸುವನಿರಬಹದು ಎಲ್ಲರಿಗೂ ನಾಳಿನ ಬದುಕಿಗೆ ಒಂದಷ್ಟು ಶೇಖರಿಸಿಡಬೇಕು ಎನ್ನುವ ಹಪಾಹಪಿ ಮಾತ್ರ ಇದ್ದದ್ದೇ! ಹಣದ ಉಗಮ ಮನುಷ್ಯನ ಈ ಮೂಲಭೂತ ಗುಣಕ್ಕೆ ಹಾಲೆರೆದೆಂತಾಗಿದೆ. ಹಣದ ಉಗಮಕ್ಕೆ ಮುಂಚೆ ಒಂದಷ್ಟು ಶೇಖರಣೆಗೆ ಸೀಮಿತವಾಗಿದ್ದ ಆಸೆ, ಹಪಾಹಪಿಕೆ ಇದರಿಂದ ಲಾಗಾಮಿಲ್ಲದೆ ಕುದುರೆಯಂತಾಗಿದೆ, ಮುಂದಿನ ಪೀಳಿಗೆಗೆ ಎಂದು ಕೂಡಿಡುವ ಹುಚ್ಚು ಮನುಷ್ಯನನ್ನ ಆವರಿಸಿದೆ.
ಮೊದಲೇ ಹೇಳಿದಂತೆ ಇದರ ಹುಟ್ಟು ಇಂತಹ ದಿನದಿಂದ ಆಯ್ತು ಎಂದು ಹೇಳುವುದು ಕಷ್ಟ. ಆದರೆ ಸಮಾಜದಲ್ಲಿ ಒಂದು ಮಿತಿಯಲಿದ್ದ ಈ ಪಿಡುಗು ಇಡೀ ಪ್ರಪಂಚವನ್ನೇ ಆಕ್ರಮಿಸಲು ಶುರು ಮಾಡಿದ್ದು ಎರಡನೇ ಮಹಾಯುದ್ಧದ ನಂತರ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ಇತಿಹಾಸ ಹೇಳುತ್ತೆ.
ಎರಡನೇ ಮಹಾಯುದ್ಧದ ನಂತರ ಬ್ರಿಟಿಷ್ ಸರಕಾರ ಇತರ ದೇಶಗಳಿಂದ ತನ್ನ ದೇಶಕ್ಕೆ ಬರುತಿದ್ದ ಕೈಗಾರಿಕಾ ಉತ್ಪನ್ನಗಳ ಮೇಲೆ ನಿಬಂಧನೆ ಹೇರುತ್ತದೆ ಹೀಗಾಗಿ ವಸ್ತುಗಳ ಬೇಡಿಕೆ ಹೆಚ್ಚಾಗುತ್ತದೆ. ಸಾಲದು ಎನ್ನುವಂತೆ ಯುದ್ಧದ ಖರ್ಚು ವೆಚ್ಚ ತೂಗಿಸುವ ಸಲುವಾಗಿ ಪ್ರಜೆಗಳ ಮೇಲೆ ಹಾಕುತಿದ್ದ ತೆರಿಗೆಯ ಮೊತ್ತವನ್ನ ಸಾಕಷ್ಟು ಹೆಚ್ಚಿಸುತ್ತದೆ. ಪರಿಣಾಮ ವ್ಯಾಪಾರಿಗಳು ನಿಬಂಧಿತ ವಸ್ತುಗಳನ್ನ ಕಳ್ಳ ದಾರಿಯ ಮೂಲಕ ದೇಶಕ್ಕೆ ತರಲು ಶುರು ಮಾಡುತ್ತಾರೆ. ತಂದದ್ದನ್ನು ಕದ್ದು ಮುಚ್ಚಿ ಮಾರಲು ಶುರು ಮಾಡುತ್ತಾರೆ. ಕೊಂಡ ಪ್ರಜೆಗಳಿಗೂ ಒಂದಂಶ ಕಡಿಮೆ ಬೆಲೆಗೆ ಸಿಕ್ಕಿತು, ವ್ಯಾಪಾರಿಗಳ ಲಾಭವೂ ಹೆಚ್ಚಿತು. ಹೀಗೆ ಸರಕಾರಕ್ಕೆ ಕಟ್ಟಬೇಕಾದ ತೆರಿಗೆ ಕಟ್ಟದೆ ಸಂಗ್ರಹವಾದ ಹಣ 'ಕಪ್ಪು ಹಣ' 'ಡರ್ಟಿ ಮನಿ' 'ಬ್ಲಾಕ್ ಮನಿ' ಎನ್ನುವ ಹೆಸರುಗಳಿಂದ ಕುಖ್ಯಾತಿ ಪಡೆಯಿತು. ತೆರಿಗೆ ಲೆಕ್ಕಹಾಕಲು ಇಡಬೇಕಾದ ಲೆಕ್ಕ ಪತ್ರಗಳ ಜಂಜಾಟವಿಲ್ಲ ಜೊತೆಗೆ ಹೆಚ್ಚು ಲಾಭ! ಇವೆರೆಡೂ ವ್ಯಾಪಾರಿಗಳು ಮುಂದಿನ ದಿನಗಳಲ್ಲೂ ಇದನ್ನೇ ಮಾಡಲು ಪ್ರೇರೇಪಿಸಿತು. ಜಗತ್ತಿನಾದ್ಯಂತ ತಮ್ಮ ವಸಹಾತು ಹೊಂದಿ ಸೂರ್ಯ ಮುಳುಗದ ನಾಡು ಎನ್ನುವ ಹೆಸರು ಪಡೆದಿದ್ದ ಬ್ರಿಟನ್ ತನ್ನ ಈ ರೋಗವನ್ನ ಜಗತ್ತಿಗೆ ಬಳುವಳಿಯಾಗಿ ನೀಡಿತು. ಕೆಟ್ಟದ್ದ ಕಲಿಯಲು ಮತ್ತು ಅದಕ್ಕೆ ಹೊಂದಿಕೊಳ್ಳಲು ಯಾವ ತರಬೇತಿಯ ಅವಶ್ಯಕತೆ ಇಲ್ಲ ನೋಡಿ ಹೀಗಾಗಿ ಜಗತ್ತು ಇದನ್ನ ತೆರೆದ ಬಾಹುಗಳಿಂದ ಅಪ್ಪಿತು.
ಇಂದಿನ ದಿನಗಳಲ್ಲಿ ಮುಖ್ಯವಾಗಿ ಕಪ್ಪು ಹಣ ಶೇಖರಣೆಯಾಗುವುದು ಕೂಡ ನಿಬಂಧನೆ ವಿಧಿಸಿರುವ ವಸ್ತುಗಳ ಕಳ್ಳಸಾಗಣೆಯಿಂದ ಉದಾಹರಣೆಗೆ ಡ್ರಗ್ಸ್, ಆಯುಧಗಳ ಕಳ್ಳಸಾಕಾಣಿಕೆ, ವೇಶ್ಯಾವಾಟಿಕೆ, ಭಯೋತ್ಪಾದನೆ, ಲಂಚಗುಳಿತನ, ಹವಾಲಾ (ನೊಂದಾಯಿತ ಬ್ಯಾಂಕ್ ಅಲ್ಲದ ಜನ ಹಣ ವರ್ಗಾವಣೆ ಮಾಡುವ ಕ್ರಿಯೆ) ನಕಲಿ ನೋಟುಗಳ ಮುದ್ರಣ ಜೊತೆಗೆ ಇನ್ನು ಹಲವಾರು ರೀತಿಯ ವ್ಯವಸ್ಥಿತ ಕ್ರೈಂ ಗಳಿಂದ ಕಪ್ಪು ಹಣ ಶೇಖರಣೆಯಾಗುತ್ತದೆ.
ಕಪ್ಪು ಹಣ ಶೇಖರಣೆಯ ಪ್ರಮುಖ ತೊಂದರೆಯೆಂದರೆ ಮೊದಲಿಗೆ ವ್ಯವಸ್ಥೆಯೊಳಗೆ ಇನ್ನೊಂದು ಪರ್ಯಾಯ ವ್ಯವಸ್ಥೆ ಕಾರ್ಯ ನಿರ್ವಹಿಸಲು ಶುರು ಮಾಡುತ್ತದೆ. ಇದನ್ನ ಸರಿಯಾಗಿ ನಿರ್ವಹಿಸದೇ ಹೋದರೆ ಮೂಲ ವ್ಯವಸ್ಥೆಗೆ ಭಂಗ ತರುವಂತ ಮಟ್ಟಕ್ಕೆ ಈ ಪರ್ಯಾಯ ವ್ಯವಸ್ಥೆ ಬೆಳೆಯುತ್ತದೆ. ಸರಕಾರದ ಜೊತೆಗೆ ಸಮಾಜದ ಎಲ್ಲಾ ಕಾರ್ಯಾಂಗಗಳ ಮೇಲೆ ತನ್ನ ಪ್ರಭುತ್ವ ಸಾಧಿಸುತ್ತದೆ. ಎರಡೆನೆಯಾದಾಗಿ ಇದು ಲೆಕ್ಕಕ್ಕೆ ಸಿಗದ ವ್ಯವಹಾರವಾದುದರಿಂದ ಇದನ್ನ ನಮ್ಮ ಜಿಡಿಪಿ ಅಂಕಿ ಅಂಶದಲ್ಲಿ ಸೇರಿಸಲು ಬರುವುದಿಲ್ಲ. ನಮ್ಮ ಬಾಲ್ಯದಿಂದ ಇಂದಿನವರೆಗೆ ಭಾರತ ಮುಂದುವರಿಯುತ್ತಿರುವ ದೇಶವಾಗೇ ಉಳಿದಿರಲು ಮೂಲ ಕಾರಣ ಇದು. ಸರಕಾರಕ್ಕೆ ಸಿಗಬೇಕಾದ ತೆರಿಗೆ ಹಣ ಸಿಗದೇ ಹೋದ ಕಾರಣ ನೆಡೆಯಬೇಕಾದ ಅಭಿವೃದ್ಧಿ ಕೆಲಸಗಳು ನೆಡೆಯುವುದಿಲ್ಲ.
ಬೆರಳೆಣಿಕೆಯ ಒಂದಷ್ಟು ಜನ ಮಾತ್ರ ಇನ್ನಷ್ಟು ಬಲಿಷ್ಠರಾಗುತ್ತಾ ಹೋಗುತ್ತಾರೆ. ಇದೊಂದು ವಿಷ ವರ್ತುಲ ಇದನ್ನ ಮುರಿಯದೆ 'ಅಭಿವೃದ್ಧಿ' ಎಂದಿಗೂ ಸಾಧ್ಯವಿಲ್ಲ. ಕಪ್ಪು ಹಣ ಭಾರತ ಮಾತ್ರವಲ್ಲ ಜಗತ್ತಿನ ಎಲ್ಲಾ ದೇಶಗಳಲ್ಲೂ ಕಂಡು ಬರುವ ಸಾಮಾನ್ಯ ಸಮಸ್ಯೆ. ಸೇವೆ ಮತ್ತು ಸರಕನ್ನು ಅಳೆಯಲು ಅದರ ಮೌಲ್ಯ ಕಟ್ಟಲು ಹಣವನ್ನ ಮಾಧ್ಯಮವನ್ನಾಗಿ ಬಳಸುತ್ತಿದ್ದೇವೆ. ಇದು ಎಲ್ಲಾ ಸಮಸ್ಯೆಗಳ ಮೂಲ ಕಾರಣ.
ಹಣವಿಲ್ಲದ ಪರ್ಯಾಯ ವ್ಯವಸ್ಥೆ ಸಾಧ್ಯವೇ?
ಇದಕ್ಕೆ ಉತ್ತರ ಸಾಧ್ಯವಿದೆ ಮತ್ತು ಸಾಧ್ಯವಿಲ್ಲ. ಸಾಧ್ಯವಿದೆ ಏಕೆಂದರೆ ಇತಿಹಾಸದಲ್ಲಿ ಹಣದ ಸಹಾಯವಿಲ್ಲದೆ ಶತಮಾನಗಳ ಕಾಲ ಸಮೃದ್ಧ ಸಮಾಜ ಕಟ್ಟಿ ಬಾಳಿದ ಉದಾಹರಣೆ ಇದೆ. ಹೌದ? ಎನ್ನುವ ಕೂತಹಲಕ್ಕೆ ಇಂಕಾ ನಾಗರೀಕತೆ ಉತ್ತರ.
ಇಂಕಾ ನಾಗರೀಕತೆ ಕೇಳದವರು ಯಾರು? ಇಂಕಾ ಎಂದ ತಕ್ಷಣ ನೆನಪಿಗೆ ಬರುವುದು ದಕ್ಷಿಣ ಅಮೆರಿಕಾದ 'ಪೆರು' ದೇಶ. ಆದರೆ ಇದು ಪೆರು ವಷ್ಟೇ ಅಲ್ಲ, ಬೊಲಿವಿಯಾ, ಈಕ್ವಾಡೋರ್, ಮಧ್ಯ ಚಿಲಿ, ಉತ್ತರ ಅರ್ಜೆಟೀನಾ, ದಕ್ಷಿಣ ಕೊಲಂಬಿಯಾಗಳನ್ನ ಒಳಗೊಂಡ ಒಂದು ಮಹಾನ್ ಸಾಮ್ರಾಜ್ಯವಾಗಿತ್ತು. ಇಂತಹ ಇಂಕಾ ಜನರು ವಿನಿಮಯವನ್ನಾಗಿ ಯಾವುದೇ ವಸ್ತು ಬಳಸದೆ ಅಂದಿನ ಸಂಪದ್ಭರಿತ ಮತ್ತು ದೊಡ್ಡ ನಾಗರೀಕತೆ ಕಟ್ಟುವಲ್ಲಿ ಯಶಸ್ವಿಯಾಗಿದ್ದರು ಎನ್ನುವುದು ಇಂದಿಗೆ ನಂಬಲು ಅಸಾಧ್ಯ! ಆದರೆ ಆ ಜನಾಂಗ ಹಣ ಅಥವಾ ಇನ್ನ್ಯಾವುದೇ ಶೇಖರಿಸಲ್ಪಡುವ ವಸ್ತುಗಳನ್ನ ವಿನಿಮಯ ಮಾಧ್ಯಮವನ್ನಾಗಿ ಬಳಸದೆ ಸಾರ್ಥಕ ಬದುಕ ಬದುಕಿದ ನಿದರ್ಶನ ನಮ್ಮ ಮುಂದಿದೆ.
ಇಂಕಾ ಸಾಮ್ರಾಜ್ಯದ ನೆರೆ ಹೊರೆಯಲ್ಲಿ ಇದ್ದ ಅಸ್ಟಕ್ ಮತ್ತು ಮಾಯನ್ನರು ಹುರಳಿ ಬೀಜವನ್ನ ಮತ್ತು ಬಟ್ಟೆಯನ್ನ ವಿನಿಮಯ ಮಾಧ್ಯಮವನ್ನಾಗಿ ಬಳಸುತ್ತಿದ್ದರು ಆದರೆ ಇಂಕನ್ನರು ಮಾತ್ರ ಇಂತಹ ವಿಷಯಗಳಿಗೆ ತಲೆ ಕೆಡೆಸಿಕೊಳ್ಳದೆ ತಮ್ಮದೇ ಆದ 'ಮಿತ' ಎನ್ನುವ ಪದ್ದತಿಯನ್ನ ಚಾಲ್ತಿಗೆ ತಂದಿದ್ದರು. ಅದರ ಪ್ರಕಾರ 15 ವರ್ಷ ತುಂಬಿದ ಪ್ರತಿ ಇಂಕಾ ಪುರುಷ ದೇಶಕ್ಕಾಗಿ ಕೆಲಸ ಮಾಡಬೇಕಿತ್ತು. ಎಷ್ಟು ಕೆಲಸವಿದೆ ಎನ್ನುವುದರ ಮೇಲೆ ವರ್ಷದಲ್ಲಿ ಎಷ್ಟು ದಿನ ಕೆಲಸ ಮಾಡಬೇಕು ಎನ್ನುವುದರ ನಿರ್ಧಾರವಾಗುತ್ತಿತ್ತು. ಹೆಚ್ಚೆಂದರೆ ವರ್ಷದ 70 ಭಾಗ ಕೆಲಸ ಉಳಿದ 30 ಭಾಗ ವಿಶ್ರಾಂತಿ. ಇದಕ್ಕೆ ಬದಲಾಗಿ ವಾಸಿಸಲು ಕಟ್ಟಡ, ಉಡಲು ಬಟ್ಟೆ, ಸೇವಿಸಲು ಆಹಾರ, ವಿಹಾರಕ್ಕೆ ಉತ್ತಮ ರಸ್ತೆ ಹೀಗೆ ಬದುಕಲು ಏನು ಬೇಕೋ ಅವೆಲ್ಲವೂ ಪುಕ್ಕಟೆ ಸಿಗುತಿತ್ತು. ಮನೋದೈಹಿಕ ಸ್ಥಿತಿಗೆ ಅನುಗುಣವಾಗಿ ಕೆಲಸ ಹಂಚಲಾಗುತಿತ್ತು. ಅದೊಂತರ 'ಎಲ್ಲವೂ ಎಲ್ಲರಿಗೆ ಸೇರಿದ್ದು' ಎನ್ನುವ ಭಾವನೆ ಮೇಲೆ ಕಟ್ಟಲ್ಪಟ್ಟ ನಾಗರೀಕತೆ.
ಸೂಕ್ಷ್ಮವಾಗಿ ನೋಡಿದರೆ ಇಲ್ಲಿಯೂ ವಿನಿಮಯ ಉಂಟು ಅದರೆ ಅದು ಕಣ್ಣಿಗೆ ಕಾಣುವ ರೂಪದಲ್ಲಿ ಇಲ್ಲ ಅಷ್ಟೇ. ಇಲ್ಲಿ 'ಸೇವೆ' (ಸರ್ವಿಸ್) ಯೇ ವಿನಿಮಯ. ಸೇವೆ ಸಂಗ್ರಹಿಸಿಡಲು ಆಗದ ಇರುವ ವಿನಿಮಯ ಹೀಗಾಗಿ ಆ ನಾಗರಿಕತೆ ಹೆಚ್ಚು ಸಂತೋಷದಿಂದ ಬದುಕಲು ಸಾಧ್ಯವಾಯಿತು. ಸಂಗ್ರಹಿಸಿ ಇಡಬಹುದಾದ ಯಾವುದೇ ವಿನಿಮಯ ಬದುಕಲ್ಲಿ ಬೇಕಿಲ್ಲದ ಪೈಪೋಟಿ ಅಲ್ಲದೆ ಮತ್ತೇನೂ ನೀಡದು. ಇದನ್ನ ಅರ್ಥ ಮಾಡಿಕೊಳ್ಳದೆ ಹಣವನ್ನ ಮುಖ್ಯ ಮಾಡಿರುವುದು ಮತ್ತು ಇದು ಶೇಖರಣೆಗೆ ಸುಲುಭವಾಗಿರುವುದು ಕಪ್ಪು ಹಣ ಸಂಗ್ರಹಕ್ಕೆ ಮುಖ್ಯ ಕಾರಣವಾಗಿದೆ. ಹಾಗೆ ನೋಡಿದರೆ ಸಂಗ್ರಹ, ಮುಂದಕ್ಕೆ ಬೇಕಾಗಬಹುದು ಎಂದು ಕೂಡಿಡುವುದು ಮನಷ್ಯನ ಸಹಜ ಗುಣ. ಹಣದ ಸೃಷ್ಟಿಗೂ ಮುಂಚೆಯೇ ಕಲಹಗಳು ಆಗಿರುವುದಕ್ಕೆ ಪುರಾವೆಗಳಿವೆ.
ಕಪ್ಪು ಹಣ ನಿರ್ಮೂಲನೆ ಗೊಳಿಸಲು ಏನು ಮಾಡಬೇಕು?
- ಮೊದಲಿಗೆ ಬಹಳ ವರ್ಷದಿಂದ ಬದಲಾವಣೆ ಕಾಣದ ನೋಟುಗಳನ್ನ ನಿಬಂಧಿಸಿ ಹೊಸ ನೋಟುಗಳ ಚಲಾವಣೆಗೆ ತರಬೇಕು.
- ಪಾಲಿಮರ್ ನೋಟುಗಳನ್ನ (ಪ್ಲಾಸ್ಟಿಕ್ ನೋಟು) ಚಲಾವಣೆಗೆ ತರುವುದರಿಂದ ನಕಲಿ ನೋಟುಗಳ ಹಾವಳಿ ತಡೆಯಬಹದು.
- ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆ ತರುವುದುದರಿಂದ ಲಂಚಗುಳಿತನ ಕಡಿಮೆ ಮಾಡಬಹದು.
- ಜಗತ್ತಿನ ಅತ್ಯಂತ ಪುರಾತನ ವೃತ್ತಿಯನ್ನ ಕಾನೂನು ಬದ್ಧ ಮಾಡುವುದು.
- ಕಳ್ಳಸಾಗಾಣಿಕೆ, ಡ್ರಗ್ಸ್ ಇತ್ಯಾದಿ ಕ್ರೈಂ ಗಳಿಗೆ ಅತ್ಯಂತ ಕಠಿಣ ಸಜೆ ವಿಧಿಸುವುದು.
- ಆಯ್ದ ವ್ಯಕ್ತಿಗಳ, ಸಂಸ್ಥೆಗಳ ಲೆಕ್ಕ ಪತ್ರವನ್ನ ತಪ್ಪದೆ ಪರಿಶೋಧಿಸುವುದು.
ಕಾನೂನು ರೀತಿ ನೀತಿಗಳು ಏನೇ ಇರಲಿ ಮೂಲಭೂತವಾಗಿ ಅದನ್ನ ಪಾಲಿಸುವ ನಾವು ನಮ್ಮ ಸಮಾಜ ನಾವು ಹೀಗೆ ಬದುಕಬಾರದು ಎನ್ನುವ ಪ್ರಜ್ಞೆ ಬೆಳೆಸಿಕೊಳ್ಳದೆ ಹೋದರೆ ಎಂತಹ ಕಾನೂನು ಕಟ್ಟಲೆಗಳು ಕೂಡ ಕೆಲಸಮಾಡುವುದಿಲ್ಲ. ನಾವು ಬದಲಾಗದೆ ನಮ್ಮ ಸಮಾಜ ಹೇಗೆ ಬದಲಾದೀತು? ಬದಲಾವಣೆ ನಮ್ಮ ಕೈಲಿದೆ. ಇಂದಿನನಿಂದಲೇ ನೀವು ಖರ್ಚು ಮಾಡುವ ಪ್ರತಿ ಪೈಸೆಗೂ ರಸೀತಿ (ಬಿಲ್) ಕೇಳಿ ಪಡೆಯಲು ಶುರು ಮಾಡಿ ಸಾಕು! ಕಪ್ಪು ಹಣ ದಾರುಣ ಸಾವು ಕಾಣದಿದ್ದರೆ ಕೇಳಿ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


