ಅಂಕಣಗಳು

ಹಣಕ್ಲಾಸು ಅಂಕಣ: ನಮ್ಮ ಬ್ಯಾಂಕ್ಗಳು ಎಷ್ಟು ಸುರಕ್ಷಿತ ?

ಕಳೆದ ವಾರ ಗೆಳೆಯ ನವೀನ್ ಕಲ್ಗುಂಡಿ ಅವರು ವಾಟ್ಸಪ್ ಮೂಲಕ ಹೆಸರಾಂತ ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದನ್ನ ಕಳಿಸಿದ್ದರು. ಇದರ ಬಗ್ಗೆ ನಿನ್ನ ಅಭಿಪ್ರಾಯವೇನು ತಿಳಿಸು ಎಂದು ಕೂಡ ಕೇಳಿದ್ದರು.

ಹಣಕ್ಲಾಸು ಅಂಕಣ: ನಮ್ಮ ಬ್ಯಾಂಕ್ಗಳು ಎಷ್ಟು ಸುರಕ್ಷಿತ ?
ಸಂಗ್ರಹ ಚಿತ್ರ
ಕಳೆದ ವಾರ ಗೆಳೆಯ ನವೀನ್ ಕಲ್ಗುಂಡಿ ಅವರು ವಾಟ್ಸಪ್ ಮೂಲಕ ಹೆಸರಾಂತ ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದನ್ನ ಕಳಿಸಿದ್ದರು. ಇದರ ಬಗ್ಗೆ ನಿನ್ನ ಅಭಿಪ್ರಾಯವೇನು ತಿಳಿಸು ಎಂದು ಕೂಡ ಕೇಳಿದ್ದರು. ಸರಿ ವಾಟ್ಸಪ್ ನಲ್ಲಿ ಟೈಪಿಸುವುದು ಅವರು ಮರು ಪ್ರಶ್ನಿಸುವುದು ಇವೆಲ್ಲಾ ಏಕೆ ಎಂದು ನೇರವಾಗಿ ಅವರಿಗೆ ಕರೆ ಮಾಡಿ ಮಾತನಾಡಿದೆ. ಅವರ ಮನಸ್ಸಿಗೆ ಒಂದಷ್ಟು ನೆಮ್ಮದಿಯೆಯಾಯಿತು ಎನ್ನುವ ನಂಬಿಕೆ ನನ್ನದು. ಆ ಲೇಖನ ಸರಕಾರದಿಂದ ಬ್ಯಾಂಕ್ಗಳಲ್ಲಿ ಮರು ಬಂಡವಾಳ ಹೂಡಿಕೆಯ ಬಗ್ಗೆ ಇತ್ತು. ಆ ಲೇಖನವನ್ನ ಪೂರ್ಣ ಓದಿಬಿಟ್ಟರೆ ಮರು ಘಳಿಗೆಯಲ್ಲಿ ನೀವು ನಿಮ್ಮ ಬ್ಯಾಂಕಿನಲ್ಲಿರುವ ಠೇವಣಿ ಹಣವನ್ನ ಹೊರತೆಗೆಯಲು ಹವಣಿಸುತ್ತೀರಿ ಖಂಡಿತ. ಹಾಗೆಂದ ಮಾತ್ರಕ್ಕೆ ಆ ಲೇಖನದಲ್ಲಿ ಇದ್ದ ಎಲ್ಲಾ ಮಾಹಿತಿ ತಪ್ಪೆಂದಲ್ಲ ಆದರೆ 'ರೋಗಿಗೆ ವೈದ್ಯ ನಿನ್ನ ಸಮಯ ಮುಗಿಯಿತು ನಾಳೆ ನೀನು ಸಾಯುತ್ತೀಯ' ಎಂದು ಹೇಳುವ ರೀತಿಯಲ್ಲಿತ್ತು. 
ನಮ್ಮ ಬ್ಯಾಂಕ್ಗಳ ಸ್ಥಿತಿ ಚಿಂತಾಜನಕವಾಗಿದೆ ಅದಕ್ಕೆ ಕಾರಣ ನಿಮಗೆಲ್ಲಾ ತಿಳಿದಿರುವಂತೆ ಅನುತ್ಪಾದಕ ಆಸ್ತಿಗಳು. ಬ್ಯಾಂಕ್ ನ ಕೆಲಸ ಗ್ರಾಹಕರಿಂದ ಠೇವಣಿ ಪಡೆಯುವುದು ಮತ್ತು ಅದನ್ನ ಯೋಗ್ಯರಿಗೆ ವ್ಯಾಪಾರಕ್ಕೆ ಸಾಲ ಕೊಡುವುದು ಮತ್ತು ಅದನ್ನ ಮಾರುವಸೂಲಿ ಮಾಡುವುದು. ಈಗ ಭಾರತದಲ್ಲಿ ಆಗಿರುವುದು ಸಾಲ ವಸೂಲಾತಿಯಲ್ಲಿ ತೊಂದರೆ. ಹೀಗೆ ವಸೂಲಿ ಆಗದೆ ಉಳಿದ ಹಣವನ್ನ ಅನುತ್ಪಾದಕ ಆಸ್ತಿ ಅಥವಾ ನಾನ್ ಪರ್ಫಾರ್ಮಿಂಗ್ ಅಸೆಟ್ ಎನ್ನುತ್ತೇವೆ. ಇದರ ಮೊತ್ತ ಹೆಚ್ಚಾದರೆ ಬ್ಯಾಂಕಿನ ಬಳಿ ಹಣವಿದ್ದರೂ ಅವರು ಸಾಲ ನೀಡಲು ಅನುಮತಿ ಇರುವುದಿಲ್ಲ. ಇದೊಂದು ಅತಂತ್ರ ಸ್ಥಿತಿ, ಹಣವಿದೆ ಆದರೆ ಹಳೆಯ ವಸೂಲಿ ಮಾಡದೆ ಹೊಸ ಸಾಲ ನೀಡಲು ಬರುವುದಿಲ್ಲ. ಈ ಸನ್ನಿವೇಶ ಬಹಳ ಸಮಯ ಮುಂದುವರಿದರೆ ಇಡೀ ಬ್ಯಾಂಕಿಂಗ್ ವ್ಯವಸ್ಥೆ ಕುಸಿಯುತ್ತದೆ.
ಒಂದು ಸಣ್ಣ ಉದಾಹರಣೆ ನೋಡೋಣ. ಒಂದು ಬ್ಯಾಂಕು ಸಾವಿರ ರೂಪಾಯಿ ಸಾಲ ನೀಡಬೇಕೆಂದರೆ ಅದರ ಹತ್ತು ಪ್ರತಿಶತ ಅಂದರೆ ನೂರು ರೂಪಾಯಿ ಬಂಡವಾಳ ಬ್ಯಾಂಕಿನ ಬಳಿ ಇರಬೇಕು. ಹೀಗೆ ಸಾಲ ಕೊಟ್ಟ ಸಾವಿರ ರೂಪಾಯಿಯಲ್ಲಿ ಕೇವಲ ಐದು ಪ್ರತಿಶತ ಹಣ ವಾಪಸ್ಸು ಬರದೆ ಹೋದರೆ ಅಂದರೆ ಐವತ್ತು ರೂಪಾಯಿ ಅದು ಬಂಡವಾಳದ ಅರ್ಧ ಹಣ ಮುಳುಗಿಸುತ್ತದೆ. ಅಂದರೆ ಬ್ಯಾಂಕಿನ ಮೂಲ ಬಂಡವಾಳ ನೂರರಿಂದ ಐವತ್ತಕ್ಕೆ ಇಳಿಕೆಯಾಯಿತು . ಗಮನಿಸಿ ನೂರು ರೂಪಾಯಿ ಇದ್ದಾಗ ಸಾವಿರ ರೂಪಾಯಿ ಸಾಲ ನೀಡಬಹುದಿತ್ತು ಇದೀಗ ಬಂಡವಾಳದ ಮೊತ್ತ ಐವತ್ತು ಈಗ ಬ್ಯಾಂಕು ಕೇವಲ ಐನೂರು ಮಾತ್ರ ನಿಯಮದ ಪ್ರಕಾರ ಸಾಲ ಕೊಡಬಹದು. ಬ್ಯಾಂಕಿನ ಬಂಡವಾಳದಲ್ಲಿ ಕುಸಿತವಾಗಿದೆ ನಿಜ ಆದರೆ ಗ್ರಾಹಕರು ಇತ್ತ ಠೇವಣಿಯಲ್ಲಿ ಕುಸಿತವೇನು ಆಗಿಲ್ಲ ಬ್ಯಾಂಕಿನ ಬಳಿ ಹೇರಳ ಹಣವಿದೆ ಆದರೇನು ನಿಯಮದ ಪ್ರಕಾರ ಅದು ಸಾಲ ನೀಡುವ ಆಗಿಲ್ಲ. ಸಾಲ ನೀಡದೆ ಹಣ ಸಂಪಾದಿಸದೆ ಗ್ರಾಹಕರಿಗೆ ಬಡ್ಡಿ ಕೊಡುವುದು ಹೇಗೆ? ಈ ಸ್ಥಿತಿ ಮುಂದುವರಿದರೆ ಬ್ಯಾಂಕು ಮತ್ತು ಇಡೀ ವ್ಯವಸ್ಥೆ ಕುಸಿಯುತ್ತದೆ. 
ಹಾಗಾದರೆ ಇದಕ್ಕೆ ಪರಿಹಾರವೇನು? 
ರಿ ಕ್ಯಾಪಿಟಲೈಸೇಶನ್ ಅಥವಾ ಬಂಡವಾಳ ಮರು ಹೂಡಿಕೆ ಇದಕ್ಕೆ ಪರಿಹಾರ. ಸರಕಾರ ಬ್ಯಾಂಕಿನಲ್ಲಿ ಬಂಡವಾಳ ಹೂಡುವುದರಿಂದ ವ್ಯವಸ್ಥೆಗೆ ಮರು ಜೀವ ನೀಡುವ ಪ್ರಕ್ರಿಯೆಗೆ ರಿ ಕ್ಯಾಪಿಟಲೈಸೇಶನ್ ಅಥವಾ ಬಂಡವಾಳ ಮರು ಹೂಡಿಕೆ ಎನ್ನುತ್ತೇವೆ. ಈಗ ಸರಕಾರ ನೀಡಿರುವ ರೂಪುರೇಷೆ ಪ್ರಕಾರ ಕೆಳಗಿನ ಮೂರು ಹಂತದಲ್ಲಿ ಹಣದ ಶೇಖರಣೆ ಮಾಡಬೇಕಿದೆ. 
1) ಸರಕಾರ ಬಜೆಟ್ ನಲ್ಲಿ ಬ್ಯಾಂಕಿನಲ್ಲಿ ಮರು ಹೂಡಿಕೆಗೆ ಎಂದು 18 ಸಾವಿರ ಕೋಟಿ ರೂಪಾಯಿ ಮೀಸಲಿಡುತ್ತದೆ. 
2) ಪಬ್ಲಿಕ್ ಸೆಕ್ಟರ್ ಬ್ಯಾಂಕ್ಗಳು 58 ಸಾವಿರ ಕೋಟಿ ರೂಪಾಯಿಯನ್ನ ಮಾರುಕಟ್ಟೆಯಿಂದ ಬಂಡವಾಳದ ರೂಪದಲ್ಲಿ ಪಡೆಯಬೇಕಿದೆ. 
3) ಭಾರತ ಸರಕಾರ ಒಂದು ಲಕ್ಷ ಮೂವತ್ತೈದು ಸಾವಿರ ಕೋಟಿ ರೂಪಾಯಿಯನ್ನ ಬ್ಯಾಂಕ್ ರಿ ಕ್ಯಾಪಿಟಲೈಸೇಶನ್ ಬಾಂಡ್ ಬಿಡುಗಡೆ ಮಾಡಿ ಹಣವನ್ನ ಸಂಗ್ರಹಿಸಲಿದೆ. 
ಮೇಲೆ ಹೇಳಿದ ಮೂರು ಹಂತದ ಹಣ ಸಂಗ್ರಹಣೆಗೆ ಎರಡು ವರ್ಷದ ಕಾಲಾವಧಿ ಹಾಕಿಕೊಳ್ಳಲಾಗಿದೆ. 
ಬ್ಯಾಂಕ್ಗಳ ಬಳಿ ಹೇರಳವಾಗಿ ಹಣವಿದೆ ಆದರೆ ಅವುಗಳಿಗೇಕೆ ಮರು ಹೂಡಿಕೆ ಮಾಡಬೇಕು? 
ಬ್ಯಾಂಕ್ ಹಣವನ್ನ ಮುದ್ರಿಸುತ್ತದೆ ಅದು ತನಗೆ ಬೇಕಾದ ಹಾಗೆ ಹಣವನ್ನ ಸೃಷ್ಟಿಸಬಹದು ಮತ್ತೆ ಬ್ಯಾಂಕಿಗೇಕೆ ಹಣದ ಅವಶ್ಯಕತೆ? ನಾವು ಹಣವನ್ನ ಬ್ಯಾಂಕಿನಲ್ಲಿ ಇಟ್ಟಿದ್ದೇವೆ ಬ್ಯಾಂಕ್ ವಾಪಸ್ಸು ನಮಗೆ ಹಣವನ್ನ ಸಾಲ ಕೊಡುತ್ತದೆ. ಬ್ಯಾಂಕಿನ ಬಳಿ ಹಣವಿದೆ ಮತ್ತೇಕೆ ಕೇವಲ ಐದು ಪ್ರತಿಶತ ಹಣ ವಾಪಸ್ಸು ಬರದೇ ಹೋದರೆ ಅದು ಸಾಲ ಕೊಡುವುದಿಲ್ಲ? ಎನ್ನುವುದಕ್ಕೆ ಉತ್ತರ ಬಂಡವಾಳ ಅನುಪಾತ ಅದನ್ನ ಮೇಲಿನ ಪ್ಯಾರಾದಲ್ಲಿ ವಿವರಿಸಿದ್ದೇನೆ. ಬ್ಯಾಂಕಿನ ಬಳಿ ಹಣವಿದೆ ಆದರೆ ಅದನ್ನ ಜನರಿಗೆ ಸಾಲ ಕೊಡಲು ಬಂಡವಾಳ ಅನುಪಾತ ಎನ್ನುವ ನಿಯಮ ಅನುಮತಿ ನೀಡುವುದಿಲ್ಲ ಆದರೆ ಬ್ಯಾಂಕು ಈ ಹಣವನ್ನ ಸರಕಾರಕ್ಕೆ ಸಾಲ ನೀಡಬಹದು! ಸರಕಾರ ಬ್ಯಾಂಕಿನಿಂದ ಸಾಲ ಪಡೆದು ಅದನ್ನೇ ಮತ್ತೆ ಬ್ಯಾಂಕಿನಲ್ಲಿ ಹೂಡಿಕೆಯ ರೂಪದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಗೆ ಹಾಕುತ್ತದೆ. ಈ ಪ್ರಕ್ರಿಯೆಯಿಂದ ಬಂಡವಾಳ ಅನುಪಾತ ಹೆಚ್ಚಾಗುತ್ತದೆ ಮತ್ತು ಬ್ಯಾಂಕ್ ಮತ್ತೆ ಜನರಿಗೆ ಸಾಲ ಕೊಡಲು ಸಾಧ್ಯವಾಗುತ್ತದೆ. ಗಮನಿಸಿ ಹೀಗೆ ಮಾರುಕಟ್ಟೆಯಿಂದ ಹಣ ಸಂಗ್ರಹಣೆ ಮಾಡಲು ಬ್ಯಾಂಕ್ಗಳು ಅಥವಾ ಭಾರತ ಸರಕಾರ ಹೊರಡಿಸುವ ಬಾಂಡ್ ಗಳನ್ನ ನಿನ್ನೆ ಮೊನ್ನೆಯವರೆಗೆ ವಿಜಯ್ ಮಲ್ಯ ಕೊಳ್ಳಬಹುದಿತ್ತು !! . ಅಂದರೆ ಉದಾಹರಣೆ ನೋಡಿ ವಿಜಯ್ ಮಲ್ಯ ಮತ್ತು ಅವಂತಹ ಹತ್ತು ಜನ ಬ್ಯಾಂಕ್ನಿಂದ ಸಾವಿರಾರು ಕೋಟಿ ಸಾಲ ಪಡೆಯುತ್ತಾರೆ ಮತ್ತು ಅದನ್ನ ಮರು ಪಾವತಿಸದೆ ಓಡಿ ಹೋಗುತ್ತಾರೆ . ಬ್ಯಾಂಕ್ ಕುಸಿಯುತ್ತದೆ ಬಂಡವಾಳ ಮರು ಸಂಗ್ರಹಣೆಗೆ ಬಾಂಡ್ ಹೊರಡಿಸಿದರೆ ಅದನ್ನ ವಿಜಯ್ ಮಲ್ಯ ನಂತವರು ಅದನ್ನ ಕೊಳ್ಳಬಹುದಿತ್ತು ! ಅಂದರೆ ಬ್ಯಾಂಕ್ ನಿಂದ ಸಾಲ ಪಡೆದು ಅದನ್ನ ಮರುಪಾವತಿಸದೆ ನಂತರ ಅದೇ ಬ್ಯಾಂಕ್ ನ ಬಾಂಡ್ ಕೊಂಡು ಅಷ್ಟು ಮೌಲ್ಯದ ಹಣಕ್ಕೆ ಆತ ಬ್ಯಾಂಕಿನ ಮಾಲೀಕ ಅಥವಾ ಪಾಲುದಾರನಾಗುವ ಅವಕಾಶ . ಇದು ನಮ್ಮ ವ್ಯವಸ್ಥೆಯ ಅವ್ಯವಸ್ಥೆ. ಇತ್ತೀಚೆಗೆ ಮೋದಿ ಸರಕಾರ ಇದಕ್ಕೆ ತಿದ್ದುಪಡಿ ತಂದಿದೆ. 
ಬೈಲ್ ಔಟ್ ಎನ್ನುವ ಪದ ರಿ ಕ್ಯಾಪಿಟಲೈಸೇಶನ್ ಜೊತೆಗೆ ಕೇಳಿಬರುತ್ತದೆ ಏನಿದು ಬೈಲ್ ಔಟ್? 
ವ್ಯವಸ್ಥೆ ಪೂರ್ಣವಾಗಿ ಕುಸಿದು ಜನರು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ ಕಳೆದು ಕೊಂಡು ತಮ್ಮ ಹಣವನ್ನ ಬ್ಯಾಂಕಿನಿಂದ ತೆಗೆಯಲು ಧಾವಿಸುತ್ತಾರೆ. ಆಗ ಸರಕಾರ ವಿಧಿಯಿಲ್ಲದೆ ವ್ಯವಸ್ಥೆಯ ಮರು ಸ್ಥಾಪಿಸಲು ಬ್ಯಾಂಕ್ನಲ್ಲಿ ತನ್ನ ಬೊಕ್ಕಸದಿಂದ ಹಣವನ್ನ ಹೂಡಿಕೆ ಮಾಡುತ್ತದೆ. ಈ ರೀತಿ ಹಣ ಹೂಡಿಕೆ ಮಾಡಿ ಬ್ಯಾಂಕಿಂಗ್ ವ್ಯವಸ್ಥೆ ಕುಸಿತ ತಡೆಯುವ ಪ್ರಕ್ರಿಯೆಗೆ ಬೈಲ್ ಔಟ್ ಎನ್ನುತ್ತಾರೆ. ಇದು ರಿ ಕ್ಯಾಪಿಟಲೈಸೇಶನ್ ಗಿಂತ ಕೆಟ್ಟ ಹಂತ. ಹಾಗೆ ನೋಡಲು ಹೋದರೆ ಎರಡು ಸಂಧರ್ಭದಲ್ಲೂ ಸರಕಾರ ಮಧ್ಯ ಪ್ರವೇಶಿಸುತ್ತದೆ, ಹಣ ಹೂಡಿಕೆ ಮಾಡುತ್ತದೆ. ಆದರೆ ರಿ ಕ್ಯಾಪಿಟಲೈಸೇಶನ್ ಮೊದಲ ಹಂತ ಇಲ್ಲಿ ಜನ ಸಾಮಾನ್ಯನ ಅರಿವಿಗೆ ವ್ಯವಸ್ಥೆಯ ಕುಸಿತ ಕಂಡು ಬರುವುದಿಲ್ಲ. ಮಾಧ್ಯಮಗಳು ಕೂಡ ಹೆಚ್ಚು ಬೊಬ್ಬೆ ಹೊಡೆಯುವುದಿಲ್ಲ. ಆದರೆ ಎರಡನೇ ಹಂತ ವ್ಯವಸ್ಥೆಯ ಕುಸಿತ ಜನ ಸಾಮಾನ್ಯನಿಗೂ ತಿಳಿಯುತ್ತದೆ. ಸಮಾಜದಲ್ಲಿ ಪ್ಯಾನಿಕ್ ಶುರುವಾಗುತ್ತದೆ. ಈ ರೀತಿಯ ಸಂದರ್ಭದಲ್ಲಿ ವ್ಯವಸ್ಥೆಯ ಮೇಲೆ ಪೂರ್ಣ ವಿಶ್ವಾಸ ಕುಸಿಯುತ್ತದೆ. ಈ ಹಂತದಿಂದ ರಿಕವರಿ ಬಹು ಕಷ್ಟ ಮತ್ತೆ ಮೊದಲಿನ ಹಾಗೆ ವ್ಯಾಪಾರ ವಹಿವಾಟು ನೆಡೆಯಲು ದಶಕಗಳು ಬೇಕು. ಯೂರೋಪಿನ ಬ್ಯಾಂಕ್ಗಳು ಕುಸಿತು ಕಂಡು ಎರಡನೇ ಹಂತ ಅಂದರೆ ಬೈಲ್ ಔಟ್ ಹಂತ ತಲುಪಿದ್ದವು. ಹೀಗಾಗಿ ಯೂರೋಪ್ ಇನ್ನು ಚೇತರಿಸಿ ಕೊಳ್ಳುತ್ತಲೇ ಇದೆ. 
ಸರಿ ಪರಿಹಾರ ಇದೆಯಲ್ಲ ಹಾಗಾದರೆ ಎಲ್ಲಾ ಓಕೇನಾ?
ರಿ ಕ್ಯಾಪಿಟಲೈಸೇಶನ್ ಗಾಗಿ ಸರಕಾರ ಹೊರಡಿಸುವ ಬಾಂಡ್ ವಿತರಣೆ ಅನುಪಾತ 80:20 ಅಥವಾ 75:25 ಇರಲಿದೆ. ಅಂದರೆ 20 ಅಥವಾ 25 ಪ್ರತಿಶತ ಹೂಡಿಕೆ ಪ್ರೈವೆಟ್ ಅಥವಾ ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಬರಲಿದೆ ಉಳಿದದ್ದು ಸರಕಾರದ್ದು. ಅಂದರೆ 20/25 ಪ್ರತಿಶತ ಬ್ಯಾಂಕಿಂಗ್ ಮಾಲೀಕತ್ವದಲ್ಲಿ ಅಥವಾ ಪಾಲುದಾರಿಕೆಯಲ್ಲಿ ಕಲಬೆರೆಕೆಯಾಯಿತು. ಇದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ ಹಾಗೆ ಅಷ್ಟೇ. 
ಹಾಗಾದರೆ ಇದಕ್ಕೆ ಶಾಶ್ವತ ಪರಿಹಾರವೇನು? 
ಕೊಟ್ಟ ಸಾಲವನ್ನ ಮರು ವಸೂಲಿ ಮಾಡುವುದೊಂದೇ ಇದಕ್ಕೆ ಶಾಶ್ವತ ಪರಿಹಾರ. ಸಾಲ ವಸೂಲಿ ಕಾನೂನನ್ನ ಸಾಕಷ್ಟು ಪ್ರಬಲವಾಗಿಸಬೇಕು. ಸುಸ್ತಿದಾರ ಜಗತ್ತಿನ ಯಾವುದೇ ಮೂಲೆಯಲ್ಲಿ ಅಡಗಿ ಕುಳಿತಿರಲಿ ಆತನನ್ನ ಭಾರತದ ಕಾನೂನು ಹಿಡಿದು ತರುವಂತಾಗಬೇಕು. ಎಲ್ಲಕ್ಕೂ ಮುಖ್ಯ ಸುಸ್ತಿದಾರನಿಗೆ ಶಿಕ್ಷೆಯಾಗಬೇಕು. ಸಾಲ ತೆಗೆದುಕೊಂಡವರಲ್ಲಿ ಮರು ಪವಾತಿಸದೆ ಹೋದರೆ ಗತಿಯೇನು ಎನ್ನುವ ಭಯ ಮೂಡುವಂತೆ ಮಾಡಬೇಕು. 
ಕೊನೆಯ ಮಾತು: 
ಅರುಣ್ ಜೈಟ್ಲಿ ಒಟ್ಟು ಎರಡು ಲಕ್ಷ ಹನ್ನೊಂದು ಸಾವಿರ ಕೋಟಿ ರೂಪಾಯಿ ಮರು ಬಂಡವಾಳ ಹೂಡಿಕೆ ಘೋಷಿಸಿ ಮಾತನಾಡುತ್ತ' ಈ ಹಣವನ್ನ ನಮ್ಮ ಬ್ಯಾಂಕ್ ಇನ್ನಷ್ಟು ಮಜಬೂತ್ ಆಗಲು ಕೊಡುತ್ತಿದ್ದೇವೆ ನಮ್ಮ ಬ್ಯಾಂಕ್ ಮಜಬೂರ್ ಆಗಲು ಬಿಡುವುದಿಲ್ಲ' ಎನ್ನುವ ಹೇಳಿಕೆ ನೀಡಿದ್ದಾರೆ. ಸದ್ಯದ ಮಟ್ಟಿಗೆ ಪ್ಯಾನಿಕ್ ಆಗುವ ಅವಶ್ಯಕತೆ ಇಲ್ಲ. ಬೀಸುವ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು ಎನ್ನುವ ಗಾದೆ ನಮ್ಮ ಹಿರಿಯರು ಸುಮ್ಮನೆ ಮಾಡಿರುವುದಿಲ್ಲ ಅದರ ಹಿಂದೆ ಅನುಭವ ಇದ್ದೆ ಇರುತ್ತೆ. ಇವತ್ತಿಗೆ ಸರಿ ನಾಳಿನ ವ್ಯವಸ್ಥೆಯ ಭದ್ರತೆಗೆ ಸುಲಲಿತ ಕಾರ್ಯ ನಿರ್ವಹಣೆಗೆ ಕೊಟ್ಟ ಸಾಲ ವಸೂಲಿ ಮಾಡಬೇಕಿದೆ. ಅಲ್ಲಿಯವರಿಗೆ ವ್ಯವಸ್ಥೆಯಲ್ಲಿ ನಂಬಿಕೆಯಿರಲಿ. 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.