ಕೊನೆಗೂ ಅಯೋಧ್ಯೆಗೆ ಗಂಗೆ ಬರಲೇ ಇಲ್ಲ . ಬಂದವಳು ಸರಯೂ !!
ನಂಬಲಾರದ ದಶ್ಯ !! ಮುನಿಯೊಬ್ಬರ ಆಶ್ರಮ . ಪಕ್ಕದಲ್ಲಿ ಗಂಗೆಯನ್ನು ಬಂಧಿಸಿಬಿಟ್ಟಿದ್ದಾರೆ . ಇನ್ನೂ ಹತ್ತಿರ ನಡೆದರೆ ಅವರ ಆಶ್ರಮವೆಲ್ಲ ಧ್ವಂಸವಾಗಿದೆ...

ಅಯ್ಯೋ! ತನ್ನ ರಥ ಎಬ್ಬಿಸಿದ ಧೂಳು ಬಿಟ್ಟರೆ ಇನ್ನೇನೂ ಕಾಣುತ್ತಿಲ್ಲ. ಕುಗ್ಗಿ ಹೋದ ಭಗೀರಥ. ರಥವನ್ನು ಹಿಂತಿರುಗಿಸಿದ. ಈಗ ಙ್ಞಾನೋದಯವಾಯಿತು!! ಕೆಲಸ ಪೂರ್ತಿ ಮಾಡದೆ ಸಂಭ್ರಮಿಸಬಾರದು. ತಾನು ಕಲ್ಪನಾ ಸುಖದಲ್ಲಿ ಮೈ ಮರೆತಿದ್ದ. ಈಶ್ವರ ಕೊಟ್ಟಿದ್ದ ಎಚ್ಚರಿಕೆಯನ್ನು ಮರೆತೇ ಬಿಟ್ಟಿದ್ದ. ಏನು ಮಾಡುವುದು? ತಾನು ಬಂದ ದಾರಿಯಲ್ಲೇ ಹುಡುಕಬೇಕು. ಅಷ್ಟು ರಭಸದಿಂದ ಬರುತ್ತಿದ್ದ ಗಂಗೆ ಅದೆಂತು ಮಾಯವಾದಳು? ಈಗೆಲ್ಲೋ ಸಣ್ಣದಾಗಿ ನೀರಿನ ಸದ್ದು ಕೇಳುತ್ತಿದೆ. ಮುಂದುವರಿಯುತ್ತಿದ್ದಂತೆಯೇ ಅಂತೂ ಕಂಡೇ ಬಿಟ್ಟ. ನಂಬಲಾರದ ದಶ್ಯ!! ಮುನಿಯೊಬ್ಬರ ಆಶ್ರಮ. ಪಕ್ಕದಲ್ಲಿ ಗಂಗೆಯನ್ನು ಬಂಧಿಸಿಬಿಟ್ಟಿದ್ದಾರೆ.
ಭಗೀರಥ ಅಂಗಲಾಚಿದ. ತನ್ನ ತಪಸ್ಸು, ಅದರ ಗುರಿ, ಅಯೋಧ್ಯೆಯಲ್ಲಿ ಕಾಯುತ್ತಿರುವ ತನ್ನ ಪ್ರಜೆಗಳು. ಎಲ್ಲರ ಮನೆಯ ಹೊರಗಿರುವ ಅಸ್ಥಿ ಕುಂಡಗಳು. ಗಂಗೆಯ ಅನಿವಾರ್ಯತೆ........ ಎಲ್ಲವನ್ನೂ ಎದೆ ಕರಗಿಸುವಂತೆ ವಿವರಿಸಿ ಹೇಳಿದ; ತಾವು ಈಕೆಯನ್ನು ಬಂಧಿಸಿಬಿಟ್ಟರೆ ನನ್ನ, ನನ್ನ ಪ್ರಜೆಗಳ ಗತಿ ಏನು? ದಯವಿಟ್ಟು ಅನುಗ್ರಹಿಸಿ. ಆಕೆಯನ್ನು ಬಿಡಿ. ಮಹರ್ಷಿಗಳಿಗೆ ಅರ್ಥವಾಯಿತು. ಆಯ್ತು. ನನ್ನಿಂದ ಬಂಧಿಸಲ್ಪಟ್ಟ ನೆನಪಿಗೆ, ಈ ಗಂಗೆಯ ಹೆಸರೇ ಬದಲಾಗಲಿ. ಈಕೆ ಇನ್ನು ಮುಂದೆ ನನ್ನ ಹೆಸರಿನಿಂದ ಪ್ರಸಿದ್ಧವಾಗಲಿ. ಜಾನ್ಹವಿಯಾಗಲಿ !!
ಸೆರೆಯ ಕಟ್ಟು ಬಿಚ್ಚುತ್ತಿದ್ದಂತೆಯೇ ಶೇಖರಿಸಿದ್ದ ಗಂಗೆ ಒಮ್ಮೆಗೇ ಧುಮ್ಮಿಕ್ಕಿದಳು! ಒಮ್ಮೆಗೇ ಭೋರ್ಗರೆದಳು!! ಒಮ್ಮೆಗೇ ನುಗ್ಗಿ ನುಗ್ಗಿ ನುಗ್ಗಿ ಎದುರಿದ್ದುದನ್ನೆಲ್ಲ ಕೊಚ್ಚಿಕೊಂಡು ಹೋದಳು !!! ಆ ರಭಸಕ್ಕೆ ಆಕೆಯ ಪಥ ಬದಲಾಯಿತು?!! ಬದಲಾಗುತ್ತಿದ್ದಂತೆಯೇ ನೇರವಾಗಿ ಹೋಗುತ್ತಿದ್ದವಳು ಕೆಳಗೆ ಹರಿದುಬಿಟ್ಟಳು !! ಜನ್ಹು ಮಹರ್ಷಿಗಳಿಗೆ ವಂದಿಸಿ, ಉಪಚಾರದ ಮಾತಾಡಿ ಭಗೀರಥ ಹೊರಬರುವ ಹೊತ್ತಿಗೆ, ಗಂಗೆ ಹತ್ತೆಂಟು ಮೈಲುಗಳಷ್ಟು ದೂರ ಹರಿದು ಹೋಗಿದ್ದಾಳೆ !! ಇಲ್ಲಿವರೆಗೆ ಗಂಗೆ ಭಗೀರಥನನ್ನು ಅನುಸರಿಸುತ್ತಿದ್ದಳು. ಇದೀಗ ಭಗೀರಥ ರಥವನ್ನೇರಿ ಹೋಗುತ್ತಿದ್ದಾನೆ; ಗಂಗೆ ಪಕ್ಕದಲ್ಲಿ !! ಇವನೆಷ್ಟೇ ಓಡಿಸಿದರೂ ರಥವನ್ನು , ಆರ್ಭಟಿಸುತ್ತಿರುವ ಗಂಗೆಯನ್ನು ಹಿಂದೆ ಹಾಕಲು ಸಾಧ್ಯವೆ ? ಓಹ್ ! ಆಗಲೇ ಇಲ್ಲ . ವಿಶ್ರಾಂತಿ , ಆಹಾರ, ನಿದ್ದೆ.... ಭಗೀರಥನ ನಡೆಗೆ ಅಡ್ಡಿ!! ಆದರೆ ಭಾಗೀರಥಿಗಾವ ಅಡ್ದಗೋಡೆ? ಹರಿದು ಹೋಗುತ್ತಲೇ ಇದ್ದಾಳೆ. ಅವಳನ್ನು ಅನುಸರಿಸಿ , ಅನುಸರಿಸಿ , ಎದ್ದೆನೋ ಬಿದ್ದೆನೋ ಎಂದು ಭಗೀರಥ ಬಸವಳಿದು ನಾಲ್ಕೈದು ದಿನಗಳಿಗೆ , ಅಂತೂ ಕೊನೆಗೂ ಗಂಗೆಯ ತುದಿಯನ್ನು ಕಂಡೇ ಬಿಟ್ಟೆನೆಂದು ಬಂದರೆ ಕಂಡದ್ದೇನು ? ಭಾರೀ ಹರವಿನ ಗಂಗೆ ಸಮುದ್ರದಲ್ಲಿ ಸೇರಿ ಹೋಗುತ್ತಿದ್ದಾಳೆ ! ಸರಿ . ಕೊನೆಗೆ ಯಾವ ನದಿಯಾದರೂ ಸಮುದ್ರಕ್ಕೇ ಸೇರಲೇಬೇಕು . ಆದರೆ ಈ ಗಂಗೆ ತನ್ನ ಅಯೋಧ್ಯೆಯ ಮೇಲೆ ಹರಿದು ಬರಬೇಕಿತ್ತು ! ಈಗೆಲ್ಲಿ ಬಂದಿದ್ದಾಳೆ ? ತನ್ನ ರಾಜ್ಯ ಇಲ್ಲಿಂದ ಎಷ್ಟು ದೂರದಲ್ಲಿದೆಯೋ ? ಒಂದೂ ಅರಿವಾಗದೇ ಮಹಾ ದುಃಖಿತನಾಗಿ ಕುಳಿತುಬಿಟ್ಟ . ಹೊಟ್ಟೆ ತೊಳಸಿ ಬಂದಂತೆ ; ಇಷ್ಟೇನಾ ನಮ್ಮ ಪ್ರಯತ್ನ ? ಕಷ್ಟ ಪಟ್ಟಿದ್ದೆಲ್ಲ ಸಾಗರದ ಪಾಲಾಯಿತು . ಈ ಗಂಗೆ ಏಕೆ ಇಷ್ಟು ನಿಷ್ಕರುಣಿ ? ತನಗೇಕೆ ಇಂತಹ ಪರಾಭವ ? ತನ್ನಲ್ಲೇನೂ ತಪ್ಪಿಲ್ಲ . ಎಷ್ಟು ಬಾರಿ ತಪಿಸಿದ್ದೇನೆ . ಇನ್ನೇನು ಎಲ್ಲವೂ ಸಿಕ್ಕಿತು , ಎಲ್ಲವೂ ಮುಗಿಯಿತು ಎನ್ನುವಾಗ , ಏನೂ ಸಿಗದಂತೆ ; ಗೆದ್ದೆನೆಂದಾಗ ಆಟವೇ ಆರಂಭವಾಗಿಲ್ಲವೇನೋ ಎಂಬಂತೆ.
ಯಾರೋ ತನ್ನ ಬಳಿ ಬರುತ್ತಿದ್ದಾರೆ . ಯಾರದು ? ಅವರು ಯಾರೋ ಋಷಿಯಂತೆ ಕಾಣುತ್ತಿದ್ದಾರೆ . ಈ ಋಷಿಗಳೋ ಎಲ್ಲವನ್ನೂ ಬಿಟ್ಟೆವೆನ್ನುತ್ತಾರೆ ; ಊರನ್ನೇ ತ್ಯಜಿಸಿದ್ದೇವೆನ್ನು ತ್ತಾರೆ ; ಆದರೆ ತಮ್ಮ ಮನಸ್ಸನ್ನೇ ಹಿಡಿದಿಟ್ಟುಕೊಳ್ಳಲಾಗುವುದಿಲ್ಲ . ಮೂಗಿನ ತುದಿಯಲ್ಲೇ ಸಿಟ್ಟು !! ಜನ್ಹು ಸಿಟ್ಟುಗೊಂಡು ಗಂಗೆಯನ್ನು ಬಂಧಿಸದೇ ಇದ್ದಿದ್ದರೆ , ತನಗಿಂತಹ ದುರವಸ್ಥೆ ಬರುತ್ತಲೇ ಇರಲಿಲ್ಲ . ಹೀಗೆ ಆಲೋಚನೆಯಲ್ಲಿದ್ದಾಗ ಆ ಋಷಿ ಹತ್ತಿರ ಬಂದರು . " ನನ್ನನ್ನು ನೀನು ಮರೆತೇ ಬಿಟ್ಟಿರುವೆ . ನಾನೇ ನಿನಗೆ ಗಂಗಾವತರಣ ಮಾಡಿಸಲು ಹೇಳಿದ್ದು . ನೀನೀಗ ಸೋತಿರಬಹುದು . ನಿನ್ನೂರಿಗೆ ಗಂಗೆ ಬಾರದಿರಬಹುದು , ಆದರೆ ಗಂಗಾಗಮನದಿಂದಾಗಿ ಭಾರತ ಪುಣ್ಯ ಭೂಮಿಯಾಯಿತು . ಉತ್ತರ ಭಾರತವೆಲ್ಲ ಹಸುರಾಯಿತು . ನಿನ್ನ ಹೆಸರು ಭಾರತ ಚರಿತ್ರೆಯಲ್ಲಿ ಶಾಶ್ವತ ಸ್ಥಾನ ಗಳಿಸಿತು . ಈ ಗಂಗೆ ಅಯೋಧ್ಯೆಗೆ ೨೫೦ ಮೈಲಿ ದೂರದಲ್ಲಿ ಹರಿದು ಬರುತ್ತಿದ್ದಾಳೆ . ಮತ್ತವಳನ್ನು ಹಿಂದಕ್ಕೆ ತಿರುಗಿಸಿ ಅಯೋಧ್ಯೆಗೆ ಕರೆದೊಯ್ಯುವುದು ಸಾಧ್ಯವೇ ಇಲ್ಲದ ಮಾತು . ಇಷ್ಟು ಕಷ್ಟ ಪಟ್ಟಿರುವೆ , ಇನ್ನಷ್ಟು ತಪ ಮಾಡಿಬಿಡು , ಬ್ರಮ್ಹನನ್ನೊಲಿಸಿಕೊಂಡು ನಿನ್ನ ದುಸ್ಥಿತಿಯನ್ನು ವಿವರಿಸು . ಬ್ರಮ್ಹಾ ಬೇಗ ಒಲಿಯಬೇಕಾದರೆ ಅವನೇ ಸೃಷ್ಟಿಸಿದ ಬ್ರಹ್ಮಮಾನಸ ಸರೋವರಕ್ಕೆ ಹೋಗು .
-ಡಾ.ಪಾವಗಡ ಪ್ರಕಾಶ್ ರಾವ್pavagadaprakashrao@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


