ಕಲ್ಲು ಕರಗುವ ಸಮಯ!
ನನ್ನ ಗೆಳತಿ ಮಹಾ ಕೋಪಿಷ್ಠೆ. ಸಿಟ್ಟು ಬಂದಾಗ ತನ್ನ ಮಗನಿಗೆ ಬಾರಿಸುತ್ತಿದ್ದಳು.

ಒಮ್ಮೊಮ್ಮೆ ಪರಿಸ್ಥಿತಿ ಒತ್ತಡಕ್ಕೆ ಸಿಡಿಮಿಡಿಗೊಂಡರೆ ಜಗುಲಿಯ ಕಪಾಟಿನಲ್ಲಿಟ್ಟ ಆ ಕಲ್ಲನ್ನು ನೋಡಿದರೆ, ಅವಳ ಸಿಟ್ಟು, ಸಿಡಿಮಿಡಿಗಳೆಲ್ಲ ಮಾಯವಾಗಿ ಬಿಡುತ್ತಿತ್ತು. ಒಂದು ಕಲ್ಲು ಅವಳ ಜೀವನದಲ್ಲಿ ಅಗಾಧ ಪ್ರಭಾವ ಬೀರಿತು. ಅದೇ ಕಲ್ಲು ಅವಳ ಮಗನ ಜೀವನದಲ್ಲೂ ಅಂಥದೇ ಪಾತ್ರವನ್ನು ಬೀರಿತು. ಆ ಕಲ್ಲು ಅವನಲ್ಲಿರುವ ಎಲ್ಲ ಕೋಪವನ್ನೂ ಕರಗಿಸುತ್ತಿತ್ತು.
ಇತ್ತೀಚೆಗೆ ನಾನು ಖ್ಯಾತ ಸ್ವೀಡಿಶ್ ಲೇಖಕಿ ಅಸ್ಟ್ರಿಡ್ ಲಿಂಡ್‌ಗ್ರೆನ್ ಬರೆದ ಪ್ರಬಂಧಗಳನ್ನು ಓದುತ್ತಿದ್ದೆ. ಮಕ್ಕಳ ಸಾಹಿತ್ಯ ರಚನೆಯಲ್ಲಿ ಅವರಿಗೆ ಅಪರಿಮಿತ ಆಸಕ್ತಿ. ವಿಶ್ವದಾದ್ಯಂತ ಎಲ್ಲ ಭಾಷೆಗಳಿಗೆ ಅವಳ ಕೃತಿ ಅನುವಾದವಾಗಿರುವುದು ವಿಶೇಷ. ಆಕೆ ಬರೆದ ಕೃತಿಗಳ 144 ದಶಲಕ್ಷ ಪ್ರತಿಗಳು ಮಾರಾಟವಾಗಿವೆ. ಆಕೆಗೆ ಪ್ರತಿಷ್ಠಿತ ರೈಟ್ ಲೈವ್ಲಿಹುಡ್ ಪ್ರಶಸ್ತಿಯೂ ಬಂತು. ಆಕೆಗೊಂದು ವಿಚಿತ್ರ ಹವ್ಯಾಸವಿತ್ತು. ಪ್ರತಿದಿನ ಕನಿಷ್ಠ ಒಂದು ಮಗುವಿಗಾದರೂ ಆಕೆ ಏನಾದರೂ ಒಂದಷ್ಟು ಹೊಸ ವಿಷಯಗಳನ್ನು ಹೇಳಿಕೊಡುತ್ತಿದ್ದಳು. ಯಾರೂ ಸಿಗದಿದ್ದಾಗ ಶಾಲೆಯ ಹತ್ತಿರ ಹೋಗಿ ಮಕ್ಕಳು ಬರುವುದನ್ನೇ ಕಾಯುತ್ತಿದ್ದಳು. ಮಕ್ಕಳು ಹೊರಬಂದ ಬಳಿಕ ಅವರನ್ನೆಲ್ಲ ಸೇರಿಸಿಕೊಂಡು ಹತ್ತು ನಿಮಿಷ ಕತೆ ಹೇಳುತ್ತಿದ್ದಳು. ಕ್ರಮೇಣ ಆಕೆ ಮಕ್ಕಳ ಮಧ್ಯೆ ಎಷ್ಟು ಜನಪ್ರಿಯಳಾದಳೆಂದರೆ, ಅವಳಿಗಾಗಿ ಶಾಲಾ ಆವರಣದಲ್ಲಿ ಕಾಯುತ್ತಾ ಕುಳಿತಿರುತ್ತಿದ್ದರು. ಮಕ್ಕಳಿಗೆ ಹೇಳಲೆಂದೇ ಲೈಬ್ರರಿಗೆ ಹೋಗಿ ಹೊಸಹೊಸ ಕತೆಗಳನ್ನು ಓದುತ್ತಿದ್ದಳು. ಹೊಸ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದಳು. ಅವುಗಳನ್ನೆಲ್ಲ ಮಕ್ಕಳ ಮುಂದೆ ಒಪ್ಪಿಸುತ್ತಿದ್ದಳು.
ಆಸ್ಟ್ರಿಡ್ ಲಿಂಡ್‌ಗ್ರೇನ್‌ಗೆ ಶಾಂತಿ ಪ್ರಶಸ್ತಿ ಬಂತು. ಅದನ್ನು ಸ್ವೀಕರಿಸಿದ ಬಳಿಕ ಆಡಿದ ಮಾತುಗಳನ್ನು 'ಒಂದು ಕಲ್ಲು' ಎಂಬ ಪುಟ್ಟ ಅಧ್ಯಾಯದಲ್ಲಿ ಆಕೆ ಬರೆದಿದ್ದಾಳೆ. ಅದನ್ನು ಅವಳ ಮಾತುಗಳಲ್ಲಿ ಕೇಳೋಣ.
ನನ್ನ ಗೆಳತಿ ಮಹಾ ಕೋಪಿಷ್ಠೆ. ಸಿಟ್ಟು ಬಂದಾಗ ತನ್ನ ಮಗನಿಗೆ ಬಾರಿಸುತ್ತಿದ್ದಳು. ಕೈಯಲ್ಲಿ ಹೊಡೆಯುವುದು ಅಪರಾಧವಾದ್ದರಿಂದ ಬೆತ್ತದಲ್ಲಿ ಹೊಡೆಯುತ್ತಿದ್ದಳು. ಪ್ರತಿಸಲ ಹೊಡೆದ ನಂತರ, ಅವಳ ಮಗ ಮರುದಿನ ಆ ಬೆತ್ತವನ್ನು ಅಡಗಿಸಿಡುತ್ತಿದ್ದ ಅಥವಾ ಹೊರಕ್ಕೆ ಬಿಸಾಡುತ್ತಿದ್ದ. ಒಂದು ದಿನ ಅವಳಿಗೆ ವಿಪರೀತ ಸಿಟ್ಟು ಬಂತು. 'ನೋಡು ನಿನಗೆ ಬೆತ್ತ ತಂದು ಬಾರಿಸುತ್ತೇನೆ' ಎಂದಳು. ಅದಕ್ಕೆ ಅವಳ ಮಗ ಏನು ಮಾತಾಡದೇ ಹೊರಕ್ಕೆ ಓಡಿ ಹೋದ. ಬಹಳ ಹೊತ್ತಾದರೂ ಆತ ಬರದಿದ್ದಾಗ ಆಕೆ ಗಾಬರಿಗೊಂಡಳು. ಸುಮಾರು ನಾಲ್ಕೈದು ತಾಸಿನ ಬಳಿಕ ಆತ ಮನೆಗೆ ವಾಪಸ್ ಬಂದ.
'ಅಮ್ಮ ಬಹಳ ಹುಡುಕಿದೆ. ಆದರೆ ಎಲ್ಲೆಲ್ಲೂ ಬೆತ್ತ ಸಿಗಲಿಲ್ಲ. ಅಷ್ಟೇ ಗಟ್ಟಿಯ ಕೋಲು ಸಿಗಬಹುದಾ ಎಂದು ಹುಡುಕಿದೆ. ಅದೂ ಸಿಗಲಿಲ್ಲ. ಪಾಪ, ನಿನಗೆ ಅದೆಷ್ಟೋ ಬೇಸರವಾದೀತೋ ಏನೋ ಎಂದು ಬಹಳ ಸಂಕಟಪಟ್ಟುಕೊಂಡೆ. ಕೊನೆಗೆ ಏನೂ ಸಿಗದಿದ್ದಾಗ ಈ ಕಲ್ಲನ್ನು ತೆಗೆದುಕೊಂಡು ಬಂದಿದ್ದೇನೆ. ಒಂದು ಕೆಲಸ ಮಾಡು. ಈ ಕಲ್ಲಿನಿಂದ ನನಗೆ ಹೊಡಿ, ಬೆತ್ತವಿಲ್ಲದಿದ್ದರೆ ಏನಾಯಿತು? ನಿನಗೆ ಸಮಾಧಾನವಾದರೆ ಅಷ್ಟೇ ಸಾಕು' ಎಂದ ಮಗ.
ತಾಯಿ-ಮಗನನ್ನು ಬರಸೆಳೆದು ಬಿಗಿದಪ್ಪಿ ಜೋರಾಗಿ ಅಳಲಾರಂಭಿಸಿದಳು. ನನಗೆ ಬೆತ್ತದಿಂದ ಹೊಡೆಯಬೇಕೆಂದಿತ್ತು. ಆದರೆ ಅದು ಸಿಗದಿದ್ದುದಕೆ ಬೇಸರಪಟ್ಟುಕೊಳ್ಳುವ ಬದಲು ಕಲ್ಲಿನಿಂದ ಹೊಡೆಯಲಿ, ಒಟ್ಟಾರೆ ನನಗೆ ಸಮಾಧಾನವಾಗಲಿ ಎಂದು ಮಗ ಯೋಚಿಸಿದನಲ್ಲ. ತನ್ನ ನೋವಿನಲ್ಲೂ ತಾಯಿಯ ಸಮಧಾನ, ಆಕೆ ಈಡೇರಿಕೆಯನ್ನು ಬಯಸಿದನಲ್ಲ, ತಾನೆಂಥ ಕ್ರೂರಿ ಎಂದು ಅವಳಿಗೆ ತೀವ್ರವಾಗಿ ಅನಿಸಿತು.
ಪುನಃ ಮಗನನ್ನು ಅಪ್ಪಿ ಕೊಂಡು ಜೋರಾಗಿ ಅತ್ತಳು. ಮಗನೂ ಅಳಲಾರಂಭಿಸಿದ. 'ನನಗೆ ಜೀವನದಲ್ಲಿ ಬಹಳ ದೊಡ್ಡ ಪಾಠ ಕಲಿಸಿದೆ' ಎಂದು ತಾಯಿ ಮಗನಿಗೆ ಹೇಳಿದಳು. ಅಂದಿನಿಂದ ಆಕೆ ಮಗನಿಗೆ ಹೊಡೆಯುವುದನ್ನು ಬಿಟ್ಟಳು. ಕೋಪಿಸಿಕೊಳ್ಳುವುದನ್ನು ಬಿಟ್ಟಳು. ಒಮ್ಮೊಮ್ಮೆ ಪರಿಸ್ಥಿತಿ ಒತ್ತಡಕ್ಕೆ ಸಿಡಿಮಿಡಿಗೊಂಡರೆ ಜಗುಲಿಯ ಕಪಾಟಿನಲ್ಲಿಟ್ಟ ಆ ಕಲ್ಲನ್ನು ನೋಡಿದರೆ, ಅವಳ ಸಿಟ್ಟು, ಸಿಡಿಮಿಡಿಗಳೆಲ್ಲ ಮಾಯವಾಗಿ ಬಿಡುತ್ತಿತ್ತು. ಒಂದು ಕಲ್ಲು ಅವಳ ಜೀವನದಲ್ಲಿ ಅಗಾಧ ಪ್ರಭಾವ ಬೀರಿತು. ಅದೇ ಕಲ್ಲು ಅವಳ ಮಗನ ಜೀವನದಲ್ಲೂ ಅಂಥದೇ ಪಾತ್ರವನ್ನು ಬೀರಿತು. ಆ ಕಲ್ಲು ಅವನಲ್ಲಿರುವ ಎಲ್ಲ ಕೋಪವನ್ನೂ ಕರಗಿಸುತ್ತಿತ್ತು.
ನಿಮ್ಮ ಜೀವನದಲ್ಲೂ ಇಂಥ ಒಂದು ಕಲ್ಲನ್ನು ಇಟ್ಟುಕೊಳ್ಳಿ. ಬೇರೆಯವರಿಗೆ ಹೊಡೆಯಬೇಕು, ನೋಯಿಸಬೇಕು ಎಂದೆನಿಸಿದಾಗ ಈ ಪುಟ್ಟ ಪ್ರಸಂಗವನ್ನು ನೆನಪಿಸಿಕೊಳ್ಳಿ. ನೀವೆಂದೂ ಬೇರೆಯವರನ್ನು ಹೊಡೆಯುವುದಿಲ್ಲ, ನೋಯಿಸುವುದಿಲ್ಲ.
ಆಸ್ಟ್ರಿಡ್ ಲಿಂಡ್‌ಗ್ರೆನ್ ಮಾತು ಮುಗಿಯುವ ಹೊತ್ತಿಗೆ ಇಡೀ ಸಭೆ ಕಲ್ಲಾಗಿತ್ತು!
ಮನಸ್ಸು ಕರಗುವ ಸಮಯ
ಮೊನ್ನೆ ದಿಲ್ಲಿಗೆ ಹೋದಾಗ ಪತ್ರಕರ್ತ ದೀಪಕ್ ಚೌರಾಸಿಯಾ ಮನೆಗೆ ಹೋಗಿದ್ದೆ. ದಿಲ್ಲಿಯ ಹಿಂದಿ ನ್ಯೂಸ್ ಚಾನೆಲ್‌ಗಳ ವಲಯದಲ್ಲಿ ದೀಪಕ್ ದೊಡ್ಡ ಹೆಸರು. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದವ. ಪಾದರಸದಂಥ ವ್ಯಕ್ತಿತ್ವ. ನಾನು ಇಂಗ್ಲೆಂಡ್‌ನಲ್ಲಿ ಪತ್ರಿಕೋದ್ಯಮವನ್ನು ಓದುವಾಗ ದೀಪಕ್ ಸಹ ನನ್ನ ಜತೆಗಿದ್ದ. ಹಾಸ್ಟೆಲ್‌ನಲ್ಲಿ ಪಕ್ಕದ ರೂಮು. ಒಳ್ಳೆಯ ಅಡುಗೆ ಮಾಡುತ್ತಿದ್ದ. ಪ್ರತಿ ಶುಕ್ರವಾರ ರಾತ್ರಿ ಅವನದೇ ಕೈ ಚಳಕ. ಶುಕ್ರವಾರ ರಾತ್ರಿ ಎರಡು ಗಂಟೆಗೆ ಮಲಗಿದರೆ ಭಾನುವಾರ ಬೆಳಗ್ಗೆ ಎಂಟು ಗಂಟೆಗೆ ಏಳುತ್ತಿದ್ದ. ಬರೋಬ್ಬರಿ ಮೂವತ್ತು ತಾಸು ನಿದ್ದೆ. ಇಂಥ 'ಕುಂಭಕರ್ಣ'ನನ್ನು ನೋಡಿದ್ದು ಅವನಲ್ಲೇ. ಉಳಿದಂತೆ ಸದಾ ಜಾಗೃತ. ಈಗ ಈ ನಿದ್ದೆ ಹತ್ತು ತಾಸಿಗೆ ಇಳಿದಿದೆಯೆಂದು ಅಲವತ್ತುಗೊಂಡ.
ದೀಪಕ್‌ನ ಲಿವಿಂಗ್ ರೂಮಿನಲ್ಲಿ ಒಂದು ಪೋಸ್ಟ್ ಕಾರ್ಡ್‌ನ್ನು ಗಮನಿಸಿದೆ. ಅದನ್ನು ಲ್ಯಾಮಿನೇಟ್ ಮಾಡಿಸಿ, ಫ್ರೇಮ್ ಹಾಕಿಸಿ ಇಟ್ಟಿದ್ದ. ಅದರಲ್ಲಿ ಬರೆದಿತ್ತು-'ನಾನು ಪರಿಪೂರ್ಣ ವ್ಯಕ್ತಿ ಅಲ್ಲ. ಜೀವನದಲ್ಲಿ ನಾನು ಸಾಕಷ್ಟು ತಪ್ಪುಗಳನ್ನು ಮಾಡಿದ್ದೇನೆ. ಕೆಲವು ಗೊತ್ತಿದ್ದೇ ಮಾಡಿದ ತಪ್ಪು ಹಾಗೂ ಇನ್ನೂ ಕೆಲವು ಗೊತ್ತಿಲ್ಲದೇ ಮಾಡಿದ ತಪ್ಪುಗಳು. ನನ್ನ ತಪ್ಪುಗಳೆಲ್ಲವನ್ನು ತಿಳಿದೂ ನನ್ನನ್ನು ಇಷ್ಟಪಡುವವರನ್ನು ನಾನು ಮೆಚ್ಚದೆ ಹೇಗಿರಲಿ?' ಎರಡೆರಡು ಸಲ ಓದಿದೆ. ಪರಿಚಿತವಾದ ಕೈ ಬರಹ. ಆದರೆ ಅದನ್ನು ಬರೆದವರು ಯಾರೆಂಬುದು ಅಲ್ಲಿರಲಿಲ್ಲ. ಪೋಸ್ಟ್‌ಕಾರ್ಡಿನ ಮತ್ತೊಂದು ಮಗ್ಗುಲಿಗೆ ಅವರ ಹೆಸರಿದ್ದುದರಿಂದ ಗೊತ್ತಾಗಲಿಲ್ಲ.
'ದೀಪಕ್, ಇದು ಯಾರ ಪತ್ರ? ಈ ಅಕ್ಷರ ಬಹಳ ಪರಿಚಿತ. ಈ ಕ್ಷಣಕ್ಕೆ ನೆನಪಾಗುತ್ತಿಲ್ಲ' ಅಂದೆ.
'ಇನ್ಯಾರದ್ದು? ಮೊನ್ನೆ ತೀರಿಕೊಂಡ ಆ ಮುದುಕ, ಆಪ್ತ ಸ್ನೇಹಿತ ಖುಷವಂತ ಸಿಂಗ್‌ನದ್ದು' ಎಂದ.
ಮತ್ತೆರಡು ಸಲ ಓದಿದೆ. ಮನಸ್ಸು ಈಗಲೂ ಆ ಸಾಲುಗಳನ್ನು ಓದುತ್ತಿದೆ!
ಸ್ಕಾಚು ಕರಗುವ ಸಮಯ
ನಾವು ಕೊಡುವ ಸಣ್ಣಪುಟ್ಟ ಗಿಫ್ಟ್‌ಗಳು ಯಾರ್ಯಾರನ್ನೋ ಹೇಗೋ ತಟ್ಟುತ್ತಿರುತ್ತವೆ. ಕಳೆದ ವರ್ಷ ಆಫ್ರಿಕಾದ ಡರ್ಬನ್‌ನ ಕಿಂಗ್ ಶಾಕಾ ಇಂಟರ್‌ನ್ಯಾಷನಲ್ ಏರ್‌ಪೋರ್ಟಿನಲ್ಲಿ ಒಂದು ಟೀಶರ್ಟ್‌ನ್ನು ಖರೀದಿಸಿದ್ದೆ. ಅದರ ಮೇಲಿನ ವಾಕ್ಯ ಇಷ್ಟವಾಗಿತ್ತು. ಅದನ್ನು ನನ್ನ ಸ್ನೇಹಿತರಾದ ಪೃಥ್ವಿರಾಜ್ ಅವರಿಗೆ ಕೊಟ್ಟಿದ್ದೆ. ಅವರು ಅದನ್ನು ಬಹಳ ಮೆಚ್ಚಿಕೊಂಡಿದ್ದರು.
ಇತ್ತೀಚೆಗೆ ನಾನು ಅವರು ನೂತನವಾಗಿ ಆರಂಭಿಸಿದ ಸ್ಕಾಚ್‌ಶಾಪ್‌ಗೆ ಭೇಟಿ ಕೊಟ್ಟಿದ್ದೆ. ಗಲ್ಲಾ ಪೆಟ್ಟಿಗೆಯ ಹಿಂದೆ ಒಂದು ಫೋಟೋವನ್ನು ತಗುಲಿ ಹಾಕಿದ್ದರು. ಎಲ್ಲೋ ನೋಡಿದ ಹಾಗಿದೆಯಲ್ಲ ಎಂದುಕೊಂಡೆ. ಹೌದು, ನಾನು ಕೊಟ್ಟ ಟೀಶರ್ಟ್‌ನ್ನು ಅಂದವಾದ ಬೋರ್ಡಿನ ಮೇಲಿಟ್ಟು ಅದಕ್ಕೆ ಫ್ರೇಮು ತೊಡಿಸಿ ಗೋಡೆಗೆ ನೇತು ಹಾಕಿದ್ದರು. ಅದೊಂದು ಅದ್ಭುತ ಕಲಾಕೃತಿಯಂತೆ ಗೋಚರಿಸುತ್ತಿತ್ತು. 'ಬಂದ ಗಿರಾಕಿಗಳೆಲ್ಲ ಈ ಟೀ ಶರ್ಟಿನ ಮೇಲೆ ಬರೆದ ವಾಕ್ಯವನ್ನು ಓದದೇ ಹೋಗುವುದಿಲ್ಲ. ಇನ್ನು ಕೆಲವರು ಒಂದು ಕಲಾಕೃತಿಯಂತೆ ಅದನ್ನು ನೋಡುತ್ತಾರೆ ಎಂದರು ಪೃಥ್ವಿರಾಜ್.
ಅಂದ ಹಾಗೆ ಆ ಟೀಶರ್ಟಿನ ಮೇಲೆ ಇದ್ದ ಪುಟ್ಟ ವಾಕ್ಯ: My only regret in life is that I didn't drink more Scotch- John Maynard Keynes.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


