ಬಿಜೆಪಿ-ಮೋದಿ ವಿಜೃಂಭಿಸಿದ ವಾರ; ರಾಜ್ಯದಲ್ಲೇನು ?
ಈಗ ಚುನಾವಣೆಯ ಸಮೀಕ್ಷಕ-ವಿಶ್ಲೇಷಕರು ಏನು ಬೇಕಾದರೂ ಹೇಳಿಕೊಳ್ಳಬಹುದು.

ಈಗ ಚುನಾವಣೆಯ ಸಮೀಕ್ಷಕ-ವಿಶ್ಲೇಷಕರು ಏನು ಬೇಕಾದರೂ ಹೇಳಿಕೊಳ್ಳಬಹುದು. ಆದರೆ ಯಾರೂ ನರೇಂದ್ರ ಮೋದಿ ಹಾಗೂ ಭಾರತೀಯ ಜನತಾ ಪಾರ್ಟಿಗೆ ಇಂತಹ ಪ್ರಚಂಡ ವಿಜಯ ಸಿಗುವುದೆಂದು ಭಾವಿಸಿರಲಿಲ್ಲ. ಅದು ಕ್ಲೀಷೆ.
ಪ್ರಧಾನಿಯಾಗಿ ಅಧಿಕಾರವನ್ನು ವಿಧಿವತ್ತಾಗಿ ವಹಿಸಿಕೊಳ್ಳುವುದಕ್ಕಿಂತ ಮುಂಚೆಯೇ ತಮಗೆ ಅನುಕೂಲವಾದ ಪರಿಸ್ಥಿತಿಯ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ನರೇಂದ್ರ ಮೋದಿ ಪ್ರಯತ್ನಿಸಿದ್ದಾರೆ. ಅದರ ಪರಿಣಾಮವಾಗಿ ಇಡೀ ದೇಶದಲ್ಲಿ ಬಿಜೆಪಿಯ ಸ್ವರೂಪವೇ ಬದಲಾಗುತ್ತಿರುವಂತೆ ಭಾಸವಾಗುತ್ತಿದೆ. ಅದೇ ಮೋದಿ ಅವರ ವೈಶಿಷ್ಟ್ಯ. ಇತರರು ಹೋಗುವುದಕ್ಕಿಂತ ಮುಂಚೆಯೇ ತಮ್ಮ ಚಿಂತನೆಯನ್ನು ಕಾರ್ಯರೂಪಕ್ಕೆ ಇಳಿಸುವುದಕ್ಕೆ ಆರಂಭಿಸಿರುತ್ತಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದ ಅತಿಥಿಗಳ ಪಟ್ಟಿಯನ್ನು ಸಿದ್ಧಪಡಿಸುವುದರಿಂದ ಹಿಡಿದು, ಮಂತ್ರಿಗಳ ಆಯ್ಕೆ, ಖಾತೆಗಳ ಹಂಚಿಕೆಯವರೆಗೆ, ಎಲ್ಲ ವಿಚಾರಗಳಲ್ಲೂ ಮೋದಿ ಛಾಪು ಬಿದ್ದಿದೆ. ಅವರ ಅಭಿಮಾನಿಗಳೇ ದಂಗು ಬಡಿದವರಂತೆ ಬೆಳವಣಿಗೆಗಳನ್ನು ನೋಡುತ್ತಿದ್ದಾರೆ. ಭಾರತೀಯ ಜನಸಂಘಕ್ಕೆ, ಪಂಡಿತ್ ದೀನದಯಾಳ ಉಪಾಧ್ಯಾಯ, ಪ್ರೊಫೆಸರ್ ಬಲರಾಜ್ ಮಧೋಶ್ ಅವರು ಅಧ್ಯಕ್ಷರಾಗಿದ್ದ ಕಾಲದಿಂದಲೂ, ಪಾಕಿಸ್ತಾನ - ಕಾಶ್ಮೀರದ ವಿಚಾರಗಳನ್ನು ಪ್ರಸ್ತಾಪಿಸುವುದೆಂದರೆ, ಅತಿ ಉತ್ಸಾಹ. ನೆಹರೂ ಸರ್ಕಾರದ ನೀತಿಯನ್ನು ಟೀಕಿಸಿದ್ದೂ ಅದೇ ಪ್ರಬಲ ಅಸ್ತ್ರದಿಂದ. (ಜವಹರಲಾಲ ನೆಹರೂ ತಾಯಿಯ ತವರು ಲಾಹೋರ್). ಈಗಿನ ಹೊಸ ಬಿಜೆಪಿಯ ನವನಾಯಕ, ಗುಜರಾತ್ ಮೂಲದ, ನರೇಂದ್ರ ಮೋದಿ ಅವರೂ ಪಾಕಿಸ್ತಾನದ ಜತೆ, ಅದರ ಪ್ರಧಾನಿಯನ್ನು ಪ್ರತಿಜ್ಞಾ ವಚನ ಸಮಾರಂಭಕ್ಕೆ ಆಹ್ವಾನಿಸಿ, ಹಸ್ತಲಾಘವದ ಮೂಲಕ ಅಂತರಾಷ್ಟ್ರೀಯ ವಲಯಗಳಲ್ಲೇ ದೊಡ್ಡ ಅಲೆಗಳನ್ನು ನಿರ್ಮಿಸಿದ್ದಾರೆ. ಅವರ ಸ್ಥಾನದ ಮಹಿಮೆಯನ್ನು ಗಮನದಲ್ಲಿಟ್ಟುಕೊಂಡು ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿಲ್ಲ ಅದು ಮುತ್ಸದ್ದಿತನ.
ಅಧಿಕಾರದಲ್ಲಿ ಮೋದಿ ಮೊದಲ ದಿನದ ವಿಜೃಂಭಣೆಯ ಅನಂತರ ಎದುರಿಸಬೇಕಾದ ಸಮಸ್ಯೆಗಳು ಹಲವಾರು. ಅದೆಲ್ಲದರ ಪಟ್ಟಿಯೂ ಅವರ ಬಳಿ ಇರಬಹುದು. ಸರ್ಕಾರದ ಕೆಲಸದಲ್ಲಿ ಬಹುದೊಡ್ಡ ಭಾಗವನ್ನು ಅವರೇ ಹೊತ್ತುಕೊಂಡಿದ್ದಾರೆ. ಸಾಲದ್ದಕ್ಕೆ ಇಂದಿರಾ ಗಾಂಧಿಯವರ ಕಾಲದಲ್ಲಿ ಇದ್ದಂತೆ, ಪ್ರಧಾನಿಯ ಕಾರ್ಯಾಲಯವನ್ನು ಇನ್ನಷ್ಟು ಬಲಪಡಿಸುವ ಇಂಗಿತವನ್ನು ನೀಡಿದ್ದಾರೆ. ಮೋದಿ ಅವರ ಗಮನಕ್ಕೆ ಬರದಂತೆ ಸರ್ಕಾರದಲ್ಲಿ ತೃಣ ಕಾಷ್ಟವೂ ಅಲ್ಲಾಡುವುದು ಸಾಧ್ಯವಾಗದೇ ಹೋಗಬಹುದು. ಬರಲಿವೆ: ಪಿ.ಎಂ.ಓ. ಪಾರಮ್ಯದ ದಿನಗಳು.
ಇವೆಲ್ಲದರ ನಡುವೆಯೂ ರಾಜಘಾಟ್‌ಗೆ ತೆರಳಿ ಗಾಂಧಿ ಸ್ಮಾರಕಕ್ಕೆ ಗೌರವ ತೋರಿಸಿದ್ದೂ ಆಗಿದೆ. ಜವಹರಲಾಲ್ ನೆಹರು ನಿಧನದ ನಂತರದ ಐವತ್ತು ವರ್ಷಗಳು ದಾಟಿರುವ ಅವಧಿಯನ್ನು ನೆನಪು ಮಾಡಿಕೊಂಡಿದ್ದಾರೆ. ಪುರುಸೊತ್ತು ಮಾಡಿಕೊಂಡು ಭೂತಪೂರ್ವ ಪ್ರಧಾನಿ ಮನಮೋಹನ ಸಿಂಗ್ ಅವರ ಮನೆಗೇ ಹೋಗಿ ಸಜ್ಜನಿಕೆಯನ್ನು ಮೆರೆದಿದ್ದಾರೆ. ಅಷ್ಟೇ ಸಾಲದೆನ್ನುವಂತೆ, ಅಧಿಕಾರ ವಹಿಸಿಕೊಂಡ ದಿನದ ಸಾಂಪ್ರದಾಯದ ಸಚಿವ ಸಂಪುಟದ ಸಭೆಯನ್ನು ಪೂರ್ಣ ಪ್ರಮಾಣದ ಮಂತ್ರಿಮಂಡಲದ ಸಭೆಯಾಗಿ ಪರಿವರ್ತಿಸಿ, ಬಿಜೆಪಿಯ ಚುನಾವಣೆ ಪ್ರಣಾಳಿಕೆಯ ಒಂದು ಪ್ರಮುಖ ಅಂಶವಾದ ವಿದೇಶದಲ್ಲಿರುವ ಭಾರತೀಯ "ಕಳ್ಳ ಹಣ" ಕುರಿತಂತೆ ವಿಶೇಷ ತನಿಖಾದಳದ ರಚನೆಯ ನಿರ್ಧಾರವನ್ನೂ ಪ್ರಕಟಿಸಿ, ಅದಕ್ಕೆ ಮುಖ್ಯಸ್ಥರನ್ನೂ ನೇಮಿಸಿದ್ದಾರೆ. "ಕೆಲಸ ಅಂದ್ರೆ ಇದಪ್ಪ" ಎಂದು ಉದ್ಗರಿಸದೇ ಬೇರೆ ದಾರಿಯೇ ಇಲ್ಲ.
ಸಿದ್ದರಾಮಯ್ಯ ವರ್ಷಾವಲೋಕನ: ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿ ಒಂದು ವರ್ಷ ಮುಗಿಯುವುದಕ್ಕೆ ಮುಂಚೆಯೇ ಸಿದ್ದರಾಮಯ್ಯ ಅವರು 28 ಕ್ಷೇತ್ರಗಳಲ್ಲೂ ಚುನಾವಣೆಯಲ್ಲಿ ಪಾಲುಗೊಳ್ಳಬೇಕಾಗಿ ಬಂದಿತ್ತು. ಆ ಸಮಯದಲ್ಲಿ ಅವರು ಅನೇಕ ಕಡೆಗಳಲ್ಲಿ ತಮ್ಮ ವರ್ಷದ ಸಾಧನೆಗೆ ಜನರ ಬೆಂಬಲ - ಮೆಚ್ಚುಗೆಯನ್ನು ಅಳೆಯುವ ಒರೆಗಲ್ಲಿನಂತೆ ಜನಸಾಮಾನ್ಯ ವರ್ಗಗಳ ಅಭಿಪ್ರಾಯವನ್ನೂ ಸಂಗ್ರಹಿಸಿರಲೇ ಬೇಕು. ನೂತನ ಕಾಂಗ್ರೆಸ್ ಕಾರ್ಯಕ್ರಮಗಳು ಜನ ಜೀವನದ ಮೇಲೆ ಯಾವ ರೀತಿ ಪರಿಣಾಮವನ್ನು ಬೀರಿದೆ ಎನ್ನುವುದು ಪ್ರತ್ಯಕ್ಷ ದರ್ಶನಕ್ಕೆ ಸಿಕ್ಕಿದ್ದ ಅವಕಾಶವನ್ನು ಅವರು ಕಳೆದುಕೊಳ್ಳಲಿಲ್ಲ.
ಚುನಾವಣೆಯ ಅನಂತರ, ಮುಖ್ಯಮಂತ್ರಿಯಾಗಿ ಅವರು ನೀಡಿರುವ ಹಲವಾರು ಸಂದರ್ಶನಗಳಲ್ಲಿ ಅವರ ಪ್ರಾಮಾಣಿಕ ಅನಿಸಿಕೆಗಳನ್ನು ಪ್ರಕಟಿಸಿದಂತಿಲ್ಲ. ಹೌದು, ಯಾವ ಮುಖ್ಯಮಂತ್ರಿಯೂ ತನ್ನ ಸರ್ಕಾರದ ವೈಫಲ್ಯಗಳನ್ನು ಪ್ರಸ್ತಾಪಿಸುವುದಿಲ್ಲ. ಆದರೆ ಸತ್ಯವನ್ನು ಮುಚ್ಚಿಟ್ಟುಕೊಳ್ಳುವುದೂ ಸಾಧ್ಯವಿಲ್ಲ. ಲೋಕಸಭೆ ಚುನಾವಣೆಯ ಫಲಿತಾಂಶವೇ ಜನಾಭಿಪ್ರಾಯವನ್ನು ಪ್ರಕಟಿಸಿದೆ. ಪ್ರಾಯಶಃ ಸಿದ್ದರಾಮಯ್ಯ ಅವರು ಇದನ್ನು ಊಹಿಸಿಯೇ ಲೋಕಸಭೆ ಚುನಾವಣೆಯ ಫಲಿತಾಂಶ ರಾಜ್ಯ ಸರ್ಕಾರದ ಕೆಲಸದ ಮೇಲಿನ ಜನಮತಗಣನೆ ಅಲ್ಲ, ಅದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದು ಎಂದು ಹಲವಾರು ಕಡೆ ಹೇಳಿ ದಾಖಲೆಯನ್ನು ಸಿದ್ಧಪಡಿಸಿದ್ದು.
ಈಗ ಅಧಿಕಾರಾವಧಿಯ ಶೇಕಡಾ 20 ರಷ್ಟು ಮುಗಿದ ಅನಂತರ, ಪ್ರಥಮ ಬಾರಿಗೆ ಸಿದ್ದರಾಮಯ್ಯ ರಾಜ್ಯದ ನಾನಾ ಇಲಾಖೆಗಳ ಕೆಲಸ ಕಾರ್ಯಗಳ ವಿವರಗಳನ್ನು ಪರಾಮರ್ಶೆ ಮಾಡುವುದಕ್ಕೆ ಮುಂದಾಗಿದ್ದಾರೆ. ಆದರೆ ಅದಕ್ಕೆ ಮುಂಚೆಯೇ, ಕಾಂಗ್ರೆಸ್ ವರಿಷ್ಠರ ಪ್ರತಿನಿಧಿಯಾಗಿ ರಾಜ್ಯಕ್ಕೆ ಬಂದಿದ್ದ ಪಕ್ಷದ ಹಿರಿಯ ಕಾರ್ಯದರ್ಶಿ ದಿಗ್ವಿಜಯಸಿಂಗ್, ಸಿದ್ದರಾಮಯ್ಯ ಸರ್ಕಾರದ ಕೆಲಸಕ್ಕೆ ಮೆಚ್ಚುಗೆಯ ಭರ್ಜರಿ ಸರ್ಟಿಫಿಕೇಟ್ ನೀಡಿದ್ದಾಗಿದೆ. ಅವರ ಬದಲಾವಣೆಯ ಪ್ರಶ್ನೆಯೇ ವರಿಷ್ಠರ ಮುಂದೆ ಇಲ್ಲವಂತೆ.
ಇಂತಹ ಸರ್ಟಿಫಿಕೇಟ್‌ಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು ಎನ್ನುವುದಕ್ಕೆ ಒಂದು ಉದಾಹರಣೆ: 1982ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ರಾಜ್ಯ ಸರ್ಕಾರಗಳ ಪ್ರಗತಿಯ ವಿವರಗಳನ್ನು ಸ್ವಂತವಾಗಿ ಪರಿಶೀಲಿಸುವ ಯೋಜನೆಯನ್ನು ಆರಂಭಿಸಿದ್ದರು. ಕರ್ನಾಟಕಕ್ಕೆ ಬಂದು ವಿಧಾನ ಸಭೆಯಲ್ಲಿ ಇಡೀ ದಿನ ಫೈಲುಗಳನ್ನು ಪರಿಶೀಲಿಸಿ, ಅಂದಿನ ಗುಂಡೂರಾಯರ ಸರ್ಕಾರಕ್ಕೆ ಏ-ಒನ್ ಸರ್ಟಿಫಿಕೇಟ್ ನೀಡಿದರು. ಮಾರನೆಯ ವರ್ಷದ ಚುನಾವಮೆಯಲ್ಲಿ (1983) ಕರ್ನಾಟಕದ ಜನ ಕಾಂಗ್ರೆಸ್ಸನ್ನು ಸೋಲಿಸಿದರು.
ನಿಜ. ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸೋತಿಲ್ಲ. ಹೋದ ಬಾರಿಗಿಂತ (2009) ಎರಡು ಸ್ಥಾನಗಳನ್ನು ಹೆಚ್ಚು ಪಡೆದಿದೆ. ಆದರೂ ಕಾಂಗ್ರೆಸ್ ಪ್ರಶ್ನಾತೀತ ರೀತಿಯಲ್ಲಿ ಅಧಿಕಾರದಲ್ಲಿ ಇದ್ದರೂ, ಒಟ್ಟು ಸ್ಥಾನಗಳಲ್ಲಿ ಅರ್ಧಕ್ಕಿಂತ ಕಡಿಮೆ ಸ್ಥಾನ ಪಡೆದಿದ್ದು ಯಾಕೆ? ಹೇಗೆ? ಆ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವನ್ನೇ ಇನ್ನೂ ಕಾಂಗ್ರೆಸ್ ಮಾಡಿಲ್ಲ. ಹಿಂದೆ ನಿರಾಕರಿಸಿದ್ದ ಮೋದಿ ಅಲೆಯ ಪ್ರಭಾವವನ್ನು ಕಾಂಗ್ರೆಸ್ ಈಗ ಗುರ್ತಿಸಿರುವಂತಿದೆ.
ಈಗ ಕರ್ನಾಟಕದ ಕಾಂಗ್ರೆಸ್ ಮುಂದಿರುವ ದೊಡ್ಡ ಪ್ರಶ್ನೆಗಳಲ್ಲಿ ಪ್ರಮುಖವಾದವು: ಕೆಲಸ ಮಾಡದ ಮಂತ್ರಿಗಳು ಮನೆಗೆ ಹೋಗ್ತಾರಾ? ಬೋರ್ಡು- ನಿಗಮ- ಮಂಡಳಿಗಳ ಅಧ್ಯಕ್ಷ-ನಿರ್ದೇಶಕರ ನೇಮಕ ಯಾವಾಗ? ವಿಧಾನ ಪರಿಷತ್ತಿನ ಸದಸ್ಯರಾಗಿ ಯಾರನ್ನು ನೇಮಿಸಬೇಕು? ರಾಜ್ಯಸಭೆ ಚುನಾವಣೆಯಲ್ಲಿ ಮೂರನೆಯ ಸ್ಥಾನವನ್ನು ಪಡೆಯುವುದು ಸಾಧ್ಯವಾದರೆ ಆ ಸ್ಥಾನಕ್ಕೆ ಯಾರು ಅಭ್ಯರ್ಥಿ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವ ಕೆಲಸ ಈಗಷ್ಟೇ ಆರಂಭವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿನ ಅಂತಃಕಲಹ ಬಿರುಸಾದರೂ ಆಶ್ಚರ್ಯವಿಲ್ಲ.
ಪಕ್ಷದ ಪುನಾರಚನೆ: ರಾಜ್ಯದಲ್ಲಿ ಎರಡು ಪ್ರಮುಖ ಪಕ್ಷಗಳಾದ ಕಾಂಗ್ರೆಸ್- ಬಿಜೆಪಿಗಳೆರಡೂ ಪುನಾರಚನೆಯ ಹೊಸ್ತಿಲಲ್ಲಿ ನಿಂತಿರುವುದು ನಿಜ. ಪ್ರದೇಶ ಕಾಂಗ್ರೆಸ್ಸಿನ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಬೇಕೆನ್ನುವ ಒತ್ತಾಯವನ್ನು ನೇರವಾಗಿ ಅವರೇ ಮಾಡಿದ್ದಾರೆ. ಅವರ ಕುಲ ಬಾಂಧವರಂತೂ ಪ್ರತಿನಿತ್ಯ ಒಂದಲ್ಲ ಒಂದು ವೇದಿಕೆಯಿಂದ ಮಾಡುತ್ತಲೇ ಇದ್ದಾರೆ. ಪರಮೇಶ್ವರ ಅವರು ಉಪಮುಖ್ಯಮಂತ್ರಿಯಾದರೆ, (ಅಂದ ಹಾಗೆ ಸಂವಿಧಾನದ ವಿಧಿನಿಯಮಗಳಲ್ಲಿ ಉಪಪ್ರಧಾನಿ, ಉಪಮುಖ್ಯಮಂತ್ರಿ ಪದಗಳ ಪ್ರಯೋಗವೇ ಇಲ್ಲ. ಅದು ಒಂದು ರಾಜಕೀಯ ಅನುಕೂಲಕ್ಕಾಗಿ ಪಕ್ಷಗಳು ಮಾಡಿಕೊಂಡಿರುವ ವ್ಯವಸ್ಥೆ) ಪ್ರದೇಶ ಕಾಂಗ್ರೆಸ್ಸಿಗೆ ಹೊಸ ಅಧ್ಯಕ್ಷರು ನೇಮಕವಾಗಬೇಕು. ಕೇವಲ ಅಧ್ಯಕ್ಷರು ಬದಲಾದರೆ ಸಾಕೆ? ಈಗಿನ ಪರಿವಾರವೆಲ್ಲ ಬದಲಾಗಬೇಡವೇ? ಅದಕ್ಕೆ ಸಮಯ ಬೇಕು.
ಭಾರತೀಯ ಜನತಾ ಪಾರ್ಟಿಯಲ್ಲಿ ಅದೇ ಪರಿಸ್ಥಿತಿ. ಅನಿರೀಕ್ಷಿತವಾಗಿ, ಚುನಾವಣೆ ಸಮಯದಲ್ಲಿ ಪ್ರದೇಶ ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡ ಧಾರವಾಡದ ಪ್ರಹ್ಲಾದ ಜೋಷಿ ಅವರು ಸಂಸತ್ತಿನ ಸದಸ್ಯರಾಗಿ ದೆಹಲಿಯಲ್ಲೇ ಹೆಚ್ಚು ಸಮಯವನ್ನು ಕಳೆಯಬೇಕಾಗಿರುವುದರಿಂದ ಬೇರೆ ಯಾರನ್ನಾದರೂ ಪ್ರದೇಶ ಸಮಿತಿಯ ಅಧ್ಯಕ್ಷ ಪೀಠದಲ್ಲಿ ಕೂಡಿಸಬಾರದೇಕೆ? ಆ ಸ್ಥಾನವನ್ನು ಹಿಂದೆ ಕಷ್ಟಕಾಲದಲ್ಲಿ ತುಂಬಿದ್ದ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ತಮ್ಮ ಹೇಳಿಕೆಯಲ್ಲಿ ಯಾವ ಜವಾಬ್ದಾರಿಯನ್ನು ಪಕ್ಷ ವಹಿಸಿದರೂ ಅದನ್ನು ನಿರ್ವಹಿಸಲು ಸಿದ್ಧವೆಂದು ಹೇಳಿರುವುದನ್ನು ಗಮನಿಸಿದರೆ ಅವರಿಗೆ ಆ ಸ್ಥಾನ ಸಿಕ್ಕರೂ ಸಿಗಬಹುದು ಎನಿಸುತ್ತಿದೆ.ಭ್ರಷ್ಟಾಚಾರದ ಆರೋಪಗಳು ಮಂತ್ರಿಯಾಗುವುದಕ್ಕೆ ನೈತಿಕ ತಡೆಯನ್ನು ಒಡ್ಡಿದ್ದರೂ ಪಕ್ಷದ ಹುದ್ದೆಗೂ ಆರೋಪಗಳಿಗೂ ಸಂಬಂಧವೇ ಇಲ್ಲ, ಯಡಿಯೂರಪ್ಪ ಅವರಿಗೇ ಆ ಸ್ಥಾನ ಲಾಯಕ್. ಆದರೂ ಆ ಸ್ಥಾನಕ್ಕೇ ಲಾಯಕ್ ಎನ್ನುವ ಅಭಿಪ್ರಾಯ ಮೂಡಿಬರುತ್ತಿರುವಂತಿದೆ. ಕಿಡಿಗೇಡಿತನ: ರಾಜ್ಯದಲ್ಲಿ ಶಾಸಕರ ವೇತನ ಭತ್ಯವನ್ನು ದುಪ್ಪಟ್ಟುಗೊಳಿಸಬೇಕೆನ್ನುವ ಮನವಿಯನ್ನು ಅನೇಕರ ಶಾಸಕರು ವಿಧಾನ ಸಭೆಯ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಸಲ್ಲಿಸಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಸರ್ಕಾರ ಹಣ ಕೊಡಲು ಒಪ್ಪುವುದಾದರೆ ತಮ್ಮದೇನೂ ಅಭ್ಯಂತರವಿಲ್ಲವೆಂದು ತಿಮ್ಮಪ್ಪ ಅವರು ಹೇಳಿದ್ದಾರಂತೆ.
-ಸತ್ಯ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


