ಅಂಕಣಗಳು

ಸಮುದ್ರ- ಹಿಮಬಂಡೆ ನಡುವೆ ಕಬ್ಬಿಣದ ಆಮದು-ರಫ್ತು

Published On :

ಆತ ಪುಟ್ಟ ಹುಡುಗ. ಈಕೆಯೂ ಪುಟಾಣಿ ಹುಡುಗಿ. ಇಬ್ಬರೂ ತರಲೆಗಳು. ಅವರು ಮಾಡುವ ಕಿಲಾಡಿತನ ಒಂದೆರಡಲ್ಲ. ಸಣ್ಣವರು ಎಂದು ಕಡೆಗಣಿಸಿದಿರೊ, ಕಥೆ ಮುಗಿಯಿತು ಎಂದೇ ಲೆಕ್ಕ. ಮುಟ್ಟಿ ನೋಡಿಕೊಳ್ಳಬೇಕು,  ಹಾಗಿರುತ್ತದೆ ಅವರು ಕೊಡುವ ಪೆಟ್ಟು. ಯಾರೊಬ್ಬರೂ ಅವರು ಬರಲಿ ಎಂದು ಬಯಸುವುದಿಲ್ಲ. ಚೆನ್ನಾಗಿ ಗೊತ್ತು, ಅವರೇನಾದರೂ ಬಂದರೆ ಸುಮ್ಮನೇ ಹೊಗುವವರಂತೂ ಅಲ್ಲವೇ ಅಲ್ಲ. ತಾವು ಬಂದಿದ್ದೆವು ಎನ್ನುವುದರ ಕುರುಹಾಗಿ ಏನಾದರೂ ಒಂದಷ್ಟು ಅನಾಹುತಗಳನ್ನು ಮಾಡಿಯೇ ಹೋಗುವವರು. ಇಡೀ ಜಗತ್ತಲ್ಲಿ ಆ ಇಬ್ಬರೇ ಪುಟ್ಟ ಮಕ್ಕಳು ಅಲುಗಾಡಿಸಬಲ್ಲರು ಎಂದರೆ ಅವರ ತಾಕತ್ತೆಷ್ಟಿರಬಹುದು! ಅವರ ಆಗಮನದ ಸುಳಿವು ಸಿಕ್ಕರೆ ಎಲ್ಲರ ಮನದಲ್ಲೂ ಭಯ. ಹೀಗಾಗಿ ಈಗೀಗ ಅವರ ಚಲನವಲನದ ಬಗ್ಗೆ ಇನ್ನಿಲ್ಲದ ನಿಗಾ. ತಮಾಷೆ ನೋಡಿ. ಇಬ್ಬರೂ ಎಲ್ಲಿಗೂ ಒಟ್ಟಾಗಿ ಹೋಗುವುದಿಲ್ಲ. ಏನನ್ನೇ ಮಾಡಿದರೂ ಜೊತೆಯಾಗಿ ಮಾಡುವುದಿಲ್ಲ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದೇ ಇಲ್ಲ. ಈತ ಮಾಡಿದ್ದು ಅವಳಿಗೆ ಹಿಡಿಸುವುದಿಲ್ಲ, ಆಕೆ ಮಾಡಿದ್ದು ಇವನಿಗೆ ಆಗಿಬರುವುದಿಲ್ಲ. ಇವನಿಗೆ ವಿರುದ್ಧವಾಗಿ ಅವಳು, ಅವಳಿಗೆ ವಿರುದ್ಧವಾಗಿ ಇವನು. ಪರಸ್ಪರರ ನಡೆ ಯಾವತ್ತೂ ವಿರುದ್ಧವೇ.
ಯಾರಿವರು ಎಂದುಕೊಂಡಿರಿ? ಎಲ್‌ನಿನೋ ಬಗ್ಗೆ ನಿಮಗೆ ಗೊತ್ತಲ್ಲವೆ? ಕಳೆದವಾರ ಚರ್ಚಿಸಿದ್ದೆವು. ಅದೇ ರೀತಿಯ ಇನ್ನೊಂದು ವಿದ್ಯಮಾನ ಲಾನಿನಾ. ಎಲ್‌ನಿನೋ ನಿಕ್‌ನೇಮ್ 'ಪುಟ್ಟ ಹುಡುಗ', ಲಾ ನಿನಾ 'ಪುಟ್ಟ ಹುಡುಗಿ.' ಎರಡೂ ಪೆಸಿಫಿಕ್ ಸಮುದ್ರದಲ್ಲಿ ಸಂಭವಿಸುವಂಥವೇ. ಆದರೆ ಉಂಟುಮಾಡುವ ಪರಿಣಾಮಗಳು, ಸೃಷ್ಟಿಸುವ ತಲ್ಲಣಗಳು ಮಾತ್ರ ತದ್ವಿರುದ್ಧ. ಉದಾಹರಣೆಗೆ ಹೇಳಬೇಕು ಅಂತಾದರೆ ಚಳಿಗಾಲದಲ್ಲಿ ಪಶ್ಚಿಮ ಅಮೆರಿಕದಲ್ಲಿ ತಣ್ಣನೆಯ ಅನುಭವವನ್ನು ಲಾ ನಿನಾ ಉಂಟುಮಾಡುತ್ತದೆ. ಮತ್ತೆಂದಾದರೂ ಅದೇ ಕಾಲದಲ್ಲಿ ಆಗಮಿಸುವ ಎಲ್‌ನಿನೋ ತೀವ್ರ ಬರಗಾಲ ತರುತ್ತಾನೆ. ಪರಿಸ್ಥಿತಿ ಹೇಗಿರುತ್ತದೆ ಎಂದರೆ ದಕ್ಷಿಣ ಅಮೆರಿಕ ಪ್ರವಾಹದಿಂದ ತತ್ತರಿಸುತ್ತಿರುವಾಗ ಉತ್ತರ ಅಮೆರಿಕದಲ್ಲಿ ಸುಡು ಬಿಸಿಲು.
ಭೂಮಧ್ಯ ರೇಖೆಯ ಸುತ್ತ ಇವುಗಳ ಚೆಲ್ಲಾಟ ಜಾಗತಿಕ ತಾಪಮಾನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎನ್ನುವುದನ್ನು ವಿಜ್ಞಾನಿಗಳು ಅರಿತಿದ್ದಾರೆ. ಭೂಮಧ್ಯ ರೇಖೆಯ ಸುತ್ತ ಪೆಸಿಫಿಕ್ ಸಮುದ್ರದ ನೀರಿನ ತಾಪಮಾನದಲ್ಲಿನ ಏರಿಳಿತ ಜಾಗತಿಕ ತಾಪಮಾನದ ಮೇಲೂ ಪ್ರಭಾವ ಬೀರುತ್ತಿರುವುದು ದೃಢಪಟ್ಟಿದೆ. ಅಷ್ಟೇ ಅಲ್ಲ, ಅದು ಹಿಂದೂ ಮಹಾಸಾಗರದ ಮೇಲೆಯೂ ವ್ಯತಿರಿಕ್ತ ಪರಿಣಾಮವನ್ನೇ ಬೀರುತ್ತಿದೆ. ಸಮುದ್ರದ ನೀರು ತಣ್ಣಗಾಗಲು ಅಥವಾ ಬಿಸಿಯಾಗಲು ಎಲ್‌ನಿನೋ, ಲಾ ನಿನಾಗಳೇ ಕಾರಣ ತಾನೆ? ಆದ್ದರಿಂದಲೇ ಜಾಗತಿಕ ತಾಪಮಾನ ಹೆಚ್ಚಳದ ವಿಚಾರವಾಗಿ ಇತರ ಸಂಗತಿಗಳಿಗೆ ಎಷ್ಟು ಪ್ರಾಮುಖ್ಯ ಇದೆಯೋ ಅಷ್ಟೇ ಮಹತ್ವ ಇವುಗಳಿಗೆ. ಸಮುದ್ರ ಮತ್ತು ವಾತಾವರಣದಲ್ಲಿನ ಈ ಬದಲಾವಣೆಗಳನ್ನು ಒಟ್ಟಾಗಿ 'ಎನ್ಸೋ' (ENSO)ಎಲ್‌ನಿನೋ ಸದರ್ನ್ ಆಸ್ಕಿಲೇಷನ್ ಎಂದು ಹೇಳಲಾಗುತ್ತದೆ.
ಎನ್ಸೊ ಪ್ರಭಾವ ಹಿಂದೂಮಹಾಸಾಗರದ ಮೇಲೆ ಹೇಗಿದೆ ಎಂಬ ಪ್ರಶ್ನೆಗೆ ಸರಳ ಉತ್ತರ- ಇತ್ತೀಚಿನ ವರ್ಷಗಳಲ್ಲಿ ಹಿಂದೂಮಹಾಸಾಗರದಲ್ಲಿನ ಉಷ್ಣತೆ, ನೀರಿನ ಮಟ್ಟ ಏರುತ್ತಿರುವುದು ಎನ್ಸೊದಿಂದಲೇ, ವಿಶೇಷವಾಗಿ ಲಾನಿನಾದಿಂದ. 2003ರಲ್ಲಿ 'ಸೈನ್ಸ್‌' ನಿಯತಕಾಲಿಕದಲ್ಲಿ ಸಂಶೋಧನಾ ವರದಿಯೊಂದು ಪ್ರಕಟವಾಗಿತ್ತು. ನೈರುತ್ಯ ಏಷ್ಯಾ, ಅಮೆರಿಕ, ಯೂರೋಪ್‌ಗಳಲ್ಲಿನ 1998ರಿಂದ 2002ರವರೆಗಿನ ಅವಧಿಯ ಬರಕ್ಕೂ, ಹಿಂದೂಮಹಾಸಾಗರ ಮತ್ತು ಪೆಸಿಫಿಕ್ ಸಮುದ್ರಗಳಲ್ಲಿನ ನೀರು ಬಿಸಿಯಾಗಿದ್ದಕ್ಕೂ ಪರಸ್ಪರ ಸಂಬಂಧವಿದೆ ಎನ್ನುವುದು ಆ ವರದಿಯ ಪ್ರತಿಪಾದನೆ. ಇತ್ತೀಚಿನ ವರ್ಷಗಳಲ್ಲಿ ಎನ್ಸೊ ವಾಯುಮಂಡಲದ ಏರಿಳಿತಗಳ ಮೇಲೂ ಹಿಡಿತ ಬಿಗಿಗೊಳಿಸುತ್ತಿದೆ ಎನ್ನುವುದು ವಿಜ್ಞಾನಿಗಳ ಕಳವಳ.
ಭಾರತದಲ್ಲೂ ನಾಲ್ಕು ವರ್ಷ ಹಿಂದಿನ ಪರಿಸ್ಥಿತಿ ಕಣ್ಮುಂದೆ ತಂದುಕೊಳ್ಳಿ. ಆ ವರ್ಷ ಮುಂಗಾರು ಕಾಣೆಯಾಗಿತ್ತು. ಇಡೀ ದೇಶದಲ್ಲಿ ಭೀಕರ ಬರ. ಅದಕ್ಕೆ ಕಾರಣವಾದದ್ದು ಎಲ್‌ನಿನೋ. ಅದರ ಪ್ರಭಾವ ಮರೆಯಾದ ಬಳಿಕ ಹಿಂಗಾರಿನಲ್ಲಿ ಕೊಂಚ ಮಳೆಯಾಗಿತ್ತು. 2010ರ ಮುಂಗಾರು ಚುರುಕಾಗಿದ್ದದ್ದು ಲಾನಿನಾದಿಂದ. ಆ ವರ್ಷ ಪೆಸಿಫಿಕ್ ಸಾಗರದಲ್ಲಿ ಲಾನಿನಾ ಪ್ರತ್ಯಕ್ಷವಾದ್ದರಿಂದ ಆಸ್ಟ್ರೇಲಿಯಾದಲ್ಲಿ ಕಂಡರಿಯದ ಪ್ರವಾಹ, ದೇಶದ ಇಡೀ ಈಶಾನ್ಯ ಭಾಗ ಜಲಾವೃತವಾಗಿತ್ತು. ಬ್ರೆಜಿಲ್, ಶ್ರೀಲಂಕಾಗಳಲ್ಲೂ ಆ ವರ್ಷ ಅತಿಯಾದ ವರ್ಷಧಾರೆ, ಪ್ರವಾಹ. ಮಳೆಗಾಲದ ಕೊನೆಯಲ್ಲಿ ನಮ್ಮ ದೇಶದ ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್‌ಗಳಲ್ಲೂ ಪ್ರವಾಹದ ಆರ್ಭಟ ಇರಲಿಲ್ಲವೆ? ಪೆಸಿಫಿಕ್ ಸಮುದ್ರದಲ್ಲಿ ಲಾನಿನೊ ಕಾಣಿಸಿಕೊಂಡಿದ್ದರಿಂದ ಹಿಂದೂಮಹಾಸಾಗರದಲ್ಲಿನ ನೀರೂ ಬಿಸಿಯಾಗಿತ್ತು. ಪರಿಣಾಮವಾಗಿ ಈ ಮೂರು ರಾಜ್ಯಗಳಲ್ಲಿ ಮಳೆಯ ಸಮಾನ ಹಂಚಿಕೆ ಆಯಿತು. ನೈರುತ್ಯ ಮಾರುತದ ಅವಧಿಯಯಲ್ಲಿ ಎರಡೂ ಸಮುದ್ರಗಳಲ್ಲಿನ ನೀರು ಬಿಸಿಯಾಗಿದ್ದರಿಂದ ತೇವಾಂಶ ಅಧಿಕಗೊಂಡು, ಮಳೆ ಸುರಿಸಲು ಅಗತ್ಯ ಇದ್ದುದಕ್ಕಿಂತ ಹೆಚ್ಚು ಶಕ್ತಿಯನ್ನು ಮಾರುತಗಳು ಪಡೆದುಕೊಂಡವು.
ಮತ್ತೆ ಜಾಗತಿಕ ತಾಪಮಾನದ ವಿಚಾರಕ್ಕೆ ಮರಳೋಣ. 2011 ನಾಸಾ ದಾಖಲೆಗಳ ಪ್ರಕಾರ ಆ ವರ್ಷ ಜಾಗತಿಕ ತಾಪಮಾನದ ಇತಿಹಾಸದಲ್ಲಿ 11ನೇ 'ಅತಿ ತಾಪಮಾನದ ವರ್ಷ' ಎಂದು ದಾಖಲಾಯಿತು. 1997ರ ನಂತರ ಈ ಪರಿಯಲ್ಲಿ ಉಷ್ಣತೆ ಏರಿತ್ತು ಎನ್ನುವುದು ಗಮನಾರ್ಹ. ಹಿಂದಿನ ವರ್ಷವಷ್ಟೇ ಪ್ರತ್ಯಕ್ಷವಾಗಿದ್ದ ಲಾನಿನಾದ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಭೂಮಂಡಲದ ತಾಪಮಾನ ಏರತೊಡಗಿತ್ತು. ಲಾನಿನಾ ಇದ್ದಾಗ, 2010ರಲ್ಲಿ ಆಸ್ಟ್ರೇಲಿಯಾ 112 ವರ್ಷಗಳ ಇತಿಹಾಸದಲ್ಲೇ ಮೂರನೇ 'ಅತಿ ತೇವಾಂಶದಿಂದ ಕೂಡಿದ' ವರ್ಷ ಎನ್ನುವ ದಾಖಲೆಯನ್ನು ಕಂಡಿತ್ತು. 2010ರ ಕೊನೆ-2011ರ ಆದಿಯಲ್ಲಿದ್ದ ಈ ಲಾನಿನಾ ಅವಧಿಯಲ್ಲಿಯೇ ಹಿಂದೂಮಹಾಸಾಗರದಲ್ಲಿನ ಉಷ್ಣತೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು ಎನ್ನುವುದು ಗಮನಾರ್ಹ.
----
ಸಮುದ್ರದ ಅವಾಂತರದ ಇನ್ನೂ ಒಂದು ಬೆಳವಣಿಗೆಯ ಬಗ್ಗೆ ಇಲ್ಲಿ ಪ್ರಸ್ತಾಪಿಸಲೇಬೇಕು. ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ದೊಡ್ಡ ಪ್ರಮಾಣದಲ್ಲಿ ಕರಗಿದ ಕಬ್ಬಿಣದ ತ್ಯಾಜ್ಯ ಸಮುದ್ರದೊಳಗೆ ಹರಿಯುತ್ತಿರುವ ಕಾರಣ, ಹಿಮ ಪದರ ಕೂಡ ಕರಗಿ ಆ ಮೂಲಕ ಜಾಗತಿಕ ತಾಪಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆಯಂತೆ.
ಹೊಸ ಸಂಶೋಧನೆಗಳು ಹೇಳುವುದನ್ನು ಒಪ್ಪುವುದಾದರೆ, ಸಾಗರದಾಳದಲ್ಲಿ ಜೈವಿಕವಾಗಿ ಉತ್ಪತ್ತಿಯಾಗುವ ಕಬ್ಬಿಣಾಂಶವು ಕಂಡುಬರುತ್ತಿರುವುದು, ಸಮುದ್ರದ ಜೀವಿಗಳ ಆಹಾರ ಸರಪಣಿ ಹಾಗೂ ಜಾಗತಿಕ ತಾಪಮಾನದ ಮೇಲೆ ಅತಿಯಾದ ಪ್ರಭಾವ ಬೀರುತ್ತಿದೆ.
ಈ ಅಧ್ಯಯನ ತಂಡ ಗಮನಿಸಿದಂತೆ, ಹಿಮ ಪದರ ಕರಗಿ ಉಂಟಾಗುವ ನೀರು ಯಥೇಚ್ಛ ಪ್ರಮಾಣದ ಕಬ್ಬಿಣ ಹೊಂದಿರುತ್ತದೆ. ಫಿಟೋಪ್ಲಾಂಕ್ಟನ್ ಎಂದು ಕರೆಯಲಾಗುವ ಬೆಳವಣಿಗೆ ಇದನ್ನು ಅತಿಯಾಗಿ ಅವಲಂಬಿಸಿದೆ.
ಜೈವಿಕವಾಗಿ ದೊರಕುವ ಕಬ್ಬಿಣ ಫಿಟೋಪ್ಲಾಂಕ್ಟನ್ ಬೆಳವಣಿಗೆಗೆ ಸಹಕರಿಸುವುದು ಗೊತ್ತಿಲ್ಲದ ವಿಷಯವೇನಲ್ಲ. ಇದು ಭೂಮಂಡಲದ ಮೇಲಿರುವ ಎಲ್ಲ ಮಹಾಸಾಗರಗಳಲ್ಲೂ ಸಂಭವಿಸುವ ವಿಷಯವೇ. ಫಿಟೋಪ್ಲಾಂಕ್ಟನ್ ತನ್ನ ಬೆಳವಣಿಗೆಗೆ ಪ್ರತ್ಯುಪಕಾರವೋ ಎಂಬಂತೆ ತನ್ನಲ್ಲಿ ಇಂಗಾಲವನ್ನು ಹಿಡಿದಿಟ್ಟುಕೊಂಡು, ಭೂಗೋಳದ ತಾಪಮಾನದ ಪ್ರಭಾವವನ್ನು ನಿಯಂತ್ರಿಸುತ್ತದೆ. ಪ್ಲಾಂಕ್ಟನ್ ಕೂಡ ಇಲ್ಲಿ ಆಹಾರ ಸರಪಣಿಗೆ ಕೊಂಡಿಯಾಗಿ, ಸಮುದ್ರದ ಪ್ರಾಣಿಗಳಿಗೆ ಆಹಾರವಾಗುತ್ತದೆ.
ಬ್ರಿಸ್ಟಲ್, ಲೀಡ್ಸ್, ಎಡಿನ್‌ಬರೋ ಯೂನಿವರ್ಸಿಟಿಗಳ ಹಾಗೂ ನ್ಯಾಷನಲ್ ಓಶನೋಗ್ರಫಿ ಸೆಂಟರ್‌ನ ಸಂಶೋಧಕರ ತಂಡ 2012ರ ಬೇಸಿಗೆಯಲ್ಲಿ ಗ್ರೀನ್‌ಲೆಂಡಿನ ಲೆವೆರೆಟ್ ಗ್ಲೇಶಿಯರ್ ಪ್ರದೇಶದ ಹಿಮದ ಪದರ ಕರಗಿ ಉಂಟಾದ ನೀರನ್ನು ಪರೀಕ್ಷಿಸಿದಾಗ ಅವರಿಗೆ ಅದರಲ್ಲಿ ಜೈವಿಕ ಕಬ್ಬಿಣದ ಅಂಶಗಳು ಹೇರಳವಾಗಿ ಇರುವುದು ದೃಢವಾಯಿತು. ವಿಶೇಷವಾಗಿ ಹಿಮದ ಕೆಳಪದರವು ಈ ಜೈವಿಕ ಕಬ್ಬಿಣವನ್ನು ಹೆಚ್ಚು ಒಳಗೊಂಡಿತ್ತು. ಅಲ್ಲಿಗೆ, ಧ್ರುವಪ್ರದೇಶಗಳಲ್ಲಿ ಇರುವ ಸಮುದ್ರಗಳು ಕೆಲವು ಋತುಮಾನಗಳಲ್ಲಿ ಹಿಮನದಿಗಳ ಮೂಲಕ ಕಬ್ಬಿಣಾಂಶವನ್ನು ಸೆಳೆದುಕೊಳ್ಳುವುದು ನಿಚ್ಚಳವಾಯಿತು.
ಬ್ರಿಸ್ಟಲ್ ವಿಶ್ವವಿದ್ಯಾಲಯದ ಜಾನ್ ಹಾಕಿಂಗ್ಸ್ ಹೇಳುವ ಪ್ರಕಾರ ಗ್ರೀನ್‌ಲೆಂಡ್ ಮತ್ತು ಅಂಟಾರ್ಕ್ಟಿಕ್ ಸಾಗರಗಳ ಹಿಮದ ಪದರಗಳು ಸುಮಾರು ಶೇ.10 ಭಾಗದಷ್ಟು ಭೂಮೇಲ್ಮೈಯನ್ನು ಆವರಿಸಿದೆ. ಈ ಹಿಮಬಂಡೆಗಳಿಂದ ರಫ್ತಾಗುವ ಕಬ್ಬಿಣಾಂಶಗಳು ಸಮುದ್ರಕ್ಕೆ ಅಗತ್ಯವಿರುವ ಕಬ್ಬಿಣದ ಮೂಲ ಎಂದು ಗುರುತಿಸಲಾಗಿದೆ. ಅಲ್ಲದೆ ನಿರಂತರವಾಗಿ ದೊಡ್ಡ ಪ್ರಮಾಣದ ಹಿಮಪದರಗಳು ಕರಗಿ ಅದರಲ್ಲಿನ ಕಬ್ಬಿಣದ ಅಂಶಗಳು ಸಮುದ್ರವನ್ನು ಸೇರುತ್ತಲೇ ಇದೆ.
ಇದರರ್ಥ, ಬೇಸಿಗೆ ಶುರುವಾಗುತ್ತಿದ್ದ ಹಾಗೆ ಭಾರೀ ಪ್ರಮಾಣದ ಕಬ್ಬಿಣ ಹಿಮಪದರ ಕರಗುವ ಮೂಲಕ ಸಮುದ್ರಕ್ಕೆ ಹರಿಯುತ್ತಿದೆ. ಹಾಗಾಗಿ ಕರಾವಳಿ ಭೂಭಾಗಕ್ಕೆ ನಿರಂತರವಾಗಿ ಕಬ್ಬಿಣಾಂಶ ದೊರಕುತ್ತಿದೆ ಎಂಬುದು ಹಾಕಿಂಗ್ಸ್‌ವಾದ.
ಸಮುದ್ರದ ಉತ್ಪನ್ನ ಸಾಮರ್ಥ್ಯಕ್ಕೆ ಜೈವಿಕ ಕಬ್ಬಿಣ ತುಂಬಾ ಮುಖ್ಯ. ಕಬ್ಬಿಣದ ಅಂಶಗಳು ಹೆಚ್ಚಾದಷ್ಟೂ ಸಮುದ್ರ ತನ್ನ ಉತ್ಪತ್ತಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತದೆ ಎಂಬುದು ಸಂಶೋಧನೆ ಧೃಡಪಡಿಸಿದೆ. ಭೂಮಿಯಲ್ಲಿ ಅತಿ ಹೇರಳವಾಗಿ ಸಿಗುವ ನೈಸರ್ಗಿಕ ಲೋಹಗಳಲ್ಲಿ ಕಬ್ಬಿಣಕ್ಕೆ ನಾಲ್ಕನೇ ಸ್ಥಾನವಿದ್ದರೂ, ನೈಸರ್ಗಿಕವಾಗಿ ದೊರಕುವ ನೀರಿನಲ್ಲಿ ಇದು ಜಡಲೋಹವಾಗಿ ಉಳಿದುಕೊಂಡಿರುವ ಕಾರಣ, ಯಥೇಚ್ಚ ಎಂಬಂತೆ ದೊರಕುತ್ತಿಲ್ಲ.
ಕಳೆದೆರಡು ದಶಕಗಳಲ್ಲಿ ಸಮುದ್ರದ ಆಹಾರ ಸರಪಣಿ ಮತ್ತು ಜಾಗತಿಕ ಇಂಗಾಲ ಚಕ್ರದಲ್ಲಿ ಕಬ್ಬಿಣದ ಪಾತ್ರದ ಬಗ್ಗೆ ಹಲವು ವಾದವಿವಾದಗಳು ನಡೆದಿವೆ. ಒಂದು ಗುಂಪು, ಸಮುದ್ರದೊಳಗೆ ಕಬ್ಬಿಣ ಸುರಿದು ಪ್ಲಾಂಕ್ಟನ್ ಬೆಳವಣಿಗೆಯನ್ನು ಹೆಚ್ಚಿಸುವ ಪ್ರಯತ್ನ ಮಾಡಿದ್ದೂ ಇದೆ. ಹೀಗೆ ಪ್ಲಾಂಕ್ಟನ್ ಬೆಳೆಸುವುದರಿಂದ ಇಂಗಾಲದ ಡೈ ಆಕ್ಸೈಡನ್ನು  ಕಟ್ಟಿಹಾಕಬಹುದೆಂಬ ಆಲೋಚನೆ ಅವರದು. ಇದಿಷ್ಟನ್ನೂ ಗಮನಿಸಿದ ನಂತರ ಅರ್ಥವಾಗುವ ವಿಷಯವೆಂದರೆ, ಹಿಮಪದರಗಳು ಕರಗಿ ಕಬ್ಬಿಣ ಅಂಶ ಸಮುದ್ರದ ತಳ ಸೇರುತ್ತಿರುವುದು ಹೊಸ ವಿಷಯವಲ್ಲ. ಇದು ಪ್ರತಿ ಬೇಸಿಗೆಯ ದಿನಚರಿ. ಸಮುದ್ರದ ಉಷ್ಣಾಂಶ ಆ ಮೂಲಕ, ಭೂ ತಾಪಮಾನದ ಎರಿಳಿತಕ್ಕೆ ಇದರ ಕೊಡುಗೆ ಅಪಾರ
---
ಸಮುದ್ರದಲ್ಲಿನ ಅಲೆಗಳ ಭೋರ್ಗರೆತ ಕಣ್ಣು, ಕಿವಿಗಳಿಗೆ ಇಂಪು. ಸಮುದ್ರದಲ್ಲಿನ ಚೆಲ್ಲಾಟವೂ ಮನಕ್ಕೆ ಮುದವೇ. ಆದರೆ ಇದೇ ಸಮುದ್ರದಲ್ಲಿನ ನೀರಿನ ಮಟ್ಟ, ಜಲಧಾರೆಯ ಉಷ್ಣತೆಯಲ್ಲಿ ಕೊಂಚ ಏರಿಳಿತವಾದರೂ ಜಗತ್ತೇ ಅಲ್ಲೋಲಕಲ್ಲೋಲ ಎನ್ನುವುದು ದಿಟ. ಪೆಸಿಫಿಕ್ ಸಮುದ್ರದಲ್ಲಿನ ಇಬ್ಬರು ಪುಟಾಣಿಗಳ ಚೆಲ್ಲಾಟದ ಕುರಿತಾಗಿಯಷ್ಟೇ ಸದ್ಯ ವಿಜ್ಞಾನಿಗಳ ಚಿತ್ತ ಹರಿದಿದೆ. ಉಳಿದ ಸಮುದ್ರಗಳಲ್ಲೂ ಇಂಥ ತಂಟೆಕೋರರು ಎಷ್ಟುಮಂದಿ ಅಡಗಿ ಕುಳಿತಿದ್ದಾರೆಯೋ?


-ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.