ಅಂಕಣಗಳು

ಬಿಜೆಪಿ ವಿರೋಧಿಗಳೆಲ್ಲ ಅಸ್ತವ್ಯಸ್ತ

Published On :

ಚುನಾವಣೆಯಲ್ಲಿ ಗೆದ್ದ ಅನಂತರ, ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಯಾವ ಕಾರಣಕ್ಕೂ, ಯಾರಿಗೂ ತಪ್ಪಾಗಿ ಕಾಣಿಸಬಹುದಾದಂತಹ ಎಲ್ಲ ಬಗೆಯ ಮಾತು, ವರ್ತನೆಯನ್ನು ತ್ಯಜಿಸಿ, ಪ್ರಚಂಡ ವಿಜಯದ ಪ್ರಖರ ಬೆಳಕಿನಲ್ಲಿ ಸಾರ್ವಜನಿಕ ಜೀವನದಲ್ಲಿ ಮಾದರಿ ಎನ್ನುವಂತೆಯೇ ನಡೆದುಕೊಂಡಿದ್ದಾರೆ.
ಮೋದಿ ಅವರು ತಮ್ಮ ಭವಿಷ್ಯದ ಯೋಜನೆಗಳನ್ನು ಕುರಿತು ಸ್ಥೂಲವಾಗಿ, ಸರ್ವೇಸಾಮಾನ್ಯ ಎನ್ನಬಹುದಾದ ಇಂಗಿತವನ್ನಷ್ಟೇ ನೀಡಿ, ವಿವರಗಳ ಪ್ರಸ್ತಾಪಕ್ಕೆ ಕೈ ಹಾಕಿಲ್ಲ. ಅಷ್ಟಕ್ಕೂ ಅವರು ನಿಯೋಜಿತ ಪ್ರಧಾನಿ.
ತತ್ಕ್ಷಣದಲ್ಲೇ ಆಗಬೇಕಾದ ತುರ್ತು ಕೆಲಸಗಳು ಅವರ ಮುಂದೆ ಬೆಟ್ಟದಷ್ಟಿವೆ. ಅವರ ಗಮನವೆಲ್ಲ ಆ ಕಡೆಗೇ ಇರುವುದು ಸಹಜ.
ಆದರೂ ಅವರಿಗೆ ಅಯಾಚಿತವಾಗಿ ಸಲಹೆಗಳನ್ನು ಕೊಡುವವರು ಬೇಕಾದಷ್ಟು ಮಂದಿ. ಅವರ ಪೋಷಾಕಿನಿಂದ ಹಿಡಿದು ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಕುರಿತಂತೆ ಅನೇಕ ಸಲಹೆಗಳೂ ಅವರ ಕಿವಿಗೆ ಬೀಳುತ್ತಿರಬೇಕು. ಬಹಿರಂಗವಾಗಿ ಮಾಧ್ಯಮ ಪ್ರಪಂಚದಲ್ಲೂ ಸಲಹೆಗಳು ಹರಿದಾಡುತ್ತಿವೆ.
ವಿಶ್ವವಿಖ್ಯಾತ ಆರ್ಥಿಕ ತಜ್ಞ ಜಗದೀಶ ಭಗವತಿ (ಅವರು ಬಿಜೆಪಿಯ ಚುನಾವಣೆಯ ಪ್ರಣಾಳಿಕೆ ಸಿದ್ಧಪಡಿಸುವುದರಲ್ಲಿ ನೆರವು ನೀಡಿದ್ದರಂತೆ) ಅವರು ಯಾವ ಕಾರಣಕ್ಕೂ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ ರಾಜನ್ ಅವರನ್ನು ಬದಲಾಯಿಸಬಾರದು. ಶಂಕರ ಆಚಾರ್ಯ ಅವರಂತಹ ಹಿರಿಯರ ಸಲಹೆ ಪಡೆದೇ ಮುಂದಿನ ಹೆಜ್ಜೆ ಇಡಬೇಕು ಎನ್ನುವ ಕಿವಿ ಮಾತನ್ನು ಹೇಳಿದ್ದಾರೆ. ನರೇಂದ್ರ ಮೋದಿ ಅವರನ್ನು ಹೊಗಳಿ ಅಟ್ಟಕ್ಕೇರಿಸಲೂ ಬೇಕಾದಷ್ಟು ಜನರು ಸಿದ್ಧರಾಗಿದ್ದಾರೆ.
ಒಂದು ಸರ್ಕಾರ ಬದಲಾದಾಗ, ಇಂತಹದೆಲ್ಲ ಸಹಜವಾಗಿ ಕಂಡು ಬರುವ ಚಟುವಟಿಕೆ. ಅಧಿಕಾರದಲ್ಲಿ ಯಾರೇ ಬರಲಿ ಅವರು ಇಂತಹ ಒತ್ತಡಗಳನ್ನು ಸಹಿಸಲೇಬೇಕು ಅಂತಿಮ ನಿರ್ಧಾರ ಅವರದ್ದೇ ಎನ್ನುವುದು ಗೊತ್ತಿರುವುದರಿಂದ, ಪ್ರಕಟವಾದ ಎಲ್ಲ ಪ್ರಚಲಿತ ವಿದ್ಯಮಾನಗಳಿಗೂ ಅವರು ಪ್ರತಿಕ್ರಿಯೆ ನೀಡಲೇಬೇಕೆಂದೇನೋ ಇಲ್ಲ. ಮೋದಿ ಅವರು ನೀಡುವುದೂ ಇಲ್ಲ.
ಬಿಜೆಪಿಯ ನಾಯಕರಂತೂ ದಶಕದ ವನವಾಸದ ಅನಂತರ ಅಧಿಕಾರ ಸಿಕ್ಕಿರುವುದರಿಂದ ಉಬ್ಬಿ ಹೋಗಿರುವುದು ನಿಜ. ಆದರೆ ಅವರಲ್ಲಿ ಎಲ್ಲರೂ ನಿಷ್ಕಾಮಕರ್ಮದ ಸಿದ್ಧಾಂತದ ಆರಾಧಕರಲ್ಲ. ಬಿಜೆಪಿಯ ವಿಜಯದಲ್ಲಿ ತಮ್ಮ ಪಾಲೇನು, ಅದನ್ನು ಪಡೆಯುವುದು ಹೇಗೆ ಎನ್ನುವುದು ಅವರ ಚಿಂತೆ. ಅದರಲ್ಲಿ ತಪ್ಪೇನೂ ಇಲ್ಲ.
ಇನ್ನು ಕೆಲವು ದಿನ ಈ ಉತ್ಸವ ನಡೆಯಬೇಕಾದ್ದೇ.
ಸೋತಪಕ್ಷಗಳ ಪಾಡು: ಚುನಾವಣೆಯಲ್ಲಿ ಸೋತ ರಾಷ್ಟ್ರೀಯ ಪ್ರಾದೇಶಿಕ ಪಕ್ಷಗಳ ಪಾಳಯದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಅನಿಶ್ಚಿತತೆಯ ತಾಂಡವ ನಡೆದಿದೆ. ಅದರಲ್ಲಿ ಪ್ರಮುಖವಾಗಿ ಕಾಂಗ್ರೆಸ್ಸಿನ ಆಗು-ಹೋಗುಗಳು ಗಮನಾರ್ಹ.
ಶತಮಾನಕ್ಕೂ ಹೆಚ್ಚಿನ ಅವಧಿಯ ಇತಿಹಾಸದ ಕಾಂಗ್ರೆಸ್ ಈಗ ತನ್ನ ಅಸ್ತಿತ್ವವನ್ನು ಪ್ರದರ್ಶಿಸಲು, ತನ್ನ ಸ್ವರೂಪವನ್ನೇ ಬದಲಾಯಿಸಿಕೊಳ್ಳಬೇಕು. ಅದು ಎಲ್ಲರಿಗೂ ಗೊತ್ತು. ಆದರೆ ಗಟ್ಟಿಯಾಗಿ ಹೇಳುವುದಕ್ಕೆ ಮನಸ್ಸಿಲ್ಲ.
ಸೋನಿಯಾ ಗಾಂಧಿ, ರಾಹುಲಗಾಂಧಿ "ಪ್ರಾಯಿಶ್ಚಿತ್ತಾರ್ಥಕ್ಕೆಂದು" ತಮ್ಮ ಸ್ಥಾನಗಳನ್ನು ತೆರವು ಮಾಡುವುದಾಗಿ ಹೇಳಿದಾಗ, ಕಾಂಗ್ರೆಸ್ ನಾಯಕರಿಗೆ ಅದನ್ನು ಒಪ್ಪುವ ಧೈರ್ಯವೇ ಬರಲಿಲ್ಲ. ಅವರ ದೃಷ್ಟಿಯಲ್ಲಿ ನೆಹರೂಗಾಂಧಿ ಕುಟುಂಬದ ವ್ಯಕ್ತಿ ಅಥವಾ (ಈಗ) ವ್ಯಕ್ತಿಗಳ ಸುತ್ತಲೂ ಗಿರಕಿ ಹೊಡೆಯುವುದೇ ಪಕ್ಷದ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಇರುವ ಒಂದೇ ಮಾರ್ಗ.
ನೆನಪಿದೆಯೇ? ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದ ಸಮಯದಲ್ಲೇ ಸೋನಿಯಾ ಬೆಂಬಲಿಗರು ಅಂದಿನ ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿಯನ್ನು ವೇದಿಕೆಯಿಂದಲೇ ಹೊರಗೆ ಕಳಿಸಿ, ಸೋನಿಯಾ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಿದ ರೀತಿ-ನೀತಿ,  ರಾಜೀವ ಗಾಂಧಿ ಅವರಿಗೆ ಕಾಂಗ್ರೆಸ್ಸಿನಲ್ಲಿ ಸರ್ವೋಚ್ಚ ನಾಯಕನ ಪಟ್ಟವನ್ನು ಇಂದಿರಾಗಾಂಧಿ ಹತ್ಯೆಯ ಮರುದಿನವೇ ಕಟ್ಟಿದ್ದೂ ಅದೇ ರೀತಿಯಲ್ಲೇ.
ಈಗಲೂ ಕಾಂಗ್ರೆಸ್ಸಿನಲ್ಲಿ ಯಾರು ಏನೇ ಹೇಳಲಿ ದೆಹಲಿಯಲ್ಲಿ ಹೆಪ್ಪುಗಟ್ಟಿದ ಅಧಿಕಾರ ಕರಗಿ ಕೆಳಗೆ ಹರಿಯುವುದನ್ನು ಯಾರಿಂದಲೂ ಊಹಿಸುವುದು ಸಾಧ್ಯವಿಲ್ಲ. ಕಾಂಗ್ರೆಸ್ ಬದಲಾಗುವುದೂ ಇಲ್ಲ. ಅದರ ಅವಶ್ಯಕತೆಯೂ ಈಗಿನ ನಾಯಕರಿಗೆ ಇಲ್ಲ.
  ಈಗ ಸೋನಿಯಾ ಗಾಂಧಿ ರಾಹುಲ ಗಾಂಧಿ  ಅವರ ನಾಯಕತ್ವದಲ್ಲೇ ಮುಂದುವರಿಯಲು ಪಕ್ಷದ ನಾಯಕರು ನಿರ್ಧರಿಸಿರುವಂತಿದೆ. ಪ್ರಾಯಶಃ ಅದು ಅವರಿಗೆ ಅನಿವಾರ್ಯ. ಈಗ ಆ ಪಕ್ಷ ನೂತನ ನಾಯಕತ್ವವನ್ನು ತರುವುದಾದರೂ ಎಲ್ಲಿಂದ?
ಮುಲಾಯಂ-ಮಾಯಾವತಿ:   ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಅಡಿಯಿಂದ ಮುಡಿಯವರೆಗೆ, ಎಲ್ಲ ವಿಚಾರಗಳಲ್ಲೂ ಖಂಡ-ತುಂಡವಾಗಿ ವಿರೋಧಿಸುವ ಉತ್ತರ ಪ್ರದೇಶದ ಪ್ರಾದೇಶಿಕ ಪಕ್ಷಗಳ ನಾಯಕರಾದ ಮುಲಾಯಂ ಸಿಂಗ್ ಯಾದವ್- ಅಖಿಲೇಶ್ ಯಾದವ್ ಹಾಗೂ ಮಾಯಾವತಿ, ಸೋಲಿನಲ್ಲೂ ಸುಮ್ಮನೆ ಕೂತಿಲ್ಲ.
ಅಲ್ಲಿ ಸರ್ಕಾರ ನಡೆಸುತ್ತಿರುವ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಬಹುಮತವನ್ನು ಗಳಿಸಿದ ಸಮಾಜವಾದಿ ಪಕ್ಷ ಒಂದೇ ಬಾರಿಗೆ ಮೂವತ್ತಾರು ಮಂದಿ ಸಹಾಯಕ ಸಚಿವರನ್ನು ವಜಾ ಮಾಡುವ ಪ್ರಕಟನೆಯನ್ನೇ ಹೊರಡಿಸಿದೆ. ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್. ಮುಖ್ಯಮಂತ್ರಿ ಅವರ ಪುತ್ರ ಅಖಿಲೇಶ್ ಯಾದವ್.
ಇಂತಹ ಕ್ರಮದಿಂದ ಆ ಪಕ್ಷದಲ್ಲಿ ಅಥವಾ ಆ ರಾಜ್ಯದಲ್ಲಿ ಯಾವ ರೀತಿಯ ರಾಜಕೀಯ ಪರಿಣಾಮವನ್ನು ನಿರ್ಮಿಸುವ ಉದ್ದೇಶ ಅಪ್ಪ-ಮಕ್ಕಳ ಕೂಟಕ್ಕೆ ಇದೆಯೋ ಗೊತ್ತಾಗಿಲ್ಲ. ಸದ್ಯಕ್ಕೆ ಬೇರೆ ಏನನ್ನೂ ಮಾಡದೇ ಮಂತ್ರಿಗಳನ್ನು ಮನೆಗೆ ಕಳುಹಿಸಿದ್ದರಿಂದ ಸಾಧಿಸುವ ಪುರುಷಾರ್ಥವಾದರೂ ಏನು?
ನೆನಪಿನಲ್ಲಿರಲಿ: ಉತ್ತರ ಪ್ರದೇಶದಲ್ಲೂ ಇರುವುದು ಕೌಟುಂಬಿಕ ರಾಜಕೀಯ ವ್ಯವಸ್ಥೆಯೇ. ಅಲ್ಲಿ ಈಗ ಚುನಾವಣೆಯಲ್ಲಿ ಗೆದ್ದಿರುವ ಸಮಾಜವಾದಿಗಳೆಂದರೆ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ, ಸೋದರನ ಪುತ್ರ, ಬೀಗರು ಇಂತಹ ನೆಂಟರೇ.
ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರು ರಾಜಕೀಯ ಸಾಧನೆಯ ಸೂಚ್ಯಂಕದಲ್ಲಿ ಪ್ರಮುಖವಾದ "ಮತಗಳ ಪಾಲನ್ನು" ಮರೆತು, ಶೂನ್ಯ ಸ್ಥಾನ ಸಂಪಾದನೆಯಿಂದ ಕುಪಿತರಾಗಿ ಪಕ್ಷದ ಎಲ್ಲ ಸಮಿತಿಗಳು, ಪದಾಧಿಕಾರಿಗಳನ್ನೂ ವಜಾ ಮಾಡಿದ್ದಾರೆ. ರಾಜ್ಯದಲ್ಲಿ ಮತದಾನದ ಶೇಕಡಾ 20ರಷ್ಟು ಪಾಲು ಪಡೆದರೂ ಬಹುಜನ ಸಮಾಜ ಪಕ್ಷ ಒಂದು ಸ್ಥಾನವನ್ನು ಗೆದ್ದಿಲ್ಲ. ಆ ಕೋಪವನ್ನು ಮಾಯಾವತಿ ತೀರಿಸಿಕೊಂಡಿರುವುದು ಪಕ್ಷದ ಪದಾಧಿಕಾರಿಗಳ ಮೇಲೆ. ಈಗ ಮತ್ತೆ ಬಹುಜನ ಸಮಾಜ ಪಕ್ಷ ಇತರ ಜಾತಿಗಳವರ (ಬ್ರಾಹ್ಮಣ) ಸಹವಾಸವನ್ನೇ ಬಿಟ್ಟು ದಲಿತ ಹಿತಾಸಕ್ತಿಯನ್ನೇ ತನ್ನ ಏಕೈಕ ರಾಜಕೀಯ ಗುರಿಯಾಗಿ ಮಾಡಿಕೊಳ್ಳುವ ಮಾತೂ ಕೇಳಿ ಬಂದಿದೆ.
ಮಮತಾ- ಜಯಲಲಿತಾ: ಚುನಾವಣೆ ಫಲಿತಾಂಶದ ದೃಷ್ಟಿಯಿಂದ ರಾಜ್ಯ ಮಟ್ಟದಲ್ಲಿ ದೊಡ್ಡ ರೀತಿಯಲ್ಲೇ ಗೆದ್ದಿದ್ದರೂ, ಅದರಿಂದ ಅಧಿಕಾರದ ಲಾಭ ಸಿಗುವುದು ಸಾಧ್ಯವಿಲ್ಲ ಎನ್ನುವುದನ್ನು ಅರಿತಿರುವ ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿ ಹಾಗೂ ಅಣ್ಣಾ ಡಿಎಂಕೆಯ ನಾಯಕಿ ಜಯಲಲಿತಾ ಕೈ ಜೋಡಿಸಿ, ಲೋಕಸಭೆಯಲ್ಲಿನ ಅಧಿಕೃತ ಮಾನ್ಯತೆ ಪಡೆದ ವಿರೋಧ ಪಕ್ಷದ ಸ್ಥಾನ ಪಡೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
 ಈ ದಿಸೆಯಲ್ಲಿ ಅವರು ಸವಾಲನ್ನೆಸೆದು ನಿಂತಿರುವುದು ನೇರವಾಗಿ ಕಾಂಗ್ರೆಸ್ಸಿಗೇ. ಬಂಗಾಳ ಹಾಗೂ ತಮಿಳುನಾಡುಗಳಲ್ಲಿ ಕಾಂಗ್ರೆಸ್ ಈಗ ಲೆಕ್ಕಕ್ಕೆ ಇಲ್ಲದ ರಾಜಕೀಯ ಶಕ್ತಿ. ಆ ರಾಜ್ಯದಲ್ಲಿ ಬಿಜೆಪಿಗೂ ಹೇಳಿಕೊಳ್ಳುವಂತಹ ರಾಜಕೀಯ ಶಕ್ತಿ ಇಲ್ಲ. ಆದರೂ ಈಗಿನ ಲೋಕಸಭೆ ಚುನಾವಣೆಯಲ್ಲಿ ಬಂಗಾಳದಲ್ಲಿ ಬಿಜೆಪಿಯ ಪ್ರದರ್ಶನ ಭವಿಷ್ಯದಲ್ಲಿ ಆಸೆಯನ್ನು ರೂಪಿಸುವಂತಹದ್ದು. 1952ರ ಮೊದಲ ಮಹಾಚುನಾವಣೆಯಲ್ಲೇ ಲೋಕಸಭೆಯಲ್ಲಿ 22 ಸ್ಥಾನಗಳನ್ನು ಪಡೆದು ವಿರೋಧಿ ಗುಂಪಿನ ಸ್ಥಾನಮಾನ ಪಡೆದಿದ್ದ ಕಮ್ಯುನಿಸ್ಟರು ಈಗ ಹೀನಾಯ ಸ್ಥಿತಿಯನ್ನು ತಲುಪಿದ್ದಾರೆ. ಅದರಲ್ಲಿ ಆಶ್ಚರ್ಯವೇನೂ ಇಲ್ಲ.
1942 ರಿಂದಲೂ ಕಮ್ಯುನಿಸ್ಟರ ರಾಜಕೀಯ ನಿಲವು ರಾಷ್ಟ್ರೀಯ ವಾಹಿನಿಯ ವಿರುದ್ಧದ ದಿಕ್ಕಿನಲ್ಲೇ ಇತ್ತು. ಈಗಲೂ ಆ ಪಕ್ಷದ ಘೋಷಣೆಗಳೂ ಬದಲಾಗಿಲ್ಲ, ತಂತ್ರಗಳೂ ಬದಲಾಗಿಲ್ಲ. ಆ ಪಕ್ಷಗಳಿಗೆ ನವ ಯುವ ಜನಾಂಗದ ಬೆಂಬಲ ಪಡೆಯುವುದು ಈಗಿನ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ.
ಇನ್ನುಳಿದಂತೆ, ತಮಿಳುನಾಡಿನ ಕರುಣಾ ನಿಧಿ ನೇತೃತ್ವದ ದ್ರಾವಿಡ ಮುನ್ನೇಟ್ರ ಕಳಗಂ, ಕರ್ನಾಟಕದ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳ ತಮ್ಮ-ತಮ್ಮ ಪಕ್ಷಗಳ ಭವಿಷ್ಯ ಕುರಿತು ಚಿಂತಿಸುವ ರೀತಿಯನ್ನೇ ಬದಲಾಯಿಸಬೇಕಾಗಿ ಬರಬಹುದು. ಅಂತಹ ಪಕ್ಷಗಳು ಇತರ ರಾಜ್ಯಗಳಲ್ಲೂ ಇವೆ. ಬಹುತೇಕವಾಗಿ ಅವು ಕೌಟುಂಬಿಕ ಯಜಮಾನಿಕೆಯ ಪಕ್ಷಗಳೇ. ಲಾಲೂ ಪ್ರಸಾದ್ ಯಾದವ್ರ ರಾಷ್ಟ್ರೀಯ ಜನತಾದಳ, ಚೌಧರಿ ಅಜಿತ್ ಸಿಂಗ್ ಅವರ ಭಾರತ ರಾಷ್ಟ್ರೀಯ ಲೋಕದಳ, ಹಲವು ಮುಸ್ಲಿಮ್ ಪಕ್ಷಗಳೂ, ತಮ್ಮ ಅಸ್ತಿತ್ವ ಕುರಿತಂತೆ ಚಿಂತನೆ ನಡೆಸಬೇಕಾದ ಪರ್ವಕಾಲ ಇದು. ಆಂಧ್ರ ಪ್ರದೇಶವನ್ನು ವಿಭಜಿಸುವ ಕಾಂಗ್ರೆಸ್ಸಿನ ಕೆಟ್ಟ ನಿರ್ಧಾರದಿಂದ ದಕ್ಷಿಣದ ಬಹು ದೊಡ್ಡ ರಾಜ್ಯವಾದ ಆಂಧ್ರದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ತೆಲಂಗಾಣದಲ್ಲಿ ತೆಲಂಗಾಣ ರಾಜ್ಯ ಸಮಿತಿಯ ಚಂದ್ರಶೇಖರರಾವು ಹಾಗೂ ಸೀಮಾಂಧ್ರ ಪ್ರದೇಶದಲ್ಲಿ ತೆಲುಗು ದೇಶಂನ ಚಂದ್ರಬಾಬು ನಾಯ್ಡು ಅವರಿಗೆ ವಹಿಸಿಕೊಟ್ಟಿರುವಂತಿದೆ.
ಇಂತಹ ರಾಜಕೀಯ ವಾತಾವರಣದಲ್ಲೂ ವಿಭಿನ್ನ ರಾಜಕೀಯ ಪಕ್ಷವಾಗಿ ಹೊಸದಾಗಿ ಜನ್ಮ ತಾಳಿರುವ, ಪಂಜಾಬಿನಲ್ಲಿ ನಾಲ್ಕು ಸ್ಥಾನಗಳನ್ನು ಗಳಿಸಿರುವ, ದೆಹಲಿ ಮೂಲದ ಆಮ್ ಆದ್ಮಿ ಪಾರ್ಟಿ ದೆಹಲಿಯಲ್ಲಿ ಮತ್ತೆ ಸರ್ಕಾರ ರಚನೆಗೆ ಮುಂದಾಗಿರುವುದಕ್ಕೆ ಏನು ಹೇಳಬೇಕು? ಈ ಒತ್ತಾಯವನ್ನು ಅವರೀಗ ಕೈ ಬಿಟ್ಟಿದ್ದಾರೆ. ಅಲ್ಲಿ ಚುನಾವಣೆಗೆ ಒತ್ತಾಯಪಡಿಸುವುದು ಅವರ ಇತ್ತೀಚಿನ ಒತ್ತಾಯ.
ಕಿಡಿಗೇಡಿತನ: ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಸೋತಿದ್ದರಿಂದ ತಮ್ಮ ಅಧಿಕಾರವನ್ನೇ ತ್ಯಾಗ ಮಾಡಿ, ತಮಗೆ ಬೇಕಾದವರನ್ನೇ ಕುರ್ಚಿಯಲ್ಲಿ ಕೂಡಿಸಿದ್ದು ಒಂದು ರಾಜಕೀಯ ತಂತ್ರವೋ ಅಥವಾ ಅನಿವಾರ್ಯತೆಗೆ ಶರಣಾಗತಿಯೋ?

-ಸತ್ಯ
anisikeprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.