ಅಂಕಣಗಳು

ಗಲ್ಲಿ ಗಲ್ಲಿ ಅಲೆಯುತ್ತಿದ್ದವ ಗಗನದೆತ್ತರ ಬೆಳೆದ!

50 ವರ್ಷಗಳ ಹಿಂದಿನ ಮಾತು. ಆಗ, ಭಗವಾನ್ ಗವಾಯ್ ಎಂಬ ಎಂಟು ವರ್ಷದ..

ಗಲ್ಲಿ ಗಲ್ಲಿ ಅಲೆಯುತ್ತಿದ್ದವ ಗಗನದೆತ್ತರ ಬೆಳೆದ!
Published On :

50 ವರ್ಷಗಳ ಹಿಂದಿನ ಮಾತು. ಆಗ, ಭಗವಾನ್ ಗವಾಯ್ ಎಂಬ ಎಂಟು ವರ್ಷದ ಬಾಲಕನೊಬ್ಬ, ಮುಂಬಯಿಯ ಹೊರವಲಯದಲ್ಲಿ ದಿನಗೂಲಿ ಮಾಡುತ್ತಿದ್ದ. ಈ ಹುಡುಗನ ಹೆತ್ತವರೂ ಕೂಲಿಗೆ ಹೋಗುತ್ತಿದ್ದರು. ಈ ಮೂವರ ದುಡಿಮೆಯಿಂದ ಆರು ಜನರ ಹೊಟ್ಟೆ ತುಂಬಬೇಕಿತ್ತು. ಈ ಕುಟುಂಬ ದಲಿತ ಸಮುದಾಯಕ್ಕೆ ಸೇರಿದ್ದರಿಂದ ಹಾಗೂ ಆರ್ಥಿಕವಾಗಿ ತುಂಬಾ ಹಿಂದುಳಿದಿದ್ದರಿಂದ ಚೆಂದದ ಮನೆಯಲ್ಲಿ ವಾಸಿಸುವ 'ಯೋಗ' ಅವರಿಗೆ ಇರಲೇ ಇಲ್ಲ. ಪರಿಣಾಮವಾಗಿ, ಈ ಹುಡುಗ ಭಗವಾನ್ ಗವಾಯ್, ಕೊಳೆಗೇರಿಗಳ ಕಮಟು ವಾಸನೆಯ ಮಧ್ಯೆಯೇ ಬೆಳೆದ.
ಇವೆಲ್ಲಾ ಹಳೆಯ ಕಥೆ. ಈಗ ಏನಾಗಿದೆಯೆಂದರೆ, 50 ವರ್ಷಗಳ ಹಿಂದೆ 50 ಪೈಸೆಗೆ ದಿನಗೂಲಿ ಮಾಡಿದ್ದ ಹುಡುಗನೇ 500 ಕೋಟಿ ರೂಪಾಯಿಗಳ ಸಾಮ್ರಾಜ್ಯ ಕಟ್ಟಿದ್ದಾನೆ. ಉದ್ಯಮಿ ಅನ್ನಿಸಿಕೊಂಡಿದ್ದಾನೆ. ದುಬೈ, ಇರಾನ್, ಕುವೈತ್, ಮಲೇಶಿಯಾ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ ತೈಲ ಮಾರಾಟದ ಕಂಪನಿಗಳನ್ನು ಆರಂಭಿಸಿದ್ದಾನೆ. ಆಯಿಲ್ ಕಿಂಗ್ ಅನ್ನಿಸಿಕೊಂಡಿದ್ದಾನೆ. ಆತ್ಮವಿಶ್ವಾಸ ಮತ್ತು ಪರಿಶ್ರಮದ ದುಡಿಮೆಯಿಂದ ಮನುಷ್ಯ ಯಾವ ಮಟ್ಟಕ್ಕೆ ಬೆಳೆಯಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾನೆ. ಯಶಸ್ವಿ ಉದ್ಯಮಿಯಾಗುವುದು ಹೇಗೆ? ಬದುಕಿನಲ್ಲಿ ಗೆಲ್ಲವುದು ಹೇಗೆ ಎಂದು ಪ್ರಶ್ನಿಸುವವರಿಗೆ 'ಉತ್ತರ'ವಾಗಿದ್ದಾನೆ. ಭಗವಾನ್ ಗವಾಯ್‌ನ ಯಶೋಗಾಥೆಯನ್ನು ವಿವರಿಸಿ ಹೇಳುವುದಾದರೆ-
ಮಹಾರಾಷ್ಟ್ರದ ಗಡಿಯಲ್ಲಿರುವ ವಿದರ್ಭ ಪ್ರಾಂತ್ಯದ ರಹೇಲಿ ಎಂಬ ಪುಟ್ಟಹಳ್ಳಿ, ಗವಾಯ್‌ನ ಹುಟ್ಟೂರು. ಕೀಳು ಜಾತಿಯವನು ಎಂಬ ಕಾರಣದಿಂದ, ಗವಾಯ್‌ನ ಹೆತ್ತವರನ್ನು ಆ ಊರಿನಲ್ಲಿ ಕೂಲಿ ಕೆಲಸಕ್ಕೂ ಕರೆಯುತ್ತಿರಲಿಲ್ಲ. ಈ ಬಡತನದ ಮಧ್ಯೆಯೂ ಆ ಮನೆಯಲ್ಲಿ ಒಟ್ಟು ಆರು ಮಂದಿಯಿದ್ದರು. ಊರಲ್ಲಿಯೇ ಉಳಿದುಕೊಂಡರೆ ಮನೆಯವರೆಲ್ಲಾ ಹಸಿವಿನಿಂದಲೇ ಸಾಯಬೇಕಾಗುತ್ತದೆ ಅನಿಸಿದ್ದರಿಂದ, ಕುಟುಂಬದವರೆಲ್ಲ ಹುಟ್ಟೂರಿನಿಂದ 600 ಕಿ.ಮಿ. ದೂರವಿದ್ದ ಮುಂಬಯಿಗೆ ಬಂದು ಬಿಟ್ಟರು. ಗವಾಯ್‌ನ ತಂದೆ, ಬಾರ್‌ಬೆಂಡರ್ ಆಗಿ ಕೆಲಸಕ್ಕೆ ಸೇರಿಕೊಂಡ. ಕಟ್ಟಡ ನಿರ್ಮಾಣದಲ್ಲಿ ಅಳತೆಗೆ ತಕ್ಕಂತೆ ಕಬ್ಬಿಣದ ಸರಳುಗಳನ್ನು ಬಗ್ಗಿಸುವುದು ಅವನ ಕೆಲಸವಾಗಿತ್ತು. ಗಂಡನ ದುಡಿಮೆಯಿಂದ ಕುಟುಂಬ ನಿರ್ವಹಣೆ ಸಾಧ್ಯವಿಲ್ಲ ಅನ್ನಿಸಿದಾಗ ಹೆಂಡತಿಯೂ ಅಲ್ಲಿಯೇ ಕೆಲಸಕ್ಕೆ ಸೇರಿಕೊಂಡಳು. ಇಬ್ಬರ ದುಡಿಮೆಯಿಂದಲೂ ಮನೆಯ ಖರ್ಚು ನಿಭಾಯಿಸಲು ಸಾಧ್ಯವಿಲ್ಲ ಅನ್ನಿಸಿದಾಗ, ಎರಡನೇ ತರಗತಿಯಲ್ಲಿದ್ದ ಭಗವಾನ್ ಗವಾಯ್‌ನನ್ನೂ ದಿನಗೂಲಿಗೆ ಸೇರಿಸಿಕೊಂಡಿದ್ದಾಯಿತು. ಕೆಲಸ ಮುಗಿದ ನಂತರ ಗಲ್ಲಿಗಲ್ಲಿ ಅಲೆಯುವುದು ಗವಾಯ್‌ಗೆ ಇಷ್ಟದ ಕೆಲಸವಾಗಿತ್ತು.
ಮುಂಬಯಿನ ಹೊರವಲಯದಲ್ಲಿದ್ದ ಕೊಳೆಗೇರಿಯಲ್ಲಿ ಮನೆ ಮಾಡಿಕೊಂಡು, ಅಬ್ಬಾ, ಬದುಕಿಗೆ ಒಂದು ನೆಲೆ ಸಿಕ್ಕಿತು ಎಂದು ಈ ಕುಟುಂಬದವರು ನೆಮ್ಮದಿಯ ನಿಟ್ಟುಸಿರು ಬಿಡುವ ಮೊದಲೇ ಅನಾಹುತ ನಡೆದು ಹೋಯಿತು. ಗವಾಯ್‌ನ ತಂದೆ, ಅದೊಂದು ಮಧ್ಯಾಹ್ನ, ಕೆಲಸ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸತ್ತೇ ಹೋದ. ಆಗ, ಗವಾಯ್‌ನ ತಾಯಿಗೆ ಒಂದು ತಿಂಗಳ ಸಂಬಳ ನೀಡಿದ ಮಾಲೀಕರು, ನಾಳೆಯಿಂದ ನೀವು ಬರೋದು ಬೇಡ ಅಂದುಬಿಟ್ಟರು. ಈ ದಿಢೀರ್ ಕಷ್ಟದಿಂದ ಗವಾಯ್‌ನ ತಾಯಿ ಹೆದರಲಿಲ್ಲ. ದೇವರು ನಮ್ಮನ್ನು ಕಾಪಾಡುತ್ತಾನೆ. ಹೆದರಬೇಡಿ ಎಂದು ಮಕ್ಕಳಿಗೆ ಧೈರ್ಯ ಹೇಳಿದಳು. ನಂತರ, ಮುಂಬಯಿಯ ಮತ್ತೊಂದು ಭಾಗದಲ್ಲಿ ಆರಂಭವಾಗಿದ್ದ ಮಹೀಂದ್ರ ಅಂಡ್ ಮಹೀಂದ್ರ ಕಂಪನಿಯ ಜೀಪ್ ತಯಾರಿಕಾ ಕಾರ್ಖಾನೆಯಲ್ಲಿ ಪರಿಚಾರಿಕೆಯ ಕೆಲಸಕ್ಕೆ ಸೇರಿಕೊಂಡಳು. ಆ ಫ್ಯಾಕ್ಟರಿಯ ಆಚೆ ಬದಿಗಿದ್ದ ಟೆಂಟ್ ಒಂದರಲ್ಲಿ ಆಕೆಯ ಕುಟುಂಬಕ್ಕೆ ಉಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಸ್ಕೂಲು ದೂರವಿದ್ದುದರಿಂದ, ಹೋಗಿ ಬರುವಾಗ ಬಸ್ಸು, ಕಾರ್‌ಗೆ ಸಿಕ್ಕಿಬಿಡಬಹುದು ಎಂದು ಹೆದರಿದ ಆಕೆ, 3 ವರ್ಷ ಕಾಲ ಮಕ್ಕಳನ್ನು ಸ್ಕೂಲ್‌ಗೆ ಕಳಿಸಲೇ ಇಲ್ಲ. ಆ ದಿನಗಳನ್ನು ನೆನೆದು, ಗವಾಯ್ ಹೇಳುತ್ತಾರೆ;
'ತಂದೆಯವರ ನಿಧನದ ನಂತರ ಇಡೀ ಸಂಸಾರದ ಹೊಣೆ ಅಮ್ಮನ ಮೇಲೆ ಬಿತ್ತು. ಆಕೆ ಅನಕ್ಷರಸ್ಥೆ. ಹಾಗಾಗಿ, ಭಾರಿ ಸಂಬಳದ ಕೆಲಸದ ಬಗ್ಗೆ ಯೋಚಿಸುವಂತೆಯೂ ಇರಲಿಲ್ಲ. ಪರಿಚಾರಿಕೆಯ ಕೆಲಸಕ್ಕೇ ತೃಪ್ತಿ ಪಡಬೇಕಿತ್ತು. ಒಂದು ಫ್ಯಾಕ್ಟರಿ ಅಥವಾ ಕಟ್ಟಡ ನಿರ್ಮಾಣದ ಕೆಲಸ ಮುಗಿದ ತಕ್ಷಣ, ಸಾಮಾನುಗಳನ್ನೆಲ್ಲ ಗಂಟು ಮೂಟೆ ಕಟ್ಟಿಕೊಂಡು ನಾವು ಜಾಗ ಖಾಲಿ ಮಾಡಲೇಬೇಕಿತ್ತು. ಹೀಗೆ, ಕೆಲಸಕ್ಕಾಗಿ ಅಲೆಯುತ್ತಾ ಒಂದೊಂದು ವರ್ಷ ಒಂದೊಂದು ಏರಿಯಾದಲ್ಲಿ ವಾಸಿಸಿದ್ದೂ ಉಂಟು. ಸಮಾಧಾನದ ಸಂಗತಿಯೆಂದರೆ, ಬಾಲ್ಯದ ಮೂರು ವರ್ಷಗಳನ್ನು ಬಿಟ್ಟರೆ, ಆನಂತರದಲ್ಲಿ ನನ್ನ ವಿದ್ಯಾಭ್ಯಾಸದ ಬಗ್ಗೆ ಅಮ್ಮ ಗಮನ ಕೊಟ್ಟಳು. ನನ್ನ ವಿದ್ಯಾಭ್ಯಾಸವೆಲ್ಲ ಸರ್ಕಾರಿ ಶಾಲೆಗಳಲ್ಲಿಯೇ ನಡೆಯಿತು. ದಸರೆ, ಬೇಸಿಗೆ ಹಾಗೂ ವಾರದ ರಜೆಗಳಲ್ಲಿ ನನ್ನ ಸಹಪಾಠಿಗಳೆಲ್ಲಾ ಆಟ, ಪಿಕ್‌ನಿಕ್, ಅಜ್ಜಿಮನೆಗೆ ಪ್ರವಾಸ ಎಂದು ಮೈಮರೆತಿದ್ದಾಗ, ನಾನು ಕೂಲಿಗೆ ನಿಂತಿರುತ್ತಿದ್ದೆ. ಮನೆ ಕಟ್ಟುವ ಜಾಗದಲ್ಲಿ ಮಣ್ಣು ಹೊರುವುದು, ನೀರು ತರುವುದು, ಬೀದಿಯಲ್ಲಿ ಕುಳಿತು ತರಕಾರಿ ಮಾರುವುದು...ಹೀಗೆ, ನಾನು ಮಾಡದೇ ಬಿಟ್ಟ ಕೆಲಸವೇ ಇಲ್ಲ ಎನ್ನಬಹುದು. ಹೀಗೆ ದುಡಿದ ಹಣದಿಂದಲೇ ನನ್ನ ಬಿ.ಕಾಂ. ಮುಗಿಯಿತು. ಉಳಿದ ವಿದ್ಯಾರ್ಥಿಗಳಂತೆ, ಭವಿಷ್ಯದಲ್ಲಿ ಡಾಕ್ಟರ್ ಅಥವಾ ಎಂಜಿನಿಯರ್ ಆಗಬೇಕೆಂಬ ಮಹದಾಸೆ ನನಗೂ ಇತ್ತು. ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ್ದರಿಂದ ಅಂಥ ಆಸೆಗಳನ್ನೆಲ್ಲ ನಾನು ಇಟ್ಟುಕೊಳ್ಳಲಿಲ್ಲ. ಪರ್ಮನೆಂಟ್ ಅನ್ನಿಸುವಂಥ ಒಂದು ನೌಕರಿ ಹಿಡಿದು, ಅಮ್ಮ ಕೂಲಿಗೆ ಹೋಗುವುದನ್ನು ತಪ್ಪಿಸಬೇಕು ಎಂಬುದಷ್ಟೇ ನನ್ನ ಆಸೆಯಾಗಿತ್ತು.
ಡಿಗ್ರಿ ಮುಗಿದ ಕೆಲವೇ ದಿನಗಳಲ್ಲಿ, ಲಾರ್ಸನ್ ಅಂಡ್ ಟೂಬ್ರೋ ಕಂಪನಿಯಲ್ಲಿ ಅಕೌಂಟ್ಸ್ ಕ್ಲರ್ಕ್ ಕೆಲಸ ಸಿಕ್ಕಿತು. 'ಅಮ್ಮಾ, ನಾಳೆಯಿಂದ ನೀನು ಕೂಲಿಗೆ ಹೋಗಬೇಡ' ಎಂದದ್ದೇ ಕೆಲಸ ಸಿಕ್ಕಾಗ ನಾನು ಹೇಳಿದ ಮೊದಲ ಮಾತು. ಅಕೌಂಟ್ಸ್ ಕ್ಲರ್ಕ್ ಆಗಿದ್ದಾಗಲೇ ಸಂಜೆ ಕಾಲೇಜಿನಲ್ಲಿ ಎಂ.ಕಾಂ. ಮುಗಿಸಿದೆ. ಇದೆಲ್ಲಾ 1978ರ ಮಾತು. ಆ ದಿನಗಳಲ್ಲಿಯೇ ಸರ್ಕಾರಿ ಅಧೀನದ ಕಂಪನಿಗಳಲ್ಲಿ ಖಾಲಿ ಉಳಿದಿರುವ ಹುದ್ದೆಗಳನ್ನು ಮೀಸಲು ವರ್ಗಗವರಿಗೆ ಕೊಡಬೇಕು ಎಂಬ ಆದೇಶ ಜಾರಿಯಾಯಿತು. ನಾನೂ ಅರ್ಜಿ ಹಾಕಿದೆ. ಪರಿಣಾಮವಾಗಿ, 1982ರಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‌ನಲ್ಲಿ ನೌಕರಿ ಸಿಕ್ಕಿತು. ಇದು, ನನ್ನ ಬದುಕಿನ ಮೊದಲ ಟರ್ನಿಂಗ್ ಪಾಯಿಂಟ್.
ಹಿಂದೂಸ್ತಾನ್ ಪೆಟ್ರೋಲಿಯಂನಲ್ಲಿ ಕೆಲಸ ಮಾಡುವಾಗಲೇ ತೈಲ ವ್ಯವಹಾರದ ಆಳ-ಅಗಲಗಳ ಪರಿಚಯವಾಯಿತು, ಈ ಸಂದರ್ಭದಲ್ಲಿಯೇ ಕೆಲವು ಇಂಜಿನಿಯರ್‌ಗಳು ದುಬೈನಲ್ಲಿದ್ದ ಬೇರೊಂದು ಕಂಪನಿಗೆ ಹೋಗಿ ಬಿಟ್ಟರು. ಆಗ ತಕ್ಷಣವೇ ಮರು ನೇಮಕಗಳು ಆಗದ್ದರಿಂದ, ಖಾಲಿ ಉಳಿದಿದ್ದ ಎಂಜಿನಿಯರ್‌ಗಳ ಕೆಲಸವನ್ನೂ ನಾನೇ ನಿಭಾಯಿಸಬೇಕಾಯಿತು. ಶ್ರದ್ಧೆಯಿಂದ ಆ ಕೆಲಸ ಮಾಡಿದೆ. ಇದರಿಂದ ಖುಷಿಯಾದ ಮೇಲಧಿಕಾರಿಗಳು, ನನಗೆ ಕ್ಲಾಸ್1 ಆಫೀಸರ್ ಎಂದು ಬಡ್ತಿ ಕೊಡುವಂತೆ ಕಂಪನಿಗೆ ಪತ್ರ ಬರೆದರು. ಆ ಪತ್ರ ಕೊನೆಗೆ ಹೆಚ್‌ಆರ್ ವಿಭಾಗಕ್ಕೆ ಹೋಯಿತು. ದಲಿತ ಎಂಬ ಕಾರಣಕ್ಕೆ ನನಗೆ ಅನ್ಯಾಯವಾಗಿದ್ದೇ ಆಗ. ತಳ ಸಮುದಾಯದಿಂದ ಬಂದವನೊಬ್ಬನಿಗೆ ಕ್ಲಾಸ್ ಒನ್ ಆಫೀಸರ್ ಹುದ್ದೆ ಕೊಡಲು ಹೆಚ್ ಆರ್ ವಿಭಾಗದ ಅಧಿಕಾರಿಗಳು ಮನಸ್ಸು ಮಾಡಲಿಲ್ಲ. ಈ ಅನ್ಯಾಯವನ್ನು ಪ್ರತಿಭಟಿಸಿ ನಾನು ಕೋರ್ಟ್ ಮೆಟ್ಟಿಲೇರಿದೆ. ಎರಡು ವರ್ಷಗಳ ನಂತರ ನನ್ನ ಪರವಾಗಿ ತೀರ್ಪು ಬಂತು. ಆದರೆ, ಜಾತಿಯ ಹೆಸರು ಹೇಳಿ ಹಂಗಿಸಿದವರೊಂದಿಗೆ ಕೆಲಸ ಮಾಡಲು ಮನಸ್ಸು ಒಪ್ಪಲಿಲ್ಲ. ಇದೇ ಸಂದರ್ಭಕ್ಕೆ, ಅರಬ್ ರಾಷ್ಟ್ರವಾದ ಬಹರೈನ್‌ನಲ್ಲಿ ನೌಕರಿಗಾಗಿ ಅರ್ಜಿ ಕರೆದಿದ್ದರು. ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಯಲ್ಲಿ ಸಿಗುತ್ತಿದ್ದುದು ಮಾಸಿಕ 6000 ರೂ. ಸಂಬಳ. ಆದರೆ ಬಹರೈನ್‌ನಲ್ಲಿ ತಿಂಗಳಿಗೆ 1.20 ಲಕ್ಷ ರು. ಸಂಬಳವಿತ್ತು. ಎರಡನೇ ಯೋಚನೆ ಮಾಡದೇ ವಿದೇಶಕ್ಕೆ ಹಾರಿಬಿಟ್ಟೆ.
ಮುಂದಿನ ಏಳು ವರ್ಷಗಳ ಕಾಲ ಹಲವು ಕಂಪನಿಗಳಲ್ಲಿ ದುಡಿದೆ. ಈ ವೇಳೆಗೆ, ಪೆಟ್ರೋಲ್ ಹಾಗೂ ಇತರೆ ತೈಲ ಉತ್ಪನ್ನಗಳನ್ನು ಹೋಲ್‌ಸೇಲ್ ದರದಲ್ಲಿ ಖರೀದಿಸಿ ಅದನ್ನು ಯುರೋಪ್ ರಾಷ್ಟ್ರಗಳಿಗೆ ಮಾರಾಟ ಮಾಡುವುದರಿಂದ ಹೆಚ್ಚು ಲಾಭ ಮಾಡಬಹುದು ಎಂಬ ಗುಟ್ಟು ಅರ್ಥವಾಗಿತ್ತು. ಮೊದಲಿನಿಂದಲೂ ಅಷ್ಟೆ: ಕೆಲಸದಲ್ಲಿ ತುಂಬಾ ಪ್ರಾಮಾಣಿಕನಾಗಿದ್ದೆ. ಸಮಯದ ಪರಿವೆಯಿಲ್ಲದೆ ಕೆಲಸ ಮಾಡಿದೆ. ನನಗೆ ಕೆಲಸ ನೀಡಿದ್ದ ಕಂಪನಿಯ ಅಧಿಕಾರಿಗಳು ಅದನ್ನು ಗಮನಿಸಿದರು. ಒಂದೇ ವರ್ಷದಲ್ಲಿ ಎರಡು ಪ್ರಮೋಷನ್ ನೀಡಿದರು. ಸಂಬಳವನ್ನೂ ಹೆಚ್ಚಿಸಿದರು. ಅದನ್ನು ಮೀರಿದ ಸಂತೋಷವೆಂದರೆ, ದುಬೈನಲ್ಲಿ, ಬಹರೈನ್‌ನಲ್ಲಿ ಯಾರೂ ನನ್ನ ಜಾತಿಯ ಬಗ್ಗೆ ವಿಚಾರಿಸಲಿಲ್ಲ. ದಲಿತ ಎಂಬ ಕಾರಣಕ್ಕೆ ನನಗೆ ಪ್ರಮೋಷನ್‌ಗಳು ಕೈ ತಪ್ಪಲಿಲ್ಲ. ಕುಟುಂಬದವರಿಂದ ದೂರವಿದ್ದೇನೆ ಎಂಬ ನೋವನ್ನು ಬಿಟ್ಟರೆ, ಬಹರೈನ್‌ನಲ್ಲಿ, ಎಲ್ಲ ರೀತಿಯಿಂದಲೂ ನಾನು ಖುಷಿಯಿಂದಿದ್ದೆ.
ಈ ಸಂದರ್ಭದಲ್ಲಿಯೇ ಬಕೀ ಮೊಹಮ್ಮದ್ ಎಂಬ ಶ್ರೀಮಂತರ ಪರಿಚಯವಾಯಿತು. ಕೆಲಸದಲ್ಲಿ ನನಗಿದ್ದ ಶ್ರದ್ಧೆ, ಆಸಕ್ತಿ ಹಾಗೂ ಸಂಪರ್ಕಗಳನ್ನು ಗಮನಿಸಿದ ಅವರು, ಬೇರೆಯವರ ಕೈ ಕೆಳಗೆ ಇನ್ನೆಷ್ಟು ದಿನ ದುಡೀತೀರಿ? ಕೆಲಸದ ಗುಟ್ಟುಗಳು ಗೊತ್ತಿವೆ. ಎಲ್ಲ ರಾಷ್ಟ್ರಗಳಲ್ಲೂ ನಂಬಿಕೆಯ ಜನರಿದ್ದಾರೆ. ಹೀಗಿರುವಾಗ ನೀವೇ ಹೊಸದೊಂದು ಕಂಪನಿ ಆರಂಭಿಸಬಾರದೇಕೆ? ನೀವು ಸಿಇಒ ಹುದ್ದೆಯಲ್ಲಿ ಕೂರುವುದಾದರೆ, ತೈಲ ಮಾರಾಟ ಕಂಪನಿ ಆರಂಭಿಸಲು ನಾನು ಬಂಡವಾಳ ಹೂಡುತ್ತೇನೆ ಎಂದರು. ಅವರ ಮಾತಲ್ಲಿ ನಂಬಿಕೆ ಇಟ್ಟು ಕೆಲಸಕ್ಕೆ ರಾಜೀನಾಮೆ ಕೊಟ್ಟೆ. ನಂತರ ಆರಂಭವಾದಷ್ಟೇ ಬಕೀ ಫ್ಯುಯಲ್ ಕಂಪನಿ. ಮೊದಲ ಎರಡು ವರ್ಷ ಎಲ್ಲವೂ ಚೆನ್ನಾಗಿತ್ತು. ಆದರೆ ಮೂರನೇ ವರ್ಷದಲ್ಲಿ, ತುಂಬ ಆಕಸ್ಮಿಕವಾಗಿ ಬಕೀ ಮೊಹಮ್ಮದ್ ಅವರ ತಾಯಿ ತೀರಿ ಹೋದರು. ಈ ದುರ್ಘಟನೆಯ ನಂತರ ಬಕೀ ಮೊಹಮ್ಮದ್‌ಗೆ ವ್ಯವಹಾರದಲ್ಲಿ ಆಸಕ್ತಿ ಉಳಿಯಲಿಲ್ಲ. ಪರಿಣಾಮವಾಗಿ, ಆ ಕಂಪನಿ ಮುಚ್ಚಿಹೋಯಿತು.
ಈ ವೇಳೆಗಾಗಲೇ ನಾನು ಉದ್ಯಮಿ ಸಿಇಒ ಅನ್ನಿಸಿಕೊಂಡಿದ್ದೆ. ಈಗ ನೌಕರನಾಗಿ ಬೇರೊಂದು ಕೆಲಸಕ್ಕೆ ಸೇರುವಂತಿರಲಿಲ್ಲ. ಮರ್ಯಾದೆಯ ಪ್ರಶ್ನೆಯಲ್ಲವೆ? ಮತ್ತೊಂದು ಕಡೆಗೆ, ನಾನು ಸಿಇಒ ಆಗಿಯೇ ಸೇರಬೇಕಿತ್ತು. ಈ ಸಂದರ್ಭದಲ್ಲಿ ಮತ್ತೊಬ್ಬ ಉದ್ಯಮಿ ಬಂದರು. 'ನಮ್ಮ ಕಂಪನಿ ಲಾಸ್‌ನಲ್ಲಿದೆ. ಅದನ್ನು ಲಾಭದಲ್ಲಿ ನಡೆಯುವಂತೆ ಮಾಡಿದ್ರೆ ಬರುವ ಲಾಭದಲ್ಲಿ ಅರ್ಧ ಪಾಲನ್ನು ನಿಮಗೇ ಕೊಡ್ತೇನೆ' ಎಂದು ಪ್ರಾಮಿಸ್ ಮಾಡಿದರು. ಆ ಕೆಲಸಕ್ಕೂ ಉತ್ಸಾಹದಿಂದ ಸೇರಿಕೊಂಡೆ. ಹುರುಪಿನಿಂದ ದುಡಿದೆ. ಪರಿಣಾಮವಾಗಿ ಲಾಸ್‌ನಲ್ಲಿದ್ದ ಆ ಕಂಪನಿಯ ವಾರ್ಷಿಕ ವಹಿವಾಟು, ಎರಡೇ ವರ್ಷದಲ್ಲಿ 2000 ಕೋಟಿಗೆ ತಲುಪಿತು. ವಿಷಾದವೆಂದರೆ, ನಂತರದಲ್ಲಿ, ಆ ಕಂಪನಿಯ ಮಾಲೀಕರು ಮಾತಿಗೆ ತಪ್ಪಿದರು. ನಿಮಗೆ ಸಂಬಳ ಮಾತ್ರ ಕೊಡ್ತೇನೆ. ಲಾಭದಲ್ಲಿ ಪಾಲು ಕೊಡಲಾರೆ ಅಂದುಬಿಟ್ಟರು. ಅದು, ಅರಬ್ ರಾಷ್ಟ್ರವಾದ್ದರಿಂದ, ಆ ಮಾಲೀಕನೂ ಅಲ್ಲಿನವರೇ ಆಗಿದ್ದುದರಿಂದ ಅವರ ವಿರುದ್ಧ ಹೋರಾಡಲು ಸಾಧ್ಯವಿರಲಿಲ್ಲ. ಬೇರೆಯವರ ಬಳಿ ಜೀತ ಮಾಡುವ ಬದಲು ನನ್ನದೇ ಸ್ವಂತ ಕಂಪನಿ ಆರಂಭಿಸಬೇಕು ಎಂಬ ಹಠ ಜೊತೆಯಾಗಿದ್ದೇ ಆಗ. ಹಾಗೇ ಶುರುವಾದದ್ದೇ ಸೌರಭ್ ಫ್ಯುಯಲ್ ಕಂಪನಿ. ಅಂದ ಹಾಗೆ, ಸೌರಭ್ ಎಂಬುದು ನನ್ನ ಮಗನ ಹೆಸರು.
ಈವರೆಗೂ ದುಡಿದ ಹಣದಿಂದ ಮುಂಬಯಿಯಲ್ಲಿ ಆಸ್ತಿ ಖರೀದಿಸಿದ್ದೆ. ಹೊಸ ಕಂಪನಿ ಆರಂಭಿಸಲು ಹಣಬೇಕು  ಅನ್ನಿಸಿದಾಗ ಎಲ್ಲವನ್ನೂ ಮಾರಿಬಿಟ್ಟೆ. ಹಲವು ಬ್ಯಾಂಕ್‌ಗಳಲ್ಲಿ ಸಾಲ ಪಡೆದೆ. ಅದನ್ನು ಕಂಡವರೆಲ್ಲ ಆಡಿಕೊಂಡರು. ಹಣ ಮಾಡಬೇಕೆಂಬ ಹುಚ್ಚಿಗೆ ಬಿದ್ದು ಎಲ್ಲವನ್ನೂ ಕಳ್ಕೋತೀಯ ಎಂದು ಎಚ್ಚರಿಸಿದರು. ಆದರೆ, ಕಳೆದುಕೊಂಡ ಜಾಗದಲ್ಲೇ ಎಲ್ಲವನ್ನೂ ಪಡೆಯಬೇಕೆಂಬುದು ನನ್ನ ಆಸೆಯಾಗಿತ್ತು. ಹಠವೂ ಆಗಿತ್ತು. ಶ್ರದ್ಧೆಯಿಂದ ದುಡಿದೆ. ಉಳಿದ ತೈಲ ಕಂಪನಿಗಳಿಗಿಂತ ಕಡಿಮೆ ದರದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸಿದೆ. ಉಹುಂ, ಯಾವುದೇ ಸಂದರ್ಭದಲ್ಲೂ ಗ್ರಾಹಕ ಕಂಪನಿಗಳಿಗೆ ಸುಳ್ಳು ಮಾಹಿತಿ ಕೊಡಲಿಲ್ಲ. ಅಗ್ಗದ ಪ್ರಚಾರಕ್ಕೆ ಮುಂದಾಗಲಿಲ್ಲ. ಬರುವ ಲಾಭ ಸ್ವಲ್ಪ ಕಡಿಮೆಯಾದರೂ ಚಿಂತೆಯಿಲ್ಲ, ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಗ್ರಾಹಕರನ್ನು ಹೊಂದಬೇಕು ಎಂದು ನಿರ್ಧರಿಸಿದೆ. ಆರ್ಡರ್ ಬಂದ ತಕ್ಷಣವೇ ತೈಲೋತ್ಪನ್ನಗಳನ್ನು ಸರಬರಾಜು ಮಾಡಿದೆ. ಪರಿಣಾಮವಾಗಿ, ಗ್ರಾಹಕರಿಗೆ ನಮ್ಮ ಕಂಪನಿಯ ಮೇಲೆ ನಂಬಿಕೆ ಬಂತು. 2009ರಲ್ಲಿ ಆರಂಭವಾದ ಸೌರಭ್ ಫ್ಯುಯಲ್ ಕಂಪನಿ, ನಂತರದ ಎರಡೇ ವರ್ಷದಲ್ಲಿ 200 ಕೋಟಿ ರೂ. ವಾರ್ಷಿಕ ವಹಿವಾಟು ದಾಖಲಿಸಿತು.
ಆನಂತರದ್ದೆಲ್ಲಾ ನನ್ನ ಪಾಲಿನ ಸುವರ್ಣ ಯುಗವೇ. ಈಗ, ನಮ್ಮ ಕಂಪನಿಯ ವಹಿವಾಟು 500 ಕೋಟಿಯನ್ನು ದಾಟಿದೆ. ನಮ್ಮ ಕಂಪನಿಯ ಒಡೆತನದಲ್ಲಿ ಪೆಟ್ರೋಲಿಯಂ ಉತ್ಪಾದಿಸುವ, ಪೆಟ್ರೋಲಿಯಂ ಉತ್ಪನ್ನಗಳನ್ನು ಶುದ್ಧೀಕರಿಸುವ ಘಟಕಗಳಿವೆ. ಹೀಗೆ, ಒಂದೊಂದೇ ಯಶಸ್ಸು ಕಂಡಾಗಲೂ, ನನಗೆ ಜನ್ಮ ಕೊಟ್ಟ ನಾಡಿಗೆ, ನನಗೆ ಬದುಕು ಕೊಟ್ಟ ಸಮಾಜಕ್ಕೆ, ಈಗಲೂ ಸಂಕಟದ ಮಧ್ಯೆಯೇ ಇರುವ ನನ್ನ ಜನಕ್ಕೆ ಸಹಾಯ ಮಾಡಿ ಋಣಮುಕ್ತನಾಗಬೇಕು ಅನಿಸುತ್ತಿದೆ. ಅದಕ್ಕೆಂದೇ ಮುಂಬಯಿಯಲ್ಲಿ ಪ್ರತಿ ವರ್ಷವೂ 'ಉದ್ಯೋಗ ಮೇಳ'ದಂಥ ಕಾರ್ಯಾಗಾರಗಳನ್ನು ನಡೆಸುತ್ತೇನೆ. ಅಲ್ಲಿ ಮುಖ್ಯವಾಗಿ ದಲಿತ ಸಮುದಾಯದ ಯುವಕ-ಯುವತಿಯರಿಗೆ ನೌಕರಿ ಪಡೆಯುವ ವಿಷಯದಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ. ತುಂಬ ಹಿಂದೇನಲ್ಲ, ಬರೀ 50 ವರ್ಷಗಳ ಹಿಂದೆ 50 ಪೈಸೆಗಾಗಿ ದಿನವಿಡೀ ದುಡಿದವ ನಾನು. ಈಗ 500 ಕೋಟಿಯ ಒಡೆಯನಾಗಿದ್ದರೂ ಆ ದಿನಗಳನ್ನು ಮರೆಯಲು ಸಾಧ್ಯವಾಗುವುದಿಲ್ಲ. ಜಾತಿಯ ಕಾರಣದಿಂದ ಅವಮಾನವಾಗದಿದ್ದರೆ ನಾನು 'ಉದ್ಯಮಿ' ಆಗುವುದೂ ಸಾಧ್ಯವಿರಲಿಲ್ಲ. ಹಾಗಾಗಿ, ನನಗೆ ಅವಮಾನ ಮಾಡಿದವರಿಗೆ 'ಬಿಗ್ ಥ್ಯಾಂಕ್ಸ್‌' ಅನ್ನುತ್ತೇನೆ. ಯಾವುದೇ ಕಾರಣಕ್ಕೂ ಓದುವುದನ್ನು ನಿಲ್ಲಿಸಬೇಡಿ. ವ್ಯವಹಾರಕ್ಕೆ ಬಂದಾಗ ಅಡ್ಡದಾರಿ ಹಿಡಿಯಬೇಡಿ. ಶ್ರದ್ಧೆ, ಪರಿಶ್ರಮ ಮತ್ತು ನಿಯತ್ತು ಯಾವತ್ತೂ ನಮ್ಮ ಕೈ ಬಿಡುವುದಿಲ್ಲ. ದುರಾಸೆ ಹಾಗೂ ವಂಚನೆ ಎಂದೆಂದೂ ನಮ್ಮನ್ನು ಕಾಪಾಡುವುದಿಲ್ಲ. ಗೆಲ್ಲಲು ಹೊರಟ ಎಲ್ಲರಿಗೂ ಇದೇ ನನ್ನ ಸಂದೇಶ...'
---
ಈಗ ಹೇಳಿ: ಗವಾಯ್ ಅವರ ಮಾತುಗಳನ್ನು ಒಪ್ಪದಿರಲು ಸಾಧ್ಯವೇ?

-ಎ.ಆರ್. ಮಣಿಕಾಂತ್
armanikanth@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.