ಕಾಂಗ್ರೆಸ್ ಹೀನಾಯ ಸ್ಥಿತಿಯೇ ಸಿದ್ದರಾಮಯ್ಯಗೆ ರಕ್ಷಣಾಕವಚ
ಬಿಜೆಪಿ, ಸಂಘ ಪರಿವಾರದ ಆಂತರಿಕ ಸಮೀಕ್ಷೆಗಳೇ ದಂಗು ಬಡಿದು ಹೋಗು...

ಬಿಜೆಪಿ, ಸಂಘ ಪರಿವಾರದ ಆಂತರಿಕ ಸಮೀಕ್ಷೆಗಳೇ ದಂಗು ಬಡಿದು ಹೋಗುವಂತೆ ಬೀಸಿದ ನರೇಂದ್ರ ಮೋದಿ ಚಂಡಮಾರುತದಲ್ಲಿ ಕಾಂಗ್ರೆಸ್ ಸೇರಿದಂತೆ ಯುಪಿಎ ಅಂಗಪಕ್ಷಗಳೆಲ್ಲವೂ ತರಗೆಲೆಯಂತೆ ಕೊಚ್ಚಿ ಹೋಗಿವೆ. ರಾಷ್ಟ್ರ ಮಟ್ಟದಲ್ಲೇ ಪುನರುತ್ಥಾನಕ್ಕೆ ಒಡ್ಡಿಕೊಂಡಿರುವ ಕಾಂಗ್ರೆಸ್‌ನ ಹೀನಾಯ ಸ್ಥಿತಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ರಕ್ಷಾಕವಚವಾಗಿ ಪರಿಣಮಿಸಿದೆ.
ಹಾಗೆ ನೋಡಿದರೆ ಕಾಂಗ್ರೆಸ್‌ನ ದೇಶವ್ಯಾಪಿ ಒಟ್ಟು 'ಸಾಧನೆ'ಯಲ್ಲಿ ಅಷ್ಟೋ-ಇಷ್ಟೋ ಮರ್ಯಾದೆ ಉಳಿದಿದ್ದರೆ ಅದು ಕರ್ನಾಟಕದಲ್ಲಿ ಮಾತ್ರ. ಇಡೀ ದೇಶದಲ್ಲಿ ಪಕ್ಷ ಗೆದ್ದ ಸ್ಥಾನಗಳು ನಲ್ವತ್ನಾಲ್ಕು. ಅದರಲ್ಲಿ ಕರ್ನಾಟಕದ್ದೇ ಒಂಬತ್ತು. ಅಂದರೆ ಶೇಕಡಾ ಇಪ್ಪತ್ತರಷ್ಟು. ರಾಜಸ್ಥಾನ, ಗುಜರಾತ್, ದೆಹಲಿ, ಹಿಮಾಚಲ ಪ್ರದೇಶ, ಗೋವಾ, ಉತ್ತರಾಖಂಡದಲ್ಲಿ ಕಾಂಗ್ರೆಸ್ ಖಾತೆಯನ್ನೇ ತೆರೆದಿಲ್ಲ. ಇಲ್ಲೆಲ್ಲ ಬರೀ ಶೂನ್ಯ ಸಂಪಾದನೆ. ಘಟಾನುಘಟಿಗಳೆಲ್ಲ ಮಕಾಡೆ ಮಲಗಿದ್ದಾರೆ. ಅನೇಕ ರಾಜ್ಯಗಳಲ್ಲಿ ಕೈಮಗ್ಗಿಯನ್ನೂ ದಾಟಿಲ್ಲ. 'ಕಾಂಗ್ರೆಸ್ ಗಣಿತ' ಒಂದು-ಎರಡು ಕಾಡಿಗೆ ಹೊರಡು ಎಂಬಂತಾಗಿದೆ.
ನಿಜ, ಚುನಾವಣೆಗೆ ಮೊದಲೇ ಕಾಂಗ್ರೆಸ್‌ಗೆ ತನ್ನ ಹಿನ್ನಡೆಯ ಬಗ್ಗೆ ಸ್ಪಷ್ಟ ಅರಿವಿತ್ತು. ಆದರೆ ಈ ಪ್ರಮಾಣದಲ್ಲಿ ಹೊಡೆತ ಬೀಳುತ್ತದೆ ಎಂದು ಅದು ಕನಸು-ಮನಸಿನಲ್ಲಿಯೂ ಎಣಿಸಿರಲಿಲ್ಲ. ಏನೇ ಆದರೂ ನೂರಕ್ಕಿಂತ ಕಡಿಮೆ ಸ್ಥಾನಗಳು ಬರುವುದಿಲ್ಲ ಎಂದು ಬಲವಾಗಿ ನಂಬಿತ್ತು. ಆ ನಂಬಿಕೆಯ ಆಧಾರದ ಮೇಲೆ ತೃತೀಯ ರಂಗದ ಜತೆಗೂಡಿ ಸರಕಾರ ರಚಿಸುವ ಅವಕಾಶ ಸಿಕ್ಕರೂ ಸಿಗಬಹುದು ಎಂದು ಕನಸು ಕಂಡಿತ್ತು. ಅದರೆ ಅದದ್ದೇ ಬೇರೆ. ಪಕ್ಷದ ಒಂದೂಕಾಲು ಶತಮಾನದ ಇತಿಹಾಸದಲ್ಲೇ ಕಂಡು-ಕೇಳರಿಯದ ಸೋಲು. ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ಆಡಳಿತಾರೂಢ ಪಕ್ಷದ ಆಯ್ಕೆ, ಅದ್ಯತೆ ಕಾಯಬೇಕಾದ ತುಚ್ಛ ಸ್ಥಿತಿ. ಈ ದಯನೀಯ ಸೋಲಿನ ಹೊಣೆ ಹೊತ್ತು ಏಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರೇ ಪದತ್ಯಾಗಕ್ಕೆ ಮುಂದಾಗಿದ್ದಾರೆ. ಅಂದರೆ ಈ ಸೋಲಿಗೆ ಬೇರಾರನ್ನೂ ಹೊಣೆ ಮಾಡುವ ಇರಾದೆ ಅವರಿಗೆ ಇಲ್ಲ. ಅಂಥ ಅವಕಾಶವೇ ಅವರಿಗೆ ಇಲ್ಲ ಎಂದು ಧಾರಾಳವಾಗಿ ಹೇಳಬಹುದು. ಹೀಗಾಗಿ ಕಾಂಗ್ರೆಸ್ ಆಡಳಿತವಿದ್ದ ರಾಜ್ಯಗಳ ಮುಖ್ಯಮಂತ್ರಿಗಳು ಈ ಸೋಲಿನ ಹೊಣೆಗಾರಿಕೆಯಿಂದ ಬಚಾವಾಗಿದ್ದು, ಸದ್ಯಕ್ಕೆ ಅವರ ಪದವಿಗಳ ಯಥಾಸ್ಥಿತಿ ಮುಂದುವರಿಕೆಗೆ ಆಸ್ಪದವಾಗಿದೆ. ಇಂಥವರ ಸಾಲಿನಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದ್ದಾರೆ.
ಹೌದು, ಸೋನಿಯಾ ಹಾಗೂ ರಾಹುಲ್ ಪದತ್ಯಾಗ ಪ್ರಸ್ತಾಪದ ಹಿಂದೆ ಬೇರುಮಟ್ಟದಿಂದ ಪಕ್ಷವನ್ನು ಮರುಸಂಘಟಿಸಬೇಕಾದ ಅನಿವಾರ್ಯತೆಯ ಸಂಕೇತ, ಸಂದೇಶ ಆಡಗಿದೆ. ಅದರ ರೂಪುರೇಷೆಗಳು ಮುಂದಷ್ಟೇ ನಿರ್ಧಾರ ಆಗಬೇಕಿದೆ. 'ಹಿರಿಯತನ' ಮೀರಿದ ವೃದ್ಧ ನಾಯಕರನ್ನು ಪಕ್ಕಕ್ಕೆ ಸರಿಸಿ, ಜನರನ್ನು ಹಿಡಿದಿಟ್ಟುಕೊಳ್ಳಬಹುದಾದ ಯುವನಾಯಕರನ್ನು ಮುಂಚೂಣಿಗೆ ತರಬೇಕಾದ ಅನಿವಾರ್ಯತೆಯನ್ನು ಈಗಿನ ಪರಿಸ್ಥಿತಿ ಆಹ್ವಾನಿಸಿದೆ. ಅದರ ಜತೆಗೆ ಸಾಮರ್ಥ್ಯ ಇದ್ದೂ ಬಳಕೆ ಆಗದ ಒಂದಷ್ಟು ನಾಯಕರು ಹಿರಿಯರ ಆರ್ಭಟದಲ್ಲಿ ಕಳೆದು ಹೋಗಿದ್ದರು. ಅವರಿಗೆಲ್ಲ ಕೀಲೆಣ್ಣೆ ಸವರಿ ಬಳಸಿಕೊಳ್ಳುವ ಸಂದರ್ಭ ಬಂದೊದಗಿದೆ. ಹೀಗಾಗಿ ಕಾಂಗ್ರೆಸ್‌ನ ಈಗಿನ ಆದ್ಯತೆ ಒಣಗೆಲೆಗಳನ್ನು ತರಿದು, ಚಿಗುರುಗಳನ್ನು ಬೆಳೆಸುವುದಾಗಿದೆಯೇ ಹೊರತು ಚಿವುಟುವುದಲ್ಲ. ದೇಶಾದ್ಯಂತ ಎರಗಿರುವ ಈಗಿನ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ನಕಾರಾತ್ಮಕ ಪ್ರತಿಕ್ರಿಯೆಗಳ ವ್ಯಾಪ್ತಿಯಿಂದ ಸಿದ್ದರಾಮಯ್ಯ ಹೊರಗುಳಿಯುವುದರಿಂದ ಸದ್ಯಕ್ಕಂತೂ ಅವರು ಬಚಾವು.
ಇದಕ್ಕೆ ಕಾರಣಗಳು ಇಲ್ಲದಿಲ್ಲ. ಈಗ 'ಹತಪ್ರಾಣ'ಗೊಂಡು ಮಲಗಿರುವ ಕಾಂಗ್ರೆಸ್ ಸಂಘಟನೆಗೆ ಮುಂಬರುವ ದಿನಗಳಲ್ಲಿ ಸಿಕ್ಕಾಪಟ್ಟೆ ಸಂಪನ್ಮೂಲ ಬೇಕು. ಈಗ ಪಕ್ಷದ ಸರಕಾರ ಇರುವ ಕರ್ನಾಟಕದಲ್ಲಿ ಮಾತ್ರ ಆ ಸಂಪನ್ಮೂಲ ಕ್ರೋಢೀಕರಣಕ್ಕೆ ಅವಕಾಶವಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರಕಾರ ಇದೆಯಾದರೂ ಅದರ ಅವಧಿ ಇನ್ನೈದು ತಿಂಗಳು ಮಾತ್ರ. ಈಗಿನ ಮೋದಿ ಅಲೆಯ ನಡುವೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಾತ್ರ ಮರುಕಳಿಸುತ್ತದೆ ಎಂಬ ಯಾವುದೇ ನಂಬುಗೆ ಇಲ್ಲ. ಹೀಗಾಗಿ ಕಾಂಗ್ರೆಸ್ ಸಂಘಟನೆ ಸಂಪನ್ಮೂಲಕ್ಕೆ ಕರ್ನಾಟಕ ಮಾತ್ರವೇ ಗಟ್ಟಿ.
ಈಗಿನ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪುನರುತ್ಥಾನದ ಆರ್ಥಿಕ ಬೇಡಿಕೆ ಪೂರೈಸುವಲ್ಲಿ ಕರ್ನಾಟಕದ ಪಾತ್ರ, ಪ್ರಭಾವ ಇದ್ದೇ ಇರುತ್ತದೆ. ಇಂಥ ಸೂಕ್ಷ್ಮ ಸಂದರ್ಭದಲ್ಲಿ ಅನಗತ್ಯ ಪಲ್ಲಟಗಳಿಗೆ ಆಸ್ಪದ ನೀಡುವ ಮೂರ್ಖತನವನ್ನು ಪ್ರಬುದ್ಧ ರಾಜಕಾರಣ ಅಪೇಕ್ಷಿಸುವುದಿಲ್ಲ. ಹಿಂದೆ ಎಸ್.ಎಂ. ಕೃಷ್ಣ ಸರಕಾರ ಇದ್ದಾಗ ಇಂಥದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೇಂದ್ರದಲ್ಲಿ ಆಳ್ವಿಕೆಗೆ ಬಂದ ಆಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಸ್ಥಿತಿಯನ್ನು ಇಂಥದೇ ಸಂಕಷ್ಟಕ್ಕೆ ಸಿಲುಕಿಸಿತ್ತು. ಆದರೆ ಪ್ರಮಾಣ ಇಷ್ಟು ತೀವ್ರವಾಗಿರಲಿಲ್ಲ. ಆಗ ಕರ್ನಾಟಕದ ಕೃಷ್ಣ ಸರಕಾರವೇ ಕಾಂಗ್ರೆಸ್ ಪುನಶ್ಚೇತನದ 'ಜೀವಸೆಲೆ' ಆಗಿತ್ತು. ಅತ್ತ ಪಕ್ಷದ ಬೇಡಿಕೆಗಳನ್ನು ಕಾಲಕಾಲಕ್ಕೆ ಸಮರ್ಥವಾಗಿ ಪೂರೈಸುತ್ತಾ, ಇತ್ತ ರಾಜ್ಯದಲ್ಲೂ ಸರಕಾರವನ್ನು ಒಂದು ಹಿಡಿತದಲ್ಲೇ ನಡೆಸುತ್ತಾ ಬಂದ ಕೃಷ್ಣ ಯಶಸ್ವಿಯಾಗಿ ಸಮನ್ವಯ ಸಾಧಿಸಿದರು. ಈಗ ಸಿದ್ದರಾಮಯ್ಯ ಮುಂದಿರುವುದು ಇಂಥದ್ದೇ ಸವಾಲು. ಆದರೆ ಸಿದ್ದರಾಮಯ್ಯ ವ್ಯಕ್ತಿತ್ವ ಇದಕ್ಕೆ ಪೂರಕವಾಗಿ ಸ್ಪಂದಿಸಲು ಅವಕಾಶ ನೀಡುವುದೇ ಎಂಬುದು ಕುತೂಹಲದ ಸಂಗತಿ.
ಹೌದು, ಈ ಪ್ರಶ್ನೆಗೆ ಕಾರಣಗಳು ಇಲ್ಲದಿಲ್ಲ. ಏಕೆಂದರೆ ಕೆಲವೊಮ್ಮೆ ಸಿದ್ದರಾಮಯ್ಯ ಮಾತನ್ನು ಸಿದ್ದರಾಮಯ್ಯ ಅವರೇ ಕೇಳುವುದಿಲ್ಲ. ಆ ಕ್ಷಣದಲ್ಲಿ ಅನಿಸಿದ್ದನ್ನು ಅಂದು ನಂತರ ಅದನ್ನು ಅರಗಿಸಿಕೊಳ್ಳಲು ಯತ್ನಿಸುವುದು ಅವರ ಜಾಯಮಾನ. ಲೋಕಸಭೆ ಚುನಾವಣೆ ಮತದಾನ ಆದ ಮರುದಿನ ಒಂದು ಹೇಳಿಕೆ ಕೊಟ್ಟಿದ್ದರು. ಚುನಾವಣೆಯಲ್ಲಿ ಏನೇ ಫಲಿತಾಂಶ ಬಂದರೂ ಸಾಮೂಹಿಕ ನಾಯಕತ್ವದ ಹೊಣೆ ಎಂದಿದ್ದರು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಾಗ ಮಾತ್ರ ಈ ಮಾತನ್ನು ಆಡಿರಲಿಲ್ಲ. ಅದನ್ನು ತಮ್ಮದೇ ಎಂದು ಬಿಂಬಿಸಿಕೊಂಡರು. ಈಗಲೂ ಅಷ್ಟೇ. ಒಂದೊಮ್ಮೆ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಲೋಕಸಭೆ ಚುನಾವಣೆ ಫಲಿತಾಂಶದ ಹೊಣೆ ತಮ್ಮದೇ ಎಂದು ಹೇಳಿದ್ದರೆ ಕಾಂಗ್ರೆಸ್‌ನ ದೇಶವ್ಯಾಪಿ ಸಾಧನೆಯ ಶೇಕಡಾ ಇಪ್ಪತ್ತು ಭಾಗ ಅವರೊಬ್ಬರದೇ ಆಗುತ್ತಿತ್ತು. ಆದರೆ ಸೋಲಿನ ನಡುವೆಯೂ ಯಶಸ್ಸಿನ ಲಾಭವನ್ನು ಸಾಮೂಹಿಕ ನಾಯಕತ್ವಕ್ಕೆ ಹಂಚಿದ್ದಾರೆ. ಬಹುಶಃ ಅವರಿಗೆ ಗೊತ್ತಿರಲಿಲ್ಲ. ದೇಶದೆಲ್ಲೆಡೆ ತಮ್ಮ ಪಕ್ಷ ಈ ಪರಿಯಾಗಿ ಧೂಳಿಪಟವಾಗುತ್ತದೆ ಎಂದು.
ಅವರು ಫಲಿತಾಂಶಕ್ಕೆ ಮೊದಲು ಇನ್ನೂ ಒಂದು ಮಾತು ಹೇಳಿದ್ದರು. ಫಲಿತಾಂಶದ ನಂತರ ಸಂಪುಟ ಪುನಾರಚನೆ ಆಗುತ್ತದೆ ಎಂದು. ಈಗ ಅವರಿಗೆ ಪುನಾರಚನೆ ಮಾಡಲು ಯಾವುದೇ ಕಾರಣಗಳು ಇಲ್ಲ. ಇಡೀ ದೇಶದೆಲ್ಲೆಡೆ ಕಾಂಗ್ರೆಸ್ ನಿರ್ನಾಮ ಆಗಿರುವುದಕ್ಕೆ ಕರ್ನಾಟಕ ಸಚಿವ ಸಂಪುಟದ ಸರ್ಜರಿ ಉತ್ತರವಾಗುವುದಿಲ್ಲ. ನಿಜ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿನ ಹೊಣೆ ಹೊತ್ತಿದ್ದ ಮಂತ್ರಿಗಳು ತಮಗೂ ಚುನಾವಣೆಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿದ್ದು ಸುಳ್ಳಲ್ಲ. ಈಗ ವ್ಯಕ್ತಿಗತವಾಗಿ ಅವರನ್ನು ಹೊಣೆ ಮಾಡಲು ಹೊರಟರೆ ಒಟ್ಟಾರೆ ಸೋಲಿನ ಹೊಣೆಯನ್ನು ಸಿದ್ದರಾಮಯ್ಯ ಅವರೇ ಹೊರಬೇಕಾಗುತ್ತದೆ. ಈಗ ಕರ್ನಾಟಕದಲ್ಲಿ ಬಂದಿರುವ ಒಂಬತ್ತು ಸ್ಧಾನಗಳ ಯಶಸ್ಸನ್ನು ಅವರೇ ಹೇಳಿರುವಂತೆ ಸಾಮೂಹಿಕ ನಾಯಕತ್ವಕ್ಕೆ ಹಂಚುವುದಾದರೆ ಅದರ ಲಾಭ ಮಂತ್ರಿ ಮಂಡಲಕ್ಕೂ ಸಲ್ಲುತ್ತದೆ. ಹೀಗಾಗಿ ಮಂಡ್ಯದಲ್ಲಿ ರಮ್ಯಾ ಸೋಲಿಗೆ ಯಾರೇ ಕಾರಣರು ಇರಲಿ, ಬೆಂಗಳೂರಲ್ಲಿ ಮೂರೂ ಕ್ಷೇತ್ರಗಳು ಕೈ ತಪ್ಪಿ ಹೋಗಿರಲಿ ಏನೂ ಮಾಡುವಂತಿಲ್ಲ. ರಾಷ್ಟ್ರ ಮಟ್ಟದಲ್ಲೇ ಪಕ್ಷ ಚಿಂದಿಯಾಗಿರುವುದರಿಂದ, ಸೋನಿಯಾ-ರಾಹುಲ್ ಗಾಂಧಿ ಅವರೇ ಇದರ ಹೊಣೆ ಹೊತ್ತಿರುವುದರಿಂದ ಈ ಸೋಲನ್ನು ಬೇರಾರಿಗೂ ಹಂಚಿಕೆ ಮಾಡಲು ಅವಕಾಶವೇ ಇಲ್ಲ. ಹೀಗಾಗಿ ಸದ್ಯಕ್ಕೆ ಮಂತ್ರಿ ಮಂಡಲ ಯಥಾಸ್ಥಿತಿ ಕಾಯ್ದುಕೊಳ್ಳಬಹುದು. ತೀರಾ ಅನಿವಾರ್ಯ ಎಂದಾದರೆ ಒಂದೆರಡು ಬದಲಾವಣೆ ಮಾಡಬಹುದಾದರೂ ಅದಕ್ಕೆ ಲೋಕಸಭೆ ಸೋಲಿನ ಹೊಣೆ ಕಟ್ಟಲು ಸಾಧ್ಯವಿಲ್ಲ. ಅದಕ್ಕೆ ಖಾತೆ ನಿರ್ವಹಣೆಯಲ್ಲಿನ ಲೋಪ, ಕರ್ತವ್ಯ ವಿಮುಖತೆ, ಬೇಜವಾಬ್ದಾರಿ ಕಾರಣ ಆಗಬಹುದು.
ಕಾಂಗ್ರೆಸ್‌ಗೆ ರಾಷ್ಟ್ರ ಮಟ್ಟದಲ್ಲಿ ಬಿದ್ದಿರುವ ಒದೆ ಅಂತಿಂಥದ್ದಲ್ಲ. ಝಂಡೂ ಬಾಮ್, ಅಯೊಡೆಕ್ಸ್, ಮೂವ್ ಮತ್ತಿತರ ನೋವು ನಿವಾರಕಗಳನ್ನು ಹಚ್ಚಿ ಉಪಶಮನ ಮಾಡುವಂಥದ್ದೂ ಅಲ್ಲ. ಸಿಕ್ಕಸಿಕ್ಕ ಕಡೆ ಮೂಳೆಗಳು ಮುರಿದು ಹೋಗಿವೆ. ತಕ್ಷಣಕ್ಕೆ ಎದ್ದು ನಿಂತು ಆರ್ಭಟಿಸುವಂತಿಲ್ಲ. ಏಕೆಂದರೆ ಮುರಿದ ಮೂಳೆಗಳು ಎಳುವುದಕ್ಕೆ ಪ್ರಯತ್ನಿಸಿದಾಗಲೆಲ್ಲ 'ಖುಯ್ಯೋಂ, ಮರ್ರೋ' ಎಂದು ರೋಧಿಸುತ್ತವೆ. ಅವೆಲ್ಲ ಒಂದು ಹಂತಕ್ಕೆ ರಿಪೇರಿ ಆಗಬೇಕಾದರೆ ಕನಿಷ್ಠ ಒಂದರಿಂದ ಎರಡು ವರ್ಷವಾದರೂ ಬೇಕು. ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ದೂರು ತರುವವರ ಬಾಯಿಗೆ ನಿಷ್ಠೆಯಿಂದ ಕಿವಿಗೊಡುವುದಕ್ಕೆ ಏನಿಲ್ಲವೆಂದರೂ ಕನಿಷ್ಠ 365 ದಿನಗಳಾದರೂ ಬೇಕು. ಅಲ್ಲಿಯವರೆಗೂ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಧಾನಕ್ಕೆ ಯಾವುದೇ ಭೀತಿ ಇಲ್ಲ ಎಂದು ಧಾರಾಳವಾಗಿ ಹೇಳಬಹುದು.
ಹಾಗಂತ ಸಿದ್ದರಾಮಯ್ಯನವರಿಗೆ ಭವಿಷ್ಯದ ದಿನಗಳು ಆರಾಮದಾಯಕವಂತೂ ಅಲ್ಲ. ಈಗಾಗಲೇ ಅವರು ಸೋಲಿನ ಹೊಣೆಯನ್ನು ಸಾಮೂಹಿಕ ನಾಯಕತ್ವದ ಹೆಗಲಿಗೆ ಹೊರಿಸಿಬಿಟ್ಟಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಾಡಲೇಬೇಕಾಗಿರುವ ಕೆಲ ರಾಜಕೀಯ ನಿರ್ಧಾರಗಳಲ್ಲೂ ಅವರ ಹಿಡಿತ ಕುಸಿಯುವುದು ನಿಶ್ಚಿತ. ವಿಧಾನ ಪರಿಷತ್‌ನ 5 ಸ್ಥಾನಗಳ ನಾಮನಿರ್ದೇಶನ, ವಿಧಾನಸಭೆಯಿಂದ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಅವರು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ನಿಗಮ-ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಸಂದರ್ಭದಲ್ಲೂ ಕೈ ಕಟ್ಟಲ್ಪಡುತ್ತದೆ. ತಮ್ಮ ಆಪ್ತವರ್ಗವನ್ನು ಆಯಕಟ್ಟಿನ ಜಾಗಕ್ಕೆ ತರುವುದು ಕಷ್ಟವಾಗುತ್ತದೆ. ಅಂದರೆ ಅಷ್ಟರ ಮಟ್ಟಿಗೆ ಅವರ ಪ್ರತಿಸ್ಪರ್ಧಿಗಳ ಬಲವೂ ಹೆಚ್ಚುತ್ತದೆ.
ಅಷ್ಟು ಮಾತ್ರವಲ್ಲ ರಾಜ್ಯದಲ್ಲಿ ಒಗ್ಗೂಡುವ ಸಿದ್ದರಾಮಯ್ಯ ವಿರೋಧಿ ಕಾಂಗ್ರೆಸಿಗರ ಮಾತಿಗೆ ಮಣೆ ಹಾಕುವವರ ಸಂಖ್ಯೆಯೂ ಹೈಕಮಾಂಡ್‌ನಲ್ಲಿ ಹೆಚ್ಚಬಹುದು. ಏಕೆಂದರೆ ಈಗ ಅವರ ಎಲ್ಲ ಅಭಿಲಾಶೆಗಳ ಈಡೇರಿಕೆಗೆ ಕಟಿಬದ್ಧರಾಗಿ ಹೈಕಮಾಂಡ್ ಅಂಗಳದಲ್ಲಿ ನಿಂತಿದ್ದ ಕೇಂದ್ರದ ಮಾಜಿ ಸಚಿವರುಗಳಾದ ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್, ಎ.ಕೆ.ಆಂಟನಿ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಮೊದಲಾದವರ ಶಕ್ತಿ ಬದಲಾದ ಪರಿಸ್ಥಿತಿಯಲ್ಲಿ ಸಹಜವಾಗಿಯೇ ಕುಗ್ಗುತ್ತದೆ. ಕಾಂಗ್ರೆಸ್ ಪುನರುತ್ಥಾನಕ್ಕೆ ನೆಹರೂ ಕುಟುಂಬ ಸೃಷ್ಟಿಸುವ ಹೊಸ ಪಡೆಯಲ್ಲಿರುವವರು ರಾಜ್ಯವನ್ನು ಯಾವ ರೀತಿ ಗ್ರಹಿಸುತ್ತಾರೆ, ಸಿದ್ದರಾಮಯ್ಯ ಅದಕ್ಕೆ ಹೇಗೆ ಸ್ಪಂದಿಸುತ್ತಾರೆ ಎಂಬುದೂ ಮುಖ್ಯವಾಗುತ್ತದೆ.
ಆದರೆ ಒಂದಂತು ಸತ್ಯ. ರಾಷ್ಟ್ರಮಟ್ಟದಲ್ಲಿ ಗೋಣು ಮುರಿದುಕೊಂಡು ಬಿದ್ದಿರುವ ಕಾಂಗ್ರೆಸ್ ಎಂಬ 'ಮಹಾಗಜ' ಚೇತರಿಸಿಕೊಳ್ಳುವ ಕಾಲಾವಧಿಯೇ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಹುದ್ದೆ ರಕ್ಷಣೆಗಿರುವ ಪ್ರಬಲ ಗುರಾಣಿ. ಸದ್ಯಕ್ಕೆ ಅವರು ವಿರೋಧಿಗಳನ್ನು ಹೆಣೆಯುವುದಕ್ಕೆ ಕತ್ತಿ ಝಳಪಿಸಬೇಕಿಲ್ಲ, ಗುಟುರು ಹಾಕಬೇಕಿಲ್ಲ. ಆಗಾಗ ಅಲ್ಲಿಂದ, ಇಲ್ಲಿಂದ ತೂರಿ ಬರುವ ಬಾಣಗಳು ತಮ್ಮ ದೇಹಕ್ಕೆ ತಾಗದಂತೆ ನೋಡಿಕೊಳ್ಳುವುದಕ್ಕೆ ಈ ಗುರಾಣಿಯನ್ನೇ ಚಾಣಾಕ್ಷತನದಿಂದ ಬಳಸಿಕೊಳ್ಳಬಹುದು.
ಲಗೋರಿ: 'ಗೆದ್ದಾಗ ನನ್ನದು, ಸೋತಾಗ ನಮ್ಮದು' ಎಂಬುದೇ ಲೋಕ ನೀತಿ.
- ಪಿ. ತ್ಯಾಗರಾಜ್
thyagarjun@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


