ಅಂಕಣಗಳು

ಜನರು ಗಾಂಧಿ ಕುಟುಂಬವನ್ನು ಶಿಕ್ಷಿಸಿದ್ದಾಯಿತು. ಆದರೆ ಮೋದಿ ಯಾವ ರೀತಿಯ ಬದಲಾವಣೆಯನ್ನು ತರಬಲ್ಲರು?

Published On :

ಯುದ್ಧದ ಸೋಲು ಮತ್ತು ಗೆಲವು,
ದಿಟ- ಸಟೆ ಮತ್ತು ಸಟೆ- ದಿಟ
ಇದೀಗ ಆ ಗದ್ದಲ ಗೌಜುಗಳೆಲ್ಲ ಮುಗಿದವು-
ಆ ವರಸೆಗಳನ್ನೆಲ್ಲ ನಾವು ಮರೆತು ಕೆಲವು ಮೂಲಭೂತ ಪ್ರಶ್ನೆಗಳಿಗೆ ಮುಖಾಮುಖಿಯಾಗಬಲ್ಲೆವೆ? ಮೊದಲನೆಯದು, ಇದು ನರೇಂದ್ರ ಮೋದಿಯ ಗೆಲವೇ ಹೊರತು ಬಿಜೆಪಿಯ ಗೆಲವಲ್ಲ. ಅವರ ಅಸಾಧಾರಣವಾದ ಸಂಘಟನಾ ಶಕ್ತಿ ಮತ್ತು ಆಕರ್ಷಣೀಯವಾದ ಪ್ರಚಾರದ ಶೈಲಿಗೆ ಈ ಶ್ರೇಯದ ಸಿಂಹಪಾಲು ಸೇರಬೇಕು. ಎರಡನೆಯದು, ಅವರ ಈ ಅಭೂತಪೂರ್ವವಾದ ಗೆಲವು ಯಾವುದೇ ಮೋದಿ ಅಲೆಯ ಕಾರಣದಿಂದ ಲಭಿಸಿದ್ದಲ್ಲ, ಗಾಂಧಿ ಕುಟುಂಬದ ವಿರೋಧಿ ಅಲೆಯ ಕಾರಣದಿಂದ ಪಡೆದದ್ದು. ಮೂರನೆಯ ಮೂಲಭೂತವಾದ ವಿಷಯವೆಂದರೆ, ಬಹುಶಃ ಇದೇ ಅತ್ಯಂತ ಮುಖ್ಯವಾದದ್ದು: ಯಾವುದಕ್ಕೆ ಹಂಬಲಿಸಿ ಭಾರತೀಯ ಮತದಾರರು ಮತವನ್ನು ಚಲಾಯಿಸಿದರೋ ಅದು ಕಾರ್ಯರೂಪಕ್ಕೆ ಬರುವ ಭರವಸೆ ಇಲ್ಲದಿರುವುದು. ಅದು ಹೊಸ ಸರ್ಕಾರದ ಕ್ರಿಯೆಗಳಿಂದಲೇ ಸಾಬೀತಾಗಬೇಕಾಗಿದೆ. ಇದುವರೆಗೆ ಆ ಕ್ರಿಯೆಗಳ ವಿಷಯದ ಬಗ್ಗೆ ಯಾವುದೇ ಹೇಳಿಕೆಗಳೂ ಇಲ್ಲ.
 ಇತ್ತೀಚಿನ ದಿನಗಳಲ್ಲಿ ಭಾರತವು ಕಂಡಿರುವ ಅತ್ಯಂತ ಚಾಣಾಕ್ಷ ರಾಜಕಾರಣಿ ನರೇಂದ್ರ ಮೋದಿ ಎಂಬುದನ್ನು ಅವರ ಟೀಕಾಕಾರರೇ ಒಪ್ಪುತ್ತಾರೆ. ಅವರು ಅತ್ಯಂತ ಪಟ್ಟುಹಿಡಿದು ಸಾಧಿಸುವವರೂ ಹೌದು. ತಮ್ಮ ಮಹತ್ವಾಕಾಂಕ್ಷೆಯ ಸಾಧನವನ್ನಾಗಿ ಬಿಜೆಪಿಯನ್ನು ಬದಲಿಸಲು ಮತ್ತು ತಮ್ಮ ಯೋಜನೆಯಂತೆ ಪಕ್ಷದ ಹಿರಿಯ ನಾಯಕರು ನಡೆಯುವಂತೆ ಮಾಡಲು ಅವರು ತಮ್ಮ ಈ ಎರಡು ಗುಣಗಳನ್ನು ಅವರು ಸಾಧನವನ್ನಾಗಿ ಬಳಸಿಕೊಂಡರು. ಅವರಿಗೆ ಪರ್ಯಾಯವೇ ಇರಲಿಲ್ಲ. ಏಕೆಂದರೆ ಮೋದಿ ಕಾರ್ಯತಂತ್ರ ರೂಪಿಸುವುದರಲ್ಲಿ ಅತ್ಯಂತ ನಿಸ್ಸೀಮರು ಮತ್ತು ತಮ್ಮ ತಲೆಮಾರಿನ ಶ್ರೇಷ್ಠ ಭಾಷಣಕಾರರಲ್ಲಿ ಅವರು ಒಬ್ಬರಾಗಿದ್ದಾರೆ. ಜನಸಮೂಹದ ಕಲ್ಪನೆಗಳನ್ನು ಅವರು ಅವುಚಿಕೊಂಡ ರೀತಿ ಪಕ್ಷದ ಭವಿಷ್ಯವು ಅವರ ಸುತ್ತ ತಿರುಗುವಂತೆ ಮಾಡಿತು. ದೇಶದ ಸ್ವಾತಂತ್ರ್ಯವನ್ನು ಗಳಿಸಿದ ಹೊಸದರಲ್ಲಿ ಕಾಂಗ್ರೆಸ್ಸಿಗೆ ಜವಾಹರಲಾಲ್ ನೆಹರು ಹೇಗಿದ್ದರೋ ಹಾಗೆ ಬಿಜೆಪಿಗೆ ಮೋದಿ ಆದರು.
 ಆದರೆ ನೆಹರು ಅವರ ಕೊನೆಯ ದಿನಗಳಲ್ಲಿ ಕಾಂಗ್ರೆಸ್ ಕುಂದಿಹೋಗಿತ್ತು. ಕೆಲವು ಕಾಂಗ್ರೆಸ್ ಫೋಟೋ ಪ್ರತಿಗಳು ಅನುಸರಿಸಿ ಬಂದವು. ಇಂದಿರಾ ಕಾಂಗ್ರೆಸ್ ಮನಸ್ಸಿಗೆ ಹತ್ತಿರವಾಗಿದ್ದಕ್ಕಿಂತ ಭಯಗೊಳಿಸಿದ್ದೇ ಹೆಚ್ಚು. ರಾಜೀವ್ ಕಾಂಗ್ರೆಸ್ ಕಿಕ್‌ಬ್ಯಾಕ್ ಸಾಂಸ್ಥಿಕ ಸ್ವರೂಪ ಪಡೆದುದನ್ನು ಕಂಡಿತು. ಸೋನಿಯಾ ಕಾಂಗ್ರೆಸ್‌ನಲ್ಲಿ ಹಗರಣಗಳು ಮುಂದುವರಿದವು. ಭಾರತೀಯ ಸೂಕ್ಷ್ಮಸಂವೇದನೆಗಳು ತಲೆತಗ್ಗಿಸುವ ಮಟ್ಟಕ್ಕೆ ಭಟ್ಟಂಗಿತನ ಬೆಳೆಯಿತು. ರಾಹುಲ್ ಕಾಂಗ್ರೆಸ್ ಅಂತಿಮವಾಗಿ ಮರಳಿ ಬಾರದ ನೆಲೆಯನ್ನು ತಲುಪಿತು. ಈ ಯುವ ಉತ್ತರಾಧಿಕಾರಿಯ ಅದಕ್ಷತೆ, ಪ್ರಧಾನ ಮಂತ್ರಿಗೇ ಸಾರ್ವಜನಿಕವಾಗಿ ಅಪಮಾನ ಮಾಡಿದ್ದು, ರಾಬರ್ಟ್ ವಾದ್ರಾ ಉತ್ಕರ್ಷಕ್ಕೆ ಬಂದದ್ದು ಇವೆಲ್ಲ ಜನರು ಬದಲಾವಣೆಯನ್ನು ಉತ್ಕಟವಾಗಿ ಬಯಸುವಂತೆ ಮಾಡಿತು. ಗಾಂಧಿ ಕುಟುಂಬಕ್ಕೆ ದುರದೃಷ್ಟವೆಂಬಂತೆ, ಆ ಕ್ಷಣದಲ್ಲಿ ಮೋದಿ ಎದ್ದುಬಂದರು, ಬಿರುಗಾಳಿಯಂತೆ ತಮ್ಮ ಶೈಲಿಯಲ್ಲಿ ಬಹಳಷ್ಟನ್ನು ಸೆಳೆದುಕೊಂಡರು.
 ಹೀಗಾಗಿ ಬದಲಾವಣೆ ಬಂತು. ಆದರೆ ಇದು ಅರ್ಥಪೂರ್ಣ ಬದಲಾವಣೆಯಾಗಬಲ್ಲುದೆ? ರಾಜಕಾರಣಿಗಳು ಸಮಾನ್ಯವಾಗಿ ನಿರ್ಲಕ್ಷಿಸುವ ನೈಜ ಜಗತ್ತಿಗೆ ಮರುಪ್ರಯಾಣವಾದೀತೆ? ಆ ನೈಜ ಜಗತ್ತು ಸರಳವಾದ, ಸಭ್ಯನಾಗರಿಕರನ್ನು, ಸಭ್ಯ ಆಶೋತ್ತರಗಳನ್ನು ಹೊಂದಿರುತ್ತದೆ. ಸ್ವಯಂಸೇವೆ ಮಾಡಿಕೊಳ್ಳುವ ರಾಜಕಾರಣಿಗಳ ಜಗತ್ತು ಅವರು ಯಾವ ಪಕ್ಷದವರೇ ಇರಲಿ ಎಲ್ಲರೂ ಒಂದೇ ಎಂದು ನಂಬುವಂತೆ ಮಾಡಿದೆ. ಬೆಳವಣಿಗೆ ಮತ್ತು ಅಭಿವೃದ್ಧಿ ಮನಮೋಹನಸಿಂಗ್ ಅವರ ಆದ್ಯತೆಯಾಗಿತ್ತು. ಅವು ನರೇಂದ್ರ ಮೋದಿಯವರ ಘೋಷಣೆ ಕೂಡ. ಸ್ವಜನರ ಒಂದು ಗುಂಪು ಈಗ ಮುಖ ಕಳೆದುಕೊಂಡಿದೆ ಮತ್ತು ಇನ್ನೊಂದು ಗುಂಪು  ಅದಕ್ಕೆ ಸಿದ್ಧವಾಗಿ ನಿಂತಿದೆ. ಭಾರೀ ಭಾರೀ ಯೋಜನೆಗಳ ಘೋಷಣೆಯಾಗಬಹುದು ಮತ್ತು ಅವುಗಳಿಗೆ ನಾಟಕೀಯ ಶೀರ್ಷಿಕೆಗಳೂ ಸಿಗಬಹುದು. ಆದರೆ ನೈಜ ಜನರ ನೈಜ ಜಗತ್ತಿನ ಬಗ್ಗೆ ಮತ್ತು ನೈಜ ವಿಷಯಗಳ ಬಗ್ಗೆ ಗಮನ ನೀಡಲಾಗುವುದೆ?
 ಉದಾಹರಣೆಗೆ ನಾವು ತಿನ್ನುವ ಆಹಾರವನ್ನೇ ನೋಡಿ. ಐರೋಪ್ಯ ಒಕ್ಕೂಟವು ಇತ್ತೀಚೆ ನಮ್ಮ ಪ್ರೀತಿಯ ಆಲ್ಫಾನ್ಸೋ ಮಾವನ್ನು ನಿಷೇಧಿಸಿತು. ಭಾರತದ ಈ ಹೆಮ್ಮೆಯ ಹಣ್ಣಿನಲ್ಲಿ ಹುಳುಗಳು ಇರುವುದು ಪತ್ತೆಯಾಯಿತು. ಯುರೋಪದ ಟೇಬಲ್ಲುಗಳ ಮೇಲಿರಬೇಕಾದ ಸಂಪುಷ್ಟವಾದ ಮಾವಿನ ಹಣ್ಣುಗಳು ಏನಾದವು? ಅವುಗಳನ್ನು ಭಾರತೀಯ ಟೇಬಲ್ಲುಗಳ ಕಡೆ ತಿರುಗಿಸಲಾಯಿತು. ಇತರರಿಗೆ ಅಪಾಯಕಾರಿಯಾದದ್ದು ನಮಗೆ ಉತ್ತಮವಾಗುವುದು ಹೇಗೆ? ಆ ನಾಗರಿಕ ದೇಶಗಳಲ್ಲಿ ಅವರ ಆರೋಗ್ಯವನ್ನು ಕಾಪಾಡುವ ಅಧಿಕಾರಿಗಳಿದ್ದಾರೆ, ವ್ಯವಸ್ಥೆಯೂ ಇದೆ. ಆದರೆ ನಮ್ಮ ದೇಶದಲ್ಲಿ ಅಧಿಕಾರಿಗಳು ಅನ್ಯಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮತ್ತು ವ್ಯವಸ್ಥೆಯು ಮನಬಂದಂತೆ ಆಟವಾಡುವವರ ಕರುಣೆಯಲ್ಲಿದೆ.
 ಭಾರತೀಯ ಮೆಣಸನ್ನು ಸೌದಿ ಅರೇಬಿಯಾ ನಿಷೇಧಿಸಿತು. ಅದರರ್ಥ, ದೇಶಭಕ್ತಿಯಿಂದ ಪ್ರೇರಿತರಾದ, ಆತ್ಮಸಾಕ್ಷಿಯನ್ನು ಕೇಳಿಸಿಕೊಳ್ಳುವ ನಮ್ಮ ಮೆಣಸಿನ ವ್ಯಾಪಾರಿಗಳು ತಮ್ಮ ಉತ್ಪನ್ನವನ್ನು ಸುಟ್ಟುಹಾಕಬೇಕು ಎಂದಲ್ಲ. ಅವರು ಅದನ್ನು ಭಾರತೀಯ ಮಾರುಕಟ್ಟೆಗೆ ಸುಮ್ಮನೆ ಹರಿಯಬಿಟ್ಟರು. ಮುಂದುವರಿದ ರಾಷ್ಟ್ರಗಳು ಭಾರತೀಯ ಸೀಗಡಿ ಮೀನನ್ನು ತಿರಸ್ಕರಿಸಿದವು. ಈ ತಿರಸ್ಕೃವಾದವುಗಳನ್ನು ಭಾರತೀಯರು ರುಚಿಕರವೆಂದು ತಿಂದರು. ಭಾರತೀಯ ಅಂಗಡಿಗಳಲ್ಲಿರುವ ಮಸಾಲೆ ಪುಡಿಗಳು ಕಲಬೆರಕೆಯ ಕಾರಣದಿಂದಾಗಿ ಮನ್ನಣೆಯನ್ನು ಕಳೆದುಕೊಂಡಿವೆ. ಸರ್ಕಾರವೇ ಓಡಿಸುವ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಹಳಸಿದ ಆಹಾರವನ್ನು ಆಗಾಗ್ಗೆ ನೀಡುತ್ತಾರೆ. ಇಂಥ ಅತ್ಯಂತ ಮೂಲಭೂತವಾದ ವಿಷಯಗಳ ಬಗ್ಗೆ ಚುನಾಯಿತ ಸರ್ಕಾರಗಳು, ಅವು ಯಾವುದೇ ಪಕ್ಷದ್ದಿರಲಿ, ಗಮನವನ್ನು ನೀಡುವುದಿಲ್ಲವೇಕೆ?
 ಸಾಮಾನ್ಯವಾಗಿ ತಪ್ಪಿತಸ್ಥರನ್ನು ರಕ್ಷಿಸುವುದಕ್ಕಾಗಿಯೇ ಸರ್ಕಾರದ ಗಮನವಿರುತ್ತದೆ. ಪಂಜಾಬಿನ ರೈತರು ಕೀಟನಾಶಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದುದರ ಪರಿಣಾಮವೇ ಬತಿಂಡಾದಿಂದ ಬಿಕಾನೇರ್‌ಗೆ ತೆರಳುವ ಕುಖ್ಯಾತವಾದ ಕ್ಯಾನ್ಸರ್ ರೈಲು. ಹಸಿರು ಕ್ರಾಂತಿಯ ಈ ಭೂತ ನೃತ್ಯವನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳುವುದರ ಬದಲಾಗಿ ಉಳ್ಳವರ ಅನುಕೂಲಕ್ಕಾಗಿ ಬತಿಂಡಾವನ್ನು ಮಿರುಗುವ ಮಾಲ್‌ಗಳ ಪಟ್ಟಣವನ್ನಾಗಿ ಮಾಡುವುದಕ್ಕೆ ಗಮನ ನೀಡಲಾಯಿತು. ಕಾಸರಗೋಡಿನಲ್ಲಿ ಎಂಡೋಸಲ್ಫಾನನ್ನು  ವಿಮಾನದ ಮೂಲಕ ಸಿಂಪರಣೆ ಮಾಡಿದ್ದರಿಂದ ಆ ಊರು ವಿಕಲಾಂಗರಾದ ಮಕ್ಕಳು ಮತ್ತು ದೊಡ್ಡವರ ಕರುಣಾಜನಕ ಭೀಕರ ಮ್ಯೂಸಿಯಂನಂತೆ ಆಯಿತು. ಸ್ಥಳೀಯ ಸರ್ಕಾರವು ಆ ವಿಷದ ಬಳಕೆಯನ್ನು ನಿಷೇಧಿಸಿತು. ಆದರೆ ಬೇರೆ ಹೆಸರಿನಲ್ಲಿ ಅದರ ಬಳಕೆ ಮುಂದುವರಿಯಿತು. ಎಂಡೋಸಲ್ಫಾನ ನಿಷೇಧಿಸುವ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಹೇಳಿದರು. ಅಮೆರಿಕವು ತನ್ನ ಕಟ್ಟುನಿಟ್ಟಿನ ಕಾರ್ಯತಂತ್ರದ ಮೂಲಕ ತನ್ನಲ್ಲಿಯ ಕೊನೆಯ ಎಂಡೋಸಲ್ಫಾನ ಫ್ಯಾಕ್ಟರಿಯನ್ನು ಮುಚ್ಚುವುದಕ್ಕೆ ಆದೇಶಿಸಿದ ಬಳಿಕ ಪವಾರ್ ಹೀಗೆ ಹೇಳಿದ್ದು. ಅಂತಾರಾಷ್ಟ್ರೀಯ ಲಾಬಿಕೋರರಿಗೆ ಭಾರತವು ಕನಸಿನ ನೆಲ. ವಿದೇಶಿ ಏಕಸ್ವಾಮ್ಯದ ಲಾಬಿಗಳಿಗೆ ನೆರವಾಗಲು ಭಾರತದ ಸಮರ್ಥ ಕೃಷಿ ಸಂಶೋಧನೆ ಮತ್ತು ಬೀಜ ತಯಾರಿಕೆಗಳನ್ನೂ ಬದಿಗೆ ಸರಿಸಲಾಗಿದೆ.
 ಬದುಕಿನಈ ನಾಚಿಕೆಗೇಡಿನ ಸಂಗತಿಗಳನ್ನು ಬದಲಿಸಲು ನರೇಂದ್ರ ಮೋದಿಯವರಿಗೆ ಕಲ್ಪನೆಗಳಿವೆ ಮತ್ತು ಈಗ ಅವರಿಗೆ ಜನಾದೇಶವೂ ಇದೆ. ಆದರೆ ಅವರು ಮಾಡಬಲ್ಲರೆ? ಈ  ಪ್ರಶ್ನೆ ಏಳುವುದು ಏಕೆಂದರೆ ಚಾಣಾಕ್ಷ  ಆಗಿರುವ ಮೋದಿ ಪ್ರಚಾರಕ ಮೋದಿ ಕೂಡ ಹೌದು. ಮೋದಿಯ ಬಿಜೆಪಿ ಮತ್ತು ಮೋಹನ ಭಾಗವತರ ಆರ್‌ಎಸ್‌ಎಸ್ ಆ ಎರಡೂ ಸಂಘಟನೆಯ ಇತಿಹಾಸದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ನೀತಿ ನಿರೂಪಣೆಯ ಕಾರ್ಯಸೂಚಿಯೊಂದನ್ನು ಸಾಧಿಸಿದ್ದಾರೆ. ಕಾರ್ಯತಂತ್ರ ಮತ್ತು ಸಂಪುಟ ರಚನೆಯ ಚರ್ಚೆಯಲ್ಲಿ ಭಾಗವತ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಮೋದಿ ಸರ್ಕಾರವು ಅಯೋಧ್ಯೆ ವಿಷಯದಲ್ಲಿ, ಕಾಶ್ಮೀರ ಕುರಿತ ಆರ್ಟಿಕಲ್ 370 ಮತ್ತು ಏಕರೂಪದ ನಾಗರಿಕ ಸಂಹಿತೆ ಕುರಿತು ಕ್ರಮಗಳನ್ನು ಕೈಗೊಳ್ಳಲೇ ಬೇಕು ಎಂದು ಆರೆಸ್‌ಎಸ್‌ನ ಹಿರಿಯ ಧುರೀಣರೊಬ್ಬರು ಬಹಿರಂಗವಾಗಿಯೇ ಹೇಳಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಹೊಸದಾಗಿ ಅಸ್ತಿತ್ವಕ್ಕೆ ಬರುವ ಬಿಜೆಪಿ ಸರ್ಕಾರದ ಕಾರ್ಯಕ್ರಮವೆಂದು ಆದ್ಯತೆಯ ಮೇಲೆ ಈ ವಿಷಯಗಳನ್ನು ಮುಂದಿಡುವುದಕ್ಕೆ ಅಂಥವರು ಮುಂದಾಗಿದ್ದಾರೆ. ಗಾಂಧಿ ಕುಟುಂಬ ಅಪ್ಪಿದ ಶಿಕ್ಷೆಯ ಪ್ರಸ್ತುತ ಸ್ಥಿತಿಯಲ್ಲಿ ಎಲ್ಲವೂ ಹೂವಿನ ಹಾದಿ ಎಂದು ತೋರಬಹುದು. ಆದರೆ ಭವಿಷ್ಯದಲ್ಲಿ ಏನೂ ಆಗಬಹುದು.


-ಟಿ.ಜೆ.ಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.