ಅಂಕಣಗಳು

ಮೋದಿಯನ್ನು ಎಲ್ಲರೂ ವಿರೋಧಿಸಿದರು, ಆದರೆ ದೇಶದ ಜನತೆ ಮಾತ್ರ ಅವರ ಪರ ನಿಂತಿದ್ದರು!

ನೂರಾರು ಲೆಕ್ಕಾಚಾರ, ದಿವ್ಯ ಕಾತರ, ಮಡುಗಟ್ಟಿದ ಮೌನ, ಗರಿಗೆದರಿದ...

ಮೋದಿಯನ್ನು  ಎಲ್ಲರೂ ವಿರೋಧಿಸಿದರು, ಆದರೆ ದೇಶದ ಜನತೆ ಮಾತ್ರ ಅವರ ಪರ ನಿಂತಿದ್ದರು!
Published On :

ನೂರಾರು ಲೆಕ್ಕಾಚಾರ, ದಿವ್ಯ ಕಾತರ, ಮಡುಗಟ್ಟಿದ ಮೌನ, ಗರಿಗೆದರಿದ ಕಾಂಕ್ಷೆ, ಕಮರಿದ ಲವಲವಿಕೆ, ಕೊನೆ ಗಳಿಗೆಯ ಅಚ್ಚರಿ... ಈ ಎಲ್ಲವುಗಳಿಗೆ ಸಾಕ್ಷಿಯಾಗಲು ನಾಳೆವರೆಗೆ ಕಾಯಬೇಕು. ನಾಳೆ ಎಷ್ಟು ಹೊತ್ತಿಗೆ ಬೆಳಗಾಗುತ್ತದೆಂದು ಇಡೀ ದೇಶವೇನು ಇಡೀ ವಿಶ್ವವೇ ಕುತೂಹಲದಿಂದ ನೋಡುತ್ತಿದೆ. ಇನ್ನು ಮೂವತ್ತು ಗಂಟೆ ಸರಿಯುವುದರೊಳಗೆ ಈ ದೇಶದ ಮುಂದಿನ ಐದು ವರ್ಷದ ಹಣೆಬರಹವೇನು ಎಂಬುದು ತಿಳಿದಿರುತ್ತದೆ. ಅಲ್ಲಿತನಕ ಕಾಯುವುದೇ ಕಷ್ಟ. ಕರ್ನಾಟಕದಲ್ಲಿ ಚುನಾವಣೆ ಮುಗಿದು ಒಂದು ತಿಂಗಳಾಗುತ್ತಾ ಬಂತು. ಮೊನ್ನೆ ಸ್ನೇಹಿತರೊಬ್ಬರು 'ಚುನಾವಣೆ ನಡೆದ ಒಂದು ತಿಂಗಳ ನಂತರ ಫಲಿತಾಂಶ ಪ್ರಕಟಿಸುವುದೆಂದರೆ, ಇಂದು ಎಂಗೇಜ್ಮೆಂಟ್ ಮಾಡಿ ಮುಂದಿನ ವರ್ಷ ಮದುವೆ ಅಂದರೆ ಹುಡುಗ-ಹುಡುಗಿ ಎಷ್ಟು ಪರಿತಪಿಸಬಹುದು ಆ ರೀತಿ ಆಗಿದೆ ನಮ್ಮೆಲ್ಲರ ಪರಿಸ್ಥಿತಿ' ಎಂದರು. ಅದಕ್ಕೆ ನಾನು ಹೇಳಿದೆ-'ಅದಾದರೆ ಪರವಾಗಿಲ್ಲ. ಆದರೆ ಈಗಿನ ಪರಿಸ್ಥಿತಿ ಹೇಗಾಗಿದೆಯೆಂದರೆ ಇಂದು ಮದುವೆ ಮಾಡಿ ಫಸ್ಟ್ನೈಟ್ಗೆ ಮುಂದಿನ ತಿಂಗಳತನಕ ಕಾಯಬೇಕು. ಅಂದ್ರೆ ಹುಡುಗ -ಹುಡುಗಿ ಸ್ಥಿತಿ ಏನಾಗಬಹುದು? ಹಾಗಾಗಿದೆ ನಮ್ಮೆಲ್ಲರ ಪಾಡು.' ನಾಳೆ ಮಧ್ಯಾಹ್ನ ಹನ್ನೆರಡು ಗಂಟೆ ತನಕ ಕಾಯುವ ಕಾತರ ಕರಗಿರುತ್ತದೆ ಬಿಡಿ. ಭಾರತದಲ್ಲಿ ಚುನಾವಣೆ ಇಷ್ಟೊಂದು ದೀರ್ಘವಾಗಿರಲಿಲ್ಲ. ಎರಡೂವರೆ ತಿಂಗಳು ದೇಶಕ್ಕೆ ದೇಶವೇ ಚುನಾವಣೆಯಲ್ಲಿ ಮುಳುಗಿದ್ದರೆ, ಸರ್ಕಾರವಿಲ್ಲದೇ ಆಡಳಿತ ಯಂತ್ರ ನಿಷ್ಕ್ರಿಯವಾಗಿದ್ದರೆ, ಯಾವ ನಿರ್ಧಾರವನ್ನೂ ತೆಗೆದುಕೊಳ್ಳದೇ ಇಡೀ ದೇಶ ನಿಂತ ನೀರಾದರೆ, ಅದರ ಪರಿಣಾಮ ಅಗಾಧ. ರಕ್ಷಣೆ, ಹಣಕಾಸು, ವಿದೇಶಾಂಗ, ವಾಣಿಜ್ಯ ಕ್ಷೇತ್ರಗಳಿಗೆ ಸಂಬಂಧಪಟ್ಟ ಫೈಲುಗಳು ಮೂರ್ನಾಲ್ಕು ತಿಂಗಳು ಕುಂತಲ್ಲೇ ಕುಂತು ಬಿಟ್ಟರೆ ಅದರಿಂದಾಗುವ ಹಾನಿ, ದುಷ್ಪರಿಣಾಮವನ್ನು ಊಹಿಸಲು ಸಹ ಅಸಾಧ್ಯ. ವಿಶ್ವದ ನೂರಾತೊಂಬತ್ತು ದೇಶಗಳ ಪೈಕಿ ಕೆಲವು ದೇಶಗಳು ಭಾರತದೊಂದಿಗೆ ಮಾತಾಡಬೇಕು ಅಂತಾದರೆ ದಿಲ್ಲಿಯಲ್ಲಿ ಫೋನ್ ಎತ್ತುವವರು ಇಲ್ಲವಾದರೆ, ಎತ್ತಿದರೂ ಜವಾಬ್ದಾರಿಯುತ ಉತ್ತರ ಕೊಡುವವರು ಇಲ್ಲವಾದರೆ ಏನಾಗಬಹುದು? ಈ ಸಲದ ಚುನಾವಣೆ ಇಂಥ ಯಡವಟ್ಟುಗಳನ್ನು ಸೃಷ್ಟಿಸಿದ್ದಂತೂ ನಿಜ.
ಈ ಸಲದ ಚುನಾವಣೆ ಮುಗಿದರೆ ಸಾಕಪ್ಪಾ, ಯಾವಾಗ ಈ ಚುನಾವಣೆ ಮುಗಿಯುತ್ತದೆ ಎಂದು ದೇಶದ ಮತದಾರರಿಗಿಂತ, ಇನ್ನಾವುದಾದರೂ ಒಬ್ಬ ವ್ಯಕ್ತಿಗೆ ಅನಿಸಿದ್ದರೆ, ಆ ವ್ಯಕ್ತಿಗೆ ನರೇಂದ್ರ ದಾಮೋದರ ಮೋದಿ ಎಂದು ಹೇಳಬಹುದು. ಈ ಸಲದ ಚುನಾವಣೆ ಮೋದಿ ಬೇಕೋ, ಬೇಡವೋ, ಮೋದಿ ಪರವೋ, ಮೋದಿ ವಿರುದ್ಧವೋ ಎಂಬುದಕ್ಕೆ ಮಾತ್ರ ಸೀಮಿತವಾಗಿತ್ತು. ಈ ಚುನಾವಣೆ ಮೋದಿ ವರ್ಸಸ್ ರಾಹುಲ್ಗಾಂಧಿ ಅಥವಾ ಮೋದಿ ವರ್ಸಸ್ ಕಾಂಗ್ರೆಸ್ ಅಥವಾ ಬಿಜೆಪಿ ವರ್ಸಸ್ ಕಾಂಗ್ರೆಸ್ ಅಥವಾ ಎನ್ಡಿಎ ವರ್ಸಸ್ ಯುಪಿಎ ಆಗಿರಲಿಲ್ಲ. ಅದೇನಿದ್ದರೂ ಮೋದಿ ವರ್ಸಸ್ ಆ್ಯಂಟಿ ಮೋದಿ (ಮೋದಿ ವರ್ಸಸ್ ಮೋದಿ ವಿರೋಧಿ) ಬಿಜೆಪಿ ಹಾಗೂ ಮಿತ್ರ ಪಕ್ಷಗಳು ಮೋದಿ ಪರ ಮಾತಾಡಿದವು. ಉಳಿದವರು ಮೋದಿ ವಿರುದ್ಧವಾಗಿ ಮಾತಾಡಿದರು. ಒಟ್ಟಾರೆ ಮೋದಿಯೇ ಇಡೀ ಚುನಾವಣೆಯ ಕೇಂದ್ರ. ಅಂದರೆ ಇದು ಮೋದಿ ಕೇಂದ್ರಿತ ಚುನಾವಣೆ. ಪ್ರಾಯಶಃ ಈ ದೇಶದಲ್ಲಿ ಈ ರೀತಿಯ ಚುನಾವಣೆ ನಡೆದಿಲ್ಲ. ಒಬ್ಬ ವ್ಯಕ್ತಿ ಇಡೀ ಚುನಾವಣೆಯನ್ನು ದೇಶವ್ಯಾಪಿ ಆವರಿಸಿದ್ದಿಲ್ಲ.
ನೀವು ಮೋದಿಯನ್ನು ಒಪ್ಪುತ್ತೀರೋ ಇಲ್ಲವೋ ಬೇರೆ ಮಾತು. ಒಪ್ಪುವವರಂತೂ ಅವರ ಬಗ್ಗೆ ಹೇಳಲೇಬೇಕು. ಒಪ್ಪದವರಿಗೂ ಮಾತಾಡಲು ಬೇರೆ ವಿಷಯಗಳಿರಲಿಲ್ಲ. ಅವರಿಗೆ ಅವರ ಬಗ್ಗೆ ಹೇಳಿಕೊಳ್ಳಲು ಏನೂ ಇರಲಿಲ್ಲ. ಅವರು ಮಾತೆತ್ತಿದರೆ ಮೋದಿಯನ್ನು ಬೈಯಲಾರಂಭಿಸಿದರು. ವಿವೇಕಿಗಳೂ, ಜ್ಞಾನಿಗಳೂ, ಚಿಂತನಾಶೀಲರಾದರೂ ಆಗೊಮ್ಮೆ ಈಗೊಮ್ಮೆ ಎಡಬಿಡಂಗಿ ಹೇಳಿಕೆ ಕೊಟ್ಟು ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುವ ಅನಂತಮೂರ್ತಿಯವರಂಥವರಿಂದ ಹಿಡಿದು ರಾಹುಲ್ ಗಾಂಧಿಯವರೆಗೂ ಹೊಕ್ಕಿದ್ದು ಮೋದಿ ಭೂತವೇ. ಮೋದಿ ಅಧಿಕಾರಕ್ಕೆ ಬಂದರೆ ಹಾಗಾಗುತ್ತದೆ, ಹೀಗಾಗುತ್ತದೆ, ದೇಶದಲ್ಲಿ ರಕ್ತದ ಕೋಡಿ ಹರಿಯುತ್ತದೆ, ಕೋಮು ಸಾಮರಸ್ಯ ಹಾಳಾಗುತ್ತದೆ ಎಂದೆಲ್ಲ ಬೊಬ್ಬೆ ಹೊಡೆಯಲಾರಂಭಿಸಿದವರಿಗೆ ಗೊತ್ತಾಗದ ಒಂದು ಸಂಗತಿಯೇನೆಂದರೆ ತಾವೇ ಮೋದಿ ಪರ ಪ್ರಚಾರ ಮಾಡುತ್ತಿದ್ದೇವೆಂಬುದು ಹಾಗೂ ಮೋದಿಯನ್ನು ಜನಪ್ರಿಯರನ್ನಾಗಿ ಮಾಡುತ್ತಿದ್ದೇವೆಂಬುದು.
ಖ್ಯಾತ ಕ್ರಿಕೆಟ್ ವಿಶ್ಲೇಷಣಕಾರ ರಿಚಿ ಬೆನಾರ್ಡ್ ಒಂದೆಡೆ ಹೇಳುತ್ತಾನೆ-'ಬೌಲರ್ ಆದವನು ಬ್ಯಾಟ್ಸ್ಮನ್ಗಳ ಪಟ್ಟುಗಳ ಬಗ್ಗೆ ಯೋಚಿಸಬೇಕು. ಅಲ್ಲದೇ ತಾನೂ ಬ್ಯಾಟ್ಸ್ಮನ್ ಎಂಬುದನ್ನು ಮರೆಯಬಾರದು.' ಮೋದಿ ವಿರೋಧಿಗಳು ಮೋದಿ ವಿರುದ್ಧ ಮಾತಾಡಿದರೇ ಹೊರತು ತಮ್ಮ ಬಗ್ಗೆ ಹೇಳಿಕೊಳ್ಳಲೇ ಇಲ್ಲ. ಮೋದಿಯನ್ನು ನಿಜಕ್ಕೂ ದೊಡ್ಡವರನ್ನಾಗಿ ಮಾಡಿದವರು ಇವರೇ. ಮೋದಿಯವರು ಅಧಿಕಾರಕ್ಕೆ ಬಂದರೆ ಹಾಗಾಗುತ್ತದೆ, ಹೀಗಾಗುತ್ತದೆಂದು ಕತೆ ಕಟ್ಟಿ, 'ಮೋದಿಯವರು ಅಧಿಕಾರಕ್ಕೆ ಬಂದರೆ' ಎಂಬ ಯೋಚನೆಯನ್ನು ಪರೋಕ್ಷವಾಗಿ ಜನರ ತಲೆಯಲ್ಲಿ ತುಂಬಿದರು. ನಮಗಿಂತ ನಮ್ಮ ವಿರೋಧಿಗಳ ಬಗ್ಗೆಯೇ ಹೆಚ್ಚು ಯೋಚಿಸಿದರೆ, ನಾವು ಅವರನ್ನು ನಮ್ಮ ಮನಸ್ಸಿನಲ್ಲಿ ನಮಗಿಂತ ಗಟ್ಟಿಯಾಗಿ, ದೊಡ್ಡದಾಗಿ, ಭದ್ರವಾಗಿ ಕುಳ್ಳಿರಿಸಿಕೊಳ್ಳುತ್ತೇವೆ. ಮೋದಿ ವಿಷಯದಲ್ಲಿ ಆಗಿದ್ದೂ ಅದೇ. ಎಲ್ಲರ ಮನಸ್ಸಿನಲ್ಲೂ ಮೋದಿಯೆಂಬ ಗುಮ್ಮ ಕುಳಿತುಕೊಂಡು ಬಿಟ್ಟಿತು. ಈ ಗುಮ್ಮವನ್ನು ಓಡಿಸಲು ಆಗಲೇ ಇಲ್ಲ.
ಬ್ರಹ್ಮಚಾರಿಯ ಮುಂದೆ ಮದುವೆಯಾದರೆ ಏನೆಲ್ಲ ಕಷ್ಟವಾಗುತ್ತದೆ ಎಂಬುದನ್ನು ವಿವರಿಸಿದಾಗ, ಮದುವೆಯ ಆಸಕ್ತಿಯನ್ನಷ್ಟೇ ಆತ ಗ್ರಹಿಸಿಕೊಂಡು ತನ್ನ ಬ್ರಹ್ಮಚರ್ಯವನ್ನು ತ್ಯಜಿಸಲು ನಿರ್ಧರಿಸಿದ ಪ್ರಸಂಗದಂತೆ ಮೋದಿ ವಿರುದ್ಧದ ಅಪಪ್ರಚಾರದಲ್ಲಿ ಆಗಿದ್ದೂ ಅದೇ. ಗೋಧ್ರಾ ಗುಮ್ಮನನ್ನು ತೋರಿಸಿ ಮೋದಿಯನ್ನು ಹಣಿಯಲು ಹೊರಟವರಿಗೆ, ಅದೇ ಗುಮ್ಮ ಬೇತಾಳದಂತೆ ಬೆನ್ನಟ್ಟಿಕೊಂಡು ಬಂದರೆ ಏನಾಗುವುದೋ ಅದೇ ಆಯಿತು. ಮೋದಿ ಪ್ರಚಾರ ಮಾಡುತ್ತಾ ಹೊರಟರು. ಅವರ ವಿರೋಧಿಗಳು ಅಪಪ್ರಚಾರ ಮಾಡುತ್ತಾ ಅವರ ಹಿಂದೆ ಹೊರಟರು. ಆದರೆ ತಾವು ಮೋದಿಯನ್ನು ಹಿಂಬಾಲಿಸುತ್ತಿದ್ದೇವೆ ಎಂಬುದು ಮಾತ್ರ ಗೊತ್ತಾಗಲಿಲ್ಲ.
ಕಳೆದ ಒಂದು ವರ್ಷದಿಂದ ಮೋದಿ ಅನುಭವಿಸಿದ ಮಾನಸಿಕ ತೊಳಲಾಟ, ಹಿಂಸೆ, ಚಾರಿತ್ರ್ಯಹನನ, ಕೀಳುಮಟ್ಟದ ಅಪಪ್ರಚಾರ, ವೈಯಕ್ತಿಕ ನಿಂದನೆ, ದೋಷಾರೋಪಣೆ, ಟೀಕೆ, ಆಕ್ರೋಶ ಒಂದಾ, ಎರಡಾ? ಅವರ ಜಾಗದಲ್ಲಿ ಬೇರೆ ಯಾರೇ ಇದ್ದರೂ ತಲೆ ಸಿಡಿದು ಹೋಗುತ್ತಿತ್ತೇನೋ? ಮೊದಲು ಮೋದಿಗೆ ಪ್ರತಿರೋಧ, ಟೀಕೆ ಎದುರಾಗಿದ್ದು ಪ್ರತಿಪಕ್ಷಗಳಾಗಲಿ, ರಾಜಕೀಯ ವಿರೋಧಿಗಳಿಂದಾಗಲಿ ಅಲ್ಲ. ಸ್ವಪಕ್ಷೀಯರಿಂದಲೇ. ಅವರ ಪಕ್ಷದವರೇ ಅವರ ಕಾಲೆಳೆದರು. ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸ ಕೂಡದೆಂದು ಸಾರ್ವಜನಿಕವಾಗಿಯೇ ಹೊಟ್ಟೆಯೊಳಗಿನ ಜಂತುವನ್ನು ಹೊರಹಾಕಿದರು. ಮೋದಿಯ ಬಗ್ಗೆ ಕಾಂಗ್ರೆಸ್ಸಿಗರಿಗಿಂತ ಹೆಚ್ಚಿನ ಭಯ ಬಿಜೆಪಿ ಹಿರಿಯ ನಾಯಕರಿಗಿತ್ತು. ನಿತೀಶ್ಕುಮಾರ್ ಅವರಂಥವರೂ ಎನ್ಡಿಎದಿಂದ ಹೊರ ಹೋಗುವಂತೆ ಮಾಡಿದ್ದು ಮೋದಿ ಅಲ್ಲ. ಮೋದಿಯವರ ದಿಲ್ಲಿ ಆಗಮನ ತಡೆಯಲು ಬಿಜೆಪಿ ನಾಯಕರೇ ನಡೆಸಿದ ಚಿತಾವಣೆ ಅದಾಗಿತ್ತು. ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರೆ ಎನ್ಡಿಎ ಛಿದ್ರವಾಗುತ್ತದೆಂಬುದನ್ನು ಬಿಂಬಿಸುವುದು ಉದ್ದೇಶವಾಗಿತ್ತು. ಈ ಯಾವ ತಂತ್ರಗಳೂ ಫಲಿಸದಿದ್ದಾಗ, ಆಡ್ವಾಣಿಯಂಥ ಹಿರಿಯ ನಾಯಕರು ಪಕ್ಷದ ಜವಾಬ್ದಾರಿ ತೊರೆಯುವಂಥ ನಿರ್ಧಾರಕ್ಕೂ ಮುಂದಾದರು. ಮೋದಿಯವರಿಗೆ ಬಿಸಿ ತುಪ್ಪ, ನುಂಗುವ ಹಾಗಿಲ್ಲ, ಉಗುಳಲೂ ಆಗೊಲ್ಲ. ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವುದನ್ನು ತಡೆಯಲು ಇನ್ನಿಲ್ಲದ ಹಣಾಹಣಿ ನಡೆಯಿತು. ಚುನಾವಣೆ ಘೋಷಣೆಯಾಗುವ ತನಕವೂ ಕೆಲವು ನಾಯಕರು ಮೋದಿಗೆ ಮಗ್ಗಲು ಮುಳ್ಳಿನಂತೆ ಕಾಡಿದರು. ಹೊರಗಿನವರ ಟೀಕೆಯನ್ನು ಸಹಿಸಿಕೊಳ್ಳಬಹುದು. ಆದರೆ ಒಳಗಿನವರ ಸಣ್ಣ ಕೀಟಲೆಯನ್ನು ಸಹಿಸಿಕೊಳ್ಳುವುದು ಕಷ್ಟ. ಆದರೆ ಮೋದಿ ಎಲ್ಲವನ್ನೂ ನುಂಗಿ ಕೊಂಡರು. ಎಲ್ಲೂ ಒಂದೇ ಒಂದು ಅಪದ್ಧ ನುಡಿಯಲಿಲ್ಲ. ನೋವು, ನಂಜನ್ನು ಹೊರಹಾಕಲಿಲ್ಲ.
ಆದರೆ ಯಾವಾಗ ಚುನಾವಣೆ ಘೋಷಣೆಯಾಯಿತೋ, ಈ ಕೆಲಸವನ್ನು ಪ್ರತಿಪಕ್ಷಗಳು ಶುರು ಮಾಡಿಕೊಂಡವು. ರಾಹುಲ್ಗಾಂಧಿ, ಸೋನಿಯಾಗಾಂಧಿ, ದಿಗ್ವಿಜಯಸಿಂಗ್, ಚಿದಂಬರಂ, ಪ್ರಿಯಾಂಕಾ ಗಾಂಧಿಯಿಂದ ಹಿಡಿದು ಸ್ಥಳೀಯ ನಾಯಕರವರೆಗೆ ಮೋದಿ ಜರೆತವೇ ಆಹಾರ. ಅದೇ ಪ್ರಚಾರ. ಮೋದಿ ಬೈಯುವುದೇ ಕಾಯಕ. ದಿನಕ್ಕೊಂದು ಆರೋಪ. ಮೋದಿ ಸರ್ಕಾರ ಯುವತಿಯೊಬ್ಬಳ ಮೇಲೆ ಕಣ್ಗಾವಲು ಇರಿಸುವ ಮೂಲಕ (ಸ್ನೂಪ್ಗೇಟ್) ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡಿದ್ದಾರೆಂಬ ಹಗರಣವನ್ನು ಚುನಾವಣೆಯುದ್ಧಕ್ಕೂ ಜೀವಂತವಾಗಿರಿಸಲು ಯಶಸ್ವಿಯಾದರು. ಮೋದಿಯೊಬ್ಬ 'ನರಹಂತಕ' ಎಂಬ ಅಣಿಮುತ್ತು ಎಲ್ಲ ನಾಯಕರ ಬಾಯಿಂದಲೂ ಉದುರಿತು!
ಗೋಧ್ರಾ ನರಮೇಧದ ಘಟನೆಯಿಂದ ಮೋದಿ ದೋಷಮುಕ್ತ ಎಂದು ಎಲ್ಲ ಕೋರ್ಟುಗಳು ಹೇಳಿದರೂ, ಅವರ ರಾಜಕೀಯ ಎದುರಾಳಿಗಳು ಮಾತ್ರ ಸುತರಾಂ ಕಬೂಲು ಆಗಲಿಲ್ಲ. ಮೋದಿ ಪ್ರಧಾನಿಯಾದರೆ ದೇಶವ್ಯಾಪಿ ರಕ್ತದ ಕೋಡಿ ಹರಿಯುತ್ತದೆ, ಅವರ ಕೈ ರಕ್ತಸಿಕ್ತವಾಗಿದೆ, ಅವರು ರಕ್ತಪಿಪಾಸು ರಾಜಕಾರಣಿ ಎಂದು ಸ್ವತಃ ರಾಹುಲ್ಗಾಂಧಿ ಜರೆದರು. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರಂತೂ ಎಲ್ಲೆಡೆ ಮೋದಿಯವರನ್ನು ಕೊಲೆಗಡುಕ, ನರಹಂತಕ ಎಂದೇ ಸಂಬೋಧಿಸಿದರು. ಮೋದಿ ಈ ಯಾವ ಟೀಕೆಗೂ ಪ್ರತಿಕ್ರಿಯಿಸಲಿಲ್ಲ.
ಇನ್ನು ಆಮ್ ಆದ್ಮಿ ಪಾರ್ಟಿಯ ಅರವಿಂದ ಕೇಜ್ರಿವಾಲ ಅವರಂತೂ ಕಾಂಗ್ರೆಸ್ನಿಂದ ಸುಪಾರಿ ಪಡೆದವರಂತೆ ವರ್ತಿಸಿದರು. ಮೋದಿಯವರನ್ನು ಕಟ್ಟಿ ಹಾಕಲು ಕಾಂಗ್ರೆಸ್ನವರು ಕೇಜ್ರಿವಾಲರನ್ನು ಬಳಸಿಕೊಂಡರೆಂಬುದು ಎಂಥವರಿಗಾದರೂ ಗೊತ್ತಾಗುತ್ತಿತ್ತು. ಕೇಜ್ರಿವಾಲ ಅವರ ಸಿಂಗಲ್ ಪಾಯಿಂಟ್ ಅಜೆಂಡಾ ಅಂದ್ರೆ ಮೋದಿಯವರನ್ನು ಬೈಯುವುದು. ದಿಲ್ಲಿ ಸರ್ಕಾರವನ್ನಿಟ್ಟುಕೊಂಡರೆ ಮೋದಿಯವರ ವಿರುದ್ಧ ಫುಲ್ಟೈಮ್ ಕೆಲಸ ಮಾಡಲು ಆಗೊಲ್ಲವೆಂದು ಸರ್ಕಾರವನ್ನು ಬಲಿ ಕೊಟ್ಟು ಕೆಲಸ ಮಾಡಿದರು. ಅಷ್ಟಕ್ಕೂ ಸಮಾಧಾನವಾಗದೇ ಮೋದಿ ವಿರುದ್ಧವೇ ನಿಂತರು. ಆದರೆ ಮೋದಿಯವರು ಅಪ್ಪಿತಪ್ಪಿಯೂ ಕೇಜ್ರಿವಾಲ ಅವರ ಹೆಸರನ್ನು ಹೇಳಲಿಲ್ಲ!
ಇಂಥವರೇ ಇಷ್ಟು ಹಾರಾಡಿದರೆ ಘಟಾನುಘಟಿಗಳಾದವರು ಬಿಡುತ್ತಾರಾ? ಲಾಲು ಪ್ರಸಾದ ಯಾದವ್, ಮುಲಾಯಂಸಿಂಗ್ ಯಾದವ್, ನಿತೀಶ್ಕುಮಾರ್, ಶರದ್ ಪವಾರ್, ಅಖಿಲೇಶ್ ಯಾದವ್, ಜಗನ್ ರೆಡ್ಡಿ, ಅಜಂಖಾನ್, ಪ್ರಕಾಶ ಕಾರಟ್, ಬೃಂದಾ ಕಾರಟ್, ಜಯಲಲಿತಾ, ಮಾಯಾವತಿ, ದೇವೇಗೌಡ... ಎಲ್ಲರೂ ಮೋದಿಗೆ ಗುರಿಯಿಟ್ಟು ಗುಂಡು ಹೊಡೆದರು. ಮಮತಾ ಬ್ಯಾನರ್ಜಿಯವರಂತೂ ಮೋದಿಯವರನ್ನು 'ಕತ್ತೆ' ಎಂದು ಮೂದಲಿಸಿದರು. ಒಮರ್ ಅಬ್ದುಲ್ಲಾ, ಫಾರುಖ್ ಅಬ್ದುಲ್ಲಾ ಸಹ ಬಾಯಿಗೆ ಬಂದಂತೆ ಜರೆದರು. ಮೋದಿ ಬೈಯ್ದರೆ ಸುದ್ದಿಯಲ್ಲಿರಬಹುದೆಂದು ಪ್ರತಿ ನಾಯಕರೂ ಭಾವಿಸಿದರು.
ವಿಚಿತ್ರ ಅಂದ್ರೆ, ಮೋದಿಯೊಬ್ಬರೇ ಸುದ್ದಿಗ್ರಾಸ ಎಂದು ಸುದ್ದಿ ಮಾಧ್ಯಮ ಸಹ ಭಾವಿಸಿದ್ದು. ಕೆಲವು ಟಿವಿ ಚಾನೆಲ್ಗಳಂತೂ ಮೋದಿ ನಿಂದನೆಯೇ ಕಾಯಕ ಮಾಡಿಕೊಂಡವು. ಅವುಗಳ ವರ್ತನೆ ರಾಜಕೀಯ ಪಕ್ಷಗಳಿಗಿಂತ ಭಿನ್ನವಾಗಿರಲಿಲ್ಲ. ಮೋದಿಯೊಬ್ಬರೇ ಟಿಆರ್ಪಿ ಐಟಂ ಎಂಬುದು ದೃಢಪಟ್ಟ ಬಳಿಕ ಅವರು ಪರ-ವಿರೋಧದ ವಸ್ತುವಾದರು. 'ಟೈಮ್ಸ್ ನೌ' ಚಾನೆಲ್ಗೆ ಮೋದಿ ನೀಡಿದ ಸಂದರ್ಶನ ಭಾರತದ ಟಿವಿ ಇತಿಹಾಸದಲ್ಲಿಯೇ ಅತ್ಯಧಿಕ ಜನ ನೋಡಿದ ಕಾರ್ಯಕ್ರಮ ಎಂದೆನಿಸಿಕೊಂಡು ಮೋದಿ ಜನಪ್ರಿಯತೆಯನ್ನು ಮತ್ತೊಮ್ಮೆ ಸಾಬೀತು ಮಾಡಿತು.
ಬಿಜೆಪಿ ಹಾಗೂ ಅಂಗಪಕ್ಷಗಳನ್ನು ಬಿಟ್ಟರೆ ಉಳಿದೆಲ್ಲ ರಾಜಕೀಯ ಪಕ್ಷಗಳೂ ಮೋದಿ ವಿರುದ್ಧ ತೊಡೆತಟ್ಟಿದವು. ಏಕಾಂಗಿಯಾಗಿ ಮೋದಿಯೊಬ್ಬರೇ ಇವರೆಲ್ಲರನ್ನೂ ಎದುರಿಸಿದರು. ಮೋದಿಯವರನ್ನು ಹೊರತುಪಡಿಸಿದರೆ ಬಿಜೆಪಿಯ ಯಾವ ನಾಯಕನ ಮಾತುಗಳನ್ನೂ ಈ ದೇಶದ ಮತದಾರ ಕೇಳಿಸಿಕೊಳ್ಳಲು ಇಷ್ಟಪಡಲಿಲ್ಲ. ಬಿಜೆಪಿಯ ಕೆಲವು ಹಿರಿಯ ನಾಯಕರು ಚುನಾವಣಾ ಬಿಸಿ ಎದುರಿಸುತ್ತಿದ್ದಾಗ, ತಮ್ಮ ಗೆಲುವು ಕಷ್ಟ ಎಂದೆನಿಸಲಾರಂಭಿಸಿದಾಗ ಮೊರೆ ಹೋಗಿದ್ದೂ ಮೋದಿ ಅವರಿಗೇ. ಅಂಥ ಕ್ಷೇತ್ರಗಳಲ್ಲೆಲ್ಲ ಅವರು ಭಾಷಣ ಮಾಡಿದರು. ಆಡ್ವಾಣಿ, ಸುಷ್ಮಾ, ಜೋಶಿ, ರಾಜನಾಥ ಸಿಂಗ್, ಗಡ್ಕರಿ, ವೆಂಕಯ್ಯ ... ಎಲ್ಲರೂ ಅಪ್ರಸ್ತುತರಾಗಿಬಿಟ್ಟರು. ಹಿಂದಿನ ಚುನಾವಣೆಗಳಲ್ಲಿ 'ಸ್ಟಾರ್ ಕ್ಯಾಂಪೇನರ್' ರೀತಿ ದೇಶ ಸುತ್ತಿದ ಈ ನಾಯಕರೆಲ್ಲ ಚಲಾವಣೆ ಕಳೆದುಕೊಂಡ ನಾಣ್ಯದಂತೆ ಅಪ್ರಸ್ತುತರಾಗಿಬಿಟ್ಟರು. 'ಮೋದಿ ಬರಲಿ, ಉಳಿದವರು ಬರುವುದು ಬೇಡ' ಎಂದು ಅಭ್ಯರ್ಥಿಗಳೂ ಬಹಿರಂಗವಾಗಿಯೇ ಹೇಳಿದರು.
ಕೆಲವು ನಾಯಕರಂತೂ ಮೋದಿಗೆ ವೋಟು ಕೊಡಿ, ಬಿಜೆಪಿಗೆ ವೋಟು ಕೊಡಿ ಎಂದು ಹೇಳಿದರೇ ಹೊರತು ತಮಗೆ ವೋಟು ಕೊಡಿ ಎಂದು ಸಹ ಹೇಳಲಿಲ್ಲ. 'ನಾವು ಮೋದಿಗೆ ವೋಟು ಹಾಕಬೇಕೆಂದಿದ್ದೇವೆ. ಅಂದ ಹಾಗೆ ಅವರ ಪಕ್ಷ ಯಾವುದು?' ಎಂದು ರೈತನೊಬ್ಬ ಕೇಳುತ್ತಿರುವ ವ್ಯಂಗ್ಯ ಚಿತ್ರ ಪಕ್ಷಕ್ಕಿಂತ ಮೋದಿಯೇ ಎತ್ತರಕ್ಕೆ ಬೆಳೆದಿರುವುದನ್ನು ಪರೋಕ್ಷವಾಗಿ ಹೇಳುವಂತಿತ್ತು. 'ಬಿಜೆಪಿ ಅಭ್ಯರ್ಥಿಗೆ ವೋಟು ಹಾಕಲು ಮನಸ್ಸಿಲ್ಲ. ಆದರೆ ಮೋದಿ ಮುಖ ನೋಡಿ ವೋಟು ಹಾಕಬೇಕಿದೆ' ಎಂದು ಅಸಂಖ್ಯ ಮತದಾರರ 'ಕಮಲ'ದ ಗುಂಡಿ ಒತ್ತಿದರು. ಬಿಜೆಪಿಗೆ ಹುಟ್ಟಾ ಮತ ನೀಡದವರೂ, ಮೋದಿಗಾಗಿ ಪಕ್ಷದ ಕೈ ಹಿಡಿದರು. ಇದನ್ನು ಅಭಿಮಾನದಿಂದ ಹೇಳಿಕೊಂಡರು.
ಇಡೀ ಚುನಾವಣೆಯಲ್ಲಿ ಮೋದಿ ದೇಶವ್ಯಾಪಿ ಸುತ್ತಿದರು. ರಾಹುಲ್ಗಾಂಧಿ 1.20 ಲಕ್ಷ ಕಿಮೀ ಸುತ್ತಿದರೆ, ಮೋದಿಯವರು ಮೂರು ಲಕ್ಷ ಕಿಮೀ ತಿರುಗಾಡಿದರು. ಈ ಸಲದ ಚುನಾವಣೆಯಲ್ಲಿ 814 ದಶಲಕ್ಷ ಮತದಾರರ ಪೈಕಿ ಮೋದಿ 234 ದಶಲಕ್ಷ ಮತದಾರರನ್ನು ನೇರಾನೇರ ತಲುಪಿದರು. ರಾಹುಲ್ಗಾಂಧಿಗೆ ಸಾಧ್ಯವಾಗಿದ್ದು ಕೇವಲ 13 ದಶಲಕ್ಷ ಮತದಾರರು. ಮೋದಿ 477 ಚುನಾವಣಾ ಭಾಷಣದ ಮೂಲಕ 14 ದಶಲಕ್ಷ ಜನರನ್ನುದ್ದೇಶಿಸಿ ಮಾತಾಡಿದರು. ನಾಲ್ಕು ಸಾವಿರ ಊರುಗಳಲ್ಲಿ 'ಚಾಯ್ ಪೇ ಪಾರ್ಟಿ' ಕಾರ್ಯಕ್ರಮಗಳಲ್ಲಿ ಐವತ್ತು ಲಕ್ಷ ಜನರನ್ನು ತಲುಪಿದರು. ಟ್ವಿಟರ್ನಲ್ಲಿ ಸುಮಾರು ಮೂವತ್ತೊಂಬತ್ತು ಲಕ್ಷ ಮಂದಿ ಮೋದಿಯವರನ್ನು ಹಿಂಬಾಲಿಸಿದರು. 'ಯು ಟ್ಯೂಬ್'ನಲ್ಲಿ ಮೋದಿಗೆ ಸಂಬಂಧಿಸಿದ ವಿಡಿಯೋ ತುಣುಕುಗಳನ್ನು ಸುಮಾರು ಒಂದು ಕೋಟಿ ಮೂವತ್ತು ಲಕ್ಷ ಜನ ವೀಕ್ಷಿಸಿದರು. ನಾಲ್ವರು ಮತದಾರರ ಪೈಕಿ ಒಬ್ಬರನ್ನು ಮುಟ್ಟಲು ಮೋದಿ ಯಶಸ್ವಿಯಾದರು. ಒಬ್ಬ ರಾಜಕೀಯ ನಾಯಕ ತನ್ನ ಪರವಾಗಿ ಇಡೀ ಚುನಾವಣೆಯಲ್ಲಿ ಈ ರೀತಿಯಾಗಿ ತಿರುಗಾಡಿದ ಪರಿಯೇ ಅಭೂತಪೂರ್ವ, ಅದ್ಭುತ. ವಿಚಿತ್ರವೆಂದರೆ, ಎಲ್ಲ ರಾಜಕೀಯ ಪಕ್ಷ, ರಾಜಕೀಯ ನಾಯಕರು ಒಂದೇ ವಿಷಯದ ಬಗ್ಗೆ ಚರ್ಚಿಸಿದರು.
ಅದು ಮೋದಿ!
ಮೋದಿಯನ್ನು ಯಾರೇ ವಿರೋಧಿಸಲಿ, ದೇಶದ ಜನತೆ ಮಾತ್ರ ಅವರ ಪರ ನಿಂತಿದ್ದರು!
ಅಷ್ಟಕ್ಕೂ ಮುಖ್ಯವಾಗುವುದು ಅದೇ ತಾನೆ?


-ವಿಶ್ವೇಶ್ವರ ಭಟ್
vbhat@me.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.