ಅಂಕಣಗಳು

ದಿಲ್ಲಿ ರಾಜಕಾರಣದಲ್ಲಿ ತಳಮಳವೋ ತಳಮಳ

2014ರ ಲೋಕಸಭೆ ಚುನಾವಣೆಯನ್ನು ತನ್ನ ಅಂತಿಮ ಹಂತಕ್ಕೆ ತಲುಪಿಸಿ, ಚುನಾವಣೆ...

Published On :

2014ರ ಲೋಕಸಭೆ ಚುನಾವಣೆಯನ್ನು ತನ್ನ ಅಂತಿಮ ಹಂತಕ್ಕೆ ತಲುಪಿಸಿ, ಚುನಾವಣೆ ಆಯೋಗ ತನ್ನ ಪಾಲಿನ ಕೆಲಸವನ್ನು ಮುಗಿಸಿದೆ. ಶುಕ್ರವಾರ ಮತಗಳ ಎಣಿಕೆ (ಎಷ್ಟಾದರೂ ಅದು ಕಂಪ್ಯೂಟರ್ ಕೆಲಸ)  ಮುಗಿದರೆ ಮುಂದಿನದ್ದೆಲ್ಲ ರಾಜಕಾರಣಿಗಳ ಅವಾಂತರದ ಕತೆಯೇ.
ಚುನಾವಣೆಯ ಪ್ರಚಾರ ಸಮರದ ಕಾಲದಲ್ಲಿ ನಿರೀಕ್ಷಿತವಾಗಿಯೇ ಕಂಡು ಬಂದಿದ್ದ, ದ್ವೇಷ, ಕೋಪತಾಪಗಳೆಲ್ಲ ಕಾಲಚಕ್ರದ ಉರುಳಲ್ಲಿ ಸಿಕ್ಕಿ ಬಹಿರಂಗವಾಗಿಯಾದರೂ ತಣ್ಣಗಾಗಿದೆ. ಚುನಾವಣೆಯ ಸಮಯದಲ್ಲಿ ಭೀಕರವಾಗಿ ಕಾದಾಡಿದ್ದರೂ, ಮಾಡಬಾರದ ಕೆಲಸಗಳನ್ನು ಮಾಡಿ, ಆಡಬಾರದ ಮಾತುಗಳನ್ನು ಆಡಿದ್ದರೂ, ಆಯೋಗಕ್ಕೆ ಅಧಿಕೃತವಾಗಿ, ಬಂದ ಗಂಭೀರ ಸ್ವರೂಪದ ಆರೋಪಗಳು ಕಡಿಮೆಯೇ ಎನ್ನಬೇಕು. ಸುಮಾರು 72 ದಿನಗಳ ದೀರ್ಘಕಾಲ ನಡೆದ ಚುನಾವಣೆ ಪ್ರಕ್ರಿಯೆ ಇದು. ಎರಡು ತಿಂಗಳ ಹಿಂದೆ ಮತ ಚಲಾಯಿಸಿದವರೂ, ಈಗಲೂ ಅವರ ಪರವಾದ ಅಭ್ಯರ್ಥಿಯ ಫಲಿತಾಂಶ ತಿಳಿಯಲು ಇನ್ನೂ ಒಂದು ದಿನ ಬೇಕು.
ಈ ಅವಧಿಯಲ್ಲಿ ರಾಜಕಾರಣಿಗಳು ಅವರವರ ಕ್ಷೇತ್ರಗಳಲ್ಲಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅವರದ್ದೇ ಆದ ರೀತಿಯಲ್ಲಿ ಲೆಕ್ಕಾಚಾರ ಹಾಕಿ, ತಮ್ಮದೇ ಆದ ತೀರ್ಮಾನಕ್ಕೆ ತಲುಪಿರಲೂಬಹುದು. ಬಹಿರಂಗವಾಗಿ ಸ್ಪರ್ಧಿಗಳು- ಅವರ ಬೆಂಬಲಿಗರು- ಏನನ್ನಾದರೂ ಹೇಳಿಕೊಳ್ಳಲಿ ಅಂತರಂಗದಲ್ಲಿ ತಳಮಳ ಕಡಿಮೆಯಾಗುವುದು ಸಾಧ್ಯವೇ ಇಲ್ಲ.
ಬಹುತೇಕವಾಗಿ ಈ ಪರಿಸ್ಥಿತಿಯಲ್ಲಿ ತೊಳಲಾಡುತ್ತಿರುವವರಲ್ಲಿ ಕಾಂಗ್ರೆಸ್- ಭಾರತೀಯ ಜನತಾ ಪಾರ್ಟಿಯ ಆಸಕ್ತ ಕಾರ್ಯಕರ್ತರೇ ಹೆಚ್ಚು. ರಾಜ್ಯದ ಕೆಲವು ಕಡೆಗಳಲ್ಲಿ ಜಾತ್ಯತೀತ ಜನತಾದಳದಲ್ಲಿ ಈ ಪರಿಸ್ಥಿತಿ ಇರಬಹುದು. ಈ ಲೆಕ್ಕಾಚಾರ- ಅಂದಾಜಿನ ವಿಶ್ಲೇಷಣೆ ನಡೆಯುತ್ತಿದ್ದಂತೆಯೇ, ಅಪ್ಪಳಿಸಿದ್ದು ನಿರ್ಗಮನ ಸಮೀಕ್ಷೆಯ ಫಲಿತಾಂಶ. ಇಲ್ಲೂ ಅಷ್ಟೇ. ಸಮೀಕ್ಷೆ ನಡೆದಿದ್ದು ಯಾವಾಗಲೋ. ಆದರೆ ಫಲಿತಾಂಶ (ಅದೇನೂ ಖಚಿತವಲ್ಲ. ಅದು ಒಂದು ಅಂದಾಜು) ಪ್ರಕಟವಾಗಿದ್ದು ಈಗಲೇ.
ಸದ್ಯಕ್ಕೆ, ಇನ್ನು ಒಂದು ದಿನದ ಅವಧಿಗೇ ಆದರೂ, ರಾಜಕೀಯಸ್ಥರ ಹಾಗೂ ಆಸಕ್ತರ ಚರ್ಚೆ ಚಾವಡಿಗಳ ಮಾತಿಗೆ ಈಗಲೂ ನಿರ್ಗಮನ ಸಮೀಕ್ಷೆಗಳೇ ಆಧಾರ. ಇಡೀ ದೇಶದ ಎಲ್ಲ ಕ್ಷೇತ್ರಗಳ "ಫಲಿತಾಂಶ" (ಅಂದಾಜು- ಊಹೆ) ಸಮೀಕ್ಷಾ ಕಂಪೆನಿಗಳ ಬಳಿ ಇದ್ದರೂ ಪ್ರಕಟವಾಗಿರುವುದು ಸ್ಥೂಲವಾಗಿ ರಾಷ್ಟ್ರೀಯ ಹಾಗೂ ರಾಜ್ಯಗಳಿಗೆ ಸಂಬಂಧಿಸಿದಂತೆ ವಿವರಗಳು. ಈಗಾಗಲೇ ಈ ವಿಚಾರಗಳಲ್ಲಿ ಸಾಕಷ್ಟು ಮಾಹಿತಿ, ಸಾರ್ವಜನಿಕರಿಗೆ ಲಭ್ಯವಾಗಿದೆ. ಸಾಮಾನ್ಯರ ಭಾಷೆಯಲ್ಲಿ ಹೇಳಬೇಕಾದರೆ ಒಟ್ಟಾರೆ ಅಂದಾಜಿನಲ್ಲಿ ಇದು ನಿರೀಕ್ಷಿತವೇ. ಆದ್ದರಿಂದಲೇ ಜನ ಇದನ್ನು ನಂಬಿರುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ವಾಸ್ತವದಲ್ಲಿ ಆ ಪರಿಸ್ಥಿತಿ ಇಲ್ಲ. ಜನರ ಚುನಾವಣೆ ಪೂರ್ವ ಅನಿಸಿಕೆ, ಅಥವಾ ನಿರೀಕ್ಷೆಯೂ ವಾಸ್ತವಕ್ಕೆ ದೂರವಾಗಿದ್ದು, ನಿರ್ಗಮನ ಸಮೀಕ್ಷೆಯೂ ಹೆಚ್ಚು ಕಡಿಮೆಯಾಗಿರಬಹುದು. ಆದ್ದರಿಂದ ಶುಕ್ರವಾರದ "ಷಾಕ್" ಸುದ್ದಿಗೂ ಜನ ಮಾನಸಿಕವಾಗಿ ಸಿದ್ಧವಾಗಿರುವುದು ಒಳಿತು.
ಪವಾಡ ಸದೃಶ ನಿರೀಕ್ಷೆ: ಸುಮಾರು ಒಂದು ವರ್ಷದ ಹಿಂದೆ, ಇನ್ನೂ ನರೇಂದ್ರ ಮೋದಿ ಅವರು ಬಿಜೆಪಿಯ ಎಲ್ಲ ವ್ಯವಹಾರಗಳನ್ನೂ ವಹಿಸಿಕೊಳ್ಳುವ ಮುನ್ನವೇ ಅವರ ವಿಶ್ವಾಸಿ, ಅಮಿತ್ ಷಾ ಅವರನ್ನು ಉತ್ತರ ಪ್ರದೇಶದಲ್ಲಿ ಪಕ್ಷದ "ಸರ್ವಾಧಿಕಾರಿ" ಎನ್ನುವ ರೀತಿಯಲ್ಲಿ ನೇಮಿಸಿದ್ದು.
ಆಗಿನ್ನೂ ಅವರ ವಿರುದ್ಧದ ಕೆಲವು ಪ್ರಕರಣಗಳು ತನಿಖೆ ವಿಚಾರಣೆಯ ಹಂತದಲ್ಲೇ ಇದ್ದವು. ಅಮಿತ್ ಷಾ ಲಖನೌದಲ್ಲಿ ಪ್ರತಿಷ್ಠಾಪನೆಯಾದಾಗ ಬಹುತೇಕವಾಗಿ ಬಿಜೆಪಿ ಹಾಗೂ ನರೇಂದ್ರ ಮೋದಿ ವಿರೋಧಿಗಳು ಉತ್ತರ ಪ್ರದೇಶ ಗುಜರಾತ್ ಅಲ್ಲ. ಇಲ್ಲಿ ಅಮಿತ್ ಷಾ ಆಟ ನಡೆಯುವುದಿಲ್ಲ ಎಂದಿದ್ದರು. ಆಗ ಬಿಜೆಪಿ ಗೆದ್ದಿದ್ದು ಸುಮಾರು ಹತ್ತು ಕ್ಷೇತ್ರಗಳಲ್ಲಿ ಮಾತ್ರ. ಆ ಸಂಖ್ಯೆಯನ್ನು ಐವತ್ತಕ್ಕೇರಿಸುವ ಘೋಷಣೆ ಹಾಗೂ ಸಂಕಲ್ಪವನ್ನು ಅಮಿತ್ ಷಾ ಪ್ರಕಟಿಸಿದರು. ಆ ಕಾರಣದಿಂದಲೇ ಲೇವಡಿಗೆ ತುತ್ತಾದರು. ಆದರೆ ನಿರ್ಗಮನ ಸಮೀಕ್ಷೆಗಳಲ್ಲಿ ಬಿಜೆಪಿ ಉತ್ತರ ಪ್ರದೇಶದಲ್ಲಿ ಐವತ್ತು ಸ್ಥಾನಗಳನ್ನುಪಡೆಯುವ ಸಂಭವ ಅಥವಾ ಸಾಧ್ಯತೇ ಇದೆ ಎಂದು ಕೆಲವು ಕಡೆ ಪ್ರಕಟವಾದಾಗ ಅಲ್ಲಿನ ರಾಜಕಾರಣದ ಹಿರಿಯ ಕಾರ್ಯಕರ್ತರಿಂದ ಯಾವುದೇ ರೀತಿಯ ಗಂಭೀರ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಸಾಮಾನ್ಯವಾಗಿ ಎಲ್ಲರೂ ಹೇಳುವಂತೆ ನಿರ್ಗಮನ ಸಮೀಕ್ಷೆಗಳನ್ನು ನಂಬುವುದಕ್ಕೆ ಆಗವುದಿಲ್ಲ ಎಂದಿದ್ದರು ಅಷ್ಟೇ.
 ನಿಜ. ಉತ್ತರ ಪ್ರದೇಶ- ಬಿಹಾರ ಕುರಿತಂತೆ ನಿರ್ಗಮನ ಸಮೀಕ್ಷೆಯ ವರದಿಗಳು ಅನೇಕರ ಪಾಲಿಗೆ ತುಂಬಾ ಉತ್ಪ್ರೇಕ್ಷಿತವಾದದ್ದು ಎನಿಸುತ್ತಿರಬೇಕು. ಆದರೂ, ಅಲ್ಲಿನ ನಾಯಕರು, ಅದರಲ್ಲೂ ಕಾಂಗ್ರೆಸ್ ನಾಯಕರು, ಪ್ರಕಟಿಸುತ್ತಿರುವ ಅಭಿಪ್ರಾಯ ಹಾಗೂ ಅವರ ಹೇಳಿಕೆಗಳಲ್ಲಿ ಭವಿಷ್ಯ ಕುರಿತ ಆತಂಕವನ್ನು ಗಮನಿಸಿದರೆ, ಅದರಲ್ಲೂ ಅನೇಕರು ಅಂತರಂಗದಲ್ಲಿ ಸಮೀಕ್ಷೆಯಲ್ಲಿ ಪ್ರಕಟವಾದ ದಿಕ್ಸೂಚಿಯನ್ನು ಕಂಡಿರುವಂತಿದೆ.ದೆಹಲಿಯಲ್ಲಿನ ರಾಷ್ಟ್ರೀಯ ನಾಯಕರಲ್ಲಿ ಜಯರಾಮ್ ರಮೇಶ್ ಅವರಂತಹ ವಾಚಾಳಿಗಳನ್ನು ಬಿಟ್ಟರೆ, ಉಳಿದವರೆಲ್ಲ ಮೌನ ವ್ರತ ಹಿಡಿದಿರುವುದು ಗಮನಾರ್ಹ.
ಸಲ್ಲದ ತಲೆದಂಡ: ಈಗ ಕಾಂಗ್ರೆಸ್ಸಿನಲ್ಲಿ ದೆಹಲಿಯಿಂದ ಹಿಡಿದು ಜಿಲ್ಲಾ ಮಟ್ಟದ ನಾಯಕರವರೆಗೂ ಕೇಳಿ ಬರುತ್ತಿರುವ ಮಾತು; ಚುನಾವಣೆ ಒಂದು ಸಾಮೂಹಿಕ ಪ್ರಕ್ರಿಯೆ. ಇಲ್ಲಿ ಎಲ್ಲವೂ ಸಾಮೂಹಿಕ ನಿರ್ಧಾರ ಸಾಮೂಹಿಕ ಕೆಲಸವನ್ನೇ ಅವಲಂಭಿಸಬೇಕು. ಆದ್ದರಿಂದ ಎಲ್ಲರೂ ಜವಾಬ್ದಾರಿಯನ್ನು ಒಳ್ಳೆಯದಾಗಲಿ, ಕೆಟ್ಟದ್ದಾಗಲಿ- ಹಂಚಿಕೊಳ್ಳಬೇಕು. ಯಾರೊಬ್ಬ ನಾಯಕರೇ ಆಗಲಿ, ವ್ಯಕ್ತಿಯೇ ಆಗಲಿ ಬಲಿಪಶುವಾಗಬೇಕಾಗಿಲ್ಲ. ಯಾರೂ ತಲೆದಂಡ ತೆರಬೇಕಾಗಲ್ಲ. ಈಗಿನ ರಾಜಕೀಯ ಅಧಿಕಾರವೆಲ್ಲ ದೆಹಲಿಯಲ್ಲೇ ಹೆಪ್ಪುಗಟ್ಟಿ ಕೂತಿರುವುದು ರಹಸ್ಯವೇನೂ ಅಲ್ಲ. ಹಾಗಿದ್ರೆ ಸಾಮೂಹಿಕ ಜವಾಬ್ದಾರಿಯ ಮಾತನ್ನು ಆಡುತ್ತಿರುವುದೇಕೆ? ಯಾರನ್ನೋ ರಕ್ಷಿಸುವುದೇ ಇಂತಹ ಹೇಳಿಕೆಗಳ ಉದ್ದೇಶ. ಅದರಲ್ಲಿ ಅನುಮಾನ ಬೇಡ.
ಸಿದ್ದರಾಮಯ್ಯ ಮಾತು: ಕರ್ನಾಟಕದಲ್ಲಿ ಈ ವಿಚಾರ ಕುರಿತ ಚರ್ಚೆ ಅಲ್ಲದಿದ್ದರೂ ಮಾತುಕತೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಮಾತನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಅವರು ಕರ್ನಾಟಕಕ್ಕೆ ಸೀಮಿತವಾಗಿ ಈ ಮಾತನ್ನು ಆಡಿದ್ದಾರೋ, ಅಥವಾ ದೆಹಲಿಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ಮಾತನ್ನಾಡಿದ್ದಾರೋ ಗೊತ್ತಿಲ್ಲ. ಈಗಿನ ನಿರ್ಗಮನ ಸಮೀಕ್ಷೆಗಳ ಭವಿಷ್ಯ ನಿಜವಾದರೆ, (ಆಗುತ್ತೆ ಎಂದೇನೂ ಅಲ್ಲ. ಆಗುವುದೇ ಇಲ್ಲ ಎನ್ನುವ ಖಾತ್ರಿಯೂ ಇಲ್ಲ) ಚುನಾವಣೆಯ ಫಲಿತಾಂಶ ಒಂದು ರೀತಿಯಲ್ಲಿ ರಾಜಕೀಯ ವಿಪ್ಲವವೇ. ಅಂತಹ ವಿಪ್ಲವದ ಕಾಲದಲ್ಲೂ ಯಾರೂ ತಲೆದಂಡ ತೆರಬೇಕಾಗಿಲ್ಲ ಎಂದರೇನರ್ಥ.
ಕರ್ನಾಟಕದಲ್ಲಿ ಚುನಾವಣೆಯ ಫಲಿತಾಂಶ ಹೇಗಿರಬಹುದು ಎನ್ನುವ ಚರ್ಚೆಯಲ್ಲಿ ನಿರ್ದಿಷ್ಟವಾದ ವಿಷಯಗಳ ಪ್ರಸ್ತಾಪವಾಗುತ್ತಿಲ್ಲ. ಆದರೆ ಚುನಾವಣೆಯ ಫಲಿತಾಂಶದ ಪ್ರಕಟಣೆಯ ಅನಂತರ ಮಂತ್ರಿಮಂಡಲದ ವಿಸ್ತರಣೆಯ ಪ್ರಸ್ತಾಪವೂ ಕೇಳಿ ಬಂದಿರುವುದರಿಂದ ಅದರಲ್ಲಿ ಸ್ಥಳೀಯ ಆಸಕ್ತಿ ಪ್ರಕಟವಾಗುವುದೂ ಸಹಜವೇ. ಒಂದು ಪ್ರಕಟಿತ ವರದಿಯಂತೆ, ಸಿದ್ದರಾಮಯ್ಯ ಅವರು ಮಂತ್ರಿಮಂಡಲದಲ್ಲಿರುವ ನಾಲ್ಕು ಖಾಲಿ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಅಷ್ಟೇ. ಅದನ್ನು ಬಿಟ್ಟರೆ ಹಳಬರಲ್ಲಿ ಯಾರನ್ನೂ ತೆಗೆಯುವುದಿಲ್ಲ, ಅವರ ಖಾತೆಗಳೂ ಬದಲಾಗುವುದಿಲ್ಲ ಎಂದಿದ್ದಾರೆ.
ದೆಹಲಿಯ ವರಿಷ್ಠರು, ಇಲ್ಲಿಂದ ರಹಸ್ಯ ವರದಿಗಳನ್ನು ತರಿಸಿಕೊಂಡಿದ್ದಾರೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಸಂಪುಟದ ಸ್ವರೂಪ ಕುರಿತಂತೆ ವರಿಷ್ಠರು ಇಷ್ಟೊಂದು ಅಧಿಕಾರವನ್ನು ಕೊಡುವುದು ಸಾಧ್ಯವೇ? ಹಾಗಿದ್ರೆ ಕಾಂಗ್ರೆಸ್ ಬದಲಾಗಿದೆಯೇ? ಗೊತ್ತಾಗುತ್ತಿಲ್ಲ. ಲೋಕಸಭೆ ಚುನಾವಣೆಗೂ ರಾಜ್ಯ ರಾಜಕಾರಣಕ್ಕೂ ಏನೇನೂ ಸಂಬಂಧವಿಲ್ಲ. ಎನ್ನುವ ರೀತಿಯಲ್ಲಿ ಹಲವು ಸಚಿವರು ನಡೆದುಕೊಂಡಿದ್ದರೆನ್ನುವ ಮಾತೂ ಕೇಳಿ ಬಂದಿದೆ. ಅಂತಹ ವರ್ತನೆಯನ್ನು ವರಿಷ್ಠರು ಸಹಿಸುವುದಿಲ್ಲ. ಆದರೆ ತತ್ಕ್ಷಣವೇ ಯಾವುದೇ ಕ್ರಮಗಳನ್ನೂ ಕೈಗೊಳ್ಳದೇ ಸುಮ್ಮನಿದ್ದು, ಮುಂದೆ ದಾರಿತಪ್ಪಿದ ಮಕ್ಕಳಿಗೆ ದಾರಿ ತೋರಿಸಬಹುದು.
ಭಾರತೀಯ ಜನತಾ ಪಾರ್ಟಿಯ ದೃಷ್ಟಿಯಿಂದ ನೋಡಿದರೆ, ನಿರ್ಗಮನ ಸಮೀಕ್ಷೆಗಳ ಭವಿಷ್ಯವನ್ನು ನಂಬುವುದಾದರೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮತ್ತೆ ವೇದಿಕೆಯ ಮಧ್ಯೆ ಬಂದು ನಿಂತಿರುವಂತಿದೆ. ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಮೈಸೂರಿನ ಸಂಗಾತಿಗಳಿಗೆ ಹಿನ್ನಡೆಯಾಗುವ ಸೂಚನೆಗಳೂ ಕಂಡು ಬರುತ್ತಿವೆ. (ಆಧಾರ: ನಿರ್ಗಮನ ಸಮೀಕ್ಷೆ) ಚುನಾವಣೆ ಫಲಿತಾಂಶ ಪ್ರಕಟವಾಗುವುದಕ್ಕೆ ಸ್ವಲ್ಪ ಮುಂಚೆ, ಸಿದ್ದರಾಮಯ್ಯ ಸರ್ಕಾರದ ಪ್ರಥಮ ವಾರ್ಷಿಕೋತ್ಸವದ ಆಚರಣೆಯಾಗಬೇಕಾಗಿ ಬಂದಿದ್ದರಿಂದ, ಅಲ್ಲಿ ಸರ್ಕಾರ, ಮುಖ್ಯಮಂತ್ರಿ ಹಾಗೂ ಮಂತ್ರಿಗಳೆಲ್ಲರೂ ವಿಪರೀತ ಸಂಯಮವನ್ನು ಪ್ರದರ್ಶಿಸಿದ್ದಾರೆ.
ಕಿಡಿಗೇಡಿತನ: ಚುನಾವಣೆಯ ಕಾಲದಲ್ಲಿ ರಾಜ್ಯದ ಕೆಲವು ಅತಿ ಹಿರಿಯ ನಾಯಕರು ಅನುಸರಿಸಿದ ತಂತ್ರಗಳು ಆಶ್ಚರ್ಯ ಹಾಗೂ ಗಾಬರಿಯನ್ನು ಹುಟ್ಟಿಸುವಂತಿದೆ ಎನ್ನುವುದು ಬಜಾರಿನ ಸುದ್ದಿ. ಇಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎನ್ನುವುದು  ಗುಸಗುಸ ಮಾತು. ಆದರೆ ನಿರ್ಗಮನ ಸಮೀಕ್ಷೆಯಲ್ಲಿ ಆ ಪ್ರಸ್ತಾಪವೇ ಇಲ್ಲ.


- ಸತ್ಯ
anisikeprabha@gmail.com



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.