ಹೈಕಮಾಂಡ್ 'ಕೈ'ಯಲ್ಲಿ ಭಸ್ಮವಾಗುವ ಸಚಿವರ್ಯಾರು?
ಅಧಿಕಾರ ಕೆಲವೊಮ್ಮೆ ಕಣ್ಣುಗಳನ್ನು ಮಬ್ಬಾಗಿಸುತ್ತದೆ, ಕಿವಿ ಕೇಳಿಸದಂತೆ ...

ಅಧಿಕಾರ ಕೆಲವೊಮ್ಮೆ ಕಣ್ಣುಗಳನ್ನು ಮಬ್ಬಾಗಿಸುತ್ತದೆ, ಕಿವಿ ಕೇಳಿಸದಂತೆ ಮಾಡುತ್ತದೆ, ಯಾರು ಏನು ಹೇಳಿದರೂ ಅರ್ಥವಾಗುವುದಿಲ್ಲ, ಬುದ್ದಿ ಕೆಲಸ ಮಾಡುವುದಿಲ್ಲ. ಏನಾಯಿತು ಎಂದು ಮನನ ಮಾಡಿಕೊಳ್ಳುವ ವೇಳೆಗೆ ಅನರ್ಥವಾಗಿರುತ್ತದೆ, ಅನಾಹುತ ಆಗಿರುತ್ತದೆ. ಎಚ್ಚೆತ್ತುಕೊಳ್ಳುವ ವೇಳೆಗೆ ಕಾಲ ಮಿಂಚಿ ಹೋಗಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಇಷ್ಟೆಲ್ಲಕ್ಕೂ ಕಾರಣವಾದ ಅಧಿಕಾರವೇ ಕೈತಪ್ಪಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.
ಇಂಥದೊಂದು ಪರಿಸ್ಥಿತಿ ಈಗ ರಾಜ್ಯದ ಕೆಲ ಮಂತ್ರಿಗಳಿಗೆ ಎದುರಾಗಿದೆ. ಗಜಗರ್ಭಸ್ವರೂಪಿ ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಸಂಪುಟದಲ್ಲೊಂದು ಪಲ್ಲಟ ಶುರುವಾಗುವುದು ಸುಸ್ಪಷ್ಟವಾಗಿದೆ.
ಚುನಾವಣೆ ಸಂಬಂಧ ಅತ್ತ ವರಿಷ್ಠರು, ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಕೊಟ್ಟ ಕಟ್ಟುನಿಟ್ಟಿನ ಸೂಚನೆ, ಸಲಹೆ, ಹೊಣೆಗಾರಿಕೆ ಇವ್ಯಾವುದನ್ನೂ ಸಮರ್ಥವಾಗಿ ನಿಭಾಯಿಸದೆ, ದ್ವೇಷ, ಅಸೂಯೆ, ಅಸಡ್ಡೆಯಿಂದ ವರ್ತಿಸಿದ ಮಂತ್ರಿಗಳ ಪಟ್ಟಿ ನಿಗಿನಿಗಿ ಕೆಂಡದಂತೆ ಹೈಕಮಾಂಡ್ ಕೈ ತಲುಪಿದ್ದು, ಅವರೆಲ್ಲ ಅಧಿಕಾರ ಕಳೆದುಕೊಂಡು ಇದ್ದಿಲಾಗುವ ಭೀತಿಯಲ್ಲಿದ್ದಾರೆ.
ಹೌದು, ರಾಜ್ಯ ಕಾಂಗ್ರೆಸ್ ಮುಖಂಡರಿಗಾಗಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾಗಲಿ ಚುನಾವಣೆಗೆ ಮುನ್ನ ಹಾಗೂ ಮತದಾನ ಪ್ರಕ್ರಿಯೆ ಸಂದರ್ಭದಲ್ಲಿ ಪಕ್ಷ ಹೆಚ್ಚು ಸ್ಥಾನ ಗಳಿಸುವ ಬಗ್ಗೆ ಇದ್ದ ವಿಶ್ವಾಸ ಈಗ ಇದ್ದಂತಿಲ್ಲ. ಸಹಜವಾಗಿಯೇ ಈ ವಿಶ್ವಾಸದ ಕೊರತೆ ಹೈಕಮಾಂಡ್ ಅನ್ನೂ ಕಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ಚುನಾವಣೆ ಜವಾಬ್ದಾರಿ ವಹಿಸಲಾಗಿದ್ದ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪೈಕಿ ಸುಮಾರು ಮಂತ್ರಿಗಳು ಚುನಾವಣೆಗೂ ತಮಗೂ ಸಂಬಂಧ ಇಲ್ಲ ಎಂಬಂತೆ ವರ್ತಿಸಿದ್ದು, ಇನ್ನೂ ಕೆಲವರು ಪಕ್ಷದ ಅಭ್ಯರ್ಥಿಯ ವಿರುದ್ಧವೇ ಕೆಲಸ ಮಾಡಿದ್ದು. ಇದೀಗ ಭಸ್ಮಾಸುರನಂತೆ ಆಯಾ ಮಂತ್ರಿಗಳ ಪದವಿಯನ್ನೇ ಸುಟ್ಟು ಭಸ್ಮ ಮಾಡುವ ಲಕ್ಷಣ ಗೋಚರವಾಗಿದೆ.
ಮೊತ್ತ ಮೊದಲನೆಯದಾಗಿ ಅಭ್ಯರ್ಥಿಗಳ 'ಚುನಾವಣೆ ಪ್ರಚಾರ' ನಿಮಿತ್ತ ಕಾಂಗ್ರೆಸ್ ಹೈಕಮಾಂಡ್ ಒಂದಷ್ಟು ಸಂಪನ್ಮೂಲವನ್ನು ಕಳುಹಿಸಿತ್ತು. ಜತೆಗೆ ಸಂಪನ್ಮೂಲ ಸಂಗ್ರಹಿಸಿ, ತಲುಪಿಸಲು, ಹಂಚಿಕೆ ಮಾಡಲು ಸೂಚನೆ ನೀಡಿತ್ತು. ಆದರೆ ಈ 'ನಿಧಿ' ಸದ್ಬಳಕೆ ಆಗಿಲ್ಲ. ಒಂದು ಕಡೆ ಹೈಕಮಾಂಡ್ ಕಳುಹಿಸಿದ ಸಂಪನ್ಮೂಲವೂ ದುರ್ಬಳಕೆ ಆಗಿದೆ. ಇನ್ನೊಂದೆಡೆ ಸಂಪನ್ಮೂಲ ಸಂಗ್ರಹ ನಿಮಿತ್ತ ಅದು ಕೊಟ್ಟ ನಿರ್ದೇಶನವೂ ಪಾಲನೆ ಆಗಿಲ್ಲ. ಇದಕ್ಕೆ ಕೆಲ ಮಂತ್ರಿಗಳ ಹೊಣೆಗೇಡಿತನ ಹಾಗೂ ದುರಾಸೆ ಕಾರಣ ಎಂಬ ತೀರ್ಮಾನಕ್ಕೆ ಹೈಕಮಾಂಡ್ ಬಂದಿದೆ.
ಅಲ್ಲದೇ ಎರಡನೆಯದಾಗಿ ಹೈಕಮಾಂಡ್ ಇಂತಿಷ್ಟು ಸೀಟುಗಳನ್ನು ಗೆಲ್ಲಲೇಬೇಕು ಎಂಬ ಗುರಿಯನ್ನು ನಿಗದಿ ಮಾಡಿತ್ತು. ಒಂದು ಪಕ್ಷದ ಸರಕಾರ ಅಧಿಕಾರದಲ್ಲಿ ಇರುವಾಗ, ಅದೂ ಅಧಿಕಾರಕ್ಕೆ ಬಂದ ನಿಗದಿತ ಸಮಯದೊಳಗೆ ಚುನಾವಣೆ ನಡೆದರೆ ಇಂತಿಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂಬ ವಿಶ್ವಾಸ, ನಿರೀಕ್ಷೆ ಆಯಾ ಪಕ್ಷದ ಮುಖಂಡರಿಗೆ ಇರುತ್ತದೆ. ಏಕೆಂದರೆ ಆಡಳಿತಾರೂಢ ಪಕ್ಷದ ವಿರುದ್ಧ ಅಲೆ ಏಳಲು ಕೂಡ ಒಂದಷ್ಟು ಸಮಯ ಬೇಕಾಗುತ್ತದೆ. ಕೆಲ ವಿಶೇಷ ಸನ್ನಿವೇಶಗಳು ಇದಕ್ಕೆ ಅಪವಾದವಾಗಿರಬಹುದು. ಆದರೆ ರಾಜ್ಯ ಸರಕಾರ ಸದ್ಯಕ್ಕಂತೂ ಆಡಳಿತವಿರೋಧಿ ಅಲೆ ಕಾಲಮಿತಿಯ ವ್ಯಾಪ್ತಿಯಲ್ಲಿಲ್ಲ. ನಿಜ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆ ಕೊಂಚ ಮಟ್ಟಿಗೆ ಕೆಲಸ ಮಾಡಿರಬಹುದು. ಆದರೆ ಆ ಎರಡರ ಸಮೀಕರಣ ಮಾಡಿದಾಗ ಪಕ್ಷಕ್ಕೆ ಕೆಲ ಮಂತ್ರಿಗಳ ಬೇಜವಾಬ್ದಾರಿಯೇ ಹೆಚ್ಚು ಅನಾಹುತ ಮಾಡಿದೆ, ಇದರಿಂದಾಗಿ ನಿರೀಕ್ಷಿತ ಸ್ಥಾನಗಳನ್ನು ಗೆಲ್ಲಲು ಆಗದಿರಬಹುದು ಎಂಬ ಮಾಹಿತಿ ಹೈಕಮಾಂಡ್ ತಲುಪಿದೆ. ಈ ಮಾಹಿತಿಯೇ ಆಯಾ ಮಂತ್ರಿಗಳ ಬುರುಡೆಗೆ ಬಿಸಿ ನೀರಾಗಿ ಪರಿಣಮಿಸಬಹುದು.
ಚುನಾವಣೆಗೆ ಮುನ್ನ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯನವರು ಹೈಕಮಾಂಡ್ನ 'ಸ್ಧಾನಗುರಿ'ಯನ್ನು ವಿಷದಪಡಿಸಿದ್ದರು ಹಾಗೂ ಈ ಗುರಿ ಮುಟ್ಟುವ ಹೊಣೆಯನ್ನು ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ ವಹಿಸಿದ್ದರು. ಒಂದೊಮ್ಮೆ ಈ ಹೊಣೆ ನಿಭಾಯಿಸದಿದ್ದರೆ ಹೈಮಾಂಡ್ ಸಿಟ್ಟಾಗುತ್ತದೆ, ಆಗ ತಕ್ಕ ಕ್ರಮ ತೆಗೆದುಕೊಳ್ಳುವುದು ತಮಗೂ ಅನಿವಾರ್ಯವಾಗುತ್ತದೆ. ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ 'ಮ್ಯಾಚ್ ಫಿಕ್ಸಿಂಗ್' ಮಾಡಿಕೊಳ್ಳಬೇಡಿ. ಹಾಗೇನಾದರೂ ಹೆಚ್ಚುಕಮ್ಮಿ ಮಾಡಿದರೆ ಅದರ ಫಲವನ್ನೂ ನೀವೇ ಉಣ್ಣಬೇಕಾಗುತ್ತದೆ ಎಂದು ಹೇಳಿದ್ದರು.
ಇದಾದ ನಂತರ ಚುನಾವಣೆ ಪ್ರಚಾರದ ಜವಾಬ್ದಾರಿಯನ್ನು ತಾವೇ ತೆಗೆದುಕೊಂಡ ಸಿದ್ದರಾಮಯ್ಯನವರು ನೂರಾರು ಬಹಿರಂಗ ಸಭೆಗಳನ್ನು ಮಾಡಿದರು. ಆಗೆಲ್ಲ ವ್ಯಕ್ತವಾದ ಜನಬೆಂಬಲ ನೋಡಿ ಕಾಂಗ್ರೆಸ್ ಇಪ್ಪತ್ತಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿಕೊಂಡು ತಿರುಗಿದರು. ಆಗ ಅವರಿಗಿದ್ದ ವಿಶ್ವಾಸ ಈಗ ಫಲಿತಾಂಶದ ಸಮಯ ಸಮೀಪಿಸುತ್ತಿರುವಾಗ ಇಲ್ಲ. ಇದರ ಜತೆಗೆ ಟಿಕೆಟ್ ಹಂಚಿಕೆ, ಚುನಾವಣೆ ವೇಳೆ ಹಾಗೂ ಚುನಾವಣೆ ಮುಗಿದ ನಂತರ ರಾಷ್ಟ್ರೀಯ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಮೂರು ಪ್ರತ್ಯೇಕ ವೀಕ್ಷಕರ ತಂಡ ರವಾನಿಸಿ ಮಾಹಿತಿ ತರಿಸಿಕೊಂಡಿದ್ದಾರೆ. ಚುನಾವಣೆ ನಂತರದ ಮಾಹಿತಿಯಿಂದ ನಿರೀಕ್ಷಿತ ಸ್ಥಾನಗಳು ಬರುವುದಿಲ್ಲ ಎಂಬುದು ವೇದ್ಯವಾಗಿದೆ. ಅಲ್ಲದೇ ಈ ವೀಕ್ಷಕ ತಂಡ ಇದಕ್ಕೆ ಕೆಲ ಮಂತ್ರಿಗಳನ್ನು ಹೊಣೆಗಾರರನ್ನಾಗಿ ಮಾಡಿ, ಅವರನ್ನು ಸಂಪುಟದಿಂದ ಕೈಬಿಡುವಂತೆ ಶಿಫಾರಸು ಮಾಡಿದೆ.
ಹೈಕಮಾಂಡ್ಗೆ ಹೋಗಿರುವ ಈ ವರದಿ ನಿಜ ಎಂಬುದನ್ನು ಸಿದ್ದರಾಮಯ್ಯ ಸಂಪುಟ ಪುನಾರಚನೆ ಸಂಬಂಧ ಆಡಿರುವ ಮಾತುಗಳಿಂದ ದೃಢಪಡಿಸಿದೆ. ಫಲಿತಾಂಶ ನಂತರ ಹೈಕಮಾಂಡ್ ಜತೆ ಚರ್ಚಿಸಿ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ. ಇದರ ಅರ್ಥ ಈಗ ಸಂಪುಟದಲ್ಲಿರುವ ಕೆಲವರು ಮಾಜಿಗಳಾಗುತ್ತಾರೆ ಎಂಬುದೇ ಆಗಿದೆ. ಈಗ ಸಿದ್ದರಾಮಯ್ಯ ಯಾವ ಸ್ಥಿತಿಗೆ ಬಂದಿದ್ದಾರೆ ಅಂದರೆ ಹೈಕಮಾಂಡ್ ಯಾರನ್ನಾದರೂ ತೆಗೆಯಿರಿ ಅಂದರೆ ದೂಸ್ರಾ ಮಾತಾಡದೆ, ಯಾರನ್ನೂ ಸಮರ್ಥಿಸಿಕೊಳ್ಳಲು ಹೋಗದೆ ಬದಲಾವಣೆ ಮಾಡುವ ಹಂತ ತಲುಪಿದ್ದಾರೆ. ಇದರಲ್ಲಿ ಸಿದ್ದರಾಮಯ್ಯನವರ ಆಪ್ತ ಬಳಗದವರೂ ಇದ್ದಾರೆ ಎಂಬುದು ಗಮನಿಸಬೇಕಾದ ಅಂಶ. ಇದಕ್ಕೆಲ್ಲ ಅವರ ಬಳಿ ಸಿದ್ದ ಉತ್ತರ ಇದ್ದೇ ಇದೆ - 'ನಾನು ಮೊದಲೇ ಹೇಳಿದ್ದೆ. ನೀವು ಸರಿಯಾಗಿ ಕೆಲಸ ಮಾಡಲಿಲ್ಲ. ಈಗ ನಾನೇನೂ ಮಾಡಲೂ ಆಗುವುದಿಲ್ಲ.'
ಇನ್ನೊಂದೆಡೆ ಇದೇ ಕಾಲಕ್ಕೆ ಹೈಕಮಾಂಡ್ ಬಳಿ ವಿನೀತ ಭಾವ ಪ್ರದರ್ಶಿಸಿದಂತೆಯೂ ಆಗುತ್ತದೆ. ಹೈಕಮಾಂಡ್ ಮಾತಿಗೆ ತಾವು ಬದ್ಧ, ಅದರ ಮಾತನ್ನು ಮೀರಲಾರೆ. ಅದರ ಮಾತಿನಂತೆ ನಡೆಯುತ್ತೇನೆ ಎಂದು ತೋರಿಸಿಕೊಂಡಂತೆಯೂ ಆಗುತ್ತದೆ. ತಮ್ಮ ಮಾತು ಮೀರಿದವರ ಬಲಿ ಹಾಕಲು ಹೈಕಮಾಂಡ್ ಮಾತಿನ ನೆರವು ಪಡೆಯುವುದು ಸಿದ್ದರಾಮಯ್ಯನವರ ತಂತ್ರ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಂತೆ.
ಹೈಕಮಾಂಡ್ಗೆ ಹೋಗಿರುವ ದೂರುಗಳಾದರೂ ಎಂಥವವು? ಈ ದೂರುಗಳು ಮೂರು ಕಡೆಯಿಂದ ಹೋಗಿವೆ. ಒಂದು ರಾಹುಲ್ ಗಾಂಧಿ ಅವರ ವೀಕ್ಷಕ ತಂಡದ್ದು, ಇನ್ನೊಂದು ಪ್ರದೇಶ ಕಾಂಗ್ರೆಸ್ ಮುಖಂಡರದು, ಮತ್ತೊಂದು ಬಾಧಿತ ಅಭ್ಯರ್ಥಿಗಳದು. ಉದಾಹರಣೆಗೆ ಮಂಡ್ಯ ಲೋಕಸಭೆ ಕ್ಷೇತ್ರದ್ದು. ಇಲ್ಲಿ ನಟಿ ರಮ್ಯಾ ಅಭ್ಯರ್ಥಿ. ಜಿಲ್ಲಾ ಕಾಂಗ್ರೆಸ್ ರಾಜಕೀಯದ ಜತೆಜತೆಗೆ ಇಲ್ಲಿಂದ ರಾಜ್ಯ, ರಾಷ್ಟ್ರ ಪ್ರತಿನಿಧಿಸುವ ಮುಖಂಡರು ಪರಸ್ಪರ ದ್ವೇಷ ರಾಜಕೀಯ ಮಾಡಿದ್ದು ರಮ್ಯಾಗೆ ಮುಳುಗಿ ನೀರಾಗಿ ಪರಿಣಮಿಸುವ ಲಕ್ಷಣಗಳಿವೆ. ಇಲ್ಲಿ ಎರಡೂ ತಂಡಗಳಿಗೆ ಪ್ರತ್ಯೇಕವಾಗಿ ಕೊಟ್ಟ ಚುನಾವಣಾ ಪ್ರಚಾರ 'ಸಂಪನ್ಮೂಲ' ಹಂಚಿಕೆಯೇ ಆಗಿಲ್ಲ. ಉಭಯ ಗುಂಪಿನ ಮುಖಂಡರು ಅದನ್ನು ಯಥಾವತ್ತಾಗಿ ಜೇಬಿಗಿಳಿಸಿದ ಪರಿಣಾಮ ತಳಮಟ್ಟದ ಕಾರ್ಯಕರ್ತರು ಕೂತಲ್ಲೇ ಆಕಳಿಕೆ ತೆಗೆದಿದ್ದಾರೆ. ಇದರ ಜತೆಗೆ ಮುಖಂಡರು ಒಬ್ಬರ ಮೇಲೊಬ್ಬರು ಪೈಪೋಟಿಗೆ ಬಿದ್ದಂತೆ 'ತಿರುಗುಮುರುಗು' (ರಿವರ್ಸ್) ರಾಜಕೀಯ ಮಾಡಿದ್ದು ಇದೀಗ ದೂರಿನ ಸ್ವರೂಪದಲ್ಲಿ ಹೈಕಮಾಂಡ್, ಅದರಲ್ಲೂ ವಿಶೇಷವಾಗಿ ಖುದ್ದು ರಾಹುಲ್ಗಾಂಧಿ ಅವರನ್ನು ತಲುಪಿದ್ದು, ಮುಂದಿನ ರಂಗುರಂಗಿನ ಬೆಳವಣಿಗೆಗಳನ್ನು ಫಲಿತಾಂಶದ ನಂತರ 'ತೆರೆಯ ಮೇಲೆ' ನೋಡುವಂತೆ ಮಾಡಿದೆ.
ಬೆಂಗಳೂರು ನಗರ ಕೂಡ ಈ ರೀತಿಯ ದೂರಿಗೆ ಸಾಕ್ಷಿಯಾಗಿದೆ. ಬೆಂಗಳೂರು ದಕ್ಷಿಣದ ನಂದನ್ ನಿಲೇಕಿಣಿ ಹಾಗೂ ಕೇಂದ್ರದ ರಿಜ್ವಾನ್ ಅರ್ಶದ್ ಇಬ್ಬರೂ ಹೈಕಮಾಂಡ್ ಅಭ್ಯರ್ಥಿಗಳು. ಇವರ ಪರವಾಗಿ ನಿರೀಕ್ಷಿತ ಮಟ್ಟದಲ್ಲಿ ಪ್ರಚಾರ ಕೆಲಸ ಅಗಲಿಲ್ಲ ಎಂಬ ದೂರಿದೆ. ಬೆಂಗಳೂರಲ್ಲಿ ಒಟ್ಟು ನಾಲ್ವರು ಮಂತ್ರಿಗಳಿದ್ದಾರೆ. ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್ ಹಾಗೂ ಕೃಷ್ಣಬೈರೇಗೌಡ. ಇವರ ಪೈಕಿ ಜಾರ್ಜ್ ಒಬ್ಬರನ್ನು ಹೊರತುಪಡಿಸಿ ಉಳಿದವರು ಸರಿಯಾಗಿ ಕೆಲಸ ಮಾಡಲಿಲ್ಲ. ಇವರ ಪೈಕಿ ಒಬ್ಬರಂತೂ ಎದಿರು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದರು ಎಂಬ ದೂರು ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರನ್ನು ತಲುಪಿದೆ. ತಾವು ವಿಶ್ವಾಸ ಇಟ್ಟು ಮಂತ್ರಿ ಸ್ಥಾನ ಕೊಟ್ಟ ಯುವಕರೂ ಹೊಣೆಯಿಂದ ನುಣುಚಿಕೊಂಡರು ಎಂಬ ದೂರು ರಾಹುಲ್ ಗಾಂಧಿ ಅವರಲ್ಲಿ ಬೇಸರ ಮೂಡಿಸಿದೆಯಂತೆ.
ಇದೇ ರೀತಿ ರಾಜ್ಯದ ನಾನಾ ಕಡೆ ಮಂತ್ರಿಗಳು ಚುನಾವಣೆಗೂ ತಮಗೂ ಸಂಬಂಧವೇ ಇಲ್ಲ. ವಿಧಾನಸಭೆ ಪ್ರತಿನಿಧಿಸುತ್ತಿರುವ ತಾವೇಕೆ ಲೋಕಸಭೆ ಚುನಾವಣೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು ಎಂಬಂತೆ ವರ್ತಿಸಿದ್ದಾರೆ. ಕೆಲವರಂತೂ ಮೇಲು ನೋಟಕ್ಕೆ ಪ್ರಚಾರದಲ್ಲಿ ಪಾಲ್ಗೊಂಡು, ನಂತರ ತೆರೆಮರೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧವೇ ಕೆಲಸ ಮಾಡಿದ್ದಾರೆ. ಇಲ್ಲೆಲ್ಲ ಬರೀ ದ್ವೇಷಾಸೂಯೆಯೇ ಕೆಲಸ ಮಾಡಿದೆ. ಚುನಾವಣೆ ಪ್ರಚಾರ, ಸಂಪನ್ಮೂಲ ನಿರ್ವಹಣೆಯಂತೂ 'ಸಿಕ್ಕಿದವರಿಗೆ ಸೀರುಂಡೆ' ಎಂಬಂತೆ ಆಗಿದೆ. ಮೇಲುಮಟ್ಟದಿಂದ ಎರಡನೇ ಹಂತದವರೆಗಿನ ನಾಯಕರ ಕೈಗೆ ಹಂಚಿಕೆಗೆಂದು ಬಂದ ಸಂಪನ್ಮೂಲ ಅವರ ಜೇಬಲ್ಲಿ ಬೆಚ್ಚಗೆ ಕುಳಿತಿದೆ. ಕಾರ್ಯಕರ್ತರು ಕೇಳಿದರೆ ಮೇಲಿಂದ ಬಂದಿಲ್ಲ ಎಂಬ ಉತ್ತರ. ಮೇಲಿನವರು ಕೇಳಿದರೆ ನಿಮ್ಮ ಸಂಪನ್ಮೂಲದ ಜತೆಗೆ ತಮ್ಮ ಕೈಯಿಂದಲೂ ಹಾಕಿಕೊಂಡು ಹಂಚಿದ್ದೇವೆ ಎಂಬ ಸಮಜಾಯಿಷಿ. ಇದು ಪಕ್ಷದ ಅಭ್ಯರ್ಥಿಗಳು ಕಣ್ಣು ಬಾಯಿ ಬಿಡುವಂತೆ ಮಾಡಿದೆ.
ಹತ್ತಕ್ಕೂ ಹೆಚ್ಚು ಸಚಿವರ ವಿರುದ್ಧ ಈ ರೀತಿಯ ದೂರುಗಳು ರಾಜ್ಯ ಮುಖಂಡರ ಕೈ ಸವರಿಕೊಂಡೇ ಹೈಕಮಾಂಡ್ ಆಂಗಳ ತಲುಪಿದೆ. ಇವರ ಪೈಕಿ ಸಿದ್ದರಾಮಯ್ಯ ಆಪ್ತ ಬಳಗದ ಸಚಿವರೂ ಇದ್ದಾರೆ. ಚುನಾವಣೆಯಲ್ಲಿ ಸಾಧನೆ ಸರಿಯಿಲ್ಲ ಎಂಬುದು ಪ್ರಮುಖ ದೂರು. ಇದರ ಜತೆಜತೆಗೆ ಬರ ನಿರ್ವಹಣೆಯಲ್ಲೂ ವಿಫಲರಾಗಿದ್ದಾರೆ. ಸರಿಯಾಗಿ ಸಭೆಗಳನ್ನು ನಡೆಸಿಲ್ಲ. ಜನರ ದೂರುಗಳನ್ನು ಆಲಿಸಿಲ್ಲ. ಪರಿಹಾರ ಕ್ರಮಗಳು ಅವರನ್ನು ತಲುಪುವಂತೆ ನೋಡಿಕೊಂಡಿಲ್ಲ ಎಂಬ ಆಪಾದನೆಗಳೂ ಸೇರಿಕೊಂಡಿವೆ.
ಈ ಸಂದರ್ಭವನ್ನು ಮಂತ್ರಿ ಸ್ಧಾನದ ಆಕಾಂಕ್ಷಿಗಳೂ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹಾಲಿ ಅಸಮರ್ಥ ಮಂತ್ರಿಗಳ ಬಗ್ಗೆ ಅಪಪ್ರಚಾರ ಮಾಡುವುದರ ಜತೆಗೆ ತಮ್ಮ ಪರವಾಗಿಯೂ ಲಾಬಿ ಮುಂದುವರಿಸಿದ್ದಾರೆ. ಪರಮೇಶ್ವರ್, ಕೆ.ಬಿ. ಕೋಳಿವಾಡ, ಮಾಲೀಕಯ್ಯ ಗುತ್ತೇದಾರ್, ಮಾಲಕರಡ್ಡಿ ಲಾಬಿಯಲ್ಲಿರುವ ಪ್ರಮುಖರು. ಇದರ ಜತೆಗೆ ರಾಜ್ಯಪಾಲರೂ ಒಂದಷ್ಟು ಸಚಿವರ ವಿರುದ್ಧ ಹೈಕಮಾಂಡ್ಗೆ ದೂರುಗಳ ಮಳೆಗರೆದಿದ್ದಾರೆ.
ಒಟ್ಟಾರೆ ಲೋಕಸಭೆ ಚುನಾವಣೆ ಫಲಿತಾಂಶ ಬರೀ ಕಾಂಗ್ರೆಸ್ ಹಾಗೂ ಪಕ್ಷದ ಅಭ್ಯರ್ಥಿಗಳಿಗೆ ಮಾತ್ರವಲ್ಲ. ಅವರ ಗೆಲುವಿನ ಹೊಣೆ ಹೊರಿಸಿಕೊಂಡಿದ್ದ ಮಂತ್ರಿಗಳಿಗೂ 'ಸಾಧನೆಯ ಪರೀಕ್ಷೆ'ಯಾಗಿ ಪರಿಣಮಿಸಿದೆ. ಫಲಿತಾಂಶ ಹೊರಬೀಳುತ್ತಿದ್ದಂತೆ ಕೆಲ ಸಚಿವರು ಮನೆಯ ದಾರಿ ಹಿಡಿಯಲಿದ್ದಾರೆ. ಕಾಂಗ್ರೆಸ್ ಕೊತ್ತಲದಲ್ಲಿ ಬಿದ್ದ ಕಲ್ಲುಗಳನ್ನು ಎಣಿಸುತ್ತಾ...!
ಲಗೋರಿ : ಜವಾಬ್ದಾರಿಯ ಹೊರೆ ಹೊರದವರು, ಬೇಜವಾಬ್ದಾರಿಯ ಭಾರಕ್ಕೆ ಕುಸಿಯುತ್ತಾರೆ.
- ಪಿ. ತ್ಯಾಗರಾಜ್
thyagarjun@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


