ಅಂಕಣಗಳು

ಸಿದ್ದರಾಮಯ್ಯ: ಮುಗಿದ ಒಂದು ವರ್ಷ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮಾರು ಐದು ವರ್ಷಗಳ ಹಿಂದೆ...

Published On :

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮಾರು ಐದು ವರ್ಷಗಳ ಹಿಂದೆ, ಹೆಚ್ಚು ಕಡಿಮೆ ಇದೇ ಸಮಯದಲ್ಲೇ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು. ಐದು ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ ಸಮಯದಲ್ಲೇ ಅವರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎನ್ನುವ ಆಸೆ ಮೂಡಿದ್ದೂ ನಿಜ.
ಆ ಆಸೆಯನ್ನು ಕೆಲವು ಹಿರಿಯ ರಾಜಕಾರಣಿಗಳ ಜತೆ ಮಾತುಕತೆ ನಡೆಸುತ್ತಾ, ಲೋಕಾಭಿರಾಮವಾಗಿ, "ನಿಮಗೆಲ್ಲ ಮುಖ್ಯಮಂತ್ರಿಯಾಗುವ ಬಯಕೆ ಇರದೇ ಇರಬಹುದು - ಆದರೆ ನನಗಿದೆ. ಅದು ನನ್ನ ಸ್ವಂತ ಅಭ್ಯುದಯದ ದೃಷ್ಟಿಯಿಂದ ಅಲ್ಲ, ಬಡವರಿಗೆ ಸಾಧ್ಯವಿರುವಷ್ಟೂ ಒಳ್ಳೆಯದನ್ನು ಮಾಡುವುದೇ ನನ್ನ ಗುರಿ" ಎಂದು ಹಂಚಿಕೊಂಡಿದ್ದರು.
ಆ ಆತ್ಮೀಯರ ಕೂಟದಲ್ಲಿದ್ದ ಕೆಲವರು ಇಬ್ಬರು ಮೂವರು ಈಗಲೂ ಶಾಸಕರಾಗಿದ್ದಾರೆ.
ಅನೇಕ ರಾಜಕೀಯ ಪಂಡಿತರ ಪ್ರಕಾರ, ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆಯ ವಿಚಾರವನ್ನು ಎತ್ತಿಕೊಂಡು, ಬೆಂಗಳೂರು- ಬಳ್ಳಾರಿಯ ಪಾದಯಾತ್ರೆ ನಡೆಸಿದಾಗಲೇ ಅವರು ಮುಖ್ಯಮಂತ್ರಿಯ ಸ್ಥಾನವನ್ನು ಭದ್ರ ಮಾಡಿಕೊಂಡಿದ್ದರು. ಆ ಯಾತ್ರೆಯಿಂದಲೇ ಸಿದ್ದರಾಮಯ್ಯ ಕರ್ನಾಟಕದ ಎಲ್ಲ ಭಾಗಗಳಲ್ಲೂ ಮನೆ ಮಾತಾಗಿದ್ದು. ಆಗ ಪ್ರತಿನಿತ್ಯ ಪಾದಯಾತ್ರೆಯ "ಮೆರವಣಿಗೆಯ' ದೀರ್ಘ ವರ್ಣರಂಜಿತ ವರದಿ ಟಿ.ವಿ. ವಾರ್ತಾ ವಾಹಿನಿಗಳಲ್ಲಿ ಪ್ರಚಾರವಾಗುತ್ತಿತ್ತು. ಅಷ್ಟೇ ಸಾಲದೇ ಸಾಮಾನ್ಯ ಜನರ ಜತೆ ಸಂಪರ್ಕಕ್ಕೆ?
  ಒಂದು ರೀತಿಯಲ್ಲಿ ಆ ಪಾದಯಾತ್ರೆಯೂ, ಯೋಚನೆ ಮಾಡಿ, ಸಾಧಕ - ಬಾಧಕಗಳನ್ನು ಕುರಿತು ಚಿಂತನೆ ನಡೆಸಿ, ಅದರಲ್ಲಿ ಪಾಲುಗೊಳ್ಳುವವರಿಗೆ "ಕನಿಷ್ಠ ವ್ಯವಸ್ಥೆ ಮಾಡುವ" ಸಿದ್ಧತೆಯನ್ನು ಮಾಡಿಕೊಂಡಂತಹ ಕಾರ್ಯಕ್ರಮ ಆಗಿರಲಿಲ್ಲ. ಒಂದು ದಿನ ವಿಧಾನಸಭೆಯಲ್ಲಿ ಬಳ್ಳಾರಿ ಸೀಮೆಯ ಒಬ್ಬ ಶಾಸಕರು ಬನ್ನಿ ಬಳ್ಳಾರಿಗೆ ನಾವು ನೋಡ್ಕೋತೀವಿ ನಿಮ್ಮನ್ನು ಎನ್ನುವ ಸವಾಲನ್ನೆಸೆದರು. ಅದನ್ನು ಸಿದ್ದರಾಮಯ್ಯ ಹಿಂದೆ ಮುಂದೆ ನೋಡದೇ ನಿಂತಕಾಲಮೇಲೇ ಸ್ವೀಕರಿಸಿದರು. ಪಾದಯಾತ್ರೇಲಿ ಬರ್ತೀವಿ ಎಂದಿದ್ದರು.
  ಅನಂತರ ಪ್ರದೇಶ ಕಾಂಗ್ರೆಸ್ ಸಂಘಟನೆಯೇ ಸಿದ್ದರಾಮಯ್ಯ ಅವರ ಪಾದಯಾತ್ರೆಗೆ ಸಂಪೂರ್ಣ ಬೆಂಬಲ ನೀಡಿತು- ಜನ ಯಾರದೂ ಆಹ್ವಾನವಿಲ್ಲದೇ ಇದ್ದರೂ, ತಾವೂ "ಮೆರವಣಿಗೆ"ಯ (ಪಾದಯಾತ್ರೆಗೆ ಬೇರೆಯವರು ಕೊಟ್ಟ ಹೆಸರು) ಜತೆ ನಾಲ್ಕು ಹೆಜ್ಜೆ ಹಾಕೋಣ ಎಂದು ಮುಂದೆ ಬಂದರು. ಕಾಂಗ್ರೆಸ್ ನಾಯಕರಂತೂ ರಾಜ್ಯದ ಎಲ್ಲ ಭಾಗಗಳಿಂದಲೂ ಬಂದಿದ್ದರು. ಆ ಪಾದಯಾತ್ರೆ ಮುಗಿದ ಕೆಲವೇ ವಾರಗಳಲ್ಲಿ ರಾಜ್ಯದಲ್ಲಿ ವಿಧಾನ ಸಭೆಯ ಚುನಾವಣೆಯ ಸಿದ್ಧತೆಗಳು ಆರಂಭವಾಗಿದ್ದು. ಸಿದ್ದರಾಮಯ್ಯ ವಿಧಾನಸಭೆಯನ್ನು ಮರೆತೇ ಬಿಟ್ಟು, ಚುನಾವಣೆಗೇ ಹೆಚ್ಚು ಗಮನ ನೀಡಿದ್ದು ನಿಜ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ರೀತಿಯಲ್ಲೇ ಗೆದ್ದಾಗ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಚರ್ಚೆ ನಡೆದರೂ, ವಾಸ್ತವದಲ್ಲಿ ಜನರ ಮನಸ್ಸಿನಲ್ಲಿ ಆ ವೇಳೆಗಾಗಲೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿಬಿಟ್ಟಿದ್ದರು.
ಫಲಿತಾಂಶ ನಿರೀಕ್ಷೆಯಲ್ಲಿ: ಅದಾಗಿ ಒಂದು ವರ್ಷ ಕಳೆದಿದೆ. ಮತ್ತೆ ಸಿದ್ದರಾಮಯ್ಯ ಹಾಗೂ ಅವರ ಸಂಗಾತಿಗಳು ಇನ್ನೊಂದು ಚುನಾವಣೆಯನ್ನು ಎದುರಿಸಿ, ಅದರ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಚುನಾವಣೆ ಪ್ರಚಾರ ಸಮರದಲ್ಲಿ ಸಾಕಷ್ಟು ಚಟುವಟಿಕೆಯಿಂದಲೇ ಪಾಲುಗೊಂಡಿದ್ದಾರೆ.
ಆದರೆ ಅದೇಕೋ, ಆಳುವ ಕೂಟದಲ್ಲಿದ್ದ ಹಲವರಿಂದ ಈಗೀಗ ಹೊರಬೀಳುತ್ತಿರುವ ಮಾತುಗಳಲ್ಲಿ ಲೋಕಸಭೆ ಚುನಾವಣೆಯಲ್ಲಿನ ಫಲಿತಾಂಶ, ರಾಜ್ಯ ಸರ್ಕಾರದ ಆಡಳಿತದ ಮೇಲಿನ ಜನಾಭಿಪ್ರಾಯ "ಪ್ರಕಟಣೆ" ಎನ್ನುವ ಮಾತು ಸುಳಿಯುತ್ತಿದೆ. ಅದರ ಹಿನ್ನೆಲೆಯಲ್ಲಿ ಏನಿದೆಯೋ ಗೊತ್ತಿಲ್ಲ.
ಒಂದೇ ವರ್ಷದ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿನ ಮತದಾನದ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಗೆ ಒಂದೇ ಒಂದು ಲೋಕಸಭೆ ಕ್ಷೇತ್ರದಲ್ಲಿ ಗೆಲವು ಸಿಗಬಹುದು. ಆದರೆ ಲೋಕಸಭೆ ಚುನಾವಣೆ ಕಾಲದ ಪ್ರಚಾರ ವೈಖರಿ, ಹಾಗೂ ಇತರ ಕೆಲವು ಬೆಳವಣಿಗೆಗಳಿಂದಾಗಿ ಬಿಜೆಪಿಯ ಗೆಲ್ಲುವ ಸ್ಥಾನಗಳೆಷ್ಟು ಎನ್ನುವುದನ್ನು ಲೆಕ್ಕ ಹಾಕುವುದೇ ಕಷ್ಟವಾಗಿದೆ. ಈಗ ಲೋಕಸಭೆ ಚುನಾವಣೆಯ ಪ್ರಚಾರ ಸಮರ ತನ್ನ ಅಂತಿಮ ಹಂತವನ್ನು ತಲುಪಿದೆ. ಇನ್ನು ಉಳಿದಿರುವುದು ಒಂದೇ ಸುತ್ತಿನ ಮತದಾನ.
ಈ ಹಿನ್ನೆಲೆಯಲ್ಲಿ, ಪಾಪ ಸಿದ್ದರಾಮಯ್ಯ ಅವರಿಗೆ ತಮ್ಮ ಸರ್ಕಾರದ ಮೊದಲ ವಾರ್ಷಿಕೋತ್ಸವದ ಆಚರಣೆಗೂ ಅವಕಾಶ ಸಿಕ್ಕಿಲ್ಲ. ಅಂತಹ ಸಂಭ್ರಮವೂ ಕಂಡು ಬರುತ್ತಿಲ್ಲ. ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಕನಿಷ್ಠಪಕ್ಷ ಇಪ್ಪತ್ತನ್ನಾದರೂ ಕಾಂಗ್ರೆಸ್ ಗೆಲ್ಲಲೇ ಬೇಕು ಎನ್ನುವ "ಕೋಟಾ" ದೆಹಲಿಯಿಂದ ನಿಗದಿಯಾಗಿತ್ತು ಎನ್ನುವ ಮಾತು ಕೇಳಿಬಂದಿತ್ತು. ಹೆಚ್ಚು ಕಡಿಮೆ ಅದೇ ಸಮಯದಲ್ಲೇ ರಾಜ್ಯದ ಬಿಜೆಪಿ ನಾಯಕರೂ ಕನಿಷ್ಠ 20 ಸ್ಥಾನಗಳಲ್ಲಿ ತಮ್ಮ ಪಕ್ಷ ಗೆಲ್ಲುವ ವಿಶ್ವಾಸವನ್ನೂ ಪ್ರದರ್ಶಿಸಿದರು.
ಈಗ ಕಾಂಗ್ರೆಸ್ಸಿಗರೂ ಅದೇಕೋ ಇಪ್ಪತ್ತು ಸ್ಥಾನಗಳ ಮಾತಾಡುತ್ತಿಲ್ಲ. ಬಿಜೆಪಿಯಲ್ಲೂ ಆ ಮಾತು ಕೇಳಿ ಬರುತ್ತಿಲ್ಲ. ಕೆಲವು ನಾಯಕರು 15-20 ರ ಸಂಖ್ಯೆಗಳನ್ನು ತೇಲಿಬಿಡುತ್ತಿರುವುದುಂಟು. ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಆದರೂ ಈಗಿನ ರಾಜಕೀಯ ವಲಯಗಳಲ್ಲಿನ ಬಿಸಿ - ಬಿಸಿ ಚರ್ಚೆ ಎಂದರೆ ಲೋಕಸಭೆ ಚುನಾವಣೆ ಫಲಿತಾಂಶ (ಪ್ರಕಟಣೆ ಮೇ 16-17) ರಾಜ್ಯದ ರಾಜಕೀಯದ ಮೇಲೆ ಏನಾದರೂ ಪರಿಣಾಮವನ್ನು ಬೀರುವುದು ಸಾಧ್ಯವೇ ಎನ್ನುವುದು.
  ರಾಜ್ಯದ ರಾಜಕೀಯದ ಮೇಲೆ ಚುನಾವಣೆ ಫಲಿತಾಂಶ ವಿಶಾಲವಾದ ಅರ್ಥದಲ್ಲಿ ಪರಿಣಾಮ ಬೀರಬಹುದು. ಆದರೆ ಈ ಪ್ರಶ್ನೆಯನ್ನು ಕೇಳುತ್ತಿರುವವರ ಮನಸ್ಸಿನಲ್ಲಿರುವುದು ಸಿದ್ದರಾಮಯ್ಯ ಅವರ ಸರ್ಕಾರದ ಭದ್ರತೆಯ ವಿಚಾರ. ಅದಕ್ಕೂ ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ನೇರವಾದ ಸಂಬಂಧವೇನೂ ಇಲ್ಲ. ಆದರೂ ಆ ಫಲಿತಾಂಶದ ಹಿನ್ನೆಲೆ, ಪ್ರಚಾರ ಸಮರದಲ್ಲಿ ಕಂಡುಬಂದ ಅನೇಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೆಲವು ರಾಜಕೀಯ ನಿರ್ಧಾರಗಳು ಅನಿವಾರ್ಯವೇ ಆಗಬಹುದು.
ತತ್ಕ್ಷಣದ ಕೆಲಸ: ಮಂತ್ರಿಮಂಡಲದ ವಿಸ್ತರಣೆ, ಪುನಾರಚನೆ, ಸರ್ಕಾರದ ಬೋರ್ಡು - ನಿಗಮ -ಮಂಡಳಿಗಳ ಅಧ್ಯಕ್ಷರು, ನಿರ್ದೇಶಕರು ನಾಮಕರಣ, ನಾನಾ ಅಕಾಡೆಮಿಗಳಿಗೆ ಅಧ್ಯಕ್ಷರ ಆಯ್ಕೆ, ರಾಜಕೀಯವಾಗಿ ಈಗ ಅನಿವಾರ್ಯವೇ. ಇಷ್ಟು ದಿನವೂ ಮುಂದಕ್ಕೆ ಹಾಕಿದಂತೆ ಈ ವಿಚಾರದಲ್ಲಿ ಇನ್ನು ಮುಂದೆ ನಿರ್ಧಾರವನ್ನು ಮುಂದಕ್ಕೆ ಹಾಕುವುದು ಕಷ್ಟ.
ನಿಜ. ಸಿದ್ದರಾಮಯ್ಯ ಅವರ ಒಂದು ವರ್ಷದ ಆಡಳಿತದಲ್ಲಿ ಕೆಲವು ಒಳ್ಳೆಯ ಕೆಲಸಗಳೂ ಆಗಿವೆ. ಅವರ ಅಹಿಂದ (ಅಲ್ಪ ಸಂಖ್ಯಾತ ಹಿಂದುಳಿದ ದಲಿತ) ಪಕ್ಷಪಾತ ಅನೇಕ ಕಡೆಗಳಲ್ಲಿ ಪ್ರಕಟವಾದರೂ, ಅದರಿಂದ ಮುಖ್ಯಮಂತ್ರಿಗಳು ಖಿನ್ನರಾಗಬೇಕಾದ ಅಗತ್ಯವೇನೂ ಇಲ್ಲ. ಹೇಳಿ ಕೇಳಿ ಅದೇ ಕಾಂಗ್ರೆಸ್ಸಿನ ನೀತಿ. ಆದರೆ ಅಹಿಂದ ಉತ್ತೇಜನದ ನೆಪದಲ್ಲಿ ಅಪಾತ್ರರಿಗೆ ಸಲ್ಲದ ಸ್ಥಾನ-ಮಾನ ಸಿಕ್ಕರೆ ಅದರಿಂದ ಅಹಿಂದ ಶಕ್ತಿಯ ಒಳಗೇ ವಿರೋಧ ಕಂಡು ಬರುವುದು ಖಚಿತ. ಈಗ ಕಾಂಗ್ರೆಸ್ ಹಾಗೂ ಸರ್ಕಾರದ ಮುಂದೆ ನೇರವಾಗಿ ಬರಲಿರುವ ವಿಚಾರ ಎಂದರೆ, ರಾಜ್ಯಸಭೆಯ ಎರಡು ಅಥವಾ ಮೂರು ಸ್ಥಾನಗಳಿಗೆ ಆಯ್ಕೆ ವಿಧಾನ ಪರಿಷತ್ತಿಗೆ ಹಲವು ಸದಸ್ಯರನ್ನು ನಾಮಕರಣ ಮಾಡುವಾಗ, ಅದು ಸ್ವಂತವಾದ ನಿರ್ಧಾರಗಳಲ್ಲ. ಪಕ್ಷದ ನಿರ್ಧಾರಗಳು ಎನ್ನುವ ರೀತಿಯಲ್ಲಿ ಸಿದ್ದರಾಮಯ್ಯ ಅವರು ವರ್ತಿಸಬೇಕು, ಹಾಗೂ ಅವರು ಹಾಗೆ ವರ್ತಿಸಿದ್ದಾರೆನ್ನುವ ನಂಬಿಕೆ ಜನರಲ್ಲಿ ಮೂಡಬೇಕು.
ಈಗ ಈ ನಾಮಕರಣಗಳ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಹೆಸರುಗಳನ್ನು ಗಮನಿಸಿದರೆ ರಾಜ್ಯದ ಪ್ರಬಲ ಹಾಗೂ ಪ್ರಭಾವಿ ಜನಾಂಗಗಳು ಕಾಂಗ್ರೆಸ್ಸಿನಿಂದ ದೂರ ಸರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎನಿಸುತ್ತಿದೆ. ಈ ಹಂತದಲ್ಲಿ "ರಾಜಕೀಯ ನೇಮಕ"ಗಳಿಗೆ ಸೇರಿದಂತೆ ಹೆಸರುಗಳನ್ನು ಹೇಳುವುದಕ್ಕೆ ಎಂಟೆದೆ ಬೇಕು. ಸದ್ಯಕ್ಕೆ ಆ ಕಸರತ್ತಿನಿಂದ ದೂರವಿರುವುದೇ ಜಾಣತನ.
ಸಿ.ಎಂ. ಇಬ್ರಾಹಿಂ ಪ್ರತ್ಯೇಕ: ಆದರೆ ಮುಖ್ಯಮಂತ್ರಿಗೆ ಈಗ ಅತ್ಯಂತ ಆತ್ಮೀಯರಾಗಿರುವ ಸಿ.ಎಂ. ಇಬ್ರಾಹಿಂ ಅವರನ್ನು ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರನ್ನಾಗಿ ನೇಮಿಸುವ ವಿಚಾರ ವಿಪರೀತವಾಗಿ ಪ್ರಬಲವಾಗಿರುವುದರಿಂದ ಆ ಒಂದು ಸ್ಥಾನ ಹಾಗೂ ಹೆಸರನ್ನು ಹೇಳಬಹುದು.
ಸಿ.ಎಂ. ಇಬ್ರಾಹಿಂ, ಭದ್ರಾವತಿಯಲ್ಲಿ ಕನ್ನಡ ಚಳವಳಿಗಾರರಾಗಿದ್ದವರು. ಅವರು ಬೆಂಗಳೂರಿಗೆ ಬಂದು ಕಾಂಗ್ರೆಸ್ -ಸಂಸ್ಥಾ ಕಾಂಗ್ರೆಸ್ಗಳ ಮೂಲಕ ತುರ್ತು ಪರಿಸ್ಥಿತಿಯ ಬಿಸಿಯನ್ನು ಅನುಭವಿಸಿ, ಜನತಾ ಪಾರ್ಟಿಯ ಪರವಾಗಿ ಶಾಸಕರಾದವರು.   ಮುಂದೆ ಕಾಂಗ್ರೆಸ್ಸಿನಲ್ಲಿ ಮಂತ್ರಿಯಾಗಿ, ಮತ್ತೆ ಜನತಾದಳಕ್ಕೆ ಹಿಂತಿರುಗಿ, ಆ ಪಕ್ಷದ ಪರವಾಗಿ ರಾಜ್ಯಸಭೆಗೆ ಆಯ್ಕೆಯಾಗಿ ದೇವೇಗೌಡರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಮಂತ್ರಿಯೂ ಆಗಿದ್ದವರು.
ಅವರಂತಹವರಿಗೆ ರಾಜ್ಯ ಯೋಜನಾ ಮಂಡಳಿಯ (ಅದೇನೂ ಸ್ವಾಯತ್ತ ಆಯೋಗವಲ್ಲ. ಅಧಿಕಾರವೇ ಇಲ್ಲದಂತಹ ಸಂಸ್ಥೆ) ಅಧ್ಯಕ್ಷ ಪೀಠವನ್ನು ಕೊಡುವುದರ ಹಿನ್ನೆಲೆಯನ್ನು ಜನ - ಗಮನಿಸಬೇಕು. ಆ ಸ್ಥಾನಕ್ಕೆ ಸಚಿವರ ಸ್ಥಾನಮಾನವಿದೆ.  ಈಚೆಗೆ ಪ್ರಧಾನಿ ಮನಮೋಹನ ಸಿಂಗ್ ತಾವು 34 ವರ್ಷಗಳ ಕಾಲದಿಂದಲೂ ಸಂಪರ್ಕ ಹೊಂದಿದ್ದ, ಸುಮಾರು ಒಂದು ದಶಕದ ಕಾಲ ಅಧ್ಯಕ್ಷರಾಗಿದ್ದ (ಈಗಲೂ ಅವರೇ ಅಧ್ಯಕ್ಷರು) ಯೋಜನಾ ಆಯೋಗಕ್ಕೆ ವಿದಾಯ ಹೇಳುವ ಸಂದರ್ಭದಲ್ಲಿ ದೇಶದ ರಾಜಕೀಯ - ಆರ್ಥಿಕ ನೀತಿಯ ನಿರೂಪಣೆಯಲ್ಲಿ ಶಕ್ತಿಗಳೇ ಹೆಚ್ಚು ಪಾತ್ರವಹಿಸುತ್ತಿರುವ ಹಿನ್ನೆಲೆಯಲ್ಲಿ, ಯೋಜನಾ ಆಯೋಗದ ಪಾತ್ರದ ವಿಮರ್ಶೆಯಾಗಬೇಕು ಎಂದಿದ್ದಾರೆ. ಕೇಂದ್ರ ಯೋಜನಾ ಆಯೋಗದ (ಒಂದು ಕಾಲದಲ್ಲಿ ಸೂಪರ್ ಕ್ಯಾಬಿನೆಟ್ ಎಂದು ಹೆಸರು ಪಡೆದಿತ್ತು) ಗತಿಯೇ ಡೋಲಾಯಮಾನವಾಗಿರುವಾಗ, ರಾಜ್ಯ ಯೋಜನಾ ಮಂಡಳಿಯ ಸ್ಥಿತಿಯನ್ನು ಯಾರಾದರೂ ಊಹಿಸಬಹುದು. ಮಾಜಿ ಕೇಂದ್ರ ಸಚಿವರಿಗೆ ಇಂತಹ ಸ್ಥಾನ ಬೇಕಾ?
ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಶುಭಾಶಯಗಳು.


-ಸತ್ಯ
anisikeprabha@gmail.com



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.