ಅಂಕಣಗಳು

ಸಿಂಗಾಪುರವನ್ನು ಸಿಂಗರಿಸಿದ ಲೀ ಕ್ವಾನ್ ಹ್ಯೂ

ಸಿಂಗಾಪುರವನ್ನು ಕಟ್ಟಿದ ಲೀ ಕ್ವಾನ್ ಹ್ಯೂ ಬಗ್ಗೆ ನಾನು ಅನೇಕ ಸಲ ಬರೆದಿದ್ದೇನೆ...

ಸಿಂಗಾಪುರವನ್ನು ಸಿಂಗರಿಸಿದ ಲೀ ಕ್ವಾನ್ ಹ್ಯೂ
Published On :

ಸಿಂಗಾಪುರವನ್ನು ಕಟ್ಟಿದ ಲೀ ಕ್ವಾನ್ ಹ್ಯೂ ಬಗ್ಗೆ ನಾನು ಅನೇಕ ಸಲ ಬರೆದಿದ್ದೇನೆ. ಆತ ಸಿಂಗಾಪುರ ಎಂಬ ಐಡಿಯಾವನ್ನು, ಸಿಂಗಾಪುರ ಎಂಬ ಕನಸನ್ನು, ಸವಾಲನ್ನು ವಾಸ್ತವಕ್ಕಿಳಿಸಿ ಸಾಧ್ಯ ಮಾಡಿ ತೋರಿಸಿ ಇಡೀ ಜಗತ್ತೇ ಬೆಚ್ಚಿ ಬೀಳುವಂತೆ ಮಾಡಿದ ಮಹಾಪುರುಷ! ತೊಂಬತ್ತೊಂದು ವರ್ಷ ವಯಸ್ಸಿನ ಈತ ಈಗಲೂ ಉತ್ಸಾಹದ ಬುಗ್ಗೆ, ಚೈತನ್ಯದ ಚಿಲುಮೆ. ಈತನನ್ನು ಸಿಂಗಾಪುರದ ಮಂದಿ ರಾಷ್ಟ್ರಪಿತ (Father of Nation) ಎಂದು ಕರೆಯುತ್ತಾರೆ. ಪ್ರಧಾನಿ, ರಾಷ್ಟ್ರಪತಿಯಾಗಿ ದೇಶವನ್ನು ಮುನ್ನೆಡೆಸಿದ ಲೀ ಕ್ಯಾನ್ ಹ್ಯೂಗೆ ಜಾಗತಿಕ ನಾಯಕರ ಸಾಲಿನಲ್ಲಿ ಅಗ್ರಸ್ಥಾನವಿದೆ. ಒಂದು ದೇಶವನ್ನು ಹೇಗೆ ಕಟ್ಟಬಹುದೆಂಬ ಬಗ್ಗೆ ಈತ ಮಾತನಾಡಿದರೆ ಇಡೀ ವಿಶ್ವವೇ ಕೇಳಿಸಿಕೊಳ್ಳುತ್ತದೆ. ಈ ಇಳಿವಯಸ್ಸಿನಲ್ಲೂ ಈತ ಹಲವಾರು ಕನಸು-ಕನವರಿಕೆಗಳನ್ನು ಇಟ್ಟುಕೊಂಡು ದೇಶದ ಬಗ್ಗೆ, ಭವಿಷ್ಯದ ಬಗ್ಗೆ ಚಿಂತಿಸಿರುತ್ತಾನೆ.
ಲೀ ಕ್ವಾನ್ ಹ್ಯೂ ಏನು ಮಾಡುತ್ತಿರಬಹುದು ಎಂಬ ಕುತೂಹಲವಿತ್ತು. ಇತ್ತೀಚಿನ ದಿನಗಳಲ್ಲಿ ಆತನ ಬಗ್ಗೆ ಅಷ್ಟಾಗಿ ಕೇಳಿರಲಿಲ್ಲ. ಹಾಗೆ ಅಂದುಕೊಳ್ಳುತ್ತಿರುವಾಗಲೇ ಆತ ಬರೆದ One Man's View of the World  ಎಂಬ ಪುಸ್ತಕ ಇತ್ತೀಚೆಗೆ ದುಬೈ ಏರ್ಪೋರ್ಟಿನಲ್ಲಿ ಸಿಕ್ಕಿತು. ದುಬೈಯಿಂದ ಬೆಂಗಳೂರಿಗೆ ಬರುವಾಗ ಲೀ ಕ್ವಾನ್ ಹ್ಯೂ ತಲೆಯಲ್ಲಿ ತುಂಬಿಕೊಂಡಿದ್ದ. ಆತನ ಕೆಲವು ಯೋಚನೆಗಳನ್ನು ಅವನ ಮಾತಿನಲ್ಲಿ ಕೊಡುತ್ತಿದ್ದೇನೆ. ಒಂದು ದೇಶ ಕಟ್ಟಿದವನು ತನ್ನ ಕೈಫಿಯತ್ತನ್ನು ಹೇಳಿಕೊಂಡರೆ ಓದಲು ಚೆನ್ನಾಗಿರುತ್ತದೆ.
****************************
'ಬಗೆಬಗೆಯ ಜನರನ್ನು ಭೇಟಿಯಾಗುವುದೆಂದರೆ, ಅವರ ಮಾತುಗಳಿಗೆ ಕಿವಿಯಾಗುವುದೆಂದರೆ ನನಗೆ ತುಂಬಾ ಇಷ್ಟ. ನಮಗೆ ಬಗೆಬಗೆಯ ಐಡಿಯಾಗಳು ಸಿಗಬೇಕೆಂದರೆ, ನಮ್ಮ ತಿಳಿವಳಿಕೆಯ ಮಟ್ಟ ಹೆಚ್ಚಬೇಕೆಂದರೆ ಬಗೆಬಗೆಯ ಜನರನ್ನು ಭೇಟಿ ಮಾಡಬೇಕು ಎನ್ನುವವ ನಾನು. ಹೀಗೆ, ನನ್ನನ್ನು ಭೇಟಿಯಾಗುವವರ ಅಥವಾ ನಾನು ಭೇಟಿಯಾಗುವವರ ಪಟ್ಟಿಯಲ್ಲಿ ಸಿಂಗಾಪುರದ ನಾಗರಿಕರು ಮಾತ್ರವಲ್ಲ, ಮಲೇಶಿಯಾ, ಇಂಡೋನೇಷ್ಯಾ, ಚೀನಾ, ಯುರೋಪ್ ಮತ್ತು ಅಮೆರಿಕದ ಜನರೂ ಇರುತ್ತಾರೆ. ವಿದೇಶಗಳಲ್ಲಿರುವ ಜನರನ್ನು ಭೇಟಿಯಾಗುತ್ತೇನೆ ಅಂದಾಕ್ಷಣ, ಅವರೆಲ್ಲಾ ಆ ದೇಶಗಳಲ್ಲಿ ವಾಸಿಸುತ್ತಿರುವ ನನ್ನ ಹಳೆಯ ಸ್ನೇಹಿತರು ಅಥವಾ ರಾಜಕೀಯ ಮುಖಂಡರು ಆಗಿರಬಹುದು ಎಂಬ ಅವಸರದ ನಿರ್ಧಾರಕ್ಕೆ ಬರಬೇಡಿ. ಶಿಕ್ಷಣ ತಜ್ಞರು, ಉದ್ಯಮಿಗಳು, ಪತ್ರಕರ್ತರು, ವಿಜ್ಞಾನಿಗಳು... ಹೀಗೆ ಹಲವು ಕ್ಷೇತ್ರಗಳ ಪರಿಣಿತರೊಂದಿಗೆ ಮಾತುಕತೆ ನಡೆಸುತ್ತೇನೆ. ಈಚಿನ ದಿನಗಳಲ್ಲಿ ವಿದೇಶ ಪ್ರಯಾಣವನ್ನು ಆದೆಷ್ಟೋ ಕಡಿಮೆ ಮಾಡಿದ್ದೇನೆ. 2012ರವರೆಗೂ ಪ್ರತಿ ವರ್ಷವೂ ಜಪಾನ್ ಹಾಗೂ ಚೀನಾ ದೇಶಗಳಿಗೆ ಭೇಟಿ ಕೊಡುವುದು ನನ್ನ ಪಾಲಿಗೆ ಅನಿವಾರ್ಯ ಮತ್ತು ಅತಿಮುಖ್ಯ ಕೆಲಸವೇ ಆಗಿತ್ತು. ಜಪಾನ್ನಲ್ಲಿ ವರ್ಷ ವರ್ಷವೂ ನಡೆಯುತ್ತಿದ್ದ 'future of Asia' ಎಂಬ ಶೃಂಗಸಭೆಯಲ್ಲಿ ಹಾಗೂ ಚೀನಾದಲ್ಲಿ ನಡೆಯುತ್ತಿದ್ದ ರಾಜಕೀಯ ಮುಖಂಡರ ಸಭೆಯಲ್ಲಿ ನಾನು ಕಡ್ಡಾಯವಾಗಿ ಪಾಲ್ಗೊಳ್ಳಬೇಕಿತ್ತು. ನಿಜ ಹೇಳಬೇಕೆಂದರೆ, ಬೀಜಿಂಗ್ ನಗರದ ಕೊಳಕು ರಾಶಿಯನ್ನು ಕಂಡ ಕ್ಷಣವೇ, ಉಹುಂ, ಇನ್ನು ಮುಂದೆ ಈ ನಗರಕ್ಕೆ ಕಾಲಿಡಬಾರದು ಅನ್ನಿಸಿಬಿಟ್ಟಿತು. ಹಾಗೆಯೇ ಒಂದು ಬಾರಿ ನ್ಯೂಯಾರ್ಕ್ಗೆ ತೆರಳಿದಾಗ, ಸತತ ಹದಿನೆಂಟು ಗಂಟೆಗಳ ಸುದೀರ್ಘ ಪ್ರಯಾಣದಿಂದ ಉಂಟಾದ ಮಾರ್ಗಾಯಾಸವೂ ನನ್ನನ್ನು ಹಿಂಡಿ ಹಿಪ್ಪೆ ಮಾಡಿತು. ನಮ್ಮ ಅಮೂಲ್ಯ ಸಮಯವನ್ನು ನುಂಗಿ ಹಾಕುವ, ಮನಸ್ಸಿಗೂ ಕಿರಿಕಿರಿ ಉಂಟು ಮಾಡುವ ಇಂಥ ಯಾತ್ರೆಗಳಿಂದ ಏನುಪಯೋಗ ಅನ್ನಿಸಿತಲ್ಲ; ಆಗಲೇ ಹೀಗೊಂದು ಖಡಕ್ ನಿರ್ಧಾರಕ್ಕೆ ಬಂದುಬಿಟ್ಟೆ: 'ಇನ್ನು ಮುಂದೆ ನನ್ನ ವಿದೇಶ ಪ್ರಯಾಣವನ್ನು ಕಡಿಮೆ ಮಾಡಲೇಬೇಕು...'
ಪ್ರತಿ ದೇಶಕ್ಕೂ ಭಿನ್ನ ಸಂಸ್ಕೃತಿ, ಹಿನ್ನೆಲೆಯಿದೆ. ಒಂದೊಂದು ದೇಶದಲ್ಲೂ ಹತ್ತಾರು ಭಾಷೆಗಳನ್ನು ಮಾತಾಡುವ ಜನರು ಇದ್ದಾರೆ. ಜನ ಸಮೂಹದಲ್ಲಿ ಬಳಕೆಯಾಗುವ ಭಾಷೆಗಳು ಒಂದೆರಡಲ್ಲ, ಐವತ್ತಿರಲಿ, ಆದರೆ ಇಡೀ ದೇಶದ ಅತಿಮುಖ್ಯ ಭಾಷೆ ಒಂದೇ ಆಗಿರಲಿ ಎಂಬುದು ನನ್ನ ವಾದ. ಇಂಥದೊಂದು ನಿಯಮ ಜಾರಿಗೆ ಬಂದರೆ, ಪರಸ್ಪರ ಸಂವಹನ ಸುಲಭವಾಗುತ್ತದೆ. ಎಲ್ಲರೂ ಆಡುವ ಭಾಷೆ ಎಂಬ ಕಾರಣಕ್ಕೆ ಅದನ್ನು ಆ ದೇಶದ ಪ್ರಜೆಗಳೆಲ್ಲಾ ಕಲಿಯಲೇ ಬೇಕಾಗುತ್ತದೆ.
ಈ ವಿಷಯವಾಗಿ ಒಂದೆರಡು ಸಂಗತಿಗಳನ್ನು ವಿವರಿಸಬೇಕು. 1949ರವರೆಗೆ ಚೀನಾದ ಶಾಲೆಗಳಲ್ಲಿ ಚೀನಿ ಭಾಷೆಗೇ ಮೊದಲ ಪ್ರಾಶಸ್ತ್ಯ ಎಂದು ಕಾನೂನು ಜಾರಿಯಾತ್ತು. ಚೀನಿ ಭಾಷೆಯನ್ನು ಸುಲಲಿತವಾಗಿ ಓದಲು, ಬರೆಯಲು, ಮಾತಾಡಲು ಕಲಿತವರು ಚೀನಾ ದೇಶದೊಳಗೆ ಮೆರೆಯಬಹುದಿತ್ತು ನಿಜ. ಆದರೆ ಚೀನಾದ ಗಡಿ ದಾಟಿದರೆ, ಸಂವಹನಕ್ಕೆ ಬೇರೊಂದು ಭಾಷೆ ಗೊತ್ತಿಲ್ಲದೆ ಬೆಬ್ಬೆಬ್ಬೆ... ಅನ್ನಬೇಕಿತ್ತು. ಇಂಗ್ಲಿಷ್ ಕಲಿತರೆ, ಜಗತ್ತಿನ ಯಾವುದೋ ಮೂಲೆಗಾದರೂ ಹೋಗಿ, ಮಾತುಕತೆ, ವ್ಯವಹಾರವನ್ನೆಲ್ಲ ನಿಭಾಯಿಸಬಹುದು ಎಂದು ಗೊತ್ತಾಯಿತಲ್ಲ; ಆಗಲೇ ಎಲ್ಲ ಶಾಲೆಗಳಲ್ಲೂ ಇಂಗ್ಲಿಷ್ ಪ್ರಧಾನ ಭಾಷೆ ಆಗಬೇಕೆಂದೂ, ಆಯಾ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಮಾತೃಭಾಷೆಯನ್ನು ಸೆಕೆಂಡ್ ಲಾಂಗ್ವೇಜ್ ಎಂದು ಪರಿಗಣಿಸಬೇಕೆಂಬ ಆದೇಶವನ್ನು ಜಾರಿಗೆ ತಂದೆ. ಮರುದಿನದಿಂದಲೇ ಸಿಂಗಾಪುರದಲ್ಲಿದ್ದ ಚೀನಾ ಸಂಘಟನೆಗಳಿಂದ ತೀವ್ರ ಪ್ರತಿಭಟನೆ ಶುರುವಾಯಿತು. ಇಂಗ್ಲಿಷ್ಗೆ ಮೊದಲ ಸ್ಥಾನ ನೀಡುವ ಮೂಲಕ ಚೀನಾದ ಪ್ರಭುತ್ವಕ್ಕೆ ಹಾಗೂ ಚೀನಿಯರಿಗೆ ಅವಮಾನ ಮಾಡಲಾಗಿದೆ ಎಂದೆಲ್ಲಾ ಹುಯಿಲೆಬ್ಬಿಸಲಾಯಿತು. ಚೀನಾದ ಮಾಧ್ಯಮಗಳು ನನ್ನ ವಿರುದ್ಧ ತಿರುಗಿಬಿದ್ದವು. ಇಂಗ್ಲಿಷಿನ ಗುಲಾಮ ಎಂದು ಜರಿದವು. ನನ್ನ ನಿಲುವನ್ನು ವಿರೋಧಿಸಿ ದಿನಕ್ಕೊಂದು ಸುದ್ದಿ ಪ್ರಕಟಿಸಿದವು. ಅದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳಲಿಲ್ಲ. ಚೀನಿ ಭಾಷೆಯ ಪ್ರಭುತ್ವಕ್ಕೆ ಧಕ್ಕೆ ತರುವುದು ನನ್ನ ಗುರಿಯಾಗಿರಲಿಲ್ಲ. ಸಿಂಗಾಪುರದ ಮುಂದಿನ ಪೀಳಿಗೆಯ ಭವಿಷ್ಯ ಮುಖ್ಯವಾಗಿತ್ತೇ ಹೊರತು ಪ್ರತಿಭಟನೆಗಳಲ್ಲ. ಈ ಸಂದರ್ಭದಲ್ಲಿ ಶಿಕ್ಷಣದಲ್ಲಿ ಭಾಷಾ ಮಾಧ್ಯಮದ ಬದಲಾವಣೆಗೆ ಕಾರಣವೇನೆಂದು ನನ್ನ ಸಂಪುಟದ ಎಲ್ಲರಿಗೂ ಸ್ಪಷ್ಟವಾಗಿ ಹೇಳಿದೆ. ಅದರ ಪರಿಣಾಮ ಏನಾಗಿದೆ ಎಂದು ಈಗ ಎಲ್ಲರಿಗೂ ಗೊತ್ತಿದೆ. ವಿಶ್ವದ ಎಲ್ಲ ಕಂಪನಿಗಳೂ ಸಿಂಗಾಪುರಕ್ಕೆ ಬಂದಿವೆ! ಇಂಗ್ಲೀಷು ಗೊತ್ತಿರುವುದರಿಂದ ವಿಶ್ವದ ಎಲ್ಲ ರಾಷ್ಟ್ರಗಳಲ್ಲೂ ನನ್ನ ದೇಶದ ಮಂದಿ ನೆಲೆ ಕಂಡುಕೊಂಡಿದ್ದಾರೆ.
*****************************
ಮನುಷ್ಯ ಅನ್ನಿಸಿಕೊಂಡವರೆಲ್ಲ ಒಂದಲ್ಲ ಒಂದು ದಿನ ಸಾಯಲೇಬೇಕು. ಸಾವು ಎಂಬುದು ಯಾವಾಗ ಬೇಕಾದರೂ, ಹೇಗೆ ಬೇಕಾದರೂ ಯಾವ ರೂಪದಲ್ಲಾದರೂ ಬರಬಹುದು. ನಿಜ ಹೇಳಬೇಕೆಂದರೆ- ಸಾವು ಹೇಗೆ ಬರಬಹುದು ಎಂದೆಲ್ಲಾ ಯೋಚಿಸುತ್ತಾ ಕೂರಲು ನನಗೆ ಸಮಯವಿಲ್ಲ'. ಆದರೂ, 91 ವರ್ಷ ದಾಟಿರುವ ಈ ಸಂದರ್ಭದಲ್ಲಿ ಒಮ್ಮೊಮ್ಮೆ- 'ನಾನು ಹೇಗೆ ಸಾಯಬಹುದು? ಹಾರ್ಟ್ ಅಟ್ಯಾಕ್ ಅಥವಾ ಸ್ಟ್ರೋಕ್ಗೆ ತುತ್ತಾಗಿ ಒಂದು ದಿನ ಮಲಗಿದ್ದಾಗಲೇ ಗೊಟಕ್ ಎಂದಿರುತ್ತೀನೋ ಅಥವಾ ಕಾಯಿಲೆಯಿಂದ ನರಳಿ, ಆಸ್ಪತ್ರೆ ಸೇರಿ, ಕೋಮಾ ಸ್ಥಿತಿಗೆ ತಲುಪಿ, ಮೂಗು, ಹೊಟ್ಟೆ, ಬಾಯಿಗೆಲ್ಲಾ ಪೈಪ್, ಟ್ಯೂಬ್ ಚುಚ್ಚಿಸಿಕೊಂಡು ಅದೇ ಸ್ಥಿತಿಯಲ್ಲಿ ತಿಂಗಳುಗಳ ಕಾಲ ನರಳಿ ಕಡೆಗೊಂದು ದಿನ ಸತ್ತು ಹೋಗ್ತೀನೋ' ಅನಿಸುವುದುಂಟು. ಅಂದಹಾಗೆ, ಸಾವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೇನಾದರೂ ನನಗೆ ಸಿಕ್ಕರೆ- ಕೆಲವೇ ನಿಮಿಷಗಳಲ್ಲಿ ಸತ್ತು ಹೋಗುವ ಮಾರ್ಗವನ್ನೇ ಆಯ್ದುಕೊಳ್ತೇನೆ.
ನನ್ನ ಪ್ರಕಾರ, ಸಾವಿಗಿಂತ ಬದುಕು ದೊಡ್ಡದು. 'ಜೀವ' ಎಂಬುದು, ಬದುಕು ಎಂಬುದು ಪ್ರತಿಯೊಬ್ಬನಿಗೂ ದೊರೆತ ಅಪೂರ್ವವಾದ ವರ. ಸತ್ತು ಸಾಧಿಸಲು ಏನೂ ಇಲ್ಲ ತಾನೆ? ಹಾಗಾಗಿ, ಬದುಕಿದ್ದಾಗಲೇ ಸಾಧಿಸಬೇಕು. ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಸತ್ತ ನಂತರವೂ ಒಂದಿಡೀ ಪೀಳಿಗೆ ಹಾಗೂ ಇಡೀ ದೇಶ ಪದೇ ಪದೆ ನೆನಪು ಮಾಡಿಕೊಳ್ಳುವಂತೆ ಬದುಕಿ ಬಿಡಬೇಕು ಎಂಬುದು ನನ್ನ ಖಚಿತ ಹಾಗೂ ನೇರ ನಿಲುವು.
ಬದುಕು, ನಂಬಿಕೆ, ಸಾವು ಹಾಗೂ ಜೀವನದ ವಿಷಯವಾಗಿ ಒಬ್ಬೊಬ್ಬರ ಅನಿಸಿಕೆಗಳು ಒಂದೊಂದು ರೀತಿಯಲ್ಲಿ ಇರುತ್ತವೆ. ನೀವು ಅಮೆರಿಕದ ನೆಲದಲ್ಲಿ ನಿಂತು ಸಾವಿನ ಬಗ್ಗೆ ಮಾತನಾಡಿದರೆ, ಅಲ್ಲಿನ ಜನ ತಕ್ಷಣವೇ ಬೈಬಲ್ನ ಸಾಲುಗಳನ್ನೂ ಉದಾಹರಿಸಿ, ಏಸುಕ್ರಿಸ್ತ ಏನೇನು ಹೇಳಿದ್ದಾನೆ, ಸಾವಿನ ನಂತರ ಎಷ್ಟೊಂದು ಬಗೆಯ ಕೌತುಕಗಳು ಜೊತೆಯಾಗುತ್ತವೆ ಎಂದು ವಿವರಿಸತೊಡಗುತ್ತಾರೆ. ಚೀನಾದ ನೆಲಕ್ಕೆ ಬಂದು ನಿಂತರೆ, ಬದುಕು ಹಾಗೂ ಸಾವಿನ ಬಗ್ಗೆ ಕಮ್ಯುನಿಸ್ಟ್ ಮುಖಂಡರು ಏನೇನು ಹೇಳಿದ್ದಾರೆ ಎಂಬ ವಿವರಣೆ ಕಿವಿ ತುಂಬುತ್ತದೆ. ಇದೇ ಪ್ರಶ್ನೆಯೊಂದಿಗೆ ಜಪಾನ್ನ ನೆಲದಲ್ಲಿ ನಿಂತರೆ, ಬೌದ್ಧಧರ್ಮದ ನುಡಿ ಮುತ್ತುಗಳು ಕೇಳಿಸುತ್ತವೆ. ಭಾರತದಲ್ಲಿ ಬದುಕು, ಸಾವು ಹಾಗೂ ಆನಂತರದ ಕ್ಷಣಗಳ ಬಗ್ಗೆ ಒಂದೊಂದು ಸಮುದಾಯದವರು ಒಂದೊಂದು ನಂಬಿಕೆ ಹೊಂದಿದ್ದಾರೆ.
ಬಹುಶಃ ಈ ಜಗತ್ತಿನ ನಾಯಕನಿಗೂ ಎದುರಾಗಿರುವ ಮುಖ್ಯ ಪ್ರಶ್ನೆಯೆಂದರೆ-ನೀವು ದೇವರನ್ನು ನಂಬುತ್ತೀರಾ? ನಂಬುವುದಿಲ್ಲವಾ? ನಂಬುತ್ತೀರಿ ಎನ್ನುವುದಾದರೆ, ಹಾಗೂ ನಂಬುವುದಿಲ್ಲ ಅನ್ನುವುದಾದರೆ ಅದಕ್ಕಿರುವ ಕಾರಣಗಳನ್ನು ಹೇಳಿ ಅನ್ನುತ್ತಾರೆ. ಈ ವಿಷಯದಲ್ಲಿ ನಾನು ಹೇಳುವುದಿಷ್ಟೆ: ನಾನು ದೇವರನ್ನು ನಂಬುವುದಿಲ್ಲ. ಅದೇ ವೇಳೆಗೆ, ದೇವರಿದ್ದಾನೆ ಎನ್ನುವವರ ಮಾತು ಸುಳ್ಳು ಎಂದೂ ವಾದಿಸುವುದಿಲ್ಲ. ಅವರ ನಂಬಿಕೆ ಅವರಿಗೆ ದೊಡ್ಡದು ಎಂದಷ್ಟೇ ಹೇಳಬಯಸುವೆ. ಒಂದು ಮಹಾಸ್ಫೋಟದ ನಂತರ ಜೀವ ಸಂಕುಲದ ಉಗಮವಾಯಿತು ಎಂದು ಕೆಲವರು ಹೇಳುತ್ತಾರೆ. ಅದು ಸುಳ್ಳು. ಮಂಗ ಧರೆಗಿಳಿದು ಹಲವು ಸ್ಥಿತ್ಯಂತರಗಳನ್ನು ಕಂಡು ಆನಂತರವೇ ಮಾನವನಾದ ಎಂಬ ಥಿಯರಿಯೇ ಸತ್ಯ ಎಂದು ಹಲವರು ವಾದಿಸುತ್ತಾರೆ. ಇಂಥ ಸಂದರ್ಭದಲ್ಲಿ ನಿಮ್ಮ-ನಿಮ್ಮ ನಂಬಿಕೆಗಳೇ ನಿಮಗೆ ಶ್ರೇಷ್ಠ ಎಂದು ಹೇಳಿ ಬಿಡುವುದು ಜಾಣತನ.
ನನಗೊಬ್ಬ ಗೆಳೆಯನಿದ್ದ. ಹೋನ್ ಸುಯ್ ಸೇನ್ ಎಂಬುದು ಅವನ ಹೆಸರು. 68ನೇ ವಯಸ್ಸಿಗೇ ಆತ ಕಾಯಿಲೆ ಬಿದ್ದ. ಸಾಯುವ ಕ್ಷಣ ಹತ್ತಿರಾಗಿದೆ ಎಂದು ಅವನಿಗೂ ಗೊತ್ತಾಗಿ ಹೋಯ್ತು. ಆದರೂ ಪುಣ್ಯಾತ್ಮ, ಚೂರು ಹೆದರಲಿಲ್ಲ. ತುಂಬ ಖುಷಿಯಾಗಿದ್ದ. ನನಗೋ ಆಶ್ಚರ್ಯ; ಅವನನ್ನು ಕೇಳಿದೆ: 'ಏನಯ್ಯಾ, ನಿನಗೆ ಸಾವಿನ ಭಯ ಇಲ್ವಾ?' ಆತ ಹೇಳಿದ: 'ನಾನು ದೈವ ಭಕ್ತ ರೋಮನ್ ಕ್ಯಾಥೋಲಿಕ್. ನಮ್ಮ ನಂಬಿಕೆಯ ಪ್ರಕಾರ, ಸತ್ತ ನಂತರ ಪರಲೋಕದಲ್ಲಿ ಈ ಹಿಂದೆ ಸತ್ತು ಹೋಗಿರುವವರನ್ನೆಲ್ಲ ಭೇಟಿಯಾಗುವ ಅವಕಾಶ ಸಿಗುತ್ತದೆ. ನಾನು ನಾಳೆಯೋ, ನಾಡಿದ್ದೋ ಸತ್ತು ಹೋದರೆ, ನಂತರ ಪರಲೋಕದಲ್ಲಿರುವ ನನ್ನ ತಂದೆ-ತಾಯಿ ಹಾಗೂ ಹೆಂಡತಿಯನ್ನು ಭೇಟಿಯಾಗಬಹುದು. ಹಾಗಾಗಿ ತುಂಬಾ ಖುಷಿಯಿಂದ ಇದ್ದೇನೆ ಅಂದ!
ನಿಜ ಹೇಳಬೇಕೆಂದರೆ ನಮ್ಮ ಕಣ್ಣೆದುರು ಇರುವುದು ನಂಬಿಕೆಗಳ ಜಗತ್ತು. ಆದರೆ ಈ ಬಗೆಯ ನಂಬಿಕೆಗಳಲ್ಲಿಯೇ ನಂಬಿಕೆ ಇಲ್ಲ. ಹಾಗಂತ ನನ್ನ ಮಿತ್ರನಿಗೆ ಹೇಳಿದರೆ-ಛೆ, ಛೆ, ಹಾಗೆಲ್ಲ ಹೇಳಬೇಡ. ಸಾವಿನ ನಂತರವೂ ನಾವು ಒಂದಾಗುತ್ತೇವೆ ಎಂಬುದನ್ನು ಕ್ಯಾಥೊಲಿಕ್ ಕ್ರಿಶ್ಚಿಯನ್ನರೆಲ್ಲ ಒಪ್ಪುತ್ತಾರೆ ಎಂದು  ನನ್ನ ಬಾಯಿ ಮುಚ್ಚಿಸಿದ! ಸ್ವರ್ಗ ಮತ್ತು ನರಕಗಳು ಖಂಡಿತ ಇವೆ ಎಂದೂ ದೃಢವಾಗಿ ಹೇಳಿದ. ಈಗ, ಗೆಳೆಯನಿಗೆ ಕೇಳದ ಒಂದು ಪ್ರಶ್ನೆಯನ್ನು ಎಲ್ಲರ ಎದುರು ಇಡುತ್ತಿದ್ದೇನೆ. ಒಂದು ವೇಳೆ ಸ್ವರ್ಗ-ನರಕಗಳು ಇವೆ ಎಂದುಕೊಳ್ಳೋಣ. ಅದೇ ನಿಜವಾದರೆ, ಒಮ್ಮೆ ಸ್ವರ್ಗ ಸೇರಿದವರು ಮುಂದಿನ ಎಷ್ಟು ವರ್ಷಗಳ ಕಾಲ ಅಲ್ಲಿರುತ್ತಾರೆ? ನರಕಕ್ಕೆ ಹೋಗುವವರ ಸಂಖ್ಯೆ ವಿಪರೀತ ಆಗಿರುವುದರಿಂದ, ನಾವ್ಯಾರೂ ಕಾಣದ ಆ ಲೋಕ, ಜನಸಂಖ್ಯಾ ಸ್ಫೋಟದಿಂದ ತತ್ತರಿಸಿ ಹೋಗಿಲ್ಲವೇ?
ಬದುಕಿನಲ್ಲಿ ಈವರೆಗೂ ನನಗೆ ಎದುರಾದರಲ್ಲ; ಅವರೆಲ್ಲರೂ ನನ್ನಲ್ಲಿ ದೈವಭಕ್ತಿ ಹುಟ್ಟಿಸಲು, ನನ್ನನ್ನು ಆಸ್ತಿಕನನ್ನಾಗಿ ಮಾಡಲು ಪ್ರಯತ್ನಿಸಿದರು. ಆದರೆ, ಯಾರದೋ ಒತ್ತಾಯಕ್ಕೆ ಮನಸ್ಸು ಬದಲಿಸಿಕೊಳ್ಳಲು ನನಗೆ ಇಷ್ಟವಾಗಲಿಲ್ಲ. ಹಾಗಾಗಿ ಈ 91ರ ವಯಸ್ಸಿನಲ್ಲೂ ನಾನು ನಾಸ್ತಿಕನಾಗಿಯೇ ಉಳಿದಿದ್ದೇನೆ.
ಹೌದು. ನನಗೀಗ ವೃದ್ಧಾಪ್ಯ. ಸಾಯುವ ವಯಸ್ಸು ಹತ್ತಿರಾಗಿದೆ. ಆರೋಗ್ಯ ಆಗಾಗ್ಗೆ ಕೈ ಕೊಡುತ್ತಿದೆ. ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಹತ್ತು ಹೆಜ್ಜೆ ನಡೆದು ಹೋಗಿ, ಐದಾರು ಮಂದಿಯೊಂದಿಗೆ ಮಾತಾಡಿಕೊಂಡು ಬರಲು ಈಗ ಖಂಡಿತ ಸಾಧ್ಯವಾಗುವುದಿಲ್ಲ. ಹತ್ತು ನಿಮಿಷ ಮಾತಾಡಿದರೆ ಸುಸ್ತಾಗಿ ಕೈಕಾಲುಗಳಲ್ಲಿ ನಡುಕ ಶುರುವಾಗುವುದುಂಟು. ಅಂಥ ಸಂದರ್ಭಗಳಲ್ಲೆಲ್ಲ- 'ಇವತ್ತಿನ ಹಲವು ಅಪಾಯಿಂಟ್ಮೆಂಟ್ಗಳನ್ನು ಕ್ಯಾನ್ಸಲ್ ಮಾಡಿಬಿಡಿ ಎಂದು ನನ್ನ ಸೆಕ್ರೆಟರಿ ಎಷ್ಟೋ ಬಾರಿ ಸಲಹೆ ಮಾಡಿರುವುದುಂಟು. ಕೆಲವೊಮ್ಮೆ ಅವರ ಸೂಚನೆಗೆ ತಲೆಬಾಗಿದ್ದೇನೆ. ಮತ್ತೆ ಕೆಲವು ಬಾರಿ, ಶೆಡ್ಯೂಲ್ನ ಪ್ರಕಾರ ಎಲ್ಲವನ್ನೂ ಮುಗಿಸಿಬಿಡೋಣ ಎಂದು ಹಠಕ್ಕೆ ಬಿದ್ದಿದ್ದೇನೆ.
ಈ ಬದುಕಲ್ಲಿ ನನಗೆ ದೊರೆತ ದಿವ್ಯ ಸಂತೋಷವೆಂದರೆ-ಇಡೀ ಜಗತ್ತನ್ನೇ 'ಭ್ರಷ್ಟಾಚಾರ' ಎಂಬ ಹೆಮ್ಮಾರಿ ಆವರಿಸಿಕೊಂಡಿದ್ದ ಸಂದರ್ಭದಲ್ಲಿ, ಭ್ರಷ್ಟಾಚಾರದಿಂದ ಮುಕ್ತವಾದ ನಾಡೊಂದನ್ನು ಕಟ್ಟಬೇಕೆಂಬ ಕನಸಿತ್ತು. ಆ ಪ್ರಯತ್ನದಲ್ಲಿ ನಾನು ಯಶಸ್ವಿಯಾದೆ ಎಂಬುದು. ನಾಯಕನಾದವನಿಗೆ ಹಠ, ಛಲ, ತಾಳ್ಮೆ, ದೂರದೃಷ್ಟಿ ಹಾಗೂ ತನ್ನ ಸಮಾಜಕ್ಕೆ ಒಳ್ಳೆಯದು ಮಾಡಬೇಕೆಂಬ ಮನಸ್ಸು ಇದ್ದರೆ, ಸಿಂಗಪುರದಂಥ ಹತ್ತು ರಾಷ್ಟ್ರಗಳನ್ನು ನಿರ್ಮಿಸಬಹುದು. ಇದು ನನ್ನ ಸಂದೇಶವೂ ಹೌದು. ಸದಾಶಯವೂ ಹೌದು...
ಹೀಗೆನ್ನುತ್ತಾರೆ ಲೀ ಕ್ವಾನ್ ಹ್ಯೂ. ಅವರ ಮಾತುಗಳಿಗೆ ಬಹುಪರಾಕ್...

- ವಿಶ್ವೇಶ್ವರ ಭಟ್
vbhat@me.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.