ಒಂದು ಎಸ್ಸೆಮ್ಮೆಸ್‌ನಿಂದ ಅವನ ಜೀವ ಉಳಿಯಿತು
ಕರ್ರಗೆ, ಕಪ್ಪಗೆ, ಉದ್ದಕ್ಕಿದ್ದ ಆ ನೀಗ್ರೋ ಹುಡುಗನ ಹೆಸರು ಜಾನ್. ಅವನು...

ಕರ್ರಗೆ, ಕಪ್ಪಗೆ, ಉದ್ದಕ್ಕಿದ್ದ ಆ ನೀಗ್ರೋ ಹುಡುಗನ ಹೆಸರು ಜಾನ್. ಅವನು, ಲಂಡನ್‌ನ ಆಧಿಪತ್ಯಕ್ಕೆ ಒಳಪಟ್ಟಿದ್ದ ಒಂದು ಹಳ್ಳಿಯಲ್ಲಿದ್ದ. ಆಫ್ರಿಕಾ ಮೂಲದವರಾದ ಅವನ ತಂದೆ-ತಾಯಿ, ದಶಕಗಳ ಹಿಂದೆಯೇ ಲಂಡನ್‌ಗೆ ವಲಸೆ ಬಂದಿದ್ದರು. ಶ್ರೀಮಂತರ ತೋಟಗಳಲ್ಲಿ ಕೂಲಿಗಳಾಗಿ ಕೆಲಸ ಮಾಡುತ್ತಿದ್ದರು. ಹದಿನಾರು ವರ್ಷದ ಹುಡುಗ ಜಾನ್ ಕೂಡ ಕೆಲಸಕ್ಕೆ ಹೋಗುತ್ತಿದ್ದ. ಬಿಡುವಿನ ಸಂದರ್ಭಗಳಲ್ಲಿ ಗೆಳೆಯರೊಂದಿಗೆ ಸಮೀಪದ ಕಾಡಿಗೆ ಹೋಗುವುದು, ಅಲ್ಲಿ ಸಿಗುವ ಹಣ್ಣುಗಳನ್ನು ತಿಂದು ಖುಷಿ ಪಡುವುದು , ಮರಗಳ ಮರೆಯಲ್ಲಿ ಅವಿತು ನಿಂತು ಕಾಡುಪ್ರಾಣಿಗಳನ್ನು ನೋಡಿ ಸಂಭ್ರಮಿಸುವುದು ಅವನ ಹವ್ಯಾಸವಾಗಿತ್ತು.
ಇಂಥ ಹಿನ್ನೆಲೆಯ ಜಾನ್, ಅದೊಂದು ದಿನ ಯಥಾಪ್ರಕಾರ ಕಾಡಿಗೆ ಹೊರಟ. ಜೊತೆಯಲ್ಲಿ ಅವನ ಸೋದರ ಸಂಬಂಧಿಯೂ ಇದ್ದ. ಇಬ್ಬರೂ, ಅದೂ ಇದೂ ಮಾತಾಡಿಕೊಂಡೇ ಕಾಡು ತಲುಪಿದರು. ಆಗಾಗಗ ಬರುತ್ತಿದ್ದ ಜಾಗ ತಾನೆ? ಹಾಗಾಗಿ, ಇಬ್ಬರಿಗೂ ಕಾಡಿನ ಪರಿಚಯ ಚೆನ್ನಾಗಿತ್ತು. ಇಬ್ಬರೂ ಒಂದೊಂದು ದಿಕ್ಕಿನಲ್ಲಿ ಹಣ್ಣುಗಳನ್ನು ಹುಡುಕುವುದು, ನಂತರ ಸಮಪಾಲು ಮಾಡಿಕೊಂಡು ತಿಂದು ಮುಗಿಸುವುದು ಎಂದು ಮಾತಾಡಿಕೊಂಡರು. ಆನಂತರದಲ್ಲಿ ನಿರ್ದಿಷ್ಟ ದಿಕ್ಕಿನಲ್ಲಿ ಹತ್ತು ಹೆಜ್ಜೆ ನಡೆದು ಹೋದ ಜಾನ್, ಒಮ್ಮೆ ಎಡಕ್ಕೆ ತಿರುಗಿ, ಉಯ್ಯಾಲೆಯಾಡುವಂತೆ ಆಹ್ವಾನಿಸುತ್ತಿದ್ದ ಬಿಳಿಲುಗಳನ್ನು ಬಲವಾಗಿ ಜಗ್ಗಿ, ಅದರಿಂದ ಸರ್ರ್‌ರ್ರ್‌ರ್ರ್... ಎಂಬ ಸದ್ದು ಹೊರಡಿಸಿದ ನೋಡಿ-ಆಗಲೇ ಕೇಳಿಸಿತು ಗುಂಡಿನ ಸದ್ದು!
ಏನಾಯಿತು? ಯಾಕೆ? ಗುಂಡುಗಳು ಎಲ್ಲಿಂದ ಹಾರಿ ಬರುತ್ತಿವೆ? ಗುಂಡು ಹಾರಿಸುತ್ತಿರುವವರು ಯಾರು? ಅವರ ಗುರಿ ಯಾರು? ಅವರ ಉದ್ದೇಶವಾದರೂ ಏನು ಎಂದು ಜಾನ್ ಯೋಚಿಸುವ ವೇಳೆಗೆ, ಎದುರಿಂದ ರೊಯ್ಯನೆ ಬಂದ ಕಾಡತೂಸೊಂದು, ರಾಕೆಟ್‌ನಂತೆ ನುಗ್ಗಿ ಅವನ ಎಡ ಭುಜದೊಳಕ್ಕೆ ಸೇರಿ ಹೋಯಿತು. ಕುದಿಯುತ್ತಿರುವ ಎಣ್ಣೆ, ನಾಲಿಗೆಯ ಮೇಲೆ ಬಿದ್ದಾಗ ಆಗುತ್ತದಲ್ಲ; ಅದಕ್ಕಿಂತ ಸಾವಿರ ಪಟ್ಟು ಹೆಚ್ಚಿನ ನೋವಾಯಿತು ಜಾನ್‌ಗೆ. ಆತ, ಕಾಡೆಂಬ ಕಾಡೂ ನಡುಗುವಂತೆ ಚೀರಿಕೊಂಡ. ಈ ಆಕ್ರಂದನ ಕೇಳಿ, ಮತ್ತೊಂದು ಕಡೆಯಲ್ಲಿದ್ದ ಸೋದರ ಸಂಬಂಧಿ-ಜಾನ್, ಏನಾಯ್ತು ಎಂದು ಕೂಗಿ, ಪ್ರತ್ಯುತ್ತರ ಬರದಿದ್ದರಿಂದ ಗಾಬರಿಯಾಗಿ, ಜಾನ್ ಇದ್ದ ಕಡೆಗೆ ಓಡಲು ಅಣಿಯಾದ. ಅಷ್ಟರೊಳಗೆ, ಎರಡೂ ದಿಕ್ಕಿನಿಂದ ಹಾರಿಬಂದ ಗುಂಡುಗಳ ಅಬ್ಬರ, ಜೊತೆಗೇ ಬುಲೆಟ್ ಮೈ ಸೇರಿದಾಗ ಆದ ನೋವೂ ಸೇರಿಕೊಂಡು, ಆ ಹುಡುಗ ಜಾನ್, ಎರಡೇ ನಿಮಿಷದಲ್ಲಿ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟ.
ಮತ್ತೆ ಕಣ್ತೆರೆದಾಗ, ತಾನೀಗ ಆಸ್ಪತ್ರೆಯಲ್ಲಿದ್ದೇನೆ ಎಂಬುದು ಜಾನ್‌ಗೆ ಅರ್ಥವಾಯಿತು. ಎಲ್ಲ ದಿಕ್ಕಿನಿಂದಲೂ ನುಗ್ಗಿ ಬರುತ್ತಿದ್ದ ಡೆಟಾಲ್ ಹಾಗೂ ಔಷಧಗಳ ವಿಚಿತ್ರ ವಾಸನೆ ಮೂಗಿಗೆ ಅಡರುತ್ತಿತ್ತು. ಸುತ್ತಮುತ್ತ ಯಾರ್ಯಾರಿದ್ದಾರೆ ಎಂದು ನೋಡಿದರೆ, ಅಪ್ಪ-ಅಮ್ಮ, ಬಂಧುಗಳು ಹಾಗೂ ಕಾಡಿಗೆ ಹೋಗುವಾಗ ಜೊತೆಯಲ್ಲಿದ್ದ ಸೋದರ ಸಂಬಂಧಿಯ ಮುಖಗಳು ಅಸ್ಪಷ್ಟವಾಗಿ ಕಾಣಿಸಿದವು. ಎಲ್ಲರ ಕಂಗಳಲ್ಲೂ ನೀರಪೊರೆ. 'ಜಾನ್ ಕಾಡಿಗೆ ಹೋಗಿದ್ದನಲ್ಲ; ಅದೇ ದಿನ ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಆಗ ಯಾರಿಗೋ ಹಾರಿಸಿದ ಗುಂಡು, ಆಕಸ್ಮಿಕವಾಗಿ ಜಾನ್‌ನ ದೇಹ ಸೇರಿಬಿಟ್ಟಿತ್ತು. ಗುಂಡು, ಭುಜದ ಮೂಳೆಗಳ ಮಧ್ಯೆ, ಆಯಕಟ್ಟಿನ ಜಾಗದಲ್ಲಿ ಕೂತು ಬಿಟ್ಟಿರುವುದರಿಂದ ಕೈ ಕತ್ತರಿಸದೇ ಗುಂಡನ್ನು ಹೊರತೆಗೆಯುವುದು ಕಷ್ಟ. ಆಪರೇಷನ್ ಮಾಡುವುದು ಇನ್ನೂ ಕಷ್ಟ...!' ಇದಿಷ್ಟೂ, ಜಾನ್ ಮತ್ತು ಅವನ ಕುಟುಂಬದವರಿಗೆ, ಅರಣ್ಯ ಇಲಾಖೆಯ ಅಧೀನಕ್ಕೆ ಸೇರಿದ್ದ ಆಸ್ಪತ್ರೆಯಲ್ಲಿ ಸಿಕ್ಕ ಮಾಹಿತಿ. ಅತ್ಯುತ್ತಮ ಚಿಕಿತ್ಸೆ ನೀಡಲು ಜಾನ್, ಶ್ರೀಮಂತರ ಮಗನಲ್ಲವಲ್ಲ; ಅದೇ ಕಾರಣದಿಂದ, ಗುಂಡೇಟು ಬಿದ್ದಿದ್ದ ಜಾಗಕ್ಕೆ ಒಂದು ಮುಲಾಮು ಸವರಿ, ಬ್ಯಾಂಡೇಜ್ ಬಿಗಿದ ವೈದ್ಯರು- 'ಸರಿ, ನೀವಿನ್ನು ಮನೆಗೆ ಹೋಗಬಹುದು. ಮೂರು ವಾರದಲ್ಲಿ ಗಾಯ ವಾಸಿಯಾಗುತ್ತೆ' ಎಂದರು.
ಹಾಂ ಹೂಂ ಎನ್ನುವುದರೊಳಗೆ ಮೂರು ವಾರ ಕಳೆದು ಹೋಯಿತು. ಆದರೆ, ಗಾಯ ವಾಸಿಯಾಗಲಿಲ್ಲ. ಬದಲಿಗೆ, ಬ್ಯಾಂಡೇಜ್ ಕಟ್ಟಿದ್ದ ಜಾಗದಿಂದ ಕೀವು ಬರತೊಡಗಿತು. ಈ ಹುಡುಗನ ಜಾನ್-'ನೋವೂ' ಎಂದು ಪದೇ ಪದೆ ಚೀರುತ್ತಿದ್ದ. ಅವನ ಆಕ್ರಂದನ ನೋಡಲಾಗದ ಪೋಷಕರು, ಅವರಿವರ ಕಾಲು ಹಿಡಿದು, ಒಂದಷ್ಟು ದುಡ್ಡು ಜೋಡಿಸಿಕೊಂಡು, ಲಂಡನ್‌ನ ಚೇರಿಂಗ್ ಕ್ರಾಸ್ ಆಸ್ಪತ್ರೆಗೆ ಹೋದರು. ಅಲ್ಲಿ, ಡೇವಿಡ್ ನಾಟ್ ಎಂಬ ಅಮ್ಮನಂಥ ಮನಸ್ಸಿನ, ರಿಸ್ಕ್ ತಗೊಳ್ಳೋದೇ ಬದುಕು ಎಂದು ನಂಬಿದ್ದ ವೈದ್ಯರೊಬ್ಬರು ಜಾನ್‌ನನ್ನು ಕೂಲಂಕಷವಾಗಿ ಪರೀಕ್ಷಿಸಿದರು. ಬ್ಯಾಂಡೇಜ್ ಹಾಕಿದ್ದ ಜಾಗವನ್ನು ಒಮ್ಮೆ ಮುಟ್ಟಿದಾಗಲೇ, ಹೊಟ್ಟೆ ತೊಳಸುವಂಥ ದುರ್ಗಂಧ ಮೂಗಿಗೆ ಬಡಿದಾಗಲೇ- ಗುಂಡೇಟು ಬಿದ್ದಿರುವ ಜಾಗವನ್ನು ಗ್ಯಾಂಗ್ರಿನ್ ಆಕ್ರಮಿಸಿಕೊಂಡಿದೆ ಎಂದು ಶಸ್ತ್ರಚಿಕಿತ್ಸಕರೂ ಆಗಿದ್ದ ಡಾ. ನಾಟ್ ಅವರಿಗೆ ಅರ್ಥವಾಗಿ ಹೋಯಿತು. ಇರಲಿ, ಏನಾಗಿದೆ ಎಂಬುದನ್ನು ಪ್ರತ್ಯಕ್ಷವಾಗಿ ನೋಡಿಯೇ ಬಿಡೋಣ ಎಂದು ಬ್ಯಾಂಡೇಜ್ ಬಿಚ್ಚಿಸಿದ ಡೇವಿಡ್ ನಾಟ್‌ನಂಥ ಪಳಗಿದ ವೈದ್ಯ ಕೂಡ ಒಂದು ಕ್ಷಣ ಬೆಚ್ಚಿ ಬಿದ್ದ. ಏಕೆಂದರೆ, ಜಾನ್‌ನ ಎಡತೋಳಿನ ಪೂರ್ಣ ಭಾಗವನ್ನು ಗ್ಯಾಂಗ್ರಿನ್ ಆವರಿಸಿಕೊಂಡಿತ್ತು. ಆ ಭಾಗವನ್ನೇ ತೆಗೆದು ಹಾಕಿದರೆ, ದೇಹದ ಒಂದು ಭಾಗವನ್ನೇ ತೆಗೆದು ಹಾಕಿದ ಹಾಗೆ. ಎಡಭುಜದ ಭಾಗವನ್ನು ಇಡಿಯಾಗಿ ಕತ್ತರಿಸುವಾಗ ಚೂರೇ ಚೂರು ಎಡವಟ್ಟಾದರೂ ಬೆನ್ನು ಮೂಳೆಗೆ ತೀವ್ರವಾದ ಪೆಟ್ಟು ಬೀಳುತ್ತದೆ. ಹಾಗಾಗಿ ಬಿಟ್ಟರೆ, ನಂತರದ ಕೆಲವೇ ಕ್ಷಣಗಳಲ್ಲಿ ರೋಗಿಗೆ 'ಸ್ಟ್ರೋಕ್'ನಂಥ ತೊಂದರೆ ಜೊತೆಯಾಗಬಹುದು. ಅಥವಾ, ಆಪರೇಷನ್ ನಡೆವ ಸಂದರ್ಭದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ, ರೋಗಿ ಸತ್ತು ಹೋಗಬಹುದು...
ಹೀಗೆಲ್ಲಾ ಅನ್ನಿಸಿದಾಗ, ಮುಂದೇನು ಮಾಡಬೇಕೆಂದು ತೋಚದೆ ಡಾ. ಡೇವಿಡ್ ನಾಟ್, ನಿಂತಲ್ಲೇ ಯೋಚನೆಗೆ ಬಿದ್ದ. ಅವನ ಸಹದ್ಯೋಗಿಗಳಲ್ಲಿ ಹಲವರು-'ಸರ್, ನೀವೀಗ ಆಪರೇಷನ್ ಮಾಡ್ತೀರ ಅಂದುಕೊಳ್ಳಿ. ಆನಂತರದಲ್ಲಿ ಈ ಹುಡುಗ ಆರು ತಿಂಗಳು ಅಥವಾ ಒಂದು ವರ್ಷ ಬದುಕಬಹುದು, ಅಷ್ಟೆ. ಏಕೆಂದರೆ- ಎಡ ಭುಜವನ್ನು ಈಗಾಗಲೇ ಸಂಪೂರ್ಣವಾಗಿ ಆಕ್ರಮಿಸಿಕೊಂಡಿರುವ ಗ್ಯಾಂಗ್ರಿನ್, ಯಾವ ಕ್ಷಣದಲ್ಲಾದರೂ ದೇಹದ ಇತರ ಭಾಗಕ್ಕೂ ಹರಡಬಹುದು ತಾನೆ? ಈಗ ಮಾಡಲಿರುವ ಆಪರೇಷನ್ ಯಶಸ್ವಿಯಾದರೂ, ಆನಂತರದಲ್ಲಿ ಆ ಭಾಗ ಸಂಪೂರ್ಣವಾಗಿ ಮಾಗುವವರೆಗೂ ಚಿಕ್ಕದೊಂದು ಸೆಪ್ಟಿಕ್ ಆಗದಂತೆ ನೋಡಿಕೊಳ್ಳಲು ಸಾವಿರಾರು ಡಾಲರ್ ಮೊತ್ತದ ಔಷಧಿ ಖರೀದಿಸಬೇಕಾಗುತ್ತದೆ. ಈ ಬಡವರ ಮನೆಯ ಹುಡುಗ ಅದನ್ನೆಲ್ಲ ಹೇಗೆ ಹೊಂದಿಸಬಲ್ಲ? ಸುಮ್ನೆ ರಿಸ್ಕ್ ತಗೊಳ್ಳೋಕೆ ಹೋಗಬೇಡಿ. ಸ್ವಲ್ಪ ದಿನದ ಮಟ್ಟಿಗಾದರೂ ಎಡಭುಜದ ನೋವು ಕಡಿಮೆಯಾಗುವಂಥ ಚಿಕಿತ್ಸೆ ನೀಡಿ ಕಳಿಸಿಬಿಡಿ. ಆಮೇಲೆ ಅವನ ಹಣೆಬರಹ ಇದ್ದಂತಾಗಲಿ' ಎಂದುಬಿಟ್ಟರು. ಇನ್ನೊಂದು ಕಡೆಯಲ್ಲಿ -ಜಾನ್‌ಗೆ ಆಗಿರುವ ಪೆಟ್ಟು, ಗುಂಡನ್ನು ಹೊರತೆಗೆಯಲು ಆಗಬೇಕಿರುವ ಶಸ್ತ್ರಚಿಕಿತ್ಸೆ, ಅದಕ್ಕೆ ತಗಲುವ ಖರ್ಚುಗಳ ಮಾಹಿತಿ ಪಡೆದ ಜಾನ್‌ನ ಪೋಷಕರು ಕೂಡ, ಇಷ್ಟೊಂದು ಹಣ ಹೊಂದಿಸಲು ಸಾಧ್ಯವೇ ಇಲ್ಲ ಎಂದು ಸಂಕಟದಿಂದಲೇ ಹೇಳಿ ಮಗನ ಮೇಲಿನ ಆಸೆ ಬಿಟ್ಟುಬಿಟ್ಟರು.
ಆದರೆ, ಡಾ. ಡೇವಿಡ್‌ನಾಟ್ ಮಾತ್ರ ಒಂದು ರಿಸ್ಕ್ ತಗೊಂಡರೆ ಹೇಗೆ? ಗುಂಡೇಟಿನಿಂದ ತೀವ್ರವಾಗಿ ಹಾನಿಗೆ ಒಳಗಾಗಿರುವ ಎಡಭುಜದ ಭಾಗವನ್ನು ಕತ್ತರಿಸಿ ಹಾಕಿ, ಈ ಹುಡುಗನನ್ನು ಉಳಿಸಿಕೊಳ್ಳಬಾರದೇಕೆ? ಸಾವಿನೊಂದಿಗೆ ಮುಖಾಮುಖಿಯಾಗಿ ನಿಲ್ಲಬಾರದೇಕೆ? ಶಸ್ತ್ರಚಿಕಿತ್ಸೆಗೆ ತಗುಲುವ ಹಣಕ್ಕೆ ದಾನಿಗಳ ನೆರವು ಪಡೆಯಬಹುದಲ್ಲವೆ ಎಂದೆಲ್ಲ ಯೋಚಿಸುತ್ತಿದ್ದ. ಇದೇ ಸಮಯದಲ್ಲಿ, ಮತ್ತೊಂದು ಸಮಸ್ಯೆ ಆ ವೈದ್ಯನ ತಲೆ ತಿನ್ನುತ್ತಿತ್ತು. ಏನೆಂದರೆ-ಎಡಭುಜದ ಒಂದು ಭಾಗದಲ್ಲಿ, ಮೂಳೆ, ಮಾಂಸ ಹಾಗೂ ಅತಿ ಸೂಕ್ಷ್ಮ ನರಗಳ ಮಧ್ಯೆ ಆ ಕಾಡತೂಸು ಗುಮ್ಮನಂತೆ ಕುಳಿತಿತ್ತು. ಆ ಜಾಗಕ್ಕೆ ಕತ್ತರಿ ಹಾಕುವುದು ಹೇಗೆ ಎಂಬುದು ನಾಟ್‌ಗೆ ಅರ್ಥವಾಗಲಿಲ್ಲ. ಏನಾದರಾಗಲಿ, ಒಂದು ಛಾನ್ಸ್ ನೋಡಿಯೇ ಬಿಡೋಣ ಎಂದು ಡೇವಿಡ್‌ನಾಟ್ ನಿರ್ಧರಿಸಿದ. ಆನಂತರದಲ್ಲಿ ಗಾಯಾಳು ಜಾನ್‌ನ ಪೋಷಕರನ್ನು ಕನ್ವಿನ್ಸ್ ಮಾಡಿ, ಆಪರೇಷನ್ ಥಿಯೇಟರ್‌ಗೆ ಹೋಗಿಯೇ ಬಿಟ್ಟ. ಶಸ್ತ್ರಚಿಕಿತ್ಸೆ ಆರಂಭಿಸುವ ಮೊದಲು, ಈ ವಿಷಯದಲ್ಲಿ ಮಾರ್ಗದರ್ಶನ ಮಾಡಬಲ್ಲ ತಜ್ಞ ವೈದ್ಯರು ಯಾರಿದ್ದಾರೆ ಎಂದು ತಿಳಿಯಲು ಟೆಲಿಫೋನ್ ಡೈರಕ್ಟರಿ ತಿರುವಿ ಹಾಕಿದಾಗ, ಅದೇ ಲಂಡನ್‌ನ ರಾಯಲ್ ಮಾರ್ಸ್‌ಡನ್ ಆಸ್ಪತ್ರೆಯಲ್ಲಿರುವ ಡಾ. ಮರಿಯನ್ ಥಾಮಸ್ ಅವರ ಹೆಸರು ಕಾಣಿಸಿತು. ಅವರ ಸಲಹೆ ಪಡೆಯಲು ಫೋನ್ ಮಾಡಿದರೆ, ನೆಟ್‌ವರ್ಕ್‌ನ ಸಮಸ್ಯೆ ಎದುರಾಯಿತು. ಈ ಹಿರಿಯ ವೈದ್ಯನ ಸಲಹೆ ಪಡೆಯದೆ ಆಪರೇಷನ್ ಮಾಡಲು ಮುಂದಾದರೆ ಯಾವುದಾದರೂ ಕ್ಲಿಷ್ಟ ಸಮಸ್ಯೆ ಎದುರಾಗಿ ಆ ಹುಡುಗನ ಜೀವಕ್ಕೇ ಅಪಾಯವಾಗಬಹುದು ಅನ್ನಿಸಿತು. ತಕ್ಷಣವೇ ತಲೆ ಓಡಿಸಿದ ಡಾ. ಡೇವಿಡ್‌ನಾಟ್- ತನ್ನ ಕಷ್ಟದ ಪರಿಸ್ಥಿತಿ ವಿವರಿಸಿ ಒಂದು ಎಸ್ಸೆಮ್ಮೆಸ್ ಕಳುಹಿಸಿದ. 'ದೇಹದ ಅತಿ ಮುಖ್ಯ ಭಾಗವಾಗಿರುವ ಎಡಭುಜವನ್ನು ಕತ್ತರಿಸಿ ಹಾಕಿದ ನಂತರವೂ ರೋಗಿಯನ್ನು ಬದುಕಿಸಿಕೊಳ್ಳುವುದು ಹೇಗೆ? ಈ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಅನುಸರಿಸಲೇ ಬೇಕಾದ ಮುನ್ನೆಚ್ಚರಿಕೆಗಳೇನು? ದಿಢೀರನೆ ಎದುರಾಗ ಬಹುದಾದ ತೊಂದರೆಗಳೇನು? ಅದಕ್ಕೆ ಇರುವ ಪರಿಹಾರವೇನು ಎಂದು ವಿವರಿಸಬೇಕೆಂದು ಕೋರಿ ಆತ ಎಸ್ಸೆಮ್ಮೆಸ್ ಕಳುಹಿಸಿದ್ದ. ನಿಮ್ಮಿಂದ ವಿವರವಾದ ಉತ್ತರ ಬಂದ ನಂತರ ತಕ್ಷಣವೇ ಆಪರೇಷನ್ ಆರಂಭಿಸುವ ಯೋಚನೆಯಲ್ಲಿದ್ದೇನೆ ಎಂದೂ ಸೇರಿಸಿದ್ದ.
ಮೂರು ಗಂಟೆಗಳ ನಂತರ, ಡಾ. ಡೇವಿಡ್‌ನಾಟ್‌ನ ಮೊಬೈಲು, ಬೀಪ್ ಬೀಪ್ ಎಂದು ಸದ್ದು ಮಾಡಿತು. ಓಹ್, ಎಸ್ಸೆಮ್ಮೆಸ್ ಬಂತು ಎಂದುಕೊಂಡು ಉದ್ವೇಗ, ಕುತೂಹಲದಿಂದ ಗಮನಿಸಿದರೆ ಅವನ ಊಹೆ ನಿಜವಾಗಿತ್ತು. ಅತ್ತಲಿಂದ ಡಾ. ಮರಿಯನ್ ಥಾಮಸ್ ಉತ್ತರ ಕಳಿಸಿದ್ದರು. ತೋಳಿನ ಇಡೀ ಭಾಗವನ್ನು ತೆಗೆದು ಹಾಕುವ ಸಂದರ್ಭದಲ್ಲಿ ಎದುರಾಗುವ ಸವಾಲುಗಳು ಹಾಗೂ ಅದಕ್ಕಿರುವ ಪರಿಹಾರವನ್ನು ಪಾಯಿಂಟ್1, ಪಾಯಿಂಟ್ 2, ಪಾಯಿಂಟ್ 3... ಎಂದು ವಿವರವಾಗಿ ದಾಖಲಿಸಿದ್ದ ಥಾಮಸ್, ಅದಕ್ಕೆ, ಹತ್ತು ಅಂಶಗಳ ಸೂತ್ರ ಎಂದು ಹೆಸರಿಟ್ಟಿದ್ದರು.
ಪ್ರೊಫೆಸರ್ ಥಾಮಸ್ ಅವರ ಸಂದೇಶವನ್ನು ಎರಡೆರಡು ಬಾರಿ ಓದಿಕೊಂಡ ಡಾ. ನಾಟ್, ಕಡೆಗೂ ಬೇರೊಬ್ಬರ ಬದುಕಿನೊಂದಿಗೆ ಸರಸವಾಡಲು ನಿರ್ಧರಿಸಿದ. ಆಗಿದ್ದು ಆಗಿ ಹೋಗಲಿ, ಈ ಹುಡುಗನಿಗೆ ಆಪರೇಷನ್ ಮಾಡಿಬಿಡ್ತೇನೆ ಎಂದು ಘೋಷಿಸಿದ. ನಂತರ, ತರಾತುರಿಯಲ್ಲಿ ಏಳೆಂಟು ಕಡೆಗೆ ಫೋನ್ ಮಾಡಿಸಿದ. ಆಪರೇಷನ್ ನಡೆವ ಸಂದರ್ಭದಲ್ಲಿ ಬೇಕಾಗುವ ರಕ್ತಪೂರೈಸುವ ಬ್ಲಡ್ ಬ್ಯಾಂಕ್‌ನ ಸಿಬ್ಬಂದಿ, ವೈದ್ಯಕೀಯ ವೆಚ್ಚ ನೋಡಿಕೊಳ್ಳುವ ದಾನಿಗಳು ಹಾಗೂ ಸಂಘಟನೆಗಳೊಂದಿಗೆ ಮಾತಾಡಿದ.
ಆಪರೇಷನ್ ಟೇಬಲ್‌ನ ಬಳಿ ಬಂದಾಗ, ತಾನು ಮಾಡಬೇಕಿರುವ ಕೆಲಸ ಅದೆಷ್ಟು ಕಠಿಣವಾದದ್ದು ಎಂದು ಡೇವಿಡ್ ನಾಟ್‌ಗೆ ಮತ್ತೆ ನೆನಪಾಯಿತು. ಒಂದು ಕ್ಷಣದ ಮಟ್ಟಿಗೆ ಧ್ಯಾನಸ್ಥನಾಗಿ ನಿಂತು, ಪ್ರೊಫೆಸರ್ ಥಾಮಸ್ ಅವರು ಕಳುಹಿಸಿದ್ದ ಹತ್ತು ಅಂಶದ ಸೂತ್ರಗಳನ್ನು ಮತ್ತೊಮ್ಮೆ ನೆನಪಿಸಿಕೊಂಡ. ಆಪರೇಷನ್ ಆರಂಭಿಸಿದ ನಂತರ, ದಿಢೀರನೆ ಹೊಸ ಸವಾಲೊಂದು ಎದುರಾದರೆ, ಒಂದೇ ಒಂದು ಮಾತೂ ಆಡದೆ ಕೇವಲ ಕಣ್ಸನ್ನೆಯಿಂದಲೇ ಜೊತೆಗಿರುವ ನರ್ಸ್‌ಗಳಿಗೆ ಹೇಗೆಲ್ಲ ಸೂಚನೆ ನೀಡಬೇಕೆಂದು ಸ್ವಗತದಲ್ಲಿ ತನಗೆ ತಾನೇ ಹೇಳಿಕೊಂಡ. ಅವನಿಗೆ ಈ ಸಂದರ್ಭದಲ್ಲಿ ಬೇರೆ ದಾರಿಯೇ ಇರಲಿಲ್ಲ. ರೋಗಿಯ ಎಡಗೈಯನ್ನು ತೆಗೆಯಲೇ ಬೇಕಿತ್ತು. ಅಂಥ ಸಂದರ್ಭದಲ್ಲಿ ಚೂರುಪಾರು ರಕ್ತವೂ ಸೋರಿ ಹೋಗದಂತೆ ಮುಂಜಾಗ್ರತೆ ವಹಿಸಬೇಕಿತ್ತು.
ಆಪರೇಷನ್ ಸಂದರ್ಭದಲ್ಲಿ, ಗ್ಯಾಂಗ್ರಿನ್ ಆಗಿರುವ ಭುಜದ ಭಾಗವನ್ನು ಕತ್ತರಿಸಲು, ಮೊದಲು ಯಾವ ಭಾಗಕ್ಕೆ ಕತ್ತರಿ ಹಾಕಬೇಕು ಎಂಬುದೇ ಸವಾಲಿನ ವಿಷಯವಾಗಿತ್ತು. ಈ ಸಂದರ್ಭದಲ್ಲಿ ನಾಟ್ ಗಟ್ಟಿ ಮನಸ್ಸು ಮಾಡಿದ. ಹೇಗೆ ಮಾಡಿದರೆ ಪರಿಣಾಮ ಏನೇನಾಗಬಹುದು ಎಂದು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿದ. ನಂತರ, ಮೊದಲೇ ನಿರ್ಧರಿಸಿದ ಜಾಗಕ್ಕೆ ಕತ್ತರಿ ಹಾಕಿ, ಭುಜದ ತಟ್ಟೆಯ ಭಾಗವನ್ನು ತೆಗೆದು, ಅದಕ್ಕೆ ಅಂಟಿಕೊಂಡಂತಿದ್ದ ಆಜುಬಾಜಿನ ಮೂಳೆಗಳನ್ನು ಅತ್ತಿತ್ತ ಸರಿಸಿದ. ಮರುಕ್ಷಣವೇ, ತೊಟ್ಟು ರಕ್ತವೂ ಪೋಲಾಗದಂತೆ ರಕ್ತನಾಳಗಳನ್ನು ಹೊಲಿದ. ನಂತರ, ಎದೆಯ ಭಾಗದೊಂದಿಗೆ ಸಂಪರ್ಕ ಹೊಂದಿದ್ದ ಮಾಂಸಖಂಡಗಳನ್ನು ಹುಷಾರಾಗಿ ಬೇರ್ಪಡಿಸಿ, ಕಾಡತೂಸು ಅಡಗಿ ಕುಳಿತಿದ್ದ ಜಾಗವನ್ನು ಪತ್ತೆ ಹಚ್ಚಿದ. ಆ ಲೋಹ, ಅದರೊಂದಿಗೇ ಇದ್ದ ವಿಷದಂಥ ವಸ್ತುವಿನ ಪರಿಣಾಮದಿಂದ ಆ ಜಾಗದ ಮಾಂಸಖಂಡಗಳೆಲ್ಲ ಕೊಳೆತು ಹೋಗಿದ್ದವು. ಆ ಭಾಗದ ವ್ಯಾಪ್ತಿಯನ್ನು ಒಂದು ಅಂದಾಜಿನಲ್ಲೇ ತಿಳಿದುಕೊಂಡ ಡೇವಿಡ್ ನಾಟ್, ಚಿಕ್ಕದೊಂದು ಗರಗಸದಿಂದ ಅದನ್ನು ತುಂಡರಿಸಿಯೇ ಬಿಟ್ಟ. ಮರುಕ್ಷಣವೇ, ಆ ಹುಡುಗ ಜಾನ್‌ನ ಎಡಭುಜವು, 'ದುರ್ಮಾಂಸ' ಎಂಬ ಹಣೆಪಟ್ಟಿಯೊಂದಿಗೆ ಕೆಳಗೆ ಬಿದ್ದಿತ್ತು. ಆನಂತರದಲ್ಲಿ ಒಂದೊಂದೇ ಭಾಗವನ್ನು ಹೊಲೆದು, ಆ ಭಾಗಕ್ಕೆ ರಕ್ತಸಂಚಾರ ಏರ್ಪಡುವಂತೆ ಮಾಡಿ ಕಡೆಯದಾಗಿ ಹೊಲಿಗೆ ಹಾಕಿ ಮುಗಿಸಿದಾಗ, ಡಾಕ್ಟರ್ ಡೇವಿಡ್ ನಾಟ್‌ನ ಮುಖದಲ್ಲಿ ಹೆಮ್ಮೆಯಿತ್ತು. ಗರ್ವವಿತ್ತು. ಕಣ್ಣ ತುದಿಯಲ್ಲಿ ಸಂತೋಷದ ಕಂಬನಿಯಿತ್ತು. ಸಾವಿನೊಂದಿಗೆ ಸರಸವಾಡಿ ಗೆದ್ದೆನೆಂಬ ಸಂಭ್ರಮವಿತ್ತು. ಒಂದು ಎಸ್ಸೆಮ್ಮೆಸ್‌ನ ಸಂದೇಶವನ್ನು, ಅದರಲ್ಲಿದ್ದ ಎಚ್ಚರಿಕೆಯನ್ನು ಮೇಲಿಂದ ಮೇಲೆ ನೆನಪು ಮಾಡಿಕೊಂಡೇ, ವೈದ್ಯ ಲೋಕಕ್ಕೇ ಸವಾಲು ಅನ್ನಿಸುವಂಥ ಆಪರೇಷನ್ ಮಾಡಿ ಯಶಸ್ಸು ಕಾಣುವಲ್ಲಿ ಡಾ. ನಾಟ್, ಸಫಲನಾಗಿದ್ದ. ಅವನ ಶ್ರಮ ಹಾಗೂ ಸಾಹಸದ ಮುಂದೆ ಸಾವೆಂಬೋ ಸಾವು, ಸೋತು ತಲೆತಗ್ಗಿಸಿ ನಿಂತಿತ್ತು.
ವಿಪರ್ಯಾಸ ನೋಡಿ: ಸಾವನ್ನು ಗೆದ್ದು ಜಾನ್‌ನ ವಿಷಯದಲ್ಲಿ ಬದುಕು ಕರುಣೆ ತೋರಲಿಲ್ಲ. ನಂತರದ ದಿನಗಳಲ್ಲಿ, ಜಾನ್‌ನ ಅಪ್ಪ ಒಂದು ಹೊಡೆದಾಟದಲ್ಲಿ ಕೊಲೆಯಾಗಿ ಹೋದ. ಅವನ ತಾಯಿ, ಮಕ್ಕಳನ್ನು ಮರೆತು ಇನ್ನೊಬ್ಬನೊಂದಿಗೆ ಬದುಕು ಆರಂಭಿಸಿದಳು. ಇಂಥ ಸಂದರ್ಭದಲ್ಲಿ, ದೇಹದ ಒಂದು ಭಾಗವನ್ನೇ ಕಳೆದುಕೊಂಡ ಜಾನ್, ತಮ್ಮ-ತಂಗಿಯನ್ನು ಸಾಕುವ ಉದ್ದೇಶದಿಂದ ದುಡಿಯಲು ನಿಂತ!
ಶ್ರೀಶ್ರೀಶ್ರೀ
ಎಲ್ಲರಿಗೂ ಗೊತ್ತಿರುವಂತೆ, ಈ ದಿನಗಳಲ್ಲಿ ಒಂದು ಎಸ್ಸೆಮ್ಮೆಸ್‌ನಿಂದ ಗೆಳೆತನ ಶುರುವಾಗಿದೆ. ಪ್ರೀತಿ ಹುಟ್ಟಿಕೊಂಡಿದೆ. ಜಗಳವಾಗಿದೆ. ಜಟಾಪಟಿ ನಡೆದಿದೆ. ಸಂಸಾರ ಛಿದ್ರವಾಗಿದೆ. ಮಧುರ ಪ್ರೇಮ ಮಣ್ಣು ಪಾಲಾಗಿದೆ. ಯಾರೋ, ಯಾವುದೋ ಸಂದರ್ಭದಲ್ಲಿ ತಮಾಷೆಗಾಗಿ ಕಳುಹಿಸಿದ ಒಂದು ಬ್ಲ್ಯಾಂಕ್ ಮೆಸೇಜ್, ಹಾಲು-ಜೇನಿನಂಥ ಸಂಸಾರದಲ್ಲಿ ಹುಳಿ ಹಿಂಡಿದೆ. ಈ ದಿನಗಳಲ್ಲಂತೂ, ಎಸ್ಸೆಮ್ಮೆಸ್ ಮೂಲಕವೇ ಮತ ಯಾಚಿಸುವ, ಮದುವೆ, ನಾಮಕರಣಕ್ಕೆ ಆಹ್ವಾನಿಸುವ, ಹಬ್ಬಕ್ಕೂ ಕರೆಯುವ ಪ್ರಕ್ರಿಯೆಗಳು ಜೋರಾಗಿ ನಡೆಯುತ್ತಿವೆ. ಸಾಫ್ಟ್‌ವೇರ್ ಕಂಪನಿಗಳಂತೂ ತಮ್ಮ ಸಿಬ್ಬಂದಿಗೆ ನಟ್ಟ-ನಡುರಾತ್ರಿಯಲ್ಲಿ ಒಂದು ಎಸ್ಸೆಮ್ಮೆಸ್ ಕಳಿಸಿ, ನಾಳೆಯಿಂದ ನೀವು ನೌಕರಿಗೆ ಬರುವುದು ಬೇಡ ಎಂದು ಆರ್ಡರ್ ಮಾಡಿವೆ. ಹುಡುಗಾಟದ ಎಸ್ಸೆಮ್ಮೆಸ್ ನೋಡಿ, ಒಬ್ಬರಿಗೆ ಹಾರ್ಟ್ ಅಟ್ಯಾಕ್ ಆದ ಉದಾಹರಣೆ ಕೂಡ ಇದೆ. ಆದರೆ, ಒಂದು ಎಸ್ಸೆಮ್ಮೆಸ್‌ನ ನೆಪದಲ್ಲಿ ಒಬ್ಬ ಮನುಷ್ಯನ ಜೀವ ಉಳಿದ ಪ್ರಕರಣ ಇದೇ ಮೊದಲಿನದೇನೋ.
ಅಂದ ಹಾಗೆ, ಎಸ್ಸೆಮ್ಮೆಸ್‌ನ ಕಾರಣದಿಂದಲೇ ಬದುಕುಳಿದ ಜಾನ್‌ನ ಕಥೆ, ರೀಡರ್ಸ್ ಡೈಜೆಸ್ಟ್‌ನಿಂದ ಆಯ್ದುಕೊಂಡದ್ದು.
- ಎ.ಆರ್. ಮಣಿಕಾಂತ್
armanikanth@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


