ಅಂಕಣಗಳು

ಗುಂಡೇಟು ತಿಂದರೂ ಗಣಿ ಹೋರಾಟದಲ್ಲಿ ಗೆದ್ದ ಗಂಡೆದೆಗೆ ಪುರಸ್ಕಾರ

ಗುಂಡೇಟು ತಿಂದರೂ ಗಣಿ ಹೋರಾಟದಲ್ಲಿ ಗೆದ್ದ ಗಂಡೆದೆಗೆ ಪುರಸ್ಕಾರ
Published On :

'ಅಭಿವೃದ್ಧಿ ಎನ್ನುವುದು ಕೆಲವರಿಗಾಗಿಯೊ, ಎಲ್ಲರಿಗಾಗಿಯೊ' ಎನ್ನುವ ಪ್ರಶ್ನೆ ಮುಂದಿಡುತ್ತಾರೆ ಅಗರವಾಲರು. 'ಸಾವಿರಾರು ಜನರನ್ನು ಎಚ್ಚರಿಸಲು ಆಗದಿದ್ದರೂ ಚಿಂತೆ ಇಲ್ಲ, ನೂರಾರು ಮಂದಿಯಲ್ಲಾದರೂ ಅರಿವು ಮೂಡಲಿ' ಎನ್ನುವ ಧ್ಯೇಯ ಇಟ್ಟುಕೊಂಡು ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡುವಂತಹ, ಜನರನ್ನು ಮೃತ್ಯುಕೂಪಕ್ಕೆ ತಳ್ಳುವಂತಹ ಯೋಜನೆಗಳ ವಿರುದ್ಧ ಜನಾಂದೋಲನ ರೂಪಿಸಲು ತಮ್ಮ ಬದುಕನ್ನೇ ಮೀಸಲಿಟ್ಟಿದ್ದಾರೆ.

ಪುಟ್ಟ ಇಂಟರ್ನೆಟ್ ಕೆಫೆ. ಒಂದಷ್ಟು ಮಂದಿ ಕಂಪ್ಯೂಟರ್ ಪರದೆ ನೋಡುತ್ತ ತಮ್ಮದೇ ಲೋಕದಲ್ಲಿ ಮುಳುಗಿದ್ದಾರೆ. ಇದ್ದಕ್ಕಿದ್ದಂತೆ 'ಢಂ..ಢಂ..' ಎನ್ನುವ ಗುಂಡಿನ ಸದ್ದು. ಚಿಕ್ಕಚಿಕ್ಕ ಕ್ಯಾಬಿನ್‌ಗಳಲ್ಲಿ ಬ್ರೌಸಿಂಗ್ ಮಾಡುತ್ತಿದ್ದವರು ಹೊರಬಂದು ನೋಡುವಷ್ಟರಲ್ಲಿ ಗುಂಡು ಹಾರಿಸಿದವ ಬೈಕ್ ಹತ್ತಿ ಪರಾರಿಯಾಗುತ್ತಾನೆ. ಗುಂಡೇಟು ತಿಂದ ಅಂಗಡಿ ಮಾಲೀಕ ತನ್ನ ಎಡಗಾಲು ಹಿಡಿದುಕೊಂಡು ನರಳಾಡುತ್ತಿದ್ದಾನೆ.
ಇದು ಸಿನಿಮಾ ಕತೆ ಅನ್ನಿಸಬಹುದು. ಸಿನಿಮೀಯ ರೀತಿಯಲ್ಲಿ ನಿಜವಾಗಲೂ ಘಟನೆ ನಡೆದದ್ದು ಛತ್ತೀಸಗಡದ ಗಾರೆ ಎನ್ನುವ ಹಳ್ಳಿಯಲ್ಲಿ. ಗುಂಡೇಟು ತಿಂದವರು ರಮೇಶ್ ಅಗರವಾಲ್. 'ಗ್ರೀನ್ ನೊಬೆಲ್‌' ಎಂದೇ ಹೇಳುವ ಪ್ರತಿಷ್ಠಿತ 'ಗೋಲ್ಡ್‌ಮನ್ ಎನ್ವಿರಾನ್‌ಮೆಂಟಲ್‌' ಪ್ರಶಸ್ತಿಯನ್ನು ಮೊನ್ನೆಮೊನ್ನೆ ತಮ್ಮ ಮುಡಿಗೇರಿಸಿಕೊಂಡರಲ್ಲ, ಅದೇ ಅಗರವಾಲ್ ಇವರು. 2012ರಲ್ಲಿ ಗುಂಡೇಟು ತಿನ್ನುವ ಕೇವಲ ಮೂರು ತಿಂಗಳು ಮೊದಲು ಕಲ್ಲಿದ್ದಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ ವಿರುದ್ಧ ಕೋರ್ಟ್ ದಾವೆಯಲ್ಲಿ ಜಯ ಗಳಿಸಿದ್ದರು. ತಮ್ಮ ಮೇಲಿನ ಶೂಟೌಟ್‌ಗೂ, ಜಿಂದಾಲ್ ಕಂಪನಿಗೂ ಸಂಬಂಧವಿದೆ ಎಂದು ಆರೋಪ ಮಾಡಿದ್ದಕ್ಕೆ ಜಿಂದಾಲ್ ಇವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತದೆ, 72 ದಿನ ಸೆರೆವಾಸವನ್ನೂ ಅಗರವಾಲ್ ಅನುಭವಿಸುತ್ತಾರೆ. ಮುಂದೆ ಜಿಂದಾಲ್ ಕಂಪನಿಯ ಭದ್ರತಾ ಸಿಬ್ಬಂದಿಯೇ ಗುಂಡು ಹೊಡೆದದ್ದು ಎನ್ನುವುದು ಸಾಬೀತಾಗಿ ಅಗರವಾಲ್ ಖುಲಾಸೆಯಾಗುತ್ತಾರೆ.
ಛತ್ತೀಸಗಡದಲ್ಲಿ ಕಲ್ಲಿದ್ದಲು ಹೇರಳವಾಗಿದೆ. ಆದರೆ ಅದೇ ಕಲ್ಲಿದ್ದಲು ಅಲ್ಲಿನ ಜನರ ಬದುಕನ್ನು ನರಕವಾಗಿಸಿದೆ. ಪರಿಶುದ್ಧ ಜಲಮೂಲಗಳನ್ನು ಕಲುಷಿತಗೊಳಿಸಿದೆ. ಅನಾರೋಗ್ಯ ಎಂದರೆ ಏನೆಂಬುದನ್ನೇ ಅರಿಯದಿದ್ದ ಗ್ರಾಮೀಣ ಪ್ರದಶದ ಜನ ಕಾಯಿಲೆಯಿಂದ ನರಳುವಂತೆ ಮಾಡಿದೆ. ಕಲ್ಲಿದ್ದಲು ಗಣಿಗಾರಿಕೆ ಜತೆಗೆ ಜಲ ವಿದ್ಯುತ್ ಉತ್ಪಾದನಾ ಕಂಪನಿಗಳು ನಿಸರ್ಗದ ಮೇಲೆ ಎಸಗುತ್ತಿರುವ ಅತ್ಯಾಚಾರವೂ ಕಡಿಮೆ ಏನಲ್ಲ. ಇವುಗಳ ವಿರುದ್ಧ ಏಕಾಂಗಿಯಾಗಿ ಧ್ವನಿ ಎತ್ತಿದವರು ಅಗರವಾಲ್. ಜಿಂದಾಲ್ ಮಾತ್ರವಲ್ಲ, ಕಲ್ಲಿದ್ದಲು ಗಣಿಗಾರಿಕೆ, ಜಲ ವಿದ್ಯುತ್ ಯೋಜನೆಗೆ ಸಂಬಂಧಿಸಿ ಮೂರು ಕಾರ್ಪೊರೇಟ್ ಕಂಪನಿಗಳ ವಿರುದ್ಧ ಕಾನೂನು ಸಮರ ಸಾರಿ ಗೆದ್ದವರು ಅವರು. ಇನ್ನೂ ಹಲವಾರು ಕೇಸುಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿವೆ. ಕಾನೂನಿನ ಗಂಧಗಾಳಿಯೂ ಇಲ್ಲದಿದ್ದ ವ್ಯಕ್ತಿಯ ಸಾಧನೆ ಇದು. ನ್ಯಾಯಾಂಗ ಹೋರಾಟದ ಜತೆಜತೆಗೇ ಕಲ್ಲಿದ್ದಲು ಗಣಿಗಾರಿಕೆ ವಿರುದ್ಧ ಅನಕ್ಷರಸ್ಥ ಜನರಲ್ಲಿ ಜಾಗೃತಿ ಮೂಡಿಸುವ, ಜಲಮೂಲಗಳೂ ಸೇರಿದಂತೆ ಪ್ರಾಕೃತಿಕ ಸಂಪತ್ತನ್ನು ಗಣಿಕಾರಿಕೆಯಿಂದ ರಕ್ಷಿಸುವ ಆಂದೋಲನವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿಕೊಂಡು ಬರುತ್ತಿದ್ದಾರೆ ಅವರು.
'ಹೋರಾಟಕ್ಕೆ ಧುಮುಕುವಾಗಲೇ ಗೊತ್ತಿತ್ತು ನನಗೆ, ಕಾರ್ಪೊರೇಟ್ ಕಂಪನಿಗಳು ನನ್ನನ್ನು ಟಾರ್ಗೆಟ್ ಮಾಡುತ್ತವೆ ಎಂದು. ನನ್ನ ಮೇಲೆ ಹಲ್ಲೆಯಾಗುವುದು ಇಷ್ಟಕ್ಕೇ ನಿಲ್ಲುವುದೂ ಇಲ್ಲ ಎನ್ನುವುದೂ ಗೊತ್ತು. ಏನಾಗುತ್ತದೊ ಆಗಲಿ ಬಿಡಿ. ಏಕೆಂದರೆ ನಾನಂತೂ ಎಲ್ಲಿಗೂ ಓಡಿಹೋಗುವುದಿಲ್ಲ. ಹೋರಾಟದಿಂದಲೂ ಹಿಂದೆ ಸರಿಯುವುದಿಲ್ಲ' ಎಂದು ಮೃದುವಾದ ಸ್ವರದಲ್ಲಿ ದೃಢವಾಗಿ ಹೇಳುತ್ತಾರೆ ಅಗರವಾಲ್.
ಕಳೆದ ಎರಡು ದಶಕಗಳಲ್ಲಿನ ಆರ್ಥಿಕ ಬೆಳವಣಿಗೆ ಕೋಟ್ಯಂತರ ಭಾರತೀಯರ ಬದುಕಿನಲ್ಲಿ ಬದಲಾವಣೆ ತಂದಿದೆ. ಆದಾಯ ಮತ್ತು ಜೀವನಮಟ್ಟದಲ್ಲಿ ಗಣನೀಯ ಸುಧಾರಣೆ ತಂದಿದೆ. ಅದೇ ಹೊತ್ತಿಗೆ ಪರಿಸರಕ್ಕೆ ಸಂಬಂಧಿಸಿದ ವಿಚಾರಗಳು ನನೆಗುದಿಗೆ ಬಿದ್ದಿವೆ. ಹಳ್ಳಿಗಳ ಜನ ಇನ್ನಷ್ಟು ಹಿಂದಕ್ಕೆ ಹೋಗುತ್ತಿದ್ದಾರೆ. 40 ಕೋಟಿ ಭಾರತೀಯರ ದಿನದ ಆದಾಯ 70ಕ್ಕಿಂತ ಕಡಿಮೆ. ಕೈಗಾರಿಕೆಗಳು ಗ್ರಾಮೀಣ ಪ್ರದೇಶಕ್ಕೂ ದಾಂಗುಡಿ ಇಡುತ್ತಿರುವುದರಿಂದ ಹಳ್ಳಿಗಳಲ್ಲೂ ಅಂತರ್ಜಲ ಕುಸಿಯುತ್ತಲೇ ಇದೆ, ನದಿಗಳು ಬತ್ತುತ್ತಿವೆ. ಕೃಷಿಕರು ಭೂಹೀನರಾಗುತ್ತಿದ್ದಾರೆ. ಇದು ಆಧುನಿಕ ಭಾರತದ ವೈರುಧ್ಯ. ಅಗರವಾಲ್ ಅವರಂತಹವರು ಇಂಥದ್ದೇ ಮೂಲಭೂತ ವಿಚಾರಗಳ ಕುರಿತು ಧ್ವನಿ ಎತ್ತಿದ್ದಾರೆ. ಇಂಥದ್ದೇ ಸಮಸ್ಯೆಯನ್ನು ನಾವು ಕರ್ನಾಟಕದಲ್ಲೂ ಎದುರಿಸುತ್ತಲೇ ಬರುತ್ತಿದ್ದೇವೆ. ದಾವಣಗೆರೆಯಲ್ಲಿ ಎಸ್.ಆರ್. ಹಿರೇಮಠ್ ಆರಂಭಿಸಿದ ಹೋರಾಟ ಇಂದು ಸಮಸ್ತ ಕರ್ನಾಟಕಕ್ಕೆ ವಿಸ್ತರಣೆಯಾಗಿದೆ. ಕುದುರೆಮುಖ ಗಣಿಗಾರಿಕೆಯಿಂದ ಆದ ಅವಾಂತರ ಇಂದಿಗೂ ತುಂಗೆಯನ್ನು, ಸುತ್ತಮುತ್ತಲ ಜನರನ್ನು ಕಾಡುತ್ತಿದೆ. ಬಳ್ಳಾರಿಯ ಗಣಿಗಾರಿಕೆ ಏನೆಲ್ಲ ಆಗಿದೆ ಎಂಬುದು ಗೊತ್ತೇ ಇದೆ.
'ಅಭಿವೃದ್ಧಿ ಎನ್ನುವುದು ಕೆಲವರಿಗಾಗಿಯೊ, ಎಲ್ಲರಿಗಾಗಿಯೊ' ಎನ್ನುವ ಪ್ರಶ್ನೆ ಮುಂದಿಡುತ್ತಾರೆ ಅಗರವಾಲರು. 'ಸಾವಿರಾರು ಜನರನ್ನು ಎಚ್ಚರಿಸಲು ಆಗದಿದ್ದರೂ ಚಿಂತೆ ಇಲ್ಲ, ನೂರಾರು ಮಂದಿಯಲ್ಲಾದರೂ ಅರಿವು ಮೂಡಲಿ' ಎನ್ನುವ ಧ್ಯೇಯ ಇಟ್ಟುಕೊಂಡು ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡುವಂತಹ, ಜನರನ್ನು ಮೃತ್ಯುಕೂಪಕ್ಕೆ ತಳ್ಳುವಂತಹ ಯೋಜನೆಗಳ ವಿರುದ್ಧ ಜನಾಂದೋಲನ ರೂಪಿಸಲು ತಮ್ಮ ಬದುಕನ್ನೇ ಮೀಸಲಿಟ್ಟಿದ್ದಾರೆ.
ಭಾರತದಲ್ಲಿನ ಚಳವಳಿಕಾರರು, ವಿಶ್ಲೇಷಕರು ಇನ್ನೊಂದು ಸೂಕ್ಷ್ಮ ಸಂಗತಿಯನ್ನು ಗುರುತಿಸಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಪರಿಸರದ ಮೇಲೆ ನಡೆಯತ್ತಿರುವ ದೌರ್ಜನ್ಯದ ವಿರುದ್ಧ ಸ್ಥಳೀಯರು ಧ್ವನಿ ಎತ್ತುವುದನ್ನು ಕಲಿತಿದ್ದಾರೆ. ಇವು ರಾಷ್ಟ್ರಮಟ್ಟದ ಆಂದೋಲನಗಳಾಗಿ ಹೆಸರು ಮಾಡದೇ ಇದ್ದಿರಬಹುದು, ಆದರೆ ಪ್ರಾದೇಶಿಕವಾಗಿ ಯೋಜನೆಗಳನ್ನು ನಿಲ್ಲಿಸುವಲ್ಲಿ ಅಥವಾ ಪರಿಸರ ನಾಶ ತಡೆಯವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗುತ್ತಿವೆ.
ಅಗರವಾಲ್ ಅವರಂತಹ ನಿಸ್ವಾರ್ಥ ನೇತಾರರು ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿದ್ದಾರೆ.  ಮಧ್ಯಪ್ರದೇಶದ ಕುಗ್ರಾಮವೊಂದರ ಜನ ಜಲವಿದ್ಯುತ್ ಯೋಜನೆ ವಿರುದ್ಧ ಹೋರಾಡಿ, ಅಣೆಕಟ್ಟೆ ಹಿನ್ನೀರಿನಲ್ಲಿ ಮುಳುಗಡೆಯಾಗಬೇಕಿದ್ದ ತಮ್ಮ ಹೊಲ, ಮನೆಗಳನ್ನು ಉಳಿಸಿಕೊಂಡ ಹೋರಾಟವೇ ಇರಬಹುದು, ಹಿಮಾಚಲಪ್ರದೇಶದ ಸೇಬು ಬೆಳೆಗಾರರು ಅಣೆಕಟ್ಟೆ ನಿರ್ಮಾಣ ನಿಲ್ಲಿಸಿ ತಮ್ಮ ಬದುಕು ಉಳಿಸಿಕೊಂಡ ಹೋರಾಟವೇ ಇರಬಹುದು, ಉತ್ತರಾಖಂಡದಲ್ಲಿ ಗಂಗೆಯ ಉಳಿವಿಗಾಗಿ ಪ್ರೊ. ಜಿ.ಡಿ. ಅಗರ್‌ವಾಲ್(ಸಾನಂದ ಸ್ವಾಮೀಜಿ) ನಡೆಸುತ್ತಿರುವ ತಪಸ್ಯೆಗೆ ದೇಶಾದ್ಯಂತ ಸಿಗುತ್ತಿರುವ ಬೆಂಬಲವೇ ಇರಬಹುದು, ಆಧುನಿಕ ಭಗೀರಥ ರಾಜಸ್ಥಾನದ ರಾಜೇಂದ್ರಸಿಂಗ್‌ರ ಯಶಸ್ಸೇ ಆಗಿರಬಹುದು... ಸ್ಥಳೀಯವಾಗಿ ಜನ ಜಾಗೃತರಾಗುತ್ತಿದ್ದಾರೆ ಎನ್ನುವುದಕ್ಕೆ ಇಂಥ ಹತ್ತುಹಲವು ಉದಾಹರಣೆಗಳನ್ನು ನೀಡಬಹುದು. ಇಂಥ ಯಶಸ್ವಿ ಹೋರಾಟಗಳ ಹಿಂದೆ ಅಗರವಾಲ್ ಅವರಂತಹವರ ಪರಿಶ್ರಮ ಕಡೆಗಣಿಸುವಂತಿಲ್ಲ. 'ನೀವು ತುಂಬಾ ಬಲಶಾಲಿಗಳ ವಿರುದ್ಧ ಸೆಣಸಾಟಕ್ಕೆ ಇಳಿದಿದ್ದೀರಿ, ಹುಷಾರಾಗಿರಿ ಎಂದು ಜನ ಶುರುವಿನಲ್ಲಿ ನಮಗೇ ಕಿವಿಮಾತು ಹೇಳುತ್ತಾರೆ. ಒಂದೆರಡು ಕಡೆ ನಾವು ಗೆಲ್ಲುತ್ತಿದ್ದಂತೆ ನಮ್ಮ ಬೆಂಬಲಕ್ಕೆ ಟೊಂಕಕಟ್ಟಿ ನಿಲ್ಲುತ್ತಾರೆ. ಆರಂಭದ ಪ್ರತಿಕ್ರಿಯೆಗಳಿಂದ ನಾವು ನಿರಾಶರಾಗಿಬಿಟ್ಟರೆ ಯಾವ ಹೋರಾಟವೂ ತಾರ್ಕಿಕ ಅಂತ್ಯ ಕಾಣಲು ಸಾಧ್ಯವಿಲ್ಲ' ಎಂದು ಅನುಭವ ಹಂಚಿಕೊಳ್ಳುತ್ತಾರೆ ಅಗರವಾಲ್.
ರಮೇಶ್ ಅಗರವಾಲ್ ಅವರ ಕಥೆಗೇ ಬರೋಣ. ಗಾರೆಯಲ್ಲಿ ಕಲ್ಲಿದ್ದಲು ಗಣಿಗಾರಿಕೆ ವಿರುದ್ಧ ಜನರನ್ನು ಸಂಘಟಿಸುವಲ್ಲಿ ಎದುರಿಸಿದ ತಾಪತ್ರಯಗಳು ಒಂದೆರಡೇ? ಹಲವು ವರ್ಷಗಳಿಂದ ಆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಕಂಪನಿ, ಎಗ್ಗು ಸಿಗ್ಗಿಲ್ಲದೆ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಸಾಗಿತ್ತು. ಡೈನಾಮೈಟ್‌ಗಳ ಸ್ಫೋಟಕ್ಕೆ ಮನೆಗಳೇ ಕಂಪಿಸುತ್ತಿದ್ದವು. ಹೊಲಗಳು ಬರಡಾಗಿದ್ದವು. ನೀರು ಕಪ್ಪುಬಣ್ಣಕ್ಕೆ ತಿರುಗಿತ್ತು. ಕಾಯಿಲೆಕಸಾಲೆ ಎನ್ನುವುದು ಮಾಮೂಲು ಎಂಬಂತಾಗಿಬಿಟ್ಟಿತ್ತು. ಆದರೆ ಅಭಿವೃದ್ಧಿ ಮಾತ್ರ ಶೂನ್ಯ. ಹತ್ತಾರು ಹಳ್ಳಿಗಳು ಗಣಿಗಾರಿಕೆಯಿಂದ ತೊಂದರೆ ಅನುಭವಿಸುತ್ತಿದ್ದರೂ ಸಾರಸ್‌ಮಲ್ ಮತ್ತು ಕೋಸಂಪಲ್ಲಿ ಎನ್ನುವ ಎರಡು ಹಳ್ಳಿಗಳು ಮಾತ್ರ ರಸ್ತೆ, ಚಿಕ್ಕ ಆಸ್ಪತ್ರೆ, ಶಾಲೆಗಳನ್ನು ಕಂಡಿದ್ದವು, ಅದೂ ಜನರ ಪ್ರತಿಭಟನೆ ಬಳಿಕ! ಉದ್ಯೋಗ ಸಿಕ್ಕಿದ್ದು ಡಜನ್‌ಗಿಂತ ಕಡಿಮೆ ಜನರಿಗೆ ಮಾತ್ರ. ಇದನ್ನೆಲ್ಲ ಅಗರವಾಲ್ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡುತ್ತ ಬಂದರು. 'ನಾವು ಯಾರಿಗೂ ಅನ್ಯಾಯ ಮಾಡಿಲ್ಲ. ಆದರೂ ಅವರು (ಗಣಿ ಕಂಪನಿಗಳು) ನಮಗೇ ಯಾಕೆ ಅನ್ಯಾಯ ಮಾಡುತ್ತಿವೆ? ಅವರ ವಿರುದ್ಧ ನಾವು ಹೋರಾಡಬೇಕು' ಎಂದು ಐದು ವರ್ಷಗಳಿಂದ ಅಸ್ತಮಾದಿಂದ ಬಳಲುತ್ತಿರುವ 55 ವರ್ಷ ಪ್ರಾಯದ ಸುಶೀಲಾ ಚೌಧರಿ ಪ್ರಶ್ನಿಸುತ್ತಾರೆ.
ಇದು ಜನತೆಯ ಧೋರಣೆಯಲ್ಲಿ ಆಗಿರುವ ಬದಲಾವಣೆಗೆ ಸಾಕ್ಷಿ. ಎರಡು ವರ್ಷದ ಹಿಂದೆ ಗಾರೆ ನಿವಾಸಿಗಳ ಪರವಾಗಿ ಅಗರವಾಲ್ ಜಿಂದಾಲ್‌ಗೆ ಗಣಿಗಾರಿಕೆ ಪರವಾನಗಿ ನವೀಕರಿಸುವುದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿ ಯಶಸ್ಸು ಕಂಡಿದ್ದರು.
ಜನ ಎಚ್ಚೆತ್ತುಕೊಂಡ ಮಾತ್ರಕ್ಕೇ ಬಂಡವಾಳಶಾಹಿಗಳು ಎಚ್ಚೆತ್ತುಕೊಳ್ಳುತ್ತಾರೆ ಎನ್ನುವುದೂ ಭ್ರಮೆ. ಹೋರಾಟದ ಮುಂಚೂಣಿಯಲ್ಲಿ ಇರುವವರನ್ನೇ ಟಾರ್ಗೆಟ್ ಮಾಡಿಕೊಂಡು ಚಳವಳಿಗಳನ್ನು ಹತ್ತಿಕ್ಕುವುದು ಅವರ ತಂತ್ರ. ಭಾರತದಲ್ಲಿ ಅಂತಲೇ ಅಲ್ಲ, ಜಾಗತಿಕವಾಗಿ ನೋಡಬಹುದಾದ ಕಳವಳಕಾರಿ ವಿದ್ಯಮಾನ ಇದು. ಕಳೆದೊಂದು ದಶಕದಲ್ಲಿ ಜಗತ್ತಿನ ಹಲವೆಡೆ 908 ಹೋರಾಟಗಾರರ ಹತ್ಯೆಯಾಗಿದೆ. ಅದರಲ್ಲಿ ಆರು ಹತ್ಯೆಗಳು ಭಾರತದ ನೆಲದಲ್ಲಿ ನಡೆದಿವೆ. ಇದು ಲಂಡನ್‌ನ ಗ್ಲೋಬಲ್ ವಿಟ್‌ನೆಸ್ ಗ್ರೂಪ್ ಎನ್ನುವ ಸಂಸ್ಥೆ ಬಿಡುಗಡೆ ಮಾಡಿರುವ ಅಧಿಕೃತ ಅಂಕಿಅಂಶ.
'ನೀರು, ವಾಯು, ಪರಿಸರ ಮೊದಲಾದ ಸಂಗತಿಗಳ ಬಗ್ಗೆ ನಾವು ಗಮನ ಕೊಡದಿದ್ದರೆ ಮುಂದೊಂದು ದಿನ ಕೋಟ್ಯಂತರ ಜನ ಏನೂ ಇಲ್ಲದವರಾಗುತ್ತಾರೆ. ಉದ್ಯೋಗ, ಹಣ, ಕೃಷಿ ಭೂಮಿ, ಅರಣ್ಯ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ' ಎನ್ನುವ ಅಗರವಾಲರ ಮಾತುಗಳು ಭವಿಷ್ಯದ ಎಚ್ಚರಿಕೆಯೂ ಹೌದು, ಕಳವಳವೂ ಹೌದು.

- ರಾಧಾಕೃಷ್ಣ ಎಸ್. ಭಡ್ತಿ

abhyagatha@yahoo.co.in


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.