ಬಾಗಿಲು ಬಡಿಯುತ್ತಿರುವ ಅವಕಾಶಅಪ್ಪಿಕೊಳ್ಳುವರೇ ನಮ್ಮವರು?
ಲೋಕಸಭೆಯ ಹುಚ್ಚಿನಲ್ಲಿ ನಾವು ಪ್ರಪಂಚವನ್ನೇ ಮರೆತುಬಿಟ್ಟಿದ್ದೇವೆ. ಅಮೆರಿಕ ರಷ್ಯಾದೊಂದಿಗೆ ಯುದ್ಧಕ್ಕಿಳಿಯುವ ಸಾಧ್ಯತೆ ಹೆಚ್ಚುತ್ತಿದೆ ಎಂದು ಕೆಲವರು ಹೇಳುತ್ತಿದ್ದರೆ, ಇನ್ನೂ ಕೆಲವರು "ಅಮೆರಿಕವನ್ನು ಮಣ್ಣು ಮುಕ್ಕುವಂತೆ ಮಾಡಬಲ್ಲ ಪ್ರಪಂಚದ ಏಕೈಕ ಶಕ್ತಿ ರಷ್ಯಾ" ಎನ್ನುತ್ತಿದ್ದಾರೆ.
ಯುದ್ಧವೇನು ಆಗಲಿಕ್ಕಿಲ್ಲ ಬಿಡಿ. ಇದಕ್ಕೆ ಕಾರಣ ನಾಯಕರಿಗೆ ಶಾಂತಿಪಾಲನೆಯಲ್ಲಿ ಹೆಚ್ಚು ಒಲವಿದೆ ಎನ್ನುವುದಂತೂ ಅಲ್ಲ, ಆದರೆ ಮಣ್ಣು ಮುಕ್ಕುವ ಅಪಾಯವಿದೆ ಎನ್ನುವ ಕಾರಣಕ್ಕಷ್ಟೆ! ಕ್ರಿಮಿಯಾ/ ಯುಕ್ರೇನ್‌ನಲ್ಲಿನ ಚಿತ್ರಣದತ್ತಲೇ ಪ್ರಪಂಚದ ಚಿತ್ತ ಹರಿದಿದೆ. ಆಂಗ್ಲೋ-ಸ್ಯಾಕ್ಸಾನ್‌ಗಳು ಯುಕ್ರೇನನ್ನು ಯುರೋ ಕೇಂದ್ರಿತ(ರಷ್ಯಾ ವಿರೋಧಿ) ನ್ಯಾಟೋ ಒಕ್ಕೂಟದ ಭಾಗವಾಗಿಸಲು ಪ್ರಯತ್ನಿಸುತ್ತಿವೆ ಎಂದು ಭಾವಿಸುತ್ತದೆ ರಷ್ಯಾ. ರಷ್ಯಾ ತನ್ನ ಪುರಾತನ ಸೋವಿಯತ್ ಸಾಮ್ರಾಜ್ಯದ ಮರುಸ್ಥಾಪನೆಗಾಗಿ ಸುತ್ತಮುತ್ತಲಿನ ಪ್ರದೇಶಗಳನ್ನು ಕಬಳಿಸುತ್ತಿದೆ ಎಂಬ ಭಾವನೆ ನ್ಯಾಟೋಗಿದೆ.
ಕ್ರಿಮಿಯಾದ ಹಣೆಬರಹ ಎಂದೋ ನಿರ್ಧರಿತವಾಗಿತ್ತು. ಜನಾಭಿಪ್ರಾಯ ಸಂಗ್ರಹಿಸಿದಾಗ ಅಲ್ಲಿನ ಸುಮಾರು 96.6 ಪ್ರತಿಶತ ಜನರು ರಷ್ಯಾ ಫೆಡರೇಷನ್‌ನ ಭಾಗವಾಗಲು ಇಚ್ಛಿಸುತ್ತಿದ್ದಾರೆ ಎನ್ನುವುದು ತಿಳಿಯಿತು. ಆದಾದ ಎರಡು ದಿನಗಳಲ್ಲೇ ವ್ಲಾದಿಮಿರ್ ಪುಟಿನ್ ಅವರು ಔಪಚಾರಿಕ ಒಪ್ಪಂದವೊಂದಕ್ಕೆ ಸಹಿ ಹಾಕಿ ಕ್ರಿಮಿಯಾವನ್ನು ರಷ್ಯಾದ ಭಾಗವಾಗಿಸಿದರು. ಕ್ರಿಮಿಯಾ ಕೂಡ ರುಬಲ್ ಕರೆನ್ಸಿಯನ್ನು ಅಳವಡಿಸಿಕೊಂಡಿತು. ತನ್ನ ಗಡಿಯಾರವನ್ನು ಮಾಸ್ಕೋಕ್ಕೆ ಹೊಂದುವಂತೆ ಅಡ್ಜಸ್ಟ್ ಮಾಡಿಕೊಂಡಿತು. ಪುಟಿನ್ ಕ್ರೆಮ್ಲಿನ್‌ನಲ್ಲಿನ ತಮ್ಮ ದೀರ್ಘ ಭಾಷಣದಲ್ಲಿ, ಹೇಗೆ ಕ್ರಿಮಿಯಾ ಎಂದಿನಿಂದಲೋ ರಷ್ಯಾದ ಅಂತರಂಗದಲ್ಲಿ ಜಾಗಪಡೆದಿತ್ತು ಎನ್ನುವುದನ್ನು, ಪಶ್ಚಿಮದ, ಅದರಲ್ಲೂ ಮುಖ್ಯವಾಗಿ ಅಮೆರಿಕ, ಹಿಂಬಾಗಿಲಿನಲ್ಲಿ ನಿರ್ಧಾರ ಕೈಗೊಂಡು ಪದೇ ಪದೆ ರಷ್ಯಾದ ಬೆನ್ನಿಗೆ ಚೂರಿ ಹಾಕಿತು ಎನ್ನುವುದನ್ನು ಭಾವುಕರಾಗಿ ಹೇಳಿದರು.
ಇವು ನಿಜಕ್ಕೂ ಕಠಿಣ ಪದಗಳು. ಈಗಿನ ವಾತಾವರಣವನ್ನು ನೋಡಿದರೆ, ಶೀತಲ ಯುದ್ಧದಲ್ಲಿನ ಕ್ರೂರ ಮನಸ್ಥಿತಿಗಳು ಮರುಕಳಿಸುತ್ತಿವೆಯೇನೋ ಎನಿಸುತ್ತಿದೆ. ರಷ್ಯಾ ಯುಕ್ರೇನ್‌ನಲ್ಲಾದ ಹಿಂಸಾಚಾರಕ್ಕೆ ಪಶ್ಚಿಮ ರಾಷ್ಟ್ರಗಳ ಪ್ರಯೋಚದನೆಯೇ ಕಾರಣ ಎಂದು ಹೇಳಿದರೆ, ಇನ್ನೊಂದೆಡೆ ಪಶ್ಚಿಮ ರಾಷ್ಟ್ರಗಳು ರಷ್ಯಾದ ಹೆಡೆಮುರಿಕಟ್ಟುವುದೇ ತಮ್ಮ ಪ್ರಮುಖ ಅಜೆಂಡಾ ಎಂದು ಭಾವಿಸುತ್ತಿವೆ. ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿಗಳು ಕ್ರಿಮಿಯಾ ಬಿಕ್ಕಟ್ಟನ್ನು, "ಯುರೋಪ್ ಭದ್ರತೆಯ ವಿಷಯದಲ್ಲಿ 21ನೇ ಶತಮಾನದಲ್ಲಿ ಸಂಭವಿಸಿರುವ ಅತ್ಯಂತ ಕಠಿಣ ಸನ್ನಿವೇಶ" ಎಂದು ಬಣ್ಣಿಸುತ್ತಾರೆ. ಆದರೆ ಇನ್ನೊಂದೆಡೆ ರಷ್ಯಾಕ್ಕೆ ಕ್ರಿಮಿಯಾವನ್ನು ತನ್ನ ಒಡಲಲ್ಲಿ ಇಟ್ಟುಕೊಳ್ಳುವುದು ಅನಿವಾರ್ಯವೆನ್ನುವುದಂತೂ ನಿಜ.
1954ರ ವರೆಗೆ ರಷ್ಯನ್ ಫೆಡರೇಷನ್‌ನ ಭಾಗವಾಗಿದ್ದ ಕ್ರಿಮಿಯಾವನ್ನು ಉಕ್ರೇನ್‌ನ ಒಡಲಿಗೆ ಹಾಕಿದ್ದು ನಿಕಿತಾ ಕ್ರುಶ್ಚೇವ್ ಎನ್ನುವ ನಾಯಕ. ರಷ್ಯಾದ ಏಕೈಕ ವಾರ್ಮ್ ವಾಟರ್ ನೌಕಾನೆಲೆ ಕ್ರಿಮಿಯಾದ ಕಪ್ಪುಸಮುದ್ರದ ತೀರದಲ್ಲಿದೆ. ಕ್ರಿಮಿಯಾ ಇಲ್ಲದಿದ್ದರೆ ರಷ್ಯಾ ಬಲಿಷ್ಠವಾಗುವುದಕ್ಕೆ ಸಾಧ್ಯವಿಲ್ಲ. ಹಾಗಾಗೆ ತನ್ನ ಸ್ವಹಿತಕ್ಕಾಗಿ ರಷ್ಯಾ ಏನೇನು ಮಾಡಲು ಸಾಧ್ಯವೋ ಅದನ್ನು ಮಾಡುತ್ತಿದೆ. ಹೇಗೆ ಅಮೆರಿಕ ಉಳಿದ ಸೆಂಟ್ರಲ್ ಅಮೆರಿಕನ್ ರಾಷ್ಟ್ರಗಳೊಂದಿಗೆ ನಡೆದುಕೊಂಡಿತೋ ಹಾಗೆ!
ಈ ಬದಲಾವಣೆಗಳತ್ತ ಭಾರತ ಗಮನಕೊಡುತ್ತಿದೆಯೇ? ಖಂಡಿತವಾಗಿಯೂ ಹೌದು. ಮೊದಲನೆಯದಾಗಿ, ಇದು ಜಾಗತಿಕ ಆಟವಾಗಿದ್ದು, ಭಾರತದಂಥ ಬೃಹತ್ ರಾಷ್ಟ್ರಕ್ಕೆ ಇದರಿಂದ ದೂರ ಉಳಿಯುವುದಕ್ಕೆ ಸಾಧ್ಯವಿಲ್ಲ. ರಷ್ಯಾ ಹೇಳುತ್ತಿರುವ 'ಯುರೇಷಿಯಾ'ದಲ್ಲಿ ಭಾರತ ಮತ್ತು ಚೀನಾಗಳು ಬರುತ್ತವೆ. ಮಾತುಕತೆಯಿಂದ ಸಮಸ್ಯೆಯನ್ನು ಬಗೆಹರಿಸಬೇಕು, ಅಂತಾರಾಷ್ಟ್ರೀಯ ಕಾನೂನನ್ನು ಗೌರವಿಸಬೇಕು ಎಂದು ಭಾರತ ಮತ್ತು ಚೀನಾ ರಷ್ಯಾಕ್ಕೆ ಕರೆಕೊಟ್ಟಿವೆ. ನಿಜಹೇಳಬೇಕೆಂದರೆ ಈ ಎರಡೂ ರಾಷ್ಟ್ರಗಳು ರಷ್ಯಾಕ್ಕೆ ಮೆಲ್ಲಗೆ ಬೆಂಬಲ ಸೂಚಿಸುತ್ತಿವೆ. ರಷ್ಯಾದ ನಡೆ ತಪ್ಪಲ್ಲ ಎಂದು ಭಾರತ ಅದಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಇದಾದ ನಂತರ ಪುಟಿನ್ ಅವರು ಮನಮೋಹನ್‌ಸಿಂಗ್ ಅವರೊಂದಿಗೆ ಮಾತುಕತೆ ಕೂಡಾ ನಡೆಸಿದ್ದಾರೆ.
ಈಗ ಭಾರತ ತನ್ನ ವಿದೇಶಾಂಗ ನಿಲುವನ್ನು ಬದಲಿಸುವ ಸಮಯ ಬಂದಿದೆಯೇ? ಮನಮೋಹನ್ ಸಿಂಗ್ ಅವರ ಅಮೆರಿಕ ಪರವಾದ ನಿಲುವು ಯಾವಾಗಲೂ ಏಕ ಬದಿಯದ್ದಾಗಿದ್ದು, ಇದರಿಂದ ಭಾರತಕ್ಕೆ ಲಾಭಕ್ಕಿಂತಲೂ ಹೆಚ್ಚಾಗಿ ಹಾನಿಯೇ ಆಗಿದೆ. ಆದರೆ ಇನ್ನೊಂದೆಡೆ ರಷ್ಯಾ ಕಷ್ಟಕಾಲದಲ್ಲಿ ಭಾರತಕ್ಕೆ ಸಹಾಯ ಮಾಡಿದೆ. ಬಹುಶಃ ಪುಟಿನ್ ಮತ್ತು ಯುರೇಷಿಯನ್ ಎನ್ನುವ ಐಡಿಯಾ ಭಾರತ ಮತ್ತು ಚೀನಾ ನಡುವಿನ ಸಂಬಂಧವನ್ನು ಸುಧಾರಿಸುವಂತೆ ಮಾಡಬಹುದೇನೋ? ಅವಕಾಶ ಭಾರತದ ಬಾಗಿಲು ಬಡಿಯುತ್ತಿದೆ. ಆದರೆ ಅದನ್ನು ಅಪ್ಪಲು ಯಾರು ಸಿದ್ಧರಿದ್ದಾರೆ? ಮೋದಿ, ಗಾಂಧಿ ಅಥವಾ ಕೇಜ್ರೀವಾಲ್?
ಟಿ.ಜೆ.ಎಸ್ ಜಾರ್ಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

