ನೀನಿಲ್ಲದೆ ನನಗೇನಿದೆ ಎನ್ನುವವರ ನೆನೆದು...
ರೋಹಿಣಿಯವರಿಗೆ ಲಘು ಹೃದಯಾಘಾತವಾಗಿದೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಗಾಬರಿಪಡುವ ಅಗತ್ಯವಿಲ್ಲ. ಆದರೂ, ನೀವು ಆದಷ್ಟು ಬೇಗ ಬರಬೇಕು ಎಂಬ ಸಂದೇಶ ತಲುಪಿದ ಮರುಕ್ಷಣವೇ ಪರಮಶಿವಪ್ಪ ಕುಸಿದು ಬಿದ್ದರಂತೆ. ತಕ್ಷಣವೇ ಅವರ ಆಫೀಸಿನ ಸಹೋದ್ಯೋಗಿಗಳು ಸಮೀಪದ ಆಸ್ಪತ್ರೆಗೆ ಫೋನ್ ಮಾಡಿದ್ದರಿಂದ, ಆಸ್ಪತ್ರೆಯಲ್ಲಿ ಎರಡು ದಿನ ಟ್ರೀಟ್‌ಮೆಂಟ್ ಪಡೆದು ನಂತರವಷ್ಟೇ ಹೆಂಡತಿಯನ್ನು ನೋಡಲು ಬಂದರು ಪರಮಶಿವಪ್ಪ. ಆಸ್ಪತ್ರೆಗೆ ಬಂದವರೇ ಹೆಂಡತಿಯ ಮುಂದೆ ಕೂತು-'ನಿಂಗೆ ಏನಾದ್ರೂ ಹೆಚ್ಚು ಕಡಿಮೆ ಆಗಿದ್ದಿದ್ರೆ ನನ್ನ ಗತಿ ಏನಾಗ್ತಿತ್ತು ರೋಹಿಣೀ... ನನ್ನನ್ನು ನೋಡಿಕೊಳ್ಳುವವರು ಯಾರೇ ರೋಹಿಣೀ... ಎಂದು ಅಳಲು ಶುರು ಮಾಡಿಬಿಟ್ಟರು. ಆಗ, ಸುತ್ತಲೂ ಇದ್ದ ಜನ-'ಇದೇನ್ರೀ, ನೀವು ಹೆಂಗಸಿನ ಥರಾ ಅಳೋಕೆ ಶುರು ಮಾಡಿದೀರಾ? ಮನುಷ್ಯರಿಗೆ ಕಾಯಿಲೆ ಬರದೆ ದೇವರಿಗೆ ಬರುತ್ತಾ? ಈಗ ಅವರಿಗೆ ಟ್ರೀಟ್‌ಮೆಂಟ್ ಕೊಟ್ಟು ಆಗಿದೆ. ಏನೂ ತೊಂದರೆಯಿಲ್ಲ. ನಾಳೆ ಡಿಸ್‌ಚಾರ್ಜ್ ಮಾಡ್ತೇವೆ ಅಂತ ಡಾಕ್ಟರೂ ಹೇಳಿದ್ದಾರೆ. ಎದ್ದೇಳಿ ಮೇಲೆ...' ಎಂದು ಜೋರು ಮಾಡಿದರು.
ನಾವು ಉಳಿದುಕೊಂಡಿರುವ ಪಿ.ಜಿ. ಹಾಸ್ಟೆಲ್‌ನ ಎದುರು ಮನೆಯಲ್ಲೇ ಪರಮಶಿವಯ್ಯ -ರೋಹಿಣಿ ದಂಪತಿ ಇದ್ದಾರೆ. ಪರಮಶಿವಯ್ಯನವರು ಎಚ್‌ಎಎಲ್ ನ ಉದ್ಯೋಗಿ. ರೋಹಿಣಿಯವರಿಗೆ ಮನೆಯ ಯಜಮಾನಿಕೆ. ಈ ದಂಪತಿಯ ಮಕ್ಕಳಿಗೆ ಮದುವೆಯಾಗಿದೆ. ಅವರು, ಬೆಂಗಳೂರಿನ ಇನ್ನೊಂದು ಮೂಲೆಯಲ್ಲಿ ಪ್ರತ್ಯೇಕವಾಗಿ ಮನೆ ಮಾಡಿಕೊಂಡು ಆರಾಮಾಗಿದ್ದಾರೆ. ಮನೆಯಲ್ಲಿ ತಾವಿಬ್ಬರೇ ಅನ್ನಿಸಿದಾಗ ರೋಹಿಣಿಯವರು ತಾವೇ ಮುಂದಾಗಿ ಬಂದು ನಮ್ಮೆಲ್ಲರನ್ನೂ ಪರಿಚಯಿಸಿಕೊಂಡರು. ಭಾನುವಾರಗಳಲ್ಲಿ ಮನೆಗೆ ಬನ್ನಿ. ಹರಟೆ ಹೊಡೆಯೋಣ ಎಂದು ಆಹ್ವಾನಿಸಿದರು. ನಾವು ಗೆಳತಿಯರು ಭಾನುವಾರಗಳಲ್ಲಿ ತಪ್ಪದೇ ರೋಹಿಣಿ ಆಂಟಿಯ ಮನೆಗೆ ಹೋಗುತ್ತಿದ್ದೆವು. ಪಿ.ಜಿ.ಯಲ್ಲಿ ಸಿಗುತ್ತಿದ್ದ ರುಚಿಯಿಲ್ಲದ ಚಿತ್ರಾನ್ನದ ಬದಲು ಆಂಟಿ ಕೊಡುತ್ತಿದ್ದ ಗರಿಗರಿ ದೋಸೆಯ ಆಸೆಯಿಂದಲೇ ನಾವು ಅಲ್ಲಿಗೆ ಹೋಗುತ್ತಿದ್ದೆವು ಎಂದು ಹೇಳಲು ನನಗಂತೂ ಸಂಕೋಚವಿಲ್ಲ.
ಸ್ವಾರಸ್ಯವೆಂದರೆ, ಆ ಮನೆಯಲ್ಲಿ ನಮಗೆ, ರೋಹಿಣಿ ಅವರಷ್ಟೇ ಅಥವಾ ಅವರಿಗಿಂತ ಸ್ವಲ್ಪ ಹೆಚ್ಚು ಅನ್ನಿಸುವಷ್ಟು ಆಪ್ತರಾದವರು ಪರಮಶಿವಯ್ಯ. ಆತ ಸದಾ ಏನಾದರೂ ತಮಾಷೆ ಮಾಡಿಕೊಂಡು, ತಪ್ಪು ತಪ್ಪಾಗಿ ಸಿನಿಮಾ ಹಾಡು ಹೇಳಿಕೊಂಡು ಎಲ್ಲರನ್ನೂ ರಂಜಿಸುತ್ತಿದ್ದರು. ಮದುವೆಗೂ ಮೊದಲು ತಾವು ಹೆಣ್ಣು ನೋಡಲು ಹೋದ ಸಂದರ್ಭವನ್ನು ರಸವತ್ತಾಗಿ ಹೇಳುತ್ತಿದ್ದರು. 'ನಾನು ಹೋದಾಗ ಇವಳು ಏನ್ಮಾಡ್ತಿದ್ಲು ಗೊತ್ತಾ? ಸ್ಕೂಲ್‌ನ ಯೂನಿಫಾರ್ಮ್‌ನಲ್ಲೇ ಕುಂಟಾಬಿಲ್ಲೆ ಆಡ್ತಾ ಇದ್ಳು. ಮುಖ ತೊಳೆದಿರಲಿಲ್ಲ. ತಲೆ ಬಾಚಿರಲಿಲ್ಲ. ಈ ಅವತಾರ ಕಂಡ ಮನೆಯ ಹಿರಿಯರು, ಎರಡು ಮಾತು ಬೈದರೆ, ಅಷ್ಟಕ್ಕೆ ಅಳುತ್ತಾ ಕೂತುಬಿಟ್ಲು. ಆಗ ಮೂಗಿಂದ ಹರಿದ ಸಿಂಬಳ ನೇರವಾಗಿ ಬಾಯಿಗೆ ಹೋಗಿ ಬಿಡ್ತು... ಹೋಗ್ಲಿ ಪಾಪ ಅಂದ್ಕೊಂಡು ಮದುವೆಯಾದೆ' ಅಂದು ನಗುತ್ತಿದ್ದರು.
ಈ ಮಾತನ್ನು ರೋಹಿಣಿ ಆಂಟಿ ಒಪ್ಪಿರಲಿಲ್ಲ. ನಿರಾಕರಿಸಲೂ ಇಲ್ಲ. 'ನನ್ನ ತವರಿಗೂ, ಯಜಮಾನರ ಊರಿಗೂ ತುಂಬಾ ದೂರವಿತ್ತು. ಇವರ ಮನೆ ತುಂಬ ಜನ. ನನಗೋ, ಚಿಕ್ಕ ವಯಸ್ಸಿಗೇ ಮದುವೆ ಆಗಿಬಿಡ್ತು. ಆಗಷ್ಟೇ ಇವರ ಓದು ಮುಗಿದಿತ್ತು. ಕೆಲಸ ಸಿಕ್ಕಿರಲಿಲ್ಲ. ಇಂಥ ಸಂದರ್ಭದಲ್ಲಿ, ಹೊಸ ಜನ, ಹೊಸ ಪರಿಸರಕ್ಕೆ ಹೊಂದಿಕೊಳ್ತೇನೋ ಇಲ್ಲವೋ ಎಂಬ ಗಾಬರಿಯಲ್ಲಿ ನಾನಿದ್ದೆ. ಆದರೆ ಯಜಮಾನರು ಹೆಜ್ಜೆ ಹೆಜ್ಜೆಗೂ ನನ್ನ ಜೊತೆಗಿದ್ದರು. ಯಾವ ಸಂದರ್ಭದಲ್ಲಿ ಹೇಗೆ ಮಾತಾಡಬೇಕು, ಮನೆಯ ಕೆಲಸವನ್ನು ಹೇಗೆ ನಿಭಾಯಿಸಬೇಕು ಎಂದೆಲ್ಲಾ ಹೇಳಿಕೊಟ್ಟರು. ಆನಂತರದಲ್ಲಿ ಅವರಿಗೆ ನೌಕರಿ ಸಿಕ್ಕ ಕಾರಣದಿಂದ ನಾವು ಬೆಂಗಳೂರಿಗೆ ಶಿಫ್ಟ್ ಆದೆವು. ಇಲ್ಲಿ ಕೂಡ ಅಷ್ಟೆ: ಅವರು ನಂಗೆ ಯಾವುದೇ ತೊಂದರೆ ಮಾಡಲಿಲ್ಲ. ನನಗೆ ಎಲ್ಲ ಸಂದರ್ಭದಲ್ಲೂ ಸಪೋರ್ಟ್ ಮಾಡಿ ಬೆಳೆಸಿದ್ರು. ಈಗ, ವಯಸ್ಸಿನ ಕಾರಣದಿಂದ ಅವರಿಗೂ ಒಂದೊಂದೇ ಕಾಯಿಲೆ ಜೊತೆಯಾಗ್ತಾ ಇದೆ. ಕಣ್ಣು ಸ್ವಲ್ಪ ಮಂಜಾಗಿದೆ. ಮಂಡಿ ನೋವು ಅಂತ ಕೂಡಾ ಒಮ್ಮೊಮ್ಮೆ ಪೇಚಾಡ್ತಾರೆ. ಬೈ ಛಾನ್ಸ್, ನಾನೇ ಮೊದಲು ಸತ್ತು ಹೋದ್ರೆ ಅವರು ಹೇಗೆ ಬದುಕುತ್ತಾರೆ ಅಂತ ನೆನಪಿಸಿಕೊಳ್ಳಲಿಕ್ಕೂ ಕಷ್ಟ ಆಗುತ್ತೆ. ಹಾಗಾಗಿ, ಅವರೇ ಮೊದಲು ಹೋಗಿಬಿಡ್ಲಿ ಅಥವಾ ನಾವಿಬ್ರು ಒಟ್ಟಿಗೆ ಸತ್ತುಹೋದ್ರೆ ದೊಡ್ಡ ಖುಷಿ...' ಅನ್ನುತ್ತಿದ್ದರು. ಈಗ ಒಂದು ಮಾತು: ರೋಹಿಣಿ-ಪರಮಶಿವಯ್ಯನವರಂಥ ದಂಪತಿ, ಪ್ರತಿ ಊರಿನಲ್ಲೂ ನೂರರ ಸಂಖ್ಯೆಯಲ್ಲಿ ಇದ್ದಾರೆ. ತಮಾಷೆಯೆಂದರೆ -ಮದುವೆ ಆಗುವವರೆಗೂ ಅವರಿಬ್ಬರ ಮಧ್ಯೆ ಅಂಥಾ ಪ್ರೀತಿ, ಅನ್ಯೋನ್ಯತೆ, ಬಾಂಧವ್ಯ, ಗುಟ್ಟು ಹಂಚಿಕೊಳ್ಳುವ ಆಪ್ತ ಮನೋಭಾವ... ಉಹುಂ, ಇದೇನೂ ಇರುವುದಿಲ್ಲ. ಮದುವೆ ಫಿಕ್ಸ್ ಆದ ನಂತರ ಹುಡುಗ ತುಂಬ ಸಂಭ್ರಮದಿಂದಲೇ ತನ್ನ ಗೆಳೆಯರ ಮುಂದೆ ಒಂದು ಫೋಟೋ ಇಟ್ಟು-'ಇವಳು ನಾನು ಮದುವೆಯಾಗುತ್ತಿರುವ ಹುಡುಗಿ ಕಣ್ರೋ' ಎಂದಿರುತ್ತಾನೆ. ಅದೇ ವಿಷಯವನ್ನು ಹುಡುಗಿ, ಒಂದು ಹಿಡಿ ಸಂಕೋಚದೊಂದಿಗೆ ಗೆಳತಿಯರ ಮುಂದೆ ಪ್ರಸ್ತಾಪಿಸಿರುತ್ತಾಳೆ. ನಿಜ ಹೇಳಬೇಕೆಂದರೆ, ಮದುವೆಯ ಮೊದಲ ವರ್ಷಗಳಲ್ಲಿ ಗಂಡ-ಹೆಂಡಿರ ನಡುವೆ ಪ್ರೀತಿಯ ಜೊತೆ ಜೊತೆಗೇ ಜಗಳ, ಅನುಮಾನ, ಸಣ್ಣದೊಂದು ಕುಸ್ತಿ ನಡೆದು ಹೋಗುತ್ತದೆ. ಆದರೆ ಒಂದೊಂದೇ ವರ್ಷ ಕಳೆದು, ವಯಸ್ಸು ಮಾಗುತ್ತಿದ್ದಂತೆ-ಅಯ್ಯೋ, ,ಅವಳಿಗೆ ನಾನಲ್ಲದೆ ಬೇರೆ ಯಾರು ದಿಕ್ಕು ಎಂಬ ಭಾವನೆ ಗಂಡನಿಗೂ; ನಾನು ಆಸ್ಪತ್ರೆ ಸೇರಿದ್ರೆ ಅಥವಾ ಏನಾದ್ರೂ ಹೆಚ್ಚು ಕಡಿಮೆಯಾಗಿ ಸತ್ತೇ ಹೋದರೆ ಮುಂದೆ ಯಜಮಾನರಿಗೆ ಊಟ ಕೊಡುವವರು ಯಾರು ಎಂಬ ಸಂಕಟದ ಭಾವ ಹೆಂಡತಿಗೆ ಬಂದು ಬಿಡುತ್ತದೆ. ಈ ವೇಳೆಗೆ, ಗಂಡನ ಊರೇ ತನ್ನ ವಂಶ ಬೆಳೆಯುವ ಜಾಗ ಎಂಬ ಮತ್ತೊಂದು ಖುಷಿಯೂ ಹೆಂಡತಿಯನ್ನು ಆವರಿಸಿಕೊಂಡಿರುತ್ತದೆ. ಮದುವೆಯಾದ ಸಂದರ್ಭದಲ್ಲಿ ಅಪರಿಚಿತಳಾಗಿ ಗಂಡನ ಮನೆಗೆ ಬರುವ ಹುಡುಗಿ, ನಂತರದ ಮೂರು ದಶಕಗಳಲ್ಲಿ ಗಂಡನನ್ನೇ ಓವರ್‌ಟೇಕ್ ಮಾಡಿ, ಅವನ ಕುಟುಂಬ, ಊರಿನಲ್ಲಿ ಗಟ್ಟಿ ಸ್ಥಾನ ಪಡೆದು ಬಿಟ್ಟಿರುತ್ತಾಳೆ.
'ಸಂಸಾರ' ಎಂಬ ಮೂರಕ್ಷರದ ಪದ ಅಪರಿಚಿತ ಗಂಡು ಹೆಣ್ಣಿನ ಮಧ್ಯೆ ಎಂಥ ಮಧುರ ಬಾಂಧವ್ಯವನ್ನು ಸೃಷ್ಟಿಸುತ್ತದಲ್ಲವೇ ಅಂದುಕೊಂಡಾಗಲೇ ರೋಹಿಣಿ-ಪರಮಶಿವಯ್ಯ ಹಾಗೂ ಅವರಂಥ ಸಾವಿರಾರು ಮಂದಿ ನೆನಪಾದರು. ಹಿಂದೆಯೇ ನೆನಪಾದದ್ದು ಚಿತ್ರಗೀತೆಯ ಈ ಸಾಲು: ಎಲ್ಲಿಯ ಎಲೆಯೋ ಎಲ್ಲಿಯ ಅಡಿಕೆಯೋ ಸುಣ್ಣವ ಸುತ್ತಲು ತಾಂಬೂಲ; ಎಲ್ಲಿಯ ಹುಡುಗನೋ , ಎಲ್ಲಿಯ ಹುಡುಗಿಯೋ ತಾಳಿಯ ಕಟ್ಟಲು ಸಂಸಾರ...
- ನಾನು ಪ್ರಣತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

