ಯಾರಿಗುಂಟು ಯಾರಿಗಿಲ್ಲ ಇಪ್ಪತ್ತು ಸ್ಥಾನಗಳು
ಲೋಕಸಭೆ ಚುನಾವಣೆಯ ಪ್ರಚಾರ ಸಮರದ ಆರಂಭದ ದಿನಗಳಲ್ಲಿ ರಾಜ್ಯದಲ್ಲಿ ...

ಲೋಕಸಭೆ ಚುನಾವಣೆಯ ಪ್ರಚಾರ ಸಮರದ ಆರಂಭದ ದಿನಗಳಲ್ಲಿ ರಾಜ್ಯದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದ್ದು ಮಾಧ್ಯಮ ಪ್ರಪಂಚದಲ್ಲಿ ನಡೆದ ಸಂದರ್ಶನಗಳೇ. ಬಹುತೇಕ ಸಂದರ್ಶನಗಳಲ್ಲಿ ಸರ್ವೇಸಾಮಾನ್ಯ ಎನ್ನುವಂತಹ ಪ್ರಶ್ನೆಗಳಿಗೂ ನಾಯಕರು ನೀಡಿದ ಉತ್ತರಗಳ ಸ್ವರೂಪ, ಈಗ ನಡೆಯುತ್ತಿರುವುದು ರಾಷ್ಟ್ರೀಯ ಚುನಾವಣೆಯೋ ಅಥವಾ ರಾಜ್ಯಮಟ್ಟದ ಚುನಾವಣೆಯೋ ಎನ್ನುವ ಗೊಂದಲವನ್ನು ಸೃಷ್ಟಿಸುವಂತಿದ್ದವು. ಎಲ್ಲದಕ್ಕೂ ತಮ್ಮ ಸ್ವಂತ ಚಿಂತೆಯೇ ಪ್ರಮುಖವಾಗಿತ್ತು.
ಆ ಮಾತಿಗೊಂದು ತಾಜಾ ಉದಾಹರಣೆ ಎಂದರೆ, ಕಾಂಗ್ರೆಸ್ - ಬಿಜೆಪಿಗಳೆರಡೂ ಪಕ್ಷಗಳ ಮುಖಂಡರು ತಮ್ಮ ಪಕ್ಷಕ್ಕೆ 28ರಲ್ಲಿ 20 ಸ್ಥಾನಗಳು ಖಚಿತ ಎನ್ನುವಂತೆ ಮಾತಾಡಿದ್ದು. ಅವರಲ್ಲಿ ಈ ವಿಶ್ವಾಸಕ್ಕೆ ಇದ್ದ ಕಾರಣಗಳು ಅವರ ಮಟ್ಟಿಗೆ ಸ್ಪಷ್ಟ.
ಕಾಂಗ್ರೆಸ್ಸಿನ ಪರವಾಗಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ॥ ಜಿ. ಪರಮೇಶ್ವರ ಅವರ ಜತೆಯಲ್ಲಿ ಚುನಾವಣೆಯ ನಿರ್ವಹಣೆಯ ಹೊಣೆ ಹೊತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಕಾರ ಹಿಂದಿನ ಸರ್ಕಾರದ (ಬಿಜೆಪಿ) ಅವ್ಯವಹಾರಗಳ ಪರಿಣಾಮವಾಗಿ, ವಿಧಾನ ಸಭೆ ಚುನಾವಣೆಯಲ್ಲಿ ಅದನ್ನು ತಿರಸ್ಕರಿಸಿದ್ದ ಜನ ಸಮುದಾಯಗಳಿಗೆ, ಈಗ ಮತ್ತೆ ಅದೇ ಪಕ್ಷಕ್ಕೆ ಬೆಂಬಲ ನೀಡುವ ಅಗತ್ಯ ಕಂಡುಬರುತ್ತಿಲ್ಲ. ಕಳೆದ ಒಂಬತ್ತು ತಿಂಗಳ ಕಾಂಗ್ರೆಸ್ ಸರ್ಕಾರದ ಆಡಳಿತದ ಬಹುತೇಕ ಅಂಶಗಳನ್ನು ಜನ ಮೆಚ್ಚಿದ್ದಾರೆ. ಒಂಬತ್ತೇ ತಿಂಗಳಲ್ಲಿ ಜನರ ನಿರ್ಧಾರ ಬದಲಾಗುವುದಕ್ಕೆ ಯಾವ ಕಾರಣವೂ ಇಲ್ಲ. ಹೆಚ್ಚು ಕಡಿಮೆ ಅದೇ ಮಾತನ್ನೇ ಇತರ ಕಾಂಗ್ರೆಸ್ ನಾಯಕರೂ ಹೇಳುತ್ತಾರೆ.
ಕೇಂದ್ರ ಮಂತ್ರಿಗಳಾದ ಖರ್ಗೆ, ಮೊಯಿಲಿ, ಮುನಿಯಪ್ಪ, ಅವರಂತಹವರು ಮಾತ್ರ ಕಳೆದ ಒಂದು ದಶಕದಲ್ಲಿ ಕೇಂದ್ರದಲ್ಲಿ ಯು.ಪಿ.ಎ. ಸಾಧನೆಗಳ ಪಟ್ಟಿಯನ್ನು ಮುಂದಿಡುವುದು. ಬಿಜೆಪಿಯ ಪರಿಸ್ಥಿತಿ ಅದಕ್ಕಿಂತ ಭಿನ್ನವಾಗೇನೂ ಇಲ್ಲ. ರಾಜ್ಯದ ನಾಯಕರ ಪ್ರಕಾರ, ವಿಧಾನಸಭೆ ಚುನಾವಣೆಯ ಸಮಯದಲ್ಲಿ ಬಿಜೆಪಿಯನ್ನು ವಿರೋಧಿಸಿದ್ದ ಯಡಿಯೂರಪ್ಪ ಅವರು ಈಗ ಹಿಂತಿರುಗಿರುವುದರಿಂದ ಆಗ ಕೈಬಿಟ್ಟು ಹೋಗಿದ್ದ ಮತಗಳು ಮತ್ತೆ ತಮಗೇ ಸಿಗುತ್ತವೆ ಎನ್ನುವ ಭಾವನೆಯಲ್ಲಿ ಮುಳುಗಿರುವುದಾಗಿ ತೋರಿಸಿಕೊಳ್ಳುತ್ತಾರೆ. ಜಾತ್ಯತೀತ ಜನತಾದಳದ ನಾಯಕರಾದ ದೇವೇಗೌಡರು, ಕುಮಾರಸ್ವಾಮಿ ಅವರ್ಯಾರೂ ಇಪ್ಪತ್ತು ಸ್ಥಾನಗಳನ್ನು ಗೆಲ್ಲುವ ಪ್ರಸ್ತಾಪ ಮಾಡಿಲ್ಲ. ಅವರ ಉದ್ದೇಶ ಇರುವುದು ಕನಿಷ್ಠಪಕ್ಷ ಹತ್ತು ಸ್ಥಾನಗಳನ್ನು ಗಳಿಸುವುದು. ಕಾಂಗ್ರೆಸ್ಸಿಗೆ ಇಪ್ಪತ್ತು ಸ್ಥಾನಗಳನ್ನು ಗಳಿಸಿಕೊಡುವ ಉಮೇದಿನಲ್ಲಿರುವ ಸಿದ್ದರಾಮಯ್ಯ ಪ್ರಬಲವಾಗಿ ನಂಬಿಕೊಂಡಿರುವುದು ಅಹಿಂದ ಮತಗಳನ್ನೇ.(ಅಲ್ಪ ಸಂಖ್ಯಾತ, ಹಿಂದುಳಿದ ದಲಿತ) ನಾಯಕರನ್ನು ಸ್ವಲ್ಪ ಅಂತರಂಗದ ಮಾತುಕತೆಗೆ ಸೆಳೆದರೆ ರಾಷ್ಟ್ರೀಯ ವಿಚಾರ, ಪಕ್ಷಗಳ ವಿಚಾರವನ್ನು ಕೈಬಿಟ್ಟು ಜಾತಿ ಲೆಕ್ಕದ ಗಂಟನ್ನೇ ಬಿಚ್ಚುತ್ತಾರೆ. ಕಾಂಗ್ರೆಸ್, ತನ್ನ ಬೆಂಬಲಕ್ಕಿವೆ ಎಂದು ಭಾವಿಸಿರುವ ಜಾತಿಗಳ ಜನಸಂಖ್ಯೆಯ ಲೆಕ್ಕ ಹಾಕಿದರೆ, ಬಿಜೆಪಿ ಮಾಡುವೂದೂ ಅದೇ ಕೆಲಸವನ್ನೇ.
1971ರ ಅನಂತರದ ನಾಲ್ಕೂ ದಶಕಗಳಲ್ಲಿ ರಾಜಕೀಯದಲ್ಲಿ ವೀರಶೈವ ಸಮುದಾಯದ ಹಿಡಿತದ ವಿರುದ್ಧ "ಇತರರು" ನಡೆಸಿದ ಹೋರಾಟದ ಪ್ರಯತ್ನ ಈಗಲೂ ಗಟ್ಟಿಯಾಗಿದೆ ಎಂದೇ ಕಾಂಗ್ರೆಸ್ಸಿನ ಭಾವನೆ. ಅಂತರಂಗದ ಮಾತಿನಲ್ಲಿ ಎಲ್ಲರೂ ಲೆಕ್ಕ ಹಾಕುವುದು ಜಾತಿಯ ಆಧರಿತ ಮತಗಳನ್ನೇ. ಕಾಂಗ್ರೆಸ್ಸಿಗರು ಪ್ರಸ್ತುತ ರಾಷ್ಟ್ರೀಯ ನಾಯಕತ್ವದ ಸಾಧನೆ - ಸೋಲಿನ ಪ್ರಸ್ತಾಪ ಮಾಡುವುದಿಲ್ಲ. ಆ ಸಾಧನೆ ದಶಕದ ಲೆಕ್ಕದಲ್ಲಿ ಸರಾಸರಿಯ ಮಟ್ಟದಲ್ಲಿರುವುದು ನಿಜ. ಆದರೆ ಅದನ್ನೆಲ್ಲ ವಿವರಿಸಿ ಹೇಳುವ ಅಗತ್ಯ ನಾಯಕರಿಗೆ ಕಂಡು ಬರುತ್ತಿಲ್ಲ.
ಕಾಂಗ್ರೆಸ್ - ಬಿಜೆಪಿ ವ್ಯತ್ಯಾಸ: ಇಲ್ಲಿ ಕಾಂಗ್ರೆಸ್ - ಬಿಜೆಪಿಗಳ ಪ್ರಮುಖ ಪ್ರಚಾರಕರ ನಡುವೆ ಕಂಡುಬರುತ್ತಿರುವ ಒಂದು ದೊಡ್ಡ ವ್ಯತ್ಯಾಸವೆಂದರೆ, ಕಾಂಗ್ರೆಸ್ಸಿಗರು ದೆಹಲಿ ನಾಯಕರ ಪ್ರಸ್ತಾಪವನ್ನು ಎತ್ತದೇ ಇರುವುದು ಹಾಗೂ ಬಿಜೆಪಿಯ ಜನ ನರೇಂದ್ರ ಮೋದಿ ಅವರ ಹೆಸರನ್ನು ಬಿಟ್ಟು ಬೇರೆ ವಿಚಾರವನ್ನು ಗಮನಿಸಲೂ ಸಿದ್ಧವಿಲ್ಲದೇ ಇರುವುದು. ನರೇಂದ್ರ ಮೋದಿ ಒಂದು ಅವತಾರದ ಸ್ವರೂಪದಲ್ಲಿ ಬಿಜೆಪಿಯ ರಾಜಕೀಯ ನಭೋಮಂಡಲದಲ್ಲಿ ಕಾಣಿಸಿಕೊಂಡಿರುವುದೇ ಆ ಪಕ್ಷಕ್ಕೆ ಈ ಚುನಾವಣೆಯಲ್ಲಿ ಕಾಯಕಲ್ಪದಂತೆಯೇ? ಇದೆ.
ಆದರೆ ಅದೆಷ್ಟು ಮಟ್ಟಿಗೆ ಚುನಾವಣೆಯಲ್ಲಿ ಮತಗಳ ಆಕರ್ಷಣೆಗೆ ನೆರವು ನೀಡಲಿದೆ ಎನ್ನುವುದನ್ನು ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ. ಜಾತ್ಯತೀತ ಜನತಾದಳದ ಬೆನ್ನೆಲುಬು ಒಕ್ಕಲಿಗ ಸಮುದಾಯದ ಬೆಂಬಲ. ಅದರಲ್ಲಿ ಅನುಮಾನವೇ ಇಲ್ಲ. ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ ಆ ಸಮುದಾಯದ ಸಂಖ್ಯಾಬಲ ವಿಪರೀತ. ಹೀಗಾಗಿ ಅಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಒಕ್ಕಲಿಗ ಅಭ್ಯರ್ಥಿಗಳನ್ನೇ ಆರಿಸಬೇಕು. ಒಕ್ಕಲಿಗ ಸಮುದಾಯದ ಅಖಂಡ ಬೆಂಬಲ ಇದ್ದರೂ ಜಾತ್ಯತೀತ ಜನತಾದಳ ಮೂರಕ್ಕಿಂತ ಹೆಚ್ಚಿನ ಸಂಖ್ಯೆಯ ಲೋಕಸಭೆ ಸ್ಥಾನಗಳನ್ನು ಪಡೆದಿರಲಿಲ್ಲ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ, ಅವರ ನಾಯಕತ್ವದ ಪಕ್ಷ ಹದಿನಾರು ಲೋಕಸಭೆ ಸ್ಥಾನಗಳನ್ನು ಗೆದ್ದಿದ್ದು ನಿಜ. ಆದರೆ ಆಗ ದೇವೇಗೌಡರಿಗೆ ಪಕ್ಷದ ಸರ್ವಶ್ರೇಷ್ಠ ಏಕೈಕ ನಾಯಕರ ಪಟ್ಟ ಸಿಕ್ಕಿರಲಿಲ್ಲ. ಅದೂ ಈಗಿನ ಚುನಾವಣೆಗೆ ಪ್ರಸ್ತುತವಾದ ಲೆಕ್ಕಾಚಾರ ಅಲ್ಲ. ಈ ಬಾರಿ ದೇವೇಗೌಡರೂ ಪಕ್ಷಕ್ಕೆ ಒಂದು ಜಾತಿಯ ಹಣೆಪಟ್ಟಿ ಅಥವಾ ಒಂದು ಕುಟುಂಬದ ಹಣೆಪಟ್ಟಿ ಅಂಟಿಕೊಳ್ಳದಂತೆ ನೋಡಿಕೊಳ್ಳಲು ಪ್ರಯತ್ನಿಸಿರುವುದೂ ನಿಜ.
ಆದರೆ ವಾಸ್ತವ ರಾಜಕೀಯದಲ್ಲಿ ಆ ನಿಲವನ್ನು ಕೈಬಿಡಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಲೂ ಬಹುದು. ರಾಮನಗರ ಕ್ಷೇತ್ರಕ್ಕೆ ಬೇರೆ ಯಾರೂ ಸಿಗದೇ ಹೋಗಬಹುದು. ಚಿಕ್ಕಬಳ್ಳಾಪುರಕ್ಕೆ, ಮೊಯಿಲಿ ಅವರ ವಿರುದ್ಧ ನಿಲ್ಲಲು ಕುಮಾರಸ್ವಾಮಿ ಅವರೇ 'ಅನಿವಾರ್ಯವಾಗಿ ಆಸಕ್ತರಾಗಿದ್ದಾರೆ" ಎನ್ನುವ ವದಂತಿಗಳ ಹಿನ್ನೆಲೆಯಲ್ಲಿ, ಈ ಭಾಗದ ರಾಜಕೀಯ ಮತ್ತೆ ಹಿಂದಿನ ಸ್ಥಿತಿಗೇ ಹೋಗಲೂ ಬಹುದು.
ರಾಜ್ಯದ ರಾಜಕೀಯದಲ್ಲಿ ಲಿಂಗಾಯಿತರು ಹೊಂದಾಣಿಕೆಯ ಕೂಟ ರಾಜಕೀಯಕ್ಕೆ ಹೊಂದಿಕೊಳ್ಳುವಷ್ಟು ಸುಲಭವಾಗಿ, ಒಕ್ಕಲಿಗರು ಒಂದು ಜನಾಂಗವಾಗಿ ಹೊಂದಿಕೊಳ್ಳಲು ಮಾನಸಿಕವಾಗಿ ಇನ್ನೂ ಸಿದ್ಧರಾಗಿಲ್ಲ.
ಆದ್ದರಿಂದ ರಾಜಕೀಯ ಪರಿಸ್ಥಿತಿಯಲ್ಲಿ ವಿಪರೀತವಾದ ಬದಲಾವಣೆಯನ್ನು ನಿರೀಕ್ಷಿಸುವುದು ಕಷ್ಟ. ವಿಧಾನಸಭೆ ಚುನಾವಣೆಯಲ್ಲಿ ಹಿಂದಿನ ಬಿಜೆಪಿ ಕೋಟೆಗಳು, ಉತ್ತರ ಕರ್ನಾಟಕದಲ್ಲಿ ಬಿದ್ದು ಹೋದವು. ಅದೇ ಪರಿಸ್ಥಿತಿ ಈ ಬಾರಿಯೂ ಮತ್ತೆ ಬರುವ ಆಸೆ ಕಾಂಗ್ರೆಸ್ಸಿನದ್ದು. ರಾಜಕೀಯದಲ್ಲಿ ಏಳೆಂಟು ತಿಂಗಳ ಸಮಯದಲ್ಲಿ ಏನು ಬೇಕಾದರೂ ಆಗಬಹುದು.
ಪ್ರಾದೇಶಿಕ ರಾಜಕೀಯ: ಪ್ರಾದೇಶಿಕವಾಗಿ, ರಾಜ್ಯದ ರಾಜಕೀಯ ಸ್ವರೂಪದಲ್ಲಿ ಹಲವು ಬದಲಾವಣೆಗಳಾಗಿರುವುದು ಚುನಾವಣೆ ಪ್ರಚಾರ ಸಮರದ ಮೊದಲ ದಿನಗಳಲ್ಲೇ ಕಂಡುಬಂದಿದೆ. ಮಂಗಳೂರು - ಉಡುಪಿಯ ಕರಾವಳಿ ಹಾಗೂ ಘಟ್ಟದ ಪ್ರದೇಶದಲ್ಲಿ ಬಿಜೆಪಿಯ ಕೆಲವು ನಾಯಕರ ವಿಚಾರದಲ್ಲಿ ಜನಸಾಮಾನ್ಯ ವರ್ಗಗಳಿಗೆ ಬೇಸರ ಬಂದಿದ್ದು ನಿಜ. ಅದನ್ನು ಸರಿಪಡಿಸುವ ಪ್ರಯತ್ನವೂ ನಡೆದಿದೆ. ಆ ಪ್ರಯತ್ನ ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸವನ್ನು ಬಿಜೆಪಿಯ ನಾಯಕರು ಇಟ್ಟುಕೊಂಡಿದ್ದಾರೆ. ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಬಿಜೆಪಿಯ ಅಭ್ಯರ್ಥಿಗಳು ವಿಧಾನಸಭೆ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ ಹೆಚ್ಚು ಸಂಖ್ಯೆಯ ಮತಗಳನ್ನು ಗಳಿಸಲೇಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಯಡಿಯೂರಪ್ಪ ಅವರ ಪ್ರಚಾರ ನರೇಂದ್ರ ಮೋದಿ ಅವರ ಪರವಾಗಿ ಕೆಲವು ಕಡೆ ಕಂಡು ಬಂದಿದೆ ಎನ್ನಲಾಗಿರುವ ಅಲೆಗಳ ಮೇಲೇರಿ ಬಿಜೆಪಿ ಅಭ್ಯರ್ಥಿಗಳು ಯಶಸ್ವಿಯಾಗಬೇಕು. ಮಧ್ಯ ಕರ್ನಾಟಕದಲ್ಲಿ ಬಿ. ಶ್ರೀರಾಮುಲು ಅವರ ಪ್ರಭಾವ ಕೆಲಸ ಮಾಡಬೇಕಷ್ಟೇ.
ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿನ ವಿಧಾನ ಮಂಡಲದ ಅಧಿವೇಶನಗಳಲ್ಲಿ ಪ್ರತಿಪಕ್ಷವಾಗಿ ಪರಿಣಾಮಕಾರಿಯಾಗಿ ಬಿಜೆಪಿ ಹೇಳಿಕೊಳ್ಳುವಂತಹ ರೀತಿಯಲ್ಲಿ ಕೆಲಸ ಮಾಡಲಿಲ್ಲ. ಪ್ರಾಯಶಃ ವಿಧಾನಸಭೆ ಚುನಾವಣೆಯ ಸೋಲಿನ ಗುಂಗು ಹಾಗೂ ಹಿಂದೆ ಅಧಿಕಾರದಲ್ಲಿದ್ದಾಗ ಮಾಡಿದ ತಪ್ಪುಗಳು ಬಿಜೆಪಿ ಶಾಸಕರ ಉತ್ಸಾಹವನ್ನು ಅದುಮಿಟ್ಟಿರಬೇಕು.
ಮಾನಸಿಕವಾಗಿ, ಈಗ ಆ ಪರಿಸ್ಥಿತಿ ಸುಧಾರಿಸಿರುವಂತಿದೆ. ಬಿಜೆಪಿ ನಾಯಕರು ಮಾತನಾಡುವ ಶೈಲಿಯಲ್ಲಿ ಬದಲಾವಣೆ ಕಂಡುಬಂದಿದೆ. ಆದರೆ ಪ್ರಚಾರ ಸಮರದಲ್ಲಿ ಆ ಶೈಲಿ ಎದ್ದು ಕಾಣುವಂತೆ ಆಗಬೇಕು.
ಪ್ರಣಾಳಿಕೆ ವಿಚಾರ: ಈಗ ಯಾರೂ ಚುನಾವಣೆ ಪ್ರಣಾಳಿಕೆಯ ಪ್ರಸ್ತಾಪವನ್ನೇ ಮಾಡುತ್ತಿಲ್ಲ. ಕಾಂಗ್ರೆಸ್ - ಬಿಜೆಪಿಗಳೆರಡೂ ಪ್ರಣಾಳಿಕೆಗೆ ಸಂಬಂಧಿಸಿದಂತೆ ಸಮಿತಿಗಳನ್ನು ರಚಿಸಿ, ಉಳಿದ ಕೆಲಸವನ್ನು ಹೊರಗುತ್ತಿಗೆಗೆ ನೀಡಿವೆ ಎನ್ನುವ ವರದಿಗಳೂ ಪ್ರಕಟವಾಗಿವೆ. ಅಂತಿಮ ಹಂತದಲ್ಲಿ ಬಳಸಿ, ಬಳಸಿ ಸವಕಲಾಗಿರುವ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯ ವಿತರಣೆಯಂತಹ ವಿಷಯಗಳಿಗೇ ಭಾಷಣಗಳಲ್ಲಿ ಪ್ರಮುಖ ಸ್ಥಾನ ಸಿಗುವುದು. ಈಗಾಗಲೇ ಭ್ರಷ್ಟಾಚಾರದ ಪ್ರಸ್ತಾಪದ ಬಿಸಿ ದೇಶದ ಎಲ್ಲ ಕಡೆ ಕಡಿಮೆಯಾಗಿದೆ. ಬುಧವಾರವಷ್ಟೇ ನಾಮಪತ್ರಗಳ ಸಲ್ಲಿಕೆ ಆರಂಭವಾಗಿರುವುದು. ವಾರಾಂತ್ಯದ ವೇಳೆಗೆ ಪ್ರಚಾರ ಸಮರದ ಸ್ವರೂಪ ಸ್ಪಷ್ಟವಾಗಬಹುದು. ಮುಂದಿನ ವಾರದ ವೇಳೆಗೆ ಕಾಂಗ್ರೆಸ್ಸಿನಲ್ಲಿ ಟಿಕೆಟ್ ಸಿಗದೇ ಕುಪಿತರಾಗಿರುವ ಮಾಜಿ ಕೇಂದ್ರ ಮಂತ್ರಿ ಜಾಫರ್‌ಷರೀಫ್ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಬೇಡವೋ ಎನ್ನುವ ತೂಗುಯ್ಯಾಲೆಯ ಅವಸ್ಥೆಯಲ್ಲಿರುವ ಜಾತ್ಯತೀತ ಜನತಾದಳದ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಅವರ ನಿರ್ಧಾರವೂ ಚುನಾವಣೆಯ ಮೇಲೆ ಬೀರಬಹುದಾದ ಪರಿಣಾಮದ ಸ್ವರೂಪವೂ ಗೊತ್ತಾಗಬಹುದು. ಈ ಪರ್ವಕಾಲದಲ್ಲಿ ಜನಸಾಮಾನ್ಯರ ವರ್ಗಗಳ ಮೌನ ನಿಜವಾಗಲೂ ಅರ್ಥವಾಗುತ್ತಿಲ್ಲ.
ಕಿಡಿಗೇಡಿತನ: ಒಂದೇ ವಾರದಲ್ಲಿ ಭಾರತೀಯ ಜನತಾ ಪಾರ್ಟಿಯ ಅತ್ಯುನ್ನತ ಮಟ್ಟದ ನಾಯಕತ್ವದ ಸ್ವರೂಪವೇ ಬದಲಾಗಿರುವುದು ನಿಜವೇ? ಹೊಸ ತ್ರಿಮೂರ್ತಿಗಳಾದ ನರೇಂದ್ರ ಮೋದಿ, ರಾಜನಾಥ ಸಿಂಗ್, ಅರುಣ ಜೈಟ್ಲಿ ಅವರದ್ದೇ ಅಂತಿಮ ನಿರ್ಧಾರವೇ? ಆಡ್ವಾಣಿ ಅವರಂತಹ ನಾಯಕರೂ, ಎಲ್ಲಿ ಸ್ಪರ್ಧಿಸಬೇಕೆನ್ನುವುದು ವಿವಾದದ ವಿಷಯವಾಗಬೇಕೆ?
- ಸತ್ಯ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


