ಮಕ್ಕಳೇ ಬೇಡ, ಎಂದವಳ ಮಡಿಲಲ್ಲಿ ಸಾವಿರ ಮಕ್ಕಳು!
ಬೀದಿಯಲ್ಲಿ ಚಿಂದಿ ಆಯುವ, ಭಿಕ್ಷೆ ಬೇಡುವ, ಉಡಾಫೆಯಿಂದ ಅಲೆದಾಡುವ ಮಕ್ಕಳನ್ನು...

ಬೀದಿಯಲ್ಲಿ ಚಿಂದಿ ಆಯುವ, ಭಿಕ್ಷೆ ಬೇಡುವ, ಉಡಾಫೆಯಿಂದ ಅಲೆದಾಡುವ ಮಕ್ಕಳನ್ನು ನಾವೆಲ್ಲ ದಿನವೂ ನೋಡುತ್ತೇವೆ. ಅವರತ್ತ ಕನಿಕರದ ದೃಷ್ಟಿ ಬೀರಿ 'ಛೆ' ಎಂದು ಉದ್ಗರಿಸುತ್ತೇವೆ. ಭಿಕ್ಷೆ ನೀಡಿ ಅಥವಾ ಗದರಿಸಿ, ಅವರನ್ನು ಸಾಗಹಾಕುತ್ತೇವೆ. ಆನಂತರದಲ್ಲಿ- 'ಎಲ್ಲವೂ ಅವರವರ ಹಣೆಬರಹ. ನಾವೇನೂ ಮಾಡೋಕಾಗಲ್ಲ' ಎಂದು ವೇದಾಂತದ ಮಾತಾಡಿ ಸುಮ್ಮನಾಗುತ್ತೇವೆ. ವಾಸ್ತವ ಹೀಗಿರುವಾಗ, ರೀತಾ ಪಣಿಕ್ಕರ್ ಎಂಬ ಕೇರಳದ ಹೆಣ್ಣು ಮಗಳೊಬ್ಬಳು, ಬೀದಿ ಬದಿಯ ಮಕ್ಕಳಿಗೆ ಭವಿಷ್ಯ ರೂಪಿಸುವುದೇ ನನ್ನ ಗುರಿ ಎಂದು ಘೋಷಿಸಿದ್ದಾಳೆ. ಬೀದಿ ಮಕ್ಕಳ ಕ್ಷೇಮಾಭಿವೃದ್ಧಿಗೆಂದೇ ಬಟರ್‌ಫ್ಲೈಸ್ ಎಂಬ ಸಂಘಟನೆಯನ್ನು ಹುಟ್ಟು ಹಾಕಿದ್ದಾಳೆ. ಆ ಸಂಘಟನೆಗೆ ಈಗ ರಜತವರ್ಷದ ಸಂಭ್ರಮ! ಈ 25 ವರ್ಷಗಳಲ್ಲಿ, ಬೀದಿ ಬದಿಯ ಸಾವಿರಕ್ಕೂ ಹೆಚ್ಚು ಮಕ್ಕಳ ಭವಿಷ್ಯ ರೂಪಿಸಿರುವುದು ರೀತಾ ಅವರ ಹೆಚ್ಚುಗಾರಿಕೆ.
ಇದಿಷ್ಟು ವಿವರಣೆ ಓದಿದವರಿಗೆ-ರೀತಾ ಪಣಿಕ್ಕರ್ ಯಾರು? ಅವರ ಹಿನ್ನಲೆಯೇನು? ಬೀದಿ ಬದಿಯ ಮಕ್ಕಳ ಯೋಗಕ್ಷೇವುದ ಬಗ್ಗೆ ಯೋಚಿಸುವಂತೆ ಅವರಿಗೆ ಪ್ರೇರಣೆ ನೀಡಿದ ಸಂದರ್ಭ ಯಾವುದು? ಇಂಥದೊಂದು ಕೆಲಸಕ್ಕೆ ಮುಂದಾದಾಗ, ಅವರ ಕುಟುಂಬದವರು ಆಕ್ಷೇಪಿಸಿಲಿಲ್ಲವಾ? ನೂರಲ್ಲ, ಇನ್ನೂರಲ್ಲ, ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಸಾಕುವುದು ಅವರಿಗೆ ಕಷ್ಟವಾಗಲಿಲ್ಲವಾ? ಸ್ವಂತವಲ್ಲದ, ಬಂಧುಗಳಲ್ಲದ, ಪರಿಚಯವೂ ಇಲ್ಲದ ಬೀದಿ ಬದಿಯ ಮಕ್ಕಳನ್ನು ಸಾಕಿದ್ದರಿಂದ ಈಕೆಗೆ ಸಿಕ್ಕಿದ್ದಾದರೂ ಏನು ಎಂಬಂಥ ಪ್ರಶ್ನೆಗಳು ಕಾಡುವುದು ಸಹಜ. ಅದಕ್ಕೆಲ್ಲ ಉತ್ತರ ರೂಪದಲ್ಲಿ, ರೀತಾ ಪಣಿಕ್ಕರ್ ಅವರ ಯಶೋಗಾಥೆಯನ್ನು ಹೀಗೆ ದಾಖಲಿಸಬಹುದು.
ಕೇರಳ ರಾಜ್ಯ, ಕೊಲ್ಲಂ ಜಿಲ್ಲೆಯ ಪಾರಪಳ್ಳಿ ಮನೆತನದ ಅಚ್ಯುತನ್ ಪಣಿಕ್ಕರ್ ಹಾಗೂ ರುಕ್ಮಿಣಿ ದಂಪತಿಯ ಮಗಳು ರೀತಾ ಪಣಿಕ್ಕರ್. ಅಚ್ಯುತನ್ ಅವರಿಗೆ ಭಾರತೀಯ ವಾಯುಸೇನೆಯಲ್ಲಿ ನೌಕರಿಯಿತ್ತು. ಹಾಗಾಗಿ, ಅಪ್ಪನಿಗೆ ವರ್ಗವಾದಂತೆಲ್ಲ ಅವರೊಂದಿಗೇ ಹೋಗುವುದು ರೀತಾಗೂ ಅಭ್ಯಾಸವಾಗಿತ್ತು. ಇಂಗ್ಲಿಷ್‌ನಲ್ಲಿ ಎಂ.ಎ. ಮುಗಿಸಿದ ನಂತರ ಪತ್ರಕರ್ತೆಯಾಗಬೇಕು ಅಥವಾ ಬರಹಗಾರ್ತಿಯಾಗಿ ಬದುಕು ಸಾಗಿಸಬೇಕು ಎಂಬುದು ರೀತಾ ಅವರ ನಿರ್ಧಾರವಾಗಿತ್ತು. ಎಂ.ಎ. ಮುಗಿಯುತ್ತಿದ್ದಂತೆಯೇ, ತಮ್ಮ ಸಮೀಪದ ಬಂಧು ಸುಧಾನ ಎಂಬಾಕೆಯನ್ನು ಭೇಟಿಯಾದರು ರೀತಾ. ಆ ಕ್ಷಣದಿಂದಲೇ, ಅವರ ಹಳೆಯ ನಿರ್ಧಾರಗಳೆಲ್ಲ ದಿಢೀರನೆ ಬದಲಾಗಿ ಹೋಗುವಂಥ ಸಂದರ್ಭಗಳು ಎದುರಾದವು. ಹೇಗೆಂದರೆ, ಹತ್ತಿರದ ಬಂಧುವಾಗಿದ್ದ ಸುಧಾನ, ತನ್ನ ಹುಟ್ಟೂರು ಪಾರಪಳ್ಳಿಯಲ್ಲಿ ಸಂಸ್ಕೃತ ಶಾಲೆಯೊಂದನ್ನು ಆರಂಭಿಸಿದ್ದರು. ಕೇರಳ ರಾಜ್ಯದ ವಿವಿಧ ಭಾಗಗಳಲ್ಲಿರುವ ಆದಿವಾಸಿ ಮಕ್ಕಳಿಗೆ ಅಲ್ಲಿ ಉಚಿತ ಶಿಕ್ಷಣ ಹಾಗೂ ವಸತಿಯನ್ನು ಒದಗಿಸಲಾಗಿತ್ತು. ಸುಧಾನ ಅವರೊಂದಿಗೆ ತಿಂಗಳುಗಳ ಕಾಲ ಉಳಿದಿದ್ದರಿಂದ, ರೀತಾ ಅವರ ಮನಸ್ಸೂ ಸಮಾಜ ಸೇವೆಯತ್ತ ವಾಲಿಕೊಂಡಿತು. ಹೀಗಿರುವಾಗಲೇ, ಹೈದರಾಬಾದ್‌ನಲ್ಲಿ ನಡೆದ ಸೆಮಿನಾರ್‌ನಲ್ಲಿ ಭಾಗವಹಿಸುವ ಅವಕಾಶವೂ ಸಿಕ್ಕಿತು. ಅಲ್ಲಿ ಡಾ. ಅಲೆಕ್ಸಾಂಡರ್ ಹಾಗೂ ಡಾ. ತಿಮ್ಮಯ್ಯ ಎಂಬ ಹಿರಿಯರು ರೀತಾ ಅವರನ್ನು ಭೇಟಿಯಾದರು. ಯಾವ ಊರು? ಏನು ಮಾಡ್ತಾ ಇದ್ದೀರಿ? ಭವಿಷ್ಯದಲ್ಲಿ ಏನಾಗಬೇಕು ಎಂದು ನಿರ್ಧರಿಸಿದ್ದೀರಿ ಎಂದು ಪ್ರಶ್ನಿಸಿದರು. ಪತ್ರಕರ್ತೆ ಆಗಬೇಕು, ಇಲ್ಲಾಂದ್ರೆ ನಾವೆಲಿಸ್ಟ್ ಆಗಬೇಕು ಅಂದ್ಕೊಂಡಿದೀನಿ ಎಂದು ರೀತಾ ಉತ್ತರಿಸಿದಾಗ ಆ ಹಿರಿಯರು- 'ನೋಡಮ್ಮಾ, ಮನುಷ್ಯನಿಗೆ ಇರೋದು ಒಂದೇ ಜನ್ಮ. ಬೇರೆಯವರೆಲ್ಲಾ ಸಾಗುವ ದಾರಿಯಲ್ಲೇ ನೀನೂ ಯಾಕೆ ಹೋಗಬೇಕು? ಸಮಾಜ ಸೇವೆಯ ಬಗ್ಗೆ ನೀವ್ಯಾಕೆ ಯೋಚನೆ ಮಾಡಬಾರದು?' ಅಂದರಂತೆ. ಅಷ್ಟಕ್ಕೇ ಸುಮ್ಮನಾಗದೆ, ಹೈದರಾಬಾದ್‌ನ ಟಾಟಾ ಇನ್‌ಸ್ಟಿಟ್ಯೂಟ್‌ನಲ್ಲಿ, ಸೋಷಿಯಲ್ ಸೈನ್ಸ್ ವಿಭಾಗದಲ್ಲಿ ಪಿ.ಜಿ. ಡಿಪ್ಲೋಮಾ ಮಾಡುವಂತೆಯೂ ಸೂಚಿಸಿದರಂತೆ.
ಆ ಸಂದರ್ಭವನ್ನು ನೆನಪಿಸಿಕೊಂಡು ರೀತಾ ಹೇಳುತ್ತಾರೆ: 'ಡಾ. ಅಲೆಕ್ಸಾಂಡರ್ ಹಾಗೂ ಡಾ. ತಿಮ್ಮಯ್ಯ ಅವರನ್ನು ಭೇಟಿಯಾದ ನಂತರ, ಭವಿಷ್ಯದ ಬಗ್ಗೆ ನನಗಿದ್ದ ಕಲ್ಪನೆಗಳೆಲ್ಲ ಬದಲಾಗಿ ಹೋದವು. ಪಿ.ಜಿ. ಮುಗಿದ ನಂತರ ಮಧ್ಯಪ್ರದೇಶ, ಮೇಘಾಲಯ, ಒಡಿಶಾ, ಬಿಹಾರ ಮೊದಲಾದ ರಾಜ್ಯಗಳಲ್ಲಿ ಸುತ್ತಾಡಿದೆ. ಆಗ, ಬಡವರ ಬದುಕಿನ ಸಂಕಟವನ್ನು ಪ್ರತ್ಯಕ್ಷವಾಗಿ ಕಂಡೆ. ಆಮೇಲೆ, ಟಾಟಾ ಇನ್‌ಸ್ಟಿಟ್ಯೂಟ್‌ನಲ್ಲಿಯೇ ಉಪನ್ಯಾಸಕಿಯ ಕೆಲಸ ಸಿಕ್ಕಿತು. ಕೆಲವು ದಿನಗಳ ನಂತರ - 'ಸಮಾಜ ಸೇವೆ' ಅಂದರೆ ಪಾಠ ಮಾಡುವುದಲ್ಲ, ಒಂದು ಸೇವೆಗೆ ನಮ್ಮನ್ನೇ ಅರ್ಪಿಸಿಕೊಳ್ಳುವುದು ಅನ್ನಿಸಿತು. ತಕ್ಷಣವೇ ಕೆಲಸಕ್ಕೆ ರಾಜೀನಾಮೆ ನೀಡಿದೆ. ಮುಂದೇನು ಎಂದು ಯೋಚಿಸುತ್ತಲೇ ಮುಂಬಯಿಗೆ ಬಂದೆ. ಅಲ್ಲಿ ಪರಿಚಯವಾದವರೇ ಜೆರ್ರಿ ಪಿಂಟೋ. ಅವರು, ಕೇಂದ್ರ ಸರ್ಕಾರದ ಕಚೇರಿಯೊಂದರಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ನಮ್ಮಿಬ್ಬರ ಆಲೋಚನೆಗಳೂ ಒಂದೇ ರೀತಿ ಇದ್ದವು. ಹಾಗಾಗಿ, ಪರಿಚಯ ಕೆಲವೇ ದಿನಗಳಲ್ಲಿ ಪ್ರೇಮಕ್ಕೆ ತಿರುಗಿ ಮದುವೆಯಲ್ಲಿ ಕೊನೆಗೊಂಡಿತು. ಮುಂಬಯಿಯಲ್ಲಿ, ಲೋಕಲ್ ಟ್ರೈನ್‌ನಲ್ಲಿ ಪ್ರಯಾಣಿಸುವಾಗ ಭಿಕ್ಷೆ ಬೇಡುತ್ತಾ, ಚಿಕ್ಕ ಪುಟ್ಟ ವ್ಯಾಪಾರ ಮಾಡುತ್ತಾ ಓಡಾಡುವ ಹಲವು ಮಕ್ಕಳು ಫ್ರೆಂಡ್ಸ್ ಆದರು. ಓದಬೇಕಾದ ವಯಸ್ಸಿನಲ್ಲಿ ಯಾಕೆ ಕೆಲಸಕ್ಕೆ ಬಂದಿರಿ ಎಂದು ಪ್ರಶ್ನಿಸಿದಾಗ-'ಸಾಕುವವರೇ ಇಲ್ಲವೆಂದ ಮೇಲೆ ನಮ್ಮನ್ನು ಓದಿಸುವವರು ಯಾರು ಮೇಡಂ?' ಎಂಬ ಪ್ರಶ್ನೆಯೇ ಉತ್ತರವಾಗಿ ಬಂತು. ಮುಂದಿನ ದಿನಗಳಲ್ಲಿ ಬೀದಿ ಮಕ್ಕಳ ಏಳಿಗೆಗಾಗಿ ಶ್ರಮಿಸಬೇಕು ಎಂದು ನಾನು ಆಗಲೇ ನಿರ್ಧರಿಸಿದೆ.
ಹೀಗಿರುವಾಗಲೇ ನನ್ನ ಗಂಡನಿಗೆ, ದೆಹಲಿಗೆ ವರ್ಗವಾಯಿತು. ಕೆಲವು ದಿನಗಳು ಅಲೆದಾಡಿದಾಗ, ದಿಲ್ಲಿಯಲ್ಲೂ ಅನಾಥ ಪ್ರಜ್ಞೆಯಿಂದ ನರಳುವ ನೂರಾರು ಬೀದಿ ಬದಿಯ ಮಕ್ಕಳು ಕಾಣಿಸಿದರು. ಸಮಾಜಸೇವೆ ಮಾಡಬೇಕೆಂಬ ನನ್ನ ನಿರ್ಧಾರ ಮತ್ತಷ್ಟು ಗಟ್ಟಿಯಾಗಿದ್ದು ಇದೇ ಸಂದರ್ಭದಲ್ಲಿ. ಗಂಡನೊಂದಿಗೆ ಎಲ್ಲವನ್ನೂ ಹೇಳಿಕೊಂಡೆ. 'ಮಕ್ಕಳು ಒಂದರ್ಥದಲ್ಲಿ ಚಿಟ್ಟೆಗಳಿದ್ದ ಹಾಗೆ. ಅವರ ಮನಸ್ಸು ಸದಾ ಚಿಟ್ಟೆಯ ಥರ ಅತ್ತಿಂದಿತ್ತ, ಇತ್ತಿಂದತ್ತ ಅಲೆದಾಡುತ್ತಿರುತ್ತದೆ. ಅಂಥ ಮಕ್ಕಳಿಗೆ ಅನಾಥ ಪ್ರಜ್ಞೆ ಕಾಡದಂತೆ ಮಾಡಬೇಕೆಂಬುದೇ ನನ್ನಾಸೆ. ಇಂಥದೊಂದು ಸಮಾಜ ಸೇವೆಯೊಂದಿಗೇ ನನ್ನ ಬದುಕು ಮುಗಿದು ಹೋಗಲಿ. ಮುಂದೆ, ನನಗೆ ಮಕ್ಕಳಾದರೆ, ಸ್ವಂತ ಮಕ್ಕಳ ಮೇಲಿನ ಮೋಹದಲ್ಲಿ ಈ ಸಮಾಜ ಸೇವೆಯ ಬಗ್ಗೆ ನಿರಾಸಕ್ತಿ ಉಂಟಾಗಬಹುದು. ಹಾಗಾಗಿ, ನಮಗೆ ಸ್ವಂತ ಮಕ್ಕಳೇ ಬೇಡ. ಬೀದಿ ಬದಿಯ ಮಕ್ಕಳನ್ನೇ ಸ್ವಂತ ಮಕ್ಕಳೆಂದು ಭಾವಿಸುತ್ತೇನೆ. ದಯವಿಟ್ಟು ನನ್ನ ನಿರ್ಧಾರವನ್ನು ಒಪ್ಪಿಕೊಳ್ಳಿ. ನನ್ನ ಸಂಘಟನೆಗೆ ಬಟರ್‌ಪ್ಲೈಸ್ ಎಂದು ಹೆಸರಿಡಲು ನಿರ್ಧರಿಸಿದ್ದೇನೆ. ನನ್ನನ್ನು ಬೆಂಬಲಿಸಿ' ಎಂದು ಪ್ರಾರ್ಥಿಸಿದೆ. ನನ್ನ ಗಂಡನದು ಅದೆಂಥ ವಿಶಾಲ ಮನಸ್ಸು ಎಂದರೆ, ಆತ ತಕ್ಷಣವೇ ನನ್ನ ನಿರ್ಧಾರವನ್ನು ಬೆಂಬಲಿಸಿದರು. ಸ್ವಲ್ಪ ಹಣ ಕೊಟ್ಟು, ಈಗಿನಿಂದಲೇ ಕೆಲಸ ಆರಂಭಿಸು' ಅಂದರು. ಆ ಕ್ಷಣದಿಂದಲೇ ನನ್ನ ಕಲ್ಪನೆಯ ಬಟರ್‌ಫ್ಲೈಸ್ ಎಂಬ ಚಿಟ್ಟೆಗೆ ರೆಕ್ಕೆ ಬಂತು.
1989ರಲ್ಲಿ ಬಟರ್‌ಫ್ಲೈಸ್ ಹೆಸರಿನ ಸಂಘಟನೆ ಆರಂಭಿಸಿದ್ದಾಯಿತು. ಕೆಲವೇ ದಿನಗಳಲ್ಲಿ ಹತ್ತಕ್ಕೂ ಹೆಚ್ಚು ಬೀದಿ ಬದಿಯ ಮಕ್ಕಳನ್ನು ಫ್ರೆಂಡ್ಸ್ ಮಾಡಿಕೊಂಡಿದ್ದೂ ಆಯಿತು. ಅವರಿಗೆ ಶಿಕ್ಷಣ ಕೊಡಬೇಕಲ್ಲ? ಈ ಕೆಲಸಕ್ಕೆ ಸಹಾಯಕರು ಬೇಕು ಅನ್ನಿಸಿದಾಗ, ದೆಹಲಿಯಲ್ಲಿ ನಮ್ಮ ಮನೆ ಕೆಲಸಕ್ಕೆ ಬರುತ್ತಿದ್ದ ಹೆಂಗಸಿನ ಬಂಧು, ಲಕ್ಷ್ಮಿ ಎಂಬಾಕೆ ಜೊತೆಯಾದರು. ಪೆನ್ನು, ಪೆನ್ಸಿಲ್, ಬೋರ್ಡ್, ನೋಟ್‌ಬುಕ್ ಹಿಡಿದುಕೊಂಡು ನಾವಿಬ್ಬರೂ ಪಾರ್ಕ್‌ಗೆ ಹೋದೆವು. ಪಾರ್ಕ್‌ನಲ್ಲಿ, ಬೀದಿ ಬದಿಯ ಮಕ್ಕಳಿಗೆ ಪಾಠ ಹೇಳುವುದು ನಮ್ಮ ಉದ್ದೇಶವಾಗಿತ್ತು. ನಮ್ಮ ಕೆಲಸವನ್ನು ಪಾರ್ಕಿಗೆ ಬಂದ ಜನ ಕುತೂಹಲದಿಂದ ನೋಡುತ್ತಿದ್ದರು. ಗುಸುಗುಸು ಮಾತಾಡಲು ಶುರುವಿಟ್ಟರು. ಆಗ, ಪಾರ್ಕ್‌ನಲ್ಲಿದ್ದ ವಾಚ್‌ಮನ್, ಸರಸರನೆ ಹೊರಗೆ ಹೋಗಿ, ಒಂದು ಬೋರ್ಡ್ ಬರೆಸಿಕೊಂಡು ಬಂದು ಅಲ್ಲಿ ನೇತು ಹಾಕಿದ. ಅದರಲ್ಲಿ ಹೀಗೆ ಬರೆಯಲಾಗಿತ್ತು: ಮಕ್ಕಳು ಪಾಠ ಕಲಿಯುತ್ತಿದ್ದಾರೆ. ನಿಶ್ಯಬ್ದದಿಂದ ವರ್ತಿಸಿ...'
ಬೀದಿ ಬದಿಯ ಮಕ್ಕಳ ಮನಸ್ಸು ಗೆಲ್ಲುವುದು ಬಹಳ ಕಷ್ಟ. ಐಡೆಂಟಿಟಿ ಕ್ರೈಸಿಸ್‌ನಿಂದ ಕೀಳರಿಮೆ ಅನುಭವಿಸುವ ಆ ಮಕ್ಕಳು, ಬಾಲ್ಯದಲ್ಲಿಯೇ ದುಡಿಮೆಗೆ ನಿಲ್ಲುವುದರಿಂದ, ಅವರಿಗೆ 'ದುಡ್ಡಿನ' ರುಚಿ ಹತ್ತಿ ಬಿಟ್ಟಿರುತ್ತದೆ. ಆ ಕಾರಣದಿಂದ ಪಾಠ ಕಲಿಯಲು ಬರುತ್ತಿದ್ದ ಮಕ್ಕಳು ಇದ್ದಕ್ಕಿದ್ದಂತೆ ಮನಸ್ಸು ಬದಲಿಸಿ ಎದ್ದು ಹೋಗುತ್ತಿದ್ದ ಸಂದರ್ಭಗಳೂ ಇದ್ದವು. ಆ ಮಕ್ಕಳಿಗೆ ಬುದ್ಧಿ ಹೇಳಿ ಅವರನ್ನು ಸಂಭಾಳಿಸುವುದರೊಳಗೆ ಸುಸ್ತಾಗಿ ಹೋಗುತ್ತಿತ್ತು. ಆದರೆ, ಇದೆಲ್ಲಾ ಕಷ್ಟದ ಕೆಲಸ ಎಂದು ಯಾವತ್ತೂ ಅನ್ನಿಸಲಿಲ್ಲ. ಹೆತ್ತವರು ಸರಿಯಾದ ಮಾರ್ಗದರ್ಶನ ನೀಡಿಲ್ಲದ ಕಾರಣದಿಂದಲೇ ಈ ಮಕ್ಕಳು ಈ ಸ್ಥಿತಿಗೆ ಬಂದಿದ್ದಾರೆ. ಅವರನ್ನು ಸರಿದಾರಿಗೆ ತರಬೇಕಾದ ಜವಾಬ್ದಾರಿ ನನ್ನದು ಎಂದು ನನಗೆ ನಾನೇ ಸಮಾಧಾನ ಹೇಳಿಕೊಳ್ಳುತ್ತಿದ್ದೆ...
ಹೀಗೆ, ಬೀದಿ ಬದಿಯ ಮಕ್ಕಳ ಹೆಸರಿನಲ್ಲಿ ನನ್ನ ಮಡಿಲಿಗೆ ಬಂದ ಮಕ್ಕಳಾದರೂ ಎಂಥವರು ಎಂಬ ಕುತೂಹಲ ಇದೆ ತಾನೆ? ಅದಕ್ಕೆ ಇಬ್ಬರ ಉದಾಹರಣೆ ಕೊಡಬಲ್ಲೆ. ಮೊದಲನೆಯವನ ಹೆಸರು ವಿಶ್ವನಾಥ್. ಆತ 8ನೇ ವರ್ಷಕ್ಕೇ ಮನೆ ಬಿಟ್ಟಿದ್ದ. ದೆಹಲಿಯ ನಿಜಾಮುದ್ದೀನ್ ರೈಲು ನಿಲ್ದಾಣದಲ್ಲಿ ತೆಂಗಿನಕಾಯಿ ಚೂರುಗಳನ್ನು ಮಾರಿಕೊಂಡಿದ್ದ. ಓದುವುದರಲ್ಲಿ ಅವನಿಗೆ ಆಸಕ್ತಿಯಿರಲಿಲ್ಲ. ಆದರೆ, ಲೆಕ್ಕದ ವಿಷಯದಲ್ಲಿ ಬಹಳ ಚುರುಕಾಗಿದ್ದ. ಅವನನ್ನು ಬಟರ್‌ಫ್ಲೈಸ್ ಸಂಘಟನೆಗೆ ಸೇರಿಸಿಕೊಂಡು ಭವಿಷ್ಯದ ಬಗ್ಗೆ ತಿಳಿವಳಿಕೆ ನೀಡಿದ್ದಾಯಿತು. ಈಗ ಅದೇ ಹುಡುಗ ಪ್ರಥಮ ದರ್ಜೆಯಲ್ಲಿ ಬಿ.ಕಾಂ. ಮುಗಿಸಿದ್ದಾನೆ. ಚಾರ್ಟೆಡ್ ಅಕೌಂಟೆಂಟ್ ಆಗುವ ಉದ್ದೇಶದಿಂದ ಹಿರಿಯ ಸಿ.ಎ. ಒಬ್ಬರ ಬಳಿ ತರಬೇತಿಯನ್ನು ಪಡೆಯುತ್ತಿದ್ದಾನೆ.
ಎರಡನೆ ಉದಾಹರಣೆ ಸೋನಾ ಎಂಬಾಕೆಯದು. ಈಕೆಗೆ ಕಲಿಕೆಯಲ್ಲಿ ಆಸಕ್ತಿಯಿತ್ತು. ಆದರೆ, ಪಾಠ ಮಾಡುವಾಗ, ಶೂನ್ಯದತ್ತ ನೋಡುತ್ತ ಕೂತು ಬಿಡುತ್ತಿದ್ದಳು. ಅದನ್ನು ಗಮನಿಸಿ, ಆಕೆಯನ್ನು ಕರೆದು ಮಾತಾಡಿಸಿದಾಗ ಎದೆಯೊಡೆಯುವಂಥ ಸಂಗತಿ ಹೊರಬಂತು. ಏನೆಂದರೆ ಸೋನಾಳ ತಾಯಿ, ಸಂಸಾರ ತೊರೆದು ಹೋಗಿಬಿಟ್ಟಿದ್ದಳು. ತಂದೆ, ಕುಡುಕನಾಗಿದ್ದ. ಕುಡಿಯಲು ಹಣವಿಲ್ಲ ಅನ್ನಿಸಿದಾಗ, 9 ವರ್ಷ ವಯಸ್ಸಿನ ಈ ಪುಟ್ಟ ಹುಡುಗಿಯನ್ನೇ ತನ್ನ ಗೆಳೆಯರ ಬಳಿಗೆ ಕರೆದೊಯ್ದು, ಅವರೊಂದಿಗೆ ಸಹಕರಿಸು ಎಂದು ಮಗಳಿಗೆ ಆದೇಶಿಸುತ್ತಿದ್ದ. ಇಂಥ ದೌರ್ಜನ್ಯದಿಂದ ನಲುಗಿಹೋಗಿದ್ದ ಆಕೆ ಹತಾಶೆಯಿಂದ ಕೂತು ಬಿಡುತ್ತಿದ್ದಳು. ಈ ವಿಷಯ ತಿಳಿದಾಕ್ಷಣ, ಸೋನಾಳ ತಂದೆಯ ಮೇಲೆ ನಾವು ದೂರು ದಾಖಲಿಸಿದೆವು. ಕೋರ್ಟ್ ಮೆಟ್ಟಿಲೇರಿದೆವು. ವಿಚಾರಣೆ ಆರಂಭವಾದಾಗ ಈ ಹುಡುಗಿ-'ನನ್ನ ತಂದೆ ನನಗೆ ಯಾವುದೇ ರೀತಿಯ ಕಿರುಕುಳ ನೀಡಿಲ್ಲ ಅಂದು ಬಿಡೋದಾ?' ಕೇಸ್ ಬಿದ್ದು ಹೋಯ್ತು. ಕೋರ್ಟ್‌ನಿಂದ ಹೊರ ಬಂದಾಗ ಯಾಕಮ್ಮಾ ಸುಳ್ಳು ಹೇಳಿದೆ ಎಂದಿದ್ದಕ್ಕೆ ಆ ಪುಟ್ಟ ಹುಡುಗಿ ಹೇಳಿದ್ದೇನು ಗೊತ್ತಾ? ವೋ ಮೇರೆ ಪಿತಾಜಿ ಹೈ. ಮೇ ಕೈಸೆ ಉಸ್‌ಕೋ ಜೈಲ್ ಮೆ ಬೇಜೂ... ವೋ ಮೇ ನಹೀ ಕರ್ ಸಕ್‌ತೀ (ಅವರು ನನ್ನ ಅಪ್ಪಾ ಅಲ್ವಾ? ಹೀಗಿರುವಾಗ ಅವರನ್ನು ಹೇಗೆ ಜೈಲಿಗೆ ಕಳಿಸಲಿ? ನನ್ನಿಂದ ಅದು ಸಾಧ್ಯವಿಲ್ಲ.)
ಮಗಳನ್ನು ಮಾರಾಟದ ವಸ್ತುವಿನಂತೆ ನೋಡಿದ್ದ ಆ ಕ್ರೂರಿ ತಂದೆಯ ಮೇಲೂ ಆ ಪುಟ್ಟ ಮಗುವಿಗೆ ಮಮತೆಯಿತ್ತು. ಈ ಹುಡುಗಿಗಿರುವ ಪ್ರೀತಿಯಲ್ಲಿ ಸಾಸಿವೆಯಷ್ಟು ಪ್ರಮಾಣದ ಪ್ರೀತಿಯಾದರೂ ತಂದೆ ಅನ್ನಿಸಿಕೊಂಡವನಿಗೆ ಇರಬಾರದಿತ್ತೆ ಅನ್ನಿಸಿತು. ಆ ಹುಡುಗಿ, ಹಳೆಯದನ್ನೆಲ್ಲ ಮರೆತು ಈಗ ಸಡಗರದಿಂದ ಓದುತ್ತಿದ್ದಾಳೆ.
ಪದವಿ ಓದುವಷ್ಟು ತಾಳ್ಮೆ ಮತ್ತು ಬುದ್ಧಿವಂತಿಕೆ, ನಮ್ಮ ಸಂಘಟನೆಯಲ್ಲಿರುವ ಹಲವು ಮಕ್ಕಳಿಗೆ ಇರುವುದಿಲ್ಲ. ಅಂಥವರಿಗೆಂದೇ ಕೇಟರಿಂಗ್ ಕೋರ್ಸ್ ಸೇರಿದಂತೆ ಹಲವು ಅಲ್ಪಾವಧಿಯ ಕೋರ್ಸ್ ಆರಂಭಿಸಲಾಗಿದೆ. ಕೋರ್ಸ್ ಮುಗಿಸಿದ ಹಲವು ಮಂದಿ ತಾಜ್ ಸಮೂಹದ ಹೋಟೆಲ್ ಸೇರಿದಂತೆ ಹಲವು ಕಂಪನಿಗಳಲ್ಲಿ ನೌಕರಿ ಪಡೆದಿದ್ದಾರೆ. ಒಂದು ಕಾಲದಲ್ಲಿ ಭಿಕ್ಷೆ ಬೇಡುತ್ತಿದ್ದ ಮಕ್ಕಳು, ಈಗ ಪ್ರತಿ ತಿಂಗಳೂ ಸಂಬಳ ಎಣಿಸುವಂಥ ಕೆಲಸಕ್ಕೆ ಸೇರಿಕೊಂಡಿದ್ದಾರೆ ಅಂದರೆ, ಅದನ್ನು ಮೀರಿದ ಖುಷಿಯಾದರೂ ಏನಿದೆ?' ಅನ್ನುತ್ತಾರೆ ರೀತಾ.
ಬೀದಿ ಬದಿಯ ಮಕ್ಕಳ ಸಂಪಾದನೆಯ ಹಣವನ್ನು ಸಂರಕ್ಷಿಸಲು ಝ್ಝಟಜ್ಠಜಟಿ ಉಜಢಜಟ್ಟಠಟಜಟಿಡಿ ಝಛಣಛಟಿಛ ಹೆಸರಿನ ಮಕ್ಕಳ ಬ್ಯಾಂಕ್ ಆರಂಭಿಸಿದ್ದು ರೀತಾ ಅವರ ಮತ್ತೊಂದು ಸಾಧನೆ. ಅವರ ಸಂಘಟನೆಯ ಸದಸ್ಯರಾಗಿದ್ದ ಬೀದಿ ಬದಿಯ ಮಕ್ಕಳೆಲ್ಲ, ಅಂದಿನ ದುಡಿಮೆಯನ್ನು ಅವತ್ತೇ ಖರ್ಚು ಮಾಡುತ್ತಿದ್ದರಂತೆ. ಯಾಕಪ್ಪಾ ಹೀಗೆ ಮಾಡ್ತಿರಿ ಎಂದು ಪ್ರಶ್ನಿಸಿದಾಗ, ಈ ಹಣವನ್ನು ಇಡಲು ಜಾಗವೇ ಇಲ್ಲ. ನಾವೇ ಇಟ್ಟುಕೊಂಡ್ರೆ ಯಾರಾದ್ರೂ ಕದ್ದು ಬಿಡ್ತಾರೆ ಎಂಬ ಉತ್ತರ ಬಂದಿದೆ. ಆಗ, ಮಕ್ಕಳ ಹಣವನ್ನು ಮಕ್ಕಳೇ ಜೋಪಾನ ಮಾಡುವಂಥ ಯೋಜನೆ ರೂಪಿಸಿದ ರೀತಾ, ಅದಕ್ಕೆ ಮಕ್ಕಳ ಬ್ಯಾಂಕ್ ಎಂದು ಹೆಸರಿಟ್ಟರು. ಹಣವನ್ನು ಹೇಗೆ ಸ್ವೀಕರಿಸಬೇಕು, ಹೇಗೆ ಖಾತೆ ಆರಂಭಿಸಬೇಕು ಎಂಬ ವಿಷಯವಾಗಿ ಹಲವು ಮಕ್ಕಳಿಗೆ ತರಬೇತಿ ಕೊಡಿಸಿದರು. ಮಕ್ಕಳ ಪೈಕಿಯೇ ಒಬ್ಬನನ್ನು ಮೆನೇಜರ್ ಎಂದು ನೇಮಿಸಿದರು. ಮಕ್ಕಳ ಬ್ಯಾಂಕ್ ಎಂಬ ಹೆಸರನ್ನು ರಿಜಿಸ್ಟ್ರೇಷನ್ ಮಾಡಿಸಲು ಹೋದಾಗ, ಆರ್‌ಬಿಐನ ಅಧಿಕಾರಿಗಳು, ಬ್ಯಾಂಕ್, ಬ್ಯಾಂಕಿಂಗ್, ಬ್ಯಾಂಕರ್ ಎಂಬ ಪದಗಳನ್ನು ನೀವು ಬಳಸುವಂತಿಲ್ಲ. ಅದರ ಬದಲು ಖಜಾನಾ ಎಂಬ ಪದ ಬಳಸಿ ಎಂದರಂತೆ. ಹಾಗೆ ಅಸ್ತಿತ್ವಕ್ಕೆ ಬಂದದ್ದೇ ಚಿಲ್ಡ್ರನ್ ಡೆವಲಪ್‌ಮೆಂಟ್ ಖಜಾನಾ. ಕೇಳಿ: ಈಗ ದೆಹಲಿ, ಕೇರಳ, ಉತ್ತರಾಖಂಡ್, ಅಂಡಮಾನ್, ನಿಕೋಬಾರ್‌ನಲ್ಲಿ ಬಟರ್‌ಫ್ಲೈಸ್ ಸಂಘಟನೆಯ ಮಕ್ಕಳ ಬ್ಯಾಂಕ್ ಇದೆ. ಅಲ್ಲಿ ಬೀದಿ ಬದಿಯ ಮಕ್ಕಳ ಸಂಪಾದನೆಯ 8 ಲಕ್ಷಕ್ಕೂ ಹೆಚ್ಚು ಹಣವಿದೆ. ಈ ಬ್ಯಾಂಕ್‌ಗಳಲ್ಲಿ ಮಕ್ಕಳೇ ಮ್ಯಾನೇಜರ್-ಕ್ಲರ್ಕ್‌ಗಳ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಈ ಯಶೋಗಾಥೆಯಿಂದ ಸ್ಫೂರ್ತಿ ಪಡೆದು ವಿದೇಶಗಳೂ ಮಕ್ಕಳ ಬ್ಯಾಂಕ್ ಆರಂಭಿಸಲು ಉತ್ಸಾಹ ತೋರಿವೆ.
ಮೊದಲೇ ಹೇಳಿದಂತೆ, ರೀತಾ ಪಣಿಕ್ಕರ್‌ರ ಈ ಸಮಾಜ ಸೇವೆಗೆ ಈಗ 25ನೇ ವರ್ಷದ ಸಂಭ್ರಮ. ಮೂರು ವರ್ಷದ ಹಿಂದೆ, ತಮ್ಮ ಪತಿ ಜೆರ್ರಿ ಪಿಂಟೋ ಹಾಗೂ ಸಹಾಯಕಿ ಲಕ್ಷ್ಮಿಯನ್ನು ಕಳೆದುಕೊಂಡಿದ್ದಾರೆ ರೀತಾ. ಆದರೂ ಆಕೆ ಸಮಾಜ ಸೇವೆಯಿಂದ ದೂರ ಸರಿದಿಲ್ಲ. ಗಂಡ ಹಾಗೂ ಸಹಾಯಕಿ ಇಲ್ಲ ನಿಜ. ಆದರೆ, ನನ್ನವರು ಎಂದುಕೊಳ್ಳಲು ಸಾವಿರಕ್ಕೂ ಹೆಚ್ಚು ಮಕ್ಕಳಿವೆ. ದಿನಕ್ಕೆ ಹತ್ತು ಮಕ್ಕಳು ತಮ್ಮ ಯಶಸ್ಸಿನ ಕಥೆ ಹೇಳುತ್ತವೆ. ನಂತರ, ಐ ಲವ್ ಅಮ್ಮಾ ಅನ್ನುತ್ತವೆ. ಬೀದಿ ಮಕ್ಕಳ ಭವಿಷ್ಯಕ್ಕೆ ಒಂದು ಭದ್ರ ನೆಲೆ ಒದಗಿಸಬೇಕು ಎಂಬ ಕನಸು ಕಡೆಗೂ ನನಸಾಗಿದೆ. ಬದುಕಲ್ಲಿ, ಇದಕ್ಕಿಂತ ಹೆಚ್ಚಿನದನ್ನು ನಾನು ನಿರೀಕ್ಷಿಸಲಾರೆ ಅನ್ನುತ್ತಾರೆ ರೀತಾ.
ಬೀದಿ ಬದಿಯ ಮಕ್ಕಳ ಬದುಕಲ್ಲಿ ಹೊಸ ಬೆಳಕು ತಂದ ಈ ಮಮತಾ ಮಯಿಗೆ ಸಾವಿರ ವಂದನೆ.
- ಎ.ಆರ್. ಮಣಿಕಾಂತ್
armanikanth@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


