ಅಂಕಣಗಳು

ಮತಭಾರತ ಸಂತೆಯಲ್ಲಿ ಹೊಸ ಕನಸ ಹುಡುಕಾಟ

"ಈ ಎಲೆಕ್ಷನ್ ಟೈಮ್‌ನಲ್ಲಿ, ಪ್ರಚಾರದ ಭರಾಟೆಯಲ್ಲಿ ನಿಮಗೆ ಎಷ್ಟು...

Published On :

"ಈ ಎಲೆಕ್ಷನ್ ಟೈಮ್‌ನಲ್ಲಿ, ಪ್ರಚಾರದ ಭರಾಟೆಯಲ್ಲಿ ನಿಮಗೆ ಎಷ್ಟು ಸಮಯ ಸಿಕ್ಕರೂ ಸಾಲದು ಅಂತ ಗೊತ್ತು. ರಾತ್ರಿ ಬೆಳಗೆನ್ನದೇ ಕಾರ್ಯತಂತ್ರ-ಪ್ರಚಾರಗಳಲ್ಲಿ ತೊಡಗಿಸಿಕೊಂಡಿರಬೇಕಾಗುತ್ತೆ, ಬಿಡುವಿಲ್ಲ ಅನ್ನೋದೆಲ್ಲ ಸರಿ. ಹಾಗಂತ ನಿದ್ರೇನೇ ಬಿಟ್ಟು ಬಿಡೋದಾ? ಹಿಂಗಾದ್ರೆ ನೀವು ಸಫರ್ ಆಗ್ತಿರಾ ಸರ್. ನಿಮಗೆ ಪ್ರಾಬ್ಲಂ ಕೊಡ್ತಾ ಇರೋದು ನಿದ್ರಾಹೀನತೆ" ಹಾಗೆಂದು ಹೇಳಿದ ವೈದ್ಯರು ಕಳಕಳಿಯಿಂದ ಆ ರಾಜಕಾರಣಿಯ ಮುಖ ನೋಡಿದರು. ಲೋಕಸಭೆಗೆ ಸ್ಪರ್ಧಿಸಿರುವ ಆ ರಾಜಕಾರಣಿ ಇವರ ಬಹುಕಾಲದ ಸ್ನೇಹಿತನೂ ಹೌದು. ಇದೀಗ ಪ್ರಚಾರದಲ್ಲಿ ತನ್ನೆಲ್ಲ ಶಕ್ತಿಯನ್ನೂ ವ್ಯಯಿಸಬೇಕಿರುವ ನಿರ್ಣಾಯಕ ಹಂತದಲ್ಲಿ ತಡೆಯಲಾರದ ಸುಸ್ತೊಂದು ಅವರನ್ನು ಕಾಡಿಬಿಟ್ಟಿದೆ. ಉಸ್ಸಪ್ಪಾ ಎಂದು ಈ ಮಿತ್ರವೈದ್ಯರ ಬಳಿ ಸಾರಿದ್ದಾರೆ. ಎಲ್ಲವನ್ನೂ ವಿಚಾರಿಸಲಾಗಿ, ಇವರಿಗೆ ಕೆಲ ದಿನಗಳಿಂದ ನಿದ್ರೆಯೇ ಬರುತ್ತಿಲ್ಲ ಎಂಬ ಕಾರಣ ತಿಳಿದಿದೆ. ಅದನ್ನೇ ಈ ಮೇಲಿನಂತೆ ಅರುಹಿದ್ದಾಗಿದೆ.
"ಥತ್ತೇರಿಕೆ! ನಿದ್ರಾಹೀನತೆಯೇ ನಿಮ್ಮ ಪ್ರಾಬ್ಲಮ್ಮು, ನಿದ್ರೆ ಮಾಡಿ ಎಲ್ಲ ಸರಿ ಹೋಗುತ್ತೆ ಅಂತ ಹೇಳಿಸಿಕೊಳ್ಳೋಕೆ ನಿಮ್ಮವರೆಗೂ ಬರಬೇಕಿತ್ತೇನ್ರಿ? ನಿದ್ರೆ ಬರದೇ ಇರೋದ್ರಿಂದ ಸುಸ್ತಾಗ್ತಿದೆ ಅಂತ ನನಗೂ ಗೊತ್ತು. ಕೇಜ್ರಿವಾಲ್ ಥರ ಬರೀ ಪ್ರಾಬ್ಲಂ ಪಟ್ಟಿ ಮಾಡಿದ್ರೆ ಆಯ್ತಾ? ಪರಿಹಾರ ಸೂಚಿಸೋದು ಬೇಡ್ವಾ?" ಧುರೀಣರು ಸಿಡಿಮಿಡಿಯಾದರು. ಅದಕ್ಕೆ ವೈದ್ಯರು ಪ್ರತಿಕ್ರಿಯಿಸುವ ಮೊದಲೇ ಸಮಾಧಾನ ತಂದುಕೊಂಡು, "ಹೀಗಂದೆ ಅಂತ್ಹೇಳಿ ಯಾವುದೋ ನಿದ್ದೆ ಮಾತ್ರೆಗೆ ಚೀಟಿ ಗೀಚಿ ಕೊಟ್ಟು ಬಿಡಬೇಡಿ. ಆಮೇಲೆ ಲೋಕಸಭೆ ಚುನಾವಣೆ ಮುಗಿದ ಮೇಲೆ ನಾನು ಏಳೋ ಹಂಗಾದ್ರೆ ಕಷ್ಟ! ನಂಗೆ ರಾತ್ರಿ ನಾಲ್ಕೈದು ತಾಸು ನಿದ್ರೆ ಬಂದ್ರೆ ಸಾಕು. ಆದ್ರೆ ಮೈ ಚೆಲ್ಲಿದ ಕೂಡ್ಲೇ ಅಡೆತಡೆಯಲ್ದೇ ನಿದ್ದೆ ಬಂದ್ರೆ ಬೆಳಗ್ಗೆ ಹೊತ್ತಿಗೆ ರೀಚಾರ್ಜ್ ಆಗಿಬಿಡಬಹುದು. ಹಿಂದೆಲ್ಲ ಮಾಡ್ತಿದ್ದದ್ದು ಹಾಗೇನೇ. ಈ ಸಾರಿ ಈ ಥರ ಸತಾಯಿಸ್ತಿದೆ' ಅಂತ ಅಲವತ್ತುಕೊಂಡರು.
ಎಲ್ಲವನ್ನೂ ಆಲಿಸಿದ ವೈದ್ಯರು ಮುಗುಳ್ನಕ್ಕು- "ನಿಮ್ಮ ನಿದ್ದೆಗೆ ಬೇಕಾದ ಔಷಧದ ಬಗ್ಗೆ ಯೋಚನೆ ಮಾಡೋಣ. ಆದರೆ ಒತ್ತಡದ ಮನಸ್ಸಿಗೆ ಮದ್ದಿಗಿಂತ ಮೊದಲೇ ಬೇಕಾಗೋದು ಆಪ್ತ ಸಲಹೆ- ಕೌನ್ಸೆಲಿಂಗ್. ನಾನೇನೂ ಸೈಕಾಲಜಿಸ್ಟ್ ಅಲ್ಲ. ಆದರೆ ಹಲವು ವರ್ಷಗಳಿಂದ ನಿಮ್ಮನ್ನು ಬಲ್ಲೆನಾದ್ದರಿಂದ, ಸ್ನೇಹಿತರಂತೆ ಇರುವಿರಿ. ಹೇಳಿ, ನಿದ್ದೆ ಬಾರದಂತೆ ನಿಮ್ಮನ್ನು ಅಲುಗಾಡಿಸಿರುವ ಸಂಗತಿ ಯಾವುದು? ಬಹುಶಃ ಅದನ್ನು ಹೊರಹಾಕಿದರೆ ನಿಮಗೆ ನಿದ್ದೆ ಬರುವ ದಾರಿ ತೆರೆದುಕೊಳ್ಳಬಹುದು..."
ವೈದ್ಯರ ಆಪ್ತ ವಿಚಾರಣೆ ಧುರೀಣರ ತಲೆಬಿಸಿಗೆ ತಂಗಾಳಿ ಸೋಕಿಸಿತು. ನಿಟ್ಟುಸಿರಿನೊಂದಿಗೆ ಮಾತಿಗಿಳಿದರು. "ಈ ವಿಚಾರವನ್ನು ನನ್ನ ತಲೆಯಿಂದ ತೆಗೆಯುವುದು ಹಾಗಿರಲಿ ಡಾಕ್ಟ್ರೇ, ದೇಶದ ಜನಮಾನಸದಿಂದಲೇ ತೆಗೆಯೋದಕ್ಕೆ ಆಗ್ತಿಲ್ಲ! ಜಾತಿ ಡಾಕ್ಟ್ರೇ, ಜಾತಿ! ನನ್ನ ನಿದ್ದೆಗೆಡಿಸಿರೋದು, ದೇಶದ ಕನಸು ಕೆಡಿಸಿರೋದು ಎರಡೂ ಈ ಜಾತೀನೇ. ಎಲ್ರಿಗೂ ಗೊತ್ತು. ಏನೂ ಮಾಡಕಾಗಲ್ಲ. ನನಗಂತೂ ಈ ಜಾತಿ ಸಮೀಕರಣದ ಬಗ್ಗೆ ತಲೆಕೆಡಿಸಿಕೊಂಡು ಹೆದರಿಕೆ ಹುಟ್ಟಿ ಬಿಟ್ಟಿದೆ. ಪಕ್ಷದ ಒಳಗೆ-ಹೊರಗೆ ಎಲ್ಲಾ ಲೆಕ್ಕಾಚಾರ-ಸಮೀಕ್ಷೆಗಳೂ ಜಾತಿ ಆಧಾರದಲ್ಲೇ ಆಗೋದು. ನನಗೆ ಟಿಕೆಟ್ ಸಿಕ್ಕಿದೆ ಅಂದ್ರೆ ಅದಕ್ಕೂ ಜಾತಿ ಕಾರಣ. ಪ್ರಚಾರವನ್ನೇನೋ ಪ್ರಾರಂಭಿಸಿದೆ. ಆದರೆ ಕಣ್ಣು ಮುಚ್ಚಿದರೆ ಒಂದೊಂದು ಜಾತಿ ಪ್ರತ್ಯಕ್ಷವಾಗಿ ನನ್ನನ್ನು ಭಯ ಬೀಳಿಸುತ್ತವೆ. "ಮಗ್ನೇ ಇವತ್ತು ಆ ಜಾತಿಯವರ ಕಾಲೋನಿಗೆ ಹೋಗಿ ಏನು ಭರವಸೆ ಕೊಟ್ಟು ಬಂದೆ ಅಂತ ಗೊತ್ತಿದೆ. ನಾವು ಈ ಜಾತಿಯವರ ಪವರ್ ಏನು ಅಂತ ತೋರಿಸ್ತೇವೆ ಇರಲೇ. ನಮ್ಮ ಸಮುದಾಯದ್ದು ಒಂದೂ ಮತ ಬೀಳ್ಬಾರ್ದು ಹಂಗೆ ಮಾಡ್ತೀವಿ" ಅಂದಕೂಡಲೇ ಆಗಷ್ಟೇ ಹತ್ತಿದ ನಿದ್ರೆಯಿಂದ ಧಡಕ್ಕನೇ ಎದ್ದು ಕೂರುತ್ತೇನೆ. ನಂತರ ಬೆಳಕು ಹರಿಯುವವರೆಗೂ ಕಣ್ಣು ಮುಚ್ಚುವುದಕ್ಕೇ ಭಯವಾಗಿ ನರಳಾಡುತ್ತೇನೆ. ಎದ್ದೆನೋ ಬಿದ್ದೆನೋ ಎಂದು ನನಗೆ ಕನಸಲ್ಲಿ ಬಂದು ಹೆದರಿಸಿದ ಜಾತಿಯವರ ಮನೆ ಬಾಗಿಲುಗಳಿಗೆ ಓಡುತ್ತೇನೆ. ಅವರಿಗೆಲ್ಲ ಕೈ ಮುಗಿದು, ವಯಸ್ಸಾದವರ ಕಾಲಿಗೆರಗಿ, ಆ ಜಾತಿಯವರ ಸಮುದಾಯ ಭವನ ಕಟ್ಟುವುದಕ್ಕೆ ನಾನೂ ಹಣ ಕೊಟ್ಟಿದ್ದೆ ಎಂಬುದನ್ನು ವಿನೀತನಾಗಿ ನೆನಪಿಸಿ, ಈ ಬಾರಿ ಗೆದ್ದು ಬಂದರೆ ಆ ಸಮುದಾಯಕ್ಕೆ ಏನೆಲ್ಲ ಕೊಡುವುದರ ಸಂಕಲ್ಪದಲ್ಲಿದ್ದೇನೆ ಎಂಬುದರ ಪಟ್ಟಿ ಒಪ್ಪಿಸಿ ನಿರಾಳವಾದವನಂತೆ ಹಿಂತಿರುಗುತ್ತೇನೆ. ಕಳೆದ ರಾತ್ರಿಯೂ ನಿದ್ದೆಯಾಗಿಲ್ಲವಾದ್ದರಿಂದ ವಿಪರೀತ ಸುಸ್ತೆನಿಸಿ ಪಲ್ಲಂಗಕ್ಕೆ ಬೀಳುತ್ತೇನೆ. ಸಣ್ಣ ಜೋಮು. ಅಷ್ಟರಲ್ಲಿ ..."ಅವರಿವರನ್ನು ಓಲೈಸುವ ಭರದಲ್ಲಿ ನಿನ್ನವರನ್ನೇ ಮರಿತೀಯೇನಲೇ? ನಮ್ಮ ಜಾತಿಯವನು ಅಂತ ಟಿಕೆಟ್ ತಗೊಂಡಿದೀಯಲ್ಲ. ಏನ್ ಮಾಡಿದ್ದೀ ನಮ್ಮ ಜಾತಿಗೆ? ನಮ್ಮವನು ಅಂತ ಹೆಂಗಂದ್ರೂ ವೋಟ್ ಹಾಕ್ತಾರೆ ಇವ್ರು ಅನ್ನೋ ತಾತ್ಸಾರ ನಿಂಗೆ. ನಿನ್ನಾಟ ನಾವೂ ಬಹಳ ನೋಡಿವೀ, ತಡ್ಕ. ಪಕ್ಕದ ಕ್ಷೇತ್ರದ ಲೀಡರು ನಮ್ಮ ಸಮುದಾಯದ ಇನ್ನೊಬ್ಬ ಕಾಂಪಿಟೀಟರ್ ಬೆಳಿಬಾರ್ದು ಅಂತ ಸ್ಕೆಚ್ ಹಾಕಿದ್ದಾರೆ. ಈ ಸಾರಿ ಸರಿಯಾಗ್ ತಗ್ಲಕಂಡಿದೀ ಮಗನೆ. ಈ ಬಾರಿ ನಿನ್ನ ಬೀಳಿಸ್ದೇ ಇದ್ರೆ ಯಾಕಾಯ್ತು?" ಅಂತ ಒಬ್ಬ ಧಮಕಿ ಹಾಕ್ತಾನೆ. ಯಥಾಪ್ರಕಾರ ನಾನು ಧಡಕ್ಕೆಂದು ಕೂರ್ತೇನೆ.
ಈಗ ಹೇಳಿ. ಇವಕ್ಕೆಲ್ಲ ಯಾವ ಸೈಕಾಲಜಿಸ್ಟ್ ಏನು ಪರಿಹಾರ ಹೇಳೋಕೆ ಸಾಧ್ಯ? ಜಾತಿ ಮೊದಲಿಂದಲೂ ಇತ್ತು ಖರೆ. ಆದರೆ ನಮ್ಮ ಲಾಭದ ಲೆಕ್ಕಾಚಾರಗಳಿಗಾಗಿ ಅವುಗಳ ನಡುವೆ ಕಂದಕ ಕೊರೆದು ಹಿಗ್ಗಿಸುತ್ತಾ ಹೋಗಿದ್ದು ಮಾತ್ರ ನಾವು ರಾಜಕಾರಣಿಗಳೇ. ಈಗ ಆ ಜಾತಿ ಸಮೀಕರಣದಲ್ಲಿ ಸ್ವಲ್ಪ ಏರುಪೇರಾದರೂ ನಮ್ಮ ಬಿಪಿ ಸಿಕ್ಕಾಪಟ್ಟೆ ಏರಿಳಿಯುವಂತಾಗಿದೆ. ನಮ್ಮ ಕರ್ಮ, ನಾವೇ ಅನುಭವಿಸಬೇಕು. ಇರಲಿ, ಒಳ್ಳೆ ಮಾತ್ರೆ ಕೊಡಿ."
"ನಿದ್ದೆ ಬರುವ ಮಾತ್ರೆ ಕೊಡೋಣವಂತೆ. ಮೊದಲೇ ಹೇಳಿದಂತೆ ನಾನು ಸೈಕಾಲಜಿಸ್ಟ್ ಏನೂ ಅಲ್ಲ. ಆದರೆ ಸಮಸ್ಯೆಯನ್ನು ಇಷ್ಟೆಲ್ಲ ನಿಖರವಾಗಿ ವಿಶ್ಲೇಷಿಸುತ್ತಿದ್ದೀರಿ. ಚೆಂದವಾಗಿ ಮಾತಾಡ್ತೀರಿ. ಮಾತಿನ ಬಲದಲ್ಲೇ ಜನರನ್ನು ಮನವೊಲಿಸೋ ನಿಮಗೆ, ರಾತ್ರಿ ಮಲಗುವ ಮುಂಚೆ ನಿಮ್ಮ ಮನಸ್ಸನ್ನು ಸಮಾಧಾನಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲವೇ? ಸಮಸ್ಯೆ ನಾವೇ ತಂದ್ಕೊಂಡಿರೋದು ಅಂತ ಹೇಳ್ತೀರಿ. ಅಂದ ಮೇಲೆ ಅದಕ್ಕೆ ಪೂರ್ಣ ಪರಿಹಾರ ಅಲ್ಲದಿದ್ದರೂ, ಪರಿಹಾರದ ಎಳೆಯಾದರೂ ನಿಮ್ಮ ಮನಸ್ಸಿನ ಮೂಲೆಯಲ್ಲಿರುತ್ತೆ. ಅಂಥ ಸಕಾರಾತ್ಮಕ ಅಂಶಗಳನ್ನು ಆಲೋಚಿಸುತ್ತಾ ನಿದ್ದೆಗೆ ಹೋಗಿ. ಯಾವುದೇ ಔಷಧ ಒಳ್ಳೆ ಪರಿಣಾಮ ಕೊಡಬೇಕು ಅಂದ್ರೆ ಮನಸ್ಸಿನ ಶಾಂತಿ-ಸಹಕಾರವೂ ಮುಖ್ಯ" ಹೀಗೆಂದು ವೈದ್ಯರು ಧುರೀಣರನ್ನು ಬೀಳ್ಕೊಟ್ಟರು.
-----------
ಧುರೀಣರು ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆದ್ದಾಗ, ವೈದ್ಯರು ನೆನಪಾದರೋ ಇಲ್ಲವೋ ಗೊತ್ತಿಲ್ಲವಾದರೂ ಒಂದು ಸಂಕಲ್ಪವನ್ನಂತೂ ಮಾಡಿದರು. ಮುಂದಿನ ಚುನಾವಣೆ ಎಂಬಷ್ಟರ ಹೊತ್ತಿಗೆ ಈ ಜಾತಿ ಎಂಬುದು ಬ್ಲಾಕ್‌ಮೇಲ್ ಮಾಡುವ ಸ್ಥಾನದಲ್ಲಿ ಇರಕೂಡದು ಎಂದು. ಹೇಗೂ ತಮ್ಮ ಪಕ್ಷವೇ ಅಧಿಕಾರಕ್ಕೆ ಬಂದಿದೆ. ತಾನು ಹಲವು ಬಾರಿ ಗೆದ್ದಿರುವ ಹಿರಿಯ ಸಂಸದನಾದ್ದರಿಂದ ಯೋಜನೆಗೆ ಹಣ ಒದಗಿಸಿಕೊಳ್ಳುವುದು ಕಷ್ಟವಾಗದು. ಹೀಗಾಗಿ ಈ ಅವಧಿ ಮುಗಿಯುವ ಮೊದಲು ತನ್ನ ಕ್ಷೇತ್ರದಲ್ಲೊಂದು ಮಾದರಿಯನ್ನು ನಿರ್ಮಿಸೋಣ ಎಂದು ನಿರ್ಧರಿಸಿದರು. ಧನ್ಯವಾದ ಸಮರ್ಪಣೆಗೆ ಮತ ಬಾಂಧವರೆದುರು ನಿಂತಾಗ ಘೋಷಿಸಿಯೇ ಬಿಟ್ಟರು. 'ಮುಂದಿನ ಐದು ವರ್ಷಗಳಲ್ಲಿ ನಾನು ನನ್ನ ಕ್ಷೇತ್ರದಲ್ಲಿ ಜಾತಿ ಆಧಾರದಲ್ಲೇ ಸಮಾಜ ಕಟ್ಟಲಿದ್ದೇನೆ!' ಎಲ್ಲರೂ ಆಘಾತವಾಯಿತೆಂಬಂತೆ ಮುಖ-ಮುಖ ನೋಡಿಕೊಂಡರು. ವಿರೋಧಿಗಳು ವಾಗ್ಬಾಣಗಳನ್ನು ತೂರಿದರು. ಇವರ ನಿಶ್ಚಯ ಅಲುಗಾಡಲಿಲ್ಲ.
-----
ನೋಡುತ್ತ, ನೋಡುತ್ತ ವರ್ಷಗಳೈದು ಉರುಳಿ ಇನ್ನೊಂದು ಚುನಾವಣೆ ಬಂದೇ ಬಿಟ್ಟಿತು! ಧುರೀಣರು ಮತ್ತೆ ಹುರಿಯಾಳಾದರು. ಈಗ ಮತ್ತೆ ಜಾತಿ ಪ್ರಸ್ತಾಪವಾಯಿತು. ಎಲ್ಲರ ಬಾಯಲ್ಲೂ ಒಂದೇ ಮಾತು. "ಅವರು ಬಿಡಿ. ರಾಜಕಾರಣದ ಜಾತಿ. ಕಟ್ಟರ್ ಆಡಳಿತದ ಜಾತಿ. ಆ ಜಾತಿಗೆ ಅವರಷ್ಟು ನ್ಯಾಯ ಒದಗಿಸಿದವರು ಯಾರಿಲ್ಲ, ಈ ಬಾರಿಯೂ ನಾವೆಲ್ಲ ಸೇರಿ ಅವರನ್ನು ಆ ಜಾತಿಯಲ್ಲೇ ಇರುವಂತೆ ನೋಡಿಕೊಳ್ಳೋಣ."
ಆಗ ಅಲ್ಲೊಬ್ಬ ತಕರಾರು ತೆರೆದ. 'ಈಗ ನಾನಿರುವ ಜಾತಿ ಬೇಜಾರಾಗಿದೆ. ನನಗೊಂದು ಬದಲಾವಣೆ ಬೇಕು. ನಮ್ಮ ನೇಕಾರಿಕೆ ಉತ್ಪನ್ನದ ಬಟ್ಟೆಗಳಿಗೆಲ್ಲ ಧುರೀಣರು ದೇಶ- ವಿದೇಶಗಳಲ್ಲಿ ಬೃಹತ್ ಮಾರುಕಟ್ಟೆ ಒದಗಿಸಿದ ಪರಿಣಾಮವಾಗಿ ನಾನು ಮಾತ್ರವಲ್ಲದೇ ನನ್ನ ಸಮುದಾಯದವರೆಲ್ಲ ಸ್ಥಿತಿವಂತರಾಗಿದ್ದೇವೆ. ಓಡಾಡುತ್ತಿರುವ ಹಣ, ಕಳೆಗಟ್ಟಿರುವ ಜೀವನಶೈಲಿ ನಮ್ಮ ಸಾಮಾಜಿಕ ಸ್ಥಾನಮಾನವನ್ನೂ ಈ ಹಿಂದಿನ ಪ್ರತಿಷ್ಠಿತರ ಹಂತಕ್ಕೆ ಏರಿಸಿದೆ. ಆದರೂ ರಾಜಕೀಯದ ರುಚಿ ನೋಡಬೇಕು. ಹೀಗಾಗಿ ಧುರೀಣರ ಎದುರಲ್ಲಿ ಸ್ಪರ್ಧಿಸುವವನಿದ್ದೇನೆ.'
ಆತನ ಈ ಆಸೆಗೆ ಊರ ಹಿರಿಯರ ಪ್ರತಿಕ್ರಿಯೆ ಇದ್ದದ್ದು ಈ ರೀತಿ- 'ನೋಡು. ದೇಶದ ಉಳಿದೆಡೆ ಜಾತಿ ಬದಲಾಗುವುದು ಎಂಬುದಕ್ಕೆ ಅರ್ಥವೇ ಇಲ್ಲ. ಇದ್ದರೂ ಕುಹಕದ ಅರ್ಥವಷ್ಟೆ. ಆದರೆ ಧುರೀಣರ ಕನಸಿನಿಂದಾಗಿ ನಮ್ಮ ಕ್ಷೇತ್ರದಲ್ಲಿ ಜಾತಿ ವ್ಯಾಖ್ಯಾನ ಬದಲಾಗಿದೆ. ಇಲ್ಲಿನ ಜಾತಿಗಳಿಗೆಲ್ಲ ಅವರದೇ ಪಾರಂಪರಿಕ ಕೌಶಲದ ನೆಲೆಯಲ್ಲಿ ಅನನ್ಯ ಅವಕಾಶಗಳನ್ನು ಕಲ್ಪಿಸಿದ್ದರಿಂದ ಎಲ್ಲವೂ ಎಲ್ಲವಕ್ಕೂ ಸಮಾನ ಎಂದಾಗಿವೆ. ಹೀಗಿರುವಾಗ ನಿನ್ನ ಬಟ್ಟೆ ನೇಯ್ಗೆ- ವಿನ್ಯಾಸದ ಜಾತಿಯಿಂದ ರಾಜಕೀಯದ ಜಾತಿಗೆ ವರ್ಗಾವಣೆಯಾಗಬೇಕಾದ ಕಾರಣಗಳೇನಿವೆ? ಅವರವರ ಕರ್ತವ್ಯ ಅವರವರು ಚೆನ್ನಾಗಿ ನಿಭಾಯಿಸುವಾಗ ಸ್ಥಿತ್ಯಂತರದ ಅನಿವಾರ್ಯತೆ ಏನಿದೆ? ಪಶು ಪಾಲನೆಯೆಂದರೆ, ಮಡಿಕೆ ಮಾಡುವುದೆಂದರೆ ಪೌರೋಹಿತ್ಯಕ್ಕಿಂತ ಕಡಿಮೆ ಎಂಬ ಸ್ಥಿತಿ ಇತ್ತು. ನಮ್ಮ ಧುರೀಣರ ಸರ್ಕಾರ ಬಂದಮೇಲೆ ಕುರಿ ಗೊಬ್ಬರ, ವಿನ್ಯಾಸದ ಮಡಿಕೆ- ಮಣ್ಣಿನ ವಸ್ತುಗಳಿಗೂ ನವೀನ ಮಾರುಕಟ್ಟೆ ಜಾಲದ ಮೂಲಕ ವಿಶ್ವಮಾನ್ಯತೆ ಸಿಕ್ಕಿದೆ. ಇದಕ್ಕೆ ತಕ್ಕಂತೆ ಜಾಗತಿಕ ಸ್ಪರ್ಧೆಗಳಿಗೆ ಮುಖಾಮುಖಿಯಾಗುವ ಆಚಾರ-ವಿಚಾರಗಳನ್ನು ಎಲ್ಲರಿಗೂ ಕಲಿಸಲಾಗಿದೆ. ಮೊದಲೆಲ್ಲ ಒಂದು ಜಾತಿಯ ಉದ್ಧಾರ ಎಂದರೆ ಇನ್ನೊಂದು ಜಾತಿಯಿಂದ ಕಿತ್ತುಕೊಳ್ಳುವುದು ಎಂದಾಗಿತ್ತು. ಜಾತಿ ವ್ಯವಸ್ಥೆ ವಿರೋಧಿಸುವುದೆಂದರೆ ಬ್ರಾಹ್ಮಣರೇ ಮೊದಲಾದ ಮೇಲ್ವರ್ಗವನ್ನು ವಿರೋಧಿಸುವುದೋ ಅಥವಾ ಅವರಂತೆ ತಾನಾಗುವುದೋ ಎಂಬ ದ್ವಂದ್ವ ಸಂಘರ್ಷದಲ್ಲಿ ಎಲ್ಲರಿದ್ದರು. ಆದರೆ ಸಮುದಾಯವೊಂದರ ಉನ್ನತಿ ಎಂದರೆ ಅವರಿರುವ ನೆಲೆಯಲ್ಲೇ ಜಾಗತಿಕ ಮಾನ್ಯತೆ ಗಳಿಸುವುದೆಂಬ ಅದ್ಭುತ ಈಗಿಲ್ಲಿ ತೆರೆದುಕೊಂಡಿದೆ. ಹೀಗಾಗಿ ಯೋಚಿಸು...'
ಅವರು ಹೇಳಿದ್ದೆಲ್ಲವನ್ನು ಒಪ್ಪಿಕೊಂಡೂ ಯುವಕ ತಾನೀಗ ಸ್ಪರ್ಧಿಸುವುದಾಗಿ ಹೇಳಿದ. ಚುನಾವಣಾ ಪ್ರಕ್ರಿಯೆಗಳು ಭರದಿಂದ ಸಾಗುತ್ತಿರಲಾಗಿ ಮಾಧ್ಯಮ ವೇದಿಕೆಯಲ್ಲಿ ಧುರೀಣರು ಈ ಹೊಸ ಹುರಿಯಾಳನ್ನು ಮುಖಾಮುಖಿಯಾದರು. ಜನ ಈ ಬಾರಿಯೂ ತಮಗೇ ಏಕೆ ಮತ ಹಾಕಬೇಕೆಂಬುದಕ್ಕೆ ಧುರೀಣರು ಹೇಳಿದರು- 'ಜಾತಿ ಭಾರತದ ಕನಸನ್ನು ನನಸಾಗಿಸಿದವನು ನಾನು. ನನ್ನ ಕ್ಷೇತ್ರದಲ್ಲಿ ಜಾತಿ ಸಂಘರ್ಷವಿಲ್ಲ. ಕಾರಣ ಯಾರಿಗೂ ತಮ್ಮ ಜಾತಿ ಬಗ್ಗೆ ಕೀಳರಿಮೆ- ಮೇಲರಿಮೆಗಳಿಲ್ಲ. ಇದೆಲ್ಲ ನೋಡುತ್ತಿದ್ದರೆ ನಗರೀಕರಣದ ಮೂಲಕ ಜಾತಿ ವ್ಯವಸ್ಥೆ ಸಡಿಲಗೊಳಿಸಬಹುದು ಎಂಬ ಅಂಬೇಡ್ಕರ್ ಅವರ ವಿಚಾರ ಹಾಗೂ ಮನುಷ್ಯರ ವೃತ್ತಿಯೇ ಅರ್ಥ ಎಂದ ಚಾಣಕ್ಯನ ಅಭಿಮತ ಬಹಳ ಸೂಕ್ಷ್ಮವಾಗಿ ಮೇಳೈಕೆ ಆಗುತ್ತಿವೆ ಎಂದೆನಿಸುತ್ತದೆ...'
ಧುರೀಣರು ಮಾತಿನ ಓಘದಲ್ಲಿದ್ದಾಗಲೇ ಎದುರಿನ ತರುಣ ಧಿಗಿಲ್ಲನೆದ್ದು, 'ಮನುವಾದಿ ಚಾಣಕ್ಯನನ್ನು ಅಂಬೇಡ್ಕರ್ ಜತೆ ಹೋಲಿಸುವುದಕ್ಕೆ ಎಷ್ಟು ಧೈರ್ಯ ನಿಮಗೆ' ಎನ್ನುತ್ತಲೇ ಇವರತ್ತಲೇ ಬಿರುಸಾಗಿ ಬಂದ. ಈ ಪ್ರತಿಕ್ರಿಯೆ ನೀರೀಕ್ಷಿಸದ ಧುರೀಣರು ಕದಲಿಹೋದರು!
-----
ಹಾಗೆ ಅಲುಗಾಡಿ ಎಚ್ಚರವಾದಾಗ ಧುರೀಣರಿಗೆ ತಮ್ಮ ಮನೆಯೆದುರು ಗೌಜಾಗುತ್ತಿರುವುದು ಗಮನಕ್ಕೆ ಬಂತು. ತಮ್ಮ ಮೇಲೇರಿ ಬರುತ್ತಿದ್ದ ಯುವಕ ತಾವು ಅಷ್ಟು ಹೊತ್ತು ಕಾಣುತ್ತಿದ್ದ ಕನಸಿನ ಭಾಗವೆಂದೂ, ಬಹಳ ದಿನಗಳ ನಂತರ ತಾವು ಇಷ್ಟೆಲ್ಲ ಹೊತ್ತು ಭರ್ಜರಿ ನಿದ್ದೆಗೆ ಶರಣಾಗಿರುವುದೆಂದೂ, ಅವತ್ತಿನ ಪ್ರಚಾರಕ್ಕೆ ಸಜ್ಜಾಗುವುದಕ್ಕೆ ಹೊರಗೆ ಆಗಲೇ ಕಾರ್ಯಕರ್ತರು ಜಮಾಯಿಸಿದ್ದಾರೆಂದೂ ನಿಧಾನವಾಗಿ ಅವರ ಅರಿವಿಗೆ ಬಂತು. ಕನಸಲ್ಲೇ ಎರಡು ಚುನಾವಣೆ ಕಂಡೆನಲ್ಲ ಅಂತ ಮುಸಿ ಮುಸಿ ನಗುತ್ತ ತಯಾರಾಗಲೆಂದು ಎದ್ದರು. ಅವರಲ್ಲೊಂದು ಅಸಾಧ್ಯ ಉತ್ಸಾಹವಿತ್ತು. ಅದರ ಶ್ರೇಯಸ್ಸು ಸಲ್ಲಬೇಕಾದದ್ದು ಆವರಿಸಿದ ನಿದ್ರೆಗೋ, ಆ ವೇಳೆಯಲ್ಲಿ ಭೇಟಿಯಿತ್ತ ಸ್ವಪ್ನವಾಸ್ತವಕ್ಕೋ ಸ್ಪಷ್ಟವಿರಲಿಲ್ಲ.

-ಚೈತನ್ಯ ಹೆಗಡೆ
cchegde@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.