ಅಂಕಣಗಳು

ಸುಷ್ಮಾ ಸ್ವರಾಜ್ ಆಕ್ಷೇಪ ಎಷ್ಟು ಮುಖ್ಯ?

ದೇವೇಗೌಡರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೂ ಜನತಾದಳ ಗೆದ್ದಿದ್ದು 14 ಸ್ಥಾನಗಳನ್ನು ಮಾತ್ರ.

Published On :

ಭಾರತೀಯ ಜನತಾ ಪಾರ್ಟಿಯ ಚುನಾವಣೆ ಲೆಕ್ಕಾಚಾರದಲ್ಲಿ, ಕರ್ನಾಟಕಕ್ಕೆ ಪ್ರಮುಖವಾದ ಪಾತ್ರವಿದೆ. ಕಳೆದ ಬಾರಿ ಬಿಜೆಪಿ, 28 ಕ್ಷೇತ್ರಗಳಲ್ಲಿ 19 ಕ್ಷೇತ್ರಗಳಲ್ಲಿ ಗೆದ್ದಿತ್ತು. ದೇವೇಗೌಡರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೂ ಜನತಾದಳ ಗೆದ್ದಿದ್ದು 14 ಸ್ಥಾನಗಳನ್ನು ಮಾತ್ರ.
ಈಗ ಬಿಜೆಪಿಗೆ ಅಷ್ಟೊಂದು ರಾಜಕೀಯ ಶಕ್ತಿ ಇಲ್ಲ. ಇತರ ರಾಜ್ಯಗಳಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಬಯಕೆ-ಹುಮ್ಮಸ್ಸು ಎರಡೂ ಇದ್ದರೆ, ಕರ್ನಾಟಕದಲ್ಲಿ ಆದಷ್ಟೂ ಕಡಿಮೆ ಸ್ಥಾನಗಳನ್ನು ಕಳೆದುಕೊಳ್ಳುವುದಕ್ಕೆ ಹೆಣಗಬೇಕಾಗಿದೆ.
ಅದಕ್ಕೆ ಬೇಕಾದಷ್ಟು ಕಾರಣಗಳಿರಬಹುದು. ರಾಜ್ಯದಲ್ಲಿ ಪ್ರತಿಯೊಂದು ಸ್ಥಾನವೂ ಬಿಜೆಪಿಗೆ ಮುಖ್ಯ. ಅದರಲ್ಲೂ ಪಕ್ಷ ಬಿಟ್ಟು ಹೋಗಿ ಮತ್ತೆ ಹಿಂದಕ್ಕೆ ಬಂದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪ್ರಭಾವದ ಕ್ಷೇತ್ರಗಳು, ಬಳ್ಳಾರಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಗಣಿ ಧಣಿಗಳ ಆತ್ಮೀಯ ಶ್ರೀರಾಮುಲು ಅವರ ಪ್ರಭಾವದ ಕ್ಷೇತ್ರಗಳು ಬಹು ಮುಖ್ಯವಾದವು. ಈಗ ಈ ಕ್ಷೇತ್ರಗಳದ್ದೇ ಸಮಸ್ಯೆಯ ಸ್ವರೂಪವನ್ನು ತಾಳಿರುವುದು.
ಯಡಿಯೂರಪ್ಪ ಅವರೇನೋ ಒತ್ತಡಕ್ಕೆ ಮಣಿದು ಶಿವಮೊಗ್ಗದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿದ್ದಾರೆ. ಅಲ್ಲಿ ಕಳೆದ ಬಾರಿ ಅವರ ಮಗ ರಾಘವೇಂದ್ರ ದೊಡ್ಡ ರೀತಿಯಲ್ಲೇ ಗೆದ್ದಿದ್ದರು. ಈ ಬಾರಿ ಯಡಿಯೂರಪ್ಪ ಅವರನ್ನು ಕ್ಷೇತ್ರದ ಕಾಂಗ್ರೆಸ್ಸಿಗರು, ಬಂಗಾರಪ್ಪ ಅವರ ಕುಟುಂಬದವರು ಶತಾಯ ಗತಾಯ ವಿರೋಧಿಸುತ್ತಾರೆ.
ಯಡಿಯೂರಪ್ಪ ಅವರು ತಮ್ಮ ಸಮಯದ ಹೆಚ್ಚು ಪಾಲನ್ನು ಶಿವಮೊಗ್ಗದಲ್ಲೇ ಕಳೆಯಬೇಕಾದಿತು. ಅದು ಅವರಿಗೆ ಇಷ್ಟವಿಲ್ಲದ ವಿಚಾರ. ಯಡಿಯೂರಪ್ಪ ಅವರ ಜತೆ ಪಕ್ಷದಿಂದ ಹೊರಗೆ ಹೋಗಿ, ಮತ್ತೆ ಹಿಂತಿರುಗಿರುವ "ಪ್ರಮುಖರಿಗೆ" ರಾಜ್ಯ ಬಿಜೆಪಿ ಇನ್ನೂ ಯಾವ ಸ್ಥಾನಮಾನವನ್ನು ನೀಡಿಲ್ಲ. ಟಿಕೆಟ್ ಹಂಚಿಕೆಯಲ್ಲೂ ಯಡಿಯೂರಪ್ಪ, ಸಿ.ಎಂ. ಉದಾಸಿ ಅವರ ಪುತ್ರ ಹಾಗೂ ಶೋಭಾ ಕರಂದ್ಲಾಜೆ ಅವರನ್ನು ಬಿಟ್ಟರೆ ಇತರರ ಹೆಸರುಗಳಿಗೆ ಮಾನ್ಯತೆ ಸಿಗುವುದು ಕಷ್ಟವೆನ್ನುವಂತಾಗಿದೆ.
ಅದರಲ್ಲಿ ಪ್ರಮುಖವಾಗಿ, ತುಮಕೂರಿನ ಹಾಲಿ ಸದಸ್ಯ ಜಿ.ಎಸ್.ಬಸವರಾಜು ಅವರಿಗೆ ಟಿಕೆಟ್ ಕೊಡಿಸುವ ವಿಚಾರ ಯಡಿಯೂರಪ್ಪ ಅವರ ಪಾಲಿಗೆ ದೊಡ್ಡ ಸವಾಲೇ ಆಗಿದೆ. ಈ ಹಿನ್ನೆಲೆಯಲ್ಲೇ ಯಡಿಯೂರಪ್ಪ ಅವರ ಬೆಂಬಲಿಗರು ಸಭೆ ಸೇರಿ, ತಮ್ಮ ರಾಜಕೀಯ ಭವಿಷ್ಯ ನಿರ್ಧರಿಸಲು ಸಿದ್ಧರಾಗಿರುವುದು. ಈ ಸಮಸ್ಯೆ ಅದೆಷ್ಟು ಜಟಿಲವಾಗಿದೆಯೋ ಗೊತ್ತಿಲ್ಲ.
ಯಡಿಯೂರಪ್ಪ ಅವರು ಕೊನೆಯ ಗಳಿಗೆಯವರೆಗೂ ಬಸವರಾಜ್ ಅವರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಲೂಬಹುದು. ಆದರೆ ಸ್ಥಳೀಯವಾಗಿ ತುಮಕೂರಿನಲ್ಲೇ ಈಗ ಸ್ಥಳೀಯ ಬಿಜೆಪಿ ನಿಷ್ಠರು ಬಸವರಾಜ್‌ಗೆ ವಿರುದ್ಧವಾಗಿರುವಂತಿದೆ. ಬಸವರಾಜ್, ಕರ್ನಾಟಕ ಜನತಾ ಪಾರ್ಟಿಗೆ ಸಮೀಪವಾಗಿದ್ದಾಗ, ಬಿಜೆಪಿಯ ರಾಜ್ಯದ, ರಾಷ್ಟ್ರೀಯ ನಾಯಕರ ವಿಚಾರದಲ್ಲಿ ತೀರ ಅವಹೇಳನಕರವಾದ ಮಾತುಗಳನ್ನೇ ಬಳಸಿದ್ದು ಈಗ ಅವರಿಗೆ ಮುಳುವಾಗಿದೆ.
ತುಮಕೂರು ಈಗ ಸ್ವಲ್ಪ ಮಟ್ಟಿಗೆ ಜಾತ್ಯತೀತ ಜನತಾ ದಳದತ್ತ ವಾಲಿರುವಂತೆ ಕಂಡುಬರುತ್ತಿದೆ. ಇಲ್ಲಿ ಬಸವರಾಜು ಅವರಿಗೆ ಟಿಕೆಟ್ ಕೊಡುವುದು-ಬಿಡುವುದು ಒಂದು ರೀತಿಯಲ್ಲಿ ಯಡಿಯೂರಪ್ಪ ಅವರಿಗೆ, ಇನ್ನೊಂದು ರೀತಿಯಲ್ಲಿ ಬಿಜೆಪಿ ನಾಯಕರಿಗೆ, ನುಂಗಲಾರದ - ಉಗುಳಲೂ ಆಗದ ಬಿಸಿ ತುಪ್ಪದಂತಹ ಸಮಸ್ಯೆಯೇ. ಅದು ಸುಲಭವಾಗಿ ಬಗೆ ಹರಿಯುವಂತಹದ್ದಲ್ಲ.
ಬಳ್ಳಾರಿಯ ಶ್ರೀರಾಮುಲು ಸ್ಥಿತಿ:  ಬಳ್ಳಾರಿ ಹಾಗೂ ಸುತ್ತಮುತ್ತಲ ಪ್ರದೇಶದ ಹಿಂದುಳಿದ ಜಾತಿ-ಪಂಗಡಗಳ ಮತದಾರರಿಗೆ, ಗಣಿಧಣಿ ರೆಡ್ಡಿಗಳ ಮಿತ್ರ ಮಾಜಿ ಮಂತ್ರಿ ಶ್ರೀರಾಮುಲು ಅವರ ಆಕರ್ಷಣೆ ವಿಪರೀತ. ಕಳೆದ ಬಾರಿಯ ಬಿಜೆಪಿ ಅಲೆಯಲ್ಲಿ ಶ್ರೀರಾಮುಲು ಅವರ ತಂಗಿ ಶಾಂತ, ಸೋದರ ಸಣ್ಣ ಫಕೀರಪ್ಪ ಇಬ್ಬರೂ ಲೋಕಸಭೆಗೆ ಆಯ್ಕೆಯಾಗಿದ್ದರು.
ಆ ಸಮಯದಲ್ಲಿ  (ಆಗಿನ್ನೂ ಅಕ್ರಮ ಗಣಿಗಾರಿಕೆ, ಕಳ್ಳತನದಲ್ಲಿ ಅದಿರು ಸಾಗಾಣಿಕೆ-ರಫ್ತು ಉದ್ಯಮಕ್ಕೆ ಹೆಚ್ಚು ಪ್ರಚಾರ ಸಿಕ್ಕಿರಲಿಲ್ಲ) ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ರೆಡ್ಡಿ-ಶ್ರೀರಾಮುಲು ಅವರ ಪಾಲಿಗೆ "ಅಮ್ಮನೇ ಆಗಿದ್ದರು".  ಎರಡು-ಮೂರು ವರ್ಷ ಬಳ್ಳಾರಿಯ  ಸತ್ಯನಾರಾಯಣ ಪೇಟೆಯಲ್ಲಿ ವರಮಹಾಲಕ್ಷ್ಮೀ ಪೂಜೆಗೆ ಅವರು ಬಂದಿದ್ದೂ ಉಂಟು. ಇದಕ್ಕೆಲ್ಲ ಹಿನ್ನೆಲೆ, ಹಿಂದೆ ಸೋನಿಯಾ ಗಾಂಧಿ ಬಳ್ಳಾರಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದಾಗ, ಅವರ ವಿರುದ್ಧ ಬಿಜೆಪಿ ಸುಷ್ಮಾ ಸ್ವರಾಜ್ ಅವರನ್ನೇ ಪ್ರತಿಸ್ಪರ್ಧಿಯಾಗಿ ಆರಿಸಿದಾಗ, ರೆಡ್ಡಿ ಗಣಿ ಧಣಿಗಳು, ಶ್ರೀರಾಮುಲು ಅವರೇ ಚುನಾವಣೆಯ ಪ್ರಚಾರ ಸಮರವನ್ನು ನಿರ್ವಹಿಸಿದ್ದು.
ಆದರೆ ಅಕ್ರಮ ಗಣಿಗಾರಿಕೆ ದೊಡ್ಡ ಹಗರಣದ ರೂಪ ಪಡೆದಾಗ, ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕಿಯಾಗಿದ್ದ ಸುಷ್ಮಾ ಸ್ವರಾಜ್ ತೀರ ಸಹಜವೆನ್ನುವಂತೆ "ಬಳ್ಳಾರಿಯ ಮಕ್ಕಳ" ಸಂಬಂಧ-ವ್ಯವಹಾರದಿಂದ ದೂರವಾದರು. ಅದಕ್ಕಾಗಿ ಅವರು ದೇಶದ ಅನೇಕ ಕಡೆಗಳಲ್ಲಿ ಲೇವಡಿ-ಟೀಕೆ-ಬೈಗುಳವನ್ನೂ ಅನುಭವಿಸಬೇಕಾಯಿತು. ಆಗ ಎಲ್ಲವನ್ನೂ ನುಂಗಿಕೊಂಡರು.
ಈಗ ಕರ್ನಾಟಕ ಬಿಜೆಪಿ ಶ್ರೀರಾಮುಲು ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು (ಶ್ರೀರಾಮುಲು ಜತೆ ಅವರ ಬಿಎಸ್ಸಾರ್ ಕಾಂಗ್ರೆಸ್ ಪಕ್ಷವನ್ನೂ) ತುದಿಗಾಲ ಮೇಲೆ ನಿಂತಿರುವಾಗ, ಸುಷ್ಮಾ ಸ್ವರಾಜ್ ಕಳಂಕಿತರ ಸಹವಾಸ ಬೇಕಾ ಎನ್ನುವ ಸೈದ್ಧಾಂತಿಕ ಪ್ರಶ್ನೆಯನ್ನು ಎತ್ತಿದ್ದಾರೆ.
ನಿಜ. ಸುಷ್ಮಾಸ್ವರಾಜ್ ಬಹುದೊಡ್ಡ "ಸಮುದಾಯದ ನಾಯಕಿ" ಏನೂ ಅಲ್ಲ. ಈಗ ಬಿಜೆಪಿಯ ಯಜಮಾನರಂತೆಯೇ ಪರಿವರ್ತನೆಯಾಗುವ ನರೇಂದ್ರ ಮೋದಿ ಅವರ ಆತ್ಮೀಯ ಬಳಗದಲ್ಲೂ ಇಲ್ಲ. ಸಂಸತ್ತಿನಲ್ಲಿ, ಅವರ ಜವಾಬ್ದಾರಿಯನ್ನು ಅವರು ಅಚ್ಚುಕಟ್ಟಾಗಿ-ದಕ್ಷತೆಯಿಂದ ನಿರ್ವಹಿಸಿದ್ದಾರೆ. ಹಿಂದೆ ಹಲವಾರು ಅಧಿಕಾರದ ಸ್ಥಾನಗಳಲ್ಲಿದ್ದರೂ (ಕೇಂದ್ರ ಮಂತ್ರಿ, ದೆಹಲಿಯ ಮುಖ್ಯಮಂತ್ರಿ) ಭ್ರಷ್ಟಾಚಾರ-ಅನಾಚಾರದ ಸೋಂಕಿನಿಂದ ದೂರವಾಗಿದ್ದಾರೆ.
ಪ್ರಾಯಶಃ ಈಗಿನ ಬಿಜೆಪಿಯಲ್ಲಿ ಅವರ ಪ್ರಸ್ತುತತೆಯೂ ಕುಗ್ಗಿರಬಹುದು. ಉಪಯುಕ್ತತೆಯೂ ಮುಗಿದಿರಬಹುದು. ಅವರ ಆಕ್ಷೇಪವನ್ನು ಒತ್ತರಿಸಿ, ಶ್ರೀರಾಮುಲು ಅವರನ್ನು ಆಲಂಗಿಸುವುದಕ್ಕೂ ಬಿಜೆಪಿ ಸಮರ್ಥವಾಗಿದೆ.
ಆದರೂ ಸುಷ್ಮಾ ಸ್ವರಾಜ್ ಅವರ ಆಕ್ಷೇಪವನ್ನು ಬಿಜೆಪಿ ಈಗ ತಿರಸ್ಕರಿಸುತ್ತಿಲ್ಲ. ಒಂದು ವೇಳೆ ಬಿಜೆಪಿಯಲ್ಲಿ ಶ್ರೀರಾಮುಲು ಪಕ್ಷ ವಿಲೀನವಾಗದೇ ಹೋದರೂ, ಆ ಪಕ್ಷದ ಜತೆ ಹೊಂದಾಣಿಕೆಗೆ ಸುಷ್ಮಾ ಅವರನ್ನು ಒಪ್ಪಿಸಲು ನಾಯಕರು ಹೆಣಗುತ್ತಿದ್ದಾರೆ.
ನಿಜವಾಗಲೂ ಸುಷ್ಮಾ ಅವರ ಆಕ್ಷೇಪ ಅಷ್ಟೊಂದು ಮುಖ್ಯವಾ? ಹಾಗೇನಿಲ್ಲ. ಆದರೆ ಸದ್ಯದಲ್ಲಿ ಸುಷ್ಮಾ ಸ್ವರಾಜ್ ಆಡ್ವಾಣಿ ಅವರ ಅಚ್ಚುಮೆಚ್ಚಿನ ಶಿಷ್ಯೆ. ಸುಷ್ಮಾ ಅವರ ಮಾತಿನಲ್ಲಿ ಆಡ್ವಾಣಿ ಅವರ ಧ್ವನಿ ಇದೆ. ಅದನ್ನು ತಿರಸ್ಕರಿಸುವ ಧೈರ್ಯ ಈಗ ನರೇಂದ್ರ ಮೋದಿ- ರಾಜನಾಥ ಸಿಂಗ್- ಅರುಣ ಜೈಟ್ಲಿ ಅವರಿಗೆ ಇದ್ದಂತಿಲ್ಲ. ಅದೇ ಪರೋಕ್ಷವಾಗಿ ಸುಷ್ಮಾ ಶಕ್ತಿ.
ಕಾಂಗ್ರೆಸ್ಸಿನ ಬ್ರಹ್ಮಾಸ್ತ್ರ- ಅಹಿಂದ: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲೂ ಸಾಕಷ್ಟು ಗೊಂದಲ ಇದೆ. ಪ್ರದೇಶ  ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ, ಮುಖ್ಯಮಂತ್ರಿ ಸಿದ್ದರಾಮಯ್ಯ ಒಟ್ಟಿಗೇ ಹೆಜ್ಜೆ ಹಾಕುತ್ತಿಲ್ಲವೆನ್ನುವ ವದಂತಿಗಳಿವೆ. ಈಗಿನ ರಾಜ್ಯದ ಅತಿ ಹಿರಿಯ ನಾಯಕರಲ್ಲಿ ಒಬ್ಬರಾದ ಮಾಜಿ ಕೇಂದ್ರ ಮಂತ್ರಿ ಸಿ.ಕೆ. ಜಾಫರ್ ಷರೀಫ್ ಅವರಂತಹವರಿಗೂ ಟಿಕೆಟ್ ಸಿಗುವುದು ಕಷ್ಟ ಎನ್ನುವ ಸ್ಥಿತಿ ಬುಧವಾರ ಮಧ್ಯಾಹ್ನದವರೆಗೂ ಇತ್ತು.
ರಾಜ್ಯದಲ್ಲಿ ಕಾಂಗ್ರೆಸ್ ಬದಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಗೆಬಗೆಯ ರೀತಿಯಲ್ಲಿ (ಸ್ಥಾನ-ಮಾನದ ಹಂಚಿಕೆ, ಮಠ ಮಾನ್ಯಗಳಿಗೆ ಧನಸಹಾಯ, ಅಧಿಕಾರಿಗಳ ವರ್ಗಾವಗಿ, ಇತ್ಯಾದಿ)
ತಮ್ಮ ನಾಯಕತ್ವದ ಅಹಿಂದ (ಅಲ್ಪಸಂಖ್ಯಾತ- ಹಿಂದುಳಿದ- ದಲಿತ ಸಮುದಾಯಗಳ) ಬೆಂಬಲದ ಭದ್ರ ಕೋಟೆಯನ್ನು ನಿರ್ಮಿಸುವುದರಲ್ಲಿ ಆಸಕ್ತಿಯನ್ನು ತೋರಿಸಿದ್ದಾರೆ.
ನಿಜ. ಒಂದು ರೀತಿಯಲ್ಲಿ ದೇವರಾಜ ಅರಸು ಅವರು ಮಾಡಿದ್ದೂ ಇದನ್ನೇ. ಆದರೆ ಅರಸು ಅವರ ವ್ಯಕ್ತಿತ್ವವೇ ಬೇರೆ. ಸಿದ್ದರಾಮಯ್ಯ ಅವರ ವ್ಯಕ್ತಿತ್ವವೇ ಇನ್ನೊಂದು ರೀತಿಯದ್ದು.
ಈಗಾಗಲೇ ಸಿದ್ದರಾಮಯ್ಯ ಅವರ "ಶೋಷಿತ ಸಮಾಜಗಳ ಏಕತೆ" ಸಿದ್ಧಾಂತ ಕಾಂಗ್ರೆಸ್ಸಿನಲ್ಲೇ ಒಡಕನ್ನು ಉಂಟು ಮಾಡಿರುವಂತಿದೆ. ಪರಿಶಿಷ್ಟ ಜಾತಿ- ಪಂಗಡಗಳ ಕೆಳಹಂತಗಳ "ನಾಯಕರಿಗೆ" ಆ ಭಾವನೆಯೇ ಸರಿ ಎನಿಸಿದೆ. ಇದು ಡಾ॥ ಪರಮೇಶ್ವರ ಅವರ ಸ್ವಂತ ವಿಚಾರವಲ್ಲ.
ಈಗಿನ ಚುನಾವಣೆಯಲ್ಲಿ ಹೇಗಾದರೂ ಮಾಡಿ ರಾಜ್ಯದಲ್ಲಿ ಇಪ್ಪತ್ತು ಸ್ಥಾನಗಳನ್ನು ಗೆಲ್ಲಲೇಬೇಕೆನ್ನುವ ಛಲ ಕಾಂಗ್ರಸ್ಸಿನಲ್ಲಿ ಮೂಡಿದಂತೆ ಕಂಡು ಬರುತ್ತಿಲ್ಲ.
ಆದರೂ ಸರ್ಕಾರಿ ಕೊಡುಗೆ- ಉಡುಗೊರೆ- ಬಾಗಿನಗಳ ಭರ್ಜರಿ ಕಾರ್ಯಕ್ರಮದ ಮೂಲಕ ಲೋಕಸಭೆ ಚುನಾವಣೆಯನ್ನು ಹೇಗೋ ನಿಭಾಯಿಸಬಹುದೆನ್ನುವ "ವಿಶ್ವಾಸ" ಕಾಂಗ್ರೆಸ್ಸಿನಲ್ಲಿರಬಹುದು. ಆದರೆ ಒಂಬತ್ತು ತಿಂಗಳ ಹಿಂದೆ ವಿಧಾನ ಸಭೆ ಚುನಾವಣೆ ಸಮಯದಲ್ಲಿದ್ದ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ ಎನ್ನುವಂತಹ ವಿಶ್ವಾಸ ಈಗ ಪೇಟೆ- ಬೀದಿಯಲ್ಲಿ, ಅಂಗಡಿ ಮುಂದಿನ ಮಾತಿನಲ್ಲಿ ಕಂಡುಬರುತ್ತಿಲ್ಲ.
ಭವಿಷ್ಯದಲ್ಲಿ ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಸಂಸತ್ ಸದಸ್ಯರ ಪಾತ್ರವೇ ದೊಡ್ಡದಾಗುವ ಸಂಭವವೂ ಇದೆ.
ಕಿಡಿಗೇಡಿತನ: ಜಾತ್ಯತೀತ ಜನತಾದಳದ ಅಗ್ರೇಸರ, ಮಾಜಿ ಪ್ರಧಾನಿ ದೇವೇಗೌಡರು ತೃತೀಯರಂಗ-  ಪರ್ಯಾಯ ರಂಗದ ಮಾತನ್ನು ಬಿಟ್ಟು, ಪಕ್ಷಕ್ಕೆ ರಾಜಕೀಯವಾಗಿ (ಚುನಾವಣೆ ಆಯೋಗದ ಲೆಕ್ಕ ಅಷ್ಟೇ ಅಲ್ಲ) ರಾಷ್ಟ್ರೀಯ ಮನ್ನಣೆಯನ್ನು ಪಡೆಯಲು ಕನಿಷ್ಠಪಕ್ಷ ಹತ್ತು ಲೋಕಸಭೆ ಸ್ಥಾನಗಳಲ್ಲಾದರೂ ಗೆಲ್ಲಲೇ ಬೇಕೆನ್ನುವುದನ್ನು ಮನಗಂಡಿದ್ದಾರೆ. ಆದರೆ ಅಂತಹ ಅಭ್ಯರ್ಥಿಗಳನ್ನು ಹುಡುಕುವುದು ಅತ್ಯಂತ ಆಶಾವಾದಿ ದೇವೇಗೌಡ ಬೆಂಬಲಿಗರಿಗೂ ತುಂಬಾ ಕಷ್ಟದ ಕೆಲಸ.

-ಸತ್ಯ
anisikeprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.