ಅಂಕಣಗಳು

ಆನೆಯ ನಾಮಕ್ಕಾಗಿ ನಡೆದ ಜಗಳ!

ಯುನಿಲಿವರ್ ಮತ್ತು ಟಾಟಾ ಸನ್ಸ್ ಕಂಪನಿಗಳಲ್ಲಿ ಉನ್ನತಸ್ಥಾನಗಳಲ್ಲಿ ಕುಳಿತ..

Published On :

ಆರ್. ಗೋಪಾಲಕೃಷ್ಣನ್ ಖ್ಯಾತ ಕಾರ್ಪೊರೇಟ್ ನಾಯಕರು.  ಯುನಿಲಿವರ್ ಮತ್ತು ಟಾಟಾ ಸನ್ಸ್ ಕಂಪನಿಗಳಲ್ಲಿ ಉನ್ನತಸ್ಥಾನಗಳಲ್ಲಿ ಕುಳಿತ ಖ್ಯಾತಿಯೂ ಅವರಿಗಿದೆ. ಅಲ್ಲದೆ, "ದಿ ಕೇಸ್ ಆಫ್ ಬೋನ್ಸಾಯ್ ಮ್ಯಾನೇಜರ್‌" ಎಂಬ ಪುಸ್ತಕ ಬರೆದೂ ಅವರು ಹೆಸರು ಮಾಡಿದ್ದಾರೆ. ಆದರೆ, ತಮ್ಮ ಧಾರ್ಮಿಕ ಪಂಗಡದಲ್ಲಿನ ಹಾಸ್ಯಉಕ್ಕಿಸುವ ಘಟನೆಗಳನ್ನು ಅತ್ಯುತ್ತಮವಾಗಿ ವಿವರಿಸುವ ಕಲೆಯೂ ಅವರಿದೆ ಎನ್ನುವುದು ನನಗೆ ಗೊತ್ತಿರಲಿಲ್ಲ. ಗೋಪಾಲಕೃಷ್ಣನ್ ವಾದಕಲೈ ಪಂಥಕ್ಕೆ ಸೇರಿದವರು.
ಅವರ ಸರಳ ಭಾಷಾ ಶೈಲಿಯೂ ಅವರು ಹೇಳುವ ಕಥೆಗಳನ್ನು ಮತ್ತಷ್ಟು ರೋಚಕಗೊಳಿಸಿಬಿಡುತ್ತದೆ. ಉದಾಹರಣೆಗೆ: "ತಮಿಳುನಾಡಿನ ಬ್ರಾಹ್ಮಣರಲ್ಲಿ ಎರಡು ಪಂಥಗಳಿವೆ- ಶಿವನನ್ನು ಪೂಜಿಸುವ ಐಯರ್‌ಗಳು ಮತ್ತು ವಿಷ್ಣುವಿನ ಆರಾಧಕರಾದ ಐಯ್ಯಂಗಾರ್‌ಗಳು. ಐಯರ್‌ಗಳು ಸಂಖ್ಯೆಯಲ್ಲಿ ಐಯ್ಯಂಗಾರ್‌ಗಳಿಗಿಂತ ನಾಲ್ಕು ಪಟ್ಟು ಹೆಚ್ಚಿದ್ದರು. ಐಯ್ಯಂಗಾರ್‌ಗಳು ಅಷ್ಟು ಕಡಿಮೆ ಸಂಖ್ಯೆಯಲ್ಲಿದ್ದರೂ ಕೂಡ ಅವರಲ್ಲೂ ಭಿನ್ನ ಗುಂಪುಗಳಿದ್ದವು: ಉತ್ತರ ತಮಿಳುನಾಡಿನಿಂದ ಬಂದ, ಸಂಸ್ಕೃತಕ್ಕೆ ಮಹತ್ವ ಕೊಡುತ್ತಿದ್ದ ಹಾಗೂ '್ಖ' ಗುರುತಿನ ನಾಮ ಧರಿಸುತ್ತಿದ್ದ "ವಾದಗಳೈ" ಗುಂಪು ಒಂದೆಡೆಯಾದರೆ, ಇನ್ನೊಂದೆಡೆ ದಕ್ಷಿಣ ತಮಿಳುನಾಡಿನ, ತಮಿಳು ಮತ್ತು ಸಂಸ್ಕೃತವನ್ನು ಬಳಸುತ್ತಿದ್ದ ಹಾಗೂ 'ಘ' ಗುರುತಿನ ನಾಮ ಧರಿಸುತ್ತಿದ್ದ 'ತೆಂಕಳೈ'ಗಳು.
1790ರ ಸಮಯದಲ್ಲಿ ಮೂರು ಪವಿತ್ರ ವೈಷ್ಣವ ಕೇಂದ್ರಗಳಲ್ಲೊಂದಾದ, ಕಾಂಚೀಪುರಂನ ದೇವರಾಜ ಸ್ವಾಮಿ ಮಂದಿರದ ವಿಷಯವಾಗಿ ಈ ಎರಡೂ ಗುಂಪುಗಳ ನಡುವೆ ಜಗಳ ಶುರುವಾಯಿತು. ಜಗಳಕ್ಕೆ ಕಾರಣವಿಷ್ಟೆ- ಆ ಮಂದಿರದ ಆನೆಯ ಹಣೆಯ ಮೇಲೆ 'ಘ' ಗುರುತಿನ ನಾಮವಿರಬೇಕೋ ಅಥವಾ '್ಖ' ನಾಮವಿರಬೇಕೋ ಎಂಬುದು. ಈ ವ್ಯಾಜ್ಯ ಕೋರ್ಟ್ ಮೆಟ್ಟಿಲೂ ಏರಿತು, ಇತ್ಯರ್ಥವಾಗದೇ ಮುಂದುವರಿಯಿತು. 1942ರಲ್ಲಿ ತಿರುವಾಂಕುರ್‌ನ ಮಹಾರಾಜರು ದೇವರಾಜ ಸ್ವಾಮಿ ಮಂದಿರಕ್ಕೆ ಆನೆಯೊಂದನ್ನು ದಾನ ಮಾಡಿದರು, ಆ ಆನೆಯ ಹಣೆಗೆ '್ಖ' ನಾಮವಿತ್ತು! ಮೆಲ್ಲಗೆ ಹೊಗೆಯಾಡುತ್ತಿದ್ದ ಆ ವಿಷಯ ಮತ್ತೆ ದೊಡ್ಡ ಗದ್ದಲವನ್ನೇ ಎಬ್ಬಿಸಿಬಿಟ್ಟಿತು. 3 ಶತಮಾನಗಳಾದವು. ಈಗಲೂ ನ್ಯಾಯಾಂಗ ಮತ್ತು ಆಡಳಿತ ವ್ಯವಸ್ಥೆಗೆ ಆ ವಿಷಯವಾಗಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ. "ಭಾರತದಲ್ಲಿ ಅತಿ ಧೀರ್ಘ ಇತಿಹಾಸದ ಬಗೆಹರಿಯದ ಕಾನೂನು ವಿವಾದ ಇದೇ ಇರಬೇಕು" ಎಂದು ಗೋಪಾಲಕೃಷ್ಣನ್ ಅದಕ್ಕೇ ಹೇಳುತ್ತಾರೆ.
ಆದರೆ ಗೋಪಾಲಕೃಷ್ಣನ್ ಅವರು ಹೇಳದ ಇನ್ನೊಂದು ಅಂಥದ್ದೇ ವಿವಾದವೊಂದು ಈ ಶತಮಾನದಲ್ಲಿ ನಡೆದಿದೆ. ಅದು ಸಂಪ್ರದಾಯವಾದಿ ಕ್ರಿಶ್ಚಿಯನ್ನರು ಮತ್ತು ಜಾಕೋಬೈಟ್ ಸಿರಿಯನ್ ಕ್ರಿಶ್ಚಿಯನ್ನರ ನಡುವೆ ನಡೆದಿದ್ದು. "ಯಾವ ನಿರ್ದಿಷ್ಟ ಪಂಥದ ವ್ಯಕ್ತಿ ತಮ್ಮ ಧಾರ್ಮಿಕ ನಾಯಕನಾಗಬೇಕು- ದೂರದ ಸಿರಿಯಾದಲ್ಲಿನ ಮಠಾಧೀಶನೋ ಅಥವಾ ಸ್ಥಳೀಯ ಗಣ್ಯ ವ್ಯಕ್ತಿಯೋ?" ಎನ್ನುವ ವಿಷಯ ಇಬ್ಬರ ನಡುವೆ ಜಗಳಕ್ಕೆ ಕಾರಣವಾಯಿತು. ನ್ಯಾಯಾಲಯದ ಆಜ್ಞೆಯ ಮೇರೆಗೆ ಅನೇಕ ಹಳೆಯ ಚರ್ಚ್‌ಗಳಿಗೆ ಬೀಗ ಜಡಿಯಲಾಯಿತು. ನಿಲುವಂಗಿಯ ಬಿಶಾಪ್‌ಗಳು ಉಪವಾಸ ಸತ್ಯಾಗ್ರಹಕ್ಕೆ ಕುಳಿತರು. ಅನುಯಾಯಿಗಳು ಚರ್ಚ್‌ಗಳ ಎದುರಿಗೆ ಭಾವಾವೇಷದಿಂದ ಬಡಿದಾಡಿಕೊಂಡರು. ಇದನ್ನೆಲ್ಲ ನೋಡಿ ಗೋಪಾಲಕೃಷ್ಣ ಅವರ ಪೂರ್ವಿಕರು "ಇಷ್ಟೇನಾ ಧರ್ಮವೆಂದರೆ?" ಎಂದು ತಲೆಕೆಡಿಸಿಕೊಂಡಿರಲೂಬಹುದು.
ಇನ್ನು ಅದೇ ಪೂರ್ವಿಕರು ಮತ್ತು ಸುಮಾರು 3,000 ಜನರಿದ್ದ ಆ ಹಳ್ಳಿಯ ಜನರು ವೇಗವಾಗಿ ಹೊಗೆಯುಗುಳುತ್ತಾ ಓಡಾಡುತ್ತಿದ್ದ "ಸ್ಟೀಮ್ ಇಂಜಿನ್ನಿನ್ನ ರೈಲನ್ನು" ನೋಡಿಯೂ ಆಶ್ಚರ್ಯಗೊಂಡಿದ್ದರು. ಆ ಟ್ರೇನಿನಲ್ಲಿ ಕುಳಿತರೆ ಒಂದೇ ದಿನದಲ್ಲಿ ತಿರುವಾರೂರ್‌ನಿಂದ ಮದ್ರಾಸ್‌ಗೆ ತಲುಪಬಹುದು ಎನ್ನುವ ವಿಷಯ ಎಲ್ಲರಿಗೂ ತಿಳಿಯಿತು. ಆದರೆ ಇದು ವೈಷ್ಣವರಿಗೆ ನಿಜಕ್ಕೂ ಆಘಾತವುಂಟುಮಾಡುವ ಸುದ್ದಿಯಾಗಿತ್ತು. "ಇಡೀ ದಿನ ಟ್ರೇನ್‌ನಲ್ಲೇ ಕಳೆದುಹೋದರೆ, ಸಾಯಂಕಾಲದ ಸಂಧ್ಯಾವಂದನೆ ಮಾಡುವುದು ಯಾವಾಗ?" ಎಂದು ಅವರು ಹೊಗೆಯುಗುಳುವ ರೈಲನ್ನು ನೋಡಿ ನಿಟ್ಟುಸಿರು ಚೆಲ್ಲಿದ್ದರು. ಇಂಥ ಅನೇಕ ಘಟನೆಗಳನ್ನು 'ಎ ಕಾಮಾ ಇನ್ ಸೆಂಟೆನ್ಸ್‌' ಎನ್ನುವ ಚಿಕ್ಕ ಪುಸ್ತಕದಲ್ಲಿ ಅಕ್ಷರಕ್ಕಿಳಿಸಿದ್ದಾರೆ ಗೋಪಾಲಕೃಷ್ಣನ್. ಆ ಪುಸ್ತಕದಲ್ಲಿ ಅತ್ಯಂತ ಹೃದಯಸ್ಪರ್ಶಿಯಾಗಿ ಮೂಡಿಬಂದಿರುವ ಘಟನೆಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಗೋಪಾಲಕೃಷ್ಣನ್ ಸುಮಾರು 30 ವರ್ಷದ ನಂತರ ತಮ್ಮ ಹಳ್ಳಿಗೆ ಹಿಂದಿರುಗಿದರಂತೆ. ಅವರ ಬಹುತೇಕ ಸಂಬಂಧಿಕರು ತೀರಿಕೊಂಡಿದ್ದರು ಅಥವಾ ಊರು ಬಿಟ್ಟುಹೋಗಿದ್ದರು. ಆದರೂ ತಮ್ಮೂರಿನ ಅಗ್ರಹಾರವನ್ನು ನೋಡಿಬರಬೇಕೆಂದು ಗೋಪಾಲ್‌ಗೆ ಮನಸ್ಸಾಗಿತ್ತು. ಅಲ್ಲಿ ಹೋಗಿ ತಮ್ಮ ಹಳೆಯ ಮನೆಯನ್ನು ಹುಡುಕುತ್ತಿರುವ ವೇಳೆಯಲ್ಲಿ ಅಚಾನಕ್ಕಾಗಿ ಬೆನ್ನು ಬಾಗಿದ ಹಣ್ಣು ಹಣ್ಣು ಮುದುಕಿಯೊಬ್ಬಳು ಅವರಿಗೆ ಎದುರಾದಳಂತೆ. ಹಣೆಗೆ ಕೈ ಹಚ್ಚಿ, ಕಣ್ಣು ಕಿರಿದು ಮಾಡಿ, ಗೋಪಾಲಕೃಷ್ಣನ್‌ರನ್ನೇ ನೋಡುತ್ತಾ, "ನೀನು ರಾಜಂ ಮಗನಲ್ಲವೇ? ಅವನು ನಿನ್ನ ವಯಸ್ಸಿನಲ್ಲಿ ನೋಡಲು ನಿನ್ಹಾಗೇ ಇದ್ದ." ಎಂದು ಹೇಳಿದಳಂತೆ. ರಾಜಂ ಮಗ ಬಂದಿದ್ದಾನೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ಹಳೆಯ ಮಂದಿಯಲ್ಲಿ ಸುತ್ತಲೂ ಜಮಾಯಿಸಿ ಗೋಪಾಲಕೃಷ್ಣನ್ ಅವರನ್ನು ಪ್ರೀತಿಯಿಂದ ಮಾತನಾಡಿಸಿದರಂತೆ.
---
ಹೇಗೆ ಒಂದು ಕಾಲಕ್ಕೆ ಜನಸಂಖ್ಯೆಯಲ್ಲಿ ಕಡಿಮೆಯಿದ್ದರೂ ಬ್ರಾಹ್ಮಣರು ತಮಿಳುನಾಡು ಮತ್ತು ಕೇರಳದಲ್ಲಿ ಶಕ್ತಿಯುತರಾಗಿದ್ದರು ಎನ್ನುವ ಬಗ್ಗೆ ಗೋಪಾಲ್ ಮಾಹಿತಿ ನೀಡುತ್ತಾರೆ. ಅದಕ್ಕಾಗಿ ಅವರು ಜಿ. ರಾಮಚಂದ್ರನ್(ಭಾರತ ಸರ್ಕಾರದ ಮಾಜಿ ವಿತ್ತ ಕಾರ್ಯದರ್ಶಿ) ಅವರ 'ವಾಕಿಂಗ್ ವಿತ್ ಜೈನ್ಟ್ಸ್‌' ಎನ್ನುವ ಪುಸ್ತಕವನ್ನು ಉದ್ಧರಿಸುತ್ತಾರೆ: ತಮಿಳುನಾಡಿನಲ್ಲಿ ಕಾಂಗ್ರೆಸ್‌ನ 3 ದಶಕಗಳ ಆಡಳಿತ ಯಾವಾಗ ಅಂತ್ಯವಾಯಿತೋ, ಆಗ ಬ್ರಾಹ್ಮಣ ವಿರೋಧಿ ನಿಲುವನ್ನು ಹೊಂದಿದ್ದ ದ್ರಾವಿಡ ಸಿದ್ಧಾಂತ ಸಿಂಹಾಸನವನ್ನೇರಿತು. ಇದರಿಂದಾಗಿ ಸರ್ಕಾರಿ ಅಧಿಕಾರಿಗಳು ನಡುಗಿಹೋದರು. ಬಹಳಷ್ಟು ಅಧಿಕಾರಿಗಳು ಒಂದೋ ತಮ್ಮ ಕೆಲಸ ಹೋಗುತ್ತದೆ, ಇಲ್ಲವೇ ಬೇರೆಡೆಗೆ ವರ್ಗವಾಗುತ್ತದೆ ಎಂಬ ಚಿಂತೆಯಲ್ಲಿದ್ದರು. ಆಗ ಬಹುತೇಕ ಸರ್ಕಾರಿ ಕಚೇರಿಗಳ ಮಹತ್ವದ ಹುದ್ದೆಗಳಲ್ಲಿ ಬ್ರಾಹ್ಮಣರೇ ಇದ್ದರು. ಆದರೆ ಅವರ ಹೆದರಿಕೆ ಸುಳ್ಳಾಯಿತು. ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತ ಅಣ್ಣಾದೊರೈ ಎಷ್ಟು ಪ್ರಬುದ್ಧ ಮನಸ್ಥಿತಿಯವರಾಗಿದ್ದರೆಂದರೆ, ಬಹಳಷ್ಟು ಬ್ರಾಹ್ಮಣ ಅಧಿಕಾರಿಗಳಿಗೆ ಅವರು ಸಹಾಯ ಮಾಡಿದರು. ಆ ಕಾಲವೂ ಹಾಗಿತ್ತು ಬಿಡಿ. ಆಗ ರಾಜಕಾರಣಿಗಳು ತಮ್ಮ ಸಿದ್ಧಾಂತವೇನೇ ಇದ್ದರೂ, ಕೆಲವು ತತ್ವಗಳನ್ನು ಅನುಸರಿಸುತ್ತಿದ್ದರು. ಇನ್ನು ಸರ್ಕಾರಿ ಅಧಿಕಾರಿಗಳು ಗೌರವಯುತ ವರ್ತನೆಯನ್ನು ತೋರುತ್ತಿದ್ದರು. ಇಂದು ದೇಶದಲ್ಲಿ ತತ್ವ, ಸಿದ್ಧಾಂತಗಳು ಜಾಗಪಡೆದಿರುವುದು ನಿವೃತ್ತಿ ಹೊಂದಿರುವವರ ಸ್ಮರಣೆಗಳಲ್ಲಿ ಮಾತ್ರ.

-ಟಿಜೆಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.