ಅವಳ ಅಂತರಂಗವೇಕೆ ಯಾರಿಗೂ ಅರ್ಥವಾಗೋದಿಲ್ಲ?
ನಮ್ಮ ಆಫೀಸಿನಲ್ಲಿದ್ದ ಹುಡುಗಿಯರ ಪೈಕಿ ವಿಪರೀತ ಎನ್ನುವಷ್ಟು ಮಾತಾಡುತ್ತಿದ್ದವಳು ಗೀತಾಂಜಲಿ..
ನಮ್ಮ ಆಫೀಸಿನಲ್ಲಿದ್ದ ಹುಡುಗಿಯರ ಪೈಕಿ ವಿಪರೀತ ಎನ್ನುವಷ್ಟು ಮಾತಾಡುತ್ತಿದ್ದವಳು ಗೀತಾಂಜಲಿ. ಸಮಸ್ಯೆ ಏನೆಂದರೆ- ತನ್ನ ಮಾತುಗಳನ್ನು ಕೇಳಲು ಎದುರಿಗೆ ಇರುವವರು ಸಿದ್ಧರಿದ್ದಾರಾ? ನನ್ನ ಮಾತುಗಳಿಂದ ಅವರಿಗೆ ಬೇಸರವೋ, ತೊಂದರೆಯೋ ಆಗುತ್ತದಾ ಎಂದು ಆಕೆ ಯೋಚಿಸುತ್ತಲೇ ಇರಲಿಲ್ಲ. ಜೊತೆಗೆ ಒಬ್ಬರು ಸಿಕ್ಕರೆ ಸಾಕು; ಈಕೆ ಮಾತಿಗೆ ಶುರು ಮಾಡಿಬಿಡುತ್ತಿದ್ದಳು. ಹೀಗೆ ವಾಚಾಳಿಯಾಗಿದ್ದ ಕಾರಣದಿಂದಲೇ ಕೆಲವರು ಅವಳಿಗೆ ಗೊತ್ತಾಗದಂತೆ -'ಹುಡುಗೀಗೆ ಸ್ವಲ್ಪ ತಲೆ ಸರೀಗಿಲ್ಲ' ಎಂದು ಕಮೆಂಟ್ ಮಾಡುತ್ತಿದ್ದಳು.
ಯಾವಾಗಲೂ ವಟವಟ ಎಂದು ಮಾತನಾಡುವುದರ ಜೊತೆಗೆ, ಗೀತಾಂಜಲಿಗಿದ್ದ ಮತ್ತೊಂದು ದುರ್ಗುಣವೆಂದರೆ ಆರ್ಡರ್ ಮಾಡುವುದು! ಆಕೆ ಆಫೀಸಿಗೆ ಬಂದು ಕೂತಳೆಂದರೆ, ಜಪ್ಪಯ್ಯ ಅಂದರೂ ಕುರ್ಚಿಯಿಂದ ಏಳುತ್ತಿರಲಿಲ್ಲ. ಅಟೆಂಡರ್‌ಗಳನ್ನು ಪದೇ ಪದೆ ಕರೆಯುತ್ತಾ- ಕಾಫಿ ತಗೊಂಬಾರಪ್ಪಾ, ನೀರಿನ ಬಾಟಲ್ ತಂದುಕೊಡು, ಹೊಸ ಫೈಲ್ ತಗೊಂಡು ಹೋಗು, ಆ ಟೇಬಲ್ ಮೇಲೆ ಫೋನ್ ಬಿಟ್ಟು ಬಂದಿದ್ದೀನಿ, ಅದನ್ನು ತಗೊಂಡು ಬಾ... ಎಂದೆಲ್ಲಾ ಆರ್ಡರ್ ಮಾಡುತ್ತಿದ್ದಳು. ಇಂಥ ವರ್ತನೆಯಿಂದ ರೋಸಿ ಹೋದವರು-'ಆಫೀಸಿನಲ್ಲಿ ಹೀಗೆಲ್ಲ ಮೆರೀತಾಳೆ. ಮನೇಲಿ ಹೇಗೋ ಏನೋ' ಎಂದು ಅವಳಿಗೆ ಕೇಳಿಸುವಂತೆಯೇ ಅಂದುಬಿಡುತ್ತಿದ್ದರು. ಅಂಥ ಮಾತುಗಳಿಂದ ಗೀತಾಂಜಲಿ ಸಿಟ್ಟಾಗುತ್ತಿರಲಿಲ್ಲ. ಬದಲಿಗೆ, ನಾನು ಆಫೀಸಿನಲ್ಲಿ ಹೇಗೆ ಇರ್ತೀನೋ, ಮನೆಯಲ್ಲಿ ಕೂಡ ಹಾಗೇ ಇರ್ತೇನೆ. ನನ್ನ ಆರ್ಡರ್‌ಗಳನ್ನು ಪಾಲಿಸಲಿಕ್ಕೆ ಮನೆಯಲ್ಲಿ ಕೂಡ ಜನ ಇದ್ದಾರೆ ಅನ್ನುತ್ತಿದ್ದಳು.
ಇಂಥ ಹಿನ್ನೆಲೆಯ ಗೀತಾಂಜಲಿಗೆ ಆರು ತಿಂಗಳ ಹಿಂದೆ ಮದುವೆಯಾಯಿತು. ಒಂದು ತಿಂಗಳ ರಜೆಯ ನಂತರ ಆಫೀಸಿಗೆ ಬಂದ ಗೀತಾಂಜಲಿ ಸಂಪೂರ್ಣ ಬದಲಾಗಿದ್ದಳು. ಎಲ್ಲರೊಂದಿಗೂ ಅಗತ್ಯವಿದ್ದಷ್ಟೇ ಮಾತು. ಅದಕ್ಕಿಂತ ಹೆಚ್ಚಾಗಿ ಆಕೆ ಆರ್ಡರ್ ಮಾಡುವುದನ್ನು, ಅಟೆಂಡರ್‌ಗಳ ಮೇಲೆ ರೇಗುವುದನ್ನು ನಿಲ್ಲಿಸಿದ್ದಳು. ಎಲ್ಲ ಕೆಲಸವನ್ನೂ ತಾನೇ ಮಾಡಿಕೊಳ್ಳುತ್ತಿದ್ದಳು. ಅವಳಲ್ಲಿನ ಈ ದಿಢೀರ್ ಬದಲಾವಣೆ ಹಲವರಿಗೆ ಒಂದು ವಿಸ್ಮಯದಂತೆ ಕಂಡಿತು.
ಗೀತಾಂಜಲಿ ಹೀಗೆ ಏಕಾಏಕಿ ಬದಲಾಗಿದ್ದು ಹೇಗೆ? ಅದಕ್ಕೆ ಇದ್ದ ಮುಖ್ಯ ಕಾರಣವಾದರೂ ಏನು ಎಂಬ ಕುತೂಹಲ ಕಾಡುತ್ತಿತ್ತು. ವಾರದ ಹಿಂದೆ ವೀಕೆಂಡ್ ಪಾರ್ಟಿಯಲ್ಲಿ ಈ ಪ್ರಶ್ನೆಯನ್ನು ಮುಂದಿಟ್ಟಾಗ ಗೀತಾಂಜಲಿ ಹೇಳಿದಳು: 'ಮದುವೆಯ ವಿಷಯದಲ್ಲಿ ನನಗೆ ನೂರು ಕಲ್ಪನೆಗಳಿದ್ದವು. ಮದುವೆಯ ನಂತರ ನಾನೇ ರಾಧೆ, ಅವನೇ ಕೃಷ್ಣ. ನಾನು ಶಾಕುಂತಲೆ, ಅವನು ದುಷ್ಯಂತ, ನಾನು ಜೂಲಿಯಟ್, ಅವನು ರೋಮಿಯೋ ಎಂದೆಲ್ಲಾ ಕನಸು ಕಂಡಿದ್ದೆ. ಹನಿಮೂನ್‌ಗೆ ಹೋದಾಗ ಈ ಎಲ್ಲ ವೇಷಗಳಲ್ಲಿಯೂ ನಾವು ನಲಿದಿದ್ದಾಯಿತು. ಆನಂತರದ ಒಂದೆರಡು ತಿಂಗಳು ನಾವಿಬ್ಬರೂ ಅಂಟಿಕೊಂಡೇ ನಡೆದಿದ್ದಾಯಿತು. ಹೋಟೆಲುಗಳಿಗೆ, ದೇವಸ್ಥಾನಕ್ಕೆ, ಮದುವೆಗೆ, ಗೃಹಪ್ರವೇಶಕ್ಕೆ ಜೊತೆಯಾಗಿ ಹೋಗಿದ್ದೂ ಆಯಿತು. ಆಗ, ಎಲ್ಲರ ಕಂಗಳೂ ನಮ್ಮ ಮೇಲೇ ಇದ್ದವು. ಎಲ್ಲರೂ ನಮ್ಮನ್ನು ಮೆಚ್ಚುಗೆ ಹಾಗೂ ಅಸೂಯೆಯಿಂದ ನೋಡುತ್ತಿದ್ದರು. ಅಂಥ ಸಂದರ್ಭಗಳನ್ನು ಕಂಡಾಗಲೆಲ್ಲ, ನನ್ನಂಥ ಸುಖಿ ಜಗತ್ತಿನಲ್ಲಿ ಬೇರೊಬ್ಬರಿಲ್ಲ ಅನಿಸುತ್ತಿತ್ತು.
ಗಂಡನ ಮನೆಗೆ ಹೋದೆನಲ್ಲ; ಆಗ, ಅದುವರೆಗೂ ನಾನು ಕಂಡಿಲ್ಲದಿದ್ದ ಮತ್ತೊಂದು ಮಗ್ಗುಲಿನ ಪರಿಚಯವಾಯು. ಗಂಡನ ಮನೆಯಲ್ಲಿ ಅತ್ತೆ- ಮಾವ ಇದ್ದರು. ಅವರಿಗೆ ವಯಸ್ಸಾಗಿತ್ತು. ಗಂಡನ ತಮ್ಮ-ತಂಗಿ ಇದ್ದರು. ಅವರ ಪ್ರಾಯ ಚಿಕ್ಕದಿತ್ತು. ಪರಿಣಾಮ, ಹೊಸ ಮನೆಯಲ್ಲಿ ಹಲವು ಜವಾಬ್ದಾರಿಗಳು ನನ್ನ ಹೆಗಲೇರಿದವು. ಗಂಡನ ಮನೆಯ ಎಲ್ಲರನ್ನೂ ಪ್ರೀತಿ, ಗೌರವದಿಂದ ನೋಡಿಕೊಳ್ಳಬೇಕಾದ ಕೆಲಸ ನನ್ನದಾಯಿತು. ಮದುವೆಗೂ ಮುಂಚೆ-'ಅಮ್ಮಾ ಎಂದು ಗೋಗರೆದರೆ ಸಾಕು-ಕಾಫಿ ಬರುತ್ತಿತ್ತು. ಊಟ ಸಿಗುತ್ತಿತ್ತು. ಮಾಡಿದ ತಪ್ಪುಗಳಿಗೆ ಕ್ಷಮೆಯೂ ಸಿಗುತ್ತಿತ್ತು. ಇಷ್ಟಬಂದಂತೆ ವರ್ತಿಸಲು ಒಪ್ಪಿಗೆ ಕೂಡ ದೊರಕುತ್ತಿತ್ತು. ಆದರೆ, ಗಂಡನ ಮನೆಯಲ್ಲಿ ಎಲ್ಲರಿಗಿಂತ ಮೊದಲು ನಾನೇ ಏಳಬೇಕಿತ್ತು. ಮನೆಯ ಮುಂದೆ ರಂಗೋಲಿ ಹಾಕಿ, ಕಾಫಿಗೆ ನೀರು ಇಡುವುದರೊಂದಿಗೆ ದಿನಚರಿ ಶುರುವಾಗುತ್ತಿತ್ತು. ಮಾವನಿಗೆ ಉಪ್ಪಿಲ್ಲದ ತಿಂಡಿ, ಉಳಿದವರಿಗೆ ರುಚಿ ರುಚಿಯಾದ ತಿಂಡಿ ತಯಾರಿಸಬೇಕಾಗುತ್ತಿತ್ತು. ಅದಕ್ಕಿಂತ ಹೆಚ್ಚಾಗಿ, ಪೈಜಾಮ, ಟಿ-ಶರ್ಟ್ ಧರಿಸುವಂತಿರಲಿಲ್ಲ! ಏಕೆಂದರೆ, ಮದುವೆಯ ನಂತರ ನಾನು ಒಂದು ಕುಟುಂಬದ ಸೊಸೆ ಆಗಿದ್ದೆನಲ್ಲವೆ? ಆನಂತರದಲ್ಲಿ ಒಂದೊಂದೇ ಹೊಸ ಜವಾಬ್ದಾರಿಗಳು ಹೆಗಲೇರಿದವು. ಗೃಹಿಣಿ ಅನ್ನಿಸಿಕೊಳ್ಳಬೇಕಾದರೆ, ಉಡಾಫೆಯಿಂದ ಮಾತಾಡುವುದನ್ನು, ಚೆಲ್ಲು ಚೆಲ್ಲಾಗಿ ವರ್ತಿಸುವುದನ್ನು ಬಿಡಲೇಬೇಕು ಅನ್ನಿಸಿತು.
ಅಂಥ ಸಂದರ್ಭದಲ್ಲೆಲ್ಲ -ನನ್ನಿಷ್ಟದ ಬಟ್ಟೆ ಧರಿಸದಂತೆ, ಮನಸ್ಸು ಬಂದಾಗೆಲ್ಲ ಐಸ್‌ಕ್ರೀಂ, ಪಾನಿಪುರಿ ತಿನ್ನದಂತೆ, ಗೆಳತಿಯರೊಂದಿಗೆ ಹಗಲಿಡೀ ಸುತ್ತಾಡದಂತೆ, ಮನಸ್ಸಿಲ್ಲದಿದ್ದರೂ ಹೊಂದಿಕೊಂಡು ಬದುಕುವಂತೆ ಮಾಡಿದ ಬಗ್ಗೆಯೇ ಸಿಟ್ಟು ಬರುತ್ತಿತ್ತು. ಆಗೆಲ್ಲಾ ಅಮ್ಮ ನೆನಪಾಗುತ್ತಿದ್ದಳು. ಸೀದಾ ಹೋಗಿ ಅಮ್ಮನ ಮಡಿಲಲ್ಲಿ ಮಲಗಿಬಿಡಬೇಕು. ನನ್ನ ಸಂಕಟವನ್ನೆಲ್ಲ ಅವಳಿಗೆ ಹೇಳಿಬಿಡಬೇಕು ಅನ್ನಿಸಿತು. ಅದೇ ಉದ್ದೇಶದಿಂದ ತವರಿಗೆ ಹೊರಟು ನಿಂತೆ. ಆದರೆ ಲಗೇಜ್ ಎತ್ತಿಕೊಂಡು ಎರಡು ಹೆಜ್ಜೆ ಇಟ್ಟ ತಕ್ಷಣ-ಅರೆ, ಅಮ್ಮ ಕೂಡ ನನ್ನಂಥದೇ ಸಂಕಟಗಳಿಂದ ಒದ್ದಾಡುತ್ತಿರಬಹುದು ಅಲ್ಲವೆ? ಮನೆಯ ಗುಟ್ಟುಗಳು, ಮಕ್ಕಳ ತಪ್ಪುಗಳು, ಗಂಡನ ಬಲಹೀನತೆಗಳು, ತನ್ನ ಮುರುಟಿ ಹೋದ ಕನಸುಗಳ ಸಂಗತಿಯನ್ನು ಆಕೆ ದಶಕಗಳಿಂದಲೂ ಎದೆಯೊಳಗೇ ಬಚ್ಚಿಟ್ಟುಕೊಂಡು ಒಂದು ಚೆಂದದ ಸಂಸಾರ ಕಟ್ಟಿದಳಲ್ಲವೆ ಅನ್ನಿಸಿಬಿಟ್ಟಿತು. ಅಷ್ಟೆ: ಆ ಕ್ಷಣವೇ ತವರಿಗೆ ಹೋಗಬೇಕೆಂಬ ನಿರ್ಧಾರವನ್ನು ಕೈ ಬಿಟ್ಟೆ. ಒಳ್ಳೆಯ ಗೃಹಿಣಿ ಅನ್ನಿಸಿಕೊಳ್ಳಲಿಕ್ಕೆ ಹೀಗೆಲ್ಲಾ ಬದಲಾಗಬೇಕೆಂದು ಪ್ಲಾನ್ ಮಾಡಿಕೊಂಡು ಬದಲಾಗಿ ಬಿಟ್ಟೆ...' ಅಂದಳು.
ಹೌದಲ್ಲವಾ? ಮದುವೆಯ ನಂತರ, ಹೆಚ್ಚಿನ ಹುಡುಗಿಯರು ಹೀಗೆಲ್ಲಾ ಬದಲಾಗಿ ಬಿಡುತ್ತಾರೆ. ಇಂಥದೊಂದು ದಿಢೀರ್ ಬದಲಾವಣೆಗೆ ಏನೆಲ್ಲಾ ಕಾರಣವಿರಬಹುದು ಎಂದು ಯಾರೂ ಯೋಚಿಸುವುದಿಲ್ಲ. ಬದಲಾಗಿ, ಮದುವೆ ಆದ ಮೇಲೆ ಜವಾಬ್ದಾರಿ ತಾನೇ ತಾನಾಗಿ ಬಂದುಬಿಡುತ್ತೆ. ಹುಡುಗೀರು ಆಟೋಮ್ಯಾಟಿಕ್ ಆಗಿ ಬದಲಾಗಿ ಬಿಡ್ತಾರೆ ಎಂದು ತೇಲಿಸಿ ಮಾತಾಡುತ್ತಾರೆ. ಆದರೆ, ಹೀಗೆ ಬದಲಾಗುವ ಸಂದರ್ಭದಲ್ಲಿ ಹೆಣ್ಣೊಬ್ಬಳು ಮಾಡುವ 'ತ್ಯಾಗ'ಗಳು ಯಾರಿಗೂ ಗೊತ್ತಾಗುವುದಿಲ್ಲ. ಅವಳ ಅಂತರಂಗದ ನೋವು ಯಾರಿಗೂ ಕೇಳಿಸುವುದಿಲ್ಲ, ಕಾಣಿಸುವುದಿಲ್ಲ, ಅರ್ಥವಾಗುವುದೂ ಇಲ್ಲ!
ವಿಪರ್ಯಾಸವೆಂದರೆ ಇದೇ ತಾನೆ?
-ನಾನು ಪ್ರಣತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

