ಕುಸಿದು ಬಿದ್ದ ರಾಜಕೀಯ ಪಕ್ಷಗಳ ವ್ಯವಸ್ಥೆ
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಅವರು...
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಅವರು "ಕಾರಣಾಂತರಗಳಿಂದ" ಬಿಜೆಪಿಯನ್ನು ತ್ಯಜಿಸಿ ತಮ್ಮದೇ ಆದ ರಾಷ್ಟ್ರೀಯ ಕ್ರಾಂತಿ ದಳವನ್ನು ರಚಿಸಿಕೊಂಡು, ಚುನಾವಣೆಯಲ್ಲೂ ಸ್ಪರ್ಧಿಸಿ, ಸೋತು ಮತ್ತೆ "ಮಾತೃ ಪಕ್ಷಕ್ಕೆ" ಬಂದಿದ್ದರು. ಅದನ್ನು ಬಹುಕಾಲ ಪಕ್ಷದ ಪ್ರಮುಖರು ಗಮನಿಸಿರಲಿಲ್ಲ. ಈಗ ಚುನಾವಣೆಯ ಸಮಯದಲ್ಲಿ ದಿಢೀರನೆ ಕಲ್ಯಾಣ್ ಸಿಂಗ್ ಅವರನ್ನು ಬಿಜೆಪಿಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂಬ ಪ್ರಕಟಣೆ ಹೊರಬಿದ್ದಿದೆ. ಈ ನೇಮಕವನ್ನು ಪಕ್ಷದ ಯಾವ ಸಮಿತಿ ಮಾಡಿತೋ ಗೊತ್ತಿಲ್ಲ. ದರೆ ಅದನ್ನು ಪಕ್ಷದ ರಾಜ್ಯ ಘಟಕಗಳು ಒಪ್ಪಿವೆಯೇನು? ಗೊತ್ತಿಲ್ಲ.
ಹೆಚ್ಚು ಕಡಿಮೆ, ಅದೇ ರೀತಿಯಲ್ಲಿ ಕರ್ನಾಟಕದಲ್ಲಿ ಪಕ್ಷದ ಪರವಾಗಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು "ಕಾರಣಾಂತರಗಳಿಂದ" ಪಕ್ಷವನ್ನು ತ್ಯಜಿಸಿ, ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿಕೊಂಡೋ ಅಥವಾ ಅಸ್ತಿತ್ವದಲ್ಲಿದ್ದ ಆ ಪಕ್ಷವನ್ನು ವಹಿಸಿಕೊಂಡೋ, ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತರು. ಈಗ ಮತ್ತೆ ರಾಜ್ಯ ಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ನಾಯಕರೇ ಆಗಿದ್ದಾರೆ. ಇಂತಹ ಪ್ರಕರಣಗಳನ್ನು ಪ್ರಾಯಶಃ ದೇಶದ ಎಲ್ಲ ರಾಜಕೀಯ ಪಕ್ಷಗಳ ವಿಚಾರದಲ್ಲೂ ಹೇಳಬಹುದು. ಇದು ವೈಯಕ್ತಿಕ ಸಮಸ್ಯೆ ಅಥವಾ ವರ್ತನೆಯಲ್ಲ. ಚುನಾವಣೆಯಲ್ಲಿನ ಹೊಂದಾಣಿಕೆಯಂತಹ ಪ್ರಮುಖವಾದ ವಿಚಾರದಲ್ಲಿ, ಎಲ್ಲ ಪಕ್ಷಗಳಲ್ಲೂ ಈಗ ಅನಧಿಕೃತವಾಗಿ, ಯಾವುದೇ ವಿಧಿ ನಿಯಮಗಳೂ ಇಲ್ಲದ ರೀತಿಯಲ್ಲಿ ತಲೆ ಎತ್ತಿರುವ "ಕೋರ್ ಕಮಿಟಿಗಳು" (ಅದಕ್ಕೆ ಸಮಾನವಾದ ಕನ್ನಡ ಪದ ಇನ್ನೂ ಜಾರಿಗೆ ಬಂದಿಲ್ಲ) ನಿರ್ಧಾರವನ್ನು ಪ್ರಕಟಿಸುವುದು ಸಾಮಾನ್ಯವಾಗಿದೆ. ಆದರೂ ವಿಶ್ಲೇಷಕರು ನಾನಾ ಪಕ್ಷಗಳ ಸಮಿತಿಗಳ ನಿರ್ಣಯಗಳನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ವಿಶ್ಲೇಷಿಸುವ ಪ್ರವೃತ್ತಿಯನ್ನು ಇನ್ನೂ ಕೈ ಬಿಟ್ಟಿಲ್ಲ. ಶಕ್ತಿ ರಾಜಕೀಯದ ಹಲ್ಲಾಹಲ್ಲಿಯಲ್ಲಿ ದುಷ್ಟರಾರು- ಶಿಷ್ಟರಾರು ಎನ್ನುವುದನ್ನು ಹುಡುಕುವುದೇ ಕಷ್ಟವಾಗಿದೆ. ಸದ್ಯದಲ್ಲಿ ಕರ್ನಾಟಕಕ್ಕೆ ಆ ಸಮಸ್ಯೆ ಇಲ್ಲ. ಇಲ್ಲಿ ಪಕ್ಷಗಳ ವಿಲೀನ, ಹೊಂದಾಣಿಕೆಯ ಸಮಸ್ಯೆ ಇಲ್ಲ. ಬಿಎಸ್‌ವೈ ಅವರು ಬೇಷರತ್ತಾಗಿ ಬಿಜೆಪಿಗೆ ಹಿಂತಿರುಗಿ ಆ ಸಮಸ್ಯೆಯನ್ನು ತಪ್ಪಿಸಿದ್ದಾರೆ. ಇನ್ನು ಉಳಿದಿರುವುದು ಬಳ್ಳಾರಿ ಸೀಮೆಯ ಶ್ರಮಜೀವಿಗಳ ನಾಯಕ ಶ್ರೀರಾಮುಲು ಅವರದ್ದು ಮಾತ್ರ. ಅದೂ ನಿಜವಾದ ಅರ್ಥದಲ್ಲಿ ಒಂದು ಸಮಸ್ಯೆಯೇ ಅಲ್ಲ ಎನ್ನುವಂತಾಗಿದೆ. ಆದರೆ ಈ ಹೊಂದಾಣಿಕೆ ಸಮಸ್ಯೆ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು, ಬಿಹಾರ, ಉತ್ತರ ಪ್ರದೇಶಗಳಲ್ಲಿ ನಿಜಕ್ಕೂ ಒಂದು ದೊಡ್ಡ ತಲೆನೋವಿನ ವಿಚಾರವೇ.
ಪರಮೇಶ್ವರ- ಸಿದ್ದರಾಮಯ್ಯ: ರಾಜ್ಯದಲ್ಲಿ, ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿ ಚುನಾವಣೆಯಲ್ಲಿ ತಂತ್ರಗಳನ್ನು ರೂಪಿಸುವ ಅಗತ್ಯ ಹೆಚ್ಚಾಗಿ ಕಂಡು ಬರುತ್ತಿಲ್ಲ. ಮುಖ್ಯಮಂತ್ರಿ ಹಾಗೂ ಇತರ ಮಂತ್ರಿಗಳೇ ಆ ಕೆಲಸವನ್ನು ಮಾಡಬೇಕು. ಸಿದ್ದರಾಮಯ್ಯ ಅವರೇನೋ ಆ ಕೆಲಸವನ್ನು ಜನಪರ ಎನ್ನಬಹುದಾದ ನಿರ್ಧಾರಗಳ ಮೂಲಕ ಹಲವಾರು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿ ಮುಂದುವರಿಸಿಕೊಂಡು ಹೋಗಿದ್ದಾರೆ. ಅದು ಬಿಟ್ಟರೆ, ಅವರು ಸಂಪೂರ್ಣವಾಗಿ ಅವಲಂಬಿಸಿರುವುದು ಅಹಿಂದ ಸಮಾಜದ ಬೆಂಬಲವನ್ನೇ. ಒಕ್ಕಲಿಗರು, ಲಿಂಗಾಯಿತರು, ಬ್ರಾಹ್ಮಣರಂತಹ ಗುಂಪುಗಳ ತಂಟೆಗೆ ಸಿದ್ದರಾಮಯ್ಯ ಹೋಗುತ್ತಿಲ್ಲ.
ಆದರೆ, ಕಾಂಗ್ರೆಸ್ ರಥದ ಜೋಡಿ ಕುದುರೆಗಳಂತೆ ವರ್ತಿಸಬೇಕಾದ ಮುಖ್ಯಮಂತ್ರಿ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರು ಒಟ್ಟಿಗೆ ಕಾಣಿಸಿಕೊಳ್ಳುವುದೇ ಅಪರೂಪವಾಗಿದೆ. ನಿಜ. ಇಬ್ಬರ ಉದ್ದೇಶವೂ ಕಾಂಗ್ರೆಸ್ಸನ್ನು ಗೆಲ್ಲಿಸುವುದೇ. ಅದಕ್ಕೆ ಇರುವುದು ಒಂದೇ ದಾರಿ ಅಂದರೆ ಜನರ ಮತಗಳನ್ನು ಪಡೆಯುವುದು. ಈಗ ಅವರುಗಳು ಬೇರೆ ಬೇರೆ ದಾರಿಗಳನ್ನು ಹಿಡಿದಂತೆ ಇದೆಯಲ್ಲಾ ಎನಿಸುತ್ತಿದೆ. ರಾಜ್ಯ ಛಲವಾದಿಗಳ ಸಮುದಾಯದ ಸಮ್ಮೇಳನದಲ್ಲಿ ಡಾ. ಜಿ. ರಪಮೇಶ್ವರ ಅವರು ತಮ್ಮ ಜನಾಂಗದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸುವ ಉದ್ದೇಶದ ಭರದಲ್ಲಿ ಛಲವಾದಿಗಳಿಗೆ (ಪರಿಶಿಷ್ಟರಿಗೆ) ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಂತಹ ಪದವಿಗಳನ್ನು ನಿರಾಕರಿಸುತ್ತಿರುವವರನ್ನು ಕುರಿತು ಪ್ರಸ್ತಾಪಿಸಿದ್ದಾರೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೇ ಇಂತಹ ಮಾತನ್ನು ಆಡಿದರೆ ದಲಿತ ಸಮುದಾಯಗಳ ನಾಯಕರು ಬೇರೆ ಭಾಷೆಯನ್ನು ಬಳಸುವುದು ಸಹಜವೇ.
ಬಿಜೆಪಿ: ಯಾರಿಗೆ ಯಾರುಂಟು: ಬಿಜೆಪಿಯಲ್ಲಿ ವಿರೋದಾಭಾಸಗಳು ಸಾಕಷ್ಟಿವೆ. ಬಿಎಸ್‌ವೈ ವಿಧಿವತ್ತಾಗಿ ಪಕ್ಷಕ್ಕೆ ಹಿಂತಿರುಗಿದ ಮೇಲೆ, ವಿವಾದಗಳನ್ನು ಸೃಷ್ಟಿಸುವ ವಿಷಯಗಳಿಗೆ ಕೈ ಹಾಕಿಲ್ಲ. ಕರ್ನಾಟಕ ಬಿಜೆಪಿಗೆ ಯಡಿಯೂರಪ್ಪ ಅವರು ಬೇಕಾಗಿದೆ. ಈಗೇನೂ ಮಂತ್ರಿ ಸ್ಥಾನಕ್ಕೆ ಹೋರಾಡುವಂತಹ ಸ್ಥಿತಿಯಲ್ಲಿ ರಾಜ್ಯದ ಯಾವ ನಾಯಕರೂ ಇಲ್ಲ. ಆದರೆ ಉ.ಕರ್ನಾಟಕದಂತಹ ವಿಶಾಲವಾದ ಪ್ರದೇಶದಲ್ಲಿ ಪ್ರಮುಖ ಹಾಗೂ ಪ್ರಭಾವಿ ಜನಾಂಗವಾದ ವೀರಶೈವರನ್ನು ಒಲಿಸಿಕೊಳ್ಳುವುದು ಬಿಎಸ್‌ವೈ ಅವರೊಬ್ಬರದ್ದೇ ಜವಾಬ್ದಾರಿ ಎನ್ನುವಂತೆ ಇತರ ನಾಯಕರು ವರ್ತಿಸುವಂತಿಲ್ಲ. ಅವರ ಜತೆ ಯಾರಾದರೂ ಇರಲೇಬೇಕು. ಆ ಪಾತ್ರವನ್ನು ನಿರ್ವಹಿಸಬಲ್ಲ ಬೊಮ್ಮಾಯಿ ಏಕೋ ಹೆಚ್ಚು ಬೆಳಕಿನಲ್ಲಿ ಬಂದಿಲ್ಲ. ಕರಾವಳಿ ಹಾಗೂ ಘಟ್ಟದ ಸೀಮೆಯಲ್ಲೂ, ಬಿಜೆಪಿ ಪ್ರದರ್ಶನ ಸಾಲದು. ಹೈ.ಕ.ದಲ್ಲಿ ಬಿಜೆಪಿಯ ಶಕ್ತಿ ಹೇಳಿಕೊಳ್ಳುವಂತೆ ಇಲ್ಲ. ಆ ಭಾಗದ ರಾಜ್ಯದ ಕಾಂಗ್ರೆಸ್ ನಾಯಕರೆಂದರೆ ಖರ್ಗೆ ಮತ್ತು ಧರಮ್‌ಸಿಂಗ್ ಅವರೇ. ಅವರಿಬ್ಬರೂ ಈಚಿನ ದಿನಗಳಲ್ಲಿ ತಾವಾಯಿತು- ದೆಹಲಿಯಾಯಿತು ಎನ್ನುವಂತೆ ಇದ್ದವರು. ಖರ್ಗೆ ಬೆಂಗಳೂರಿನಲ್ಲಿ ರಾಜಕೀಯದ ಮಾತಾಡುತ್ತಿರುವುದು ಕಡಿಮೆ. ಕೊಪ್ಪಳ, ರಾಯಚೂರು ಸೀಮೆಯಲ್ಲಿ ಬಳ್ಳಾರಿಯಂತೆ ಇತರೆ ಹಿಂದುಳಿದ ಜಾತಿ-ಪಂಗಡಗಳ ಪ್ರಬಲ ಮತ ಬ್ಯಾಂಕ್‌ಗಳಿವೆ. ಆ ಮತ ಬ್ಯಾಂಕ್‌ಗಳನ್ನು ರೂಢಿಸುವ ಸಾಮರ್ಥ್ಯ (ಬಳ್ಳಾರಿ ರಾಯಚೂರು ಕೊಪ್ಪಳ ಗದಗ್ ಸೀಮೆಯಲ್ಲಿ) ಇರುವ ಶ್ರೀರಾಮುಲು ಇನ್ನೂ ಯಾರ ಪರವಾಗಿಯೂ ಮೈದಾನ ಪ್ರವೇಶ ಮಾಡಿಲ್ಲ. ಚುನಾವಣಾ ಕಾವು ಇನ್ನೂ ಆ ಹಂತ ತಲುಪಿಲ್ಲ.
ಜೆಡಿಎಸ್‌ಗೆ ಸವಾಲು: ಜೆಡಿಎಸ್, ರಾಜ್ಯದಲ್ಲಿ ತೃತೀಯ ರಂಗ ಅಥವಾ ಪರ್ಯಾಯರಂಗದ ಪಾತ್ರವನ್ನು ನಿರ್ವಹಿಸಬೇಕಿದೆ. ಇಲ್ಲಿ ಗೌಡರ ಕುಟುಂಬ ಶಕ್ತಿಯ ಜತೆ ಕೈ ಜೋಡಿಸಲು ಕಮ್ಯುನಿಸ್ಟರನ್ನು ಬಿಟ್ಟು ಬೇರೆ ಯಾವ ಶಕ್ತಿಯೂ ಸಿದ್ಧವಾಗಿಲ್ಲ. ಕಮ್ಯುನಿಸ್ಟರಿಗೆ ಸ್ಪರ್ಧಿಸಿ ಗೆಲ್ಲುವ ಅವಕಾಶವಿರುವ ಕ್ಷೇತ್ರಗಳು ರಾಜ್ಯದಲ್ಲಿಲ್ಲ. ದೇವೇಗೌಡರ ಕುಟುಂಬದ ರಾಜಕೀಯ ಶಕ್ತಿ ಈಗಲೇ ಪರೀಕ್ಷೆಗೆ ಒಳಗಾಗುವುದು. ವಿಧಾನ ಸಭೆ ಕ್ಷೇತ್ರಗಳಲ್ಲಿ ಕೆಲವು ಕಡೆಗಳಲ್ಲಿ ಹಲವು ವ್ಯಕ್ತಿಗಳು ತಮ್ಮ ಸ್ವಂತ ಶಕ್ತಿಯ ಆಧಾರದ ಮೇಲೆ ಗೆಲ್ಲಬಹುದು. ಅಂತಹವರಲ್ಲಿ ಕೆಲವರು ದೇವೇಗೌಡರ ನೇತೃತ್ವದ ಜೆಡಿಎಸ್‌ನಲ್ಲಿ ಇದ್ದಾರೆ. ಆದರೆ ಲೋಕಸಭೆ ಕ್ಷೇತ್ರದಲ್ಲಿ ಸ್ವಂತ ಶಕ್ತಿಯಿಂದಲೇ ಗೆಲ್ಲಬಲ್ಲ ಅಭ್ಯರ್ಥಿಗಳು ಅಪರೂಪ. ಈಗ ಯಾರೇ ಆದರೂ ಜಾತಿಯ ಬೆಂಬಲ ಬೇಕು. ಆ ಲೆಕ್ಕದಲ್ಲಿ ಜೆಡಿಎಸ್‌ನ ಪರಿಣಾಮಕಾರಿ ಸ್ಪರ್ಧೆಗೆ ಅವಕಾಶವಿರುವ ಕ್ಷೇತ್ರಗಳ ಸಂಖ್ಯೆ ಎರಡಂಕಿಯನ್ನು ಮುಟ್ಟುವುದಿಲ್ಲ. ಆದರೂ ದೇವೇಗೌಡರಿಗೆ ರಾಷ್ಟ್ರಮಟ್ಟದಲ್ಲಿ ಪರಿಣಾಮಕಾರಿ ರಾಜಕೀಯದ ಆಟಕ್ಕೆ ಮಾಜಿ ಪ್ರಧಾನಿ ಎನ್ನುವ ಪ್ರಭಾವಳಿಯ ಜತೆಯಲ್ಲಿ ಲೋಕಸಭೆಯಲ್ಲಿ ಕನಿಷ್ಠ ಹತ್ತು ಸ್ಥಾನಗಳಾದರೂ ಬೇಕು. ಈ ಲೆಕ್ಕದಲ್ಲಿ ಅವರ ಕುಟುಂಬದಿಂದ ಕನಿಷ್ಟ ಪಕ್ಷ ಇಬ್ಬರಾದರೂ ಸ್ಪರ್ಧಿಸಿ ರಾಜಕೀಯವಾಗಿ ರಾಷ್ಟ್ರೀಯ ಗಮನವನ್ನು ಸೆಳೆಯಲೇಬೇಕಾದ ಅನಿವಾರ್ಯತೆ ಕಂಡು ಬಂದಿದೆ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೇಂದ್ರದಲ್ಲಿನ ಪ್ರಭಾವಿ ಮಂತ್ರಿ, ವೀರಪ್ಪ ಮೊಯಿಲಿ ಅವರನ್ನು ಎದುರಿಸುವ ಯೋಚನೆ ಗೌಡರ ಕುಟುಂಬದಲ್ಲಿ ಇದ್ದಂತಿದೆ. ಮುಂದಿನ ವಾರದ ವೇಳೆಗೆ ಅಧಿಕೃತವಾಗಿಯೇ ಚುನಾವಣೆಯ ಕಾವು ಸಾಕಷ್ಟು ಹೆಚ್ಚುತ್ತದೆ. ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳು ಏನು ಮಾಡಿದರೂ ಪಾಪವಲ್ಲ ಎನ್ನುವುದನ್ನು ಎಲ್ಲ ಪಕ್ಷಗಳೂ ಘೋಷಿಸಿರುವುದರಿಂದ ಮುಂದಿನ ಹೆಜ್ಜೆಗಳನ್ನು ಗುರ್ತಿಸುವುದು, ನೀರಿನಲ್ಲಿ ಮೀನಿನ ಹೆಜ್ಜೆಗಳ ಜಾಡು ಹಿಡಿದಷ್ಟೇ ಕಷ್ಟ.
ಕಿಡಿಗೇಡಿತನ : ಜಮ್ಮು - ಕಾಶ್ಮೀರಕ್ಕೆ ಸಂವಿಧಾನದ ವಿಶೇಷ ರಕ್ಷಣೆ. ಈಶಾನ್ಯ ಭಾರತದ ರಾಜ್ಯಗಳು ಇರುವುದೇ ವಿಶೇಷಪರಿಸ್ಥಿತಿಯಲ್ಲಿ. ವಿದರ್ಭಕ್ಕೆ ವಿಶೇಷ ಸ್ಥಾನಮಾನವಿದೆ. ಈಗ ಹೈದರಾಬಾದ್ ಕರ್ನಾಟಕಕ್ಕೂ ಆ ಸ್ಥಾನಮಾನ ಲಭ್ಯ, ಆಂಧ್ರ - ತೆಲಂಗಾಣಕ್ಕೂ ವಿಶೇಷ ವ್ಯವಸ್ಥೆಯನ್ನು ಪ್ರಕಟಿಸಲಾಗಿದೆ. ಬಿಹಾರಕ್ಕೆ ಅದು ಸಿಗಲೇಬೇಕು. ಹಾಗಿದ್ರೆ "ಸಾಮಾನ್ಯ ಭಾರತ"ದ ಸೀಮೆಯನ್ನು ಗುರ್ತಿಸುವ ಗಡಿಗಳು ಯಾವುವು ?
- ಸತ್ಯ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

