ಅಂಕಣಗಳು

ಬನ್ನಿ.., ಚುನಾವಣೆ ಭರವಸೆಗಳು ಬಣ್ಣ ಬಣ್ಣಗಳಲ್ಲಿ ಲಭ್ಯ

ಚುನಾವಣೆ ಬಂತೆಂದರೆ ಸಾಕು, ಈ ರಾಜಕಾರಣಿಗಳು ಅಲಾರಾಂ...

ಬನ್ನಿ.., ಚುನಾವಣೆ ಭರವಸೆಗಳು ಬಣ್ಣ ಬಣ್ಣಗಳಲ್ಲಿ ಲಭ್ಯ
Published On :

ಚುನಾವಣೆ ಬಂತೆಂದರೆ ಸಾಕು, ಈ ರಾಜಕಾರಣಿಗಳು ಅಲಾರಾಂ ಇಟ್ಟಂತೆ ನಿದ್ದೆಯಿಂದ ಎದ್ದು ಕೂರುತ್ತಾರೆ. ಅದು ವಿಧಾನಸಭೆ ಚುನಾವಣೆ ಇರಬಹುದು, ಲೋಕಸಭೆ ಚುನಾವಣೆ ಇರಬಹುದು. ಇನ್ಯಾವುದೋ ಸ್ಥಳೀಯ ಸಂಸ್ಥೆ ಚುನಾವಣೆ ಇರಬಹುದು. ಯಾರೂ ಎಚ್ಚರಿಸುವುದು ಬೇಕಿಲ್ಲ. ದಡಕ್ಕನೆ ಎದ್ದು ಮತದಾರರ ಬೆನ್ನು ದಡವುತ್ತಾರೆ. ಇರುವ, ಇಲ್ಲದ ಕೆಲಸಗಳನ್ನು ಹುಡುಕಿಕೊಂಡು ಹೊರಡುತ್ತಾರೆ.
ಹೌದು, ಈ ಚುನಾವಣೆಗೂ ಜನೋಪಯೋಗಿ ಯೋಜನೆಗಳಿಗೂ ಅವಿನಾಭಾವ ಸಂಬಂಧ. ಆಗ ಹೊಸ ಯೋಜನೆಗಳು ಸೃಷ್ಟಿಯಾಗುತ್ತವೆ. ಹಳೇ ಯೋಜನೆಗಳು ನವೀಕರಣಗೊಳ್ಳುತ್ತವೆ. ತತ್ಪರಿಣಾಮವಾಗಿ ಎಲ್ಲೆಂದರಲ್ಲಿ ಅಡಿಗಲ್ಲುಗಳು ನೆಟ್ಟಗಾಗುತ್ತವೆ. ಅವಕ್ಕೆ ಶಿಲಾನ್ಯಾಸ, ಶಂಕುಸ್ಥಾಪನೆ, ಉದ್ಫಾಟನೆ, ಪುನರುಜ್ಜೀವನ, ನವೀಕರಣ ಎಂಬಿತ್ಯಾದಿ ವಿಭಿನ್ನ ಹೆಸರುಗಳಿಂದ ಕೂಗಿ, ಅಹ್ವಾನ ಪತ್ರಿಕೆಗಳನ್ನು ಹಂಚಲಾಗುತ್ತದೆ. ಎಲ್ಲವೂ ಮತ ಸೆಳೆವ ಹೂವುಗಳೇ!
ಆಹಾ..! ಚುನಾವಣೆ ಸಮೀಪಿಸುತ್ತಿದ್ದಂತೆ ಈ ರಾಜಕಾರಣಿಗಳಲ್ಲಿ ಜನರ ಬಗ್ಗೆ ಅದೇನು ವಿನಯ, ಅದೇನು ಪ್ರೀತಿ, ಅದೇನು ಮಮಕಾರ ಉಕ್ಕುಕ್ಕಿ ಹರಿಯುತ್ತದೆ. ಮಳೆಗಾಲದಲ್ಲಿ ಭೋರ್ಗರೆವ ಮಲೆನಾಡ ಜಲಪಾತಗಳಂತೆ. ನಾಲ್ಕೂ ಮುಕ್ಕಾಲು ವರ್ಷ ಮನೆಬಾಗಿಲಿಗೆ ಬಂದ ಜನರನ್ನು ಒಳಗಿದ್ದುಕೊಂಡೇ ಇಲ್ಲ ಎಂದು ಹೇಳಿ ಸಾಗಹಾಕುತ್ತಿದ್ದ ರಾಜಕಾರಣಿಗಳು, ಇದೀಗ ದಾರಿಯಲ್ಲಿ ತಮ್ಮನ್ನು ನೋಡದೆ ಹೋಗುವವರನ್ನೂ ಹೆಸರಿಡಿದು ಕರೆದು ಮಾತಾಡಿಸುವುದೇನು? ಅವರ ಮತ್ತು ಅವರ ಕುಟುಂಬದ ಸದಸ್ಯರ ಆರೋಗ್ಯ ವಿಚಾರಿಸುವುದೇನು? ಏನಾದರೂ ಕೆಲಸ ಆಗುವುದಿದೆಯೇ ಎಂದು ಕೇಳುವುದೇನು..? ಅವರ ಈ ಬೂಟಾಟಿಕೆಗೆ ನಾಜೂಕಯ್ಯ ಕೂಡ ನಾಚಿ ನೀರಾಗಬೇಕು.
ಇವು ಚುನಾವಣೆಗೆ ನಿಲ್ಲುವ ಲೋಕಲ್ ಲೀಡರ್‌ಗಳ ಹಲಾಲು ಟೋಪಿ ಆಟವಾದರೆ, ಇನ್ನು ಸರಕಾರದ ನಾಟಕವೇ ಬೇರೆ. ಅದು ಕೇಂದ್ರ ಸರಕಾರವಿರಲಿ, ರಾಜ್ಯ ಸರಕಾರವಿರಲಿ ಪೈಪೋಟಿಗೆ ಬಿದ್ದಂತೆ ಮತದಾರರನ್ನು ಸೆಳೆಯಲು ಹೊಸ ಯೋಜನೆಗಳನ್ನು ಘೋಷಿಸುತ್ತವೆ. ಸೌಲಭ್ಯಗಳನ್ನು ಕಲ್ಪಿಸುತ್ತವೆ. ಸರಕಾರಿ ನೌಕರರಿಗಂತೂ ಬಂಪರ್ ಕೊಡುಗೆಗಳು. ಕೊಟ್ಟಿದ್ದೇ ಕೊಟ್ಟಿದ್ದು. ಏನೋ ಸರಕಾರಗಳಿಗಂತೂ ಇದ್ದಕ್ಕಿದ್ದಂತೆ ಮತದಾರರ ಮೇಲೆ ಇನ್ನಿಲ್ಲದ ಪ್ರೀತಿ ಬಂದೆರಗುತ್ತದೆ. ಥೇಟು ಚುನಾವಣೆ ಶೈಲಿಯಲ್ಲಿಯೇ.
ಇನ್ನೇನು ಲೋಕಭೆ ಚುನಾವಣೆ ದಿನಾಂಕ ಘೋಷಣೆ ಆಗಲಿರುವ ಸಂದರ್ಭದಲ್ಲಿ ಕರ್ನಾಟಕದ ಪಾಲಿಗಂತೂ ಡಬಲ್ ಧಮಾಕ. ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಕಾಂಗ್ರೆಸ್ ಸರ್ಕಾರವೇ ಇರುವುದರಿಂದ ಕೊಡುಗೆಗಳು ಭರಪೂರ. ಇದಕ್ಕೆ ಇನ್ನೂ ಒಂದು ಕಾರಣ ಇದೆ. ಸಾಧನೆಯಲ್ಲಾಗಲಿ, ಚುನಾವಣೆ ಪೂರ್ವ ಸಮೀಕ್ಷೆಯಲ್ಲಾಗಲೀ ಕೇಂದ್ರದ ಯುಪಿಎ ಸರ್ಕಾರದ ಗತಿ ಅಧೋಗತಿಗೆ ಇಳಿದಿದೆ. ದೇಶದ ಯಾವುದೇ ರಾಜ್ಯದಲ್ಲಾಗಲಿ ಎರಡಂಕಿ ದಾಟುವುದು ಕಷ್ಟ ಎಂಬ ವ್ಯಾಖ್ಯಾನಗಳು ಕಾಂಗ್ರೆಸ್ಸನ್ನು ಆತಂಕದ ಮಡುವಿಗೆ ತಳ್ಳಿವೆ. ಇಂಥ ಸನ್ನಿವೇಶದಲ್ಲೂ ಕರ್ನಾಟಕ ಮಾತ್ರ ಕಾಂಗ್ರೆಸ್ ಪಾಲಿಗೆ ಆಶಾಕಿರಣವಾಗಿ ಉಳಿದಿದೆ. ಐದು ತಿಂಗಳ ಹಿಂದೆ ನಡೆದ ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭೆ ಮರು ಚುನಾವಣೆಯಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸಿರುವುದು ಕರ್ನಾಟಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವ ಎರಡರ ಬಗ್ಗೆಯೂ ವರಿಷ್ಠರಿಗೆ ವಿಶೇಷ ಮಮಕಾರ ಮೂಡಿಸಿದೆ. ಹೀಗಾಗಿ ಕರ್ನಾಟಕಕ್ಕೆ ಕೊಡುಗೆ ಮೇಲೆ ಕೊಡುಗೆ.
ಯಾವುದೇ ಸರ್ಕಾರ ಜನರಿಗೆ ಒಳಿತನ್ನು ಮಾಡಿದರೆ ಯಾರೂ ಬೇಡವೆನ್ನುವುದಿಲ್ಲ. ಅದು ಸ್ವಾಗತಾರ್ಹ ಕ್ರಮವೇ. ಜನ ಇಚ್ಛೆ ಪಟ್ಟು ಒಂದು ಸರ್ಕಾರವನ್ನು ಅಧಿಕಾರಕ್ಕೆ ತುರುವುದು ಉದ್ದೇಶವೇ ತಮ್ಮ ಹಿತಾಸಕ್ತಿಯನ್ನು ಕಾಯುತ್ತದೆ, ನಾಡಿನ ಏಳ್ಗೆಗೆ ಶ್ರಮಿಸುತ್ತದೆ ಎಂಬುದು. ಆದರೆ, ಈ ಸರ್ಕಾರಗಳಿಗೆ ಚುನಾವಣೆ ವರ್ಷದಲ್ಲಿ ಮತದಾರರ ಮೇಲೆ ವಿಶೇಷ ಪ್ರೀತಿ ಧಾರೆಯೆರೆಯುವುದು ಮಾತ್ರ ಲೋಭದ ಪರಮಾವಧಿ. ಎಲ್ಲಾ ಸಮಯದಲ್ಲೂ, ಎಲ್ಲ ಸಂದರ್ಭದಲ್ಲೂ ಜನರ ಕಲ್ಯಾಣದ ಬಗ್ಗೆ ಏಕರೂಪದ ಕಾಳಜಿ ಕಾಯ್ದುಕೊಂಡರೆ ಅದು ಮೆಚ್ಚುವಂತದ್ದೇ. ಆದರೆ, ಈಗ ಆಗಿರುವುದು ಮತ್ತು ಆಗುತ್ತಿರುವುದು ಮಾತ್ರ ವ್ಯತಿರಿಕ್ತ. ಹೀಗಾಗಿ ಸರ್ಕಾರಗಳ ವಿಶೇಷ ಮಮಕಾರ ಜನರ ವಿಶೇಷ ಅನುಮಾನಗಳಿಗೂ ಕಾರಣವಾಗಿದೆ.
ಈ ರೀತಿ ಜನರನ್ನು ದಾರಿ ತಪ್ಪಿಸುವುದರಲ್ಲಿ ಎರಡು ರೀತಿಯ ತಂತ್ರಗಳು ಅಡಗಿವೆ. ಸರ್ಕಾರ ಇಡೀ ನಾಡಿನ ಜನರ ಭಾವನೆಗಳ ಜತೆ ಆಟವಾಡುವುದು ಒಂದು ಕಡೆಯಾದರೆ, ಅಧಿಕಾರ ಕೈಯಲ್ಲಿರುವ ಅಭ್ಯರ್ಥಿಗಳು ಸಂದರ್ಭೋಚಿತ ಕೆಲಸಗಳ ಮೂಲಕ ಕ್ಷೇತ್ರದ ಜನರಿಗೆ ಗಾಳ ಹಾಕುವುದು ಇನ್ನೊಂದು ಕಡೆ. ಹೀಗಾಗಿ ಒಟ್ಟೊಟ್ಟಿಗೆ ಸಿಗುತ್ತಿರುವ ಕೊಡುಗೆ, ಭರವಸೆಗಳಿಂದ ಮತದಾರ ಕಂಗಾಲಾಗಿದ್ದಾನೆ.
ಲೊಕಸಭೆ ಚುನಾವಣೆಗೆ ಸ್ಪರ್ಧಿಸಲು ಅಣಿಯಾಗಿರುವ ಅಧಿಕಾರಸ್ಥರು ಮತದಾರರ ಸೆಳೆಯಲು ಬಳಸುತ್ತಿರುವ ತಂತ್ರಗಳ ಬಗ್ಗೆ ಪರಿಶೀಲನೆ ನೋಡೋಣ. ಕೋಲಾರಕ್ಕೆ ರೇಲ್ವೆ ಕೋಚ್ ಫ್ಯಾಕ್ಟರಿ ತರುವುದಾಗಿ ಕೇಂದ್ರ ಸಚಿವ ಮುನಿಯಪ್ಪ 5 ವರ್ಷಗಳಿಂದ ಹೇಳುತ್ತ ಬಂದಿದ್ದರು. ಅವರು ಎರಡು ವರ್ಷಗಳಿಂದ ಹೆದ್ದಾರಿ ಹಾಗೂ ಸಣ್ಣ ಕೈಗಾರಿಕೆಗಳ ಖಾತೆ ನೋಡಿಕೊಳ್ಳುತ್ತಿದ್ದಾರೆ. ಅದಕ್ಕೂ ಮೊದಲು 3 ವರ್ಷಗಳ ಕಾಲ ರೇಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾಗ ಈ ಭರವಸೆ ಕೊಟ್ಟಿದ್ದರು. ಆಗಿದ್ದಾಂಗೆ ಈ ಭರವಸೆಯನ್ನು ನವೀಕರಣ ಮಾಡಿಕೊಂಡು ಬಂದಿದ್ದರು. ಇದೀಗ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಮಯ. ಕಳೆದ ವಾರವಷ್ಟೇ ಕೋಲಾರಕ್ಕೆ ರೇಲ್ವೆ ಕೋಚ್ ಫ್ಯಾಕ್ಟರಿ ಮಂಜೂರಾತಿ ಆದೇಶ ಹೊರ ಬಿದ್ದಿದೆ. ಮುನಿಯಪ್ಪನವರು ಮನಸ್ಸು ಮಾಡಿದ್ದರೆ ಎರಡು ವರ್ಷಗಳ ಹಿಂದೆಯೇ ಈ ಕೆಲಸ ಆಗುತ್ತಿತ್ತು. ಹೈಕಮಾಂಡ್ ಮಟ್ಟದಲ್ಲಿ ಅಷ್ಟೊಂದು ಪ್ರಭಾವವೂ ಅವರಿಗಿದೆ. ಆದರೆ, ಚುನಾವಣೆ ಹೊಸ್ತಿಲಲ್ಲೇ ಈ ಕೆಲಸ ಮಾಡಿಸಿರುವುದರ ಹಿಂದೆ ಮತದಾರರ ಮನಸ್ಸನ್ನು ಹೈಜಾಕ್ ಮಾಡುವ ತಂತ್ರ ಅಡಗಿದೆ.
ಇನ್ನು ಕಳೆದ ವರ್ಷವಷ್ಟೇ ರೇಲ್ವೆ ಸಚಿವರಾದ ಮಲ್ಲಿಕಾರ್ಜುನ ಖರ್ಗೆಯವರ ಸಾಧನೆ ಅಮೋಘ. ಅವರು ರೇಲ್ವೆ ಬಜೆಟ್‌ನಲ್ಲಿ ಕರ್ನಾಟಕದಿಂದ ಹಾಗೂ ಕರ್ನಾಟಕದ ಮೂಲಕ ಬಿಟ್ಟ ಬಹುತೇಕ ರೈಲುಗಳು ಅವರ ಸ್ವಕ್ಷೇತ್ರ ಗುಲ್ಬರ್ಗ ನೋಡಿಕೊಂಡೇ ಹೋಗಬೇಕು. ಅಷ್ಟರ ಮಟ್ಟಿಗೆ ಅವರು ಚುನಾವಣೆ ಕಾಳಜಿ ಮೆರೆದಿದ್ದಾರೆ. ಇಷ್ಟೇ ಅಲ್ಲ, ವಿಶೇಷ ಆಸಕ್ತಿ ವಹಿಸಿ ಗುಲ್ಬರ್ಗಕ್ಕೆ ವಿಭಾಗೀಯ ರೇಲ್ವೆ ಕಚೇರಿ ತಂದಿದ್ದಾರೆ. ಇದೇ ರೀತಿ ಗುಲ್ಬರ್ಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕೈಯಲ್ಲೇ ಉದ್ಘಾಟಿಸಿದ್ದಾರೆ. 9 ತಿಂಗಳ ಹಿಂದಷ್ಟೇ ಕೇಂದ್ರ ಸಚಿವರಾದ ಖರ್ಗೆಯವರ ಈ ವಿಶೇಷ ಪರಿಶ್ರಮದ ಬಗ್ಗೆ 'ಅವಕಾಶವಾದ'ವನ್ನು ಅರಸಲು ಆಗದಿದ್ದರೂ ಇದೇ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಬಂದಿರುವುದು ಮಾತ್ರ ಕಾಕತಾಳೀಯವೇನೂ ಅಲ್ಲ.
ಇನ್ನು ಕೇಂದ್ರ ಸಚಿವ ವೀರಪ್ಪ ಮೊಯ್ಲಿಯವರು ಈಗ ವಿವಾದವನ್ನು ತಾರಕಕ್ಕೆ ಮುಟ್ಟಿರುವ 12950 ಕೋಟಿ ಅಂದಾಜು ವೆಚ್ಚದ ಎತ್ತಿನಹೊಳೆ ಯೋಜನೆಯನ್ನು ತಾವೇ ಖುದ್ದು ಮಂಜೂರು ಮಾಡಿಸಿದ್ದಾಗಿ ಹೇಳಿ ಕೊಳ್ಳುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮತಗಳ ಮಳೆಯಾಗುತ್ತದೆ ಎಂಬುದು ಈ ಕ್ಲೇಮಿನ ಹಿಂದಿರುವ ಉದ್ದೇಶ. ಸದ್ಯಕ್ಕೆ ಯೋಜನೆಯೇ ವಿವಾದದ ಹುಚ್ಚು ಮಳೆಯನ್ನು ಸುರಿಸುತ್ತಿದೆ. ಅದರ ಸಾಧಕ ಬಾಧಕಗಳು ಏನೇ ಇರಲಿ ಅವರ ಮಾತಿನ ಹಿಂದಿರುವ ಉದ್ದೇಶ ಸುಸ್ಪಷ್ಟ. ಅದುವೇ ಚುನಾವಣೆ.
ಎತ್ತಿನಹೊಳೆ ಯೋಜನೆಯಡಿ ಮತ ಉದುರಿಸಲು ಸಾಕಷ್ಟು ಮಂದಿ ಪ್ರಯತ್ನಿಸುತ್ತಿರುವಂತೆಯೇ ಅನೇಕರು ಅದನ್ನು ವಿರೋಧಿಸುತ್ತಿದ್ದಾರೆ. ಅವರ ಆಶಯ ಕೂಡ ವೋಟ್ ಬ್ಯಾಂಕ್ ಲೂಟಿಯೇ. ಯೋಜನೆ ಬೇಕು ಎನ್ನುವವರದ್ದು ಒಂದು ಭಾವನೆ. ಬೇಡ ಎನ್ನುವವರದ್ದು ಮತ್ತೊಂದು. ನೀರು ಕಳೆದುಕೊಳ್ಳುವವರು ಒಂದು ಕಡೆ, ಪಡೆದುಕೊಳ್ಳುವವರು ಮತ್ತೊಂದು ಕಡೆ. ಆದರೆ, ಎತ್ತಿನಹೊಳೆಯಲ್ಲಿ ನೀರು ಹರಿಸುವವರು ಇವರಿಬ್ಬರೂ ಅಲ್ಲ ಬದಲಿಗೆ ಪ್ರಕೃತಿ. ಆ ಸತ್ಯಾಂಶವನ್ನೇ ಪಕ್ಕಕ್ಕಿಟ್ಟು, ಪರ-ವಿರೋಧ ಹೋರಾಟದ ಮೂಲಕ ಜನರ ಭಾವನೆಗಳನ್ನೇ 'ಮತ ಬಂಡವಾಳ' ಮಾಡಿಕೊಳ್ಳಲು ಈ ರಾಜಕೀಯ ನಾಯಕರು ಹೊರಟಿದ್ದಾರೆ. ಇದಕ್ಕೂ ಕಾರಣ ಚುನಾವಣೆಯೇ.
ಎತ್ತಿನಹೊಳೆ ಯೋಜನೆ ನಂಟಿನ ಜತೆ ಜತೆಗೆ ರಾಜ್ಯ ಸಚಿವ ಟಿ.ಬಿ.ಜಯಚಂದ್ರ ಅವರು ವಿಶೇಷ ಅಸ್ಥೆ ವಹಿಸಿ ತುಮಕೂರು ಜಿಲ್ಲೆಗೆ ಒಂದಷ್ಟು ನೀರಾವರಿ ಯೋಜನೆಗಳನ್ನು ಮಂಜೂರು ಮಾಡಿಸಿದ್ದಾರೆ. ಅದರ ಬೆನ್ನಲ್ಲೇ ಮಗನನ್ನು ಲೋಕಸಭೆ ಚುನಾವಣೆ ಕಣಕ್ಕಿಳಿಸಲು ತಯಾರಿ ನಡೆಸಿದ್ದಾರೆ. ಕೆಲಸ ಮಾಡಿದ ಮೇಲೆ ಫಲಿತಾಂಶ ನಿರೀಕ್ಷಿಸಬೇಡವೇ? ಜಯಚಂದ್ರ ಅದೇ ಕೆಲಸ ಮಾಡಿದ್ದಾರೆ.
ಕೇಂದ್ರ ಸರ್ಕಾರ ಇತ್ತೀಚೆಗೆ ನರ್ಮ್ ಯೋಜನೆಯಡಿ ಬೆಂಗಳೂರು- ಮೈಸೂರು ವಿಭಾಗಕ್ಕೆ ಬಸ್ ಖರೀದಿಸಲೆಂದು 14000 ಕೋಟಿ ಮಂಜೂರು ಮಾಡಿದೆ. ಸಾರಿಗೆ ಸೌಲಭ್ಯದ ವಿಚಾರದಲ್ಲಿ ಕರ್ನಾಟಕ ಸರ್ಕಾರದ ಬಜೆಟ್‌ಗೆ ಸೆಡ್ಡು ಹೊಡೆದ ರೀತಿಯಲ್ಲಿರುವ ಯೋಜನೆ ಕಂಡು ಈ ಭಾಗದ ಜನ ಬೆಚ್ಚಿ ಬಿದ್ದಿದ್ದಾರೆ. ಅಂದ ಹಾಗೆ, ಹಳೇ ಮೈಸೂರು ವಿಭಾಗದಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ಷೇತ್ರ. ಹೀಗಾಗಿ ಈ ಭಾಗಕ್ಕೆ ಕೇಂದ್ರ ಹಾಗೂ ರಾಜ್ಯ ಎರಡೂ ಕಡೆಯಿಂದ ಹರಿದು ಬರುತ್ತಿರುವ ಭರಪೂರ ಯೋಜನೆಗಳ ಹಿಂದೆ ಸಿದ್ದರಾಮಯ್ಯ ಅವರ ಶ್ರಮ ಅಡಗಿದೆ. ಅದಕ್ಕೆ ಕಾರಣಗಳೂ ಇವೆ.
ಸಿದ್ದರಾಮಯ್ಯ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸದಿರಬಹುದು. ಆದರೆ, ಅವರಿಗೆ ಈ ಚುನಾವಣೆ ಒಂದು ಸವಾಲು. ಏಕೆಂದರೆ ಹೈಕಮಾಂಡ್ ಇವರ ಮೇಲೆ ಭಾರೀ ಭರವಸೆ ಇಟ್ಟಿದೆ. ಇಡೀ ದೇಶ ಕೈ ಬಿಟ್ಟರೂ ಕರ್ನಾಟಕ ಕಾಂಗ್ರೆಸ್‌ನ ತಲೆ ಕಾಯುತ್ತದೆ ಎಂದು. ಈಗಾಗಲೇ ಹೊರ ಬಿದ್ದಿರುವ ಚುನಾವಣೆ ಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಆರಾಮವಾಗಿ ಉಸಿರಾಡುವಂತೆ ಮಾಡಿದೆ. ಆದರೂ ಸಿದ್ದರಾಮಯ್ಯ ತಮ್ಮ ಎಚ್ಚರಿಕೆ ಕಾಯ್ದುಕೊಳ್ಳುತ್ತಿದ್ದಾರೆ. ಹೀಗಾಗಿ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ (ಲೇಖಾನುದಾನ) ಜನಸಾಮಾನ್ಯರು ನೆಮ್ಮದಿ ಕಳೆದುಕೊಳ್ಳದಂತೆ ಮಾಡಿದ್ದಾರೆ. ಜತೆಗೆ ಕಾಂಗ್ರೆಸ್ ಮತ ಬ್ಯಾಂಕ್ 'ಅಂಹಿಂದ' ಹಿತರಕ್ಷಣೆಗೆ, ಬದ್ಧತೆಯನ್ನು ಮುಂದುವರಿಸಿದ್ದಾರೆ. ತಮ್ಮ ಸ್ವಂತ ಕ್ಷೇತ್ರ ಅಲ್ಲದೇ ಮೈಸೂರು ಪಕ್ಕದ ಚಾಮರಾಜನರ, ಮಂಡ್ಯ ನೀರಾವರಿ ಯೋಜನೆಗಳಿಗೆ ಸಾವಿರ ಕೋಟಿಗೂ ಅಧಿಕ ಹಣ ಮಂಜೂರು ಮಾಡಿದ್ದಾರೆ. ಇದೆಲ್ಲದಕ್ಕೂ ಲೋಕಸಭೆ ಚುನಾವಣೆಗೆ ಮೂಲಮಂತ್ರ. ಇದರ ಹಿಂದೆ ನಾಯಕತ್ವ ಉಳಿಸಿಕೊಳ್ಳುವ ತಂತ್ರ ಅಡಗಿದೆ.
ಇನ್ನು ಕೇಂದ್ರ ಸರ್ಕಾರ ಕಳೆದ ವಾರ ಸಂಪುಟ ಸಭೆಯಲ್ಲಿ 80 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಅನ್ವಯವಾಗುವಂತೆ ತುಟ್ಟಿ ಭತ್ಯೆ ಹೆಚ್ಚಿಸಿದೆ. ಜತೆಗೆ 28 ಲಕ್ಷ ಮಂದಿಗೆ ಹೊಸ ಪಿಂಚಣಿ ಯೋಜನೆ ಜಾರಿಗೆ ತಂದಿದೆ. ಚುನಾವಣಾ ಪೂರ್ವ ಮೂರ್ನಾಲ್ಕು ತಿಂಗಳಲ್ಲಿ ಅದು ಘೋಷಿಸಿರುವ ಯೋಜನೆಗಳಿಗೆ ಲೆಕ್ಕವಿಲ್ಲ.
ಅದು ಯಾವುದೇ ಸರ್ಕಾರವಾಗಿರಲೀ, ರಾಜಕೀಯ ನಾಯಕರಿರಲೀ ಇದೇ ಕೆಲಸವನ್ನು ಕ್ರಮಬದ್ಧ, ಪ್ರಾಮಾಣಿಕ ಕಾಳಜಿಯಿಂದ ಮಾಡಿದರೆ ಯಾರೂ ಬೇಡ ಎನ್ನುವುದಿಲ್ಲ. ಆದರೆ, ಮತದಾರರನ್ನು ಆಟದ ವಸ್ತು ಎಂದು ಪರಿಗಣಿಸಿ, ಅವರ ಭಾವನೆಗಳ ದಾರಿ ತಪ್ಪಿಸಲು ಹೊರಟಿರುವುದು ಸರಿಯಲ್ಲ. ಇಷ್ಟಕ್ಕೂ ಚುನಾವಣೆ ಮುಗಿದ ನಂತರ ಇದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆಯೆಂದಾಗಲೀ ಅಥವಾ ಅಧಿಕಾರಕ್ಕೆ ಬಂದ ಬೇರೆ ಸರ್ಕಾರ ಈ ಘೋಷಣೆಗಳನ್ನು ಅನುಷ್ಠಾನಕ್ಕೆ ತರುತ್ತದೆ ಎಂದಾಗಲೀ ಯಾವುದೇ ಖಾತ್ರಿ ಇಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಈ ಸತ್ಯ ಮತದಾರರಿಗೆ ಗೊತ್ತಿಲ್ಲ ಎಂದೇನೂ ಇಲ್ಲ. ಮೊಣಕೈಗೆ ತುಪ್ಪ ಸವರಿದರೆ ಅದು ಬಾಯಿ ತಲುಪುವುದಿಲ್ಲ ಎಂಬುದು ಅವರಿಗೂ ಚೆನ್ನಾಗಿ ಗೊತ್ತಿದೆ.
ಲಗೋರಿ: ಮಂತ್ರಕ್ಕೆ ಮಾವಿನಕಾಯಿ ಬೀಳುವುದಿಲ್ಲ. ಅದೇ ರೀತಿ ಎಸೆದ ಎಲ್ಲಾ ಕಲ್ಲುಗಳಿಗೂ...


- ಪಿ. ತ್ಯಾಗರಾಜ್
thyagarjun@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.