ಅಂಕಣಗಳು

ಮೋದಿ-ಸಿದ್ದರಾಮಯ್ಯ: ಹೋಲಿಕೆ ಸಲ್ಲದು

ಲೋಕಸಭೆ ಚುನಾವಣೆಯಲ್ಲಿನ ಭಗೀರಥ ಪ್ರಯತ್ನದ ಅನಂತರ, ಸಲೀಸಾಗಿ, ಪ್ರಧಾನಿ...

Published On :

ಲೋಕಸಭೆ ಚುನಾವಣೆಯಲ್ಲಿನ ಭಗೀರಥ ಪ್ರಯತ್ನದ ಅನಂತರ, ಸಲೀಸಾಗಿ, ಪ್ರಧಾನಿ ಪೀಠವನ್ನೇರಿದ ನರೇಂದ್ರ ಮೋದಿ, ಒಂದೇ ಅವಧಿಯಲ್ಲಿ ಕೆಲವು ನಿರ್ಧಾರಗಳ ಮೂಲಕ ತಮ್ಮ ಅಸ್ತಿತ್ವವನ್ನು ಪ್ರದರ್ಶಿಸಿದ್ದಾರೆ. ಈ ತಿಂಗಳಲ್ಲಿ ಅವರು ಮಾಡಿದ್ದೆಲ್ಲಾ ಸರಿ ಅಥವಾ ಎಲ್ಲವೂ ತಪ್ಪು ಎನ್ನುವಂತಿಲ್ಲ. ಆದರೆ ಒಂದು ಮಾತು ನಿಜ. ಏನನ್ನಾದರೂ ಮಾಡಲೇಬೇಕು ಎನ್ನುವ ಛಲ ಅವರಲ್ಲಿದೆ. ಒಂದು ತಿಂಗಳಲ್ಲಿ ಅದರ ಪರಿಣಾಮವೂ ಕಾಣುತ್ತಿದೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಕ್ಕೂ ಒಂದು ವರ್ಷ ಮುಗಿಯಿತು. ಅವರ ಅಧಿಕಾರಾವಧಿಯಲ್ಲಿ ಈಗಾಗಲೇ ಐದರಲ್ಲಿ ಒಂದು ಭಾಗ ಮುಗಿದು ಹೋಗಿದೆ. ಆದರೆ ಇನ್ನೂ ಅನೇಕ ವಲಯಗಳಲ್ಲಿ ಹೊಸ ಸರ್ಕಾರ ಬಂದಿದೆ ಎನ್ನುವ ಲಕ್ಷಣವೇ ಕಾಣುತ್ತಿಲ್ಲವಲ್ಲ ಎನ್ನುವ ಕೊರಗಿದೆ. ಅದನ್ನು ಅವರ ಪಕ್ಷದವರೇ ಅಂತರಂಗದ ಕೂಟಗಳಲ್ಲಿ ಹೇಳಲು ಪ್ರಾರಂಭಿಸಿದ್ದಾರೆ.
ಪ್ರಧಾನವಾಗಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿರುವ ರಾಜಕೀಯ ಅಧಿಕಾರವನ್ನು ಪಕ್ಷದ ಎಲ್ಲ ಹಂತಗಳ ಕಾರ್ಯಕರ್ತರ ಜತೆ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆನ್ನುವ ದೂರುಗಳು ಇತರ ವಲಯಗಳಲ್ಲಿ ಬಲವಾಗಿಯೇ ಕೇಳಿ ಬಂದಿವೆ. ನಿಜ. ನರೇಂದ್ರ ಮೋದಿ, ಅವರ ಈಗಿನ ಅವಸ್ಥೆಯಲ್ಲಿ ಅವರಿಗೆ ಅವರೇ ಯಜಮಾನರು. ಅನುಮತಿಗಾಗಿ ಅಥವಾ ಮಾರ್ಗದರ್ಶನಕ್ಕಾಗಿ ಬೇರೆ ಯಾರನ್ನೋ ನೋಡಬೇಕಾಗಿಲ್ಲ. ಅವರ ಸ್ಥಾನದ ಮಹಿಮೆಯಿಂದ ನಿರ್ಧಾರಗಳನ್ನು ಪ್ರಕಟಿಸುವ ಅಧಿಕಾರ ಅವರಿಗೆ ಇದೆ. ಅವರ ವ್ಯಕ್ತಿತ್ವವೇ ಅಂತಹದ್ದು. ಈಗ ಸಂಘಪರಿವಾರದಲ್ಲಿ ಅವರ ಸ್ಥಾನ ಅದ್ವಿತೀಯವಾದದ್ದು. ಆದರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಪರಿಸ್ಥಿತಿ ಹಾಗಿಲ್ಲ, ಸಣ್ಣ - ಪುಟ್ಟ ನಿರ್ಧಾರಗಳನ್ನು ಅವರು ನೇರವಾಗಿ ಪ್ರಕಟಿಸುವಂತಿಲ್ಲ. ಅವರಿವರ ಮಾತನ್ನು ಕೇಳಬೇಕು. ಅದಕ್ಕೆ "ಎಲ್ಲರನ್ನೂ ಒಳಗೊಳ್ಳುವ, ಎಲ್ಲ ಆಸಕ್ತ ಹಿತಗಳ ಸಮನ್ವಯದ ನೀತಿ" ಎನ್ನುವ ಸೈದ್ಧಾಂತಿಕ ವಿವರಣೆ ಬೇರೆ. ಆದರೂ, ಜನ ಮೋದಿ - ಸಿದ್ದರಾಮಯ್ಯ ಅವರ ಕಾರ್ಯಶೈಲಿ, ಮಾತಿನ ಧಾಟಿ, ಅಭಿಪ್ರಾಯಗಳಲ್ಲಿನ ವ್ಯತ್ಯಾಸ ಕುರಿತು ಮಾತಾಡುತ್ತಾರೆ. ಎಲ್ಲ ಜನರನ್ನೂ ಯಾರೂ ಯಾವ ಕಾಲದಲ್ಲೂ ಮೆಚ್ಚಿಸುವುದು ಸಾಧ್ಯವಿಲ್ಲ. ಆದರೆ ಆತ್ಮಸಾಕ್ಷಿಯಾಗಿ, ತಮಗೆ ಸರಿ ಎಂದು ಕಂಡುಬಂದ ನಿರ್ಧಾರವನ್ನು ಜಾರಿಗೆ ತರುವುದೇ ಮುತ್ಸದ್ದಿತನ. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಅಷ್ಟೆ. ಸಿದ್ದರಾಮಯ್ಯ ಕಳೆದ ಒಂದು ವರ್ಷದಲ್ಲಿ ಆ ದಿಕ್ಕಿನಲ್ಲಿ ಯಾವ ಭರವಸೆಯನ್ನೂ ನೀಡಿಲ್ಲ.
ಕುರ್ಚಿ ಭದ್ರವಾಗಿದೆ: ಈಗಿನ ರಾಜಕೀಯ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರದ ಕುರ್ಚಿಯ ಭದ್ರತೆ - ಅಭದ್ರತೆಯನ್ನು ಕುರಿತು ಚಿಂತಿಸಬೇಕಾಗಿಲ್ಲ. ಅವರ ಬದಲಾವಣೆ ಪ್ರಯತ್ನ ನಡೆಯುವಂತಿಲ್ಲ. ಕಾಂಗ್ರೆಸ್ ವರಿಷ್ಠರಿಗೆ ಈಗ ಅಂತಹ ನಿರ್ಧಾರದ ಶಕ್ತಿ ಇಲ್ಲ. ಇನ್ನು ದಯೆ, ದಾಕ್ಷಿಣ್ಯದ ವಿಚಾರ ಅದನ್ನೂ ನಿಭಾಯಿಸುವುದು ಸುಲಭ. ಅದಕ್ಕೆ ಚಿಂತನೆ ಸ್ಪಷ್ಟವಾಗಿರಬೇಕು. ಇಷ್ಟೆಲ್ಲ ಅನುಕೂಲಗಳಿದ್ದರೂ, ಸಿದ್ದರಾಮಯ್ಯ ಅದೇಕೋ, ಎಲ್ಲ ವಿಚಾರಗಳಲ್ಲೂ ಹಿಂದೇಟು ಹಾಕುತ್ತಿರುವಂತಿದೆ. ಅವರ ನಿಜವಾದ ಅಳುಕೇನು? ಈಗಾಗಲೇ ಪ್ರಸ್ತಾಪಿಸಿರುವಂತೆ, ಸರ್ಕಾರದ ನೀತಿಯನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತರಲೆಂದೇ ನಿಗಮ - ಮಂಡಳಿ - ಸಮಿತಿಗಳನ್ನು ನೇಮಿಸಿರುವುದು. ಆ ಸಂಸ್ಥೆಗಳೇನೂ ಸ್ವಾಯತ್ತ ಸ್ವತಂತ್ರ ಸಂಸ್ಥೆಗಳಲ್ಲ. ಸರ್ಕಾರ ವಹಿಸಿಕೊಟ್ಟಿರುವ ಜವಾಬ್ದಾರಿಯನ್ನು ನಿರ್ವಹಿಸುವುದಷ್ಟೇ ಅದರ ಕೆಲಸ. ಆದರೂ ಆ ಸಮಿತಿಗಳ ಅಧ್ಯಕ್ಷರು, ನಿರ್ದೇಶಕರು ಅಥವಾ ಸದಸ್ಯರ ನೇಮಕಕ್ಕೆ ಒಂದು ವರ್ಷ ಯಾಕೆ ಬೇಕು? ಕಾಂಗ್ರೆಸ್ ನಾಯಕತ್ವದಲ್ಲಿ (ದೆಹಲಿ - ಬೆಂಗಳೂರು) ತಾನೇ ರೂಪಿಸಿರುವ ಮೌಲ್ಯಗಳಲ್ಲಿ, ಪ್ರಾಮಾಣಿಕವಾದ ವಿಶ್ವಾಸವಿದ್ದರೆ, ಸಮಾಜದ ಎಲ್ಲ ಜನವರ್ಗಗಳನ್ನು ಒಳಗೊಳ್ಳುವಂತಹ ನೀತಿ ಜಾರಿಗೆ ತರುವುದರಲ್ಲಿ ಯಾವುದೇ ರೀತಿಯ ತೊಂದರೆಯೂ ಇಲ್ಲಿ ಇಲ್ಲ. ಆದರೂ ಪಕ್ಷ ಒಪ್ಪಿದ ಮೌಲ್ಯಗಳು ಕೆಲವು ವಿಷಯಗಳಲ್ಲಿ ಪಕ್ಷದ ರಾಜಕೀಯ ಹಿತಕ್ಕೆ (ಓಟು ಗಳಿಕೆ) ಅಡ್ಡಿಯಾಗುವುದಾದರೆ, ಅದನ್ನು ನಿವಾರಿಸುವುದಕ್ಕೂ ಪ್ರಯತ್ನಿಸಬೇಕು. ಅಗತ್ಯವಿರುವ ಕಡೆ ಹೊಂದಾಣಿಕೆ ಮಾಡಿಕೊಳ್ಳಬೇಕಾದರೆ ಅದಕ್ಕೂ ಸಿದ್ಧರಿರಬೇಕು. ಇದಕ್ಕೆಲ್ಲ ಅನಿರ್ದಿಷ್ಟ ಅವಧಿಯ ಚಿಂತನೆ ಅನಗತ್ಯ, ನಿರ್ಧಾರ ಪ್ರಕಟಿಸುವ ಧೈರ್ಯವಷ್ಟೇ ಬೇಕಾಗಿರುವುದು.
ಜಾತಿ ಲೆಕ್ಕದ ವೈಪರೀತ್ಯ: ಕಾಂಗ್ರೆಸ್ ವಲಯಗಳಲ್ಲಿ ಈಗ ಜ್ವಲಂತ ವಿಷಯಗಳೆಂದರೆ, ವಿಧಾನ ಸಭೆಯಿಂದ ವಿಧಾನ ಪರಿಷತ್ತು, ರಾಜ್ಯಸಭೆಗೆ ಸದಸ್ಯರನ್ನು ಆರಿಸಿದ ನಾಮಕರಣ ಮಾಡಿದ ರೀತಿ - ನೀತಿ. ಇಲ್ಲಿ ಜಾತಿಯ ಲೆಕ್ಕಾಚಾರ ಅನಿವಾರ್ಯವೇ. ಆದರೆ ಒಕ್ಕಲಿಗರು, ಲಿಂಗಾಯಿತರನ್ನು ಪರಿಗಣಿಸುವುದೇ ಸಾಧ್ಯವಿಲ್ಲ ಎನ್ನುವ 'ನೀತಿ' ಎಲ್ಲಿಂದ ಬಂತು? ಅದಕ್ಕೇನು ಆಧಾರ? ಈ ಎರಡೂ ಜಾತಿಗಳನ್ನು ರಾಜಕೀಯವಾಗಿ ಬಲಾಢ್ಯ, ಆರ್ಥಿಕ ವಲಯದಲ್ಲಿ ಸಾಕಷ್ಟು ಉಳ್ಳವರ ಸಾಲಿನಲ್ಲೇ ಸೇರಿಸಬಹುದು. ಒಂದು ರೀತಿಯಲ್ಲಿ ಈ ಜಾತಿಗಳೇ ರಾಜ್ಯದ ಮಧ್ಯಮ ವರ್ಗದ ಬೆನ್ನೆಲುಬು. ಅಂತಹ ಶಕ್ತಿಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿ, ಅವರ ವಿರೋಧವನ್ನು ಕಟ್ಟಿಕೊಂಡರೆ ಒಕ್ಕಲಿಗರು, ಜಾತ್ಯತೀತ ಜನತಾದಳದ ಕಡೆಗೆ, ಲಿಂಗಾಯಿತರು ಬಿಜೆಪಿ ಕಡೆಗೆ ಹೋದರೆ, ಸಿದ್ದರಾಮಯ್ಯ, ಅವರ ಮಾತು ಹಾಗಿರಲಿ, ಕಾಂಗ್ರೆಸ್ಸಿನ ಶಕ್ತಿಯೇ ಕಡಿಮೆಯಾಗುವುದು ಖಚಿತ.
ವಿಧಾನ ಪರಿಷತ್ ಚುನಾವಣೆ: ಈಗ ತಾನೇ ಮುಗಿದಿರುವ ಅಧ್ಯಾಪಕರ - ಪದವೀಧರರ ನಾಲ್ಕು ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬಂದಿದ್ದು ಒಂದೇ ಸ್ಥಾನ. ಹಿಂದೆ ಈ ಕ್ಷೇತ್ರದಲ್ಲಿ ಮೂರು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಗೆ ಸಿಕ್ಕಿರುವುದು ಒಂದೇ ಸ್ಥಾನ. ಜೆಡಿಎಸ್‌ಗೆ ಎರಡು ಸ್ಥಾನಗಳು ಸಿಕ್ಕಿವೆ. ನಿಜ. ಈ ಕ್ಷೇತ್ರದ ಮತದಾರರ ಸಮುದಾಯದ ಸ್ವರೂಪವನ್ನು ಪರಿಶೀಲಿಸಿದರೆ, ಇದು ರಾಜ್ಯದ ಮಧ್ಯಮ ವರ್ಗದ ತೀರ್ಪು ಎನ್ನುವಂತಿಲ್ಲ. ಇದನ್ನು ರಾಜಕೀಯವಾಗಿ ದೊಡ್ಡರೀತಿಯಲ್ಲಿ ಬಿಂಬಿಸುವ ಅಗತ್ಯವಿಲ್ಲ. ಆದರೂ ಜಾತ್ಯತೀತ ಜನತಾದಳದ ಶಾಸಕರಿಗೆ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪಕ್ಷದ ಸಾಧನೆಗಾಗಿ ಬೆನ್ನು ತಟ್ಟಿಕೊಂಡಿದ್ದಾರೆ. ದೇಶದ ಇತರ ಕೆಲವು ರಾಜ್ಯಗಳಲ್ಲಿ ಈಗಲೂ ಈ ಕ್ಷೇತ್ರಗಳಿಗೆ ರಾಜಕೀಯ ಪಕ್ಷಗಳು ಅಧಿಕೃತವಾಗಿ ಸ್ಪರ್ಧಿಸುವುದಿಲ್ಲ. ಪಕ್ಷಗಳ ಸದಸ್ಯರು ತಮ್ಮ ವ್ಯಕ್ತಿಗತ ಶಕ್ತಿಯ ಆಧಾರದ ಮೇಲೆ ಸ್ಪರ್ಧಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಈ ಕ್ಷೇತ್ರಗಳ ಚುನಾವಣೆಯಲ್ಲಿ ಅಧಿಕೃತವಾಗಿ ಪಕ್ಷದ ಹೆಸರನ್ನು ತುರುಕಿದ್ದು ಭಾರತೀಯ ಜನಸಂಘ.
ಧಾರವಾಡದ ವೈ.ಎಸ್. ಪಾಟೀಲ್ ಈ ಕ್ಷೇತ್ರದಿಂದ ಆರಿಸಿಬಂದಾಗ, ಅವರು ವಿಧಾನ ಪರಿಷತ್ತಿಗಲ್ಲ, ವಿಧಾನಮಂಡಲಕ್ಕೇ ಆರಿಸಿ ಬಂದ ಮೊದಲ ಭಾರತೀಯ ಜನ ಸಂಘದ ಅಭ್ಯರ್ಥಿ. ಮುಂದೆ ಈ ಕ್ಷೇತ್ರ ಜನಸಂಘ, ಜನತಾ ಪಾರ್ಟಿ, ಬಿಜೆಪಿಗಳ ಕೋಟೆಯೇ ಆಗಿತ್ತು. ಈ ಕ್ಷೇತ್ರಗಳ ಚುನಾವಣೆಯ ಸೋಲು - ಗೆಲವಿಗೆ ರಾಜಕೀಯ ಬಣ್ಣ ಕಟ್ಟಬಾರದು. ಈಗ ಕಾಂಗ್ರೆಸ್ - ಬಿಜೆಪಿ ಸುಮ್ಮನಿವೆ. ಆದರೆ ಜೆಡಿಎಸ್, ಬೇರೆ ಯಾವ ಸಾಧನೆಯೂ ಇಲ್ಲದಿರುವಾಗ ಇದನ್ನೇ ದೊಡ್ಡದನ್ನಾಗಿ ಮಾಡಿದೆ.
ಜೆಡಿಎಸ್ ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ನಿರ್ಣಾಯಕವಾಗಿ ಸೋತಿದೆ. ಪಕ್ಷದ ಅಧಿನಾಯಕ ಮಾಜಿ ಪ್ರಧಾನಿ ದೇವೇಗೌಡರು ರಾಜ್ಯದಲ್ಲೇ ಉಳಿದು ಪಕ್ಷವನ್ನು ಬೇರುಮಟ್ಟದಿಂದ ಕಟ್ಟಲು ಪಣ ತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಶಾಸಕಾಂಗ ವಿಭಾಗದ ನಾಯಕ ಕುಮಾರಸ್ವಾಮಿ ಪಕ್ಷದ ಶಾಸಕರಿಗೆಲ್ಲ ಸಾಮೂಹಿಕವಾಗಿ ಶ್ರೀಲಂಕಾದ ರಿಸಾರ್ಟ್‌ಗಳನ್ನು ಪರಿಚಯ ಮಾಡಿಸಿದ್ದರ ಉದ್ದೇಶವಾದರೂ ಏನು? ಅದು ಯಾರಿಗೂ ಗೊತ್ತಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಶ್ರೀಲಂಕಾದ ರಿಸಾರ್ಟ್‌ನಲ್ಲಿ ಕೂಟಗಳನ್ನು ನಡೆಸಿ, ಪಕ್ಷ ಕಟ್ಟಲಿಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಅವರಿಗೆ ಶಾಸಕರ ಶ್ರೀಲಂಕಾ ರಿಸಾರ್ಟ್‌ಗಳ ಪ್ರವಾಸದ ವಿಚಾರ ಗೊತ್ತೇ ಇರಲಿಲ್ಲವಂತೆ. ದೇವೇಗೌಡರಿಗೆ ಹಿಂದೆಯೂ ಕುಮಾರಸ್ವಾಮಿ ಅವರು ಕಾಂಗ್ರೆಸ್ - ಜೆಡಿಎಸ್ ಕೂಟ ಸರ್ಕಾರವನ್ನು ಉರುಳಿಸಿ, ಅಂದಿನ ಮುಖ್ಯಮಂತ್ರಿ ಧರಂಸಿಂಗ್ ಅವರನ್ನು ಪದಚ್ಯುತಗೊಳಿಸಿ, ಬಿಜೆಪಿ ಜತೆ ಸೇರಿ, ತಮ್ಮ ನಾಯಕತ್ವದಲ್ಲಿ (ಅವರೇ ಮುಖ್ಯಮಂತ್ರಿ) ಕೂಟ ಸರ್ಕಾರವನ್ನು ರಚಿಸುವ ಉದ್ದೇಶ ಹೊಂದಿದ್ದೂ ಗೊತ್ತಿರಲಿಲ್ಲವಂತೆ. ಆ ಕಾಲದಲ್ಲಿ ಅವರು ಒಂದು ಸಂದರ್ಶನದಲ್ಲಿ ಹೇಳಿದ್ದ ಮಾತು ಈಗ ನೆನಪಿಗೆ ಬರುತ್ತಿದೆ; ನನ್ನ ಮಗ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸುವುದನ್ನು ನಾನು ಮನೆಯಲ್ಲೇ ಕೂತು ಟಿವಿಯಲ್ಲಿ ನೋಡಬೇಕಾಯಿತು.
ಅಕ್ರಮ ಗಣಿಗಾರಿಕೆ: ಈಗತಾನೇ ವಿಧಾನ ಮಂಡಲದ ಸುದೀರ್ಘ ಬಜೆಟ್ ಅಧಿವೇಶನ ಆರಂಭವಾಗಿದೆ. ಉಭಯ ಸದನಗಳ ಸದಸ್ಯರ ಸಂಯುಕ್ತ ಅಧಿವೇಶನದಲ್ಲಿ ರಾಜ್ಯಪಾಲರು ಮಾಡಿದ ಭಾಷಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ರಾಜ್ಯ ಸರ್ಕಾರದ ಚಿಂತನೆಯಲ್ಲಿ ಸ್ಪಷ್ಟತೆ ಇಲ್ಲದೇ ಇರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಅಕ್ರಮ ಗಣಿಗಾರಿಕೆಯ ವಿರುದ್ಧದ ಹೋರಾಟ (ಬೆಂಗಳೂರು - ಬಳ್ಳಾರಿ ಕಾಂಗ್ರೆಸ್ ಪಾದಯಾತ್ರೆ) ಕರ್ನಾಟಕ ಕಾಂಗ್ರೆಸ್ಸಿನ ಪ್ರಣಾಳಿಕೆಯಲ್ಲಿನ ಒಂದು ಅತಿ ಪ್ರಮುಖ ಅಂಶವಾಗಿತ್ತು. ಆರಂಭದ ದಿನಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆ ವಿಷಯಕ್ಕೆ ನೀಡಬೇಕಾಗಿದ್ದಷ್ಟು ಪ್ರಾಮುಖ್ಯವನ್ನು ಕೊಡಲಿಲ್ಲ. ಇತರ ಸಾಮಾಜಿಕ ವಿಚಾರಗಳಿಗೇ ಆದ್ಯತೆ ನೀಡಿದ್ದು. ಆದರೆ ಈ ವಿಚಾರದಲ್ಲಿ ಸಾರ್ವಜನಿಕರ ಒತ್ತಡ ಕಂಡು ಬಂದಾಗ, ಲೋಕಾಯುಕ್ತ ಸಂತೋಷ ಹೆಗ್ಡೆ ಅವರ ತನಿಖಾ ವರದಿಯಲ್ಲಿರುವ ವಿಷಯಗಳನ್ನೆಲ್ಲ ಸಿಬಿಐ ತನಿಖೆ ನಡೆಸಬೇಕೆನ್ನುವ ಪತ್ರ ಬರೆದು ರಾಜ್ಯ ಸರ್ಕಾರ ತನ್ನ ಕೈ ತೊಳೆದುಕೊಂಡಿತು. ಆದರೆ ಆ ತನಿಖೆ ಇನ್ನೂ ಆರಂಭವಾಗಿಲ್ಲ. ಕಾರಣ: ರಾಜ್ಯ ಸರ್ಕಾರ ಕೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ಸ್ಪಷ್ಟತೆ ಇಲ್ಲ. ನಿರ್ದಿಷ್ಟವಾಗಿ ಯಾವ ಯಾವ ವಿಷಯಗಳು, ಪ್ರಕರಣಗಳ ತನಿಖೆಯಾಗಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ ಎಂದು ಸಿಬಿಐ ಅಧಿಕಾರಿಗಳು ಹೇಳುತ್ತಿದ್ದಾರೆನ್ನುವ ವರದಿಗಳಿವೆ.
ಹಾಗೆಂದರೆ ಅಕ್ರಮ ಗಣಿಗಾರಿಕೆ, ಅದಿರು ಸಾಗಣಿಕೆ, ವಿದೇಶಗಳಿಗೆ (ಚೀನಾ) ಕಳ್ಳತನದಲ್ಲಿ ಮಾಡಿದ ರಫ್ತು ಯಾವ ವಿಷಯದಲ್ಲೂ ತನಿಖೆ ನಡೆಯುವುದು ಅಸಂಭವವೇ. ಈಗ ಬೇರೆ ಬೇರೆ ಪ್ರಕರಣಗಳಲ್ಲಿ ಕೆಲವರು (ಶಾಸಕರೂ ಸೇರಿದಂತೆ) ವಿಚಾರಣಾಧೀನ ಖೈದಿಗಳಾಗಿ ಜೈಲು ಸೇರಿದ್ದಾರೆ. ಕಾಲಕ್ರಮದಲ್ಲಿ ಅವರೂ ಹೊರಗೆ ಬರುತ್ತಾರೆ.
ಕಿಡಿಗೇಡಿತನ: ಜುಲೈ 31ರ ಒಳಗಾಗಿ, ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕಲ್ಲು ಕಟ್ಟಡವನ್ನು ಹಿಂದಿನ ಕಾಂಗ್ರೆಸ್ ಭವನ, ಈಗಿನ ಜನತಾ ಭವನ) ಜನತಾದಳ ಕಾಂಗ್ರೆಸ್ಸಿಗೆ ವಹಿಸಿ ಕೊಡಬೇಕು. ಆಗ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳ ಎಲ್ಲಿಗೆ ಹೋಗತ್ತೆ?


- ಸತ್ಯ
anisikeprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.