ಕವಿತೆಯಂತಿದ್ದ ಕಾಟಿ, ಕಥೆಯಾಗಿ ಹೋದಳು
ಇದು ಸತ್ಯಕತೆಯೊಂದರ ಭಾವಾನುವಾದ. ನಮ್ಮ ಕಥಾನಾಯಕಿ ಅಮೆರಿಕಾದವಳು...

ಇದು ಸತ್ಯಕತೆಯೊಂದರ ಭಾವಾನುವಾದ. ನಮ್ಮ ಕಥಾನಾಯಕಿ ಅಮೆರಿಕಾದವಳು. ಅವಳ ಹೆಸರು -ಕಾಟಿ ಕಿರ್ಕ್ ಪ್ಯಾಟ್ರಿಕ್. ಎಂಥ ಅರಸಿಕನೂ ಒಮ್ಮೆ ಕದ್ದು ನೋಡಲು ಹಂಬಲಿಸುವಂಥ ತುಂಬು ಸೌಂದರ್ಯ ಅವಳದು. ಇನ್ನೂ ವಿವರಿಸಿ ಹೇಳಬೇಕು ಅಂದರೆ- 15 ವರ್ಷಗಳ ಹಿಂದೆ ಐಶ್ವರ್ಯಾ ರೈ ಇದ್ದಳಲ್ಲ; ಅಂಥ ಚೆಲುವು ಕಾಟಿ ಕಿರ್ಕ್ ಪ್ಯಾಟ್ರಿಕ್‌ಳದ್ದು.
ಈ ಹುಡುಗಿಯ ತಂದೆಯ ಹೆಸರು ಡೇವಿಡ್ ಕಿರ್ಕ್ ಪ್ಯಾಟ್ರಿಕ್. ತಾಯಿ-ನಿಕಿ. ಕಾಟಿಯನ್ನು ಈ ದಂಪತಿ, ತುಂಬ ಮುದ್ದಿನಿಂದ, ಅಷ್ಟೇ ಶಿಸ್ತಿನಿಂದ ಬೆಳೆಸಿದ್ದರು. ಮೂರೇ ಜನರಿದ್ದ ಆ ಮನೆಯಲ್ಲಿ ಸಂತೋಷವೆಂಬುದು ಮಲ್ಲಿಗೆಯ ಪರಿಮಳದಂತೆ ಹರಡಿಕೊಂಡಿತ್ತು. ಅಮೆರಿಕದಂಥ ಸ್ವಚ್ಛಂದ ಮನೋಭಾವದ ದೇಶದಲ್ಲಿ ಹುಟ್ಟಿ ಬೆಳೆದರೂ, ಹದಿಹರೆಯದ ಆಸೆಗಳಿಗೆ ಬಲಿಯಾಗದೇ ಉಳಿದು ಬಿಟ್ಟಳು ಕಾಟಿ. ಹುಡುಗರ ಎಲ್ಲ ಬಗೆಯ ಮಾತುಗಳಿಗೂ ಆಕೆಯ ಮೌನವೇ ಉತ್ತರವಾಗಿತ್ತು. 'ಆಕೆ ನಮ್ಮನ್ನು ಇಷ್ಟಪಡದಿದ್ದರೆ, ನಮ್ಮ ಪ್ರೀತಿಯನ್ನು ಒಪ್ಪದೇ ಇದ್ದರೆ ಅಷ್ಟೇ ಹೋಯ್ತು. ಸುಮ್ಮನೇ ಒಮ್ಮೆ ಬೈದು ಬಿಡಲಿ' ಎಂದೆಲ್ಲ ಆಸೆಪಟ್ಟ ಹುಡುಗರಿದ್ದರು. ಆದರೆ, ಅಂಥ ಯಾವ ಮಾತುಗಳಿಗೂ ಈ ಹುಡುಗಿ ಕನಸಿನಲ್ಲೂ ಪ್ರತಿಕ್ರಿಯಿಸಲಿಲ್ಲ.
ಈ ಮಧ್ಯೆಯೇ ಕಾಟಿಯ ಹೈಸ್ಕೂಲು ಮುಗಿಯಿತು. ಕಾಲೇಜಿನ ಮೆಟ್ಟಿಲೇರಿ ನಾಲ್ಕು ತಿಂಗಳು ಕಳೆದವು ಅನ್ನುವಾಗಲೇ ಈ ಹುಡುಗಿ, ಮೇಲಿಂದ ಮೇಲೆ ಅನಾರೋಗ್ಯಕ್ಕೆ ತುತ್ತಾದಳು. ಜ್ವರ, ತಲೆನೋವು, ತಲೆಸುತ್ತು ಮತ್ತು ವಾಂತಿ -ಎಲ್ಲವೂ ವಿಪರೀತವೇ. ಇದನ್ನು ಕಂಡ ಡೇವಿಡ್-ನಿಕಿ ದಂಪತಿ, ಇಷ್ಟು ದಿನ ತೆಪ್ಪಗಿದ್ದ ಮಗಳು ಈಗ ಯಡವಟ್ಟು ಮಾಡಿಕೊಂಡಳಾ ಎಂದು ಯೋಚಿಸಿದರು. ಮಗಳ ಮುಂದೆಯೇ ನಿಂತು ಹೀಗೆ ಪ್ರಶ್ನಿಸಲು ಇಬ್ಬರಿಗೂ ಧೈರ್ಯ ಬರಲಿಲ್ಲ. ಒಂದೆರಡು ಆಸ್ಪತ್ರೆಗಳಲ್ಲಿ ತೋರಿಸಿದ್ದಾಯಿತು. ವೈದ್ಯರು, 'ಕಾಟಿಯ ಆರೋಗ್ಯದಲ್ಲಿ ದೊಡ್ಡದೊಂದು ಸಮಸ್ಯೆ ಎದುರಾಗಿರುವಂತಿದೆ. ಯಾವುದಾದರೂ ಹೆಸರಾಂತ ಆಸ್ಪತ್ರೆಗೆ ಹೋಗಿ ಅಲ್ಲಿನ ವೈದ್ಯರ ಸಲಹೆ ಪಡೆಯಿರಿ' ಎಂದರು. ಈ ಸಲಹೆಯಂತೆ ಕಾಟಿಯನ್ನು ಮಿಚಿಗನ್ ನಗರದಲ್ಲಿದ್ದ ಸೇಂಟ್ ಮೆಕ್‌ಲಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಕಾಟಿಯನ್ನು ಕೂಲಂಕಷವಾಗಿ ಪರೀಕ್ಷಿಸಿದ ವೈದ್ಯರು ಡೇವಿಡ್-ನಿಕಿ ದಂಪತಿಯ ಬಳಿ ಬಂದು ವಿಷಾದದಿಂದ ಹೇಳಿದರು: 'ನಿಮ್ಮ ಮಗಳಿಗೆ ಬ್ರೈನ್ ಟ್ಯೂಮರ್ ಆಗಿದೆ. ತಕ್ಷಣವೇ ಚಿಕಿತ್ಸೆ ಆಗಬೇಕು. ಆಪರೇಷನ್ ಮಾಡ್ತೇವೆ. ಆದರೆ, ಆಕೆ ತುಂಬಾ ದಿನ ಬದುಕ್ತಾಳೆ ಅಂತ ಗ್ಯಾರಂಟಿ ಕೊಡಲಾರೆವು. ಕ್ಷಮಿಸಿ...'
ಬದುಕಿನ ಭರವಸೆಯಂತಿದ್ದ ಒಬ್ಬಳೇ ಮಗಳಿಗೆ ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿದೆ ಎಂದು ಗೊತ್ತಾದರೆ ಯಾವ ತಾಯ್ತಂದೆ ತಾನೆ ಸಹಿಸಿಕೊಂಡಾರು? ವಿಷಯ ತಿಳಿದಾಕ್ಷಣ ಕಾಟಿಯ ಅಪ್ಪ-ಅಮ್ಮ, ಕಣ್ಣೀರು ಬತ್ತಿ ಹೋಗುವಷ್ಟು ಅತ್ತರು. 'ಜೀಸಸ್, ನಮ್ಮ ಮಗಳ ಮೇಲೆ ಕರುಣೆ ತೋರು' ಎಂದು ಬೇಡಿಕೊಂಡರು. ಮಗಳ ಕಾಯಿಲೆ ವಾಸಿಯಾಗಲಿ ಎಂದು ಹರಕೆ ಕಟ್ಟಿಕೊಂಡರು. ದಿನಕ್ಕೆರಡು ಬಾರಿ ಪ್ರಾರ್ಥನೆಗೆ ನಿಂತರು. ಈ ನಡುವೆಯೇ ಕಾಟಿಗೆ ಆಪರೇಷನ್ ಆಗಿಹೋಯಿತು. ಅದುವರೆಗೂ, ಕಷ್ಟವೆಂದರೆ ಏನೆಂದೇ ತಿಳಿಯದೇ ಬೆಳೆದಿದ್ದವಳು ಕಾಟಿ. ರೋಗಿಗಳ ಆರ್ತನಾದ, ಸಾವಿನ ಹಿಂದಿರುವ ಸಂಕಟ, ಔಷಧಗಳ ಕಮಟುವಾಸನೆ, ಆಪರೇಷನ್‌ಗಳ ಅನಿವಾರ್ಯತೆ, ಆ ಸಂದರ್ಭದ ಹೃದಯ ಹಿಂಡುವಂಥ ಯಾತನೆ... ಇದೆಲ್ಲಾ ಅವಳಿಗೆ ಹೊಸ ಅನುಭವ. ಆಪರೇಷನ್‌ನ ನೆಪದಲ್ಲಿ ಆಕೆ ಐಸಿಯುನಲ್ಲಿ ಇದ್ದಾಗಲೇ ಅಕ್ಕಪಕ್ಕದ ಬೆಡ್‌ಗಳಲ್ಲಿದ್ದ ಒಂದಿಬ್ಬರು ನೋಡ ನೋಡುತ್ತಲೇ ಸತ್ತು ಹೋಗಿದ್ದರು. 'ಕಡೆಯ ಕ್ಷಣದ ತನಕ ಹೆಣಗಾಡುವುದು, ಕಡೆಯ ಕ್ಷಣದ ಬಳಿಕ ಹೆಣವಾಗುವುದು, ಬದುಕೆಂದರೆ ಇಷ್ಟೇನೆ...' ಎಂಬ ಸೂಕ್ಷ್ಮವೂ, ತನಗೆ ಬ್ರೈನ್ ಟ್ಯೂಮರ್ ಇದೆ. ಈ ಸಂಗತಿಯನ್ನು ಅಪ್ಪ-ಅಮ್ಮ ಬೇಕೆಂದೇ ನನ್ನಿಂದ ಮುಚ್ಚಿಬಿಟ್ಟಿದ್ದಾರೆ ಎಂಬ ಸತ್ಯವೂ ಅಷ್ಟರಲ್ಲಿ ಕಾಟಿಗೆ ಗೊತ್ತಾಗಿತ್ತು. ಆಸ್ಪತ್ರೆಯಲ್ಲಿದ್ದಾಗಲೇ-'ಮೆಡಿಟೇಷನ್ ಕಲಿಯಮ್ಮಾ. ಅದರಿಂದ ಎಲ್ಲ ಸಂಕಟವನ್ನೂ ಮರೆಯಬಹುದು' ಎಂದು ವೈದ್ಯರೊಬ್ಬರು ಸಲಹೆ ಮಾಡಿದರು. ಈ ಹುಡುಗಿ, ಶ್ರದ್ಧೆಯಿಂದ ಅವರ ಸೂಚನೆ ಪಾಲಿಸಿದಳು.
ಶಸ್ತ್ರಚಿಕಿತ್ಸೆಯ ನಂತರ, ಅದೇ ಮಲ್ಲಿಗೆಯ ನಗೆಯೊಂದಿಗೆ ಕಾಲೇಜಿಗೆ ಬಂದಳು ಕಾಟಿ. ಆಗಲೂ ಅಷ್ಟೆ: ಅವಳ ಒಂದು ಕುಡಿ ನೋಟಕ್ಕೆ, ಪಿಸುಮಾತಿಗೆ, ಹುಡುಗರು 'ಕ್ಯೂ' ನಿಂತಿದ್ದರು. ಈ ಸೈಲೆಂಟ್ ಸುಂದರಿಗೆ ಪ್ರಪೋಸ್ ಮಾಡುವುದು ಹೇಗೆಂದು ತಿಳಿಯದೆ ಉಳಿದೆಲ್ಲರೂ ಚಡಪಡಿಸುತ್ತಿದ್ದಾಗಲೇ, ಕಾಟಿಯ ಸಹಪಾಠಿಯಾಗಿದ್ದ ನಿಕ್ ಗಾಡ್‌ವಿನ್ ಎಂಬ ಹುಡುಗ, ಇಸವಿ 2002ರ ಫೆಬ್ರವರಿ 14ರಂದು ಒಂದು ಗುಲಾಬಿಯೊಂದಿಗೆ ಅವಳೆದುರು ಮಂಡಿಯೂರಿ ಕುಳಿತು ಹೇಳಿಯೇಬಿಟ್ಟ: I love you... ಅವತ್ತು ಮಾತ್ರ ಅದೇನಾಯ್ತೋ ಏನೋ; ಕಾಟಿಯ ಎದೆಯೊಳಗಿನ ಕಾಮನಬಿಲ್ಲು ಝೇಂಕರಿಸಿತು. 'ಅವನೊಂದಿಗೆ', ಅವಳ ಕಂಗಳು ಮಾತಾಡಿದವು. ತುಟಿಗಳು, ಅವಳಿಗೂ ಕೇಳಿಸದಷ್ಟು ಮೆತ್ತಗೆ 'ಐ ಲವ್ ಯೂ ಟೂ' ಎಂದೇ ಬಿಟ್ಟವು. ನಂತರದ ಕೆಲವೇ ದಿನಗಳಲ್ಲಿ, ನಿಕ್ ಗಾಡ್‌ವಿನ್, ಪರಿಶುದ್ಧ ಮನಸ್ಸಿನ ಹುಡುಗ ಎಂದು ಕಾಟಿಗೆ ಅರ್ಥವಾಗಿ ಹೋಯಿತು. ಅವಳು, ತನ್ನ ಸಂಕಟದ ಕಥೆ ಹೇಳಿಕೊಂಡಳು: 'ನಾನು ಜಾಸ್ತಿ ದಿನ ಬದುಕುವುದಿಲ್ಲ ಕಣೋ. ನನ್ನನ್ನು ಹಚ್ಕೋಬೇಡ ಪ್ಲೀಸ್' ಎಂದು ಪ್ರಾರ್ಥಿಸಿದಳು.
ಕಾಟಿಯ ಮಾತನ್ನು ನಿಕ್ ಒಪ್ಪಲಿಲ್ಲ. ಈಗ ಸೈನ್ಸ್ ತುಂಬಾ ಮುಂದುವರಿದಿದೆ. ಇವತ್ತು ಎಲ್ಲ ಕಾಯಿಲೆಗಳಿಗೂ ಔಷಧ ಇದೆ. ಅದು ಗೊತ್ತಿಲ್ದೆ ನೀನು ಸುಮ್ನೇ ಹೆದರಿಬಿಟ್ಟಿದ್ದೀಯ. ಎಷ್ಟೇ ಕಷ್ಟ ಆದ್ರೂ ಸರಿ, ನಿನ್ನನ್ನು ಉಳಿಸ್ಕೋತೇನೆ ಅಂದ. ಈ ಮಾತುಗಳನ್ನೇ ಕಾಟಿಯ ಹೆತ್ತವರ ಮುಂದೆಯೂ ಹೇಳಿದ. ಆನಂತರದ ದಿನಗಳಲ್ಲಿ ಕಾಟಿ-ಗಾಡ್‌ವಿನ್‌ರ ಪ್ರೇಮ ಪರಾಕಾಷ್ಠೆಗೆ ತಲುಪಿತು. ಎಲ್ಲವೂ ಸರಿಹೋಯ್ತು ಎಂದು ಡೇವಿಡ್-ನಿಕಿ ದಂಪತಿ ಸಂಭ್ರಮಿಸುತ್ತಿದ್ದಾಗಲೇ, ತೀವ್ರ ಅನಾರೋಗ್ಯಕ್ಕೆ ತುತ್ತಾದ ಕಾಟಿ ಮತ್ತೆ ಆಸ್ಪತ್ರೆ ಸೇರಿದಳು. ಹತ್ತಾರು ಬಗೆಯ ಟೆಸ್ಟ್ ಮಾಡಿದ ವೈದ್ಯರು, ವಿಷಾದದಿಂದ ಹೇಳಿದರು:'ಕೆಲವೊಂದು ಕಾಯಿಲೆ ಇಂಥದೇ ಕಾರಣಕ್ಕೆ ಬರುತ್ತೆ ಎಂದು ವೈದ್ಯಶಾಸ್ತ್ರ ಹೇಳುತ್ತೆ. ಹಾಗೆಯೇ, ಕೆಲವು ಕಾಯಿಲೆಗಳು ಕಾರಣವೇ ಇಲ್ಲದೆ ಬಂದು ಬಿಡ್ತವೆ. ಈಗ, ಕಾಟಿಗೆ ಆಗಿರುವುದೂ ಅದೇನೇ. ಆಕೆಗೆ ಈಗ ಶ್ವಾಸಕೋಶದ ಕ್ಯಾನ್ಸರ್ ಅಮರಿಕೊಂಡಿದೆ. ಅದೇನೇ ಚಿಕಿತ್ಸೆ ನೀಡಿದರೂ ಆಕೆ ಜಾಸ್ತಿ ದಿನ ಬದುಕುವ ಸಾಧ್ಯತೆಗಳು ಕಮ್ಮಿ. ಇರುವಷ್ಟು ದಿನ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಿ. ಹೀಗೆ ಹೇಳುವುದಕ್ಕೆ ಸಂಕಟ ಆಗುತ್ತೆ. ಆದರೆ, ಹೇಳದೇ ವಿಧಿಯಿಲ್ಲ ಸಾರಿ...'
ಆನಂತರದಲ್ಲಿ ಕಾಟಿಯ ಪಾಲಿಗೆ ಆಸ್ಪತ್ರೆಯೇ ಮನೆಯಾಯಿತು. ಶ್ವಾಸಕೋಶದ ಕ್ಯಾನ್ಸರ್‌ನ ಕಾರಣದಿಂದ ಎಷ್ಟೋ ಬಾರಿ ಉಸಿರಾಡುವುದೇ ಕಷ್ಟವಾಗುತ್ತಿತ್ತು. ಕೆಲವೊಮ್ಮೆ, ಉಸಿರಾಟದ ಸಮಸ್ಯೆಯಿಲ್ಲ ಅಂದುಕೊಂಡರೆ, ಮೈಯ ಮೂಳೆಗಳೆಲ್ಲಾ ಮುರಿದೇ ಹೋದವೇನೋ ಎಂಬಂಥ ನೋವು ಶುರುವಾಗುತ್ತಿತ್ತು. ಉಸಿರಾಟದ ತೊಂದರೆ ಎದುರಾದಾಗ ಆಕ್ಸಿಜನ್ ಪೈಪ್ ಬಳಕೆ, ನಿದ್ರೆಯ ಸಮಸ್ಯೆ ಹಾಗೂ ಅಸಹನೀಯ ಯಾತನೆ ಅನ್ನಿಸಿದಾಗ ಪದೇ ಪದೆ ಪೇಯ್ನ್ ಕಿಲ್ಲರ್ ಮಾತ್ರೆಗಳ ಸೇವನೆ... ಹೀಗೇ ಸಾಗಿತು ಕಾಟಿಯ ಬದುಕು. ಈ ಸಂದರ್ಭದಲ್ಲಿ, ದೇವರಿಗಿಂತ ಹೆಚ್ಚು ಕಾಳಜಿಯಿಂದ ಕಾಟಿಯನ್ನು ನೋಡಿಕೊಂಡಾತ ನಿಕ್ ಗಾಡ್‌ವಿನ್. ಕಾಲೇಜು ಮುಗಿದ ತಕ್ಷಣ, ಆತ ಆಸ್ಪತ್ರೆಗೆ ಬರುತ್ತಿದ್ದ. ಕಾಟಿಯ ಸೇವೆಗೆ ನಿಲ್ಲುತ್ತಿದ್ದ. ನಡುರಾತ್ರಿಯಲ್ಲಿ ಆಕೆ ಸಂಕಟದಿಂದ 'ಹಾ' ಎಂದರೆ ಸಾಕು; ಈತ ಚುಕ್ಕು ತಟ್ಟುತ್ತಿದ್ದ. ನಾನಿದ್ದೇನೆ, ಹೆದರಬೇಡ ಅನ್ನುತ್ತಿದ್ದ. ಎಷ್ಟೋ ಬಾರಿ, ಕಾಟಿಯ ಹೆತ್ತವರಿಗೆ ಮಾತ್ರವಲ್ಲ, ಆಸ್ಪತ್ರೆಯ ವೈದ್ಯರಿಗೂ ಧೈರ್ಯ ಹೇಳುತ್ತಿದ್ದ. ಈ ಹುಡುಗನ ನಿರ್ಮಲ ಪ್ರೀತಿ ಮತ್ತು ಕ್ಯಾನ್ಸರ್‌ನ ಕ್ರೌರ್ಯದಿಂದ ಕಾಟಿ ಅನುಭವಿಸುತ್ತಿರುವ ಸಂಕಟ, ಅಮೆರಿಕದಾದ್ಯಂತ ಸುದ್ದಿಯಾಯಿತು. ಆಕೆಯ ಒಳಿತಿಗಾಗಿ ಚರ್ಚ್‌ಗಳಲ್ಲಿ ಪ್ರಾರ್ಥನೆಗಳಾದವು. ಗಾಡ್‌ವಿನ್‌ನ ಒಳ್ಳೆಯತನಕ್ಕೆ ಮೆಚ್ಚುಗೆ ಮಾತುಗಳು ಕೇಳಿ ಬಂದವು. ಕಾಟಿಯ ಚಿಕಿತ್ಸೆಗೆಂದು, ಅದೆಷ್ಟೋ ಮಂದಿ ಉದಾರವಾಗಿ ಹಣ ಕಳಿಸಿದರು. ಈ ಸಂದರ್ಭದಲ್ಲಿಯೇ ಕಾಟಿ ವಿಪರೀತ ಮಂಕಾಗುತ್ತಿದ್ದನ್ನು ಕಂಡ ವೈದ್ಯರು ಮತ್ತೊಮ್ಮೆ ಪರೀಕ್ಷಿಸಿ ತೀರ್ಪು ಕೊಟ್ಟರು: 'ನೋವು ನಿವಾರಕ ಮಾತ್ರೆಗಳನ್ನು ವಿಪರೀತ ನುಂಗಿರುವ ಕಾರಣದಿಂದ ದೇಹದ ಇತರೆ ಗ್ರಂಥಿಗಳಿಗೂ ಕ್ಯಾನ್ಸರ್ ಹರಡಿದೆ. ಯಾವ ಕ್ಷಣದಲ್ಲಾದರೂ ಸಾವು ಬಂದು ಬಿಡಬಹುದು. ಕಾಟಿಯ ಮೇಲಿನ ಆಸೆಯನ್ನು ಎಲ್ಲರೂ ಬಿಟ್ಟು ಬಿಡೋದು ಒಳ್ಳೆಯದು...'
ಒಂದೆರಡು ನಿಮಿಷ ಅಲ್ಲಿ ಸ್ಮಶಾನಮೌನ. ಆಗಲೇ, ವೈದ್ಯರ ಎದುರು ನಿಂತ ಗಾಡ್ವಿನ್ ದೃಢವಾಗಿ ಹೇಳಿದ: 'ಡಾಕ್ಟರ್, ನಾನು ಕಾಟಿಯನ್ನು ಮದುವೆಯಾಗ್ತೇನೆ. ಅವಳು ಜಾಸ್ತಿ ದಿನ ಬದುಕಲ್ಲ ಎಂಬುದು ಗೊತ್ತಿದ್ದೂ ಮದುವೆಗೆ ತಯಾರಾಗಿದೀನಿ. ಮದುವೆಯ ಸಂಭ್ರಮವನ್ನು ಆಕೆ ಕಣ್ತುಂಬಿಕೊಳ್ಳಲಿ. ನೀನು ಇನ್ನೂ ಎರಡು ವರ್ಷ ಆರಾಮಾಗಿ ಬದುಕ್ತೀಯ ಎಂದು ಆಕೆಗೆ ಒಂದೇ ಒಂದು ಸುಳ್ಳು ಹೇಳಿ ಪ್ಲೀಸ್...'
ಈ ಹುಡುಗನ ಪ್ರೀತಿ, ಸಾಯುವವಳಿಗೂ ಬದುಕು ಕೊಡಬೇಕೆಂಬ ಅವನ ಹೃದಯವಂತಿಕೆ ಕಂಡು ವೈದ್ಯರಿಗೂ ಕಣ್ತುಂಬಿ ಬಂತು. ಆನಂತರ ಎಲ್ಲ ತಯಾರಿಗಳೂ ಬೇಗ ಬೇಗ ನಡೆದವು. ಆಸ್ಪತ್ರೆಯಲ್ಲೇ ಮದುವೆ ಮಾಡಲು ನಿರ್ಧರಿಸಿದ್ದಾಯ್ತು. ಅಲ್ಲಿನ ಸಿಬ್ಬಂದಿ, ಮದುಮಕ್ಕಳ ಬಂಧುಗಳಂತೆ ಓಡಾಡಿದರು. ಪಾದ್ರಿಗಳು ಆಸ್ಪತ್ರೆಗೇ ಬಂದರು. ಅವತ್ತು ಮುದ್ದುಮುದ್ದಾಗಿ ಕಾಣುತ್ತಿದ್ದ ಕಾಟಿಯನ್ನು ಕಂಡು ದೃಷ್ಟಿ ನಿವಾಳಿಸಿದವರಿಗೆ, ಮಮ್ಮಲ ಮರುಗಿದವರಿಗೆ ಲೆಕ್ಕವಿಲ್ಲ. ಎಲ್ಲ 'ಕಥೆ'ಯನ್ನು ಆಲಿಸಿದ ನಂತರ, ಪಾದ್ರಿ ಯೂ ಗದ್ಗದಿತರಾಗಿ ಪ್ರಾರ್ಥಿಸಿದರು: ಜೀಸಸ್, ಈ ಹುಡುಗಿಯ ಮೇಲೆ ಕರುಣೆ ತೋರು...'
ಕಾಟಿ-ಗಾಡ್‌ವಿನ್‌ರ ಮದುವೆ ನಡೆದದ್ದು 2005ರ ಜನವರಿ 15ರಂದು. ಮದುವೆಯ ಸಂಭ್ರಮ ಮುಗಿಯಿತು. ಎಲ್ಲರನ್ನೂ ಬೀಳ್ಕೊಡುವ ಸಂದರ್ಭದಲ್ಲೇ ಕಾಟಿ ಬದುಕುವುದು ಇನ್ನು ಕೆಲವೇ ದಿನ ಎಂಬುದೂ ನೆನಪಿಗೆ ಬಂದು, ಈ ಹುಡುಗ ಗಾಡ್‌ವಿನ್, ಒಂದು ಮೂಲೆಯಲ್ಲಿ ನಿಂತು ಸಮಾಧಾನ ಆಗುವವರೆಗೂ ಅತ್ತುಬಿಟ್ಟ.
ಮದುವೆಯಾಗಿ ನಾಲ್ಕು ದಿನ ಕಳೆದಿದ್ದವು. ಆಗಲೂ ಆಸ್ಪತ್ರೆಯಲ್ಲೇ ಇದ್ದಳು ಕಾಟಿ. ಈ ಹುಡುಗ ಗಾಡ್‌ವಿನ್, ಎದುರಿಗೇ ಕುಳಿತಿದ್ದ. ಅವನ ಕಂಗಳಲ್ಲಿ ಎಂಥದೋ ಹೊಳಪು. ಏನೋ ಆಕರ್ಷಣೆ. 'ಈ ಹುಡುಗನಿಗೆ ನನ್ನಿಂದ ಸಿಕ್ಕಿದ್ದೇನು? ನನ್ನನ್ನು ಮದುವೆಯಾಗಿ ಇವನಾದ್ರೂ ಏನು ಸುಖಪಟ್ಟ? ಬೈ ಛಾನ್ಸ್, ನಾಳೆಯೋ ನಾಡಿದ್ದೋ ನಾನು ಸತ್ತು ಹೋದರೆ.. ಹೀಗೆಲ್ಲ ಯೋಚಿಸಿದ ಕಾಟಿ, ಹೀಗೆಲ್ಲಾ ಬಡಬಡಿಸಿ ಮಂಪರಿಗೆ ಜಾರಿದಳು. ಈ ಹುಡುಗ, ಉಕ್ಕಿ ಬರುತ್ತಿದ್ದ ದುಃಖವನ್ನು ತಡೆಹಿಡಿದು, ಅವಳಿಗೆ ಚುಕ್ಕು ತಟ್ಟಿ, ನಂತರ, ತನಗೇ ಎಂಬಂತೆ ಹೇಳಿಕೊಂಡ: ಕಾಟೀ, ನಿನ್ನನ್ನು ತುಂಬಾ ಪ್ರೀತಿಸ್ತೀನಿ. ನೀನು ಸತ್ತು ಹೋದ ನಂತರವೂ...
ಅದು 2005ರ ಜನವರಿ 19. ಅವತ್ತು ಕಾಟಿ, ತುಂಬಾ ಗೆಲುವಾದಂತೆ ಕಂಡಳು. ತನ್ನ ಬಾಲ್ಯದ, ಕಾಲೇಜು ದಿನಗಳನ್ನೆಲ್ಲ ನೆನಪಿಸಿಕೊಂಡಳು. ಬೇಗ ಹುಷಾರಾಗಿ ಬಿಡ್ತೀನಿ. ಹನಿಮೂನ್‌ಗೆ ಹೋಗೋಣ ಅಂದಳು. ಜೋಕ್ ಹೇಳುವಂತೆ ಪೀಡಿಸಿದಳು. ಹೀಗೇ ಹರಟುತ್ತ, ಹರಟುತ್ತಾ ಭಾವುಕಳಾಗಿ ಅವನ ಮುಂಗೈಗೆ ಚುಂಬಿಸಿದಳಲ್ಲ; ಆಗ ಮಾತ್ರ ಈ ಹುಡುಗ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟ. ಅವನಿಗೆ ಸಮಾಧಾನ ಹೇಳಿದ ಕಾಟಿ, ಹಾಗೇ ನಿದ್ರೆ ಹೋದಳು. ಮರುದಿನ, ಬೆಳಗಿನ ಜಾವಕ್ಕೇ ಆಕೆಗೆ ಎಚ್ಚರವಾಯಿತು. ಗಾಡ್ವಿನ್‌ಗೆ ಹತ್ತಿರ ಬರುವಂತೆ ಸಂಜ್ಞೆ ಮಾಡಿದಳು. ಈತ ದಡಬಡಿಸಿ ಹೋದ. ಯಾಕೋ, ಉಸಿರಾಡಲು ಕಷ್ಟವಾಗ್ತಿದೆ ಎಂದವಳೇ ಅವನ ಎದೆಗೆ ಒರಗಿಕೊಂಡಳು. ಈತ ನೆತ್ತಿ ನೇವರಿಸುತ್ತಿದ್ದಂತೆಯೇ ಆಕೆಗೆ ಬಿಕ್ಕಳಿಕೆ ಬಂತು. ಗಾಬರಿಯಾದ ಆತ, ವೈದ್ಯರನ್ನು ಕರೆಯಲು ಎದ್ದು ಹೋಗುವಷ್ಟರಲ್ಲಿಯೇ ಇದ್ದಕ್ಕಿದ್ದಂತೆಯೇ ಆಕೆಯ ಕತ್ತು ಎಡಕ್ಕೆ ವಾಲಿಕೊಂಡಿತು...
ಅಷ್ಟೆ: ಕಥೆಯಾಗಿ ಹೋದಳು ಕಾಟಿ!
-ಎ.ಆರ್. ಮಣಿಕಾಂತ್
armanikanth@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


